For Quick Alerts
ALLOW NOTIFICATIONS  
For Daily Alerts

ಆಟಿ ತಿಂಗಳ ಕಷ್ಟ ಕಳೆಯಲು ಮನೆಮನೆಗೆ ಬರುವ ಆಟಿ ಕಳೆಂಜ: ತುಳುನಾಡಿನಲ್ಲಿದೆ ಅಪರೂಪದ ಸಂಪ್ರದಾಯ

|

ತುಳುನಾಡಿನ ಆಚರಣೆ, ಸಂಸ್ಕೃತಿ-ಸಂಪ್ರದಾಯಗಳೆಲ್ಲವೂ ವಿಭಿನ್ನ. ಇಲ್ಲಿರುವ ಆಚರಣೆಗಳು ಬೇರೆಲ್ಲೂ ಕಾಣಸಿಗುವುದಿಲ್ಲ. ಅಂತಹ ಒಂದು ಪದ್ಧತಿಗಳಲ್ಲಿ ಆಟಿ ತಿಂಗಳಲ್ಲಿ ಅಂದರೆ ಆಷಾಢ ಮಾಸದಲ್ಲಿ ಹಳ್ಳಿಗಳಲ್ಲಿ ತಿರುಗಾಡುವ ಆಟಿ ಕಳೆಂಜವೂ ಒಂದು.

ಹಳ್ಳಿಯನ್ನು ದುಷ್ಟ ಶಕ್ತಿ ಪ್ರವೇಶ ಮಾಡದಂತೆ ತಡೆಯುವ ದೈವಿಕ ಶಕ್ತಿ ಈ ಆಟಿ ಕಳೆಂಜ ಎಂಬ ನಂಬಿಕೆ ಇಲ್ಲಿನ ಜನರದ್ದು. ಇಂದಿನ ಜೀವನದಲ್ಲಿ ಕಾಣೆಯಾಗುತ್ತಿರುವ ಈ ಆಟಿ ಕಳೆಂಜದ ಬಗ್ಗೆ ಮತ್ತಷ್ಟು ಮಾಹಿತಿ ನಿಮಗಾಗಿ.

ಆಟಿ ಕಳೆಂಜ ಹುಟ್ಟು:

ಆಟಿ ಕಳೆಂಜ ಹುಟ್ಟು:

ಪುರಾಣದ ಪ್ರಕಾರ, ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ತುಳುನಾಡಿನಲ್ಲಿ ಭೀಕರ ಖಾಯಿಲೆಯೊಂದು ಎದುರಾಗಿತ್ತು. ಇದರಿಂದ ಜನ ನರಳಾಡುತ್ತಿದ್ದನ್ನು ಕಂಡ ಬ್ರಹ್ಮದೇವನು ನಾಗಬ್ರಹ್ಮ ಅಥವಾ ಆಟಿ ಕಳೆಂಜ ನನ್ನು ಸೃಷ್ಠಿ ಮಾಡಿದನೆಂಬ ನಂಬಿಕೆಯಿದೆ. ತುಳುನಾಡಿನಲ್ಲಿ ಭೂತಾರಾಧನೆ, ದೈವಾರಾಧನೆಯ ನೇಮ ವೇಷಧಾರಿಗಳಾದ ನಲಿಕೆ ಎಂಬ ಸ್ಥಳೀಯ ಬುಡಕಟ್ಟು ಜನಾಂಗದವರ ಮೂಲಕ ಈ ಸಂಪ್ರದಾಯ ನಡೆಯಬೇಕು ಎಂದು ಆದೇಶ ಮಾಡಿದರಂತೆ. ಬೇರಾವುದೇ ದೈವಾರಾಧನೆ ಅಥವಾ ಭೂತಾರಾಧನೆ ನಿಷಿದ್ಧವಾಗಿರುವ ಈ ಸಮಯದಲ್ಲಿ ಕೇವಲ ಆಟಿ ಕಳೆಂಜ ಕುಣಿತಕ್ಕೆ ಮಾತ್ರ ಅವಕಾಶವಿರುವುದು ಗಮನಿಸಬೇಕಾದ ವಿಚಾರ.

