For Quick Alerts
ALLOW NOTIFICATIONS  
For Daily Alerts

ಅಚ್ಚರಿಯ ಕೂಪಕ್ಕೆ ತಳ್ಳುವ ವಿಚಿತ್ರ ವೈದ್ಯಕೀಯ ಪ್ರಕರಣಗಳು

By
|

ವೈದ್ಯವೃತ್ತಿ ಒಂದು ಆರಾಮವಾದ, ಹೆಚ್ಚಿನ ಕಷ್ಟವಿಲ್ಲದ, ಸಾಕಷ್ಟು ಹಣ ಮಾಡಬಹುದಾದ ವೃತ್ತಿ ಎಂದು ಜನರು ವಿವಿಧ ರೀತಿಯಲ್ಲಿ ಅಂದುಕೊಳ್ಳುತ್ತಾರೆ. ಆದರೆ ವೈದ್ಯರೇ ಈ ಕಲ್ಪನೆಯನ್ನು ತಪ್ಪು ಎನ್ನುತ್ತಾರೆ. ಏಕೆಂದರೆ ರೋಗಿಯ ರೋಗವನ್ನು ಪತ್ತೆ ಮಾಡಿ ಅದಕ್ಕೆ ಸರಿಯಾದ ಔಷಧಿ ನೀಡಿ ರೋಗಿಯ ಆರೋಗ್ಯವನ್ನು ಸುಧಾರಿಸುವುದು ಅಷ್ಟು ಸುಲಭವಾದ ಕೆಲಸವಲ್ಲ, ಒಂದರ್ಥದಲ್ಲಿ ಅತಿ ನಾಜೂಕಿನ ಪತ್ತೇದಾರಿ ಕೆಲಸ. ಅಲ್ಲದೇ ವೈದ್ಯರು ಎದುರಿಸಬೇಕಾದ ಪರಿಸ್ಥಿತಿಗಳನ್ನು ಜನಸಾಮಾನ್ಯರು ಎದುರಿಸಲು ಸಾಧ್ಯವಿಲ್ಲ. ಅಪಘಾತ, ಹೆರಿಗೆ, ಹೃದಯಾಘಾತ ಮೊದಲಾದ ತುರ್ತು ಸಂದರ್ಭಗಳಲ್ಲಿ ವೈದ್ಯರು ತಾಳುವ ಸಂಯಮವನ್ನು ಜನಸಾಮಾನ್ಯರು ಊಹಿಸಲೂ ಸಾಧ್ಯವಿಲ್ಲ.

ಕೆಲವೊಮ್ಮೆ ಅಪರೂಪಕ್ಕೆ ಚಿತ್ರವಿಚಿತ್ರವಾದ ಸಂದರ್ಭಗಳು ಮತ್ತು ಪ್ರಕರಣಗಳು ಎದುರಾಗಿ ವೈದ್ಯರನ್ನೇ ತಬ್ಬಿಬ್ಬು ಮಾಡಿಬಿಡುತ್ತವೆ. ಅಂತರ್ಜಾಲವನ್ನು ಜಾಲಾಡಿದರೆ ಇಂತಹ ಸಾವಿರಾರು ವಿಚಿತ್ರ ಪ್ರಕರಣಗಳನ್ನು ಕಾಣಬಹುದು. ಆದರೆ ಭಾರತದ ಪ್ರಕರಣಗಳು ಮಾತ್ರ ಇದರಲ್ಲಿ ಎಲ್ಲೋ ಒಂದೆರಡು ಕಾಣುತ್ತವೆ. ಹಾಗಾದರೆ ಭಾರತದಲ್ಲಿ ಇಂತಹ ಪ್ರಕರಣಗಳು ಆಗುವುದಿಲ್ಲ ಎಂದಲ್ಲ, ಹಿಂದೆ ಆಗಿದ್ದುದು ಪ್ರಕಟವಾಗಿರಲಿಲ್ಲ ಅಷ್ಟೇ.

ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರು ಎದುರಿಸಿದ ಚಿತ್ರವಿಚಿತ್ರ ಪ್ರಕರಣಗಳು ಮಾಧ್ಯಮದ ಮೂಲಕ ಲಭ್ಯವಿದೆ. ಎಲ್ಲಾ ಪ್ರಕರಣಗಳ ಬಗ್ಗೆ ಅಲ್ಲದಿದ್ದರೂ ಕೆಲವು ಪ್ರಕರಣಗಳ ಬಗ್ಗೆ ಮಾಹಿತಿ ಹೊಂದಿರುವುದು ಯಾವಾಗಲೂ ಉತ್ತಮ. ಉದಾಹರಣೆಗೆ ಹೊಟ್ಟೆಯಲ್ಲಿರುವ ದೊಡ್ಡ ಗಡ್ಡೆ. ಭಾರತದ ಹಲವೆಡೆ ಈ ಪ್ರಕರಣ ಕಂಡುಬಂದಿದ್ದು ಹಳ್ಳಿಯಲ್ಲಿ, ಅದರಲ್ಲೂ ವೈದ್ಯಕೀಯ ಸೌಲಭ್ಯವಂಚಿತ ಪ್ರದೇಶದಲ್ಲಿಯೇ ಇವು ಹೆಚ್ಚಾಗಿ ಕಾಣಬರುತ್ತವೆ. ಆದರೆ ವೈದ್ಯರ ಬಳಿ ಹೋದರೆ ಇದರ ಆಪರೇಶನ್ ಮಾಡಲಿಕ್ಕೆ ತುಂಬಾ ದುಡ್ಡು ಖರ್ಚಾಗುತ್ತದೆ ಎಂಬ ಭಯದಿಂದ ಹಳ್ಳಿಜನರು ಈ ಗಡ್ಡೆಯನ್ನು ಹಾಗೇ ಬೆಳೆಯಲು ಬಿಡುತ್ತಾರೆ.

ಸಾಮಾನ್ಯವಾಗಿ ಇಪ್ಪತ್ತು ಮೂವತ್ತು ಕೇಜಿ ದೊಡ್ಡದಾಗುವವರೆಗೂ ನೋವು ಕೊಡದ ಈ ಗಡ್ಡೆ ಬಳಿಕ ಪ್ರಾಣಾಪಾಯ ಒಡ್ಡುತ್ತದೆ. ಇದನ್ನು ಸಾಧ್ಯವಾದಷ್ಟು ಬೇಗನೇ ಶಸ್ತ್ರಚಿಕಿತ್ಸೆಯಿಂದ ನಿವಾರಿಸುವುದು ಅಗತ್ಯ. ದೊಡ್ಡ ಗಡ್ಡೆಯನ್ನು ಹೊತ್ತ ವ್ಯಕ್ತಿಯನ್ನು ಕಂಡರೇ ವ್ಯಾಕುಲರಾದರೆ ಕೆಳಗೆ ನೀಡಿರುವ ಪ್ರಕರಣಗಳು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳಬಹುದು. ಇಂತಹ ಹತ್ತು ಪ್ರಕರಣಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ವಿಶೇಷ ಸೂಚನೆ: ಕೆಳಗೆ ನೀಡಿರುವ ಚಿತ್ರಗಳು ನಿಮ್ಮ ಚಿತ್ತಚಾಂಚಲ್ಯವನ್ನು ಅಲುಗಾಡಿಸಬಹುದು!

