For Quick Alerts
ALLOW NOTIFICATIONS  
For Daily Alerts

ಮಹಿಳಾ ದಿನದ ವಿಶೇಷ: ಬೆರಳುಗಳಿಲ್ಲದೇ ಬದುಕು ಕಟ್ಟಿಕೊಂಡ ಮಾಲಿನಿ ನಮ್ಮೆಲ್ಲರ ಹೆಮ್ಮೆ

|

ಎಷ್ಟೋ ಹೆಣ್ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ ಈ ಮಾಲಿನಿ, ಇವರ ಸಾಧನೆ ನಮ್ಮೆಲ್ಲರ ಬದುಕಿಗೆ ಹೊಸ ಅರ್ಥವನ್ನು ತಿಳಿಸುವಂತಿದೆ..

ಕೈಗಳಲ್ಲಿ ಸುಂದರವಾದ ಅಕ್ಷರ ಮೂಡಲು, ಕೀಬೋರ್ಡ್ ನಲ್ಲಿ ಕೈಯಾಡಿಸಿ ಕಂಪ್ಯೂಟರನಲ್ಲಿ ಜಾಲಾಡಲು ಕೈಬೆರಳುಗಳು ಅತ್ಯವಶ್ಯಕ.

ಆದರೆ ಇಲ್ಲೊಬ್ಬಳು ಯುವತಿ ಅಂಗೈ ಬೆರಳುಗಳೇ ಇಲ್ಲದಿದ್ದರೂ ಚೆನ್ನಾಗಿ ಬರೆಯುತ್ತಾಳೆ, ಕೀಲಿಮಣೆಯಲ್ಲಿ ಕೈಯಾಡಿಸಿ ಕಂಪ್ಯೂಟರ್‌ ಕಚೇರಿ ಕೆಲಸ ನಿರ್ವಹಿಸುತ್ತಾಳೆ, ಮಂದಸ್ಮಿತ- ಮೃದು ಮಾತುಗಳಿಂದಲೇ ತನ್ನ ಕೊರತೆ ಮರೆಮಾಚಿ ನಗುಮೊಗದ ಸೇವೆಯ ಮೂಲಕ ಎಲ್ಲರ ಮನಗೆಲ್ಲುತ್ತಾರೆ.

ಹೀಗೆ ತನ್ನಲ್ಲಿರುವ ವಿಶಿಷ್ಟ ಪ್ರತಿಭಾ ಸಾಮರ್ಥ್ಯದ ಮುಖಾಂತರ ವಿಕಲ ಚೇತನರ ಬದುಕಿಗೆ ಸ್ಪೂರ್ತಿಯಾದವರು ಕಾರ್ಕಳದ ಮಾಲಿನಿ ಭಂಡಾರಿ. ಅರೇ ಬೆರಳೇ ಇಲ್ಲದೇ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂದು ಆಶ್ಚರ್ಯ ಆಗ್ತಾ ಇದ್ಯಾ? ಬನ್ನಿ ಈ ನಾರಿಯ ಸ್ಪೂರ್ತಿದಾಯಕ ಕಥೆಯನ್ನು ನೋಡ್ಕೋಂಡು ಬರೋಣ.

ಇದು ಹುಟ್ಟಿನಿಂದ ಇರುವ ವೈಕಲ್ಯವಲ್ಲ:

ಇದು ಹುಟ್ಟಿನಿಂದ ಇರುವ ವೈಕಲ್ಯವಲ್ಲ:

ಮೂಲತಃ ಕಾರ್ಕಳದ ಕೌಡೂರಿನವರಾದ ಈಕೆ ಜಿ.ಧರ್ಮಪಾಲ ಭಂಡಾರಿ ಹಾಗೂ ಪುಷ್ಪಾವತಿ ದಂಪತಿಗಳ ಸುಪುತ್ರಿ. ತಾನು ಒಂದೂವರೆ ವರ್ಷದ ಮಗುವಿದ್ದಾಗ ಆಟವಾಡುತ್ತಿದ್ದ ಈಕೆ ನಿಯಂತ್ರಣ ತಪ್ಪಿ, ಭತ್ತ ಬೇಯಿಸುವ ಒಲೆಗೆ ಬಿದ್ದರು. ತಕ್ಷಣ ಚಿಕಿತ್ಸೆ ಪ್ರಯತ್ನಿಸಿಲಾಯಿತಾದರೂ, ಎರಡೂ ಕೈಯ ಬೆರಳುಗಳೆಲ್ಲ ಉದುರಿದವು. ಈ ಘಟನೆಯಿಂದಾಗಿ ವಿಕಲಾಂಗೆಯಾದ ಇವರು ಧೃತಿಗೆಡದೆ ತನ್ನ ಆತ್ಮವಿಶ್ವಾಸ, ಛಲದಿಂದಾಗಿ ಇಂದು ಸಕಲಾಂಗರು ನಾಚುವಂತೆ ಬದುಕಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೈಯ ಉಳಿದ ಭಾಗವನ್ನು ಒಂದಕ್ಕೊಂದು ಜೋಡಿಸಿ ಅವುಗಳ ಮಧ್ಯೆ ಪೆನ್ನು ಸಿಕ್ಕಿಸಿ ಬರೆದಳೆಂದರೆ ಮುತ್ತು ಪೋಣಿಸಿದಂತಹ ಅಕ್ಷರಗಳನ್ನು ಕಂಡವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕು, ಅಷ್ಟೇ ಅಲ್ಲ, ಇತರ ವ್ಯಕ್ತಿಗಳಂತೆ ವೇಗವಾಗಿಯೂ ಬರೆಯಬಲ್ಲರು.

