For Quick Alerts
ALLOW NOTIFICATIONS  
For Daily Alerts

ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯದ ವಿಶೇಷಗಳಿವು

|

ಕರ್ನಾಟಕದಲ್ಲಿ ಅದ್ಭುತ ಶಕ್ತಿಯ ಅನೇಕ ದೇವಾಲಯಗಳಿವೆ. ಒಂದೊಂದು ದೇವಾಲಯವೂ ಅದರದ್ದೇ ಆದ ವೈಶಿಷ್ಟ್ಯಗಳಿಂದ ಪ್ರಸಿದ್ಧಿಯನ್ನು ಪಡೆದಿದೆ. ಮೈಸೂರಿನ ಚಾಮುಂಡೇಶ್ವರಿ ದೇವಾಲಯಂತೂ ಜಗತ್ಪಸಿದ್ಧವಾಗಿದೆ. ವಿಶ್ವದ ಹಲವು ಕಡೆಯಿಂದ ಸಾವಿರಾರು ಪ್ರವಾಸಿಗರು, ಲಕ್ಷಾಂತರ ಭಕ್ತರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಇಲ್ಲಿ ನಾವು ಶ್ರೀ ಚಾಮುಂಡೇಶ್ವರಿ ದೇವಾಲಯದ ಕೆಲ ವಿಶೇಷಗಳ ಬಗ್ಗೆ ಹೇಳಿದ್ಧೇವೆ ನೋಡಿ:

ಚಾಮುಂಡೇಶ್ವರಿ ದೇವಾಲಯದ ಇತಿಹಾಸ

ಚಾಮುಂಡೇಶ್ವರಿ ದೇವಾಲಯದ ಇತಿಹಾಸ

ಮೊದಲಿಗೆ ಈ ದೇವಾಲಯ ತುಂಬಾ ಚಿಕ್ಕದಾಗಿತ್ತು. ಆದರೆ ಶತಮಾನಗಳ ನಂತರ ಮೈಸೂರು ಮಹಾರಾಜರ ಕಾಲದಲ್ಲಿ ಈ ದೇವಾಲಯವನ್ನು ಅಭಿವೃದ್ಧಿಪಡಿಸಿ ದೊಡ್ಡದು ಮಾಡಲಾಯಿತು. ಮೂಲ ದೇಗುಲವನ್ನು ಹೊಯ್ಸಳರ ಕಾಲದಲ್ಲಿ 12ನೇ ಶತಮಾನದಲ್ಲಿ ಕಟ್ಟಲಾಯಿತು, ಆದರೆ 17ನೇ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಈ ದೇವಾಲಯವನ್ನು ಸರಿಯಾದ ರೀತಿಯಲ್ಲಿ ಕಟ್ಟಲಾಯಿತು, ಮೈಸೂರು ಮಹಾರಾಜರ ಕಾಲದಲ್ಲಿ ಮತ್ತಷ್ಟು ಅಭಿವೃದ್ಧಿ ಪಡಿಸಲಾಯಿತು.

ನರಬಲಿ, ಪ್ರಾಣಿ ಬಲಿ ನಿಷೇಧಿಸಲಾಯಿತು

ನರಬಲಿ, ಪ್ರಾಣಿ ಬಲಿ ನಿಷೇಧಿಸಲಾಯಿತು

ಶತಮಾನ ಹಿಂದೆ ಈ ದೇವಾಲಯದಲ್ಲಿ ಪ್ರಾಣಿ ಬಲಿ, ನರಬಲಿ ನಡೆಸುತ್ತಿದ್ದರು, ಆದರೆ ಈ ಪದ್ಧತಿಯನ್ನು 18ನೇ ಶತಮಾನದಲ್ಲಿ ಸಂಪೂರ್ಣವಾಗಿ ನಿಲ್ಲಿಸಲಾಯಿತು.

