For Quick Alerts
ALLOW NOTIFICATIONS  
For Daily Alerts

ಕ್ರಾಂತಿಕಾರಿ ಹೋರಾಟಗಾರ ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌

|

ಮೌಲಾನಾ ಅಬುಲ್ ಕಲಾಂ ಅಜಾದ್, ಭಾರತದ ಸ್ವತಂತ್ರ ಸೇನಾನಿಗಳಲ್ಲಿ ಪ್ರಮುಖವಾಗಿ ಉಲ್ಲೇಖಿಸಲ್ಪಡುವ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಗಳಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರ ಜನ್ಮದಿನವಾದ ನವೆಂಬರ್ 11 ನೇ ದಿನವನ್ನು ಭಾರತದ 'ರಾಷ್ಟ್ರೀಯ ಶಿಕ್ಷಣ ದಿನ'ವನ್ನಾಗಿ ಆಚರಿಸಲಾಗುತ್ತಿದೆ.

Maulana Abul Kalam Azad Biography: Movements and Facts

ಗಾಂಧೀಜಿಯವರ ನಿಕಟವರ್ತಿಗಳಾಗಿ ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು ಸಲ್ಲಿಸಿದ ಸೇವೆಗಳಿಗೆ ಲೆಕ್ಕವಿಲ್ಲ. ಅದರಲ್ಲೂ ಗಾಂಧೀಜಿಯವರ ಹಿಂದೂ-ಮುಸ್ಲಿಂ ಭಾವೈಕ್ಯತೆಗಾಗಿ ನಡೆಸಿದ ಪ್ರಯತ್ನಗಳಲ್ಲಿ ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರ ಬೆಂಬಲ ಮತ್ತು ಸಹಕಾರ ಇಂದಿಗೂ ಪ್ರಸ್ತುತವೆನಿಸುತ್ತದೆ. ಇವರ ಜೀವಮಾನದ ಸೇವೆಯನ್ನು ಪರಿಗಣಿಸಿದ ಭಾರತ ಸರ್ಕಾರ ಭಾರತದ ಅತ್ಯುನ್ನದ ಪದವಿಯಾದ 'ಭಾರತ ರತ್ನ'ವನ್ನು 1992ರಲ್ಲಿ ಮರಣಾನಂತರ ನೀಡಲಾಯಿತು.

ಬಾಲ್ಯ, ಶಿಕ್ಷಣ ಮತ್ತು ಕುಟುಂಬ

ಬಾಲ್ಯ, ಶಿಕ್ಷಣ ಮತ್ತು ಕುಟುಂಬ

ಮೌಲಾನಾ ಆಜಾದ್ ಎಂದೇ ಕರೆಯಲ್ಪಡುತ್ತಿದ್ದ ಅಬುಲ್ ಕಲಾಂ ಆಜಾದ್ ರವರ ಪೂರ್ಣ ಹೆಸರು ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್ ಹುಸೇನಿ ಆಜಾದ್. ಜನನ 11 ನವೆಂಬರ್ 1888 - ಮರಣ 22 ಫೆಬ್ರವರಿ 1958.

ಅವರ ತಂದೆ ಮುಹಮ್ಮದ್ ಖೈರುದ್ದೀನ್ ಬಿನ್ ಅಹ್ಮದ್ ಅಲ್ ಹುಸೇನಿಯವರು ಸುಮಾರು ಹನ್ನೆರಡು ಕೃತಿಗಳನ್ನು ಬರೆದ ಬಂಗಾಳಿ ಭಾಷಾ ವಿದ್ವಾಂಸರು. 1857 ಪ್ರಥಮ ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಇವರ ಅಜ್ಜ ಭಾರತ ತೊರೆದು ಅರೇಬಿಯಾದ ಮಕ್ಕಾ ನಗರದಲ್ಲಿ ನೆಲೆಸಿದ್ದರು. ತಾಯಿ ಶೇಖಾ ಅಲಿಯಾಸ್, ಅರೇಬಿಯಾದ ಇನ್ನೊಂದು ದೊಡ್ಡ ನಗರವಾದ ಮದೀನಾದ ದೊಡ್ಡ ವಿದ್ವಾಂಸರ ಮಗಳು. ಆಜಾದ್ ರವರ ಶಿಕ್ಷಣ ಮನೆಯಲ್ಲಿಯೇ ನಡೆದಿತ್ತು.

ಉರ್ದು, ಹಿಂದಿ, ಅರೇಬಿಕ್, ಪರ್ಶಿಯನ್, ಇಂಗ್ಲಿಷ್ ಭಾಷೆಗಳನ್ನೂ, ಗಣಿತ, ತತ್ತ್ವಶಾಸ್ತ್ರ, ಇತಿಹಾಸ, ಶರಿಯಾತ್ ಅಥವಾ ಇಸ್ಲಾಮಿಕ್ ಕಾನೂನುಗಳು ಮತ್ತು ವಿಜ್ಞಾನವನ್ನು ಕರಗತ ಮಾಡಿಕೊಂಡರು. 12 ನೇ ವಯಸ್ಸಿನಲ್ಲಿಯೇ ಅಲ್-ಮಿಸ್ಬಾಹ್ ಎಂಬ ಸಾಪ್ತಾಹಿಕ ಪತ್ರಿಕೆಯನ್ನು ಪ್ರಕಟಿಸಿ ಸ್ವತಃ ಸಂಪಾದಕರೂ ಆಗಿದ್ದರು. ಆದರೆ ವಿದ್ವಾಂಸರಾಗಿ ಇವರಿಗೆ ಹೆಸರು ತಂದುಕೊಟ್ಟ ಪತ್ರಿಕೆ ಎಂದರೆ 1903 ರಲ್ಲಿ ಪ್ರಾರಂಭವಾದ ಲಿಸ್ಸನ್-ಉಸ್-ಸಿದ್ಕ್ ಎಂಬ ಮಾಸಪತ್ರಿಕೆ. ಆ ಕಾಲದಲ್ಲಿ ಪ್ರಚಲಿತವಿದ್ದಂತೆ ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ತಮ್ಮ ಹದಿಮೂರನೇ ವಯಸ್ಸಿನಲ್ಲಿ ಜುಲೈಖಾ ಬೇಗಂ ರವರನ್ನು ವಿವಾಹವಾದರು. ಆಕೆಯೂ ಉತ್ತಮ ಉದ್ಯೋಗ ದೇವತಾಶಾಸ್ತ್ರಜ್ಞೆ, ವಿದ್ವಾಂಸೆ ಹಾಗೂ ರಾಜಕೀಯ ಕಾರ್ಯಕರ್ತೆಯಾಗಿದ್ದು ಪತಿಯ ಎಲ್ಲಾ ಕೆಲಸಗಳಲ್ಲಿ ತಮ್ಮ ಸಹಕಾರವನ್ನು ನೀಡಿದರು.

