For Quick Alerts
ALLOW NOTIFICATIONS  
For Daily Alerts

ಭಾರತದ ಮಹಿಳೆಯರು ಇಂದಿಗೂ ಈ ಸಮಸ್ಯೆಗಳಿಂದ ಮುಕ್ತಿ ಪಡೆದಿಲ್ಲ!

|
Common Problems that Indian Women face even today | Boldsky Kannada

ಭಾರತದಲ್ಲಿ ಮಹಿಳೆಗೆ ಪುರಾತನ ಕಾಲದಿಂದಲೂ ವಿಶೇಷ ಗೌರವ, ಸ್ಥಾನಮಾನವಿದೆ. ಈ ದೇಶದಲ್ಲಿ ಹಲವು ಮಹಾನ್ ಸಾಧಕರು ಜನಿಸಿದ್ದಾರೆ, ಅವರಲ್ಲಿ ಸಾಕಷ್ಟು ಮಹಿಳೆಯರ ಪಟ್ಟಿಯೂ ಇದೆ. ಹಾಗೆಯೇ, ಕಾಲ ಬದಲಾದಂತೆ ಕಾಲಕ್ಕೆ ಹೊಂದಿಕೊಂಡ ಮಹಿಳೆ ತನ್ನ ಅಸ್ಥಿರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಬದಲಾವಣೆಯನ್ನು ಒಪ್ಪಿಕೊಂಡಿದ್ದಾಳೆ. ಕೇವಲ ಮನೆಕೆಲಸಕ್ಕೆ ಮಾತ್ರ ಸೀಮಿತಗೊಳಿಸಿದ್ದ ಮಹಿಳೆ ಆಧುನಿಕ ಸಮಾಜದಲ್ಲಿಂದು ಪುರುಷ ಸಮಾನಳಾಗಿ ದುಡಿಯುತ್ತಿದ್ದಾಳೆ. ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹಲವರಿಗೆ ಮಾದರಿ ಎನಿಸಿದ್ದಾಳೆ.

Common Problems That Indian Women Face Even Today!

ಇಷ್ಟೆಲ್ಲಾ ಬದಲಾವಣೆಗಳ ನಡುವೆ ಕುಟುಂಬ, ಮಕ್ಕಳು, ಕೆಲಸ, ಸಮಾಜ ಎಲ್ಲವನ್ನೂ ಸರಿಸಮಾನವಾಗಿ ತೂಗಿಸಿಕೊಂಡು ಹೋಗುತ್ತಿದ್ದರೂ, ಇಂದಿಗೂ ನಮ್ಮ ದೇಶದಲ್ಲಿ ಕೆಲವು ಮೂಲಭೂತ ಸಮಸ್ಯೆಗಳನ್ನು ಮಹಿಳೆ ಎದುರಿಸುತ್ತಲೇ ಇದ್ದಾಳೆ. ಏನೆಲ್ಲಾ ಸಮಸ್ಯೆಗಳು ಮಹಿಳೆಯನ್ನು ನಿತ್ಯ ಕಾಡುತ್ತಿದೆ, ಆಕೆಯನ್ನು ಖಿನ್ನತೆಗೆ ದೂಡುತ್ತಿದೆ ಎಂಬ ಬಗ್ಗೆ ಈ ಲೇಖನದಲ್ಲಿ ಚರ್ಚಿಸೋಣ.

