For Quick Alerts
ALLOW NOTIFICATIONS  
For Daily Alerts

ಅಮ್ಮಂದಿರ ದಿನ : ನಾನು ಹೆಣ್ಣೆಂದು ಆಡಿಕೊಂಡವರ ಬಾಯಿ ಮುಚ್ಚುವಂತೆ ಬೆಳೆಸಿದಳು ನನ್ನಮ್ಮ

|

ಅಮ್ಮಂದಿರ ದಿನದ ಶುಭಾಶಯಗಳು ಅಮ್ಮಾ...

ಅಮ್ಮನೊಂದಿಗೆ ಕಳೆಯೋ ಪ್ರತಿ ಕ್ಷಣವೂ ಅದ್ಭುತವೇ. ಆಕೆಯ ಜೊತೆ ಇರೋ ಸಲುಗೆ-ಸದರ ಬೇರಾರೊಂದಿಗೂ ಸಿಗಲಾರದು. ಒಂದು ಪಕ್ಷ ಅಪ್ಪನ ಜೊತೆಯಾದ್ರೂ ಡಿಸ್ಟಾನ್ಸ್ ಇರುತ್ತೋ ಏನೋ ಆದ್ರೆ, ಅಮ್ಮನ ಜೊತೆ ಗ್ಯಾಪ್ ಮೈಂಟೇನ್ ಮಾಡೋದು ಬಹಳ ಕಡಿಮೆ ಜನ. ನಾನು ಕೂಡಾ ಇದೇ ಗುಂಪಿಗೆ ಸೇರಿದವಳು. ಸದಾ ಅಮ್ಮನ ಬಾಲದಂತಿದ್ದಿ ನಾನು ಉದ್ಯೋಗದ ನಿಮಿತ್ತ ಆಕೆಯಿಂದ ದೂರ ಇರಬೇಕಾಗಿದೆ. ಈ ಸಂದರ್ಭದಲ್ಲಿ ಇಷ್ಟು ವರ್ಷಗಳ ಕಾಲ ಆಕೆಯೊಂದಿಗೆ ಕಳೆದ ಕ್ಷಣಗಳನ್ನು, ಆಕೆ ನನಗಾಗಿ ಮಾಡಿದ ತ್ಯಾಗಗಳನ್ನು ಅಕ್ಷರ ರೂಪಕ್ಕೆ ತರುವ ಸಣ್ಣ ಪ್ರಯತ್ನ ಮಾಡಿದ್ದೇನೆ. ಇಂತಹ ಯಾವುದಾದರೂ ಘಟನೆ ನಿಮ್ಮ ಜೀವನದಲ್ಲಾಗಿದ್ದರೆ, ಕಾಮೆಂಟ್ ಮಾಡಿ ತಿಳಿಸಿ.

ಆಕೆಯ ಪ್ರೀತಿ ಕೃತಜ್ಞತೆಗೂ ಮೀರಿದ್ದು:

ಆಕೆಯ ಪ್ರೀತಿ ಕೃತಜ್ಞತೆಗೂ ಮೀರಿದ್ದು:

ಇಪ್ಪತ್ಮೂರು ವರ್ಷಗಳ ಹಿಂದೆ ತನ್ನ ಜೀವದ ಹಂಗು ತೊರೆದು ನನಗಾಗಿ ಹೋರಾಡಿದ ಜೀವ ನನ್ನಮ್ಮ. ಗರ್ಭದಲ್ಲಿರುವಾಗಲೇ ನನ್ನ ಜೀವಕ್ಕೆ ಕುತ್ತು ಬಂದಿದ್ದರೂ, ಇಂದು ಆಗ ನಡೆದ ವಿಷಯಗಳನ್ನು ಹೇಳಲು ಸಾಧ್ಯವಾಗಿದೆ ಅಂದ್ರೆ ಅದಕ್ಕೆ ಕಾರಣ ನನ್ನಮ್ಮ. ಅಂದಿನಿಂದ ಇಂದಿನವರೆಗೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟುಕೊಂಡು ಕಾಪಾಡಿಕೊಂಡು ಬಂದಿರುವ ರಕ್ಷಕಿ. ಹೆಣ್ಣು, ಹೆಣ್ಣು ಎಂದು ಆಡಿಕೊಂಡವರಿಗೆ , ಅದೇ ಹೆಣ್ಣು ಮಗುವನ್ನು ನಾಲ್ಕು ಜನರೆದುರು ತಲೆಯೆತ್ತಿ ನಡೆಯುವಂತೆ ಮಾಡಿದವಳು ನನ್ನಮ್ಮ. ಅಂದು ಆಡಿಕೊಂಡವರೇ ಇಂದು ಛೇ, ನನಗೂ ಹೆಣ್ಣು ಮಗು ಬೇಕಿತ್ತು ಅನ್ನೋವಾಗ, ನನ್ನಮ್ಮನಿಗಾಗುವ ಸಂತೋಷ, ಹೆಮ್ಮೆ ಪದಗಳಲ್ಲಿ ವಿವರಿಸಲಾಗದ್ದು.

