For Quick Alerts
ALLOW NOTIFICATIONS  
For Daily Alerts

ವೈಕುಂಠ ಏಕಾದಶಿಯಂದು ಶತ್ರುಗಳಿಗೂ ವೈಕುಂಠ ದರ್ಶನ ನೀಡುವ ವೆಂಕಟೇಶ

|

ಹಿಂದೂ ಸಂಪ್ರದಾಯಗಳಲ್ಲಿ ಕೈಗೊಳ್ಳಲಾಗುವ ವಿವಿಧ ವ್ರತಾಚರಣೆಗಳ ಪೈಕಿ ಏಕಾದಶಿ ವ್ರತವು ಸರ್ವೋತ್ಕೃಷ್ಟವಾದದ್ದಾಗಿದೆ. ಅದರಲ್ಲೂ ಭಗವಾನ್ ಶ್ರೀ ವಿಷ್ಣುವಿಗೆ ಸಮರ್ಪಿತವಾಗಿರುವ ಈ ವೈಕುಂಠ ಏಕಾದಶಿಯು ಅತ್ಯಂತ ಮಹತ್ವವುಳ್ಳದ್ದಾಗಿದೆ. ಹೆಸರೇ ಸೂಚಿಸುವ ಪ್ರಕಾರ, ಈ ಪರ್ವ ದಿನದಂದು ಸಾಕ್ಷಾತ್ ವಿಷ್ಣುವಿನ ಆವಾಸಸ್ಥಾನವಾಗಿರುವ ವೈಕುಂಠದ ಬಾಗಿಲು ತೆರೆಯಲ್ಪಡುತ್ತದೆ ಎಂದೇ ಪ್ರತೀತಿ ಇದೆ.
ವಿಷ್ಣುಪುರಾಣದಲ್ಲಿ ಉಲ್ಲೇಖಿತವಾಗಿರುವ ಪ್ರಕಾರ, ವೈಕುಂಠ ಏಕಾದಶಿಯಂದು ಕೈಗೊಳ್ಳಲಾಗುವ ಒಂದು ದಿನದ ಉಪವಾಸ ವ್ರತವು, ವರ್ಷದ ಮಿಕ್ಕುಳಿದ 23 ಏಕಾದಶಿ ದಿನಗಳಂದು ಕೈಗೊಳ್ಳುವ ಉಪವಾಸ ವ್ರತಗಳಿಗೆ ಸಮಾನವಾದದ್ದಾಗಿರುತ್ತದೆ. ಇಂತಹ ಪವಿತ್ರ ದಿನವಾಗಿರುವ ವೈಕುಂಠ ಏಕಾದಶಿಯು ಹಿಂದೂ ಪಂಚಾಂಗದ ಪ್ರಕಾರ ಧನುರ್ಮಾಸದಲ್ಲಿ ಸಂಭವಿಸುತ್ತದೆ. ಈ ಬಾರಿ ಅಂದರೆ 2020ರಲ್ಲಿ, ವೈಕುಂಠ ಏಕಾದಶಿಯು ಜನವರಿ ತಿಂಗಳ 6ನೆಯ ದಿನಾಂಕದಂದು ಸಂಭವಿಸಲಿದೆ.

