For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲೇ ಭಾರತವನ್ನು ಕಣ್ಣೆತ್ತಿ ನೋಡುವಂತೆ ಮಾಡಿದ ಕವಿ ರವೀಂದ್ರ ನಾಥ ಠಾಗೋರ..!

|

ಗೀತಾಂಜಲಿ ಎಂದರೆ ನೆನಪಾಗುವುದು ರವೀಂದ್ರನಾಥ ಠಾಗೋರ್‌... ಠಾಗೋರ್‌ ಎಂದರೆ ಧ್ವನಿಸುವುದು ಜನಗಣಮನ.. ಪ್ರತಿದಿನ ಭಾರತೀಯರ ಮನದಲ್ಲಿ ಠಾಗೋರರ ನೆನಪನ್ನು ಅನುರಣಿಸುವಂತೆ ಮಾಡುವುದು ರಾಷ್ಟ್ರಗೀತೆ. 19-20ನೇ ಶತಮಾನದಲ್ಲಿ ಬೆಂಗಾಲಿ ಸಾಹಿತ್ಯದಲ್ಲಿ ಹೊಸ ಆಯಾಮಕ್ಕೆ ಮುನ್ನುಡಿ ಬರೆದವರು ರವೀಂದ್ರನಾಥ ಠಾಗೋರರು ಎಂದರೆ ತಪ್ಪಾಗಲಾರದು. ಇವರು ಕವಿ, ಕಲಾವಿದ, ಚಿತ್ರಕಲಾಕಾರ, ಕಾದಂಬರಿಕಾರ, ನಾಟಕಕಾರ. ಒಟ್ಟಿನಲ್ಲಿ ಇವರನ್ನು ಮಹಾನ್‌ ವಿದ್ವಾಂಸರೆನ್ನಬಹುದು.


19ನೇ ಶತಮಾನದಲ್ಲಿ ವಿಶ್ವದಲ್ಲೇ ಅತ್ಯುನ್ನತ ಪ್ರಶಸ್ತಿಯಾದ 'ನೋಬೆಲ್‌' ಪ್ರಶಸ್ತಿಯನ್ನು ಪಡೆದ ಮೊದಲ ಏಷ್ಯನ್‌ ಎಂಬ ಹಿರಿಮೆಗೆ ಪಾತ್ರರಾದವರು ಠಾಗೋರ್. ಎಂಟನೇ ವಯಸ್ಸಿನಲ್ಲೇ ಕವನ ಬರೆಯಲು ಆರಂಭಿಸಿದ ರವೀಂದ್ರನಾಥ ಟಾಗೋರರ ಲೇಖನಿಯಿಂದ ಹರಿದುಬಂದಿದ್ದು ಎರಡುಸಾವಿರಕ್ಕಿಂತಲೂ ಹೆಚ್ಚು ಕವನಗಳು. ಮೇ 7ರಂದು ಇವರ ಜನ್ಮದಿನ. ಹಾಗಾಗಿ ಇವರ ಜೀವನಗಾಥೆಯನ್ನು ಸಂಕ್ಷಿಪ್ತವಾಗಿ ಈ ಲೇಖನದ ಮೂಲಕ ವಿವರಿಸಿದ್ದೇವೆ ಓದಿ..
ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಿ

ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಿ

ಬ್ರಹ್ಮ ಸಮಾಜದ ನಾಯಕರಾದ ದೇಬೇಂದ್ರನಾಥ ಠಾಗೋರ್‌ ಹಾಗೂ ಶಾರದಾ ದೇವಿಯವರ ಕಿರಿಯ ಪುತ್ರನಾಗಿ ಮೇ 7, 1861ರಲ್ಲಿ ಜನಿಸಿದ ರವೀಂದ್ರನಾಥ ಟಾಗೋರರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಹದಿನೇಳರ ಪ್ರಾಯದವರೆಗೂ ಮನೆಯಲ್ಲಿಯೇ ಶಿಕ್ಷಣವನ್ನು ಮುಗಿಸಿದ ಇವರು ಔಪಚಾರಿಕ ಶಿಕ್ಷಣವನ್ನು ಮುಗಿಸಿದ್ದು ಇಂಗ್ಲೆಂಡ್‌ನಲ್ಲಿ. ಇವರ ಸಹೋದರ ಸಹೋದರಿಯ ಬಗ್ಗೆ ಹೇಳುವುದಾದರೆ, ಇವರ ಹಿರಿಯ ಸಹೋದರ ದ್ವಿಜೇಂದ್ರನಾಥ್‌ ತತ್ವಜ್ಞಾನಿ ಮತ್ತು ಕವಿ, ಇನ್ನೋರ್ವ ಸಹೋದರ ಸತ್ಯೇಂದ್ರನಾಥ್‌ ಭಾರತೀಯ ನಾಗರಿಕೆ ಸೇವೆಯಲ್ಲಿ ನೇಮಕಾತಿ ಪಡೆದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದವರು. ಸಹೋದರ ಜ್ಯೋತಿರಿಂದ್ರನಾಥ್‌ ಸಂಗೀತಕಾರ, ಸಂಯೋಜಕ ಮತ್ತು ನಾಟಕಕಾರ ಮತ್ತು ಸಹೋದರಿ ಸ್ವರ್ಣಕುಮಾರಿ ಕಾದಂಬರಿಕಾರರಾಗಿ ಹೆಸರು ಮಾಡಿದವರು.

ಠಾಗೋರರ ಸಾಹಿತ್ಯ ಕೃಷಿ

ಠಾಗೋರರ ಸಾಹಿತ್ಯ ಕೃಷಿ

ಹರೆಯದಿಂದಲೇ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿಸಿಕೊಂಡ ಠಾಗೋರರು ಬೆಂಗಾಲಿ ಸಾಹಿತ್ಯಕ್ಕೆ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದವರು.ಸಣ್ಣಕಥೆ, ನೃತ್ಯನಾಟಕ, ಪ್ರಬಂಧ, ಕಾದಂಬರಿಗಳನ್ನು ರಚಿಸಿದ ಠಾಗೋರರ ಕೃತಿಗಳಲ್ಲಿ ಹೆಚ್ಚಾಗಿ ಕಂಡುಬಂದಿದ್ದು ಜನಸಾಮಾನ್ಯ ಜೀವನಚಿತ್ರಗಳು, ಸಾಹಿತ್ಯ ವಿಮರ್ಶೆ, ತತ್ವಶಾಸ್ತ್ರ, ಸಾಮಾಜಿಕ ಸಮಸ್ಯೆಗಳು. ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳ ವಿರುದ್ಧ ಧ್ವನಿ ಎತ್ತಲು ಇವರಿಗೆ ಸಹಾಯಕವಾಗಿದ್ದು ನಾಟಕಗಳು, ಕವನಗಳು.ಬಂಗಾಳದಲ್ಲಿ ರವೀಂದ್ರನಾಥರ ಪದ್ಯಗಳನ್ನು ಹಾಡದ ಮನೆಯೇ ಇಲ್ಲ ಎನ್ನಲಾಗುತ್ತದೆ. ಶ್ಲೋಕಗಳಿಂದ ಹಿಡಿದು ಭಾವನೆಗಳನ್ನು ಅಭಿವ್ಯಕ್ತಪಡಿಸುವ ಕವನಗಳವರೆಗೂ ಇವರು ಛಾಪು ಮೂಡಿಸಿದವರು.