1. ಲಿಂಗತಾರತಮ್ಯ

1. ಲಿಂಗತಾರತಮ್ಯ

ಮಹಿಳೆ ಎಷ್ಟೇ ಸಾಧನೆ ಮಾಡಿದರೂ ಈ ಪುರುಷ ಪ್ರಧಾನ ಸಮಾಜ ಆಕೆಯನ್ನು ಇಂದಿಗೂ ತುಳಿಯುತ್ತಲೇ ಇದೆ. ಜಾತಿ, ಲಿಂಗ, ವಯಸ್ಸು, ಧರ್ಮಗಳ ತಾರತಮ್ಯ ಭಾರತದಲ್ಲಿ ಹೆಚ್ಚುತ್ತಲೇ ಇದೆ. ಸಾಂವಿಧಾನಿಕವಾಗಿ ಮಹಿಳೆಗೆ ಸಮಾಜ ಸ್ಥಾನಮಾನ ಇದೆ ಎಂದು ಹೇಳಿದ್ದರೂ ಇದು ತೋರಿಕೆ ಮಾತ್ರ, ನೈಜ ಚಿತ್ರಣ ಬೇರೆಯೇ ಇದೆ. ಕೇವಲ ಮಾತಿನ ಮೂಲಕವೇ ಲಿಂಗ ತಾರತಮ್ಯವನ್ನು ಸಮಾಜ ಎತ್ತಿಹಿಡಿಯುತ್ತಿದೆ. "ನೀನು ಹೆಣ್ಣು, ನಿನ್ನಿಂದ ಇದು ಸಾಧ್ಯವಿಲ್ಲ, ನಿನ್ನ ಅಣ್ಣ ಮಾಡಲಿ, ಅವನು ಹುಡುಗ', "ನನ್ನ ಪತ್ನಿ ಏನ್ನನ್ನೂ ಮಾಡುವುದಿಲ್ಲ, ಅವಳು ಗೃಹಿಣಿ ಅಷ್ಟೇ,'' ಇಂದಿನ ಸಮಾಜ ಮಹಿಳೆಯನ್ನು ಹೇಗೆ ನೋಡುತ್ತಿದೆ ಎಂದು ತಿಳಿಯಲು ಇಂತಹ ಮಾತುಗಳೇ ಉತ್ತಮ ನಿದರ್ಶನ.

2. ವರ್ಣಬೇಧ

2. ವರ್ಣಬೇಧ

"ಹುಡುಗ ಹೇಗಿದ್ದರೂ ನಡೆಯುತ್ತದೆ, ಹುಡುಗಿ ನೀನು ಚೆನ್ನಾಗಿ ಇರಬೇಕು'' ಈ ಮಾತು ಬಹುಶಃ ಎಲ್ಲ ಹೆಣ್ಣು ಮತ್ತು ಗಂಡು ಮಕ್ಕಳಿರುವ ಮನೆಯಲ್ಲಿ ಕೇಳಿರುವ ಸಾಮಾನ್ಯ ಮಾತು. ಮಹಿಳೆ ಎಂದರೆ ಬೆಳ್ಳಗೆ, ಸುಂದರವಾಗಿ ಇರಬೇಕು ಎಂಬುದನ್ನು ಸಮಾಜ ನಮಗೇ ಅರಿವಿಲ್ಲದಂತೆ ನಮ್ಮ ಮೇಲೆ ಪ್ರಭಾವಿಸುತ್ತಿದೆ. ಎಲ್ಲಾ ಭಾಷೆಯ ವಾಹಿನಿಗಳಲ್ಲೂ ಮಹಿಳೆ ಬೆಳ್ಳಗಾಗಲು ಅಗತ್ಯವಿರುವ ಸೌದಂರ್ಯ ವರ್ಧಕ ಜಾಹೀರಾತುಗಳದ್ದೇ ಕಾರುಬಾರು. ಕಪ್ಪಗಿದ್ದರೆ ಕೀಳರಿಮೆ, ಬೆಳ್ಳಗಿದ್ದರೆ ಮೇಲರಿಮೆ ಎಂಬುದು ಜಾಹೀರಾತು ನಮ್ಮ ಸಮಾಜಕ್ಕೆ ಕಲಿಸುತ್ತಿರುವ ಪಾಠ. ಇನ್ನು ವಿವಾಹದ ಜಾಹೀರಾತುಗಳಲ್ಲಂತೂ, ಬೆಳ್ಳಗೆ, ತೆಳ್ಳಗೆ ಆಕರ್ಷಕ ಬಣ್ಣವಿದ್ದರೆ ಮಾತ್ರ ಹೆಣ್ಣು ಎಂದೇ ಬಿಂಬಿಸುತ್ತಾರೆ, ಇಂತಹ ಆಕ್ರಮಣ ಎಷ್ಟು ಸರಿ?.

