For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ 2021: ವಿನಾಯಕನಿಂದ ನಾವು ಕಲಿಯಲೇಬೇಕಾದ ಐದು ಸದ್ಗುಣಗಳಿವು

|

ಸಂಕಷ್ಟ ನಿವಾರಕ, ವಿನಾಯಕ ಎಲ್ಲರ ನೆಚ್ಚಿನ ದೇವನೂ ಹೌದು, ಗೆಳೆಯನೂ ಹೌದು. ಇಂದು ಆ ಸಂಕಷ್ಟ ನಿವಾರಕನ ಜನ್ಮ ದಿನ. ಗಣೇಶ ಚತುರ್ಥಿಯ ವಿಶೇಷ ಎಲ್ಲರ ಮನೆಗಳಲ್ಲೂ ಗೌರಿ ಸುತ ಗಣೇಶನಿಗೆ ಬಗೆ ಬಗೆಯ ತಿಂಡಿ, ಹಣ್ಣುಗಳಿಟ್ಟು, ಹೂಗಳಿಂದ ಅಲಂಕರಿಸಿ ಅದ್ಧೂರಿ ಪೂಜೆಗಳು ನೆರವೇರುತ್ತದೆ.

ಪೂಜೆಗೆ ಎಂದಿಗೂ ಮೊದಲ ಆದ್ಯತೆ ನಮ್ಮ ಏಕದಂತನಿಗೆ ಸಲ್ಲುತ್ತದೆ. ಮಹಾನ್ ದೇವತೆಗಳ ನಡುವೆ ಗೌರಿಮಹೇಶ್ವರ ಸುತನಿಗೇ ಏಕೆ ಮೊದಲ ಪ್ರಾಧಾನ್ಯತೆ ಎಂದರೆ ಆತನ ಮಹಾನ್ ಜೀವನಶೈಲಿ ಮತ್ತು ಜೀವನಪಾಠ.

Life Lessons To Learn From Lord Ganesha

ವಿನಾಯಕ ತನ್ನ ಜೀವನದಲ್ಲಿ ಹಲವು ಸಂಕಷ್ಟ, ಸಂಕೋಲೆಗಳ ನಡುವೆಯೂ ಮಾದರಿ ಜೀವನವನ್ನು ನಡೆಸಿದ್ದಾನೆ. ಆತನ ಸಾಕಷ್ಟು ಜೀವನಕಲೆಗಳಲ್ಲಿ ಕೆಲವು ಸಂಗತಿಗಳ ಬಗ್ಗೆ ಇಲ್ಲಿ ಚರ್ಚಿಸಿದ್ದೇವೆ.

2021ರ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್‌ 10ರಂದು ಆಚರಿಸಲಾಗುತ್ತಿದೆ. ಈ ವಿಶೇಷ ಗಣಪನ ಪೂಜೆಯ ಮೂಲಕ ಆತನ ತನ್ನ ಜೀವನದಲ್ಲಿ ಅಳವಡಿಕೊಂಡ ಕೆಲವು ಪಾಠಗಳನ್ನು ನಾವು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ನಡೆಸೋಣವೇ?.

