For Quick Alerts
ALLOW NOTIFICATIONS  
For Daily Alerts

ಸಂಧಿ ಪೂಜೆಯ ವಿಶೇಷತೆ ನಿಮಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ...

By Divya Pandith
|

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವರ ಆರಾಧನೆ ಹಾಗೂ ಹಬ್ಬದ ಆಚರಣೆಗಳು ವಿಭಿನ್ನವಾಗಿರುತ್ತದೆ. ಅಂತೆಯೇ ದುರ್ಗಾದೇವಿಯ ಆರಾಧನೆಯೂ ಬಹಳ ವಿಶಿಷ್ಟ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ದುರ್ಗಾ ದೇವಿಯ ಆರಾಧನೆಯ ಸಂದರ್ಭದಲ್ಲಿ ಸಂಧಿಪೂಜೆ ಎನ್ನುವ ವಿಶೇಷ ಆಚರಣೆ ಇದೆ. ನವರಾತ್ರಿಯ ಅಷ್ಟಮಿ ತಿಥಿ ಮತ್ತು ನವಮಿಗಳ ಅಂತ್ಯದ ಸಮಯದಲ್ಲಿ ಈ ಪೂಜೆಯನ್ನು ಮಾಡಲಾಗುತ್ತದೆ.

ಈ ವರ್ಷ ಅಂದರೆ 2017 ರಲ್ಲಿ ಸಂಧಿ ಪೂಜೆಯನ್ನು ಸಪ್ಟೆಂಬರ್ 28 ರಂದು ಗುರುವಾರ ಮಾಡಲಾಗುತ್ತದೆ. ಸಂಧಿ ಪೂಜೆಯ ವಿಶಿಷ್ಠವಾದ ಸಮಯ ಕೇಲವ 47 ನಿಮಿಷ ಇರುತ್ತದೆ. ಅಂದು ಆ ಸಮಯ 21.12 ರಿಂದ 22.00ವರೆಗೆ ಪ್ರಾರಂಭವಾಗುತ್ತದೆ. ಸಂಧಿ ಪೂಜೆಯ ಈ ಪವಿತ್ರ ಕ್ಷಣವು ಬಹಳ ಮಂಗಳಕರವಾದದ್ದು ಎಂದು ಪರಿಗಣಿಸಲಾಗುತ್ತದೆ. ಈ ಸಮಯವು ಚಾಮುಂಡಿ ದೇವಿ ದುಷ್ಟ ಶಕ್ತಿಯೊಡನೆ ಹೋರಾಡಿ ಜಯವನ್ನು ಸಾಧಿಸಿದ ಸುವರ್ಣ ಗಳಿಗೆ ಎಂದು ಹೇಳಲಾಗುತ್ತದೆ. ದುರ್ಗಾ ಮತ್ತು ಚಾಮುಂಡಿ ದೇವಿಯ ಪೂಜಿಸುವ ಭಕ್ತರು ಈ ಮಂಗಳಕರ ಸಮಯದಲ್ಲಿ ಪೂಜಿಸಬೇಕು. ಆಗ ಒಳ್ಳೆಯ ಫಲ ಪಡೆಯಬಹುದು ಎನ್ನಲಾಗುತ್ತದೆ. ಈ ವಿಶೇಷ ಆಚರಣೆಯ ಪುರಾಣ ಇತಿಹಾಸ ಹಾಗೂ ಅದರ ಪುಣ್ಯ ಫಲದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ.

Sandhi Pooja

ಚಾಮುಂಡಿ ದೇವಿಯ ಲೀಲೆ
ಮಹಿಷಾಸುರ ಎನ್ನುವ ಭಯಂಕರನಾದ ರಾಕ್ಷಸನಿದ್ದನು. ಮೂರು ಲೋಕದ ಮೇಲೂ ತನ್ನ ಕ್ರೋಧ ಹಾಗೂ ಭಯ ಇರಬೇಕೆಂದು ಬಯಸುತ್ತಿದ್ದನು. ಅದರಂತೆಯೇ ಎಲ್ಲರಿಗೂ ತೊಂದರೆಯನ್ನು ನೀಡುತ್ತಿದ್ದನು. ಭೂಮಿಯ ಮೇಲಿರುವ ಮಾನವರು ಹಾಗೂ ಸ್ವರ್ಗದಲ್ಲಿರುವ ದೇವತೆಗಳೆಲ್ಲರೂ ಈತನ ಉಪಟಳದಿಂದ ಬಹಳ ಭಯಭೀತರಾಗಿದ್ದರು. ದುಷ್ಟ ರಾಕ್ಷಸನನ್ನು ಸದೆ ಬಡಿಯಬೇಕೆಂದು ಬ್ರಹ್ಮ ಮತ್ತು ವಿಷ್ಣು