ತಾರುಣ್ಯ ಮತ್ತು ರಾಜಕೀಯ ಜೀವನ

ತಾರುಣ್ಯ ಮತ್ತು ರಾಜಕೀಯ ಜೀವನ

ಚಿಕ್ಕಂದಿನಿಂದಲೇ ಸಾಹಿತ್ಯ, ಧರ್ಮ ಮತ್ತು ತತ್ವಶಾಸ್ತ್ರಗಳಲ್ಲಿ ಇದ್ದ ಅಭಿರುಚಿಯಿಂದಾಗಿ ಹಲವಾರು ಉರ್ದು ಭಾಷೆಯ ಕೃತಿಗಳನ್ನು ಬರೆದು ಪ್ರಕಟಿಸಿದರು. ಭಾರತದ ಬಗ್ಗೆ ಅಪಾರ ಅಭಿಮಾನವಿದ್ದು ಭಾರತವನ್ನು ಆಕ್ರಮಣ ಮಾಡಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರದ ವಿರುದ್ದ ಲೇಖನಿಯ ಮೂಲಕ ಸಮರ ಸಾರಿದರು. ಕತ್ತಿಗಿಂತ ಲೇಖನಿ ಹರಿತ ಎಂಬ ಗಾದೆಮಾತು ಇವರ ಮಟ್ಟಿಗೆ ಅತ್ಯಂತ ಸೂಕ್ತವಾಗಿದೆ. ಬ್ರಿಟಿಷ್ ರಾಜ್ ಅನ್ನು ಟೀಕಿಸುವ ಕೃತಿಗಳಿಂದಾಗಿ ಶೀಘ್ರವೇ ಇವರು ಸ್ವತಂತ್ರ ಸಂಗ್ರಾಮದಲ್ಲಿ ತೊಡಗಿದ್ದ ವ್ಯಕ್ತಿಗಳ ಗಮನಕ್ಕೆ ಬಂದರು. ಬಳಿಕ ಪತ್ರಕರ್ತರಾಗಿ ತಮ್ಮ ಕೆಲಸದ ಮೂಲಕ ಪ್ರಾಮುಖ್ಯತೆಯನ್ನು ಪಡೆದರು. ಭಾರತೀಯ ರಾಷ್ಟ್ರೀಯತೆಯ ಕಾರಣಗಳನ್ನು ತಮ್ಮ ಲೇಖನಗಳಲ್ಲಿ ಸಮರ್ಥಿಸಿಕೊಂಡರು.

ಬಳಿಕ ಬ್ರಿಟಿಷರ ವಿರುದ್ದ ಹೋರಾಡುವ 'ಖಿಲಾಫತ್' ಎಂಬ ಚಳವಳಿಯ ನಾಯಕರೂ ಆದರು. ಈ ಚಳುವಳಿಯ ಸಂದರ್ಭದಲ್ಲಿ ಅವರು ಎಂದು ಭಾರತೀಯ ಸ್ವತಂತ್ರ ಹೋರಾಟದ ನಾಯಕತ್ವ ವಹಿಸಿದ್ದ ಮಹಾತ್ಮ ಗಾಂಧಿಯವರೊಂದಿಗೆ ನಿಕಟ ಸಂಪರ್ಕಕ್ಕೆ ಬಂದರು. ಗಾಂಧಿಯವರ ಅಹಿಂಸಾತ್ಮಕ ಅಸಹಕಾರದ ವಿಚಾರಗಳನ್ನು ಪರಿಪೂರ್ಣವಾಗಿ ಬೆಂಬಲಿಸಿದ ಆಜಾದ್ ಗಾಂಧೀಜಿಯವರ ಅಭಿಮಾನಿಯಾಗಿ ಉತ್ಸಾಹಭರಿತ ಬೆಂಬಲಿಗರಾದರು. ತಾನು ಹೇಳಿದ್ದೇ ಕಾನೂನು ಎಂಬಂತೆ ವರ್ತಿಸುತ್ತಿದ್ದ ಬ್ರಿಟಿಷ್ ಆಡಳಿತ 1919ರಲ್ಲಿ ಸ್ವತಂತ್ರ ಸೇನಾನಿಗಳ ಚಟುವಟಿಕೆಗಳಿಗೆ ಅಡ್ಡಿಯಾಗುವಂತೆ ರೌಲಾಟ್ ಆಕ್ಟ್ ಎಂಬ ಕಾನೂನನ್ನು (The Anarchical and Revolutionary Crimes Act of 1919) ಜಾರಿಗೆ ತಂದಿತು.