ಸ್ವಾತಂತ್ರ್ಯ ಚಳುವಳಿ -ಗಾಂಧೀಜಿ-ಠಾಗೋರರ ನಂಟು

ಸ್ವಾತಂತ್ರ್ಯ ಚಳುವಳಿ -ಗಾಂಧೀಜಿ-ಠಾಗೋರರ ನಂಟು

19ನೇ ಶತಮಾನದಲ್ಲಿ ಸ್ವಾತಂತ್ರ್ಯಚಳುವಳಿಗಳು ನಡೆಯುತ್ತಿದ್ದ ಸಮಯ. ಬಹಿರಂಗವಾಗಿಯೇ ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ದ್ವನಿ ಎತ್ತಿದವರೂ ಇವರು. 1915ರಲ್ಲಿ ಬ್ರಿಟಿಷ್‌ ಸರ್ಕಾರ ನೈಟ್‌ಹುಡ್‌ ಪದವಿಯನ್ನು ನೀಡಿತಾದರೂ, 1919ರಲ್ಲಿ ನಡೆದ ಜಲಿಯನ್‌ವಾಲಾಭಾಗ್‌ ಹತ್ಯಾಕಾಂಡವನ್ನು ವಿರೋಧಿಸಿ, ಆ ಪದವಿಯನ್ನು ಹಿಂತಿರುಗಿಸಿದ ದೇಶಪ್ರೇಮಿ ಠಾಗೋರ್‌. ಗಾಂಧೀಜಿಯ ಕೆಲವೊಂದು ನಿಲುವುಗಳನ್ನು ವಿರೋಧಿಸಿದವರೂ ಠಾಗೋರರು. ಗಾಂಧಿ-ಅಂಬೇಡ್ಕರ್‌ ನಡುವಣ ಅಸ್ಪ್ರಶ್ಯತೆಯ ವಿಚಾರವಾಗಿ ಇದ್ದ ಜಗಳವನ್ನು ಪರಿಹರಿಸಿದವರೂ, ಗಾಂಧೀಜಿಯವರ ''ಆಮರಣ' ಉಪವಾಸವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಇವರೂ ಒಬ್ಬರು ಎನ್ನಲಾಗುತ್ತದೆ. ರಾಷ್ಟ್ರಪಿತ ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆದ ಕೀರ್ತಿ ಠಾಗೋರರದ್ದು.

ನೋಬೆಲ್‌ ಪಾರಿತೋಷಕ ಕಳುವಾಗಿದ್ದು

ನೋಬೆಲ್‌ ಪಾರಿತೋಷಕ ಕಳುವಾಗಿದ್ದು

''ಗೀತಾಂಜಲಿ'' ಸಾಹಿತ್ಯ ಕೃತಿಗಾಗಿ 1913ರಲ್ಲಿ ನೋಬೆಲ್‌ ಪ್ರಶಸ್ತಿಯನ್ನು ಪಡೆದ ಯುರೋಪಿನ್‌ ಅಲ್ಲದ, ಮೊದಲ ಏಷ್ಯನ್‌ ಎಂಬ ಹೆಗ್ಗಳಿಕೆ ಪಾತ್ರರಾದವರು ಬಿಸ್ವಾಕಬಿ ಎಂದು ಕರೆಯಲ್ಪಡುವ ರವೀಂದ್ರನಾಥ ಟಾಗೋರ್‌. ಸಾಮಾಜಿಕ ಕಳಕಳಿಯಿಂದ ಬಂದ ಪ್ರಶಸ್ತಿಯಲ್ಲಿ ದೊರೆತ ಹಣದಿಂದ ಶಾಂತಿನಿಕೇತನದಲ್ಲಿ ''ವಿಶ್ವಭಾರತಿ'' ಎಂಬ ಶಾಲೆಯನ್ನು ಸ್ಥಾಪಿಸಿದರು. ಈ ಶಾಂತಿನಿಕೇತನ ಸಂಸ್ಥೆ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ.

ಕಳೆದುಹೋದ ನೊಬೆಲ್‌ ಪ್ರಶಸ್ತಿ

ಕಳೆದುಹೋದ ನೊಬೆಲ್‌ ಪ್ರಶಸ್ತಿ

ಮುಂದೆ ಅದೇ ಶಾಂತಿನಿಕೇತನ ಆವರಣದಲ್ಲೇ 2004ರಲ್ಲಿ ಅಚಾತುರ್ಯವೊಂದು ನಡೆದೇ ಹೋಯಿತು. ಅದೇನೆಂದರೆ ಠಾಗೋರರ ಸಾಹಿತ್ಯ ಕೊಡುಗೆಗೆ ನೀಡಿದ್ದ ನೋಬೆಲ್‌ ಪ್ರಶಸ್ತಿಯನ್ನು ಯಾರೋ ಕಳುವು ಮಾಡಿದ್ದರು..! ಆದರೇನಂತೆ ಈ ವಿಷಯ ಅರಿತ ಸ್ವೀಡಿಷ್‌ ಅಕಾಡೆಮಿ ಮತ್ತೊಮ್ಮೆ ಅದೇ ಪದಕವನ್ನು ಚಿನ್ನ ಮತ್ತು ಬೆಳ್ಳಿಯ ಎರಡು ಪದಕಗಳನ್ನು ಗೌರವದಿಂದ ನೀಡಿತು. ಪ್ರಶಸ್ತಿಕಳುವು ಮಾಡಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿದ್ದು 2016ರಲ್ಲಿ. ಕಳುವು ಮಾಡಿದ್ದು ಜಾನಪದ ಗಾಯಕ. ಇದರ ಹಿಂದೆ ಇದ್ದಿದ್ದು ಬಾಂಗ್ಲಾದೇಶಿ ನಾಯಕ ಹಾಗೂ ಇಬ್ಬರು ಯುರೋಪಿಯನ್ನರು ಎನ್ನಲಾಗುತ್ತಿದೆ.

