For Quick Alerts
ALLOW NOTIFICATIONS  
For Daily Alerts

ಓಣಂ 2019: ಸಾಮರಸ್ಯ ಸಾರುವ ಹಬ್ಬದ ವಿಶಿಷ್ಟತೆ ಹಾಗೂ ಮಹತ್ವ

|

ಓಣಂ, ಆಧುನಿಕ ಕಾಲಮಾನದಲ್ಲಿಯೂ ಉಳಿಸಿ, ಆಚರಿಸಿಕೊಂಡು ಬರಲಾಗುತ್ತಿರುವ ಅತ್ಯಂತ ಪುರಾತನ ಹಬ್ಬವಾಗಿದೆ. ಭತ್ತದ ಸುಗ್ಗಿಯ ಸಂಭ್ರಮ ಮತ್ತು ಮಳೆಗಾಲದ ಹೂಫಸಲು - ಇವೆರಡರ ಸಂಗಮದ ಕುರುಹಾಗಿ ಮತ್ತು ಅರಸ ಮಾವೆಲಿಯು ಪಾತಾಳಲೋಕದಿಂದ ಭೂಮಿಗೆ ವಾರ್ಷಿಕ ಭೇಟಿಯ ನೆನಪಿನಲ್ಲಿ, ಮಲಯಾಳಿ ತಿಂಗಳು ಚಿಂಗಂನಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಅನಾದಿ ಕಾಲದಿಂದಲೂ ಅರಸ ಮಾವೇಲಿಯನ್ನು ಕೇರಳದ ಜನತೆ ಆರಾಧಿಸುತ್ತ ಬಂದಿರುವುದರಿಂದ ಓಣಂ ಹಬ್ಬಕ್ಕೆ ಅದರದ್ದೇ ಆದ ವಿಶಿಷ್ಟತೆ ಇದೆ.

ಕೇರಳದ ರಾಷ್ಟ್ರೀಯ ಹಬ್ಬವಾಗಿರುವ ಓಣಂ ಅನ್ನು ಕೇರಳಿಗರು ಅತಿ ಸಂಭ್ರಮ ಮತ್ತು ವಿಶಿಷ್ಟತೆಯಿಂದ ಆಚರಿಸುತ್ತಾರೆ. ಈ ಹಬ್ಬವು 10 ದಿನಗಳ ಕಾಲ ಆಚರಿಸಲ್ಪಡುತ್ತದೆ. ಅಸುರನಾಗಿದ್ದರೂ ಜನರಿಗೆ ಉತ್ತಮವಾದುದನ್ನೇ ಮಾಡಿದ ಮಹಾಬಲಿಯನ್ನು ಸ್ಮರಿಸುವ ನಿಟ್ಟಿನಲ್ಲಿ ಓಣಂ ಹಬ್ಬವನ್ನು ಕೇರಳಿಗರು ಆಚರಿಸುತ್ತಾರೆ. ಈ ಹಬ್ಬವನ್ನು ಮಲಯಾಳಿ ಪಂಚಾಂಗದ ಮೊದಲ ತಿಂಗಳು ಚಿಂಗಮ್ ಅಂದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ, ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 1 ರಿಂದ 13ರವರೆಗೆ ಓಣಂ ಹಬ್ಬವನ್ನು ಆಚರಿಸುತ್ತಿದ್ದು, 11ರಂದು ಪ್ರಮುಖವಾದ ದಿನ ತಿರು ಓಣಂ ಅನ್ನು ಆಚರಿಸಲಾಗುತ್ತಿದೆ.

ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ. ಜನರ ಉನ್ನತಿಗಾಗಿ ಮತ್ತು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮಹಾಬಲಿಯು ತನ್ನನ್ನು ತ್ಯಾಗಮಾಡಿಕೊಂಡಿದ್ದಾನೆ ಎಂಬ ಉಲ್ಲೇಖವನ್ನು ಪುರಾಣದಲ್ಲಿ ಮಾಡಲಾಗಿದೆ. ಆದ್ದರಿಂದಲೇ ಕೇರಳಿಗರು ಬಲಿ ಚಕ್ರವರ್ತಿಯ ತ್ಯಾಗವನ್ನು ಈ ದಿನಗಳಂದು ನೆನಪಿಸಿಕೊಳ್ಳುತ್ತಾರೆ. ಮಹಾಬಲಿಯ ಸ್ವಾಗತವನ್ನು ಕೊಂಡಾಡಲು ಕೇರಳಿಗರು ಈ ಹಬ್ಬವನ್ನು ಆಚರಿಸುತ್ತಾರೆ.

Onam

ತುಂಬಾ ಕ್ಲಿಷ್ಟ ವಿನ್ಯಾಸದ ಪುಷ್ಪ ಚಿತ್ತಾರಗಳು, ಬಗೆ ಬಗೆಯ ಭಕ್ಷ್ಯಗಳು, ಹಾವು ದೋಣಿಯಾಟದ ಸ್ಪರ್ಧೆಗಳು, ಕೈಕೊತ್ತಿಕಲಿ ನೃತ್ಯ - ಇವೆಲ್ಲ ಈ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಈ ಹಬ್ಬಕ್ಕಾಗಿ ಇಲ್ಲಿನ ಜನರು ಹೊಸಬಟ್ಟೆಗಳನ್ನು ತೊಡುವುದು ವಾಡಿಕೆ. ಪುರುಷರು ಅಂಗಿ ಮತ್ತು ಮುಂಡು ಎಂದು ಕರೆಯಲಾಗುವ ಸ್ಕರ್ಟ್ ತರದ ಉಡುಪನ್ನು(ಪಂಚೆ)ಧರಿಸಿದರೆ, ಮಹಿಳೆಯರು ಅದೇ ತರಹದ ಮುಂಡುವಿನ ಮೇಲೊಂದು ಚಿನ್ನದ ಬಣ‍್ಣದ ನರಿಯತ್ತು ಎಂದು ಕರೆಯಲಾಗುವ ಮೇಲಂಗಿಯನ್ನು ತೊಟ್ಟು ಸಂಭ್ರಮಿಸುತ್ತಾರೆ. ಬಾಲಕಿಯರು ಪಾವಡವೆಂಬ ಲಂಗ, ಮೇಲೊಂದು ರವಿಕೆಯನ್ನು ತೊಟ್ಟು ಸಡಗರದಿಂದ ಓಡಾಡುತ್ತಿರುತ್ತಾರೆ. ಓಣಂ ಕೇರಳದ ಸುಗ್ಗಿಯ ಹಬ್ಬವೂ ಹೌದು. ಇಂದಿನ ಲೇಖನದಲ್ಲಿ ಓಣಂ ಕುರಿತು ಮತ್ತಷ್ಟು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳೋಣ.

ವಾಮನ ಮತ್ತು ಮಹಾಬಲಿಯ ಕಥೆ

ಕಶ್ಯಪನ ಮೊಮ್ಮಗನಾಗಿದ್ದ ಮಹಾಬಲಿ ದೇವತೆಗಳನ್ನು ಸೋಲಿಸಲು ಮುಂದಾಗುತ್ತಾನೆ. ದೇವತೆಗಳು ಮಹಾವಿಷ್ಣುವಿನ ಬಳಿ ತಮ್ಮ ಕಷ್ಟವನ್ನು ತೋಡಿಕೊಳ್ಳುತ್ತಾರೆ. ಮಹಾಬಲಿಯು ಭಕ್ತನಾಗಿದ್ದರಿಂದ ಆತನನ್ನು ವಧಿಸಲು ಸಾಧ್ಯವಿಲ್ಲವೆಂದು ಮಹಾವಿಷ್ಣು ಹೇಳುತ್ತಾರೆ. ಆದರೆ ಮಹಾಬಲಿಯ ಭಕ್ತಿಯನ್ನು ಅರಿತುಕೊಂಡು ಮುಂದಿನದ್ದನ್ನು ತೀರ್ಮಾನಿಸುತ್ತೇನೆ ಎಂದು ವಿಷ್ಣುವು ದೇವತೆಗಳಿಗೆ ಭಾಷೆಯನ್ನು ನೀಡುತ್ತಾರೆ.

