For Quick Alerts
ALLOW NOTIFICATIONS  
For Daily Alerts

ಗಾಂಧಿ ಜಯಂತಿ 2020 : ಹೋರಾಟವನ್ನೇ ಬದುಕಾಗಿಸಿಕೊಂಡ ಗಾಂಧಿ ಇಂದಿಗೂ ಮಾದರಿ

|

ಭಾರತದ ರಾಷ್ಟ್ರಪಿತ, ಸ್ವಾತಂತ್ರ್ಯ ಹೋರಾಟಗಾರ, ಬಾಪೂಜಿ ಎಂದ ಕೂಡಲೇ ಭಾರತದ ಪ್ರತಿಯೊಬ್ಬ ಪ್ರಜೆಗೆ ನೆನಪಿಗೆ ಬರುವುದು ಮೋಹನದಾಸ್ ಕರಮಚಂದ್ ಗಾಂಧಿ ಅಥವಾ ಮಹಾತ್ಮಾ ಗಾಂಧಿ. ಪುಟ್ಟ ಮಕ್ಕಳಿಂದ ಹಿಡಿದು ಯಾವುದೇ ವಯಸ್ಸಿನವರಾದರೂ ಗಾಂಧೀಜಿಯ ಯಶೋಗಾಥೆಯ ಬಗ್ಗೆ ಭಾವುಕರಾಗುತ್ತಾರೆ. ಅಂತಹ ಅದ್ಭುತ ವ್ಯಕ್ತಿತ್ವ ಮಹಾತ್ಮ ಗಾಂಧೀಜಿಯವರದ್ದು.

Mahatma Gandhi Biography: Family, History, Movements and Facts

ಮಹಾತ್ಮಾ ಗಾಂಧಿ ಒಬ್ಬ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರಬಲ ರಾಜಕೀಯ ನಾಯಕರಾಗಿದ್ದರು, ಅವರು ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಗಾಂಧೀಜಿ ದೇಶದ ಪಿತಾಮಹ ಎಂದೇ ಕರೆಯಲ್ಪಡುತ್ತಾರೆ. ಅವರು ಭಾರತದ ಬಡ ಜನರ ಜೀವನವನ್ನೂ ಸುಧಾರಿಸುವಲ್ಲಿ ಶತಾಯಗತಾಯ ಶ್ರಮಿಸಿದ್ದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅವರ ಜನ್ಮದಿನವನ್ನು ಪ್ರತಿ ವರ್ಷ ಗಾಂಧಿ ಜಯಂತಿ ಎಂದು ಆಚರಿಸಲಾಗುತ್ತದೆ.

ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಸಿದ್ಧಾಂತವು ಅನೇಕರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ಇತರ ಹಲವಾರು ದೇಶಗಳಲ್ಲಿ ಗಾಂಧೀಜಿಯವರ ಅಹಿಂಸಾ ತತ್ವವನ್ನು ಅಳವಡಿಸಿಕೊಂಡಿರುವ ಉದಾಹರಣೆಗಳಿವೆ. ಮಾರ್ಟಿನ್ ಲೂಥರ್ ಮತ್ತು ನೆಲ್ಸನ್ ಮಂಡೇಲಾ ಅವರು ತಮ್ಮ ದೇಶದ ಸ್ವಾತಂತ್ರ್ಯ ಹೋರಾಟಲ್ಲಿ ಈ ತತ್ವಗಳನ್ನೇ ಅಳವಡಿಸಿಕೊಂಡು ವಿಜಯವನ್ನು ಸಾಧಿಸಿದ್ದಾರೆ.

