For Quick Alerts
ALLOW NOTIFICATIONS  
For Daily Alerts

ಉತ್ತಮ ಗೆಳೆಯರೇ ನಾವು ಗಳಿಸುವ ಆಸ್ತಿ : ಹೀಗೆ ಹೇಳಲು ಕಾರಣ ನನ್ನ ಜೀವನದಲ್ಲಿ ನಡೆದ ಆ ಘಟನೆ

|

ಫ್ರೆಂಡ್ ಶಿಪ್, ಈ ಪದ ನಮ್ಮಲ್ಲಿರುವ ಅನೇಕರು ಇಷ್ಟಪಡುವಂತಹ ಪದವಾಗಿದೆ. ಯಾಕೆಂದರೆ ನಮ್ಮಲ್ಲಿ ಅನೇಕರಿಗೆ ಸಂಗಾತಿ ಇರದೇ ಇರಬಹುದು. ಆದರೆ ಫ್ರೆಂಡ್ಸ್ ಅಂತು ನಮ್ಮ ಲೈಫಲ್ಲೇ ಇದ್ದೆ ಇರುತ್ತಾರೆ. ಅದು ಹುಡುಗ ಆಗಿರಲಿ, ಹುಡುಗಿ ಆಗಿರಲಿ. ಫ್ರೆಂಡ್ ಶಿಪ್ ಅಂದ ಮೇಲೆ ಅದರಲ್ಲಿ ಲಿಂಗ ಬರೋದಿಲ್ಲ. ಕೇವಲ ಫ್ರೆಂಡ್ಸ್ ಅನ್ನೋ ಪದ ಬರುತ್ತೆ.

Friendship Day 2022

ಹೌದು, ಕಷ್ಟ ಇರಲಿ, ಖುಷಿ ಇರಲಿ ನಮ್ಮೊಂದಿಗೆ ನಿಲ್ಲುವ ಏಕೈಕ ವ್ಯಕ್ತಿಗಳು ಅಂದರೆ ಅದು ಫ್ರೆಂಡ್ಸ್. ಫ್ರೆಂಡ್ ಶಿಪ್ ಬಗ್ಗೆ ನಾವು ಅನೇಕ ಸಿನಿಮಾಗಳನ್ನು ನೋಡಿರಬಹುದು. ಫ್ರೆಂಡ್ಸ್ ಗಳ ತುಂಟಾಟ, ಸ್ನೇಹ, ತ್ಯಾಗ ಎಲ್ಲವೂ ನಿಜ ಜೀವನದಲ್ಲೇ ನಡೆದೇ ನಡೆಯುತ್ತದೆ. ಅಷ್ಟಕ್ಕೂ ಫ್ರೆಂಡ್ ಶಿಪ್ ಬಗ್ಗೆ ಇಷ್ಟೇಲ್ಲ ಹೇಳಲು ಕಾರಣ ಏನು ಅಂದ್ರೆ, ಫ್ರೆಂಡ್ ಶಿಪ್ ಡೇ. ಹೌದು, ಕಳೆದ ತಿಂಗಳು ಅಂದರೆ ಆಗಸ್ಟ್ 7 ರಂದು ಜಗ್ಗತಿನಾದ್ಯಂತ ಫ್ರೆಂಡ್ ಶಿಪ್ ದಿನಾಚರಣೆಯನ್ನು ಆಚರಿಸಲಾಗಿತ್ತು. ಹೀಗಾಗಿ ಫ್ರೆಂಡ್ ಶಿಪ್ ಬಗ್ಗೆ ಈ ಲೇಖನದಲ್ಲಿ ಹೇಳೋಣ ಎಂದು ಅಂದುಕೊಂಡು ಈ ಬಗ್ಗೆ ಬರೆಯುತ್ತಿದ್ದೇನೆ.