ಈ ಜೀವನ ಆಕೆ ಕೊಟ್ಟ ಭಿಕ್ಷೆ:

ಈ ಜೀವನ ಆಕೆ ಕೊಟ್ಟ ಭಿಕ್ಷೆ:

ಜೀವನದಲ್ಲಿ ಏನೇ ಕಷ್ಟ ಇರಲಿ, ಆದರೆ ಆ ಕಷ್ಟಗಳು ಮಕ್ಕಳ ನಗು, ನೆಮ್ಮದಿ ಕಿತ್ತುಕೊಳ್ಳದೇ ಇರಲಿ ಎಂಬ ಮನೋಭಾವ ಹೊಂದಿರುವವಳು ನನ್ನ ಅಮ್ಮ. ಶಿಕ್ಷಣದಿಂದ ಅವಕಾಶ ವಂಚಿತೆಯಾಗಿರುವ ಆಕೆ ತನ್ನ ಮಕ್ಕಳನ್ನು ಓದಿಸಬೇಕು, ಒಂದು ದಡ ಸೇರಿಸಬೇಕು ಎಂಬ ಉದ್ದೇಶದಿಂದ ಆ ದೈತ್ಯ ದೇಹ ಹೊತ್ತು, ಕಾರ್ಖಾನೆಯ ಬಿಸಿಯ ಬೇಗೆಯಲ್ಲಿ ಹಗಲು ರಾತ್ರಿಯೆನ್ನದೇ ದುಡಿಯುವವಳು. ಈ ಜೀವನ ಆಕೆ ಕೊಟ್ಟ ಭಿಕ್ಷೆ ಎಂದರೆ ತಪ್ಪಾಗಲ್ಲ.

ನಗುವೇ ಆಕೆಗೆ ಒಡವೆ:

ನಗುವೇ ಆಕೆಗೆ ಒಡವೆ:

ಪ್ರತಿಫಲಗಳ ನಿರೀಕ್ಷೆಯಿಲ್ಲ, ಜೀವನದಲ್ಲಿ ಆಸೆಗಳಿಲ್ಲ, ತನ್ನ ಸರ್ವಸ್ವವನ್ನೇ ಮಕ್ಕಳಿಗಾಗಿ ಮುಡಿಪಾಗಿಟ್ಟವಳು. ಯಾರು ಬಂದು ಏನೇ ಕೇಳಲಿ, ಇಲ್ಲ ಎನ್ನುವ ಮಾತೇ ಬಾರದು ಆಕೆಯ ಬಾಯಲ್ಲಿ. ಆಕೆಯ ನಗುವೇ ಆಕೆಯ ಬಳಿಯಿರುವ ಆಸ್ತಿ, ಆಕೆಯ ಒಡವೆ. ಸದಾ ನಗುಮೊಗದಿಂದಲೇ ಎಲ್ಲರನ್ನೂ ಪ್ರೀತಿಸುವ, ಮಗುವಿನಂತ ಮನಸ್ಸು ನನ್ನ ಅಮ್ಮನದು.