ಮಹಾತ್ಮಾ ಗಾಂಧೀಜಿ ಪರಿಚಯ

ಮಹಾತ್ಮಾ ಗಾಂಧೀಜಿ ಪರಿಚಯ

ಪೂರ್ಣ ಹೆಸರು: ಮೋಹನ್‌ದಾಸ್ ಕರಮಚಂದ್ ಗಾಂಧಿ

ಜನನ: 2 ಅಕ್ಟೋಬರ್, 1869

ಹುಟ್ಟಿದ ಸ್ಥಳ: ಪೊರ್ಬಂದರ್, ಗುಜರಾತ್

ಮರಣ: 30 ಜನವರಿ, 1948

ಮರಣ ಸ್ಥಳ: ದೆಹಲಿ, ಭಾರತ

ಮರಣಕ್ಕೆ ಕಾರಣ: ಬಂದೂಕಿನಿಂದ ಹತ್ಯೆ ಮಾಡಲಾಗಿದೆ

ತಂದೆ: ಕರಮಚಂದ್ ಗಾಂಧಿ

ತಾಯಿ: ಪುತಲೀಬಾಯಿ ಗಾಂಧಿ

ರಾಷ್ಟ್ರೀಯತೆ: ಭಾರತೀಯ

ಸಂಗಾತಿ: ಕಸ್ತೂರಿ ಬಾ ಗಾಂಧಿ

ಮಕ್ಕಳು: ಹರಿಲಾಲ್ ಗಾಂಧಿ, ಮನಿಲಾಲ್ ಗಾಂಧಿ, ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ

ವೃತ್ತಿ ಜೀವನ: ವಕೀಲ, ರಾಜಕಾರಣಿ, ಚಳುವಳಿಕಾರ, ಬರಹಗಾರ

ಚಳುವಳಿಕಾರ ಗಾಂಧೀಜಿ

ದಕ್ಷಿಣ ಆಫ್ರಿಕಾದಲ್ಲಿ ಸುಮಾರು 20 ವರ್ಷಗಳ ಕಾಲ ಮಹಾತ್ಮ ಗಾಂಧಿಯವರು ತಮ್ಮ ಅಹಿಂಸಾತ್ಮಕ ವಿಧಾನವನ್ನು ಬಳಸಿಕೊಂಡು ಅನ್ಯಾಯ ಮತ್ತು ಜನಾಂಗೀಯ ತಾರತಮ್ಯವನ್ನು ವಿರೋಧಿಸಿದರು. ಅವರ ಸರಳ ಜೀವನಶೈಲಿ ಭಾರತ ಮಾತ್ರವಲ್ಲದೇ ಹೊರ ದೇಶದಲ್ಲಿಯೂ ಅಭಿಮಾನಿಗಳನ್ನು ಸೃಷ್ಟಿಸಿತ್ತು. ಹೀಗಾಗಿಯೇ ಗಾಂಧೀಜಿಯನ್ನು ಎಲ್ಲರೂ ಪ್ರೀತಿಯಿಂದ ಬಾಪು (ತಂದೆ) ಎಂದೇ ಗೌರವಿಸುತ್ತಾರೆ.

"ನಿಮ್ಮನ್ನು ನೀವು ಕಂಡುಕೊಳ್ಳುವ ಉತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು." - ಮಹಾತ್ಮ ಗಾಂಧಿ

ಮಹಾತ್ಮ ಗಾಂಧಿ ಬಾಲ್ಯ ಮತ್ತು ಕೌಟುಂಬಿಕ ಹಿನ್ನೆಲೆ

ಮಹಾತ್ಮ ಗಾಂಧಿ ಬಾಲ್ಯ ಮತ್ತು ಕೌಟುಂಬಿಕ ಹಿನ್ನೆಲೆ

ಗಾಂಧೀಜಿಯವರು ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರ್ಬಂದರ್‌ನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಕರಮಚಂದ್ ಗಾಂಧಿ ಮತ್ತು ತಾಯಿ ಪುತಲೀಬಾಯಿ. ತಮ್ಮ 13 ನೇ ವಯಸ್ಸಿನಲ್ಲಿ, ಮಹಾತ್ಮ ಗಾಂಧಿಯವರು ಹಿರಿಯರ ನಿಶ್ಚಯದಂತೆ ಕಸ್ತೂರಿ ಬಾ ಅವರನ್ನು ವಿವಾಹವಾದರು. ಗಾಂಧೀಜಿ ಹಾಗೂ ಕಸ್ತೂರಿ ಬಾ ಅವರಿಗೆ ಹರಿಲಾಲ್, ಮನಿಲಾಲ್, ರಾಮದಾಸ್ ಮತ್ತು ದೇವದಾಸ್ ಎಂಬ ನಾಲ್ಕು ಗಂಡು ಮಕ್ಕಳಿದ್ದರು. ಕಸ್ತೂರಿ ಬಾ ತಮ್ಮ ಜೀವಿತಾವಧಿಯಲ್ಲಿ ಗಾಂಧೀಜಿಯವರ ಎಲ್ಲಾ ಕಾರ್ಯಗಳಲ್ಲೂ ಬೆನ್ನೆಲುಬಾಗಿ ನಿಂತಿದ್ದರು. ಕಸ್ತೂರಿ ಬಾ 1944ರಲ್ಲಿ ಅಸುನೀಗಿದರು.