ಈಕೆ ಸ್ಪೂರ್ತಿ ಪಡೆದದ್ದೂ ಸಹ ಅಂಗವೈಕಲ್ಯ ವ್ಯಕ್ತಿಯಿಂದಲೇ!:

ಈಕೆ ಸ್ಪೂರ್ತಿ ಪಡೆದದ್ದೂ ಸಹ ಅಂಗವೈಕಲ್ಯ ವ್ಯಕ್ತಿಯಿಂದಲೇ!:

ತನ್ನ ಪ್ರಾಥಮಿಕ ಶಿಕ್ಷಣವನ್ನು ಕಣಜಾರಿನ ಲೂದ್ರ್ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಮುಂದಿನ ಶಿಕ್ಷಣವನ್ನು ಆನಂದ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪಡೆದು, ಕಾರ್ಕಳದ ಎಸ್.ವಿ.ಟಿ ಮಹಿಳಾ ವಿದ್ಯಾಲಯದಲ್ಲಿ ಬಿ.ಎ ಪದವಿಯನ್ನು ಮುಗಿಸಿದರು. ಸರ್ಕಾರಿ ಉದ್ಯೋಗ ಪಡೆಯುವ ಆಸೆಯನ್ನು ಹೊಂದಿದ್ದ ಈಕೆ ಪಿ.ಜಿ.ಡಿ.ಸಿ.ಎ ಕಂಪ್ಯೂಟರ್‌ ಕೋರ್ಸ್ ನಲ್ಲೂ ತೇರ್ಗಡೆ ಹೊಂದಿದ್ದಾರೆ. ʻನೀವು ಹೇಗೆ ಬರೆಯಲು ಕಲಿತಿರಿ ಎಂಬ ಪ್ರಶ್ನೆಗೆ ಸರಿಯಾಗಿ ನೆನಪಿಲ್ಲ, ಆದರೆ ಇದರಲ್ಲಿ ತನ್ನ ಪೋಷಕರು ಹಾಗೂ ಗುರುಗಳ ಪಾತ್ರ ಹೆಚ್ಚಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆʼ ಮಾಲಿನಿ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅಂಗ ಹೀನತೆಯನ್ನು ಮೆಟ್ಟಿ ನಿಂತ ವಿಲಿಯಂ ಡೇಸಾ ಇವರಿಗೆ ಸ್ಪೂರ್ತಿ. ಮೊತ್ತಮೊದಲು ಕೊಂಕಣಿ ಪತ್ರಿಕೆಯೊಂದಕ್ಕೆ ಮಾಲಿನಿ ಬಗ್ಗೆ ಬರೆದು ಹೊರಪ್ರಪಂಚಕ್ಕೆ ಪರಿಚಯಿಸಿದವರೇ ಅವರು.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟನೆ:

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟನೆ:

ತಮ್ಮ ಶಾಲಾ- ಕಾಲೇಜುಗಳ ದಿನಗಳಲ್ಲಿ ಪದ್ಯ, ಪ್ರಬಂಧ, ಸಮೂಹ ಗಾಯನಗಳಲ್ಲಿ ಜೊತಗೆ ಕೊಕ್ಕೊಗಳಂತಹ ಹವ್ಯಾಸಗಳನ್ನು ಮೈಗೂಡಿಸಿಕೊಂಡವರು ಇವರು. ಕಂಪ್ಯೂಟರ್‌ ಹಾಗೂ ಮೊಬೈಲ್ ಬಳಕೆ, ಬಸ್‌ಗಳಲ್ಲಿ ಪ್ರಯಾಣಗಳು ಸೇರಿದಂತೆ ತನ್ನೆಲ್ಲಾ ದಿನನಿತ್ಯದ ಕಾರ್ಯ್ಯಗಳನ್ನು ಒಬ್ಬ ಆರೋಗ್ಯವಂತ ಯುವತಿ ಮಾಡುವಂತೆ ಯಾರ ನೆರವಿಲ್ಲದೆ ಮಾಡುತ್ತಾರೆ. ಮಾತ್ರವಲ್ಲ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ʻಆಟೋರಾಜʼ ಕನ್ನಡ ಚಲನಚಿತ್ರದಲ್ಲಿ ನಟಿಸಿದ ಹೆಗ್ಗಳಿಕೆ ಈ ನಾರಿದ್ದು. ಈ ಅವಕಾಶ ಇವರಲ್ಲಿ ಇನ್ನಷ್ಟು ಬದುಕನ್ನು ಎದುರಿಸುವ ಹಾಗೂ ಸಾಧಿಸುವ ಧೈರ್ಯ್ಯ ಮೂಡುವಂತೆ ಮಾಡಿತು ಎನ್ನುತ್ತಾರೆ ಈಕೆ.