ಕರ್ನಾಟಕದೊಂದಿಗೆ ಠಾಗೋರರ ನಂಟು

ಕರ್ನಾಟಕದೊಂದಿಗೆ ಠಾಗೋರರ ನಂಟು

1882ರಲ್ಲಿ ಠಾಗೋರರ ಹಿರಿಯ ಸಹೋದರ ಕಾರವಾರದ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡ ಸಮಯದಲ್ಲಿ ಕಾರವಾರಕ್ಕೆ ಭೇಟಿ ನೀಡಿದ ಠಾಗೋರರ ಮನಸ್ಸನ್ನು ಸೆಳೆದಿದ್ದು ಪ್ರಶಾಂತ ಕಡಲತೀರ. ಇಲ್ಲಿನ ಪ್ರಕೃತಿಯ ಸೊಬಗು ಇವರ ಮೇಲೆ ತೀವ್ರವಾದ ಪ್ರಭಾವ ಬೀರಿತ್ತು. ಇದರಿಂದ ರೂಪು ತಳೆದ ಮೊದಲ ನೃತ್ಯನಾಟಕವೇ ''ಪ್ರಕೃತಿರ್ ಪ್ರತಿಸೋಧ್‌'' ಅಂದರೆ ಪ್ರಕೃತಿಯ ಪ್ರತೀಕಾರ. ಮುಂದೆ ರವೀಂದ್ರನಾಥರು ಭೇಟಿ ನೀಡಿದ ಕಡಲತೀರಕ್ಕೆ ಟ್ಯಾಗೋರ್‌ ಬೀಚ್‌ ಎಂದೇ ಹೆಸರಿಡಲಾಯಿತು.

ಕಾರವಾರದ ನಂತರ 1919ರಲ್ಲಿ ಮೊದಲ ಬಾರಿಗೆ ರವೀಂದ್ರನಾಥ ಠಾಗೋರರು ಭೇಟಿ ನೀಡಿದ್ದು ಬೆಂಗಳೂರಿಗೆ. ''ಆಲ್‌ ಇಂಡಿಯಾ ಫೆಸ್ಟಿವಲ್‌ ಆಫ್‌ ಫೈನ್‌ ಆರ್ಟ್ಸ್‌''ನ ಮುಖ್ಯ ಅಥಿತಿಯಾಗಿ ಭಾಗವಹಿಸಲು ಬಂದಿದ್ದ ಠಾಗೋರರನ್ನು ನೋಡಲು ಜನಸಾಗರವೇ ನೆರೆದಿತ್ತು ಎನ್ನುತ್ತಾರೆ ಇತಿಹಾಸ ತಜ್ಞರಾದ ವೇಮಗಲ್‌ ಸೋಮಶೇಖರ್. ಇದರ ಮಧ್ಯೆ 1928ರವರೆಗೂ ನಾಲ್ಕು ಬಾರಿ ಬೆಂಗಳೂರಿಗೆ ಕಾರ್ಯನಿಮಿತ್ತ ಭೇಟಿ ನೀಡಿದ್ದ ಠಾಗೋರರಿಗೆ ಬೆಂಗಳೂರೆಂದರೆ ಅವಿನಾಭಾವ ಸಂಬಂಧ. ಹೇಗೆಂದರೆ ಇವರು ತಮ್ಮ ಪ್ರಸಿದ್ಧ ಕಾದಂಬರಿ ''ಜೋಗಜೋಗ್‌'' ಪೂರ್ಣಗೊಳಿಸಿದ್ದು ಇಲ್ಲಿಯೇ. ಮಾತ್ರವಲ್ಲ ''ಶೇಷರ್ ಕೊಬಿತಾ''ವನ್ನು ಬರೆದಿದ್ದು ಕೂಡಾ ಬೆಂಗಳೂರಿನಲ್ಲಿಯೇ.