ಗಾಂಧಿಯವರು ತಂದೆಯ ನಡವಳಿಕೆಯಿಂದ ಪ್ರಭಾವಿತರಾಗಿದ್ದರು. ಅವರ ತಂದೆ ಕರಮ್ ಚಂದ್ ಗಾಂಧಿಯವರು, ಬ್ರಿಟಿಷ್ ಆಳ್ವಿಕೆಯ ಭಾರತದ ಪಶ್ಚಿಮದ ಒಂದು ಸಂಸ್ಥಾನದ ((ಈಗ ಗುಜರಾತ್ ರಾಜ್ಯ) ರಾಜಧಾನಿ, ಪೊರಬಂದರ್ ನ ದಿವಾನ್ ಅಥವಾ ಮುಖ್ಯಮಂತ್ರಿಯಾಗಿದ್ದರು. ಮಹಾತ್ಮ ಗಾಂಧಿ ಕರಮ್ ಚಂದ್ ಅವರ ನಾಲ್ಕನೇ ಪತ್ನಿ ಪುತಲೀಬಾಯಿಯ ಮಗ. ಅವರು ಶ್ರೀಮಂತ ವೈಷ್ಣವ ಕುಟುಂಬಕ್ಕೆ ಸೇರಿದವರು. ಗಾಂಧೀಜಿ ಆರಂಭದಿಂದಲೂ, ಶ್ರವಣ ಕುಮಾರ ಮತ್ತು ಹರಿಶ್ಚಂದ್ರರ ಕಥೆಗಳನ್ನು ಕೇಳಿ ಅದರಲ್ಲಿರುವ ಸತ್ಯದ ಮಹತ್ವವನ್ನು ಅರಿತು ಅದರಿಂದ ಆಳವಾಗಿ ಪ್ರಭಾವಿತರಾಗಿದ್ದರು.

ಮಹಾತ್ಮಾ ಗಾಂಧಿ ಶಿಕ್ಷಣ

ಮಹಾತ್ಮಾ ಗಾಂಧಿ ಶಿಕ್ಷಣ

ಗಾಂಧೀಜಿ 9 ವರ್ಷ ವಯಸ್ಸಿನಲ್ಲಿದ್ದಾಗ ರಾಜ್‌ಕೋಟ್‌ನ ಸ್ಥಳೀಯ ಶಾಲೆಗೆ ಹೋಗಿ ಅಂಕಗಣಿತ, ಇತಿಹಾಸ, ಭೌಗೋಳಿಕತೆ ಮತ್ತು ಭಾಷೆಗಳ ಮೂಲಭೂತ ಅಂಶಗಳನ್ನು ಅಧ್ಯಯನ ಮಾಡಿದರು. ನಂತರ ತಮ್ಮ 11 ನೇ ವಯಸ್ಸಿನಲ್ಲಿ ರಾಜ್‌ಕೋಟ್‌ನ ಪ್ರೌಢ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಿದರು. ಆದರೆ ೧೩ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಒಂದು ವರ್ಷ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಆದರೆ ಓದಿನಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಗಾಂಧೀಜಿ ಪುನಃ ಶಾಲೆಗೆ ಸೇರಿಕೊಂಡು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.

1888 ರಲ್ಲಿ, ಗಾಂಧೀಜಿ ಗುಜರಾತ್‌ ನ ಭಾವನಗರದ ಸಮಲ್ದಾಸ್ ಕಾಲೇಜಿಗೆ ಸೇರಿದರು. ಈ ಸಮಯದಲ್ಲಿ ಅವರ ಕುಟುಂಬದ ಸ್ನೇಹಿತ ಮಾವ್ಜಿ ದವೆ ಜೋಶಿ ತಮ್ಮ ಹೆಚ್ಚಿನ ಅಧ್ಯಯನವನ್ನು ಮುಂದುವರೆಸಲು ಅಂದರೆ ಲಂಡನ್ ನಲ್ಲಿ ಕಾನೂನು ಅಭ್ಯಾಸ ಮಾಡಲು ತೆರಳಿದ್ದರು. ಇತ್ತ ಗಾಂಧೀಜಿಯವರು ಸಮಲ್ದಾಸ್ ಕಾಲೇಜಿನಲ್ಲಿ ಅಧ್ಯಯನದಿಂದ ತೃಪ್ತರಾಗಲಿಲ್ಲ. ಹಾಗಾಗಿ ಅವರು ಸ್ನೇಹಿತನ ಲಂಡನ್ ಹೋಗುವ ಪ್ರಸ್ತಾವನೆಯಿಂದ ಉತ್ಸುಕರಾಗಿ ಮಾಂಸಾಹಾರ, ಮದ್ಯಪಾನ, ಹುಡುಗಿಯರನ್ನು ಮುಟ್ಟುವುದಿಲ್ಲ ಎಂದು ತಾಯಿ ಮತ್ತು ಹೆಂಡತಿಗೆ ಮನವರಿಕೆ ಮಾಡಿದರು ಮತ್ತು ಅವರಿಂದ ಬೀಳ್ಕೊಟ್ಟು ಲಂಡನ್ ಗೆ ತೆರಳಿದರು.