ಈ ಲೇಖನದಲ್ಲಿ ನನ್ನ ಜೀವನದಲ್ಲಿ ಹೇಗೆ ಫ್ರೆಂಡ್ಸ್ ಮುಖ್ಯಪಾತ್ರವಹಿಸಿದ್ರು? ಫ್ರೆಂಡ್ ಶಿಪ್ ಅಂದ್ರೆ ಕೇವಲ ಖುಷಿಗೆ ಮಾತ್ರವಲ್ಲ ಕಷ್ಟಕ್ಕೂ ಆಗ್ತಾರೇ ಅನ್ನೋದು ನನಗೆ ಹೇಗ ಅನುಭವಕ್ಕೆ ಬಂತು ಅನ್ನೋದನ್ನ ನಿಮಗೆ ತಿಳಿಸಿಕೊಡುತ್ತೇನೆ.

ಕನ್ನಡದಲ್ಲಿ ಗೆಳೆಯ, ಇಂಗ್ಲೀಷ್ ನಲ್ಲಿ ಫ್ರೆಂಡ್, ಹಿಂದಿಯಲ್ಲಿ ದೋಸ್ತ್, ತಮಿಳಿನಲ್ಲಿ ನನ್ಬ ಹೀಗೆ ಬೇರೆ ಬೇರೆ ಭಾಷೆಯಲ್ಲಿ ವಿಭಿನ್ನವಾಗಿ ಫ್ರೆಂಡ್ ಬಗ್ಗೆ ಹೆಸರಿಡಲಾಗಿದೆ. ಆದರೆ ಇದಕ್ಕೆಲ್ಲ ಒಂದೇ ಅರ್ಥ. ಅದುವೇ ನಾವು ಕರೆಯದೆ ಬರುವ ನಮ್ಮ ಬಂಧು ಎನ್ನುವುದು. ಹೌದು, ಗೆಳೆಯರು ನಮ್ಮ ಸಂಬಂಧಿಕರಿಂಗಿಂತಲೂ ಮಿಗಿಲು ಅನ್ನೋದಕ್ಕೆ ಅನೇಕ ಘಟನೆಗಳು ನನ್ನ ಜೀವನದಲ್ಲಿ ನಡೆದಿದೆ. ಆದರೆ ನಾನು ಈ ಪೈಕಿ ನಿಮ್ಮ ಜೊತೆ ಒಂದು ಘಟನೆಯನ್ನು ವಿವರಿಸುತ್ತೇನೆ.

ಅದೊಂದು ರಾತ್ರಿ ನಾನು ಕೆಲಸ ಮುಗಿಸಿ ನನ್ನ ಬೈಕ್ ನಲ್ಲಿ ಮನೆಗೆ ವಾಪಸ್ ಆಗುತ್ತಿದ್ದೆ. ಮಳೆ ಇದ್ದುದ್ದರಿಂದ ಜಾಗರೂಕತೆಯಿಂದಲೇ ನಾನು ಬೈಕ್ ನಲ್ಲಿ ಬರುತ್ತಿದೆ. ಆದರೆ ಮನೆ ಸೇರುವ ತವಕದಲ್ಲಿ ನನಗೆ ಅರಿವಿಲ್ಲದೆ ನನ್ನ ಬೈಕ್ ನ ಆಕ್ಸಿಲೇಟರ್ ವೇಗ ಕೊಂಚ ಜೋರಾಗಿತ್ತು. ಹೀಗೆ ವೇಗವಾಗೇ ಬೈಕ್ ನಲ್ಲಿ ಸಾಗುತ್ತಿದ್ದ ವೇಳೆ ನನಗೆ ಅರಿವಿಲ್ಲದೆ ನನ್ನ ಬೈಕ್ ಒಂದು ದೊಡ್ಡ ಹೊಂಡಕ್ಕೆ ಬಿದ್ದುಬಿಟ್ಟಿತ್ತು. ದುರಾದೃಷ್ಟವಶಾತ್ ಈ ಅಪಘಾತದಲ್ಲಿ ನನ್ನ ಕೈಗೆ ಬಲವಾದ ಏಟು ಬಿದ್ದಿತ್ತು. ಬೀಳುವ ಸಮಯದಲ್ಲಿ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ದಾರಿಹೋಕರ ಸಹಾಯದಿಂದ ಮಾರು 12 ಫೀಟ್ ಹೊಂಡದಿಂದ ಮೇಲೆ ಎದ್ದು ಬಂದೆ. ಈ ವೇಳೆ ನನಗೆ ಪ್ರಜ್ಞೆ ಬಂದಿತ್ತು. ಪ್ರಜ್ಞೆ ಬರುವಷ್ಟರಲ್ಲಿ ನನ್ನ ಕೈ ಮುರಿದಿರುವುದು ನನ್ನ ಅನುಭವಕ್ಕೆ ಬರುತ್ತದೆ. ಕೈಯಲ್ಲಿ ತೀವ್ರ ತರದ ನೋವು. ಈ ವೇಳೆ ಏನು ಮಾಡಬೇಕು ಎಂದು ತೋಚದೆ ಕುಳಿತಿದ್ದೆ.