3. ವೇತನ ತಾರತಮ್ಯ

3. ವೇತನ ತಾರತಮ್ಯ

ಪುರುಷನ ಸರಿಸಮಾನವಾಗಿ ಕೆಲಸ ಮಾಡಿದರೂ ಮಹಿಳೆಗೆ ಇಂದಿಗೂ ಪುರುಷ ಸಮಾನ ವೇತನ ನೀಡುವುದಿಲ್ಲ, ಕಾರಣ ಆಕೆ ಮಹಿಳೆ. ಮಹಿಳೆಗೂ ಸಮಾನ ವೇತನ ಲಭಿಸಬೇಕು, ಈ ಕಾರಣಗಳಿಗೆ ಮಹಿಳೆ ಹಿಂಜರಿಯದೇ ತನ್ನ ಹಕ್ಕನ್ನು ಪಡೆಯಬೇಕು. ಕೆಲಸಕ್ಕೆ ಸರಿಯಾದ ಸಂಬಳ ಸಿಗಬೇಕೆ ಹೊರತು ಲಿಂಗ ತಾರತಮ್ಯದಿಂದಲ್ಲ.

4. ಚುಡಾಯಿಸುವ ಚಾಳಿ

4. ಚುಡಾಯಿಸುವ ಚಾಳಿ

ಸಾರ್ವಜನಿಕ ಸ್ಥಳಗಳಲ್ಲಿ ಇಂದಿಗೂ ಮಹಿಳೆಯರು, ಹೆಣ್ಣು ಮಕ್ಕಳನ್ನು ಅಶ್ಲೀಲ ಪದಗಳಿಂದ ರೇಗಿಸುವ, ನಿಂದಿಸುವ ಕೆಟ್ಟ ಪ್ರವೃತ್ತಿ ಮುಂದುವರೆದಿರುವುದು ನಿಜಕ್ಕೂ ಅವಮಾನಕರ. ರಸ್ತೆ, ಕಾಲೇಜು, ಮಾರುಕಟ್ಟೆ, ಬಸ್ ನಿಲ್ದಾಣ ಎಲ್ಲೆಂದರಲ್ಲಿ ಮಹಿಳೆಯ ಮೇಲೆ ಮಾನಸಿಕ ಹಲ್ಲೆ ನಡೆಯುತ್ತಲೆ ಇದೆ. ಮಹಿಳೆಗೆ ಎಷ್ಟೆಲ್ಲಾ ರಕ್ಷಣೆ ಸಿಕ್ಕಿದ್ದರೂ ಆಡಳಿತಾತ್ಮಕ ಸಮಸ್ಯೆಯಿಂದ ಆಕೆಗೆ ಇದ್ಯಾವುದೂ ತಲುಪುತ್ತಿಲ್ಲ ಎಂಬುದು ವಿಪರ್ಯಾಸ.