ಚಾಮುಂಡೇಶ್ವರಿ ದೇವಾಲಯ ಶಕ್ತಿಪೀಠವಾಗಿದೆ

ಚಾಮುಂಡೇಶ್ವರಿ ದೇವಾಲಯ ಒಂದು ಶಕ್ತಿಪೀಠವಾಗೊದೆ. ವಿಶ್ವದ 18 ಮಹಾಶಕ್ತಿ ಪೀಠಗಳಲ್ಲಿ ಇದು ಕೂಡ ಒಂದಾಗಿರುವುದು ಈ ದೇವಾಲಯದ ಮತ್ತೊಂದು ವಿಶೇಷ. ಇದನ್ನು ಕ್ರೌಂಚ ಪೀಠ ಎಂದೂ ಸಹ ಕರೆಯಲಾಗುತ್ತದೆ, ಕಾರಣ ಪುರಾಣಗಳ ಕಾಲದಲ್ಲಿ ಇದು ಕ್ರೌಂಚಪುರಿಯಾಗಿತ್ತು. ಸತಿ ದೇವಿಯ ಕೂದಲು ಈ ಜಾಗದಲ್ಲಿ ಬಿದ್ದು ಈ ದೇವಾಲಯ ನಿರ್ಮಾಣವಾಯಿತು ಎಂಬ ಪೌರಾಣಿಕ ಕತೆಯೂ ಇದೆ.

 ಸಾವಿರ ಮೆಟ್ಟಿಲುಗಳ ದೇವಾಲಯ

ಸಾವಿರ ಮೆಟ್ಟಿಲುಗಳ ದೇವಾಲಯ

ಚಾಮುಂಡೇಶ್ವರಿ ದೇವಿಗೆ ನಿಮ್ಮ ಭಕ್ತಿಯನ್ನುಅರ್ಪಿಸಲು 3000 ಸಾವಿರ ಎತ್ತರ ಬೆಟ್ಟವನ್ನು ಹತ್ತಬೇಕು. ಈ ದೇವಾಲಯವನ್ನು ತಲುಪಲು ನೀವು 1000 ಮೆಟ್ಟಿಲು ಹತ್ತಿ ದೇವಿಯ ದರ್ಶನ ಪಡೆಯಬೇಕು.

ದೇವಾಲಯದ ಶಿಲ್ಪಕಲೆ

ದೇವಾಲಯದ ಶಿಲ್ಪಕಲೆ

ಶ್ರೀ ಚಾಮುಂಡೇಶ್ವರಿ ದೇವಾಲಯವನ್ನು ಚೌಕಾಕೃತಿಯಲ್ಲಿ ನಿರ್ಮಾಣ ಮಾಡಲಾಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿರುವ ಈ ದೇವಾಲಯ, ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ `ಗೋಪುರ ಕಾಣಬಹುದು ಹಾಗೂ ಗರ್ಭಗುಡಿಯ ಮೇಲೆ 'ವಿಮಾನ' ಶಿಖರಗಳಿವೆ. 19ನೇ ಶತಮಾನದಲ್ಲಿ ಏಳು ಅಂತಸ್ತುಗಳ ಗೋಪುರವನ್ನು ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಶಿಖರದ ಮೇಲೆ ಏಳು ಚಿನ್ನದ ಲೇಪಿತ ಕಲಶಗಳಿವೆ.

ಮಹಿಷಮರ್ಧಿನಿಯಾದ ಚಾಮುಂಡೇಶ್ವರಿ

ಮಹಿಷಮರ್ಧಿನಿಯಾದ ಚಾಮುಂಡೇಶ್ವರಿ

ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿರುವುದನ್ನು ಕಾಣಬಹುದು. ಎಂಟು ಭುಜಗಳನ್ನು ಹೊಂದಿರುವ ರೌದ್ರಾವತಾರದ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹ ಪ್ರಾಚೀನ ಕಾಲದ್ದಾಗಿದೆ. ಈ ಶಿಲಾಮೂರ್ತಿಯನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ. ಈ ದೇವಾಲಯವನ್ನು 1827ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಜೀರ್ಣೋಧ್ದಾರ ಮಾಡಿ ಮಹಾದ್ವಾರದ ಮೇಲೆ ಈ ದೊಡ್ಡ ಗೋಪುರವನ್ನು ಕಟ್ಟಿಸಿದರು.