ಆಜಾನುಬಾಹು ಮೊಹಮ್ಮದ್ ಕಲೀಂ

ಆಜಾನುಬಾಹು ಮೊಹಮ್ಮದ್ ಕಲೀಂ

ಉತ್ತರ ಭಾರತದ ಝಾರ್ಖಂಡ್ ರಾಜ್ಯದ ನಿವಾಸಿಯಾದ ಈ ಎಂಟು ವರ್ಷದ ಹುಡುಗನ ಕೈಗಳು ಇತರರಿಗಿಂತ ಭಾರೀ ಪ್ರಮಾಣದಲ್ಲಿ ದೊಡ್ಡದಾಗಿವೆ. localised gigantism ಎಂಬ ಹೆಸರಿನ ಅತ್ಯಪರೂಪದ ಖಾಯಿಲೆಗೆ ತುತ್ತಾಗಿರುವ ಈ ಬಾಲಕ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲು ಸಹಾ ಇದರ ದೈತ್ಯಗಾತ್ರವೇ ಕಾರಣವಾಗಿದೆ. ಆದರೆ ಈತನ ಗ್ರಾಮದ ನಿವಾಸಿಗಳು ಇದನ್ನೊಂದು ಖಾಯಿಲೆ ಎಂದು ಒಪ್ಪದೇ ಇದು ದೇವರ ಶಾಪ ಎಂದೇ ಪರಿಗಣಿಸಿ ಈ ಬಾಲಕನಿಗೆ 'ಶಾಪಗ್ರಸ್ತ ಬಾಲಕ' ಎಂಬ ಪಟ್ಟವನ್ನು ಕಟ್ಟಿರುವುದು ಮಾತ್ರ ಅತ್ಯಂತ ವಿಪರ್ಯಾಸದ ವಿಷಯವಾಗಿದೆ.

Image Courtesy

ಅಷ್ಟಬಾಹುಗಳ ಲಕ್ಷ್ಮಿ ತಾತ್ಮ

ಅಷ್ಟಬಾಹುಗಳ ಲಕ್ಷ್ಮಿ ತಾತ್ಮ

ಬಿಹಾರದ ಹತ್ತು ವರ್ಷದ ಪುಟ್ಟ ಬಾಲಕಿಗೆ 'ಲಕ್ಷ್ಮಿ ದೇವಿ' ಎಂಬ ಪಟ್ಟ ಸಿಗಲು ಆಕೆಗಿರುವ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳು. ಆದರೆ ಇದು ಸ್ವಾಭಾವಿಕವಲ್ಲ, ಗರ್ಭದಲ್ಲಿ ಅವಳಿಗಳಾಗಿ ಹುಟ್ಟಬೇಕಾಗಿದ್ದ ಇಬ್ಬರು ಮಕ್ಕಳ ಪೈಕಿ ಎರಡನೆಯ ಮಗುವಿನ ಕೈ ಮತ್ತು ಕಾಲುಗಳು ಮೊದಲನೆಯ ಮಗುವಿನಿಂದ ಬೇರ್ಪಡದೇ ಎರಡನೆಯ ದೇಹ ಪೂರ್ಣ ಬೆಳವಣಿಗೆಯಾಗದೇ ಮೊದಲ ದೇಹವೇ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳನ್ನು ಹೊಂದಿರುವಂತೆ ವಿಕಲತೆ ಉಂಟಾಗುವ ಅತ್ಯಪರೂಪದ Ischiopagus Conjoined Twins condition ಎಂಬ ಸ್ಥಿತಿಗೆ ಒಳಗಾಗಿದ್ದಾಳೆ. ಇದರ ಹೊರತಾಗಿ ಆಕೆಯ ಆರೋಗ್ಯದಲ್ಲಿ ಬೇರೆಯ ತೊಂದರೆಗಳೂ ಇವೆ. ಆದರೆ ಈ ಹೆಚ್ಚುವರಿ ಕೈಕಾಲುಗಳೇ ಆಕೆಗೆ ದೇವಿಯ ಪಟ್ಟ ತಂದುಕೊಟ್ಟಿವೆ, ಪರೋಕ್ಷವಾಗಿ ಮನೆಯವರಿಗೆ ಆದಾಯದ ಮೂಲವೂ ಆಗಿದ್ದಾಳೆ.

