For Quick Alerts
ALLOW NOTIFICATIONS  
For Daily Alerts

2020 ಗೌರಿ ಹಬ್ಬ: ಗಣೇಶ ಚತುರ್ಥಿಯ ಮುನ್ನಾ ದಿನವೇ 'ಗೌರಿ ಹಬ್ಬ' ಆಚರಣೆ ಏಕೆ?

By Divya Pandith
|

ಶಕ್ತಿ ದೇವತೆ ಮತ್ತು ಮಂಗಳ ಗೌರಿ ಎಂದು ಪೂಜಿಸಲ್ಪಡುವ ದೇವತೆ ಗೌರಿ. ಗೌರಿ ಉತ್ಸವ/ಹಬ್ಬವನ್ನು ಭಾರತದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯ ಮುನ್ನಾ ದಿನ ಆಚರಿಸುವ ಈ ಹಬ್ಬಕ್ಕೆ ಗೌರಿ ಗಣೇಶ, ಗೌರಿ ಚೌತಿ ಅಥವಾ ಗೌರಿ ಹಬ್ಬ ಎಂದು ಕರೆಯುತ್ತಾರೆ.

Gowri Festival

ಈ ಹಬ್ಬವು ವಿವಾಹಿತ ಮಹಿಳೆಯರಿಗೆ ಸಮರ್ಪಿತವಾದದ್ದು. ಹಿಂದೂ ಪಂಚಾಂಗದ ಪ್ರಕಾರ ಗೌರಿ ಹಬ್ಬ ಭಾದ್ರಪದ ಶುದ್ಧ ತೃತೀಯದ ದಿನ ಆಚರಿಸುತ್ತಾರೆ. ಇದರ ಮರುದಿನ ಅಂದರೆ ಭಾದ್ರಪದ ಶುದ್ಧ ಚತುರ್ಥಿಯ ದಿನದಿಂದ ಗಣೇಶ ಹಬ್ಬ ಆರಂಭವಾಗುತ್ತದೆ.

2020ರ ಶುಭ ಮುಹೂರ್ತ

ಈ ವರ್ಷ ಅಂದರೆ 2020ರಲ್ಲಿ ಸ್ವರ್ಣ ಗೌರಿ ಪೂಜೆಯನ್ನು ಆಗಸ್ಟ್‌ 21ರಂದು ಶುಕ್ರವಾರ ಆಚರಿಸಲಾಗುತ್ತಿದೆ. ಪ್ರಾತಃಕಾಲ ಪೂಜಾ ಸಮಯ: ಬೆಳಗ್ಗೆ 5.54 ರಿಂದ 8.30 ರವರೆಗೆ ಶುಭಸಮಯ ಮತ್ತು ಪ್ರದೋಷ ಕಾಲ ಪೂಜಾ ಸಮಯ: ಸಂಜೆ 6.54 ರಿಂದ 9.06 ರವೆರೆಗೆ ಶುಭ ಮುಹೂರ್ತ ಇದ್ದು, ಈ ಸಮುದಲ್ಲಿ ಪೂಜೆ ಮಾಡಿದರೆ ಶುಭ ಲಭಿಸುತ್ತದೆ. ಗಣೇಶ ಚತುರ್ಥಿಯನ್ನು ಆಗಸ್ಟ್‌ 22ರಂದು ಶನಿವಾರದಂದು ಅಚರಿಸಲಾಗುತ್ತಿದೆ.

ವಿವಾಹಿತ ಮಹಿಳೆಯರಿಂದ ಪೂಜೆ

ಸೌಭಾಗ್ಯವನ್ನು ಕರುಣಿಸುವ ಗೌರಿ ಉತ್ಸವವನ್ನು ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ಗೌರಿಯನ್ನು ಆರಾಧಿಸುವುದರಿಂದ ಸುಖ, ಸಂಪತ್ತು, ಸುದೀರ್ಘ ಸುಂದರ ಜೀವನವನ್ನು ನೀಡಿ, ಪತಿಯನ್ನು ಆಶೀರ್ವದಿಸುತ್ತಾಳೆ ಎನ್ನಲಾಗುತ್ತದೆ. ಗೌರಿ ಹಬ್ಬವು ವರಮಹಾಲಕ್ಷ್ಮಿ ವ್ರತವನ್ನೇ ಹೋಲುತ್ತದೆ. ವ್ಯತ್ಯಾಸವೆಂದರೆ ಲಕ್ಷ್ಮಿ ಸ್ಥಾನದಲ್ಲಿ ಗೌರಿಯನ್ನಿಟ್ಟು ಪೂಜಿಸಲಾಗುವುದು.