ಕೃಷ್ಣರಾಜ ಒಡೆಯರು 'ಸಿಂಹ ವಾಹನ' ಒಂದನ್ನು ಮರದಲ್ಲಿ ನಿರ್ಮಿಸಿ ದೇವಾಲಯಕ್ಕೆ ನೀಡಿದರು. ಇದೇ 'ಸಿಂಹ ವಾಹನ'ವನ್ನು ರಥೋತ್ಸವ ಸಂಧರ್ಭದಲ್ಲಿ ಕಾಣಲಾಗಿದೆ. ಈ ಸಿಂಹ ವಾಹನದಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ರಥವನ್ನು ಎಳೆಯಲಾಗುತ್ತದೆ. ದ್ವಾರದ ಮೇಲ್ಭಾಗದಲ್ಲಿ ಸಣ್ಣದೊಂದು ಗಣಪತಿಯ ವಿಗ್ರಹವನ್ನು ನೋಡಬಹುದು. ದ್ವಾರದ ಬೃಹತ್ ಮರದ ಬಾಗಿಲನ್ನು ಬೆಳ್ಳಿಯ ತಗಡಿನಿಂದ ಹೊದಿಸಲಾಗಿದ್ದು, ಬೆಳ್ಳಿಯ ಬಾಗಿಲಿನ ಮೇಲೆ ದೇವಿಯ ಹಲವು ಸ್ವರೂಪಗಳನ್ನು ತೋರಲಾಗಿದೆ. ಮಹಾದ್ವಾರದ ಕೆಳ ಪಾರ್ಶ್ವದಲ್ಲಿ ಇಂದ್ರಾದಿ ಅಷ್ಠದಿಕ್ಪಾಲಕರ ವಿಗ್ರಹಗಳಿವೆ.

ಗಮನ ಸೆಳೆಯುವ ಗಣಪತಿ ಹಾಗೂ ನಂದಿ ವಿಗ್ರಹ

ಗಮನ ಸೆಳೆಯುವ ಗಣಪತಿ ಹಾಗೂ ನಂದಿ ವಿಗ್ರಹ

ಮಹಾದ್ವಾರದಿಂದ ಒಳಗೆ ಪ್ರವೇಶ ಮಾಡಿದ ತಕ್ಷಣ ಬಲಭಾಗದಲ್ಲಿ ದಕ್ಷಿಣಾಭಿಮುಖವಾಗಿ ಗಣಪತಿಯ ಸಣ್ಣ ವಿಗ್ರಹು ಕಾಣಸಿಗುತ್ತದೆ. ವಿನಾಯಕನಿಗೆ ನಮಿಸಿ ಕಲ್ಲಿನ ಮೆಟ್ಟಿಲುಗಳನ್ನು ಹತ್ತಿ ಒಳಕ್ಕೆ ಹೋದರೆ ದೇವಸ್ಥಾನದ ಬಲಿಪೀಠ ಮತ್ತು ಧ್ವಜ ಸ್ಥಂಭ ಕಂಡುಬರುತ್ತದೆ. ಬಲಿಪೀಠದ ಮೇಲೆ ದೇವಿಯ ಪಾದಗಳನ್ನು ರೂಪಿಸಲಾಗಿದೆ. ಇವೆರಡರ ಮುಂಭಾಗದಲ್ಲಿ ಗರ್ಭಗುಡಿಗೆ ಅಭಿಮುಖವಾಗಿ ಸಣ್ಣದೊಂದು ನಂದಿ ವಿಗ್ರಹವಿದೆ. ದೇವಿ ಚಾಮುಂಡಿಯನ್ನು ನೋಡುತ್ತಾ ಕುಳಿತಿರುವಂತಿದೆ ನಂದಿ ವಿಗ್ರಹ. ಧ್ವಜ ಸ್ಥಂಭಕ್ಕೆ ಈಶಾನ್ಯದಲ್ಲಿ ಗೋಡೆಯ ಮೇಲೆ ಆಂಜನೇಯನ ವಿಗ್ರಹವಿದ್ದು ಅದಕ್ಕೂ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಇಲ್ಲಿನ ಪ್ರವೇಶ ದ್ವಾರದಲ್ಲಿ ನಂದಿನಿ ಮತ್ತು ಕಮಲಿನಿ ಎಂಬ ದ್ವಾರಪಾಲಿಕೆಯರ ವಿಗ್ರಹಗಳು ದ್ವಾರದ ಎಡ ಮತ್ತು ಬಲ ಭಾಗದಲ್ಲಿವೆ.

