For Quick Alerts
ALLOW NOTIFICATIONS  
For Daily Alerts

ವಿದ್ಯಾದೇವತೆ 'ಸರಸ್ವತಿ ದೇವಿಯ' ಪೂಜಾ ವಿಧಿ ವಿಧಾನ....

By Staff
|

ಹಿಂದೂ ಧರ್ಮದ ಅನುಯಾಯಿಗಳು ಸರಸ್ವತಿಯನ್ನು ವಿದ್ಯಾದೇವತೆ ಎಂದು ಪರಿಗಣಿಸುತ್ತಾರೆ. ಇಲ್ಲಿ ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ, ಬದಲಿಗೆ ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ, ತಿಳಿವಳಿಕೆ, ಸಂಸ್ಕೃತಿ, ಕಲೆ ಎಲ್ಲವೂ ಒಳಗೊಂಡಿದೆ. ಉತ್ತಮ ಮಾನವನಾಗಲು ಹಣವಿಲ್ಲದೇ ಹೋದರೂ ಈ ಗುಣಗಳು ಅಗತ್ಯವಾಗಿ ಬೇಕು. ಇದಕ್ಕೇ ಹಿರಿಯರು 'ಗುಣ ನೋಡಿ ಹೆಣ್ಣು ಕೊಡು' ಎಂದು ಹೇಳಿದ್ದಾರೆ. ವಿದ್ಯಾದೇವತೆಯನ್ನು ಆರಾಧಿಸುವ ಮೂಲಕ ವಿದ್ಯೆ ವಿವೇಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ನಂಬಿಕೆಯಿಂದ ಸರಸ್ವತಿಯನ್ನು ಬಸಂತ ಪಂಚಮಿಯಂದು ವಿಶೇಷವಾಗಿ ಪೂಜಿಸಲಾಗುತ್ತದೆ.

ಆದರೆ ನವರಾತ್ರಿಯ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಸರಸ್ವತಿಗೆಂದೇ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಪರಂಪರೆಯನ್ನು ಗುಜರಾತ್ರಾ ಜ್ಯದಲ್ಲಿಯೂ ಕಾಣಬಹುದು. ಆದರೆ ಈ ರಾಜ್ಯದಲ್ಲಿ ಸಲ್ಲಿಸುವ ಪೂಜಾವಿಧಾನಕ್ಕೂ ದಕ್ಷಿಣ ಭಾರತದ ಪೂಜಾವಿಧಾನಕ್ಕೂ ವ್ಯತ್ಯಾಸವಿದೆ. ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ನವರಾತ್ರಿಯ ಮೂರು ದಿವಸಗಳನ್ನು ಸರಸ್ವತಿಯ ಪೂಜೆಗಾಗಿ ಮುಡಿಪಾಗಿಡಲಾಗುತ್ತದೆ. ಈ ದಿನಗಳಲ್ಲಿ ಮನೆಮನೆಯಲ್ಲಿ, ಕಛೇರಿ, ಗೋದಾಮುಗಳಲ್ಲಿ, ವಾಹನ-ಕಾರ್ಯಾಗಾರಗಳಲ್ಲಿ, ಶಾಲಾ ಕಾಲೇಜುಗಳಲ್ಲಿಯೂ ಸರಸ್ವತಿ ಪೂಜೆಯನ್ನು ನೆರವೇರಿಸಲಾಗುತ್ತದೆ. ನವರಾತ್ರಿ ವಿಶೇಷ: ನವದುರ್ಗೆಯರಿಗೆ 'ನವ ನೈವೇದ್ಯ'

ಒಂದು ವೇಳೆ ನೀವು ದಕ್ಷಿಣ ಭಾರತದ ಸರಸ್ವತಿ ಪೂಜೆಯನ್ನು ನೆರವೇರಿಸಬಯಸುವಿರಾದರೆ ಇದು ಬಸಂತ ಪಂಚಮಿಯಂದು ನೆರವೇರಿಸುವ ಪೂಜಾವಿಧಾನಕ್ಕೂ ಕೊಂಚ ಭಿನ್ನವಾಗಿದೆ ಎಂದು ಮೊದಲೇ ತಿಳಿದಿರಬೇಕು. ಏಕೆಂದರೆ ಈ ಪೂಜೆಯನ್ನು ದಕ್ಷಿಣದಲ್ಲಿ ಆಯುಧಪೂಜೆ ಎಂದೂ ಕರೆಯುತ್ತಾರೆ. ನಾಡ ಹಬ್ಬ ದಸರಾಕ್ಕೆ ಗೊಂಬೆಗಳ ತೇರು....