ನಾನು ಬಿದ್ದ ಸ್ಥಳದಿಂದ ನನ್ನ ಮನೆಗೆ ಸುಮಾರು 50 ಕಿ.ಮೀ ದೂರವಿದೆ. ಹೀಗೆ ಯೋಚನೆ ಮಾಡುತ್ತ ಕುಳಿತಿರುವಾಗ ಕೂಡಲೇ ನಾನು ನನ್ನ ಗೆಳೆಯನೊಬ್ಬನಿಗೆ ನನ್ನ ಫೋನ್ ತೆಗೆದು ಕರೆ ಮಾಡಿದೆ. ಈ ರೀತಿ ಅಪಘಾತವಾಗಿದೆ ಮನೆಯವ್ರಿಗೆ ಹೇಳಬೇಡ ಮತ್ತೊಬ್ಬ ಗೆಳೆಯನ ಹೆಸರು ಹೇಳಿ ನೀವಿಬ್ರು ಇಲ್ಲಿಗೆ ಬನ್ನಿ ಎಂದು ಹೇಳಿದೆ. ಹೇಳಿದ್ದೆ ತಡ ಮರು ಮಾತನಾಡದೆ ನನ್ನ ಗೆಳೆಯ ಈಗಲೇ ಹೊರಡುತ್ತೇನೆ ಎಂದು ಹೇಳಿದ. ಹೀಗೆ ಫೋನ್ ಇಟ್ಟು ಕೊಂಚ ಹೊತ್ತು ಕಾಯುತ್ತಿರುವಾಗಲೇ ದೇವರ ರೂಪದಲ್ಲಿ ಈ ಇಬ್ಬರು ಗೆಳೆಯರು ನಾನಿದ್ದ ಸ್ಥಳಕ್ಕೆ ಬಂದಿದ್ದಾರೆ.

ಒಂದು ವೇಳೆ ನನ್ನ ಕುಟುಂಬಸ್ಥರು ಕೂಡ ಈ ರೀತಿ ಬರುತ್ತಿರಲಿಲ್ಲವೇನೋ ಎಂದು ಮನಸ್ಸಿನಲ್ಲಿ ಯೋಚಿಸಿರುತ್ತಿರುವಾಗಲೇ ಮತ್ತೊಂದು ಕಾರಿನಲ್ಲಿ ಇನ್ನಷ್ಟು ನನ್ನ ಆತ್ಮೀಯ ಗೆಳೆಯರು ಬಂದರು. ನೋವಿನಲ್ಲೋ ಅಥವಾ ಇವರೆಲ್ಲ ಆಗಮಿಸಿದ್ದನ್ನು ನೋಡಿಯೋ ಗೊತ್ತಿಲ್ಲ ನನ್ನ ಕಣ್ಣಿನಲ್ಲಿ ಒಂದು ಹನಿ ನೀರು ಜಿನಿಗಿತು. ಹೀಗೆ ಬಂದವರೇ ಎಲ್ಲರೂ ನನ್ನ ಆರೋಗ್ಯ ವಿಚಾರಿಸಿದರು. ನನ್ನ ಕೈ ಮುರಿತಕ್ಕೊಳಗಾಗಿರುವುದನ್ನು ಕಂಡು ಅವರೆಲ್ಲರೂ ಮರುಕಪಟ್ಟರು. ಕೂಡಲೇ ಅವರು ಬಂದ ವಾಹನದಲ್ಲಿ ಸ್ಥಳೀಯ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗೆಂದು ಕರೆದುಕೊಂಡು ಹೋದರು.