ದೇವರು ನಿರ್ಧರಿಸಿದರು
ಅದರಂತೆಯೇ ಮಾತೆ ದುರ್ಗಾದೇವಿಯ ಅವತಾರವನ್ನು ಸೃಷ್ಟಿಸಿ, ಎಲ್ಲಾ ದೇವತೆಗಳ ಶಕ್ತಿಯನ್ನು ನೀಡಿದರು. ಮಹಿಷಾಸುರನನ್ನು ಸಂಹರಿಸಲು ವಾಹನವನ್ನಾಗಿ ಸಿಂಹದ ಮೇಲೆ ಪ್ರಯಾಣ ಬೆಳೆಸಿದಳು. ಜೊತೆಗೆ ಹತ್ತು ಕೈಗಳಲ್ಲೂ ವಿಶೇಷ ಆಯುಧಗಳನ್ನು ಹಿಡಿದಿದ್ದಳು. ಯುದ್ಧಕ್ಕೆ ಸಿದ್ಧರಾದ ಮಹಿಷಾಸುರ ಹಾಗೂ ಅವನ ಬಳಗದ ವಿರುದ್ಧ ದುರ್ಗಾ ದೇವಿ ಹೋರಾಟಕ್ಕೆ ಇಳಿದಳು.

ಮಹಿಷಾಸುರನ ಕಡೆಯವರಾದ ಚಂಡಾ ಮತ್ತು ಮುಂಡಾ ಎನ್ನುವ ದುಷ್ಟ ಶಕ್ತಿಯ ವಿರುದ್ಧವೂ ಹೋರಾಡಬೇಕಾಯಿತು. ಆ ಸಂದರ್ಭದಲ್ಲಿ ದೇವಿ ಚಂದಿಕ ರೂಪವನ್ನು ತಾಳಿದಳು. ಈ ರೂಪದಲ್ಲಿ ದೇವಿ ಕಡು ಕಪ್ಪು ಬಣ್ಣ ಹಾಗೂ ಕೆಂಪು ಕಣ್ಣು ಮತ್ತು ನಾಲಿಗೆಯನ್ನು ಹೊಂದಿದ್ದಳು. ಈ ಅವತಾರದಲ್ಲಿಯೇ ಚಂಡಾ ಮತ್ತು ಮುಂಡಾ ಎನ್ನುವ ಇಬ್ಬರು ರಾಕ್ಷಸರನ್ನು ಸಂಹರಿಸಿದಳು. ಇವಳ ಈ ಸಾಹಸಕ್ಕೆ ಮೆಚ್ಚುಗೆ ಪಡೆದ ಚಂದಿಕಾ ದೇವಿಗೆ ಚಾಮುಂಡಿ ಎನ್ನುವ ಹೆಸರಿನಿಂದ ಕರೆಯಲಾಯಿತು. ಚಾಮುಂಡಿ ದೇವಿಯು ಚಂಡಾ ಮತ್ತು ಮುಂಡಾ ಎನ್ನುವ ರಾಕ್ಷಸರನ್ನು ಕೊಂದ ಸಮಯವನ್ನೇ ಸಂಧಿ ಸಮಯ ಎಂದು ಕರೆಯಲಾಗುತ್ತದೆ. ಹಾಗಾಗಿಯೇ ಆ ಸಮಯದಲ್ಲಿ ದೇವಿಯನ್ನು ಆರಾಧಿಸಬೇಕು ಎನ್ನುವ ಪ್ರತೀತಿ ಬಂತು.