"ಮೊದಲು ಅವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ಅವರು ನಿಮ್ಮನ್ನು ನೋಡಿ ನಗುತ್ತಾರೆ, ನಂತರ ಅವರು ನಿಮ್ಮೊಂದಿಗೆ ಹೋರಾಡುತ್ತಾರೆ, ನಂತರ ನೀವು ಗೆಲ್ಲುತ್ತೀರಿ." - ಮಹಾತ್ಮ ಗಾಂಧಿ

ಲಂಡನ್‌ನಲ್ಲಿ ಗಾಂಧೀಜಿ

ಲಂಡನ್‌ನಲ್ಲಿ ಗಾಂಧೀಜಿ

1888 ರಲ್ಲಿ ಮಹಾತ್ಮ ಗಾಂಧಿ ಕಾನೂನು ಅಧ್ಯಯನಕ್ಕಾಗಿ ಲಂಡನ್‌ಗೆ ತೆರಳಿದರು. ಲಂಡನ್ ತಲುಪಿದ 10 ದಿನಗಳ ನಂತರ, ಲಂಡನ್‌ನ ನಾಲ್ಕು ಕಾನೂನು ಕಾಲೇಜುಗಳಲ್ಲಿ ಒಂದಾದ ಇನ್ನರ್ ಟೆಂಪಲ್‌ಗೆ ಸೇರಿದರು. ಅಲ್ಲಿ ಕಾನೂನು ಅಧ್ಯಯನವನ್ನು ಮಾಡಲು ಆರಂಭಿಸಿದರು. ಲಂಡನ್ ನಲ್ಲಿ, ಅವರು ಸಸ್ಯಾಹಾರಿ ಸೊಸೈಟಿಯೊಂದಕ್ಕೆ ಸೇರಿ, ಅಲ್ಲಿ ಕೆಲವು ಸಸ್ಯಾಹಾರಿ ಸ್ನೇಹಿತರಿಂದ ಭಗವದ್ಗೀತೆಯನ್ನು ಓದಿದರು. ನಂತರ, ಭಗವದ್ಗೀತೆ ಅವರ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿತು.

ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ

ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ

ಮೇ, 1893 ರಲ್ಲಿ ಅವರು ವಕೀಲರಾಗಿ ಕೆಲಸ ಮಾಡಲು ದಕ್ಷಿಣ ಆಫ್ರಿಕಾಕ್ಕೆ ಹೋದರು. ಅಲ್ಲಿನ ಜನಾಂಗೀಯ ತಾರತಮ್ಯ ಗಾಂಧೀಜಿಯವರ ಮನಕಲುಕಿತು. ದಕ್ಷಿಣ ಆಫ್ರಿಕಾದ ರೈಲಿನ ಪ್ರಥಮ ದರ್ಜೆ ಭೋಗಿಯಲ್ಲಿ ಕೇವಲ ಬಿಳಿ ಜನರಿಗೆ ಮಾತ್ರ ಮೀಸಲಾಗಿದ್ದು, ಯಾವುದೇ ಭಾರತೀಯ ಅಥವಾ ಕಪ್ಪು ಜನರಿಗೆ ಪ್ರಯಾಣಿಸಲು ಅವಕಾಶವಿರಲಿಲ್ಲ. ಹಾಗಾಗಿ ಗಾಂಧೀಜಿಯವರು ಪ್ರಥಮ ದರ್ಜೆ ಟಿಕೆಟ್ ಹಿಡಿದಿದ್ದರೂ ಕೂಡ ಹೊರಹಾಕಲ್ಪಟ್ಟರು. ಈ ಘಟನೆ ಅವರ ಮೇಲೆ ಗಂಭೀರ ಪರಿಣಾಮ ಬೀರಿತು ಮತ್ತು ಜನಾಂಗೀಯ ತಾರತಮ್ಯದ ವಿರುದ್ಧ ಪ್ರತಿಭಟಿಸಲು ಗಾಂಧಿ ನಿರ್ಧರಿಸಿದರು. ಕೂಲಿಗಳು ಎಂದು ಅವಹೇಳನಕಾರಿಯಾಗಿ ಕರೆಯಲ್ಪಡುವ ಇತರ ಭಾರತೀಯರನ್ನು ನೋಡಿ ಇಲ್ಲಿ ಇಂಥ ಘಟನೆ ಸಾಮಾನ್ಯವಾಗಿದೆ ಎಂದು ಅವರು ಗಮನಿಸಿದರು.