ಛಲಕ್ಕೆ ನೈಜ ಉದಾಹರಣೆ:

ಛಲಕ್ಕೆ ನೈಜ ಉದಾಹರಣೆ:

ಇವರ ವಿಶೇಷ ಸಾಧನೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ ೨೦೦೪ರ ʻಸಾಧನಾ ಪ್ರಶಸ್ತಿʼಗೆ ಭಾಜನರಾಗಿದ್ದು, ಗಣರಾಜ್ಯೋತ್ಸವದಂದು ಅಂದಿನ ರಾಜ್ಯಪಾಲರಾದ ಟ.ಎನ್‌ ಚತುರ್ವೇದಿಯವರಿಂದ ಪಡೆದ ಕೀರ್ತಿ ಇವರದು. ಮಾತ್ರವಲ್ಲ ಭಂಡಾರಿ ಸಮಾಜ ಸೇವಾ ಸಂಘ, ಕರಾವಳಿ ನ್ಯೂಸ್‌ ಬಳಗ, ಕಾರ್ಕಳ ಬಸ್‌ ಏಜೆಂಟರ ಬಳಗ, ಡಿಸಿಸಿ ಬ್ಯಾಂಕ್‌, ರಂಗನಪಲ್ಕೆ ಯುವಕ ಸಂಘ ಹಾಗೂ ಇನ್ನಿತರ ಸಂಘಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿವೆ.

 ಸ್ವಾವಲಂಬಿ ಜೀವನ ನಡೆಸುತ್ತಿರುವ ಹೆಣ್ಣು:

ಸ್ವಾವಲಂಬಿ ಜೀವನ ನಡೆಸುತ್ತಿರುವ ಹೆಣ್ಣು:

ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಟ್ಟರಾದರೂ ಕೊನೆಗೆ ಉದ್ಯೋಗ ದೊರೆಯದೇ ಇದ್ದಾಗ, ತಮ್ಮ ಶ್ರೇಯೋಭಿಲಾಷಿಗಳ ನೆರವಿನಿಂದ ೨೦೦೭ರಲ್ಲಿ ಅಂಬಲಪಾಡಿಯ ಸವಿತಾ ಸಮಾಜ ವಿವಿದ್ದೋದ್ದೇಶ ಸಹಕಾರಿ ನಿಯಮಿತದ ಕೇಂದ್ರಕಚೇರಿಯಲ್ಲಿ ಸಹಾಯಕಿಯಾಗಿ ನೇಮಕಗೊಂಡರು. ತದನಂತರ ಅಲ್ಲಿ ಈಕೆಯ ಕಾರ್ಯವೈಖರಿಯನ್ನು ಗಮನಿಸಿದ ಈ ಸಂಘ ತಮ್ಮ ಇನ್ನೊಂದು ಶಾಖೆಗೆ ಶಿಫಾರಸ್ಸು ಮಾಡಿದರು. ಅದರಂತೆ ಪ್ರಸ್ತುತ ಕಾರ್ಕಳದಲ್ಲಿರುವ ಶಾಖೆಗೆ ಬ್ರಾಂಚ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ೧೪ವರ್ಷಗಳ ಸುಧೀರ್ಘ ಅನುಭವ ಹೊಂದಿದ್ದಾರೆ. ಪತಿ ಪ್ರಸನ್ನ ಹಾಗೂ ಪುತ್ರ ಅರ್ಪಣ್ ಜೊತೆಗೆ ನೆಮ್ಮದಿಯ ಜೀವನವನ್ನು ಸಾಗಿಸುತ್ತಾ ಪ್ರತಿಯೊಬ್ಬರಿಗೂ ಮಾದರಿಯಾಗುವಂತೆ ಬದುಕುತ್ತಿದ್ದಾರೆ.

ಎಲ್ಲಾ ಸರಿಯಾಗಿದ್ದು, ದಿನವಿಡೀ ಕೊರಗುವ ಜನರೇ ತುಂಬಿರುವ ಈ ಸಮಾಜದಲ್ಲಿ ಇಂತಹ ಸಾಧಕರು ಇರುವುದು ಎಲ್ಲರಿಗೂ ಆದರ್ಶಪ್ರಾಯರು. ಅದಿಲ್ಲ, ಇದಿಲ್ಲ ಎನ್ನುವ ಬದಲು ಇರುವುದರಲ್ಲೇ ಸಂತೋಷದಿಂದ ಇರಲು ಸ್ಪೂರ್ತಿ ನೀಡಲು ಇದಕ್ಕಿಂತ ಉದಾಹರಣೆ ಬೇಕಾ?...

English summary

The Inspiring Story About Woman Who Has No Fingers On Her Hands

Here we told about The Inspiring story about woman who has no fingers on her hands, read on
X
Desktop Bottom Promotion