Vaikuntha Ekadashi
ವೈಕುಂಠ ಏಕಾದಶಿ ಯಾವ ಪಂಚಾಂಗದ ಪ್ರಕಾರ ಎಂದು

ವೈಕುಂಠ ಏಕಾದಶಿ ಯಾವ ಪಂಚಾಂಗದ ಪ್ರಕಾರ ಎಂದು

ತಮಿಳು ಪಂಚಾಂಗದ ಪ್ರಕಾರ, ಧನು ತಿಂಗಳು ಅಥವಾ ಧನುರ್ಮಾಸವನ್ನು ಮಾರ್ಗಶೀಷ ಮಾಸವೆಂದೂ ಕರೆಯುತ್ತಾರೆ. ಹದಿನೈದು ದಿನಗಳ ಸಮೂಹವನ್ನು ಒಂದು ಪಕ್ಷವೆಂದು ಕರೆಯಲಾಗಿದ್ದು, ಮೂವತ್ತು ದಿನಗಳ ಮಾಸ (ತಿಂಗಳು) ವೊಂದರಲ್ಲಿ ಶುಕ್ಲಪಕ್ಷ ಹಾಗೂ ಕೃಷ್ಣಪಕ್ಷಗಳೆಂಬ ತಲಾ ಹದಿನೈದು ದಿನಗಳ ಸಮೂಹಗಳಿವೆ. ತಿಂಗಳೊಂದರ ಈ ಎರಡೂ ಪಕ್ಷಗಳಲ್ಲಿಯೂ ತಲಾ ಒಂದೊಂದು ಏಕಾದಶಿಯು ಸಂಭವಿಸುತ್ತದೆ. ವೈಕುಂಠ ಏಕಾದಶಿಯು ಶುಕ್ಲಪಕ್ಷ ಏಕಾದಶಿಯಾಗಿರುತ್ತದೆ. ವೈಕುಂಠ ಏಕಾದಶಿಯನ್ನು ಸೌರಮಾನ ಪಂಚಾಂಗ ಪದ್ಧತಿಯ ಪ್ರಕಾರ ಆಚರಿಸುವುದರಿಂದ ಅದು ಹಿಂದೂ ಚಾಂದ್ರಮಾನ ತಾರೀಖು ಪಟ್ಟಿಯಲ್ಲಿ ಒಂದೋ ಮಾರ್ಗಶೀರ್ಷ ಮಾಸದಲ್ಲಿ ಇಲ್ಲವೇ ಪೌಷ ಮಾಸದಲ್ಲಿ ಸಂಭವಿಸುತ್ತದೆ. ಕೇರಳೀಯರು ಅನುಸರಿಸುವ ಮಲಯಾಳಂ ಪಂಚಾಂಗದಲ್ಲಿ ವೈಕುಂಠ ಏಕಾದಶಿಯನ್ನು ಸ್ವರ್ಗ ವಾಥಿಲ್ ಏಕಾದಶಿ ಎಂದು ಕರೆಯಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ನ ಪ್ರಕಾರ, ವರ್ಷವೊಂದರಲ್ಲಿ ವೈಕುಂಠ ಏಕಾದಶಿಯು ಸಂಭವಿಸದೆಯೂ ಇರಬಹುದು, ಇಲ್ಲವೇ ಒಂದು ಅಥವಾ ಎರಡು ವೈಕುಂಠ ಏಕಾದಶಿಗಳೂ ಸಂಭವಿಸಿಯಾವು.

ಶತ್ರುಗಳಿಗೂ ವೈಕುಂಠದ ಬಾಗಿಲು ತೆಗೆದ ಶ್ರೀಮನ್ನಾರಾಯಣ

ಶತ್ರುಗಳಿಗೂ ವೈಕುಂಠದ ಬಾಗಿಲು ತೆಗೆದ ಶ್ರೀಮನ್ನಾರಾಯಣ

ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದೂ ಕರೆಯಲಾಗುತ್ತದೆ. ಈಗಾಗಲೇ ತಿಳಿಸಿರುವಂತೆ, ಈ ಪರ್ವದಿನದಂದು 'ವೈಕುಂಠ ದ್ವಾರಮ್' ಎಂದು ಕರೆಯಲ್ಪಡುವ ಸಾಕ್ಷಾತ್ ಭಗವಾನ್ ಶ್ರೀಮನ್ನಾರಾಯಣನ ಗರ್ಭಗುಡಿಯ ದ್ವಾರವು ತೆರೆಯಲ್ಪಡುವುದೆಂಬ ನಂಬಿಕೆಯಿದ್ದು, ವೈಕುಂಠ ಏಕಾದಶಿಯಂದು ಉಪವಾಸವನ್ನು ಕೈಗೊಳ್ಳುವ ಭಕ್ತರು ವೈಕುಂಠ ಧಾಮವನ್ನು ಸೇರಿಕೊಳ್ಳುವುದರ ಮೂಲಕ ಮೋಕ್ಷವನ್ನು ಹೊಂದುತ್ತಾರೆ ಎಂಬ ನಂಬಿಕೆ ಇದೆ.