ಈ ಅನ್ಯಾಯವನ್ನು ಸಹಿಸಿ ಸುಮ್ಮನೆ ಕೂರಲಿಲ್ಲ ಗಾಂಧೀಜಿ. ಮೇ 22, 1894 ರಂದು ಗಾಂಧಿ ನಟಾಲ್ ಇಂಡಿಯನ್ ಕಾಂಗ್ರೆಸ್ (ಎನ್ಐಸಿ) ಯನ್ನು ಸ್ಥಾಪಿಸಿದರು ಮತ್ತು ದಕ್ಷಿಣ ಆಫ್ರಿಕಾದ ಭಾರತೀಯರ ಹಕ್ಕುಗಳನ್ನು ಸುಧಾರಿಸಲು ಶ್ರಮಿಸಿದರು. ಅಲ್ಪಾವಧಿಯಲ್ಲಿ, ಗಾಂಧಿ ದಕ್ಷಿಣ ಆಫ್ರಿಕಾದ ಭಾರತೀಯ ಸಮುದಾಯದ ನಾಯಕರಾದರು.

ತಿರುಕ್ಕುರಲ್ ಪ್ರಾಚೀನ ಭಾರತೀಯ ಸಾಹಿತ್ಯವಾಗಿದ್ದು ಇದು ಮೂಲತಃ ತಮಿಳು ಭಾಷೆಯಲ್ಲಿತ್ತು ನಂತರ ವಿವಿಧ ಭಾಷೆಗಳಿಗೆ ಅನುವಾದಿಸಲ್ಪಟ್ಟಿತು.

ಈ ಪ್ರಾಚೀನ ಪುಸ್ತಕದಿಂದಲೂ ಕೂಡ ಗಾಂಧೀಜಿಯವರು ಸ್ಪೂರ್ತಿ ಪಡೆದಿದ್ದರು. ಸತ್ಯದ ಬಗೆಗಿನ ಭಕ್ತಿಯನ್ನು ಸಾರುವ ಸತ್ಯಾಗ್ರಹದ ಕಲ್ಪನೆಯಿಂದ ಅವರು ಪ್ರಭಾವಿತರಾದರು. ನಂತರ 1906 ರಲ್ಲಿ ಅಹಿಂಸಾತ್ಮಕ ಪ್ರತಿಭಟನೆಯನ್ನು ಆರಂಭಿಸಿದರು. ಅವರು ತಮ್ಮ ಜೀವನದ 21 ವರ್ಷಗಳನ್ನು ದಕ್ಷಿಣ ಆಫ್ರಿಕಾದಲ್ಲಿಯೇ ಕಳೆದು 1915 ರಲ್ಲಿ ಭಾರತಕ್ಕೆ ಮರಳಿದರು. ದಕ್ಷಿಣ ಆಫ್ರಿಕಾದಲ್ಲಿ ಇರುವಷ್ಟು ಕಾಲ ನಿಸ್ಸಂದೇಹವಾಗಿ, ಅಲ್ಲಿನ ನಾಗರಿಕ ಹಕ್ಕುಗಳಿಗಾಗಿ ಹೋರಾಡಿದರು ಹಾಗೂ ಸಫಲರಾದರು.ಭಾರತಕ್ಕೆ ಮರಳುವಾಗ ಹೊಸ ವ್ಯಕ್ತಿಯಾಗಿ, ನಾಯಕನಾಗಿ ಆಗಮಿಸಿದರು.

ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧಿಯವರ ಪಾತ್ರ

ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧಿಯವರ ಪಾತ್ರ

1915 ರಲ್ಲಿ, ಗಾಂಧೀಜಿ ಶಾಶ್ವತವಾಗಿ ಭಾರತಕ್ಕೆ ಮರಳಿದರು. ಭಾರತದಲ್ಲಿ ಗೋಪಾಲ್ ಕೃಷ್ಣ ಗೋಖಲೆ ಅವರೊಂದಿಗೆ ಅವರ ಮಾರ್ಗದರ್ಶಕರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ್ನು ಸೇರಿದರು. ಗಾಂಧಿಯವರ ಮೊದಲ ಪ್ರಮುಖ ಸಾಧನೆಯೆಂದರೆ 1918 ರಲ್ಲಿ ಅವರು ಬಿಹಾರ ಮತ್ತು ಗುಜರಾತ್‌ನ ಚಂಪಾರಣ್ಯ ಮತ್ತು ಖೇಡಾ ಆಂದೋಲನಗಳನ್ನು ಮುನ್ನಡೆಸಿದ್ದು. ನಂತರದ ದಿನಗಳಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ, ಕಾನೂನು ಅಸಹಕಾರ ಚಳವಳಿ, ಸ್ವರಾಜ್ ಮತ್ತು ಕ್ವಿಟ್-ಇಂಡಿಯಾ ಚಳುವಳಿಯ ನೇತೃತ್ವ ವಹಿಸಿದ್ದರು.

ಮಹಾತ್ಮ ಗಾಂಧಿ ಸತ್ಯಾಗ್ರಹ

ಮಹಾತ್ಮ ಗಾಂಧಿ ಸತ್ಯಾಗ್ರಹ

ಗಾಂಧಿಯವರು ತಮ್ಮ ಒಟ್ಟಾರೆ ಅಹಿಂಸಾತ್ಮಕ ವಿಧಾನವನ್ನು ಸತ್ಯಾಗ್ರಹ ಎಂದು ಗುರುತಿಸಿದ್ದಾರೆ. ಸ್ವಾತಂತ್ರ್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ನೆಲ್ಸನ್ ಮಂಡೇಲಾ ಮತ್ತು ಮಾರ್ಟಿನ್ ಲೂಥರ್ ಅವರಂತಹ ಪ್ರಖ್ಯಾತ ವ್ಯಕ್ತಿಗಳು ಗಾಂಧೀಜಿಯವರ ಸತ್ಯಾಗ್ರಹ ತತ್ವವನ್ನು ಅಳವಡಿಸಿಕೊಂಡಿದ್ದರು. ಮಹಾತ್ಮ ಗಾಂಧಿಯವರ ಸತ್ಯಾಗ್ರಹವು ನಿಜವಾದ ತತ್ವಗಳು ಮತ್ತು ಅಹಿಂಸೆಯನ್ನು ಆಧರಿಸಿದೆ. ಹಾಗಾಗಿ ಇದು ಭಾರತದಲ್ಲಿ ಸ್ವಾತಂತ್ರ್ಯ ಗಳಿಸಲೂ ಕೂಡ ಮುಖ್ಯ ಕಾರಣವಾಯಿತು.

"ನಾಳೆಯೇ ಸಾಯುತ್ತೇನೆ ಎಂದು ಭಾವಿಸಿ ಇಂದು ಬದುಕು. ಶಾಶ್ವತವಾಗಿ ಬದುಕಬೇಕು ಎಂದು ಭಾವಿಸಿ ಪ್ರತಿದಿನ ಕಲಿ." - ಮಹಾತ್ಮ ಗಾಂಧಿ

ಮಹಾತ್ಮ ಗಾಂಧಿ ಮರಣ

ಮಹಾತ್ಮ ಗಾಂಧಿ ಮರಣ

ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರು 30 ಜನವರಿ 1948 ರಂದು ನಾಥುರಾಮ್ ಗೋಡ್ಸೆಯವರ ಗುಂಡೆಟಿಗೆ ಬಲಿಯಾದರು. ಗೋಡ್ಸೆ ಹಿಂದೂ ರಾಷ್ಟ್ರೀಯವಾದಿ ಮತ್ತು ಹಿಂದೂ ಮಹಾಸಭಾ ಸದಸ್ಯರಾಗಿದ್ದರು. ಗಾಂಧಿಯವರು ಪಾಕಿಸ್ತಾನದ ಪರವಾಗಿದ್ದಾರೆಂದು ಅವರು ಆರೋಪಿಸಿದರು ಮತ್ತು ಅವರ ಅಹಿಂಸೆಯ ಸಿದ್ಧಾಂತವನ್ನು ವಿರೋಧಿಸಿದ್ದರು.

"ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆ ಮೊದಲು ನೀವೇ ಆಗಬೇಕು." - ಮಹಾತ್ಮ ಗಾಂಧಿ

ಮಹಾತ್ಮ ಗಾಂಧಿ ಸಾಹಿತ್ಯ ಕೃತಿಗಳು

ಮಹಾತ್ಮ ಗಾಂಧಿ ಸಾಹಿತ್ಯ ಕೃತಿಗಳು

ಗಾಂಧಿ ಸಮೃದ್ಧ ಬರಹಗಾರರಾಗಿದ್ದರು. ಅವರ ಕೆಲವು ಸಾಹಿತ್ಯ ಕೃತಿಗಳು ಹೀಗಿವೆ:

  • ಹಿಂದ್ ಸ್ವರಾಜ್, 1909 ರಲ್ಲಿ ಗುಜರಾತಿ ಭಾಷೆಯಲ್ಲಿ ಪ್ರಕಟವಾಯಿತು.
  • ಗಾಂಧೀಜಿವರು ಹಲವು ಪತ್ರಿಕೆಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು. ಗುಜರಾತಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿದ್ದ 'ಹರಿಜನ್' ಸೇರಿದಂತೆ ಇಂಗ್ಲೀಷ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ 'ಇಂಡಿಯನ್ ಒಪಿನಿಯನ್' ಮತ್ತು 'ಯಂಗ್ ಇಂಡಿಯಾ', ಹಾಗೂ ಗುಜರಾತಿ ಭಾಷೆಯ ಮಾಸಿಕ 'ನವಜೀವನ್' ಪತ್ರಿಕೆಗಳ ಸಂಪಾದಕರಾಗಿದ್ದರು.
  • ಗಾಂಧಿ ಅವರು ತಮ್ಮ ಆತ್ಮಚರಿತ್ರೆ, ದಿ ಸ್ಟೋರಿ ಆಫ್ ಮೈ ಎಕ್ಸ್‌ಪೆರಿಮೆಂಟ್ಸ್ ವಿಥ್ ಟ್ರುತ್ ಅನ್ನು ಸಹ ಬರೆದಿದ್ದಾರೆ.
  • ಗಾಂಧಿಯವರ ಇತರ ಆತ್ಮಚರಿತ್ರೆಗಳೆಂದರೆ: ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ, ಹಿಂದ್ ಸ್ವರಾಜ್ ಅಥವಾ ಇಂಡಿಯನ್ ಹೋಮ್ ರೂಲ್.

    ಮಹಾತ್ಮ ಗಾಂಧಿ: ಪ್ರಶಸ್ತಿಗಳು

    • 1930 ರಲ್ಲಿ, ಟೈಮ್ಸ್ ನಿಯತಕಾಲಿಕೆಯು ಗಾಂಧಿಯನ್ನು ವರ್ಷದ ಪುರುಷ ಎಂದು ಗೌರವಿಸಿತು.
    • 2011 ರಲ್ಲಿ, ಟೈಮ್ ನಿಯತಕಾಲಿಕವು ಗಾಂಧಿಯನ್ನು ಸಾರ್ವಕಾಲಿಕ ಶ್ರೇಷ್ಠ 25 ರಾಜಕೀಯ ಮುತ್ಸದ್ಧಿಗಳಲ್ಲಿ ಒಬ್ಬರೆಂದು ಗುರುತಿಸಿದೆ.
    • 1937 ಮತ್ತು 1948 ರ ನಡುವೆ ಐದು ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರೂ ಗಾಂಧೀಜಿಯವರು ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ.
    • ವಿಶೇಷವಾಗಿ ಸಾಮಾಜಿಕ ಕಾರ್ಯಕರ್ತರು, ವಿಶ್ವ ನಾಯಕರು ಮತ್ತು ನಾಗರಿಕರಿಗೆ ಭಾರತ ಸರ್ಕಾರ ವಾರ್ಷಿಕ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲು ಆರಂಭಿಸಿತು. ವರ್ಣಭೇದ ನೀತಿಯ ವಿರುದ್ಧದ ದಕ್ಷಿಣ ಆಫ್ರಿಕಾದ ಹೋರಾಟದ ನಾಯಕ ನೆಲ್ಸನ್ ಮಂಡೇಲಾ ಈ ಪ್ರಶಸ್ತಿಗೆ ಭಾಜನರಾಗಿದ್ದರು.
    • "ನೀವು ಏನು ಯೋಚಿಸುತ್ತೀರಿ, ಏನು ಹೇಳುತ್ತೀರಿ ಮತ್ತು ನೀವು ಏನು ಮಾಡುತ್ತಿದ್ದೀರಿ ಎಂಬುದು ಒಂದೇ ಆಗಿರುವುದೇ ಖುಷಿ." (ನುಡಿದಂತೆ ನಡೆ) - ಮಹಾತ್ಮ ಗಾಂಧಿ