ಈ ಕಾನೂನಿನ ಪ್ರಕಾರ ಕೆಲವು ರಾಜಕೀಯ ಪ್ರಕರಣಗಳನ್ನು ನ್ಯಾಯಾಧೀಶರಿಲ್ಲದೆ ವಿಚಾರಣೆಗೆ ಒಳಪಡಿಸಲು ಅವಕಾಶ ಮಾಡಿಕೊಟ್ಟವು ಮತ್ತು ವಿಚಾರಣೆಯಿಲ್ಲದೆ ಶಂಕಿತರನ್ನು ಬಂಧಿಸಲು ಅನುಮತಿ ನೀಡಿತು. ಅಂದರೆ ಯಾರ ಮೇಲೆ ಸುಮ್ಮನೇ ಅನುಮಾನವಿದ್ದರೂ ಅವರನ್ನು ಬಂಧಿಸಿ ಜೈಲಿಗೆ ತಳ್ಳಬಹುದಾಗಿತ್ತು. ಈ ಕಾನೂನನ್ನು ಆಜಾದ್ ಬಲವಾಗಿ ವಿರೋಧಿಸಿ ಅಸಹಕಾರ ಚಳವಳಿಯನ್ನು ಸಂಘಟಿಸಲು ಕೆಲಸ ಮಾಡಿದರು.

ಗಾಂಧೀಜಿಯವರ ಸ್ವದೇಶಿ (ಸ್ಥಳೀಯ) ಉತ್ಪನ್ನಗಳನ್ನು ಉತ್ತೇಜಿಸುವುದು ಮತ್ತು ಭಾರತಕ್ಕೆ ಸ್ವರಾಜ್ (ಸ್ವರಾಜ್ಯ) ಕಾರಣ ಸೇರಿದಂತೆ ಗಾಂಧಿಯವರ ಆದರ್ಶಗಳನ್ನು ಕಾರ್ಯಗತಗೊಳಿಸಲು ಶ್ರಮಿಸಿದರು. 1923 ರಲ್ಲಿ, ತಮ್ಮ 35 ನೇ ವಯಸ್ಸಿನಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು (1923-1924) ಇವರ ಬಳಿಕ ಗಾಂಧೀಜಿಯವರೇ ಅಧ್ಯಕ್ಷರಾಗಿ ಮುಂದುವರೆದರು. ಈ ಮೂಲಕ ಈ ಸೇವೆ ಸಲ್ಲಿಸಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡರು. ಅವರು 1940-1946ರ ಅವಧಿಯಲ್ಲಿ ರವರೆಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡನೇ ಅವಧಿಯಲ್ಲಿಯೂ ಸೇವೆ ಸಲ್ಲಿಸಿದರು.

1920 ರ ಅಕ್ಟೋಬರ್‌ನಲ್ಲಿ, ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ಯಾವುದೇ ಸಹಾಯ ಪಡೆಯದೇ ಉತ್ತರ ಪ್ರದೇಶ ರಾಜ್ಯದ ಅಲಿಗಢ ದಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಅಡಿಪಾಯ ಸಮಿತಿಯ ಸದಸ್ಯರಾಗಿ ಆಜಾದ್ ಆಯ್ಕೆಯಾದರು. ಈ ವಿಶ್ವವಿದ್ಯಾಲಯದ ಕಟ್ಟಡವನ್ನು 1934 ರಲ್ಲಿ ಅಲಿಗಢ ದಿಂದ ನವದೆಹಲಿಗೆ ಸ್ಥಳಾಂತರಿಸಲು ಸಹಾಯ ಮಾಡಿದರು. ಈ ಕೆಲಸದ ಜ್ಞಾಪಕಾರ್ಥವಾಗಿ ಇಂದಿಗೂ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌ಗೆ ಮುಖ್ಯ ದ್ವಾರ (ಗೇಟ್ ನಂ. 7) ದಲ್ಲಿ ಇವರ ಹೆಸರನ್ನು ಕಾಣಬಹುದು. ಈ ವಿಶ್ವ ವಿದ್ಯಾಲಯ ಭಾರತದ ಅತ್ಯಂತ ಯಶಸ್ವಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು ಇಂದಿಗೂ ಕಾರ್ಯನಿರ್ವಹಿಸುತ್ತಾ ಕೋಟ್ಯಂತರ ಭಾರತೀಯರಿಗೆ ವಿದ್ಯಾದಾನ ನೀಡುತ್ತಲಿದೆ.

ಗಾಂಧೀಜಿಯವರ ಬ್ರಿಟಿಶರ ವಿರುದ್ದ ನಡೆದ ಹೋರಾಟಗಳಲ್ಲಿ ಧರಾಶನ ಸತ್ಯಾಗ್ರಹ ಅಥವಾ ಉಪ್ಪಿನ ಸತ್ಯಾಗ್ರಹ ಪ್ರಮುಖವಾಗಿದೆ. ಧರಸಣ ಸತ್ಯಾಗ್ರಹವು ಮೇ, 1930 ರಲ್ಲಿ ವಸಾಹತುಶಾಹಿ ಭಾರತದಲ್ಲಿ ಬ್ರಿಟಿಷ್ ಸರ್ಕಾರ ಭಾರತೀಯರ ಮೇಲೆ ವಿಧಿಸಿದ್ದ ಉಪ್ಪಿನ ತೆರಿಗೆ ವಿರುದ್ಧದ ಪ್ರತಿಭಟನೆಯಾಗಿದೆ. ದಂಡಿ ಎಂಬಲ್ಲಿ ಉಪ್ಪಿನ ಸತ್ಯಾಗ್ರಹ ಮುಗಿದ ನಂತರ, ಮಹಾತ್ಮ ಗಾಂಧಿಯವರು ಬ್ರಿಟಿಷ್ ಆಡಳಿತದ ವಿರುದ್ಧದ ಮುಂದಿನ ಪ್ರತಿಭಟನೆಯಾಗಿ ಗುಜರಾತ್‌ನಲ್ಲಿನ ಧರಸಾನ ಸಾಲ್ಟ್ ವರ್ಕ್ಸ್‌ (ಉಪ್ಪಿನ ಗಣಿ) ಯನ್ನು ಅಹಿಂಸಾತ್ಮಕ ದಾಳಿಗಾಗಿ ಮಾಡಿದರು. 1931 ರಲ್ಲಿ ಪ್ರಾರಂಭವಾದ ಧರಾಶನ ಸತ್ಯಾಗ್ರಹದಲ್ಲಿ

ಆಜಾದ್ ರವರು ಮುಖ್ಯ ಸಂಘಟಕರಲ್ಲಿ ಒಬ್ಬರಾಗಿದ್ದರು ಮತ್ತು ಆ ಕಾಲದ ಪ್ರಮುಖ ರಾಷ್ಟ್ರೀಯ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದರು.