ಕೇರಳದಲ್ಲಿ ಈ ಪೂಜೆಯನ್ನು ನವರಾತ್ರಿಯ ಒಂಬತ್ತನೆಯ ದಿನದಂದು ಆಚರಿಸಿದರೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ನವರಾತ್ರಿಯ ಮರುದಿನವಾದ ಹತ್ತನೆಯ ದಿನ ಅಥವಾ ದಸರಾ ಹಬ್ಬದಂದೇ ನೆರವೇರಿಸಲಾಗುತ್ತದೆ. ಈ ಪೂಜೆಯನ್ನು ಹೇಗೆ ನೆರವೇರಿಸುವುದು ಎಂಬ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ.....

ಮೊದಲಿಗೆ ಸ್ವಚ್ಛತೆಗೆ ಆದ್ಯತೆ

ಮೊದಲಿಗೆ ಸ್ವಚ್ಛತೆಗೆ ಆದ್ಯತೆ

ಮೊತ್ತ ಮೊದಲನೆಯದಾಗಿ ನಿಮ್ಮ ಮನೆ ಅಥವಾ ಪೂಜೆ ಸಲ್ಲಿಸುವ ಸ್ಥಳವನ್ನು ಸಾಧ್ಯವಾದಷ್ಟು ಮಟ್ಟಿಗೆ ಚೊಕ್ಕಟಗೊಳಿಸಬೇಕು. ಪೂಜಾದಿನದಂದು ಸ್ವಚ್ಛತೆಗೆ ಅವಕಾಶವಿಲ್ಲ, ಅಂದರೆ ಪೂಜಾದಿನದ ಮುನ್ನಾದಿನದ ಸಂಜೆಗೂ ಮೊದಲೇ ಸ್ವಚ್ಛತೆಯ ಕಾರ್ಯ ಮುಗಿಸಿಬಿಡಬೇಕು. ಮನೆಯಲ್ಲಿ ನವರಾತ್ರಿಗೆಂದು ಮನೆಯ ಸ್ವಚ್ಛತೆ ಈಗಾಗಲೇ ಆಗಿದ್ದರೂ ಸಹಾ ಸರಸ್ವತಿ ಪೂಜೆಯ ಮುನ್ನಾದಿನ ಇನ್ನೊಂದು ಬಾರಿ ಸ್ವಚ್ಛಗೊಳಿಸಬೇಕು. ವಿಶೇಷವಾಗಿ ಪುಸ್ತಕಗಳು, ಸಂಗೀತ ಉಪಕರಣಗಳು, ಮಾಹಿತಿ ಸಾಧನಗಳು, ಒಟ್ಟಾರೆ ವಿದ್ಯೆಗೆ ಪೂರಕವಾದ ಯಾವುದೇ ವಸ್ತುಗಳಿದ್ದರೂ ಸ್ವಚ್ಛಗೊಳಿಸಿ ಒಪ್ಪ ಓರಣಗೊಳಿಸಿ ಮನೆಯನ್ನು ಸಜ್ಜುಗೊಳಿಸಬೇಕು. ಇದಕ್ಕೆ ಕಂಪ್ಯೂಟರ್ ಲ್ಯಾಪ್ ಟಾಪ್‌ಗಳೂ ಹೊರತಲ್ಲ.

ಪೂಜೆ ಮುಗಿಯುವವರೆಗೂ ಪುಸ್ತಕಗಳನ್ನು ಮುಟ್ಟಬಾರದು

ಪೂಜೆ ಮುಗಿಯುವವರೆಗೂ ಪುಸ್ತಕಗಳನ್ನು ಮುಟ್ಟಬಾರದು

ಸಾಮಾನ್ಯವಾಗಿ ನವರಾತ್ರಿಯ ಒಂಬತ್ತನೆಯ ದಿನದ ಸಂಜೆ ಅಥವಾ ರಾತ್ರಿಯ ಹೊತ್ತು ಸರಸ್ವತಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ಸಮಯದಲ್ಲಿ ಪುಸ್ತಕ, ಆಯುಧಗಳು, ಕಂಪ್ಯೂಟರ್ ಇತ್ಯಾದಿ ಯಾವುದನ್ನೂ ಮುಟ್ಟಲಿಕ್ಕೆ ಅವಕಾಶವಿಲ್ಲ. ಪೂಜೆಗೆ ಇವು ಪೂರ್ವ ತಯಾರಿಗಳಾಗಿವೆ.