ವೈಕುಂಠ ಏಕಾದಶಿಗೆ ಸಂಬಂಧಿಸಿದಂತಹ ಪೌರಾಣಿಕೆ ಹಿನ್ನೆಲೆಯೊಂದರ ಪ್ರಕಾರ, ತನಗೆ ಶತ್ರುಗಳಾಗಿದ್ದರೂ ಸಹ ಭಗವಾನ್ ಶ್ರೀ ವಿಷ್ಣುವು ಇಬ್ಬರು ರಕ್ಕಸರಿಗಾಗಿ ವೈಕುಂಠ ಏಕಾದಶಿಯಂದು ವೈಕುಂಠದ ಬಾಗಿಲನ್ನು ತೆರೆದನಂತೆ. ಆಗ ವಿಷ್ಣುವಿಗೆ ಶರಣಾದ ಆ ರಕ್ಕಸರು ವರವೊಂದನ್ನು ಕೇಳಿಕೊಳ್ಳುತ್ತಾರೆ. ಅದೇನೆಂದರೆ, ಯಾರೇ ಆಗಲೀ ವೈಕುಂಠ ಏಕಾದಶಿಯಂದು ಅವರ ಕಥೆಯನ್ನು ಕೇಳಿದರೆ ಹಾಗೂ 'ವೈಕುಂಠ ದ್ವಾರಮ್' ಎಂದು ಕರೆಯಲ್ಪಡುವ ವೈಕುಂಠದ ಬಾಗಿಲಿನಿಂದ ವಿಷ್ಣುವು ಹೊರಬರುತ್ತಿರುವ ಚಿತ್ರವನ್ನು ನೋಡಿದರೆ, ಅಂತಹವರೂ ಕೂಡಾ ವೈಕುಂಠವನ್ನೇ ಸೇರುವಂತಾಗಲಿ ಎಂಬುದು ಅವರು ಕೇಳಿಕೊಂಡ ವರ. ಹಾಗಾಗಿ, ಭಾರತದಾದ್ಯಂತ ಎಲ್ಲಾ ವಿಷ್ಣು ದೇವಾಲಯಗಳಲ್ಲಿಯೂ ಈ ದಿನದಂದು ಭಕ್ತರು ಹಾದುಹೋಗುವ ರೀತಿಯಲ್ಲಿ ಬಾಗಿಲಿನಂತಹ ಒಂದು ರಚನೆಯನ್ನು ವ್ಯವಸ್ಥೆಗೊಳಿಸಲಾಗುತ್ತದೆ.

ಯಾವೆಲ್ಲಾ ಪ್ರಮುಖ ದೇವಾಲಯಗಳಲ್ಲಿ ಪೂಜೆ ನೆರವೇರುತ್ತದೆ?

ಯಾವೆಲ್ಲಾ ಪ್ರಮುಖ ದೇವಾಲಯಗಳಲ್ಲಿ ಪೂಜೆ ನೆರವೇರುತ್ತದೆ?

ಭೂವೈಕುಂಠವೆನಿಸಿಕೊಂಡಿರುವ ತಿರುಪತಿಯಲ್ಲಿನ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಹಾಗೂ ಶ್ರೀ ರಂಗಂನ ಶ್ರೀ ರಂಗನಾಥ ವೈಕುಂಠ ಏಕಾದಶಿ 2020: ಏನೀ ಪರ್ವದಿನದ ಮಹತ್ವ? ಸ್ವಾಮಿ ದೇವಸ್ಥಾನಗಳ ಪಾಲಿಗಂತೂ ವೈಕುಂಠ ಏಕಾದಶಿ ದಿನವು ಅತ್ಯಂತ ಮಹತ್ವದ ದಿನವಾಗಿದೆ. ಪಂಡರಾಪುರದ ವಿಠೋಬ ದೇವಸ್ಥಾನವನ್ನೂ ಒಳಗೊಂಡಂತೆ ದೇಶದಾದ್ಯಂತ ಇರಬಹುದಾದ ಭಗವಾನ್ ಶ್ರೀ ವಿಷ್ಣು, ಶ್ರೀ ಕೃಷ್ಣ, ಅಥವಾ ಶ್ರೀ ಹರಿಯ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿಗೆ ವಿಶೇಷ ಪ್ರಾಧಾನ್ಯತೆ ಇರುತ್ತದೆ. ವೈಕುಂಠ ಏಕಾದಶಿಯಂದು ಈ ಎಲ್ಲಾ ದೇವಸ್ಥಾನಗಳಲ್ಲಿಯೂ ಜನಸಂದಣಿಯು ಕಿಕ್ಕಿರಿದು ತುಂಬಿರುತ್ತದೆ.

ಬೆಂಗಳೂರಿನ ಪ್ರಮುಖ ದೇವಾಲಯಗಳು

ಬೆಂಗಳೂರಿನ ಪ್ರಮುಖ ದೇವಾಲಯಗಳು

ಬೆಂಗಳೂರು ನಗರಾದ್ಯಂತ ಇರುವ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ದಿನವನ್ನು ವಿಶೇಷ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಇಸ್ಕಾನ್ ಗೆ ಸೇರಿದ ಹರೇ ಕೃಷ್ಣ ಬೆಟ್ಟದಲ್ಲಿರುವ ಶ್ರೀನಿವಾಸ ಗೋವಿಂದ ದೇವಸ್ಥಾನದಲ್ಲಿ ಮತ್ತು ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನಸುಕಿನ ವೇಳೆ 3 ಘಂಟೆಯಿಂದಲೇ ಸುಪ್ರಭಾತದೊಂದಿಗೆ ಹಾಗೂ ಪೂರ್ಣ ಮಂಗಳಾರತಿಯೊಂದಿಗೆ ಆಚರಣೆಗಳು ಆರಂಭಗೊಳ್ಳುತ್ತವೆ.