5. ಹೆಣ್ಣಿನ ಮನಸ್ಥಿತಿ ಅರಿಯುವುದೇ ಇಲ್ಲ

5. ಹೆಣ್ಣಿನ ಮನಸ್ಥಿತಿ ಅರಿಯುವುದೇ ಇಲ್ಲ

ಮಹಿಳೆ ತನ್ನ ಸಾಮರ್ಥ್ಯ ಅರಿತು ಆ ಕ್ಷೇತ್ರದಲ್ಲಿ ತನ್ನ ಸಾಧನೆಯನ್ನು ಮಾಡುತ್ತಲೆ ಇದ್ದಾಳೆ. ಕುಟುಂಬ, ಕೆಲಸ ಎಲ್ಲವನ್ನೂ ಸಾಧ್ಯವಾದಷ್ಟು ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ. ಆದರೂ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯ ಕೆಲಸ ಮಾಡುವುದಿಲ್ಲ, ಸೋಮಾರಿ, ಗರ್ವಿಷ್ಠೆ ಎಂಬ ಬಿರುದುಗಳು ಆಕೆಗೆ ಸಿಗುತ್ತದೆ. ಇತರ ಕುಟುಂಬದ ಮಾದರಿ ಗೃಹಿಣಿಯರಿಗೆ ಹೋಲಿಸಿ ಮೂದಲಿಸಲಾಗುತ್ತದೆ. ಮಹಿಳೆಗೂ ವಿಶ್ರಾಂತಿ ಅಗತ್ಯವಿದೆ ಎಂಬುದನ್ನು ಯಾಕೆ ಯಾರೂ ತಿಳಿಯುವುದಿಲ್ಲ, ಇತರ ಕುಟುಂಬದ ಹೆಣ್ಣು ಮಕ್ಕಳೊಂದಿಗೆ ಹೋಲಿಸುವುದು ಎಷ್ಟು ಸರಿ.

6. ಅನಗತ್ಯ ಗಮನ ನೀಡುವುದು

6. ಅನಗತ್ಯ ಗಮನ ನೀಡುವುದು

ಹೆಣ್ಣು ಸಾಕಷ್ಟು ಕಾರಣಗಳಿಂದಾಗಿ ತನ್ನ ಕುಟುಂಬ, ಊರು ಎಲ್ಲವನ್ನೂ ಬಿಟ್ಟು ಕೆಲಸಕ್ಕೆಂದು ವಲಸೆ ಬಂದಿರುತ್ತಾರೆ. ಆದರೆ ಅವರು ನೆಲೆಸಿರುವ ಮನೆಯ ಮಾಲೀಕರು, ನೆರಹೊರೆಯವರು ಅಥವಾ ಆಕೆಯ ಸುತ್ತಮುತ್ತಲಿನವರು ಆಕೆಯ ಮೇಲೆ ಅನಗತ್ಯವಾಗಿ ಗಮನ ನೀಡುವುದು, ಆಕೆಯ ಬಗ್ಗೆ ಚರ್ಚಿಸುವ ಚಾಳಿಯನ್ನೂ ಇಂದಿಗೂ, ಮುಂದೆಯೂ ಮಾಡುತ್ತಲೇ ಇರುತ್ತಾರೆ. ಅಪ್ಪಿತಪ್ಪಿ ತಡವಾಗಿ ಮನೆಗೆ ಬಂದರಂತೂ ಅವರ ವರ್ತನೆಯೇ ಭಿನ್ನವಾಗಿರುತ್ತದೆ.