ಬಲಿಯು ಒಮ್ಮೆ ಯುಜ್ಞವನ್ನು ಕೈಗೊಂಡು ಯಾರ ಬೇಡಿಕೆಯನ್ನು ಕೂಡ ಈಡೇರಿಸುತ್ತೇನೆ ಎಂದು ಮಾತು ಕೊಡುತ್ತಾನೆ. ಮಹಾವಿಷ್ಣುವು ಬಲಿಯ ಮುಂದೆ ವಾಮನ ರೂಪದಲ್ಲಿ ಹೋಗಿ ದಾನ ಕೇಳುತ್ತಾರೆ. ತನ್ನ ಮೂರು ಹೆಜ್ಜೆಗಳ ಅಳತೆಯಲ್ಲಿರುವ ಭೂಮಿಯನ್ನು ದಾನವಾಗಿ ನೀಡಬೇಕೆಂದು ವಾಮನ ಕೇಳುತ್ತಾರೆ. ಬಲಿಯು ವಾಮನನ ಮಾತಿಗೆ ಸಮ್ಮತಿಯನ್ನು ಸೂಚಿಸುತ್ತಾರೆ. ದೈತ್ಯ ರೂಪವನ್ನು ತಾಳಿ ವಾಮನನು ಮಹಾಬಲಿಯ ಸಂಪೂರ್ಣ ರಾಜ್ಯವನ್ನು ಆಕ್ರಮಿಸುತ್ತಾರೆ. ತನ್ನ ಒಂದು ಪಾದದಲ್ಲಿ ಆಕಾಶವನ್ನು, ಇನ್ನೊಂದು ಕಾಲಿನಲ್ಲಿ ಪಾತಾಳವನ್ನು ಮೂರನೆಯ ಕಾಲನ್ನು ಬಲಿಯ ಶಿರದ ಮೇಲೂ ವಾಮನ ಇಡುತ್ತಾರೆ. ಬಲಿಯ ವಿಷ್ಣು ಭಕ್ತಿಗೆ ಮಹಾವಿಷ್ಣು ಪ್ರಸನ್ನಗೊಳ್ಳುತ್ತಾರೆ. ವರ್ಷಕ್ಕೊಮ್ಮೆ ತನ್ನ ರಾಜ್ಯಕ್ಕೆ ಭೇಟಿ ನೀಡುವ ವರವನ್ನು ಮಹಾವಿಷ್ಣು ಬಲಿಗೆ ನೀಡುತ್ತಾರೆ. ಆ ದಿನವೇ ಕೇರಳದಲ್ಲಿ ಓಣಂ ಆಗಿ ಪ್ರಸಿದ್ಧವಾಗಿದೆ.