ಗೌರಿ ಮತ್ತು ಗಣೇಶ

ಗೌರಿ/ಪಾರ್ವತಿ ದೇವಿಯು ತನ್ನ ದೇಹಕ್ಕೆ ಹಚ್ಚಿಕೊಂಡ ಅರಿಶಿನದ ಪೇಸ್ಟ್‌ನ ಸಹಾಯದಿಂದ ಗಣೇಶನನ್ನು ರಚಿಸಿದಳು. ಆದಿನವೇ ಗಣೇಶನ ಜನ್ಮದಿನ ಎಂದು ಪರಿಗಣಿಸಲಾಯಿತು. ಆ ಪವಿತ್ರ ದಿನದ ಹಬ್ಬಕ್ಕೆ ವಿನಾಯಕ ಚತುರ್ಥಿ ಅಥವಾ ಗಣೇಶ ಚತುರ್ಥಿ ಎಂದು ಕರೆಯಲಾಗುತ್ತದೆ.

ಸಮೃದ್ಧಿ, ಬುದ್ಧಿವಂತಿಕೆ, ಶ್ರೇಯಸ್ಸು, ಆಯುಷ್ಯ, ಆರೋಗ್ಯ ಹಾಗೂ ಮಂಗಳವನ್ನು ತರುವ ದೇವ ಗಣಪ. ಹಿಂದೂ ಪಂಚಾಗದ ಪ್ರಕಾರ ಈ ಹಬ್ಬವು ಭಾದ್ರಪದ ಮಾಸದಲ್ಲಿ ಬರುತ್ತದೆ. ಕರುಣಾಮಯಿಯಾದ ಗಣೇಶನನ್ನು ಮೆಚ್ಚಿಸಲು ಜನರು ಗಣೇಶ ಚತುರ್ಥಿಯನ್ನು ಆಚರಿಸುತ್ತಾರೆ. ಈ ಹಬ್ಬವನ್ನು ಮನೆತನದ ಪದ್ಧತಿಯ ಅನುಸಾರ ಒಂದು ದಿನ, ಮೂರುದಿನ, ಏಳು ದಿನ ಮತ್ತು ಹತ್ತುದಿನಗಳ ಕಾಲ ಆಚರಿಸುತ್ತಾರೆ. ಕೆಲವರು ಗೌರಿ ಚೌತಿಯಂದು ಗೌರಿ ಮತ್ತು ಗಣೇಶನ ಮೂರ್ತಿಯನ್ನು ಮನೆಗೆ ತರುವಾಗ ಇನ್ನೆರಡು ಗೌರಿ ಮೂರ್ತಿಯನ್ನು ತಂದು, ಗಣೇಶನ ಸಹೋದರಿಯರು ಎಂದು ಆರಾಧಿಸುತ್ತಾರೆ.

ಪಶ್ಚಿಮ ಬಂಗಾಳದಲ್ಲಿ ಲಕ್ಷ್ಮಿ ಮತ್ತು ಸರಸ್ವತಿಯನ್ನು ಗಣೇಶನ ಸಹೋದರಿಯರು ಎಂದು ಪೂಜಿಸಲಾಗುತ್ತದೆ. ಅವರು ದುರ್ಗಾ ದೇವಿಯ ಮಕ್ಕಳು ಎನ್ನುವರು. ಕೆಲವರು ಲಕ್ಷ್ಮಿ ಮತ್ತು ಸರಸ್ವತಿ ಗಣೇಶನ ಇಬ್ಬರು ಪತ್ನಿಯರು. ರಿದಿ ಮತ್ತು ಸಿದ್ಧಿ ಎನ್ನುತ್ತಾರೆ. ಇದಕ್ಕೆ ಅನೇಕ ಪುರಾಣ ಕಥೆಗಳು ತಳುಕು ಹಾಕಿಕೊಂಡಿದೆ ಎನ್ನಲಾಗುವುದು. ಈ ಎಲ್ಲಾ ಕಾರಣಗಳಿಗಾಗಿಯೇ ಈ ಹಬ್ಬವನ್ನು ಗೌರಿ ಗಣೇಶ ಹಬ್ಬ ಎಂದು ಕರೆಯುತ್ತಾರೆ.

