For Quick Alerts
ALLOW NOTIFICATIONS  
For Daily Alerts

ವಿಶ್ವ ದಾದಿಯರ ದಿನ: ಕೋವಿಡ್ 19 ಪರಿಸ್ಥಿತಿ ಕುರಿತು ನರ್ಸ್‌ಯೊಬ್ಬರು ಹೇಳುವುದನ್ನು ಕೇಳಿದರೆ ನಿಮ್ಮ ಎದೆ ಭಾರವಾಗುವುದು

|

ಈ ಕೊರೊನಾ ಸಂಕಷ್ಟದ ಸಮಯದಲ್ಲಿ ನಮ್ಮ ಜಾತಿ, ಧರ್ಮದ ದೇವರುಗಳಿಗಿಂತ ನಾವೆಲ್ಲಾ ಹೆಚ್ಚಾಗಿ ನಂಬಿರುವುದು ನಮ್ಮ ಮುಂದೆ ಇರುವ ವೈದ್ಯ ಹಾಗೂ ನರ್ಸ್ ರೂಪದ ದೇವರನ್ನು. ಅದರಲ್ಲೂ ನರ್ಸ್‌ಗಳು ರೋಗಿಗಳಿಗೆ ಮಾಡುವ ಸೇವೆ ವೈದ್ಯರಿಗಿಂತ ತುಸು ಅಧಿಕವೇ ಇರುತ್ತದೆ ಎಂದರೆ ಖಂಡಿತ ತಪ್ಪಾಗಲಾರದು.

ಪ್ರಾಣಕ್ಕೆ ಹೋರಾಡಿ ಐಸಿಯುವಿನಲ್ಲಿ ಮಲಗಿ ಚೇತರಿಸಿಕೊಂದು ಬಂದವರಿಗೆ, ಯಾವುದಾದರೂ ಸರ್ಜರಿಗೆ ಒಳಗಾದವರಿಗೆ ನರ್ಸ್‌ಗಳ ಸೇವೆ ಎಂಥದ್ದು ಎಂಬುವುದು ಖಂಡಿತ ಅನುಭವಕ್ಕೆ ಬಂದಿರುತ್ತದೆ. ವೈದ್ಯರು ಬಂದು ಪರಿಶೀಲಿಸಿ ರೋಗಿಗೆ ಬೇಕಾದ ಔಷಧಿಯ prescription ಕೊಟ್ಟರೆ, ಅವುಗಳನ್ನು ಚಾಚೂ ತಪ್ಪದೆ ಪಾಲಿಸಿ, ರಾತ್ರಿಯೆಲ್ಲಾ ನಿದ್ದೆ ಕೆಟ್ಟು ದೇಹಕ್ಕೆ ಗ್ಲೂಕೋಸ್ ಹಾಕುತ್ತಾ, ಆಕ್ಸಿಜನ್ ನೀಡುತ್ತಾ ರೋಗಿಯನ್ನು ನೋಡುವ ಪರಿ ಇದೆಯೆಲ್ಲಾ ಆಗ ಅವರು ದೇವ ರೂಪದ ದೇವತೆಯರು ಎಂದು ಎಂಥವರಿಗೂ ಅನಿಸುವುದು.

ಅದರಲ್ಲೂ ಈ ಕೊರೊನಾ ಕಾಲದಲ್ಲಿ ಅವರ ಸೇವೆ ಇದೆಯೆಲ್ಲಾ ಅದಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಈ ಸಮಯ ಅವರ ಬದುಕಿನ ಅತೀ ಸಂಕಷ್ಟದ ಸಮಯವಾಗಿದೆ. ಮನೆಯಲ್ಲಿ ಪುಟ್ಟ ಮಗುವಿರುತ್ತದೆ, ವಯಸ್ಸಾದ ತಂದೆ-ತಾಯಿ ಇರುತ್ತಾರೆ, ಆದರೆ ಅವರೆನ್ನೆಲ್ಲಾ ಬಿಟ್ಟು ವೃತ್ತಿ ಕರ್ತವ್ಯ ನೆನೆದು ಕೆಲಸಕ್ಕೆ ಬರುತ್ತಿದ್ದಾರೆ, ಅವರೇನು ಸುಮ್ಮನೆ ಬರಲ್ಲ, ಸಂಬಳಕ್ಕೆ ತಾನೇ ದುಡಿಯುವುದು ಎಂದು ಯಾರು ಅಂದುಕೊಳ್ಳುತ್ತಾರೋ ಅವರು ಮನುಷ್ಯರೇ ಅಲ್ಲ...