ಗಾಂಧೀಜಿಯವರ ಹಿಂದೂ-ಮುಸ್ಲಿಂ ಐಕ್ಯತೆಯ ನಿಲುವನ್ನು ಬಲವಾಗಿ ಬೆಂಬಲಿಸುತ್ತಿದ್ದ ಆಜಾದ್ ಗಾಂಧೀಜಿಯವರು ಈ ನಿಟ್ಟಿನಲ್ಲಿ ಪ್ರಾರಂಭಿಸಿದ ಎಲ್ಲಾ ನಡೆಗಳನ್ನೂ ಸ್ವತಃ ನಾಯಕರಾಗಿ ಮುನ್ನಡೆಸಿದರು ಮತ್ತು ಜಾತ್ಯತೀತತೆ ಮತ್ತು ಸಮಾಜವಾದವನ್ನು ಸಮರ್ಥಿಸಿಕೊಂಡರು. ಈ ಸಮಯದಲ್ಲಿಯೇ ಕ್ವಿಟ್ ಇಂಡಿಯಾ ದಂಗೆಯೂ ಪ್ರಾರಂಭವಾಯಿತು. ದಂಗೆಯಲ್ಲಿ ಭಾಗವಹಿಸಿದ್ದ ಅಷ್ಟೂ ನಾಯಕರನ್ನು ಬ್ರಿಟಿಶ್ ಸರ್ಕಾರ ಬಂಧಿಸಿ ಜೈಲಿಗೆ ಕಳುಹಿಸಿತ್ತು. ಗಾಂಧೀಜಿಯವರನ್ನೂ ಸೇರಿಸಿ ಇಡಿಯ ಕಾಂಗ್ರೆಸ್ ನಾಯಕತ್ವ ಅಂದು ಜೈಲಿನಲ್ಲಿತ್ತು. ಆಜಾದ್ ಸಹಾ ಈ ಗುಂಪಿನಲ್ಲಿ ಬಂಧನಕ್ಕೊಳಗಾಗಿದ್ದರು. ಬಂಧನದ ಸಮಯದಲ್ಲಿ ಗಾಂಧೀಜಿಯವರು ಕೆಲವಾರು ಕೃತಿಗಳನ್ನು ರಚಿಸಿದರೆ ಆಜಾದ್ ರವರು ಹಿಂದೂ - ಮುಸ್ಲಿಂ ಐಕ್ಯತೆಗಾಗಿ ಲೇಖನಗಳನ್ನು ಬರೆದರು.

ಕ್ರಾಂತಿಕಾರಿ ಮತ್ತು ಪತ್ರಕರ್ತರಾಗಿ ಆಜಾದ್ ಜೀವನ

ಕ್ರಾಂತಿಕಾರಿ ಮತ್ತು ಪತ್ರಕರ್ತರಾಗಿ ಆಜಾದ್ ಜೀವನ

ಆ ಸಮಯದಲ್ಲಿ ಹೆಚ್ಚಿನ ಮುಸ್ಲಿಮರಿಗೆ ಆಮೂಲಾಗ್ರವೆಂದು ಪರಿಗಣಿಸಲ್ಪಟ್ಟ ರಾಜಕೀಯ ದೃಷ್ಟಿಕೋನಗಳನ್ನು ಆಜಾದ್ ಅಭಿವೃದ್ಧಿಪಡಿಸಿದರು ಮತ್ತು ಪೂರ್ಣ ಪ್ರಮಾಣದ ಭಾರತೀಯ ರಾಷ್ಟ್ರೀಯವಾದಿಯಾದರು. ಅವರು ಬ್ರಿಟಿಷ್ ಆಳ್ವಿಕೆಯನ್ನು ಜನಾಂಗೀಯ ತಾರತಮ್ಯ ಮತ್ತು ಭಾರತದಾದ್ಯಂತ ಸಾಮಾನ್ಯ ಜನರ ಮೂಲಭೂತ ಅಗತ್ಯತೆಗಳನ್ನು ಕಡೆಗಣಿಸಲಾಗಿದೆ ಎಂದು ತೀವ್ರವಾಗಿ ಟೀಕಿಸಿದರು.

ಮುಸ್ಲಿಂ ರಾಜಕಾರಣಿಗಳು ರಾಷ್ಟ್ರೀಯ ಹಿತಾಸಕ್ತಿಗೂ ಹೆಚ್ಚಾಗಿ ಕೋಮು ವಿಷಯಗಳ ಬಗ್ಗೆ ಗಮನಹರಿಸಿದ್ದಾರೆ ಎಂದು ಟೀಕಿಸಿದರು ಮತ್ತು ಅಖಿಲ ಭಾರತ ಮುಸ್ಲಿಂ ಲೀಗ್‌ನ ಕೋಮು ಪ್ರತ್ಯೇಕತಾವಾದವನ್ನು ತಿರಸ್ಕರಿಸಿದರು. ಆದರೆ ಇರಾಕ್‌ನಲ್ಲಿ ಜನಾಂಗೀಯ ಆಧಾರಿತ ಸುನ್ನಿ ಕ್ರಾಂತಿಕಾರಿ ಕಾರ್ಯಕರ್ತರನ್ನು ಭೇಟಿಯಾದಾಗ ಅವರ ಅಭಿಪ್ರಾಯಗಳು ಗಣನೀಯವಾಗಿ ಬದಲಾದವು ಮತ್ತು ಅವರ ಉತ್ಸಾಹಭರಿತ ಸಾಮ್ರಾಜ್ಯಶಾಹಿ ವಿರೋಧಿ ಮತ್ತು ರಾಷ್ಟ್ರೀಯತೆಯಿಂದ ಪ್ರಭಾವಿತವಾಯಿತು.