7. ಒಂಟಿಯಾಗಿ ಪ್ರವಾಸ ಸಾಧ್ಯವೇ ಇಲ್ಲ

7. ಒಂಟಿಯಾಗಿ ಪ್ರವಾಸ ಸಾಧ್ಯವೇ ಇಲ್ಲ

ಬಾಹ್ಯಾಕಾಶ ಯೋಜನೆಯಂಥ ಮಹಾನ್ ಸಾಧನೆಗಳಿಗೆ ಮಹಿಳೆ ಸಹ ಕೈಜೋಡಿಸಿದ್ದಾಳೆ. ತಾನೂ ಎಲ್ಲಾ ಕ್ಷೇತ್ರದಲ್ಲೂ, ಅಸಾಧ್ಯವಾದದ್ದನ್ನು ಸಾಧನೆ ಮಾಡಬಲ್ಲಳು ಎಂದು ಸಾಬೀತು ಪಡಿಸಿದ್ದಾಳೆ. ಆದರೂ ಮನೆಯಲ್ಲಿ ಪೋಷಕರು ಒಂಟಿಯಾಗಿ ಪ್ರವಾಸಕ್ಕೆ ಹೋಗಲು, ಪ್ರಯಾಣ ಮಾಡಲು ಸಮ್ಮತಿಸುವುದಿಲ್ಲ. ಹೆಣ್ಣು ಎಲ್ಲೇ ಹೋದರೂ ಅಣ್ಣ, ತಮ್ಮ, ಅಪ್ಪ ಅಥವಾ ಯಾರಾದರೂ ಪುರುಷ ಜತೆಯಲ್ಲಿ ಇರಬೇಕು ಎಂಬ ನಿಯಮ. ಆದರೆ ಪುರುಷರು ಮಹಿಳೆಯೊಂದಿಗೆ ಹೇಗೆ ವರ್ತಿಸಬೇಕು, ಹೇಗೆ ಗೌರವಿಸಬೇಕು ಎಂದು ಮಾತ್ರ ಯಾವುದೇ ನಿಯಮವಿಲ್ಲ.

8. ಉಡುಪು ನೋಡಿ ತೀರ್ಮಾನಿಸುವುದು

8. ಉಡುಪು ನೋಡಿ ತೀರ್ಮಾನಿಸುವುದು

ನಾವು ಹಾಕುವ ಬಟ್ಟೆ ನಮ್ಮನ್ನು ಹಾಗೂ ನಮ್ಮ ವ್ಯಕ್ತಿತ್ವವನ್ನು ಅಳೆಯುವುದಿಲ್ಲ ಎಂದು ನಮಗೆ ಗೊತ್ತು, ಆದರೆ ಸಮಾಜಕ್ಕೆ ಇದರ ಬಗ್ಗೆ ಅರಿವಿಲ್ಲವೇ. ಆಕೆಯ ಬಟ್ಟೆ ಅವಳ ಚಾರಿತ್ರ್ಯವನ್ನು ತೀರ್ಮಾನಿಸುವುದಿಲ್ಲ ಅಥವಾ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರೇರಣೆ ನೀಡುವುದು ಅವಳ ಉದ್ದೇಶವಲ್ಲ. ಅವಳ ಉಡುಪಿನ ಆಯ್ಕೆ ಅವಳ ಹಕ್ಕು, ಆದರೆ ಅದನ್ನು ಸಮಾಜ ತಪ್ಪಾಗಿ ಅರ್ಥೈಸುತ್ತಿದೆ.

ಬದಲಾಗಬೇಕಿರುವುದು ಮಹಿಳೆಯಲ್ಲ, ಸಮಾಜ, ನಿಮ್ಮ ದೃಷ್ಟಿ . ಇಂದಿಗೂ ಮಹಿಳೆಗೆ ಸಮಾಜದಲ್ಲಿ ಆಗುತ್ತಿರುವ ದೌರ್ಜನ್ಯಗಳ ಪಟ್ಟಿ ಬೆಳಯುತ್ತಲೇ ಹೋಗುತ್ತದೆ!. ಇಂತಹ ಬಹುತೇಕ ಆಲೋಚನೆಗಳಿಗೆ ಮಹಿಳೆ ಎದೆಗುಂದದೆ, ತನ್ನ ಸಾಧನೆಯತ್ತ ಗಮನ ನೀಡುತ್ತಾ, ಜೀವನವನ್ನು ಸಂಪೂರ್ಣವಾಗಿ ಅಂದಿಕೊಂಡಂತೆ ಆನಂದಿಸುವುದನ್ನು ಕಲಿಯಬೇಕಿದೆ.

English summary

Common Problems That Indian Women Face Even Today!

India is a country where many great people were born and many of them were women. Our country has seen the rise of legendary women from the beginning. Women have broken the glass ceiling long back in numerous fields and yet there are infinite problems that a woman has to go through every day, especially an Indian woman. Looks like there is no country for women.
X
Desktop Bottom Promotion