ಸಂಬಳಕ್ಕೆ ಮಾತ್ರವಾದರೆ ಎಷ್ಟೋ ನರ್ಸ್‌ಗಳು ಇಂದು ಕೆಲಸಕ್ಕೇ ಬರುತ್ತಿರಲಿಲ್ಲ, ಈ ಸಮಯದಲ್ಲಿ ನಮ್ಮ ಜೀವ ಮುಖ್ಯವೆಂದು ಮನೆಯಲ್ಲಿ ಕೂರುತ್ತಿದ್ದರು. ಆದರೆ ಅವರಿಗೆ ತಮ್ಮ ಜೀವಕ್ಕಿಂತ ತಮನ್ನು ನಂಬಿ ಬರುವ ರೋಗಿಯ ಚಿಂತೆಯೇ ಹೆಚ್ಚಿರುತ್ತದೆ, ತನ್ನ ವೃತ್ತಿ ಕರ್ತವ್ಯ ನೆನೆದು ಅವರು ಕೆಲಸಕ್ಕೆ ಬರುತ್ತಿದ್ದಾರೆ. ವಿಶ್ವ ದಾದಿಯರ ದಿನದಂದು ಅಮೂಲ್ಯ ಜೀವಗಳ ರಕ್ಷಣೆಗೆ ನಿಂತಿರುವ ಎಲ್ಲಾ ದಾದಿಯರಿಗೆ ಕನ್ನಡ ಬೋಲ್ಡ್‌ ಸ್ಕೈಯ ನಮನಗಳು.

ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ನರ್ಸ್‌ಗಳು ಅನುಭವಿಸುತ್ತಿರುವ ಕಷ್ಟಗಳು, ಒಬ್ಬ ರೋಗಿ ಆಸ್ಪತ್ರೆಯಿಂದ ಹಿಂತಿರುಗಿದಾಗ ಬಿಡುವ ನಿಟ್ಟಿಸಿರು, ಅದೇ ರೋಗಿಯು ಕೊನೆಯುಸಿರು ಎಳೆದಾಗ ಆಗುವ ವೇತನೆ ಇವೆಲ್ಲವನ್ನೂ ನರ್ಸ್ ಆಗಿರುವ ಐಶ್ವರ್ಯ ನಮ್ಮೊಂದಿಗೆ ನಡೆಸಿದ ಚಿಟ್‌ ಚಾಟ್‌ನಲ್ಲಿ ಹೇಳಿದ್ದಾರೆ. ಅವರ ವೃತ್ತಿ ಬಗ್ಗೆ ಅವರಲ್ಲಿರುವ ಶ್ರದ್ಧೆ, ಭಕ್ತಿ ಇವೆಲ್ಲವನ್ನೂ ನೋಡಿ ದೇಶ ಕಾಯುವ ಯೋಧನಂತೆಯೇ ನರ್ಸ್ ತನ್ನ ರೋಗಿಯನ್ನು ಉಳಿಸಲು ಯಮನೊಡನೆ ಸೆಣಸುತ್ತಾಳೆ ಎಂದನಿಸಿತ್ತು...

ಈ ಕೊರೊನಾ ಸಮಯದಲ್ಲಿ ಅವರು ಅನುಭವಿಸುತ್ತಿರುವ ಯಾತನೆಯನ್ನು ಅವರ ಬಾಯಲ್ಲೇ ಕೇಳೋಣ:

ಕೊರೊನಾ ತಂದ ಸಂಕಷ್ಟ

ಕೊರೊನಾ ತಂದ ಸಂಕಷ್ಟ

ನಾನು ಅವರ ಡ್ಯೂಟಿ ಬಗ್ಗೆ ಕೇಳಿದಾಗ ಹೇಳುತ್ತಾ ಹೋಗುತ್ತಾರೆ ' ಈಗ ನಮ್ಮ ಬದುಕು ಕೇಳುವುದೇ ಬೇಡ.. ತುಂಬಾ ಹೆಕ್ಟಿಕ್ ಆಗಿದೆ. ಅದರಲ್ಲೂ ನೈಟ್‌ ಶಿಫ್ಟ್ ಮೊದಲೆಲ್ಲಾ 7 ದಿನ ಮಾಡುತ್ತಿದ್ದೆವು, ಈಗ 10 ದಿನ ಮಾಡುತ್ತೇವೆ. ಈ ಪಿಪಿಇ ಕಿಟ್‌ ಎಲ್ಲಾ ಹಾಕಿ ಒಂದು ತೊಟ್ಟು ನೀರು ಕುಡಿಯುವುದಕ್ಕೂ ಕಷ್ಟ. ಮಾಸ್ಕ್ ಎಲ್ಲಾ ತೆಗೆದು ಒಂದೆರಡು ನಿಮಿಷ ಸಾವಾರಿಸಿಕೊಂಡು ನೀರು ಕುಡಿಯೋಣ ಅಂದ್ರೆ ಸಾಧ್ಯವಾಗಲ್ಲ. ಐಸಿಯುವಿನಲ್ಲಿ ಪ್ರತಿಯೊಂದು ನಿಮಿಷವೂ ತುಂಬಾನೇ important ಒಂದು ನಿಮಿಷ ನಮ್ಮ ಕಣ್ಣು ರೋಗಿಯತ್ತ ತಪ್ಪಿದರೂ ಸಾವು ಸಂಭವಿಸಬಹುದು. ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು. ಇನ್ನು ಸೆಕೆಯಲ್ಲಿ ಪಿಪಿಇ ಕಿಟ್‌ನ ಒಳಗಡೆ ಬೇಯುತ್ತಾ ಇರುತ್ತೇವೆ. ಅನೇಕ ಸಿಸ್ಟರ ಚರ್ಮದಲ್ಲಿ ಬೊಬ್ಬೆಗಳು ಏಳಲಾರಂಭಿಸಿವೆ. ಮೂತ್ರ ವಿಸರ್ಜನೆಗೆ ಹೋಗುವುದಕ್ಕೂ ಕಷ್ಟವಾಗಿದೆ. ಆದರೆ ಏನು ಮಾಡುವುದು ಉಸಿರು ಎಳೆದುಕೊಂಡು ಮಲಗಿರುವವರನ್ನು ನೋಡುವಾಗ ಅಯ್ಯೋ ಪಾಪ ಅನಿಸುತ್ತದೆ. ಕಳೆದ 10 ವರ್ಷದಿಂದ ನರ್ಸ್ ಆಗಿ ಕೆಲಸ ಮಾಡುತ್ತಿದ್ದೇನೆ, ಆದರೆ ಈಗ ಬಂದಿರುವ ಸ್ಥಿತಿಯನ್ನು ಹಿಂದೆಂದೂ ಕಂಡಿರಲಿಲ್ಲ.