ಅಷ್ಟೋತ್ತಿಗಾಗಲೇ ಸಮಯ 11 ಗಂಟೆಯಾಗಿತ್ತು. ಪ್ರಥಮ ಚಿಕಿತ್ಸೆ ಬಳಿಕ ಅಲ್ಲಿನ ವೈದ್ಯರು ಆಪರೇಷನ್ ಮಾಡಬೇಕು ಎಂದಾಗ. ನನಗೆ ಧೈರ್ಯ ಹೇಳಿದ ನನ್ನ ಗೆಳೆಯರು ಅವರು ಬಂದ ವಾಹನದಲ್ಲೇ ನಮ್ಮ ಊರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಘಟನೆ ನಡೆದ ಸ್ಥಳದಿಂದ ಸುಮಾರು 50 ಕಿ.ಮೀ ದೂರವಿರುವ ಆಸ್ಪತ್ರೆಗೆ ಅತ್ಯಂತ ಕೇರ್ ಮಾಡುತ್ತ ಕರೆದುಕೊಂಡು ಹೋದರು.

ಆಸ್ಪತ್ರೆಗೆ ದಾಖಲಿಸಿ ವೈದ್ಯರ ಬಳಿ ಘಟನೆಯನ್ನ ಅವ್ರೇ ವಿವರಿಸಿದರು ನನಗೆ ಕೊಂಚವೂ ಸಮಸ್ಯೆಯಾಗದಂತಹ ರೀತಿಯಲ್ಲಿ ಜೊತೆ ನಿಂತರು. ಇಷ್ಟೋತ್ತಿಗಾಗಲೇ ಸಮಯ ಮಧ್ಯರಾತ್ರಿ 12.30 ಕಳೆದಿತ್ತು. ಹಸಿವಿನಿಂದ ನನ್ನ ಹೊಟ್ಟೆ ಚುರುಕ್ ಎನ್ನುತ್ತಿತ್ತು. ಅದೇನೋ ಗೊತ್ತಿಲ್ಲ ಗೆಳೆಯರು ನಮ್ಮನ್ನು ಎಷ್ಟು ಅರ್ಥ ಮಾಡಿಕೊಳ್ಳುತ್ತಾರೆ ಎಂದರೆ ನಾನು ವಾರ್ಡ್ ನಲ್ಲಿ ಶಿಫ್ಟ್ ಆದಾಗಲೇ ಅವರ ಮನೆಗೆ ಹೋಗಿ ನನಗೆ ಊಟ, ನಿದ್ದೆ ಮಾಡಲು ಬ್ಲಾಂಕೆಟ್ ಎಲ್ಲವೂ ತಂದು ಕೊಟ್ಟರು. ಕೆಲವ್ರು ಆಸ್ಪತ್ರೆಯಲ್ಲಿ ಉಳಿದರು. ಇಷ್ಟಕ್ಕೆ ಇವರ ಸ್ನೇಹದ ಕತೆ ಮುಗಿಯಲಿಲ್ಲ.

ರಾತ್ರಿ ಉಳಿದಿದ್ದ ಗೆಳೆಯರು ಮನೆಗೆ ಹೋದರು ರಾತ್ರಿ ಮನೆಗೆ ಹೋಗಿದ್ದವರು ಬೆಳಗ್ಗೆ ಮತ್ತೆ ಬಂದರು. ನನಗೆ ಬೆಳಗ್ಗಿನ ಉಪಹಾರ, ಬಟ್ಟೆಯನ್ನು ತಂದರು. ವೈದ್ಯರ ಬಳಿ ಆಪರೇಷನ್ ಬಗ್ಗೆ ಮಾಹಿತಿ ತೆಗೆದುಕೊಂಡರು. ಆಪರೇಷನ್ ಗೂ ಮುನ್ನ ನನ್ನ ಗಡ್ಡವನ್ನು ತೆಗೆಯಲು ಅವರೇ ಸಹಾಯ ಮಾಡಿದರು. ಅಲ್ಲದೇ ಎದೆ ಮೇಲೆ ಎದ್ದ ಕೂದಲನ್ನು ಅವರೆ ತೆಗೆದರು. ಹೀಗೆ ನನ್ನ ಆಪರೇಷನ್ ಕೂಡ ನಡೆಯಿತು. ಆಪರೇಷನ್ ಬಳಿಕ ನಾನು ಆಸ್ಪತ್ರೆಯಲ್ಲಿ ಮೂರು ದಿನ ಇದ್ದೆ.

