For Quick Alerts
ALLOW NOTIFICATIONS  
For Daily Alerts

2020 ಗೌರಿ ಹಬ್ಬ: ಗೌರಿ ವ್ರತ ಆಚರಣೆ, ವಿಧಿವಿಧಾನ

By Divya Pandith
|

ಗೌರಿ ಹಬ್ಬವನ್ನು ಸಾಮಾನ್ಯವಾಗಿ ದೇಶದಾದ್ಯಂತ ಆಚರಿಸುತ್ತಾರೆ. ಅದರಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇದರ ಸಡಗರ ಜೋರಾಗಿ ಇರುತ್ತದೆ. ಉತ್ತರ ಭಾರತದಲ್ಲಿ ಈ ಹಬ್ಬಕ್ಕೆ ಹರ್ತಲಿಕಾ ಎಂದು ಕರೆಯುತ್ತಾರೆ. ಗಣೇಶ ಚತುರ್ಥಿಯ ಮುನ್ನಾ ದಿನ ಗೌರಿಹಬ್ಬವನ್ನು ಆಚರಿಸಲಾಗುತ್ತದೆ. ಮೂರ್ತಿಯಲ್ಲಿ ದೇವಿಯನ್ನು ಆಹ್ವಾನಿಸಿ, ಅಲಂಕಾರ ಹಾಗೂ ವಿವಿಧ ನೈವೇದ್ಯಗಳ ತಯಾರಿಸಿ ಪೂಜೆಮಾಡಲಾಗುವುದು. ಶಿವನ ಪತ್ನಿ ಹಾಗೂ ಸುಬ್ರಹ್ಮಣ್ಯ ದೇವರ ತಾಯಿಯನ್ನೇ ಗೌರಿ ದೇವಿ ಎಂದು ಹೇಳಲಾಗುವುದು.

ಶುಭ ಮುಹೂರ್ತ

ಈ ವರ್ಷ (2020) ಸ್ವರ್ಣ ಗೌರಿ ಪೂಜೆಯನ್ನು ಆಗಸ್ಟ್‌ 21ರಂದು ಶುಕ್ರವಾರ ಆಚರಿಸಲಾಗುತ್ತಿದೆ. ಪ್ರಾತಃಕಾಲ ಪೂಜಾ ಸಮಯ: ಬೆಳಗ್ಗೆ 5.54 ರಿಂದ 8.30 ರವರೆಗೆ ಶುಭಸಮಯ ಮತ್ತು ಪ್ರದೋಷ ಕಾಲ ಪೂಜಾ ಸಮಯ: ಸಂಜೆ 6.54 ರಿಂದ 9.06 ರವೆರೆಗೆ ಶುಭ ಮುಹೂರ್ತದಲ್ಲಿ ಗೌರಿ ಪೂಜೆ ಮಾಡಿದರೆ ಶುಭ ಲಭಿಸುತ್ತದೆ.

ಬಾಗಿನ ನೀಡುವ ಪದ್ಧತಿ

ಮಹಿಳೆಯರಿಗೆ ಮೀಸಲಾದ ಈ ಹಬ್ಬದಂದು ವಿವಾಹಿತ ಮಹಿಳೆಯರು ತನ್ನ ತಾಯಿಗೆ ಮತ್ತು ಅತ್ತಿಗೆಗೆ ಬಾಗಿನ ನೀಡಿ, ಮುತ್ತೈದೆಯರಿಗೆ ಅರಿಶಿನ, ಕುಂಕುಮವನ್ನು ನೀಡುತ್ತಾರೆ. ಶಕ್ತಿ ದೇವರಾದ ಗೌರಿ ದೇವಿಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಿಸಿದರೆ ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. ಜೊತೆಗೆ ಸಂಸಾರದಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ನೀಡಿ ಕಾಪಾಡುತ್ತಾಳೆ ಎಂದು ಹೇಳಲಾಗುವುದು.