ಆ ಕಾಲದ ಸಾಮಾನ್ಯ ಮುಸ್ಲಿಮರ ಅಭಿಪ್ರಾಯಕ್ಕೆ ವಿರುದ್ಧವಾಗಿ, ಆಜಾದ್ 1905 ರಲ್ಲಿ ಬಂಗಾಳ ವಿಭಜನೆಯನ್ನು ವಿರೋಧಿಸಿದರು ಮತ್ತು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾದರು, ಈ ಸಮಯದಲ್ಲಿ ಪ್ರಮುಖ ಹಿಂದೂ ಕ್ರಾಂತಿಕಾರಿಗಳಾದ ಅರಬಿಂದೋ ಘೋಷ್ ಮತ್ತು ಶ್ಯಾಮ್ ಸುಂದರ್ ಚಕ್ರವರ್ತಿ ರವರ ಪರಿಚಯವಾಯಿತು. ಆಜಾದ್ ರವರ ಈ ನಡೆ ಆರಂಭದಲ್ಲಿ ಇತರ ಕ್ರಾಂತಿಕಾರಿಗಳಿಗೆ ಆಶ್ಚರ್ಯವನ್ನುಂಟುಮಾಡಿದರೂ, ಆದರೆ ಬಂಗಾಳ, ಬಿಹಾರ ಮತ್ತು ಬಾಂಬೆಯಲ್ಲಿ (ಈಗ ಮುಂಬೈ) ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ಸಭೆಗಳನ್ನು ಆಯೋಜಿಸಲು ರಹಸ್ಯವಾಗಿ ಕೆಲಸ ಮಾಡುವ ಮೂಲಕ ಆಜಾದ್ ಅವರ ಪ್ರಶಂಸೆ ಮತ್ತು ವಿಶ್ವಾಸವನ್ನು ಗಳಿಸಿದರು.

ಕಾಂಗ್ರೆಸ್ ನಾಯಕರಾಗಿ ಆಜಾದ್

ಕಾಂಗ್ರೆಸ್ ನಾಯಕರಾಗಿ ಆಜಾದ್

1946ರಲ್ಲಿ ನಡೆದ ಸಿಮ್ಲಾ ಸಮ್ಮೇಳನದಲ್ಲಿ ಅಂದಿನ ಕಾಂಗ್ರೆಸ್ ನಾಯಕರಾಗಿದ್ದ ಮತ್ತು ಭಾರತದ ಮೊದಲನೆಯ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್, ಮೊಹಮ್ಮದ್ ಅಲಿ ಜಿನ್ನಾ ಮತ್ತು ಸಿ.ರಾಜಗೋಪಾಲಾಚಾರಿ ಅವರೊಂದಿಗೆ

ಆಜಾದ್ ರಾಜಕೀಯ ಕ್ಷೇತ್ರದಲ್ಲಿ ಸ್ಪೂರ್ತಿದಾಯಕ ವ್ಯಕ್ತಿತ್ವ ಪಡೆದರು. ಆಜಾದ್ ಪ್ರಮುಖ ರಾಷ್ಟ್ರೀಯ ನಾಯಕರಾದರು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮತ್ತು ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರ ಕಚೇರಿಗಳಲ್ಲಿ ಹಲವು ಬಾರಿ ಸೇವೆ ಸಲ್ಲಿಸಿದರು. ಸಾಂವಿಧಾನಿಕ ಸುಧಾರಣೆಗಳನ್ನು ಪ್ರಸ್ತಾಪಿಸಲು ನೇಮಕಗೊಂಡ ಸೈಮನ್ ಆಯೋಗದ ವಿರುದ್ಧ ರಾಷ್ಟ್ರೀಯತಾವಾದಿ ಆಕ್ರೋಶದಿಂದ 1928 ರಲ್ಲಿ ಭಾರತದ ರಾಜಕೀಯ ವಾತಾವರಣದಲ್ಲಿ ಮತ್ತೆ ಚೈತನ್ಯ ತುಂಬಿತು. ಆಯೋಗವು ಯಾವುದೇ ಭಾರತೀಯ ಸದಸ್ಯರನ್ನು ಒಳಗೊಂಡಿಲ್ಲ ಮತ್ತು ಭಾರತೀಯ ನಾಯಕರು ಮತ್ತು ತಜ್ಞರನ್ನು ಸಹ ಸಂಪರ್ಕಿಸಿರಲಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ, ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಭಾರತದ ಅಭಿಪ್ರಾಯಗಳಿಂದ ಸಾಂವಿಧಾನಿಕ ಸುಧಾರಣೆಗಳನ್ನು ಪ್ರಸ್ತಾಪಿಸಲು ಮೋತಿಲಾಲ್ ನೆಹರೂ ಅವರ ಅಡಿಯಲ್ಲಿ ಇನ್ನೊಂದು ಆಯೋಗವನ್ನು ನೇಮಿಸಿತು.