ಈ ಮೂರು ದಿನವು ಸರಿಯಾದ ಸಮಯಕ್ಕೆ ಮಾತ್ರೆ, ಆಹಾರವನ್ನು ನೀಡುವ ಜವಾಬ್ಧಾರಿಯನ್ನು ನನ್ನ ಗೆಳೆಯರು ಹೊತ್ತಿದ್ದರು. ದಿನವಿಡಿ ಕೆಲಸವಿದ್ದರಿಂದ ಕೆಲವರು ರಾತ್ರಿ ಬಂದು ನನ್ನ ಜೊತೆಗೆ ಇದ್ದರು. ನನಗೆ ಬೋರ್ ಆಗದಂತೆ ನೋಡಿಕೊಂಡರು. ಹೀಗೆ ನನ್ನ ನೋವನ್ನು ಅವರ ನೋವು ಎಂದು ಅಂದುಕೊಂಡರು. ಆಸ್ಪತ್ರೆಯಲ್ಲಿರುವ ನರ್ಸ್ ಗಳಂತೆ ಗೆಳೆಯರು ಪಾಲನೆ ಮಾಡಿದರು ಎಂದರು ತಪ್ಪಾಗಲ್ಲ. ಅಲ್ಲದೇ ಗೆಳೆಯರು ಕೇವಲ ಮಜಾ ಮಾಡಲು ಇರುವುದಲ್ಲ ಕಷ್ಟದ ಸಮಯದಲ್ಲಿ ಜೊತೆಗೆ ನಿಲ್ಲುವವರು ಎಂದು ತೋರಿಸಿಕೊಟ್ಟರು. ಇದು ನನ್ನ ಜೀವನದಲ್ಲಿ ನಡೆದ ನೈಜ ಗೆಳೆತನ ಸ್ಟೋರಿ.

ಜೀವನದಲ್ಲಿ ನಾವು ಏನು ಗಳಿಸದಿದ್ದರೂ ಪರವಾಗಿಲ್ಲ ಉತ್ತಮ ಗೆಳೆಯರನ್ನು ಗಳಿಸಬೇಕು. ಉತ್ತಮ ಗೆಳಯರು ಖಂಡಿತವಾಗ್ಲು ನಮ್ಮ ಜೀವನವನ್ನು ಬೆಳಗಲು, ಬೆಳೆಯಲು ಸಹಾಯ ಮಾಡುತ್ತಾರೆ. ಬಿದ್ದಾಗ ಮೇಲೆಳಲು ಕೈ ಕೊಡುವ, ಗೆದ್ದಾಗ ಬೆನ್ನು ತಟ್ಟಿ ಬೆಂಬಲಿಸುವ ಗೆಳೆಯರಿದ್ದರೆ ಅದುವೇ ನಾವು ಜೀವನದಲ್ಲಿ ಗಳಿಸುವ ಆಸ್ತಿ ಎಂದರೆ ತಪ್ಪಾಗಲ್ಲ. ಕಷ್ಟಕ್ಕೆ ಯಾರು ಬರುತ್ತಾರೋ ಗೊತ್ತಿಲ್ಲ ಆದರೆ ಗೆಳೆಯರಂತು ಖಂಡಿತವಾಗ್ಲು ಬಂದೆ ಬರುತ್ತಾರೆ ಅನ್ನೋದು ನೂರು ನೂರಕ್ಕೆ ನೂರು ಸತ್ಯ.

English summary

Happy Friendship Day : Special Friendship Story in Kannada

happy friendship day : have a good friends in life, here is the reason, readon
Story first published: Sunday, August 7, 2022, 21:37 [IST]
X
Desktop Bottom Promotion