ವೈಕುಂಠ ಏಕಾದಶಿಯು ಆಚರಿಸಲ್ಪಡುವ ಬೆಂಗಳೂರು ನಗರದ ಇನ್ನಿತರ ದೇವಸ್ಥಾನಗಳೆಂದರೆ ಅವು ಗುಟ್ಟಹಳ್ಳಿಯ ಶ್ರೀ ವೆಂಕಟೇಶ ದೇವಸ್ಥಾನ, ಬನಶಂಕರಿ ಎರಡನೆಯ ಹಂತದಲ್ಲಿರುವ ದೇವಗಿರಿ ಶ್ರೀ ವೆಂಕಟೇಶ್ವರ ದೇವಸ್ಥಾನ, ಮಹಾಲಕ್ಷ್ಮೀಪುರಂ ನಲ್ಲಿರುವ ಶ್ರೀ ಶ್ರೀನಿವಾಸ ದೇವಸ್ಥಾನ, ರಾಜಾಜಿನಗರದಲ್ಲಿರುವ ಶ್ರೀ ಕೈಲಾಸ ವೈಕುಂಠ ದೇವಸ್ಥಾನ, ವೈಯಲ್ಲಿಕವಲ್ ತಿರುಮಲ ತಿರುಪತಿ ದೇವಸ್ಥಾನ ಹಾಗೂ ಇನ್ನಿತರ ದೇವಸ್ಥಾನಗಳು. ಈ ದಿನದಂದು ಈ ಎಲ್ಲಾ ದೇವಸ್ಥಾನಗಳಲ್ಲಿಯೂ ಮುಂಜಾನೆಯಿಂದಲೇ ಮೈಲುಗಟ್ಟಲೆ ಉದ್ದದ ಸರತಿಯ ಸಾಲುಗಳು ಕಂಡುಬರುವುದು ಸರ್ವೇಸಾಮಾನ್ಯವಾಗಿರುತ್ತದೆ.

ಪಾರಣ ಎಂದರೇನು?

ಪಾರಣ ಎಂದರೇನು?

ಪಾರಣ ಎಂದರೆ ಉಪವಾಸವನ್ನು ಅಂತ್ಯಗೊಳಿಸುವುದು ಎಂದರ್ಥ. ಏಕಾದಶಿ ಪಾರಣವನ್ನು ಏಕಾದಶಿ ಉಪವಾಸದ ಮಾರನೇ ದಿನದ ಸೂರ್ಯೋದಯದ ಬಳಿಕ ಕೈಗೊಳ್ಳಲಾಗುತ್ತದೆ. ಸೂರ್ಯೋದಯಕ್ಕಿಂತಲೂ ಮುಂಚಿತವಾಗಿ ದ್ವಾದಶಿಯು ಮುಕ್ತಾಯಗೊಳ್ಳದಿದ್ದಲ್ಲಿ, ಪಾರಣವನ್ನು ದ್ವಾದಶಿ ತಿಥಿಯ ಮುಕ್ತಾಯದೊಳಗೆ ಕೈಗೊಳ್ಳಬೇಕು. ದ್ವಾದಶಿ ತಿಥಿಯ ಮುಕ್ತಾಯದೊಳಗೆ ಪಾರಣವನ್ನು ಕೈಗೊಳ್ಳದೇ ಇರುವುದು ಅಪರಾಧಕ್ಕೆ ಸಮನಾಗಿರುತ್ತದೆ.