      ಮಹಾತ್ಮ ಗಾಂಧಿ ಚಲನಚಿತ್ರ

      ಮಹಾತ್ಮ ಗಾಂಧಿ ಚಲನಚಿತ್ರ

      ಬೆನ್ ಕಿಂಗ್ಸ್ಲೆ 1982 ರಲ್ಲಿ 'ಗಾಂಧಿ' ಚಿತ್ರದಲ್ಲಿ ಮಹಾತ್ಮ ಗಾಂಧಿಯವರ ಪಾತ್ರವನ್ನು ನಿರ್ವಹಿಸಿದ್ದರು, ಅತ್ಯುತ್ತಮ ಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಇದು ಗೆದ್ದುಕೊಂಡಿತು.

      ಮಹಾತ್ಮ ಗಾಂಧಿಯವರು ಅಹಿಂಸೆ, ಸತ್ಯ, ದೇವರಲ್ಲಿ ನಂಬಿಕೆ ಎಂಬ ಸಂದೇಶವನ್ನು ಹರಡುತ್ತ ಇಂದಿಗೂ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಸಾಕಷ್ಟು ಹೋರಾಟಗಾರರಿಗೆ ಸ್ಪೂರ್ತಿ ನೀಡಿದೆ. ಅವರ ಸತ್ಯಾಗ್ರಹ ಹಾಗೂ ಬದುಕುವ ರೀತಿ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿನ ವಿವಿಧ ನಾಯಕರಿಗೂ, ಯುವಕರಿಗೂ ಇಂದಿಗೂ ಸ್ಫೂರ್ತಿದಾಯಕ. ಭಾರತೀಯ ಇತಿಹಾಸದಲ್ಲಿ, ಗಾಂಧೀಜಿ ಅವರನ್ನು ಅತ್ಯಂತ ಪ್ರಮುಖ ವ್ಯಕ್ತಿ ಮತ್ತು ಧೋತಿ ಧರಿಸಿದ ಸರಳ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಅವರು ಸ್ವರಾಜ್ ಸಂದೇಶವನ್ನು ಹರಡಿದರು ಮತ್ತು ಸ್ವತಂತ್ರರಾಗಿರುವುದು ಹೇಗೆ ಎಂದು ಭಾರತೀಯರಿಗೆ ಕಲಿಸಿದರು.

      ಮಹಾತ್ಮ ಗಾಂಧಿ, ಭಾರತದಲ್ಲಿ ಮಾತ್ರವಲ್ಲದೇ ಇತರ ದೇಶಗಳಲ್ಲಿಯೂ ಇಂದಿಗೂ ನೆನಪಿನಲ್ಲಿ ಉಳಿಯುವುದಕ್ಕೆ ಅವರ ಧೀಮಂತ ವ್ಯಕ್ತಿತ್ವ ಹಾಗೂ ಅವರ ಸರಳ ನಡವಳಿಕೆಗಳೇ ಕಾರಣ. ಹಾಗಾಗಿ ಇಂದಿಗೂ ಅಮ್ಮಲ್ಲಿ ಗಾಂಧಿ ಜಯಂತಿ ಸಾಕಷ್ಟು ಮಹತ್ವವನ್ನು ಕಾಯ್ದುಕೊಂಡಿದೆ.

English summary

Gandhi Jayanthi 2020: Mahatma Gandhi Biography: Family, History, Movements and Facts

Here we are discussing about Mahatma Gandhi Biography: Family, History, Movements and Facts. Mohandas Karamchand Gandhi or Mahatma Gandhi was a renowned freedom activist and an authoritative or powerful political leader who had played an important role in India's struggle for Independence against the British rule of India Read more.
X
Desktop Bottom Promotion