ಗೌರಿ ಗಣೇಶ ಹಬ್ಬದ ದಂತಕಥೆ

ಪುರಾಣದ ಪ್ರಕಾರ, ಒಂದು ದಿನ ಶಿವನ ನೆಲೆಯಾದ ಕೈಲಾಸದಲ್ಲಿ ಗೌರಿಯೊಂದಿಗೆ ಕಾಲ ಕಳೆಯಲು ಆಪ್ತರು ಯಾರೂ ಇರಲಿಲ್ಲ. ಬೇಸರದಲ್ಲಿ ಕುಳಿತಿದ್ದ ಪಾರ್ವತಿ ದೇವಿ ಸ್ನಾನ ಮಾಡಲು ಬಯಸುತ್ತಿದ್ದಳು. ಮನೆಯ ಬಾಗಿಲ ಬಳಿ ಯಾರನ್ನಾದರೂ ಕೂರಿಸಿ ಹೋಗಬೇಕು. ಆದರೆ ಯಾರೂ ಇಲ್ಲ ಎಂದು ಚಿಂತಿಸಿದಳು. ನಂತರ ತನ್ನ ದೇಹಕ್ಕೆ ಅಂಟಿಕೊಂಡಿದ್ದ ಕೆಸರಿನಿಂದಲೇ ಒಂದು ಮೂರ್ತಿಯನ್ನು ಮಾಡಿ ಜೀವ ತುಂಬಿದಳು.

ಆ ಮೂರ್ತಿಯು ಆಕೆಗೆ ಬಹಳ ಇಷ್ಟವಾಯಿತು. ನಂತರ ಪ್ರೀತಿಯಿಂದ ಗಣೇಶ ಎಂದು ಹೆಸರಿಟ್ಟಳು. ನಂತರ ತನ್ನ ಪರಿಸ್ಥಿತಿಯನ್ನು ಗಣೇಶನಿಗೆ ವಿವರಿಸಿ, ಈಗ ನಾನು ಸ್ನಾನಕ್ಕೆ ಹೋಗುತ್ತಿದ್ದೇನೆ. ಯಾರು ಬಂದರೂ ಒಳಗೆ ಹೋಗಲು ಬಿಡಬೇಡ ಎಂದು ಹೇಳಿದಳು. ಸಮ್ಮತಿ ಸೂಚಿಸಿದ ಗಣೇಶ ಕಾವಲು ಕಾಯುತ್ತಾ ಬಾಗಿಲ ಬಳಿ ನಿಂತನು. ಸ್ವಲ್ಪ ಸಮಯದಲ್ಲಿಯೇ ಆಗಮಿಸಿದ ಶಿವನು ಒಳಗೆ ಹೋಗಲು ಪ್ರಯತ್ನಿಸಿದನು. ಆದರೆ ತಾಯಿಯ ಆಣತಿಯನ್ನು ಪರಿಪಾಲಿಸುತ್ತಿದ್ದ ಗಣೇಶ ಶಿವನನ್ನು ತಡೆದು ನಿಲ್ಲಿಸಿದನು.

ಶಿವನು ಪಾರ್ವತಿಯ ಪತಿದೇವರು ಎನ್ನುವ ವಿಚಾರ ಗಣೇಶನಿಗೆ, ಗಣೇಶ ಪಾರ್ವತಿದೇವಿ ಸೃಷ್ಟಿಸಿದ ಮಗ ಎಂದು ಶಿವನಿಗೆ ತಿಳಿದಿರಲಿಲ್ಲ. ಹಾಗಾಗಿಯೇ ಇಬ್ಬರಲ್ಲೂ ವಾದ ವಿವಾದಗಳು ನಡೆದವು. ಒಳ ಪ್ರವೇಶಕ್ಕೆ ತಡೆ ಹಿಡಿಯುತ್ತಿದ್ದ ಗಣೇಶನ ಮೇಲೆ ಶಿವನಿಗೆ ಕೋಪ ಹೆಚ್ಚಾಗಿ ಗಣೇಶನ ತಲೆಯನ್ನೇ ಕತ್ತರಿಸಿದನು. ಸ್ನಾನ ಮುಗಿಸಿ ಬಂದ ಪಾರ್ವತಿದೇವಿಗೆ ಮಗನ ಸ್ಥಿತಿ ನೋಡಿ ದುಃಖ ಹಾಗೂ ಕೋಪ ಒಮ್ಮೆಲೇ ಉಂಟಾಯಿತು.