ಆಸ್ಪತ್ರೆಯಲ್ಲಿ ನಿನ್ನೊಂದಿಗೆ ಮಲಗಿದ ನೆನಪು:

ಆಸ್ಪತ್ರೆಯಲ್ಲಿ ನಿನ್ನೊಂದಿಗೆ ಮಲಗಿದ ನೆನಪು:

ಹುಟ್ಟಿದಾಗಿನಿಂದ ಇಲ್ಲಿವರೆಗೂ ನಿನ್ನನ್ನೊಬ್ಬಳನ್ನೇ ಬಿಟ್ಟು ಎಲ್ಲೂ ಹೋಗಿರುವ ನೆನಪು ನನಗಿಲ್ಲ. ಅನಾರೋಗ್ಯದ ನಿಮಿತ್ತ ಆಸ್ರತ್ರೆಯಲ್ಲಿರಬೇಕಾದಾಗ ಅದೇ ಬೆಡ್ಡಲ್ಲಿ ನಿನ್ನೊಂದಿಗೆ ಮಲಗಿದವಳು ನಾನು. ಅಷ್ಟೊಂದು ಅಚ್ಚುಮೆಚ್ಚು. ಎಲ್ಲರನ್ನೂ ಸಮಾನವಾಗಿ ಕಾಣುವ, ಕರುಣೆಯ ಕಡಲಾಗಿರುವ, ಪ್ರೀತಿ, ಮಮತೆ, ತ್ಯಾಗದ ಪ್ರತಿರೂಪವಾಗಿರುವ ನೀನು, ನನ್ನಮ್ಮ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ. ನಿನ್ನ ಛಲ, ಸಹನೆ, ಹೋರಾಟದ ಬದುಕೇ ನನಗೆ ಮಾದರಿ.

ಅಮ್ಮಾ ಐ ಲವ್ ಯೂ:

ಅಮ್ಮಾ ಐ ಲವ್ ಯೂ:

ನಾನೆಂದಿಗೂ ನನ್ನಮ್ಮನಿಗೆ "ಐ ಲವ್ ಯೂ" ಅಂದಿಲ್ಲ. ಆಕೆಗಂತೂ ಇಂತಹ ತೋರ್ಪಡಿಕೆ ಪ್ರೀತಿಗಳ ಬಗ್ಗೆ ಅರಿವೇ ಇಲ್ಲ. ಹಾಗಂತ ಅಮ್ಮನಿಗೆ ಐ ಲವ್ ಯೂ ಹೇಳೋದು ತಪ್ಪೂ ಅಂತ ಅಲ್ಲ. ಅಂತಹ ಮಾತುಗಳು ಆಕೆಗೇನೂ ವ್ಯತ್ಯಾಸ ಮಾಡಲಾರದು, ಅಷ್ಟು ಮುಗ್ದ ಮನಸ್ಸು ಆಕೆಯದು. ನಾನೊಂದು ಹೆಣ್ಣಾದರಿಂದ ಮುಂದೊಂದು ದಿನ ನಿಮ್ಮನ್ನೆಲ್ಲಾ ತೊರೆಯಲೇಬೇಕು. ಆ ಕ್ಷಣ ನೆನಪಿಸಿಕೊಂಡರೆ ಕಣ್ಣು ಈಗಲೂ ಒದ್ದೆಯಾಗುತ್ತದೆ. ಆದರೆ ಎಲ್ಲಿ ಹೋದರೂ ಗೆದ್ದೆ ಗೆಲ್ಲುವೆ ಎನ್ನುವ ನಂಬಿಕೆ ನನಗಿದೆ. ಆ ಧೈರ್ಯ, ಹೊಂದಾಣಿಕೆ ಮನೋಭಾವ, ಸಹನೆಯನ್ನು ಹುಟ್ಟಿ ಹಾಕಿದವಳು ನೀನು, ನಿನ್ನದೇ ವರಪ್ರಸಾದವದು. ಬದುಕು ಸಾಗಿಸಬೇಕಾದ ಪರಿ ಹೇಳಿಕೊಟ್ಟ ನನ್ನಮ್ಮನಿಗೆ ನನ್ನ ಬದುಕಿನ್ನುದ್ದಕ್ಕೂ ಚಿರಋಣಿ... ಅಮ್ಮಾ ಐ ಲವ್ ಯೂ...ಅಮ್ಮಂದಿರ ದಿನಾಚರಣೆಯ ಶುಭಾಷಯಗಳು ಅಮ್ಮಾ...

Read more about: mothers day mother
English summary

Mother's Day 2023: Valuable Lessons We Learned from Our Mothers

Here we are talking about Wonderful Moments which spent with My Mother, read on
X
Desktop Bottom Promotion