ಆಟಿ ಕಳೆಂಜದ ವೇಷಭೂಷಣ:

ಆಟಿ ಕಳೆಂಜದ ವೇಷಭೂಷಣ:

ಸಾಂಪ್ರದಾಯಿಕ ವೇಷಭೂಷಣವೇ ಆಟಿಕಳೆಂಜದ ಹೈ ಲೈಟ್. ಮುಖದ ಮೇಲೆ ವಿಭಿನ್ನ ಮೇಕಪ್, ಕೆಂಪು ಬಣ್ಣದ ಅಂಗಿ ಮತ್ತು ಸ್ಕರ್ಟ್. ಆ ಸ್ಕರ್ಟ್ ಗೆ ಸುತ್ತಿದ ತೆಂಗಿನ ಸಿರಿಗಳು. ತಲೆಮೇಲೆ ಅಡಿಕೆ ಹಾಳೆಯಿಂದ ಮಾಡಿದ ಕಿರೀಟ. ಅದು ಎಲೆ ಹಾಗೂ ಹೂವುಗಳಿಂದ ಅಲಂಕೃತವಾಗಿರುತ್ತದೆ. ಒಣ ತಾಳೆ ಎಲೆಗಳ ಛತ್ರಿ ಹಿಡಿದಿರುವ ಆಟಿ ಕಳೆಂಜವನ್ನ ನೋಡುವುದೇ ಕಣ್ಣಿಗೆ ಅದ್ಭುತ ನೋಟವನ್ನು ನೀಡುತ್ತದೆ.

ಸಂಪ್ರದಾಯ:

ಸಂಪ್ರದಾಯ:

ನಲಿಕೆ ಸಮುದಾಯದ ಇಬ್ಬರು ಅಂದ್ರೆ, ಈ ಆಟಿ ಕಳೆಂಜ ಜೊತೆಗೆ ಇನ್ನೊಬ್ಬ ಜೊತೆಗಾರ ಊರಿನ ಮನೆಮನೆಗಳಿಗೆ ತೆರಳುತ್ತಾರೆ. ಕುಟುಂಬ ಮತ್ತು ಜಾನುವಾರುಗಳಿಗೆ ಸಂಭವಿಸಬಹುದಾದ ಯಾವುದೇ ಅಪಾಯವನ್ನು ಹೋಗಲಾಡಿಸಲು ಇದ್ದಿಲು, ಅರಿಶಿನ ಪುಡಿ ಮತ್ತು ಹುಣಸೆಹಣ್ಣಿನೊಂದಿಗೆ ಬೆರೆಸಿದ ನೀರನ್ನು ಚಿಮುಕಿಸುತ್ತಾರೆ. ಜೊತೆಗಾರ ಆಟಿ ಕಳೆಂಜ ಹುಟ್ಟಿದ ಕಥೆಯನ್ನು ಟೆಂಬೆರೆ(ಬಿದಿರಿನ ಸಣ್ಣ ಡ್ರಮ್)ಬಡಿಯುತ್ತಾ ಹಾಡಿದರೆ, ಈ ಬೀಟ್‌ಗಳಿಗೆ ಆಟಿ ಕಳೆಂಜ ಹೆಜ್ಜೆ ಹಾಕುತ್ತಿರುತ್ತಾರೆ. ನೃತ್ಯದ ಮೂಲಕ ಕೆಟ್ಟದ್ದನ್ನು ಹೊರಹಾಕಿದ ಪ್ರತಿಫಲವಾಗಿ, ಮನೆಯ ಸದಸ್ಯರು ಅವರಿಗೆ ಅಕ್ಕಿ ನೀಡುತ್ತಾರೆ.