ಪಾರಣ ಯಾವಾಗ ಅಂತ್ಯ ಗೊಳಿಸಬೇಕು

ಪಾರಣ ಯಾವಾಗ ಅಂತ್ಯ ಗೊಳಿಸಬೇಕು

ಹರಿವಾಸರದ ಅವಧಿಯಲ್ಲಿ ಪಾರಣವನ್ನು ಕೈಗೊಳ್ಳಬಾರದು (ಉಪವಾಸವನ್ನು ಅಂತ್ಯಗೊಳಿಸಬಾರದು). ಉಪವಾಸವನ್ನು ಅಂತ್ಯಗೊಳಿಸುವ ದಿಶೆಯಲ್ಲಿ, ಹರಿವಾಸರದ ಅವಧಿಯು ಕೊನೆಗೊಳ್ಳುವವರೆಗೂ ವ್ರತಧಾರಿಯು ಕಾಯಬೇಕು. ಹರಿವಾಸರವು ದ್ವಾದಶಿ ತಿಥಿಯ ಮೊದಲನೆಯ ನಾಲ್ಕನೆಯ ಒಂದು ಭಾಗದ ಅಥವಾ ಕಾಲು ಭಾಗದ ಅವಧಿಯಾಗಿರುತ್ತದೆ. ಉಪವಾಸವನ್ನು ಕೊನೆಗೊಳಿಸಲು ಅತ್ಯಂತ ಪ್ರಶಸ್ತವಾದ ಕಾಲಘಟ್ಟವೆಂದರೆ ಅದು ಪ್ರಾತ:ಕಾಲ. ಮಧ್ಯಾಹ್ನದ ವೇಳೆಗೆ ಉಪವಾಸವನ್ನು ಅಂತ್ಯಗೊಳಿಸಲು ಮುಂದಾಗಬಾರದು. ಕಾರಣಾಂತರದಿಂದ ವ್ರತಧಾರಿಗೆ ಪ್ರಾತ:ಕಾಲದ ಅವಧಿಯಲ್ಲಿ ಉಪವಾಸವನ್ನು ಅಂತ್ಯಗೊಳಿಸಲು ಸಾಧ್ಯವಾಗದೇ ಹೋದಲ್ಲಿ, ಅಂತಹವರು ಮಧ್ಯಾಹ್ನವು ಕಳೆದ ಬಳಿಕ ಉಪವಾಸವನ್ನು ಅಂತ್ಯಗೊಳಿಸಬೇಕು.

ಕೆಲವೊಮ್ಮೆ ಏಕಾದಶಿ ತಿಥಿಯು ಒಂದಾದ ಮೇಲೊಂದರಂತೆ ಎರಡು ದಿನಗಳು ಸಂಭವಿಸುವುದೂ ಉಂಟು. ಅಂತಹ ಸಂದರ್ಭಗಳಲ್ಲಿ ಗೃಹಸ್ಥರಾಗಿರುವ ಸ್ಮಾರ್ತರು ಮೊದಲನೆಯ ದಿನ ಮಾತ್ರ ಉಪವಾಸವನ್ನಾಚರಿಸಬೇಕು. ಎರಡನೆಯ ದಿನದ ಏಕಾದಶಿ ಉಪವಾಸವನ್ನು ಸನ್ಯಾಸಿಗಳಿಗೆ, ವಿಧವೆಯರಿಗೆ ಮತ್ತು ಮೋಕ್ಷವನ್ನು ಬಯಸುವವರಿಗಾಗಿ ಸಲಹೆ ಮಾಡಲಾಗುತ್ತದೆ. ಸ್ಮಾರ್ತರ ಎರಡನೆಯ ದಿನದ ಉಪವಾಸದಂದು ವೈಷ್ಣವರು ಉಪವಾಸ ಕೈಗೊಳ್ಳುವ ಏಕಾದಶಿಯು ಸಂಭವಿಸುತ್ತದೆ.

ಭಗವಾನ್ ಶ್ರೀ ಮನ್ನಾರಾಯಣನ ಪರಮ ಪ್ರೇಮ ಮತ್ತು ಕೃಪೆಗೆ ಪಾತ್ರರಾಗಬಯಸುವ ಕಠೋರ ಭಕ್ತರಿಗಾಗಿ ಏಕಾದಶಿಯ ಎರಡೂ ದಿನಗಳಂದೂ ಉಪವಾಸವನ್ನು ಕೈಗೊಳ್ಳುವಂತೆ ಸಲಹೆ ಮಾಡಲಾಗುತ್ತದೆ.

English summary

Vaikuntha Ekadashi: Puja And Parana Time Best Temples In South India

Vaikuntha Ekadashi is an important ekadashi observance that falls on the ‘ekadashi’ (11th day) of the Shukla Paksha (the waxing phase of moon) in the month of ‘Pausha’ in the Hindu calendar. This date corresponds to the months of December to January in the Gregorian calendar. The day of Vaikuntha Ekadashi is auspicious for Vaishnavism followers as it is believed that ‘Vaikuntha Dwaram’ that is the gateway to Lord Vishnu’s abode, opens up on this day. Therefore it is believed that a person who keeps a sacred fast on Vaikuntha Ekadashi will definitely reach the ‘Vaikuntha’ and never has to face Yama Raja, the Lord of Death.
X
Desktop Bottom Promotion