ಅತಿ ಕುಬ್ಜೆ ಜ್ಯೋತಿ ಆಮ್ಗೆ

ಅತಿ ಕುಬ್ಜೆ ಜ್ಯೋತಿ ಆಮ್ಗೆ

ಕುಬ್ಜರ ಎತ್ತರ ಸರಾಸರಿ ಮೂರರಿಂದ ನಾಲ್ಕು ಅಡಿ ಇರುತ್ತದೆ. ಆದರೆ ಕುಬ್ಜತೆಯಲ್ಲಿಯೇ ಅತ್ಯಪರೂಪವಾದ Achondroplasia ಎಂಬ ಖಾಯಿಲೆಗೆ ತುತ್ತಾದ ಮಹಾರಾಷ್ಟ್ರದ ಜ್ಯೋತಿ ಆಮ್ಗೆಯವರಿಗೆ ಈಗ ಇಪ್ಪತ್ತಮೂರು ವರ್ಷ ವಯಸ್ಸಾಗಿದ್ದರೂ ಎತ್ತರ ಮಾತ್ರ ಕೇವಲ ಎರಡು ಅಡಿ. (2 ಅಡಿ 0.6 ಇಂಚು). ಎತ್ತರ ಕಡಿಮೆ ಎಂಬ ಒಂದು ಕಾರಣವನ್ನು ಬದಿಗಿಟ್ಟರೆ ಉತ್ತಮ ಆರೋಗ್ಯ ಹೊಂದಿರುವ ಜ್ಯೋತಿ ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ ಎಂಬ ಖ್ಯಾತಿಗೂ ಪಾತ್ರಳಾಗಿದ್ದಾಳೆ.

ಡ್ರಾಕುನ್ಕುಲಿಯಾಸಿಸ್ ಬಾಧಿತ ರಾಜಸ್ಥಾನ

ಡ್ರಾಕುನ್ಕುಲಿಯಾಸಿಸ್ ಬಾಧಿತ ರಾಜಸ್ಥಾನ

ರಾಜಸ್ಥಾನದ ಹಲವು ಗ್ರಾಮದ ಜನರಲ್ಲಿ ವಿಶೇಷವಾಗಿ ಕಾಲು ಮತ್ತು ಪಾದಗಳಲ್ಲಿ ದೊಡ್ಡ ದೊಡ್ಡ ದದ್ದುಗಳು ಏಳುತ್ತವೆ. ಕೀವು ತುಂಬಿ ತುದಿ ತೆರೆದುಕೊಂಡ ಬಳಿಕ ಒಂದು ಕಡ್ಡಿಯನ್ನು ತೂರಿಸಿ ಒಂದು ಉದ್ದನೆಯ ದಾರದಂತಿರುವ ಬಿಳಿಯ ಏರೆಹುಳುವಿನಂತೆ ಕಾಣುವ ಹುಳವನ್ನು ಇದರಿಂದ ಹೊರಗೆಳೆದು ತೆಗೆಯುತ್ತಾರೆ. ವಾಸ್ತವವಾಗಿ ಇವರೆಲ್ಲರೂ ನೀರಿನ ಕೊರತೆ ಇರುವ ಹಳ್ಳಿಗಳ ನಿವಾಸಿಗಳಾಗಿದ್ದು ಗತ್ಯಂತರವಿಲ್ಲದೇ ಕೊಳಕು ನೀರನ್ನು ಕುಡಿಯುತ್ತಾರೆ. ಈ ನೀರಿನ ಮೂಲಕ ಹುಳದ ಮೊಟ್ಟೆಗಳು ದೇಹ ಸೇರಿ ಮರಿಗಳಾಗಿ ರಕ್ತದ ಮೂಲಕ ಪಾದಗಳ ಕಡೆ ತೆರಳಿ ಅಲ್ಲಿ ಬೆಳವಣಿಗೆ ಪಡೆಯುತ್ತವೆ. ಸೋಂಕು ಹೆಚ್ಚಾದ ಬಳಿಕ guinea worm disease (GWD) ಎಂಬ ಹೆಸರಿನ ಈ ಕಾಯಿಲೆ ಉಲ್ಬಣಗೊಳ್ಳುತ್ತದೆ. ಅಪಾರ ನೋವು, ಕಾಲಿಡಲೂ ಆಗದಷ್ಟು ಉರಿ ಕಾಣಿಸಿಕೊಳ್ಳುತ್ತದೆ. ಹುಳವನ್ನು ಹೊರತೆಗೆಯಲು ಗ್ರಾಮಸ್ಥರು ವೈದ್ಯರ ಬಳಿ ಹೋಗುವ ಬದಲು ಬೆಂಕಿಕಡ್ಡಿಯೊಂದಕ್ಕೆ ಹುಳವನ್ನು ಸುರುಳಿಸುತ್ತುತ್ತಾ ನಿಧಾನವಾಗಿ ಹೊರಗೆಳೆಯುವುದನ್ನೇ ನೆಚ್ಚಿ ಕುಳಿತಿದ್ದಾರೆ. ಇದು ರಾಜಸ್ತಾನಕ್ಕೆ ಮಾತ್ರ ಸೀಮಿತವಾಗಿಲ್ಲ, ನೀರಿನ ಕೊರತೆ ಇರುವ ಆಫ್ರಿಕಾದ ಹಲವು ದೇಶಗಳಲ್ಲಿಯೂ ಕಂಡುಬಂದಿದೆ.