ಕೇರಳ ಹುಟ್ಟಿನ ದಂತಕಥೆ

ಒಂದೊಮ್ಮೆ ಕಾರ್ತವೀರ್ಯ ಎಂಬ ರಾಜನು ಋಷಿ ಮುನಿಗಳಿಗೆ ತುಂಬಾ ಉಪಟಳವನ್ನು ನೀಡುತ್ತಿದ್ದನು. ಎಲ್ಲರಿಗೂ ವಿರುದ್ಧವಾಗಿ ಕಾರ್ಯಗಳನ್ನು ಮಾಡುತ್ತಿದ್ದನು. ವಿಷ್ಣುವು ಪರಶುರಾಮನ ಅವತಾರವನ್ನು ತಾಳಿ ಜನರನ್ನು ರಕ್ಷಿಸಲು ನಿಶ್ಚಯಿಸುತ್ತಾರೆ. ಪರಶುರಾಮ ಆಶ್ರಮದಲ್ಲಿ ಇಲ್ಲದ ಸಂದರ್ಭದಲ್ಲಿ ಅಲ್ಲಿಗೆ ಬಂದ ಕಾರ್ತವೀರ್ಯ ಹಸು ಮತ್ತು ಕರುವನ್ನು ಆಶ್ರಮದಿಂದ ಬಲವಂತವಾಗಿ ಎಳೆದೊಯ್ಯುತ್ತಾನೆ. ಸುದ್ದಿ ತಿಳಿದ ಪರಶುರಾಮ ಅರಸನಲ್ಲಿಗೆ ತೆರಳಿ ಯುದ್ಧಕ್ಕೆ ಕರೆಯುತ್ತಾರೆ. ಕೊನೆಗೆ ಕಾರ್ತವೀರ್ಯನನ್ನು ಪರಶುರಾಮ ಕೊಡಲಿಯಿಂದ ಹತ್ಯೆಗೆಯ್ಯುತ್ತಾರೆ. ನಂತರ ತನ್ನ ಕೊಡಲಿಯನ್ನು ಪರಶುರಾಮರು ಎಸೆಯುತ್ತಾರೆ ಮತ್ತು ಈ ಕೊಡಲಿ ಬಿದ್ದ ಸ್ಥಳವೇ ಕೇರಳವಾಗಿದೆ. ಈ ದಿನ ಕೇರಳಿಗರಿಗೆ ಹೊಸ ವರ್ಷದ ಸಂಭ್ರಮವಾಗಿದೆ.

Onam

ಓಣಂ ಆಚರಣೆಗಳು

ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬದಂದು ಒಂದು ದಿನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಹತ್ತು ದಿನವನ್ನೂ ಒಂದೊಂದು ಹೆಸರಿನಿಂದ ಕರೆಯುತ್ತಿದ್ದು ಅತಮ್, ಚಿತ್ರ, ಚೋದಿ, ವಿಶಾಖಂ, ಅನೀಷಮ್, ತ್ರಿಕಿಟಾ, ಮೂಲಂ, ಪೂರಾಡಮ್, ಉತ್ರಾಡಮ್ ಮತ್ತು ತಿರುವೋಣಂ ಎಂದಾಗಿದೆ. ಕೊಚ್ಚಿ, ಕೇರಳದಲ್ಲಿರುವ ವಾಮನ ಮೂರ್ತಿ ತ್ರಿಕ್ಕರ ದೇವಸ್ಥಾನದಲ್ಲಿ ಓಣಂ ಹಬ್ಬವನ್ನು ಜಾತ್ರೆಯಂತೆ ಆಚರಿಸುತ್ತಾರೆ. ಬೋಟ್ ಸ್ಪರ್ಧೆ ಎಂದೇ ಕರೆಯಲಾದ ವಳ್ಳಂಕಳಿ, ಅಂತೆಯೇ ಒಣಂ ಕಳಿಗಳ್ ಎಂದು ಕರೆಯಲಾದ ಆಟವನ್ನು ಏರ್ಪಡಿಸಲಾಗುತ್ತದೆ. ಓಣಂ ಸದ್ಯವನ್ನು ಈ ದಿನಗಳಲ್ಲಿ ಪ್ರತ್ಯೇಕವಾಗಿ ತಯಾರಿಸಲಾಗುತ್ತದೆ. ಈ ಸದ್ಯವು 26 ಖಾದ್ಯಗಳನ್ನು ಒಳಗೊಂಡಿದ್ದು ಓಣಂ ಹಬ್ಬಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತದೆ.

English summary

Onam 2019: Date, Rituals, Celebrations and Significance

Onam is the official state festival of Kerala when people celebrate the homecoming of the ancient King Mahabali. It is a cultural festival celebrated with the harvest of the season, marking the beginning of the new year as per Kerala calendar, corresponding with the August - September of the Gregorian calendar. This year it will be celebrated on August 25, 2018.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more