ಕರ್ತವ್ಯ ಮೊದಲು ಉಳಿದದ್ದು ನಂತರ

ಕರ್ತವ್ಯ ಮೊದಲು ಉಳಿದದ್ದು ನಂತರ

ಎಲ್ಲರಿಗೂ ತಿಳಿದಿರುವಂತೆ ಗೌರಿ ಗಣೇಶನ ಮೂರ್ತಿಯನ್ನು ಮಾಡಿ, ಜೀವಕೊಟ್ಟು ತನ್ನನ್ನು ಕಾಯುವಂತೆ ಸೂಚಿಸುತ್ತಾಳೆ. ಇದೇ ವೇಳೆ ಶಿವ ತನ್ನ ಪತ್ನಿಯನ್ನು ನೋಡಲೆಂದು ಬಂದಾಗ ಅದಕ್ಕೆ ಅಪ್ಪಣೆ ನೀಡದ ಗಣೇಶ ಶಿವನಿಂದ ಶಿರಚ್ಛೇದನಕ್ಕೆ ಒಳಗಾಗುತ್ತಾನೆ. ನಂತರ ಶಿವನಿಂದಲೇ ಗಜಮುಖನಾಗಿ ಜೀವ ಪಡೆಯುತ್ತಾನೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಾಯಿ ತನಗೆ ನೀಡಿದ ಕರ್ತವ್ಯ ಪಾಲಿಸಲು ತನ್ನ ಜೀವವನ್ನು ಲೆಕ್ಕಿಸದೇ ತಂದೆಯೊಂದಿಗೇ ಯುದ್ಧಕ್ಕೆ ಮುಂದಾಗುತ್ತಾನೆ. ಅಲ್ಲದೆ ದೇವಾನು ದೇವತೆಗಳು ಸಹ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಿದ್ದರು ಎಂಬುದು. ಗಣೇಶನ ಈ ಕರ್ತವ್ಯ ಪಾಲನೆಯಿಂದಲೇ ಇಂದು ಸಹ ಗಣಪ ಎಲ್ಲರ ಮೊದಲ ಅದ್ಯತೆ.

ಪೋಷಕರಿಗಿಂತ ಹೆಚ್ಚು ಬೇರೇನಿಲ್ಲ

ಪೋಷಕರಿಗಿಂತ ಹೆಚ್ಚು ಬೇರೇನಿಲ್ಲ

ಪೋಕಷರೇ ತನ್ನ ಪ್ರಪಂಚ, ಇದಕ್ಕಿಂತ ಹೆಚ್ಚು ಬೇರೆ ವಿಶ್ವವಿಲ್ಲ ಎಂದು ಮೊದಲು ಸಾರಿದ್ದು ಗಣಪನೇ. ಒಮ್ಮೆ ಶಿವ ಮತ್ತು ಗೌರಿ ವಿದ್ಯೆ ಎಂಬ ಫಲವನ್ನು ನೀಡಲು ಸುಬ್ರಮಣ್ಯ ಹಾಗೂ ಗಣೇಶನಿಗೆ ಪರೀಕ್ಷೆ ನೀಡುತ್ತಾರೆ. ಇಡೀ ವಿಶ್ವವನ್ನು ಯಾರು ಮೊದಲು ಸುತ್ತಿ ಬರುತ್ತಾರೋ ಅವರಿಗೆ ವಿದ್ಯೆಯ ಫಲ ಸಿಗುತ್ತದೆ ಎನ್ನುತ್ತಾರೆ. ಕೂಡಲೇ ಸುಬ್ರಹ್ಮಣ್ಯ ತನ್ನ ವಾಹನ ನವಿಲನ್ನು ಏರಿ ವಿಶ್ವಪರ್ಯಟನೆಗೆ ಹೊರಟರೆ, ಇತ್ತ ಗಣೇಶ ತನ್ನ ಪುಟ್ಟ ವಾಹನ ಇಲಿಯನ್ನೇರಿ ತಾನು ಹೇಗೆ ವಿಶ್ವ ಸುತ್ತಲಿ ಎಂದು ಚಿಂತಾಕ್ರಾಂತನಾಗುತ್ತಾನೆ. ಕೂಡಲೇ ಬುದ್ದಿವಂತನಾದ ಗಣೇಶ ತನ್ನ ತಂದೆ-ತಾಯಿಯೇ ತನ್ನ ಪ್ರಪಂಚ ಎಂದು ಶಿವ-ಗೌರಿಯನ್ನೇ ಮೂರು ಬಾರಿ ಸುತ್ತಿ ಪೋಷಕರ ಮನ ಗೆದ್ದು ವಿದ್ಯೆಯ ಫಲವನ್ನು ಪಡೆಯುತ್ತಾನೆ. ಈ ಮೂಲಕ ಗಣೇಶ ವಿದ್ಯಾದೇವತೆಯಾಗಿಯೂ ಹೆಸರುವಾಸಿಯಾಗುತ್ತಾನೆ. ಒಬ್ಬ ಪುತ್ರನಾಗಿ ಗಣೇಶ ಗೌರಿಶಿವನಿಗೆ ಗೌರವ ತಂದುಕೊಟ್ಟಿದ್ದಾನೆ.