ಶಿವನಿಗೆ ನಡೆದ ವಿಚಾರವನ್ನು ಹೇಳಿ, ತನಗೆ ತನ್ನ ಮಗ ಗಣೇಶನಿಗೆ ಜೀವ ಬರುವಂತೆ ಮಾಡಬೇಕು ಎಂದು ಒತ್ತಾಯಿಸಿದಳು. ಪಾರ್ವತಿಯ ಆಣತಿಗೆ ಮಣಿದ ಶಿವನು, ತನ್ನ ಸೈನಿಕರಿಗೆ ಉತ್ತರ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದವರ ತಲೆ ಕತ್ತರಿಸಿ ತರಬೇಕಾಗಿ ಹೇಳಿದನು. ಆ ಸಂದರ್ಭದಲ್ಲಿ ಆನೆಯೊಂದು ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿರುವುದನ್ನು ಕಂಡರು. ತಕ್ಷಣವೇ ಆನೆಯ ತಲೆಯನ್ನು ಕತ್ತರಿಸಿ ತಂದು ಶಿವನಿಗೆ ನೀಡಿದರು. ಶಿವನು ಗಣೇಶನ ಕುತ್ತಿಗೆಗೆ ಆನೆಯ ಮುಖವನ್ನು ಜೋಡಿಸಿ, ಮರು ಜೀವ ನೀಡಿದನು. ಅನಿವಾರ್ಯವಾಗಿ ಆನೆಯ ತಲೆಯನ್ನು ಕತ್ತರಿಸಿ ಕೂರಿಸಬೇಕಾದ್ದರಿಂದಲೇ ಗಣೇಶನ ಮುಖದಲ್ಲಿ ಸೊಂಡಿಲು ಇರುವುದನ್ನು ಕಾಣಬಹುದು.
ಗೌರಿ ಚೌತಿಯ ಆಚರಣೆ

ಮಹಿಳೆಯರು ಆರಾಧಿಸುವ ಈ ದೇವಿಯನ್ನು ಚೌತಿಯ ಮುನ್ನದಿನವೇ ಮನೆಗೆ ತಂದು ಪೂಜಿಸಲಾಗುತ್ತದೆ. ಈ ವಿಗ್ರಹಕ್ಕೆ ಅರಿಶಿನದ ಶೃಂಗಾರ ಮಾಡಿ, ಅಕ್ಕಿ ಅಥವಾ ಧಾನ್ಯಗಳ ದಿಬ್ಬವನ್ನು ಮಾಡಿ ಇರಿಸುತ್ತಾರೆ. ಹಣ್ಣುಗಳ ನೈವೇದ್ಯ ಹಾಗೂ ಹೂವಿನಿಂದ ಶೃಂಗಾರ ಗೊಳಿಸಿ ಪೂಜಿಸುತ್ತಾರೆ. ಮರುದಿನ ಗಣೇಶ ಮೂರ್ತಿಯನ್ನು ಸ್ಥಾಪಿಸಿ ಪೂಜಿಸುತ್ತಾರೆ.

English summary

Gowri Habba 2020: Why Gowri Festival Is Celebrated Before Ganesh Chaturthi

The Gauri festival is a very important festival that is celebrated in many parts of India. This festival is celebrated just a day before the celebrations of the Ganesh Chaturthi. The Gauri festival is also referred to as the Gauri Ganesha or the Gowri Habba in Karnataka.This festival is mainly dedicated to all the married women. The Gauri festival is celebrated on Bhadrapada Shuddha Tritiya in accordance to the Hindu calendar.
X
Desktop Bottom Promotion