ಪ್ರತಿಯೊಬ್ಬರ ಕಣ್ಣುಗಳಲ್ಲಿ ಜೀವದ ಆಸೆ ಎದ್ದು ಕಾಣುತ್ತಿರುತ್ತದೆ

ಪ್ರತಿಯೊಬ್ಬರ ಕಣ್ಣುಗಳಲ್ಲಿ ಜೀವದ ಆಸೆ ಎದ್ದು ಕಾಣುತ್ತಿರುತ್ತದೆ

ಆಸ್ಪತ್ರೆಗೆ ಬರುವ ಪ್ರತಿಯೊಬ್ಬರ ಕಣ್ಣುಗಳಲ್ಲಿ ಜೀವದ ಆಸೆ ಎದ್ದು ಕಾಣುತ್ತಿರುತ್ತದೆ. ನಾವು ನಮ್ಮಲ್ಲಿ ಆಗುವ ಅಷ್ಟೂ ಪ್ರಯತ್ನ ಮಾಡುತ್ತೇವೆ. ಕೆಲವೊಂದು ಕೇಸ್‌ಗಳಲ್ಲಿ ಏನೂ ಮಾಡೋಕೆ ಆಗಲ್ಲ, ಮೊದಲೇ ಬಂದಿದ್ದರೆ ಉಳಿಸಬಹುದಿತ್ತು, ಅವರ ಲಂಗ್ಸ್‌ಗೆ (ಶ್ವಾಸಕೋಶ) ಸಂಪೂರ್ಣ ಹಾಳಾಗಿರುತ್ತದೆ, ಇನ್ನು ಕೆಲವರಲ್ಲಿ ಆಕ್ಸಿಜನ್ ತುಂಬಾನೇ ಕಡಿಮೆಯಾಗಿರುತ್ತದೆ ಅಂಥವರು ಬಾಕಿ ಉಳಿಯುವುದು ತುಂಬಾನೇ ಕಷ್ಟ. ಇನ್ನು ಕೆಲವರಿಗೆ ಆಕ್ಸಿಜನ್ ನೀಡಿದಾಗ ಸ್ಯಾಚುರೇಷನ್ 97 ಕೂಡ ತೋರಿಸುತ್ತಿರುತ್ತದೆ, ಅದೇ ಒಂದು ವೇಳೆ ನಿದ್ದೆಯಲ್ಲಿ ಆಕ್ಸಿಜನ್ ಮಾಸ್ಕ್ ಜಾರಿದರೆ ಅಥವಾ ಪೇಷೆಂಟ್ ತೆಗೆದು ಹಾಕಿದರೆ (ಕೆಲವರು ಆಕ್ಸಿಜಿನ್ ಮಾಸ್ಕ್ ಹಾಕಿದಾಗ ತೆಗೆದು ಬಿಸಾಡುವುದು, ಒದ್ದಾಡುವುದೆಲ್ಲಾ ಮಾಡುತ್ತಾರೆ, ಪೇಷೆಂಟ್ ತುಂಬಾ ಗೊಂದಲಕ್ಕೆ ಒಳಗಾದಾಗ, ಭಯ ಪಟ್ಟಾಗ ಆ ರೀತಿಯಾಗುತ್ತದೆ) ಆಕ್ಸಿಜನ್ ಸ್ಯಾಚುರೇಷನ್ 20ಕ್ಕಿಂತಲೂ ಕಡಿಮೆ ತೋರಿಸುತ್ತದೆ..

ರೋಗಿ ಚೇತರಿಸಿಕೊಂಡು ಹೋದಾಗ ತುಂಬಾನೇ ತೃಪ್ತಿಯಾಗುವುದು

ರೋಗಿ ಚೇತರಿಸಿಕೊಂಡು ಹೋದಾಗ ತುಂಬಾನೇ ತೃಪ್ತಿಯಾಗುವುದು

ಇನ್ನು ಅವರಿಗೆ ಊಟ ಕೊಡಿಸುವಾಗ ಅಂತು ಒಂದು ತುತ್ತು ನೀಡಿದ ತಕ್ಷಣ ಆಕ್ಸಿಜನ್ ಮಾಸ್ಕ್ ಹಾಕಬೇಕು, ನಂತರ ಅವರ ಜಗಿದು ತಿನ್ನುವವರಿಗೆ ಕಾದು ನಂತರ ಮಾಸ್ಕ್ ತೆಗೆದು ಮತ್ತೆ ಕೊಡಬೇಕು. ಒಂದು ಊಟ ಕೊಡಲು ಅರ್ಧ ಗಂಟೆಗಿಂತಲೂ ಅಧಿಕ ಸಮಯ ಬೇಕು. ಸ್ಟಾಫ್‌ ಕೊರತೆ ಇರುವ ಕಡೆ ಒಬ್ಬ ಅಥವಾ ಇಬ್ಬರು ನರ್ಸ್ಗಳಿದ್ದರೆ ಅಷ್ಟೂ ರೋಗಿಗಳನ್ನು ನೋಡುವುದು ತುಂಬಾನೇ ಕಷ್ಟವಾಗುವುದು. ಕೆಲವರು ಒಂದು-ಒಂದೂವರೆ ತಿಂಗಳು ಐಸಿಯುನಲ್ಲಿ ಮಲಗಿ ನಂತರ ವಾರ್ಡ್‌ಗೆ ಶಿಫ್ಟ್ ಆಗಿರುತ್ತಾರೆ. ವಾರ್ಡ್‌ಗೆ ಶಿಫ್ಟ್ ಆದ ಮೇಲೆ ಅವರಿಗೆ ಕೆಲವೊಂದು ಉಸಿರಾಟದ ವ್ಯಾಯಾಮವೆಲ್ಲಾ ಹೇಳಿ ಕೊಟ್ಟಿರುತ್ತೇವೆ. ಆದರೆ ಏಕೋ ಗೊತ್ತಿಲ್ಲ ಕೆಲವರು ಉದಾಸೀನ ತೋರಿಸುತ್ತಾರೆ, ನಾವು ಹೇಳಿದಂತೆ ಕೇಳುವುದೇ ಇಲ್ಲ, ಇದರಿಂದಾಗಿ ರೋಗ ಲಕ್ಷಣ ಮತ್ತೆ ಹೆಚ್ಚಾಗಿ ಸಾವನ್ನಪ್ಪಿರುವುದನ್ನೂ ನೋಡಿದ್ದೇವೆ. ಆಗ ಮನಸ್ಸಿಗೆ ತುಂಬಾನೇ ಬೇಸರವಾಗುತ್ತೆ, ಇನ್ನು ಕೆಲವರು ಆಸ್ಪತ್ರೆಯಿಂದ ನಗು ನಗುತ್ತಾ ಡಿಸ್ಚಾರ್ಜ್ ಆಗಿರುತ್ತಾರೆ, ಆದರೆ ಮನೆಗೆ ಹೋದ ಮೇಲೆ ಸರಿಯಾದ ಆರೈಕೆ ಸಿಗದಿರುವುದಕ್ಕೂ ಅಥವಾ ಮತ್ಯಾವುದೋ ಕಾರಣಕ್ಕೋ ಗೊತ್ತಿಲ್ಲ ಉಸಿರಾಟದ ತೊಂದರೆಯಾಗಿ ಆಸ್ಪತ್ರೆ ಸೇರಬೇಕಾಗುವುದು, ಇನ್ನು ಕೆಲವರನ್ನು ಆಸ್ಪತ್ರೆಗೆ ಕರೆ ತಂದರೂ ಉಳಿಸಲು ಸಾಧ್ಯವಾಗುವುದಿಲ್ಲ.