ಗಣೇಶ ಚತುರ ಬುದ್ದಿಯ ಜತೆಗೆ ಆತ ಪೋಷಕರಿಗೆ ನೀಡಿದ್ದ ಪ್ರಾಮುಖ್ಯತೆ ಹೆಚ್ಚು ಪ್ರಶಂಸನೀಯ. ಗಣೇಶನ ಈ ಪಾಠ ಇಂದಿಗೂ ಹಲವು ಮನೆಗಳಲ್ಲಿ ಮಕ್ಕಳು ಪೋಷಕರನ್ನು ದೇವರಂತೆ ಕಾಣಲು ಕಾರಣವಾಗಿದೆ. ಇಂದಿನ ಮಕ್ಕಳಿಗೂ ಇದು ಹೆಚ್ಚು ಅನ್ವಯಿಸುತ್ತದೆ.

ಕ್ಷಮೆಯೇ ಅಂತಿಮ ಸದ್ಗುಣ

ಕ್ಷಮೆಯೇ ಅಂತಿಮ ಸದ್ಗುಣ

ಗಣೇಶನ ಕ್ಷಮಾ ಗುಣದಿಂದಲೇ ನಾವೆಲ್ಲಾ ಇಂದು ಹುಣ್ಣಿಮೆ ಚಂದ್ರನ ಅಂದವನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ ಎಂಬುದು ನಿಮಗೆ ಗೊತ್ತೇ.

ಒಮ್ಮೆ ಗಣಪ ಊಟದ ಬಳಿಕ ಇಲಿಯ ಮೇಲೆ ಹೋಗುತ್ತಿದ್ದಾಗ ದಾರಿಯಲ್ಲಿ ಹಾವನ್ನು ಕಂಡು ಇಲಿ ಬೆದರಿ ಗಣಪನನ್ನು ಬೀಳಿಸಿತಂತೆ. ಗಣೇಶನ ಒಂದು ದಂತ ಮುರಿದು ಊಟವೆಲ್ಲಾ ಚೆಲ್ಲಿತ್ತಂತೆ. ಹಾವನ್ನು ಹೊಟ್ಟೆಗೆ ಕಟ್ಟಿಕೊಂಡು ಆಹಾರವನ್ನು ಮತ್ತೆ ಸಂಗ್ರಹಿಸುತ್ತಿದ್ದುದನ್ನು ಕಂಡ ಚಂದ್ರ ಅವಹೇಳನ ಮಾಡಿದನಂತೆ. ಚಂದ್ರನ ಅಹಂಕಾರದಿಂದ ಸಿಟ್ಟಾದ ಗಣಪ ಅಂದಿನ ದಿನದಿಂದ ಚಂದ್ರನನ್ನು ಯಾರೂ ನೋಡದಂತಾಗಲಿ ಎಂದು ಶಪಿಸಿದನಂತೆ. ತನಗೆ ದೊರೆತ ಈ ಭೀಕರ ಶಾಪವನ್ನು ಎಂದೂ ನಿರೀಕ್ಷಿಸದಿದ್ದ ಚಂದ್ರನ ಅಹಂಕಾರವೆಲ್ಲಾ ಥಟ್ಟನೇ ಇಳಿದು ಚಿಂತಾಕ್ರಾಂತನಾದ. ನಂತರ ದೇವತೆಗಳ ಮಧ್ಯಸ್ಥಿಕೆಯಲ್ಲಿ ಬಹಳ ಪ್ರಯತ್ನದ ಬಳಿಕ ಗಣೇಶ ಈ ಶಾಪವನ್ನು ಇಡಿಯ ವರ್ಷಕ್ಕೆ ಅನ್ವಯವಾಗುವ ಬದಲು ಗಣೇಶ ಚತುರ್ಥಿಯಂದು ಮಾತ್ರವೇ ಅನ್ವಯಿಸುವಂತೆ ಶಾಪವನ್ನು ಬದಲಿಸಿದನಂತೆ.