ಗೌರಿ ದೇವಿಯ ಕೃಪೆಗೆ ಒಳಗಾಗಲು ಸ್ವರ್ಣ ಗೌರಿ ವ್ರತವನ್ನು ಆಚರಿಸುತ್ತಾರೆ. ಪವಿತ್ರವಾದ ಮತ್ತು ಸಡಗರದಿಂದ ಆಚರಿಸುವ ಈ ಬಬ್ಬ ತನ್ನದೇ ಆದ ಅನೇಕ ವಿಧಿ-ವಿಧಾನಗಳನ್ನು ಒಳಗೊಂಡಿದೆ. ಬನ್ನಿ ಈ ವಿಶೇಷ ಹಬ್ಬದ ಕೆಲವು ಆಚರಣೆಯ ಬಗ್ಗೆ ತಿಳಿಯೋಣ...

1. ಗೌರಿ ಹಬ್ಬಕ್ಕೆ ಒಂದುದಿನ ಮುಂಚೆಯೇ ಗೌರಿ ಮೂರ್ತಿಯನ್ನು ಮನೆಗೆ ತರಲಾಗುತ್ತದೆ. ಪುರಾಣದ ಪ್ರಕಾರ ಗೌರಿದೇವಿಯು ಇದೇ ಸಮಯದಲ್ಲಿ ತನ್ನ ತವರು ಮನೆಗೆ ಬರುತ್ತಾಳೆ ಎನ್ನುವ ನಂಬಿಕೆಯಿದೆ. ಹಾಗಾಗಿಯೇ ಪ್ರತಿಯೊಂದು ಮನೆಯಲ್ಲೂ ಗೌರಿ ದೇವಿಯನ್ನು ಬಹಳ ಸಡಗರ, ಸಂಭ್ರಮದಿಂದ ಸ್ವಾಗತಿಸುತ್ತಾರೆ.
2. ಹಬ್ಬದ ದಿನ ಮಹಿಳೆಯರೆಲ್ಲರು ಹೊಸ ಉಡುಗೆ/ಮಡಿ ಬಟ್ಟೆ (ಸಾಂಪ್ರದಾಯಿಕ ಉಡುಗೆ)ಯನ್ನು ತೊಡುತ್ತಾರೆ. ದೇವಿ ಗೌರಿಯ ಮೂರ್ತಿಗೆ ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ ಜಲಗೌರಿ ಹಾಗೂ ಅರಿಶಿನ ಗೌರಿಯನ್ನಾಗಿ ಮಾಡುತ್ತಾರೆ. ನಂತರ ದೇವಿಗೆ ಶ್ರೇಷ್ಠವಾದ ಮಂತ್ರಗಳನ್ನು ಹೇಳಿ ಗೌರಿಯನ್ನು ಆಹ್ವಾನಿಸುತ್ತಾರೆ.
3. ನಂತರ ದೇವಿಯನ್ನು ಬಟ್ಟಲಿನಲ್ಲಿ ಹಾಕಿರುವ ಅಕ್ಕಿ ಅಥವಾ ಧಾನ್ಯದ ದಿಬ್ಬದ ಮೇಲೆ ಇಡಲಾಗುತ್ತದೆ.
4. ಮನೆ ಹಾಗೂ ದೇವತೆಯ ಸುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದಿರಿಸಿ, ಭಕ್ತಿಯಿಂದ ಪೂಜೆ ಮಾಡಲಾಗುವುದು.
5. ಗೌರಿ ಹಾಗೂ ಗಣೇಶನಿಗಾಗಿ ವಿಶೇಷವಾದ ಮಂಟಪವನ್ನು ಸಿದ್ಧಪಡಿಸಲಾಗುತ್ತದೆ. ಇದರ ಸುತ್ತಲು ಬಾಳೆಗಿಡದ ಕಂಬ, ಮಾವಿನ ಎಲೆಯ ತೋರಣ ಹಾಗೂ ಹೂವಿನ ಅಲಂಕಾರದಿಂದ ಮಂಟಪವನ್ನು ಶೃಂಗರಿಸಲಾಗುತ್ತದೆ.
6. ಗೌರಿ ದೇವಿಯ ಆಶೀರ್ವಾದದ ಪ್ರತೀಕವಾಗಿ 16 ಸುತ್ತಿನ ದಾರವನ್ನು ಮಹಿಳೆಯರು ಕೈಗೆ ಕಟ್ಟಿಕೊಳ್ಳುತ್ತಾರೆ. ಇದನ್ನು ಗೌರಿದಾರ ಎಂದು ಕರೆಯಲಾಗುತ್ತದೆ.