ಊಟ ಮಾಡೋಕೆ ಆಗ್ತಾ, ನಿದ್ದೆ ಮಾಡಕ್ಕೂ ಆಗ್ತಾ ಇಲ್ಲ

ಊಟ ಮಾಡೋಕೆ ಆಗ್ತಾ, ನಿದ್ದೆ ಮಾಡಕ್ಕೂ ಆಗ್ತಾ ಇಲ್ಲ

ಒಂದು ಹೊತ್ತು ಊಟ ಸರಿಯಾಗಿ ಮಾಡೋಕೆ ಆಗ್ತಾ ಇಲ್ಲ... ಬಾಕ್ಸ್ ಓಪನ್ ಮಾಡಿದರೆ ರೋಗಿಗಳ ಕೂಗು ಕೇಳಿ ಓಡಬೇಕಾಗುತ್ತೆ, ಇಲ್ಲದಿದ್ದರೆ ಅವರ ನರಳಾಟವೇ ಕಣ್ಮುಂದೆ ಬರುತ್ತದೆ. ಮನೆಗೆ ಹೋದ ಮೇಲೆ ಮೊದಲಿನಂತೆ ನೆಮ್ಮದಿಯಾಗಿ ನಿದ್ರೆ ಮಾಡೋಕೆ ಆಗ್ತಾ ಇಲ್ಲ, ಸಾವು-ನೋವು ಇವೇ ಕಣ್ಮುಂದೆ ಬರುತ್ತದೆ.. ಎದೆ ತುಂಬಾ ಭಾರವಾಗಿದೆ... ಈ ಕೊರೊನಾ ಆದಷ್ಟು ಬೇಗ ಈ ಜಗತ್ತಿನಿಂದ ತೊಲಗಲಿ ಎಂದು ಆ ದೇವರಲ್ಲಿ ಪ್ರತಿನಿತ್ಯ ಪ್ರಾರ್ಥಿಸುತ್ತಿದ್ದೇವೆ...

ಅವರು ಇಷ್ಟು ಹೇಳಿ ಮುಗಿಸುವಾಗ ವಾಸ್ತವದ ಭಯಾನಕತೆಗೆ ಬೆಚ್ಚಿ ಬಿದ್ದಿದ್ದೆ... ರೋಗಿಗಳ ಬದುಕಿಗಾಗಿ ತಮ್ಮ ಬದುಕನ್ನು ಮುಡಿಪಾಗಿ ಇಟ್ಟಿರುವ ಎಲ್ಲಾ ನರ್ಸ್‌ಗಳಿಗೆ ಈ ದಿನ ಕೃತ್ಞತೆ ಹೇಳೋಣ...

English summary

International Nurses Day special: A Nurse Explains Heart Wrenching Experience About Covid 19 Pandemic

International Nurses Day special: A nurse explains heart wrenching experience about covid 19 pandemic, read on..
X