ಠಾಗೋರರ ಭೇಟಿಯ ನೆನಪಿಗೊಂದು ರವೀಂದ್ರ ಕಲಾಭವನ

ಠಾಗೋರರ ಭೇಟಿಯ ನೆನಪಿಗೊಂದು ರವೀಂದ್ರ ಕಲಾಭವನ

ಅಕ್ಟೋಬರ್ 1922 ರಲ್ಲಿ ಠಾಗೋರರು ದಕ್ಷಿಣ ಭಾರತ ಪ್ರವಾಸದಲ್ಲಿದ್ದಾಗ ಮಂಗಳೂರಿನ ವಿಶ್ವವಿದ್ಯಾನಿಯಲ ಕಾಲೇಜಿನ ಅಂದಿನ ಪ್ರಾಂಶುಪಾಲರು ಕಾಲೇಜಿಗೆ ಆಹ್ವಾನಿಸಿದ್ದರು. 1870ರ ಅವಧಿಯಲ್ಲಿ ನಿರ್ಮಾಣವಾದುದೆಂದು ಹೇಳಲಾಗುವ ಕಾಲೇಜಿನ ಆ ಸಭಾಂಗಣಕ್ಕೆ ನೋಬೆಲ್‌ ಪುರಸ್ಕೃತ ಕವಿ ಠಾಗೋರರ ಭೇಟಿಯ ಸವಿನೆನಪಿಗಾಗಿ 1996ರಲ್ಲಿ ರವೀಂದ್ರ ಕಲಾಭವನವೆಂದು ಮರುನಾಮಕರಣ ಮಾಡಲಾಯಿತು.

ಮೂರು ರಾಷ್ಟ್ರಗೀತೆ ಬರೆದವರು

ಮೂರು ರಾಷ್ಟ್ರಗೀತೆ ಬರೆದವರು

ಭಾರತಕ್ಕೆ ''ಜನ ಗಣ ಮನ'' ರಾಷ್ಟ್ರಗೀತೆ ಬರೆದವರು ರವೀಂದ್ರ ನಾಥ ಠಾಗೋರರು. ಇದಲ್ಲದೇ ಬಾಂಗ್ಲಾದೇಶದ ''ಅಮರ್‌ ಸೋನಾರ್‌ ಬಾಂಗ್ಲಾ'' ಎಂಬ ರಾಷ್ಟ್ರಗೀತೆಯನ್ನು ಬರೆದವರೂ ಇವರೇ. ಇವರು ಬರೆದಿದ್ದು ಎರಡು ರಾಷ್ಟ್ರಗೀತೆ ಎನ್ನುವುದು ಪ್ರಚಲಿತವಾಗಿದ್ದರೂ ಶ್ರೀಲಂಕಾದ ರಾಷ್ಟ್ರಗೀತೆ ''ಶ್ರೀಲಂಕಾ ಮಾತಾ'' ಎನ್ನುವುದನ್ನು ಬರೆದವರೂ ಇವರೇ ಎನ್ನಲಾಗುತ್ತದೆ. ಆದರೆ ಅದು ಬೆಳಕಿಗೆ ಬಂದಿಲ್ಲ ಎನ್ನಲಾಗುತ್ತಿದೆ..!

ಕವಿಯೇ ಕಲಾಕಾರನೂ..

ಕವಿಯೇ ಕಲಾಕಾರನೂ..