1928 ರಲ್ಲಿ, ನೆಹರುರವರ ವರದಿಯನ್ನು ಆಜಾದ್ ಅನುಮೋದಿಸಿದರು, ಇದನ್ನು ಅಲಿ ಸಹೋದರರು ಮತ್ತು ಮುಸ್ಲಿಂ ಲೀಗ್ ರಾಜಕಾರಣಿ ಮುಹಮ್ಮದ್ ಅಲಿ ಜಿನ್ನಾ ಬಲುವಾಗಿ ಟೀಕಿಸಿದರು. ಧರ್ಮದ ಆಧಾರದ ಮೇಲೆ ಪ್ರತ್ಯೇಕ ಮತದಾರರಾಗಿಸುವುದರ ಅಂತ್ಯವನ್ನು ಆಜಾದ್ ಅನುಮೋದಿಸಿದರು ಮತ್ತು ಸ್ವತಂತ್ರ ಭಾರತವು ಜಾತ್ಯತೀತತೆಗೆ ಬದ್ಧರಾಗಿರಬೇಕು ಎಂದು ಕರೆ ನೀಡಿದರು. 1928 ರಲ್ಲಿ ಗುವಾಹಾಟಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ, ಒಂದು ವರ್ಷದೊಳಗೆ ಭಾರತಕ್ಕೆ ಪ್ರಾಬಲ್ಯದ ಸ್ಥಾನಮಾನ ನೀಡುವ ಗಾಂಧಿಯವರ ಕರೆಗೆ ಆಜಾದ್ ಅನುಮೋದನೆ ನೀಡಿದರು. ಒಂದು ವೇಳೆ ಮಂಜೂರು ಮಾಡದಿದ್ದರೆ, ಭಾರತಕ್ಕೆ ಸಂಪೂರ್ಣ ರಾಜಕೀಯ ಸ್ವಾತಂತ್ರ್ಯದ ಗುರಿಯನ್ನು ಕಾಂಗ್ರೆಸ್ ಅಳವಡಿಸಿಕೊಳ್ಳಬಹುದಾಗಿತ್ತು. ಗಾಂಧಿಯವರೊಂದಿಗಿನ ಒಲವಿನ ಹೊರತಾಗಿಯೂ, ಆಜಾದ್ ಯುವ ಆಮೂಲಾಗ್ರ ನಾಯಕರಾದ ಜವಾಹರಲಾಲ್ ನೆಹರು ಮತ್ತು ಸುಭಾಷ್ ಬೋಸ್ ಅವರೊಂದಿಗೂ ಹತ್ತಿರವಾದರು. ಆದರೆ ಸ್ವಾತಂತ್ರ್ಯ ಪಡೆಯುವಲ್ಲಿ ಇವರಿಂದ ಆಗಿದ್ದ ವಿಳಂಬವನ್ನೂ ಸ್ಪಷ್ಟವಾಗಿ ಟೀಕಿಸಿದ್ದರು.

1936 ರ ಲಖನೌದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ, ಸಮಾಜವಾದವನ್ನು ಕಾಂಗ್ರೆಸ್ ಗುರಿಯಾಗಿ ಪರಿಗಣಿಸುವ ಬಗ್ಗೆ ಆಜಾದ್ ಅವರನ್ನು ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ರಾಜೇಂದ್ರ ಪ್ರಸಾದ್ ಮತ್ತು ಸಿ.ರಾಜಗೋಪಾಲಾಚಾರಿ ಅವರೊಂದಿಗೆ ವಿವಾದಕ್ಕೆ ಒಳಪಡಿಸಲಾಯಿತು. ನೆಹರೂ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದನ್ನು ಆಜಾದ್ ಬೆಂಬಲಿಸಿದ್ದರು ಮತ್ತು ಸಮಾಜವಾದವನ್ನು ಅನುಮೋದಿಸುವ ನಿರ್ಣಯವನ್ನೂ ಬೆಂಬಲಿಸಿದ್ದರು. ಹಾಗೆ ಮಾಡುವಾಗ ಅವರು ಕಾಂಗ್ರೆಸ್ ಸಮಾಜವಾದಿಗಳಾದ ನೆಹರೂ, ಸುಭಾಷ್ ಬೋಸ್ ಮತ್ತು ಜಯಪ್ರಕಾಶ್ ನಾರಾಯಣ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು.

ಅನೇಕ ಸಂಪ್ರದಾಯವಾದಿ ಕಾಂಗ್ರೆಸ್ಸಿಗರ ಭೀತಿಗೆ ಅನುಗುಣವಾಗಿ ಆಜಾದ್ 1937 ರಲ್ಲಿ ನೆಹರೂ ಅವರ ಮರುಚುನಾವಣೆಯನ್ನು ಬೆಂಬಲಿಸಿದರು. ಕಾಂಗ್ರೆಸ್-ಲೀಗ್ ಒಕ್ಕೂಟ ಮತ್ತು ವಿಶಾಲ ರಾಜಕೀಯ ಸಹಕಾರದ ಕುರಿತು ಆಜಾದ್ 1935 ಮತ್ತು 1937 ರ ನಡುವೆ ಜಿನ್ನಾ ಮತ್ತು ಮುಸ್ಲಿಂ ಲೀಗ್‌ನೊಂದಿಗೆ ಸಂವಾದವನ್ನು ಬೆಂಬಲಿಸಿದರು. ಮುಸ್ಲಿಂ ಲೀಗ್ ಅನ್ನು ಪ್ರತಿರೋಧಕ ಎಂಬ ಹಣೆಪಟ್ಟಿ ಪಡೆಯಲು ಕಡಿಮೆ ಒಲವು ಹೊಂದಿದ್ದರೂ, ಲೀಗ್ ಅನ್ನು ಭಾರತೀಯ ಮುಸ್ಲಿಮರ ಪ್ರತಿನಿಧಿಯಾಗಿ ಮಾತ್ರ ನೋಡಬೇಕೆಂಬ ಜಿನ್ನಾ ಅವರ ಬೇಡಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ತಿರಸ್ಕರಿಸಿತು.