ರಾಮ ದೇವರು ಮತ್ತು ದುರ್ಗಾ ದೇವಿಯ ಪೂಜೆ
ರಾಮನು ತನ್ನ ಪತ್ನಿ ಸೀತೆಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಹಲವಾರು ತಯಾರಿ ಮಾಡಿಕೊಳ್ಳುತ್ತಿದ್ದನು. ಈ ಸಂದರ್ಭದಲ್ಲಿ ವಿಜಯವನ್ನು ಖಚಿತ ಪಡಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ದುರ್ಗಾ ದೇವಿಯನ್ನು ಪ್ರಾರ್ಥಿಸಿಕೊಂಡನು. ದುರ್ಗಾದೇವಿಯನ್ನು ಆಹ್ವಾನಿಸಲು ಸಮಯ ಇಲ್ಲವಾದರೂ ಆಕೆಯನ್ನು ಪ್ರಾರ್ಥಿಸಿಕೊಂಡನು. ಅದು ವಸಂತ ಕಾಲವಾಗಿತ್ತು. ರಾಮನು ಮಾಡಿದ ಆ ಕಾರ್ಯವಿಧಾನಕ್ಕೆ "ಆಕಲ್ ಭೋದನ್" ಅಥವಾ "ಅಕಾಲಿಕ ಪ್ರಾರ್ಥನೆ" ಎಂದು ಕರೆಯುತ್ತಾರೆ. ಸಂಧಿ ಸಮಯದಲ್ಲಿ ದುರ್ಗಾದೇವಿಯು ರಾಮನ ಎದುರು ಪ್ರತ್ಯಕ್ಷಳಾದಳು ಮತ್ತು ವಿಜಯವಾಗಲಿ ಎಂದು ಹರಸಿದಳು ಎನ್ನುವ ಪ್ರತೀತಿ ಇದೆ.

ಸಂಧಿ ಪೂಜೆಯಲ್ಲಿ ಕಮಲದ ಹೂವಿನ ಶ್ರೇಷ್ಠತೆ
ರಾವಣನ ವಿರುದ್ಧ ಹೋರಾಡಿ ವಿಜಯವಾಗಲು ಹರಸಿದ ದುರ್ಗಾದೇವಿಗೆ ತನ್ನ ಕಣ್ಣುಗಳನ್ನು ಅರ್ಪಿಸಲು ಮುಂದಾಗಿದ್ದನು. ಆ ಸಂದರ್ಭದಲ್ಲಿ ದೇವಿ ಕಮಲದ ದಳದಂತಿರುವ ಕಣ್ಣಿನ ಬದಲು, ಕಮಲದಹೂವನ್ನು ನೀಡೆಂದು ಹೇಳಿದಳು. ಅಂತೆಯೇ ಸಂಧಿ ಕಾಲದಲ್ಲಿ ದೇವಿಗೆ ಕಮಲದ ಹೂವಿನ ಶೃಂಗಾರದಿಂದ ಪೂಜಿಸಲಾಗುತ್ತದೆ. ಈ ಪೂಜೆಗೆ 108 ಕಮಲವನ್ನು ನೀಡುತ್ತಾರೆ. 108 ಎನ್ನುವುದು ಹಿಂದೂ ಸಮುದಾಯದಲ್ಲಿ ಬಹಳ ಪವಿತ್ರವಾದದ್ದು ಅಥವಾ ಮಂಗಳಕರವಾದದ್ದು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ 108 ಕಮಲದ ಹೂವು, 108 ತುಪ್ಪದ ದೀಪ, 108 ಕರ್ಪೂರದ ದೀಪವನ್ನು ದುರ್ಗಾ/ಚಾಮುಂಡಿ ದೇವಿಗೆ ಭಕ್ತಿ ಭಾವದಿಂದ ಬೆಳಗುತ್ತಾರೆ.

English summary

The Legends Of Sandhi Pooja

Sandhi Pooja is an important part of the Durga pooja festivities. The word 'Sandhi' is a Sanskrit word that means joining or a combination. The Sandhi Pooja is observed during the Sandhi Kshan, which means the moment of combination. This points to the fact that the Sandhi pooja is performed during the combination of the end of the Ashtami tithi and the Navami thithi. In the year 2017, the Sandhi Kshan of the Sandhi Pooja falls on the 28th of September, which is a Thursday.
X
Desktop Bottom Promotion