IMAGE COURTESY

ರಕ್ತಕಣ್ಣೀರು ಸುರಿಸುವ ಟ್ವಿಂಕಲ್ ದ್ವಿವೇದಿ

ರಕ್ತಕಣ್ಣೀರು ಸುರಿಸುವ ಟ್ವಿಂಕಲ್ ದ್ವಿವೇದಿ

ಹದಿನಾಲ್ಕು ವರ್ಷದ ಲಕ್ನೋ ನಗರದ ಬಾಲಕಿ ಟ್ವಿಂಕಲ್ ದ್ವಿವೇದಿ ದಿನಕ್ಕೆ ಸರಿಸುಮಾರು ಹದಿನಾಲ್ಕು ಬಾರಿ ರಕ್ತಕಣ್ಣೀರು ಸುರಿಸುತ್ತಾಳೆ. ಇದುವರೆಗೆ ವೈದ್ಯವಿಜ್ಞಾನಕ್ಕೆ ಸವಾಲಾಗಿರುವ Haemolacria ಎಂಬ ಸ್ಥಿತಿಗೆ ತುತ್ತಾಗಿರುವ ಈಕೆಯನ್ನು ಪರಿಣಿತರ ತಂಡ ಅತಿ ಸೂಕ್ಷ್ಮವಾಗಿ ಅಭ್ಯಸಿಸಿದೆ. ಇದರ ವರದಿ 2014ರಲ್ಲಿ ನ್ಯಾಶನಲ್ ಜಿಯಾಗ್ರಫಿಕ್ ಟೀವಿಯಲ್ಲಿಯೂ ಪ್ರಸಾರಗೊಂಡಿದೆ. ಆದರೆ ಇದುವರೆಗೆ ಸರಿಯಾದ ಚಿಕಿತ್ಸೆ ಮಾತ್ರ ದೊರೆತಿಲ್ಲ.