ganesh chaturthi,

7. ವ್ರತದ ಪ್ರಯುಕ್ತ ಬಾಗಿನವನ್ನು ನೀಡಲಾಗುತ್ತದೆ. ಬಾಗಿನದಲ್ಲಿ ಪವಿತ್ರ ವಸ್ತುಗಳಾದ ಅರಿಶಿನ, ಕುಂಕುಮ, ಕಪ್ಪು ಬಳೆ, ಕರಿಮಣಿ, ಬಾಚಣಿಗೆ, ಕನ್ನಡಿ, ತೆಂಗಿನಕಾಯಿ, ಧಾನ್ಯಗಳು, ಅಕ್ಕಿ, ಗೋಧಿ ಮತ್ತು ಬೆಲ್ಲವನ್ನು ಇಡಲಾಗುತ್ತದೆ. ಈ ವ್ರತದಲ್ಲಿ ಕಡಿಮೆ ಎಂದರೆ ಐದು ಬಾಗಿನವನ್ನು ನೀಡಲಾಗುತ್ತದೆ.

8. ಒಂದು ಬಾಗಿನವನ್ನು ದೇವಿಗೆ ಸಮರ್ಪಿಸಿ, ಉಳಿದ ಬಾಗಿನವನ್ನು ತಾಯಿ, ಅತ್ತೆ, ಅತ್ತಿಗೆ ಹೀಗೆ ಮುತ್ತೈದೆ ಮಹಿಳೆಯರಿಗೆ ನೀಡಲಾಗುತ್ತದೆ. 9. ನಂತರ ದೇವಿಯ ನೈವೇದ್ಯವಾಗಿ ಸಿಹಿ ತಿನಿಸಾದ ಹೋಳಿಗೆ, ಒಬ್ಬಟ್ಟು ಮತ್ತು ಪಾಯಸವನ್ನು ಇಡುತ್ತಾರೆ.

10. ಶಾಸ್ತ್ರ ಸಂಪ್ರದಾಯದ ಅನುಸಾರವಾಗಿ ಗೌರಿ ಹಬ್ಬದ ಆಚರಿಸಿದ ಮರುದಿನ ಗಣೇಶ ಮೂರ್ತಿಯನ್ನು ಮನೆಗೆ ತರಲಾಗುತ್ತದೆ. ಮನೆತನದ ಪದ್ಧತಿಯಂತೆ ಒಂದು, ಮೂರು, ಐದು, ಏಳು, ಒಂಬತ್ತು ಅಥವಾ ಹನ್ನೊಂದು ದಿನಗಳ ಕಾಲ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ನಂತರ ನೀರಿನಲ್ಲಿ ವಿಸರ್ಜಿಸಲಾಗುವುದು.

English summary

Gowri Habba 2020: Rituals Associated With Gowri Habba Vratha

Gowri Habba is an important festival celebrated especially in the South Karnataka area, Andhra Pradesh and Tamil Nadu. In the Northern parts of India, this festival is known as Hartalika. Gowri Habba is celebrated one day before the Ganesh Chaturthi puja.
X
Desktop Bottom Promotion