ಸಾಹಿತ್ಯ ಕೃತಿಗಳು

ಸಾಹಿತ್ಯ ಕೃತಿಗಳು

ಆಜಾದ್ ರವರ ಕೃತಿಗಳು ಉರ್ದು ಭಾಷೆಯಲ್ಲಿ ಹೆಚ್ಚಾಗಿದ್ದರೂ ಕೆಲವು ಆಂಗ್ಲ ಭಾಷೆಯ ಕೃತಿಗಳನ್ನೂ ರಚಿಸಿದ್ದಾರೆ. ಇದರಲ್ಲಿ ಪ್ರಮುಖವಾದ ಕೃತಿ ಎಂದರೆ ಇಂಡಿಯಾ ವಿನ್ಸ್ ಫ್ರೀಡಮ್ (ಭಾರತ ಸ್ವಾತಂತ್ಯವನ್ನು ಗೆಲ್ಲುತ್ತದೆ)

ಉರ್ದು ಕೃತಿಗಳಲ್ಲಿ ಪ್ರಮುಖವಾದವು ಎಂದರೆ : ಘುಬರ್-ಎ-ಖತೀರ್, ತಾಜ್ಕಿರಾ, ತಾರ್ಜುಮಾನುಲ್ ಕುರಾನ್ (ಪವಿತ್ರ ಕುರಾನ್ ಗ್ರಂಥದ ಉರ್ದು ಭಾಷಾಂತರ)

ಘುಬರ್-ಎ-ಖತೀರ್ ಎಂಬ ಕೃತಿ ವಾಸ್ತವವಾಗಿ ಅವರು ಬರೆದ ಪತ್ರಗಳ ಸಂಗ್ರಹವಾಗಿದೆ. ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಲು ಬಾಂಬೆಯಲ್ಲಿ (ಈಗಿನ ಮುಂಬೈ) ಇದ್ದಾಗ ಬ್ರಿಟಿಷ್ ರಾಜ್ ಅವರು ಮಹಾರಾಷ್ಟ್ರದ ಅಹ್ಮದ್‌ನಗರ ಕೋಟೆಯಲ್ಲಿ 1942 ರಿಂದ 1946 ರವರೆಗೆ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದರು. ಈ ಸಮಯದಲ್ಲಿ ಅವರು ತಮ್ಮ ಆಪ್ತ ಸ್ನೇಹಿತ ಮೌಲಾನಾ ಹಬೀಬುರ್ ರಹಮಾನ್ ಖಾನ್ ಶೆರ್ವಾನಿ ಅವರನ್ನು ಉದ್ದೇಶಿಸಿ ಬರೆದ 24 ಪತ್ರಗಳನ್ನೇ ಸಂಗ್ರಹಿಸಿ ಈ ಕೃತಿಯನ್ನು ರಚಿಸಲಾಗಿದೆ. ಜೈಲಿನಲ್ಲಿದ್ದಾಗ ಅದಕ್ಕೆ ಯಾವುದೇ ಅನುಮತಿ ಇಲ್ಲದ ಕಾರಣ ಮತ್ತು 1946 ರಲ್ಲಿ ಬಿಡುಗಡೆಯಾದ ನಂತರ ಈ ಪತ್ರಗಳನ್ನು ತಮ್ಮ ಮಿತ್ರನಿಗೆ ಕಳುಹಿಸಲು ಅವರಿಗೆ ಸಾಧ್ಯವಾಗಿರಲೇ ಇಲ್ಲ.

ಕೆಲವು ಅಚ್ಚರಿಯ ಮಾಹಿತಿಗಳು

ಕೆಲವು ಅಚ್ಚರಿಯ ಮಾಹಿತಿಗಳು

  • ಮೌಲಾನಾ ಎಂಬುದು ಅವರ ಹೆಸರಲ್ಲ, ಬದಲಿಗೆ ಮೌಲಾನಾ ಎಂಬುದು ಒಂದು ಹುದ್ದೆಯಾಗಿದೆ. ಉರ್ದು ಭಾಷೆಯಲ್ಲಿ ಮೌಲಾನಾ ಎಂದರೆ ಧರ್ಮಗುರುಗಳು ಅಥವಾ ಧಾರ್ಮಿಕ ವಿದ್ವಾಂಸರು ಎಂಬ ಅರ್ಥವಿದೆ.
  • ಅಂತೆಯೇ ಆಜಾದ್ ಎಂಬುದೂ ಅವರ ಕಾವ್ಯನಾಮವಾಗಿತ್ತು. ಬಾಲ್ಯದಲ್ಲಿ ಸ್ವತಂತ್ರವಾಗಿ ಬರೆದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವರು ತಮ್ಮನ್ನು ತಾವು ಕೇವಲ ಆಜಾದ್ ಎಂದೇ ಹೇಳಿಕೊಳ್ಳುತ್ತಿದ್ದರು.
  • ಪ್ರಾಥಮಿಕ ಶಿಕ್ಷಣ ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಾದ ಕಾರಣ ಇವರ ಕೃತಿಗಳಲ್ಲಿ ಇವೆರಡೂ ಭಾಷೆಗಳ ಬಳಕೆ ಇದೆ. ಆದರೆ ಜೀವಮಾನವಿಡೀ ಇವರು ಬಳಸುತ್ತಿದ್ದ ಉರ್ದು ಭಾಷೆ ಓದುವುದನ್ನು ಮತ್ತು ಬರೆಯುವುದನ್ನು ಯಾರಿಂದಲೂ ಕಲಿಯದೇ ಸ್ವತಃ ಕಲಿತಿದ್ದರು.
  • ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಗಳಾಗಿ ಮೌಲಾನಾ ಆಜಾದ್ ರವರನ್ನು ನೇಮಿಸುವ ಮೊದಲು ಈ ಹುದ್ದೆಯೇ ಇರಲಿಲ್ಲ. ಈ ಹುದ್ದೆಯನ್ನು ಸ್ವತಂತ್ರ ಭಾರತದ ಸಚಿವಾಲಯದಲ್ಲಿ ಮೊದಲ ಬಾರಿಗೆ ಸೃಷ್ಟಿಸಲಾಯಿತು. 15ನೇ ಆಗಸ್ಟ್ 1947 (ಸ್ವತಂತ್ರ ದಿನ - 2 ನೇ ಫೆಬ್ರವರಿ 1958 ರವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು. ಆದರೆ ಈ ಹುದ್ದೆಯಿಂದ ಇಳಿದ ಕೇವಲ ಇಪ್ಪತ್ತು ದಿನಗಳಲ್ಲೇ ಹೃದಯಾಘಾತದಿಂದ ಮರಣ ಹೊಂದಿದರು. (ಮರಣ 22 ಫೆಬ್ರವರಿ 1958). ಈ ಹುದ್ದೆಯ ಉತ್ತರಾಧಿಕಾರಿಯಾಗಿ ಕೆ.ಎಲ್ ಶ್ರೀಮಲಿಯವರು ಆಯ್ಕೆಯಾದರು.
  • ಕೆಲವು ಅಚ್ಚರಿಯ ಮಾಹಿತಿಗಳು