ಅಹಂಕಾರದಿಂದ ಮೆರೆದವರಿಗೆ ಬುದ್ದಿಕಲಿಸುವ ಗಣೇಶ ಗುಣ ಹಾಗೂ ಸಂದರ್ಭಾನುಸಾರ ಹಿರಿಯರ ಅಣತಿಯಂತೆ ಶಾಪವನ್ನು ಬದಲಿಸಿದ ಗುಣ ಎಲ್ಲರಿಗೂ ಒಲಿಯಬೇಕಿದೆ. ಶಾಪಕೊಟ್ಟರೂ ಮಾನವೀಯ ಗುಣ ಮೆರೆದು ಕ್ಷಮಿಸಿದ ದೊಡ್ಡ ಮನಸ್ಸು ಮುಖ್ಯವಾಗುತ್ತದೆ. ಅದರಲ್ಲೂ ಇಂದಿನ ಪೀಳಿಗೆಗೆ ದ್ವೇಷ, ಹಠ ಶಾಶ್ವತವಲ್ಲ, ಕ್ಷಮಾ ಗುಣವಿರಬೇಕು ಎಂಬ ನೀತಿಪಾಠ ಸಾಕಷ್ಟು ಅಗತ್ಯವಿದೆ.

ಕೈಗೆತ್ತಿಕೊಂಡ ಕೆಲಸ ಪೂರ್ತಿಗೊಳಿಸದೇ ಬಿಡಬಾರದು

ಕೈಗೆತ್ತಿಕೊಂಡ ಕೆಲಸ ಪೂರ್ತಿಗೊಳಿಸದೇ ಬಿಡಬಾರದು

ಗಣೇಶನು ಮಹಾಭಾರತವನ್ನು ಬರೆದರು ಎಂದು ಪೌರಾಣಿಕ ಕಥೆಗಳು ಹೇಳುತ್ತದೆ. ಒಮ್ಮೆ ವೇದವ್ಯಾಸರು ಮಹಾಭಾರತವನ್ನು ಬರೆಯಲು ಗಣೇಶನಿಗೆ ಆಜ್ಞಾಪಿಸುತ್ತಾನೆ. ವ್ಯಾಸರು ಮಹಾಭಾರತವನ್ನು ಓದುತ್ತಿದ್ದರೆ ಗಣೇಶ ಎಲ್ಲಿಯೂ ನಿಲ್ಲಿಸದೇ, ನಿರರ್ಗಳವಾಗಿ ಬರೆಯಬೇಕು ಎಂಬ ಷರತ್ತಿನಲ್ಲಿ ಮಹಾಭಾರತ ರಚನೆ ಆರಂಭವಾಗುತ್ತದೆ. ಹೀಗೆ ಬರೆಯುವ ನಡುವೆ ಗಣೇಶನ ಪೆನ್ನು ಮುರಿದು ಹೋಗುತ್ತದೆ, ಈ ವೇಳೆ ಆತನ ತನ್ನ ದಂತವನ್ನೇ ಮುರಿದು ಸಂಪೂರ್ಣ ಮಹಾಕಾವ್ಯವನ್ನು ರಚಿಸುತ್ತಾನೆ.

ಆಜ್ಞೆಯನ್ನು, ಕರ್ತವ್ಯವನ್ನು ಪಾಲಿಸಲು ಯಾವುದೇ ಅಡೆತಡೆ ಬಂದರೂ ಲೆಕ್ಕಿಸದೇ ಮತ್ತೊಂದು ದಾರಿ ಹುಡುಕಿ ಗುರಿ ತಲುಪುವ ಈ ಪಾಠವನ್ನು ನಾವು-ನೀವೆಲ್ಲಾ ಜೀವನದಲ್ಲಿ ಪಾಲಿಸಿದರೇ ನಮ್ಮ ಯಶಸ್ಸನ್ನು ತಡೆಯ ಯಾರಿಂದಲೂ ಸಾಧ್ಯವಿಲ್ಲ.