ತುಳುನಾಡಿನಲ್ಲಿ ಒಂದು ಜಾನಪದ ಹಾಡಿದೆ. "ಡೆನನ, ಡೆನನಾ, ಡೆನನ, ಡೆನನಾ, ಆಟಿ ಕಳೆಂಜೆ ಬರೋಂದುಲ್ಲೆ, ಕಳಸೇ ಬಾರ್ ಕಣಲೇ'' ಇದರರ್ಥ, 'ಆಟಿ ಕಳೆಂಜ ಬರುತ್ತಿದ್ದಾನೆ, ಭತ್ತ ಹಿಡಿದುಕೊಂಡು ಬನ್ನಿ' ಎಂದು. ಮನೆಮನೆಗೆ ಆಟಿ ಕಳೆಂಜ ಭೇಟಿ ಕೊಡುವಾಗ, ಅವರಿಗೆ ಪ್ರತಿಯಾಗಿ ಅಕ್ಕಿ, ಮೆಣಸು, ಉಪ್ಪು ಜೊತೆಗೆ ಸ್ವಲ್ಪ ಇದ್ದಿಲು ಕೊಡಬೇಕು ಎಂಬ ಸಂಪ್ರದಾಯವಿದೆ, ಇದರ ರೂಪಕವೇ ಆ ಹಾಡು.

ವಿಶಿಷ್ಟ ಕಲಾ ಪ್ರಕಾರದ ಮಹತ್ವ:

ವಿಶಿಷ್ಟ ಕಲಾ ಪ್ರಕಾರದ ಮಹತ್ವ:

ಆಷಾಢ ಮಾಸ ಕೇವಲ ಅಶುಭದ ತಿಂಗಳಷ್ಟೇ ಅಲ್ಲ, ಅತ್ಯಂತ ಕಷ್ಟ ತಿಂಗಳೂ ಹೌದು. ಅತಿಯಾದ ಮಳೆಯಿಂದಾಗಿ ಹೊರಕಾಲಿಡಲು ಸಾಧ್ಯವಿಲ್ಲ, ಇದರ ಪರಿಣಾಮ ಕೃಷಿ ಚಟುವಟಿಕೆಗಳೆಲ್ಲವೂ ನಿಂತು ಹೋಗಿರುವಂತಹ ದಿನಗಳು. ಈ ಸಂದರ್ಭದಲ್ಲಿ ಹಳ್ಳಿಯಲ್ಲಿ ಯಾವುದೇ ರೋಗರುಜಿನಗಳು ಬರದ ಹಾಗೇ, ಅತಿಯಾದ ಮಳೆಯಿಂದಾಗಿ ಯಾವುದೇ ವಿಪತ್ತುಗಳು ಎದುರಾಗದೇ ಇರುವ ಹಾಗೇ ಜೊತೆಗೆ ದುಷ್ಟ ಶಕ್ತಿಗಳು ಮನೆಯನ್ನು ಸೇರದ ಹಾಗೇ ತಡೆಯಲು, ಈ ಆಟಿ ಕಳೆಂಜ ಹಳ್ಳಿಯ ಮನೆಮನೆಗೆ ತಿರುಗುವ ಸಂಪ್ರದಾಯವಾಗಿದೆ.

ಇವರನ್ನು ಸಾಂಪ್ರದಾಯಿಕ ವೈದ್ಯರೆಂದು ಪರಿಗಣಿಸಲಾಗುತ್ತದೆ, ಅವರು ಕೆಲವೊಮ್ಮೆ ಅನಾರೋಗ್ಯವನ್ನು ಹೋಗಲಾಡಿಸಲು ಔಷಧೀಯ ಗಿಡಮೂಲಿಕೆಗಳನ್ನು ವಿತರಿಸುತ್ತಾರೆ. ಬದಲಾಗುತ್ತಿರುವ ಸಮಯ ಮತ್ತು ಮನಸ್ಥಿತಿಯೊಂದಿಗೆ, ಕಲಾ ಪ್ರಕಾರವು ಮರೆಯಾಗಿ ಹೋಗುತ್ತಿರುವುದು ವಿಷಾದನೀಯ.

English summary

Aati Month: Aati Kalenja Art Tradition, Rituals and Significance in Kannada

Here we talking about Aati Month: Aati Kalenja Art Tradition, Rituals and Significance in Kannada, read on
Story first published: Sunday, July 25, 2021, 18:00 [IST]
X