    ಕೆಲವು ಅಚ್ಚರಿಯ ಮಾಹಿತಿಗಳು

    • 1912ರಲ್ಲಿ ಬ್ರಿಟಿಶ್ ಆಳ್ವಿಕೆಯನ್ನು ವಿರೋಧಿಸಿ ಕಲ್ಕತ್ತಾದಲ್ಲಿ ಅಲ್-ಹಿಲಾಲ್ ಎಂಬ ಉರ್ದು ವಾರಪತ್ರಿಕೆಯನ್ನು ಪ್ರಾರಂಭಿಸಿ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಬ್ರಿಟಿಶ್ ಸರ್ಕಾರಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದ್ದ ಕಾರಣ ಅಂದಿನ ದಿನಗಳಲ್ಲಿ ಅನ್ವಯವಾಗುತ್ತಿದ್ದ ಪ್ರೆಸ್ ಆಕ್ಟ್ ಎಂಬ ಕಾನೂನನ್ನು ಬಳಸಿ ಪತ್ರಿಕೆಯನ್ನು ಬಲವಂತವಾಗಿ ಮುಚ್ಚಲಾಯ್ತು. ಈ ಎರಡೇ ವರ್ಷಗಳಲ್ಲಿ ಸ್ವಂತಂತ್ರ ಸಂಗ್ರಾಮದಲ್ಲಿ ಮುಸ್ಲಿಮರೂ ಪಾಲ್ಗೊಳ್ಳುವಂತೆ ಅವರು ನೀಡಿದ ಕರೆ ಪತ್ರಿಕೆ ಮುಚ್ಚಿದ ಬಳಿಕವೂ ಮುಸ್ಲಿಂ ಸಮುದಾಯದಲ್ಲಿ ಮುಂದುವರೆದ ಕಾರಣದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಂದಿನ ದಿನಗಳಲ್ಲಿ ಮುಸ್ಲಿಮರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿತ್ತು.
    • ಅಲ್ ಹಿಲಾಲ್ ಮುಚ್ಚಿದ ಬಳಿಕ ಆಜಾದ್ ರವರು, 1914 ರಲ್ಲಿ ಮತ್ತೊಂದು ಉರ್ದು ವಾರಪತ್ರಿಕೆಯಾದ ಅಲ್-ಬಾಲಾಗ್ ಅನ್ನು ಪ್ರಾರಂಭಿಸಿದರು, ಈ ಪತ್ರಿಕೆಯೂ ರಾಂಚಿಯಲ್ಲಿ ಆಜಾದ್ ಬಂಧನಕ್ಕೊಳಗಾದ ಬಳಿಕ 1916 ರಲ್ಲಿ ಕೊನೆಗೊಂಡಿತು.
    • ಅಲ್ ಹಿಲಾಲ್ ಪತ್ರಿಕೆಯನ್ನು ಮುದ್ರಿಸುತ್ತಿದ್ದ ಮುದ್ರಣಾಲಯವನ್ನು ನಂತರ ಮುಫ್ತಿ ಶೌಕತ್ ಅಲಿ ಫೆಹ್ಮಿ ಅವರು ತಮ್ಮ ಉರ್ದು ಮಾಸಿಕ 'ದಿನ್ ದುನಿಯಾ' ವನ್ನು ಮುದ್ರಿಸಿ ಪ್ರಕಟಿಸಲು ಖರೀದಿಸಿದರು. ಸುಮಾರು ಐದು ದಶಕಗಳ ಕಾಲ ಪತ್ರಿಕಾ ಬಳಕೆಯಲ್ಲಿತ್ತು, ಲಿಥೊಗ್ರಾಫಿಕ್ ಮುದ್ರಣವು ಬಳಕೆಯಲ್ಲಿಲ್ಲದ 1990 ರವರೆಗೆ ಉರ್ದು ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಪ್ರಕಟಿಸಿತು. ಫೆಹ್ಮಿ ಕುಟುಂಬವು ವಿಶ್ವವಿದ್ಯಾನಿಲಯಗಳು, ಉರ್ದು ಅಕಾಡೆಮಿಗಳು, ವಸ್ತುಸಂಗ್ರಹಾಲಯಗಳು ಮತ್ತು ಅಂದಿನ ಅಧ್ಯಕ್ಷ ಶಂಕರ್ ದಯಾಳ್ ಶರ್ಮಾ ಅವರನ್ನು ಸಂಪರ್ಕಿಸಿ ಆಜಾದ್ ಅವರ ಪರಂಪರೆಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿತು. ಆದರೆ ಯಾವುದೇ ಯಶಸ್ಸನ್ನು ಕಂಡುಕೊಳ್ಳಲಾಗದೇ ಈ ಮುದ್ರಣಾಲಯವನ್ನು ಕೊನೆಗೆ ಗುಜರಿ ಬೆಲೆಯಲ್ಲಿ ಮಾರಾಟ ಮಾಡಿ ಕೊನೆಗೊಳಿಸಲಾಯ್ತು.
English summary

Maulana Abul Kalam Azad Biography: Movements and Facts

Here we are discussing about Maulana Abul Kalam Azad Biography: Family, History, Movements and Facts. Read more.
X
Desktop Bottom Promotion