For Quick Alerts
ALLOW NOTIFICATIONS  
For Daily Alerts

ಕೆಟ್ಟ ಚಟವಿದ್ದರೂ ನನಗೆ ಈ ಸರ್ ಆದರ್ಶಪ್ರಾಯರು!

By ರೀನಾಮಂಜು
|

ಇವತ್ತೇಕೋ ಶಿವಮೂರ್ತಿ ಸರ್ ತುಂಬಾ ನೆನಪಾಗುತ್ತಿದ್ದಾರೆ. ಶಿಕ್ಷಕರಾದವರು ನಮಗೆ ಆದರ್ಶಪ್ರಾಯರು. ಆದರೆ ಶಿವಮೂರ್ತಿ ಸರ್ ಅನ್ನು ಆದರ್ಶಪ್ರಾಯರು ಅನ್ನಬೇಕೋ, ಬೇಡ್ವೋ ಎಂದು ಗೊತ್ತಾಗುತ್ತಿಲ್ಲ. ಅವರು ನಮಗೆ ಕಲಿಸುತ್ತಿದ್ದ ವಿಧಾನ, ಅವರ ನಡೆ ನುಡಿ ಇವೆಲ್ಲವೂ ನಮಗೆ ಆದರ್ಶಪ್ರಾಯ. ಆದರೆ ಅವರ ಆದರ್ಶ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕಿಯೆಂದರೆ ಅವರು ಕುಡಿಯುತ್ತಿದ್ದರು, ಕುಡಿದು- ಕುಡಿದೇ ತೀರಿ ಹೋದರು!

ಶಿವಮೂರ್ತಿ ಮಾಸ್ಟರು ನಮಗೆ ಗಣಿತದ ಪಾಠ ಮಾಡುತ್ತಿದ್ದರು. ಎಷ್ಟು ಚೆನ್ನಾಗಿ ಪಾಠ ಮಾಡುತ್ತಿದ್ದರು ಎಂದರೆ ಎಂತಹ ದಡ್ಡ ಶಿಖಾಮಣಿಗೂ ಅವರು ಹೇಳಿ ಕೊಡುತ್ತಿದ್ದ ಪಾಠ ಅರ್ಥವಾಗುವಂತಿತ್ತು. ಅರ್ಥವಾಗದಿದ್ದರೂ ಅರ್ಥ ಮಾಡಿಸುವವರಿಗೂ ಬಿಡುತ್ತಿರಲಿಲ್ಲ. ಶಿವ ಮೂರ್ತಿ ಸರ್ ಕುಡಿಯುತ್ತಾರೆ ಎನ್ನುವುದು ಶಾಲೆಗೆ, ಊರಿಗೇ ಗೊತ್ತಿತ್ತು, ಆದರೆ ಅವರು ಎಂದೂ ಶಾಲೆಗೆ ಕುಡಿದು ಬಂದವರಲ್ಲ! ಮಕ್ಕಳಿಗೆ ಇವರ ಮೇಲೆ ಯಾವುದೇ ಕಂಪ್ಲೇಂಟ್ ಇಲ್ಲ! ಪರೀಕ್ಷೆಯಲ್ಲಿ ಕಮ್ಮಿ ಅಂಕ ಬಿದ್ದಾಗ ಇವರಿಂದ ಪೆಟ್ಟು ಬೀಳುತ್ತಿದ್ದರೂ ಯಾರೂ ಇವರ ಮೇಲೆ ಕೋಪ ಮಾಡಿಕೊಳ್ಳುತ್ತಿರಲಿಲ್ಲ.

In The Memory Of Shivamurthy Sir

ಅವರು ಹೊಡೆಯುತ್ತಿದ್ದ ರೀತಿಯೂ ಇನ್ನೂ ವಿಶೇಷ. ಮೊದಲು ನಮಗೆ ಮೌಲ್ಯಮಾಪನ ಮಾಡಿದ ಪೇಪರ್ ಕೊಡುತ್ತಿದ್ದರು, ನಂತರ ನಮ್ಮ ರಿಜೆಸ್ಟರ್ ಪ್ರಕಾರ ಒಬ್ಬೊಬ್ಬರನ್ನೇ ಕರೆದು ನಾವು ತೆಗದ ಅಂಕವನ್ನು ಮಾರ್ಕ್ಸ್ ರಿಜೆಸ್ಟರ್ ಬುಕ್ ನಲ್ಲಿ ಬರೆಯುತ್ತಿದ್ದರು. ನಂತರ ಅದರಲ್ಲಿ 35 ಅಂಕಕ್ಕಿಂತ ಕಮ್ಮಿ ತೆಗೆದ ವಿದ್ಯಾರ್ಥಿಗಳನ್ನು ಕರೆದು ಅಂಗೈಗೆ ಬೆತ್ತದ ರುಚಿ ತೋರಿಸುತ್ತಿದ್ದರು.