IMAGE COURTESY

ಎರಡು ಗರ್ಭಕೋಶಗಳ ರಿಂಕು ದೇವಿ

ಎರಡು ಗರ್ಭಕೋಶಗಳ ರಿಂಕು ದೇವಿ

ಉತ್ತರ ಭಾರತದ ಪಾಟ್ನಾ ನಗರದ ನಿವಾಸಿ ರಿಂಕು ದೇವಿಯವರಿಗೆ 2011ರಲ್ಲಿ ಅವಳಿ ಗಂಡು ಮಕ್ಕಳಾಗಿವೆ. ಇದರಲ್ಲೇನು ವಿಶೇಷ ಎಂದಿರಾ? ಆದರೆ ಈ ಎರಡೂ ಮಕ್ಕಳು ಬೆಳೆದದ್ದು ಮಾತ್ರ ಎರಡು ಬೇರೆ ಬೇರೆ ಗರ್ಭಕೋಶಗಳಲ್ಲಿ. ಅಂದರೆ ರಿಂಕುರವರಿಗೆ ದೇವರು ಎರಡು ಗರ್ಭಕೋಶಗಳನ್ನು ದಯಪಾಲಿಸಿದ್ದಾನೆ. Uterus Didelphys ಎಂಬ ಈ ಸ್ಥಿತಿ ಐವತ್ತು ಮಿಲಿಯಕ್ಕೆ ಒಂದು ಇರಬಹುದು. ನಾಲ್ಕು ವರ್ಷಗಳ ಹಿಂದೆ ಒಂದು ಮಗುವಿಗೆ ಜನ್ಮ ನೀಡಿದ್ದರೂ ಎರಡು ಗರ್ಭಕೋಶಗಳಿರುವುದು ಆಕೆಗಾಗಲೀ ಆಕೆಯ ವೈದ್ಯರಿಗಾಗಲೀ ಗೊತ್ತಾಗಿರಲಿಲ್ಲ. ಆದರೆ ಈ ಹೆರಿಗೆಯ ಸಮಯದಲ್ಲಿ ವೈದ್ಯರು ಈ ಅತ್ಯಪರೂಪದ ಸಂಗತಿಯನ್ನು ಕಂಡುಕೊಂಡರು. ವಿಚಿತ್ರವೆಂದರೆ ಅವಳಿ ಮಕ್ಕಳು ಒಂದೇ ದಿನ ಹುಟ್ಟಿದ್ದರೂ ಗರ್ಭದಲ್ಲಿ ಅಂಕುರವಾದ ಸಮಯ ಮಾತ್ರ ಇಬ್ಬರೂ ಮಕ್ಕಳಲ್ಲಿ ಸರಿಯಾಗಿ ಒಂದು ತಿಂಗಳ ಅಂತರವಿತ್ತು. ಅಂದರೆ ಒಂದು ಮಗು ಎಂಟು ತಿಂಗಳಿಗೂ, ಇನ್ನೊಂದು ಒಂಭತ್ತು ತಿಂಗಳಿಗೂ ಹುಟ್ಟಿವೆ!