ಕಲೆಗೆ ವಯಸ್ಸಿಲ್ಲವೆನ್ನುತ್ತಾರೆ, ಇದಕ್ಕೆ ಉದಾಹರಣೆಯಾಗಿ ಠಾಗೋರರು ಕುಂಚ ಹಿಡಿದಿದ್ದು ಅರವತ್ತನೇ ವಯಸ್ಸಿನಲ್ಲಿ.. ಲೇಖನಿಯಲ್ಲಿ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುವುದು ಮಾತ್ರವಲ್ಲದೇ ರೇಖಾಚಿತ್ರ ಮತ್ತು ವರ್ಣಚಿತ್ರಕಲೆಯ ಮೂಲಕವೂ ಕಲಾತ್ಮಕ, ವೈಶಿಷ್ಟಪೂರ್ಣ ಚಿತ್ರಗಳನ್ನು ಬಿಡಿಸಿದ ಮಹಾನ್‌ ಪುರುಷ. ಭಾವನೆಗಳನ್ನು ಕವನದ ಮೂಲಕ ವ್ಯಕ್ತಪಡಿಸುವ ಕವಿ ಕುಂಚವನ್ನು ಹಿಡಿದರೆ ಅವನಲ್ಲಿಯ ಅಭಿವ್ಯಕ್ತಿಯೂ ಬಣ್ಣಗಳ ರೂಪ ತಳೆದು ಜೀವಂತಿಕೆ ಪಡೆಯುವುದು ಎನ್ನುವುದಕ್ಕೆ ಇವರ ವರ್ಣಚಿತ್ರಗಳು ಸಾಕ್ಷಿ.

ಠಾಗೋರರ ಪ್ರಸಿದ್ಧಿಯನ್ನು ಮನಗಂಡ ವಿಜ್ಞಾನಿ ಐನ್‌ಸ್ಟೈನ್‌ ತಮ್ಮ ಮನೆಗೆ ಆಹ್ವಾನಿಸಿದ್ದಾಗ ಧರ್ಮ ಮತ್ತು ವಿಜ್ಞಾನದ ಸಮನ್ವಯಗಳ ಕುರಿತು ಚರ್ಚೆ ಮಾಡಿದುದು ''ನೋಟ್‌ ಆನ್‌ ದ ನೇಚರ್‌ ಆಫ್‌ ರಿಯಾಲಿಟಿ''ಯಲ್ಲಿ ದಾಖಲಾಗಿದೆ. ಬಂಗಾಳಿ ಮಾತ್ರವಲ್ಲದೇ ವಿದೇಶಿ ಓದುಗರನ್ನೂ ಸಾಹಿತ್ಯದ ಮೂಲಕ ಹಿಡಿದಿಟ್ಟುಕೊಂಡ ಮಹಾನ್‌ ವಿದ್ವಾಂಸ, ಕವಿ ಮರಣದ ಅಂಚಿನವರೆಗೂ ಬರೆಯುತ್ತಲೇ ಇದ್ದವರು. ದೀರ್ಘಕಾಲೀನ ಅಸ್ವಸ್ಥತೆಯಿಂದ ನರಳಿದ ಠಾಗೋರರು ಆಗಸ್ಟ್‌ 7, 1941ರಂದು ಕೊನೆಯುಸಿರೆಳೆದರು. ದೇಶದ ಕಂಡ ಮಹಾನ್‌ ಕವಿ, ಸಾಹಿತಿ, ತತ್ವಜ್ಞಾನಿ ರವೀಂದ್ರನಾಥರ 159ನೇಯ ಜನ್ಮ ತಿಥಿ ಮೇ 7ರಂದು ನಡೆಯುತ್ತಿರುವ ಈ ಸಂದರ್ಭದಲ್ಲಿ ಅವರ ಸಾಧನೆಗಳನ್ನು ಭಾರತೀಯರಾಗಿ ನಾವು ನೆನಪಿಸಿಕೊಳ್ಳಲೇಬೇಕು.

English summary

ವಿಶ್ವದಲ್ಲೇ ಭಾರತವನ್ನು ಕಣ್ಣೆತ್ತಿ ನೋಡುವಂತೆ ಮಾಡಿದ ಕವಿ..! ಠಾಗೋರರಿಗೂ ಕರ್ನಾಟಕಕ್ಕೂ ಇದೆಯೇ ನಂಟು..!

Here we are discussing about know the unknown facts about rabindranath tagore and his acheivemnets. Read more.
Story first published: Saturday, May 7, 2022, 9:00 [IST]
X
Desktop Bottom Promotion