ಸ್ವಾಭಿಮಾನದ ಪರ ಎಂದಿಗೂ ನಿಲ್ಲಬೇಕು

ಸ್ವಾಭಿಮಾನದ ಪರ ಎಂದಿಗೂ ನಿಲ್ಲಬೇಕು

ಗಣೇಶ ಎಂದಿಗೂ ಸ್ವಾಭಿಮಾನದ ಸಂಕೇತ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿ. ಲಕ್ಷ್ಮಿದೇವಿಯ ವಾಸಸ್ಥಾನಕ್ಕೆ ವಿಷ್ಣುವಿನ ವಿವಾಹ ಮಹೋತ್ಸವದ ಮೆರವಣಿಗೆಯು ಹೊರಟಿರುತ್ತದೆ, ಇದಕ್ಕೆ ಎಲ್ಲಾ ದೇವಾನುದೇವತೆಗಳು ಸ್ವರ್ಗಲೋಕದಿಂದ ಹೊರಡುತ್ತಾರೆ. ಈ ವೇಳೆ ಸ್ವರ್ಗಲೋಕವನ್ನು ಕಾಯಲೆಂದು ಗಣೇಶನಿಗೆ ವಹಿಸುತ್ತಾರೆ, ಆದರೆ ಗಣೇಶನ ಆಕೃತಿಯಿಂದಾಗಿ ಆವನು ಮದುವೆಗೆ ಬರುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ತನ್ನನ್ನು ಇಲ್ಲೆ ಉಳಿಸಿಹೋಗಿದ್ದಾರೆ ಎಂದು ತಿಳಿದ ಗಣೇಶ ತನ್ನ ವಾಹನ ಮೂಷಿಕನ ಮೂಲಕ ತಕ್ಕ ಪಾಠ ಕಲಿಸಲು ಮುಂದಾಗುತ್ತಾನೆ.

ಮದುವೆ ದಿಬ್ಬಣ ಹೋಗುವ ಮಾರ್ಗದಲ್ಲಿ ಇಲಿಯು ರಸ್ತೆಯನ್ನು ಅಗೆದು ಹಳ್ಳ ಮಾಡುವಂತೆ ಸೂಚನೆ ನೀಡುತ್ತಾನೆ. ಇದನ್ನು ಚಾಚು ತಪ್ಪದೆ ಪಾಲಿಸಿದ ಮೂಷಿಕನ ಅವಾಂತರದಿಂದ ದಿಬ್ಬಣ ಹಳ್ಳದಲ್ಲಿ ಸಿಲುಕುತ್ತದೆ. ಈ ವೇಳೆ ದೇವತೆಗಳು ಅಲ್ಲೇ ರಸ್ತೆ ಪಕ್ಕ ಹೋಗುತ್ತಿದ್ದ ರೈತನ ಸಹಾಯ ಪಡೆಯುತ್ತಾರೆ, ರೈತ ಮೊದಲಿಗೆ ಗಣೇಶನನ್ನು ಸ್ಮರಿಸುತ್ತಾ ದಿಬ್ಬಣವನ್ನು ಎಳೆಯುತ್ತಾನೆ. ನಂತರ ರೈತ ಗಣೇಶ ಸ್ಮರಣೆಯಿಂದ ಗಾಡಿಯನ್ನು ಎಳೆಯಲು ಶಕ್ತಿ ಬಂದಿತು ಎಂದು ಹಾಗೂ ಅವನು ಸಕಲ ಸಂಕಷ್ಟಗಳ ನಿವಾರಕ ಎಂದು ಶ್ಲಾಘಿಸುತ್ತಾನೆ.

ಈ ಘಟನೆ ತಮ್ಮ ಅಂದ, ಸೌಂದರ್ಯ ಕಂಡು ಕೀಳರಿಮೆ ಪಡುವವರಿಗೆ ಬಹಳ ಸೂಕ್ತವಾಗುತ್ತದೆ. ನಮ್ಮ ಮೇಲೆ ಮೊದಲು ನಮಗೆ ಹೆಮ್ಮೆ ಇರಬೇಕು. ಪ್ರಪಂಚ ಸೌಂದರ್ಯಕ್ಕಿಂತ ಗುಣ, ನಡತೆಗೆ ಹೆಚ್ಚು ಗೌರವ, ಮರ್ಯಾದೆ ನೀಡುತ್ತದೆ ಎಂಬುದನ್ನು ಎಲ್ಲರು ನೆನಪಿನಲ್ಲಿಡಬೇಕು.

English summary

Ganesha Chaturthi 2021: Life Lessons To Learn From Lord Ganesha

Lord Ganesha, the Elephant God, is not only the Lord of Beginnings and Remover of Obstacles, but also a teacher if you pay close attention to the tales of Hindu mythology. Also known as Ekdant, his anecdotes form an integral part of Hindu mythology and impart great life lessons to his followers. We can all learn a thing or two about life from these tales.
X
Desktop Bottom Promotion