ಅವರ ಮುಖ್ಯ ಗುರಿಯೆಂದರೆ ಸಾಲೆಗೆ 100% ರಿಸಲ್ಟ್ ಬರಬೇಕು. ಅದಕ್ಕಾಗಿ ಯಾವುದೇ ಟ್ಯೂಷನ್ ಫೀಸ್ ಇಲ್ಲದೆ ನಮಗೆಲ್ಲಾ ಟ್ಯೂಷನ್ ಕೊಡುತ್ತಿದ್ದರು. ನಮಗೆ ಅಯ್ಯೋ ಈ ಸರ್ ಏಕೆ ಎಕ್ಸ್ ಟ್ರಾ ಕ್ಲಾಸ್ ತೆಗೆದುಕೊಳ್ಳುತ್ತಾರೆ, ಬಿಟ್ಟರೆ ಮನೆಗೆ ಹೋಗಿ ಆಡಬಹುದಿತ್ತು, ಇಲ್ಲ ಟಿವಿ ನೋಡಬಹುದಿತ್ತು ಎಂದ ಚಿಂತೆ. ಒಂದು ಸಲ ಅವರು ಹೋಂವರ್ಕ್ ಕೊಟ್ಟಿದ್ದರು. ಮಾರನೇಯ ದಿನ ಟ್ಯೂಷನ್ ಕ್ಲಾಸ್ ನಲ್ಲಿ ಅದರ ಬಗ್ಗೆ ಕೇಳಿದಾಗ ನಮ್ಮಲ್ಲಿ ಕೆಲವರು ಮಾಡಿರಲಿಲ್ಲ.

ಆಗ ಅವರು ಹೇಳುದ ಮಾತು ಇಂದಿಗೂ ನೆನಪಿನಲ್ಲಿದೆ "ನಿಮಗೆ ನಾನು ಫ್ರೀ ಟ್ಯೂಷನ್ ಕೊಡುತ್ತಿದ್ದೇನೆ, ಅದಕ್ಕೆ ನಿಮಗೆ ಅದರ ಬೆಲೆ ಗೊತ್ತಾಗುತ್ತಾ ಇಲ್ಲ, ದುಡ್ಡು ಕೊಟ್ಟು ಹೋಗಬೇಕಾಗಿತ್ತು, ಆಗ ನಿಮಗೆ ತಿಳಿಯುತ್ತಿತ್ತು ಟ್ಯೂಷನ್ ಮಹತ್ವ, ನಾನು ಇಲ್ಲಿ ಮಾಡುವುದನ್ನೇ ಟೌನ್ ನಲ್ಲಿ ಮಾಡಿದರೆ ಸಂಬಳಕ್ಕಿಂತ ದುಪ್ಪಟ್ಟು ದುಡಿಯಬಲ್ಲೆ, ನನಗೆ ಅದು ಬೇಕಾಗಿಲ್ಲ, ನಿಮಗೆ ಒಳ್ಳೆಯ ಅಂಕ ಸಿಗಬೇಕು, ನೀವು ಬೆಳೆಯಬೇಕು ಎಂದಷ್ಟೇ ನಾನು ಯೋಚಿಸುತ್ತೇನೆ, ನಾನು ನಿಮಗೆ ಟ್ಯೂಷನ್ ಹೇಳಿ ಕೊಡಬೇಕೆಂಬ ನಿಯಮ ಶಾಲೆಯಲ್ಲಿ ಇಲ್ಲ, ನನ್ನ ಪಾಡಿಗೆ ಎಷ್ಟು ಪಾಠ ಇದೆಯೋ ಅಷ್ಟು ಮುಗಿಸಿ ಹೋಗಬಹುದು, ಇದೇ ಕೊನೆ ಇನ್ನು ಮುಂದೆ ಹೀಗೆ ಮಾಡಿದರೆ ಟ್ಯೂಷನ್ ಮಾಡಲಾರೆ".

ಇಲ್ಲಿ ಟ್ಯೂಷನ್ ಗೆ ಹೋಗುವ ಮಕ್ಕಳನ್ನು ನೋಡುವಾಗ, ಅದರಲ್ಲೂ ಮಕ್ಕಳ ಪೋಷಕರು ನಮ್ಮ ಮಕ್ಕಳ ಟ್ಯೂಷನ್ ಫೀಸ್ ಅಷ್ಟು ಸಾವಿರ- ಇಷ್ಟು ಸಾವಿರ ಕೊಡುತ್ತಿದ್ದೇವೆ ಎಂದು ಹೇಳುವುದನ್ನು ಕೇಳುವಾಗ ಈ ನಮ್ಮ ಶಿವಮೂರ್ತಿ ಸರ್ ಕಣ್ಮುಂದೆ ಬರುತ್ತಾರೆ.

ಈಗ ಫ್ರೀ ಟ್ಯೂಷನ್ ಹೇಳಿ ಕೊಡಲು ಅವರು ಇಲ್ಲ, ನಾವು ಕಲಿತು ಬಂದ ಮೇಲೆ ಒಂದು ವರ್ಷವಷ್ಟೇ ಅವರು ಬದುಕಿದ್ದರು, ವಿಪರೀತವಾದ ಕುಡಿತ ಅವರನ್ನು ಬಲಿ ತೆಗೆದುಕೊಂಡಿತು.

English summary

In The Memory Of Shivamurthy Sir

I have seen so many good teachers in my life, but Shivamurthy sir become so close to my heart. He was a great teacher in spite of his one bad habit. 
X
Desktop Bottom Promotion