ಪತ್ನಿಯರ ಸಮೇತ ದೇವಿಗೆ ನಮಿಸಿ ನಿಂತಿರುವ ಮಹಾರಾಜರು

ಪತ್ನಿಯರ ಸಮೇತ ದೇವಿಗೆ ನಮಿಸಿ ನಿಂತಿರುವ ಮಹಾರಾಜರು

ಗರ್ಭಗುಡಿಗೆ ಮುಂಚೆ ಇರುವ ಅತರಾಳದ ಎಡ-ಬಲ ಭಾಗದಲ್ಲಿ ಗಣಪ ಹಾಗೂ ಭೈರವ ದೇವರ ವಿಗ್ರಹಗಳಿವೆ. ಭೈರವ ದೇವರ ಎಡಭಾಗದಲ್ಲಿಯೇ ಚಾಮುಂಡಿ ಮಾತೆಯ ಪಂಚಲೋಹದ ಸುಂದರ ಉತ್ಸವ ಮೂರ್ತಿಯನ್ನು ಕಾಣಬಹುದು. ಗಣಪತಿಯ ಬಲಭಾಗದಲ್ಲಿ ಮುಮ್ಮಡಿ ಕೃಷ್ಣರಾಜರು ತಮ್ಮ ಮೂವರು ಪತ್ನಿಯರಾದ ರಮಾವಿಲಾಸ, ಲಕ್ಷ್ಮಿವಿಲಾಸ ಮತ್ತು ಕೃಷ್ಣವಿಲಾಸ ಮಹಾರಾಣಿಯರ ಜೊತೆಗೆ ದೇವಿಗೆ ಕೈಮುಗಿದು ನಿಂತಿರುವ ಮೂರ್ತಿಗಳನ್ನು ಕಾಣಬಹುದು. ಇವರುಗಳ ಶಿಲಾ ವಿಗ್ರಹಗಳ ಪಾದದ ಬಳಿಯ ಪೀಠದ ಮೇಲೆ ಇವರುಗಳ ಹೆಸರುಗಳನ್ನು ಕೆತ್ತಲಾಗಿದೆ.

ಪ್ರತಿನಿತ್ಯ ದೇವಿಗೆ ಪೂಜೆ ಸಲ್ಲಿಸಲಾಗುವುದು

ಪ್ರತಿನಿತ್ಯ ದೇವಿಗೆ ಪೂಜೆ ಸಲ್ಲಿಸಲಾಗುವುದು

ಶ್ರೀ ಚಾಮುಂಡೇಶ್ವರಿಗೆ ಪ್ರತಿದಿನ ಪೂಜೆಯನ್ನು ಸಲ್ಲಿಸಲಾಗುವುದು. ಗರ್ಭಗುಡಿಯ ಮೇಲ್ಭಾಗದಲ್ಲಿ ಇನ್ನೊಂದು ಸಣ್ಣ ಗೋಪುರ ಕಂಡು ಬರುತ್ತದೆ. ದೇವಾಲಯದ ಹೊರಗಿನಿಂದ 'ವಿಮಾನವನ್ನು' ಕಾಣಬಹುದು. ಒಳ ಪಾರ್ಶ್ವದಲ್ಲಿರುವ ಪ್ರಾಕಾರದಲ್ಲಿ ಹಲವು ಸಣ್ಣ ಮೂರ್ತಿಗಳಿದ್ದು ಅಲ್ಲಿಯೂ ಪೂಜೆ ಪುನಸ್ಕಾರಗಳು ಜರುಗುತ್ತವೆ. ಪ್ರಾಕಾರದಲ್ಲಿ ಪ್ರದಕ್ಷಿಣೆ ಮುಗಿಸಿ ದೇವಸ್ಥಾನದಿಂದ ಹೊರಹೋಗುವಾಗ ಶ್ರೀ ಆಂಜನೇಯಸ್ವಾಮಿ ದೇವರ ದರ್ಶನವನ್ನು ಮಾಡಿ ಭಕ್ತರು ಹೊರ ಬರುತ್ತಾರೆ.

ಯಾವಾಗ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ?

ಯಾವಾಗ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ?

ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಇದರಲ್ಲಿ ಆಷಾಢ ಶುಕ್ರವಾರ, ನವರಾತ್ರಿ, ಅಮ್ಮನವರ ವರ್ಧಂತಿ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

English summary

Sri Chamundeshwari Temple, Mysuru History and Incredible Things To Know About The Temple

Here are Sri Chamundeshwari Temple history and incredible things to know about the temple, Read on..
X
Desktop Bottom Promotion