IMAGE COURTESY

ಗರ್ಭವಂತ ಸಂಜು ಭಗತ್

ಗರ್ಭವಂತ ಸಂಜು ಭಗತ್

ಹೆಣ್ಣು ಗರ್ಭ ಧರಿಸಿದರೆ ಗರ್ಭವತಿಯಾಗುತ್ತಾಳೆ. ಗಂಡು ಗರ್ಭ ಧರಿಸಿದರೆ? ಇದೆಂಥಾ ವಿಚಿತ್ರ ಪ್ರಶ್ನೆ ಎಂದು ಕೇಳಿದವರಿಗೆ ನಾಗಪುರದ ಸಂಜು ಭಗತ್ ದೊಡ್ಡ ಪ್ರಶ್ನೆಯಾಗಿ ನಿಲ್ಲುತ್ತಾರೆ. ಏಕೆಂದರೆ ಅವರಿಗೆ ಮೂವತ್ತಾರು ವರ್ಷವಾಗಿದ್ದಾಗ ಅವರ ಹೊಟ್ಟೆಯಲ್ಲಿ ಮಗುವೊಂದಿದ್ದ ವಿಷಯ ವೈದ್ಯರು ತಪಾಸಣೆಯ ಮೂಲಕ ಕಂಡುಕೊಂಡರು ವಾಸ್ತವವಾಗಿ ಇದೊಂದು ಅತ್ಯಪರೂಪದ Fetus in Fetu ಎಂಬ ಸ್ಥಿತಿಯಾಗಿದ್ದು ದೇಹದಲ್ಲಿ ಯಾವುದೋ ಅನಗತ್ಯ ಭಾಗ ಅಥವಾ ಅಂಗ ಬೆಳೆಯದೇ ಹಾಗೇ ಉಳಿದಿರುತ್ತದೆ. ಸಂಜು ರವರ ಸ್ಥಿತಿಯನ್ನು ಅವಲೋಕಿಸಿದರೆ ಅವರು ತಾಯಗರ್ಭದಲ್ಲಿದ್ದಾಗಲೇ ಇನ್ನೊಂದು ಅಂಡವೂ ಪಕ್ವಗೊಂಡು ಅವಳಿ ಮಗುವಾಗಬೇಕಿತ್ತು. ಆದರೆ ಈ ಅಂಡ ಮಗುವಿನ ದೇಹದಲ್ಲಿಯೇ ಉಳಿದುಬಿಟ್ಟಿತ್ತು. ಜನನದ ಬಳಿಕ ಅಂಡದ ರೂಪದಲ್ಲಿಯೇ ಇದ್ದು ಎಷ್ಟೋ ವರ್ಷಗಳ ಬಳಿಕ ಯಾವುದೋ ಪರಿಸ್ಥಿತಿಯಲ್ಲಿ ಈ ಅಂಡ ನಿಧಾನವಾಗಿ ಬೆಳವಣಿಗೆ ಪಡೆದಿದೆ. ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ ಈ ಅನಗತ್ಯ ಭಾಗವನ್ನು ನಿವಾರಿಸಿ ಸಂಜುರವರಿಗೆ ಜೀವದಾನ ನೀಡಲಾಯಿತು.

IMAGE COURTESY

ಒಕ್ಕಣ್ಣಿನ ಸ್ಥಿತಿ ಸೈಕ್ಲೋಪಿಯಾ

ಒಕ್ಕಣ್ಣಿನ ಸ್ಥಿತಿ ಸೈಕ್ಲೋಪಿಯಾ

ಎರಡೂ ಕಣ್ಣುಗುಡ್ಡೆಗಳು ಜೊತೆಗೂಡಿ ಒಂದೇ ಕಣ್ಣಿನಂತಿರುರುವ ಈ ಸ್ಥಿತಿ ನೋಡಲು ಭಯಾನಕವಾಗಿದ್ದು ಮೂಗು ಇಲ್ಲದೇ ಮೆದುಳು ಸಹಾ ತಲೆಬುರುಡೆಯ ಒಂದೇ ಭಾಗದಲ್ಲಿ ಗಡ್ಡೆಕಟ್ಟಿರುತ್ತದೆ. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗಾಗಿ ನಡೆಸಿದ ಪ್ರಯೋಗಗಳ ಅಡ್ಡಪರಿಣಾಮ ಇದು ಆಗಿರಬಹುದೆಂದು ಹಲವರು ಅನುಮಾನ ಪಡುತ್ತಾರೆ. ಆದರೆ ಈ ಸ್ಥಿತಿ ಕೆಲವು ಪ್ರಾಣಿಗಳಲ್ಲೂ ಕಂಡುಬಂದಿದೆ. ಸಾಮಾನ್ಯವಾಗಿ ಮೂಗು ಇಲ್ಲದಿರುವ ಮತ್ತು ಮೆದುಳು ಸ್ಥಗಿತವಾಗಿರುವ ಈ ಶಿಶುಗಳು ಮೃತಸ್ಥಿತಿಯಲ್ಲಿಯೇ ಜನಿಸುತ್ತವೆ ಅಥವಾ ಜನಿಸಿದ ಬಳಿಕ ಕೆಲವೇ ದಿನಗಳ ಆಯಸ್ಸು ಹೊಂದಿರುತ್ತವೆ.

IMAGE COURTESY

English summary

Strange Medical Cases Reported In India

Some say doctors have the coolest jobs ever. Doctors some how disagree with this fact! Truth being told being a medical person really shakes the life out of one. Take a look at how these people in India live their life and what their disease is called.
X
Desktop Bottom Promotion