ಮೂರ್ತಿಯ ಸ್ಥಾಪನೆ ಮತ್ತು ಅಲಂಕಾರ

ಮೂರ್ತಿಯ ಸ್ಥಾಪನೆ ಮತ್ತು ಅಲಂಕಾರ

ಒಂದು ವೇಳೆ ನಿಮ್ಮ ಮನೆಯಲ್ಲಿ ಈಗಾಗಲೇ ನವರಾತ್ರಿಯ ಪೂಜೆ ಆಗಿದ್ದರೆ ಸರಸ್ವತಿ ದೇವಿಯ ವಿಗ್ರಹವನ್ನು ನವರಾತ್ರಿ ಗೋಲುವಿನ ಮುಂದೆ ಇರಿಸಿ. ಇಲ್ಲದಿದ್ದರೆ ವಿಗ್ರಹವನ್ನು ಕೇಂದ್ರಸ್ಥಾನದಲ್ಲಿರಿಸಿ. ವಿಗ್ರಹವನ್ನು ವಿಶೇಷವಾಗಿ ಹಳದಿ ಮತ್ತು ಬಿಳಿ ಹೂವುಗಳಿಂದ ಅಲಂಕರಿಸಿ. ಕೆಲವರು ವಿಗ್ರಹವೂ ಕಾಣದಷ್ಟು ಹೂವುಗಳಿಂದ ಅಲಂಕರಿಸುತ್ತಾರೆ. ಇದು ದೇವರಿಗೆ ಇಷ್ಟವಿಲ್ಲದ ಕೆಲಸ. ಸರಳವಾಗಿ ಕೊಂಚವೇ ಹೂವುಗಳಿಂದ ಅಲಂಕರಿಸಿದರೆ ಸಾಕು.

ಸರಸ್ವತಿ ಶ್ಲೋಕ ಪಠಿಸಿ

ಸರಸ್ವತಿ ಶ್ಲೋಕ ಪಠಿಸಿ

ಪೂಜೆಗೂ ಮುನ್ನ ದೀಪವನ್ನು ಹಚ್ಚಿ ಅಗರಬತ್ತಿಗಳಿಂದ ವಾತಾವರಣವನ್ನು ಆಹ್ಲಾದಗೊಳಿಸಿ. ಅಗರಬತ್ತಿಗಳು ಎಂದರೆ ಕೆಮ್ಮು ಬರುವಷ್ಟು ಹೊಗೆ ಹಾಕುವ ಅಗತ್ಯವಿಲ್ಲ, ಬದಲಿಗೆ ನವಿರಾದ ನಸುಪರಿಮಳ ವ್ಯಾಪಿಸಿದರೆ ಸಾಕು. ಪೂಜೆಯ ಸಮಯಕ್ಕೂ ಮುನ್ನ ಸರಸ್ವತಿ ಶ್ಲೋಕ ಪಠಿಸಿ. ಇದರಿಂದ ಸರಸ್ವತಿ ದೇವಿ ನಿಮ್ಮ ಪೂಜಾ ಸ್ಥಳದಲ್ಲಿ ಆಗಮಿಸಲು ನೆರವಾಗುತ್ತದೆ.

ಕೆಲವು ಪುಸ್ತಕ ಮತ್ತು ಇತರ ವಿದ್ಯಾಪರಿಕರಗಳನ್ನಿರಿಸಿ

ಕೆಲವು ಪುಸ್ತಕ ಮತ್ತು ಇತರ ವಿದ್ಯಾಪರಿಕರಗಳನ್ನಿರಿಸಿ

ವಿಗ್ರಹದ ಮುಂದೆ ನಿಮ್ಮ ಕಾರ್ಯಕ್ಕೆ ಅತಿ ಅಗತ್ಯವಾದ ಪುಸ್ತಕ, ಆಯುಧ, ಉಪಕರಣ ಅಥವಾ ವಾಹನದ ಬೀಗದ ಕೈ, ಒಟ್ಟಾರೆ ನಿಮ್ಮ ಉದ್ಯೋಗ ಅಥವಾ ಕಲಿಕೆಗೆ ಬಹುಮುಖ್ಯವಾದ ಪರಿಕರವನ್ನು ಪೂಜಾಸ್ಥಳದಲ್ಲಿರಿಸಿ ಪನ್ನೀರು ಚಿಮುಕಿಸಿ. ಈ ಉಪಕರಣಗಳಿಗೆ ಅರಿಶಿನದ ನಾಮವನ್ನು ಹಚ್ಚಿ.

ಬಿಳಿಯ ನೈವೇದ್ಯ

ಬಿಳಿಯ ನೈವೇದ್ಯ

ಸರಸ್ವತಿ ಎಂದರೆ ವಿದ್ಯೆಯ ದೇವತೆ ಮಾತ್ರವಲ್ಲ, ಸ್ವಚ್ಛತೆಯ ಹರಿಕಾರಳೂ ಆಗಿದ್ದಾಳೆ. ಬಿಳಿಬಣ್ಣ ಸ್ವಚ್ಛತೆಯ ಸಂಕೇತವಾಗಿರುವ ಕಾರಣ ಪೂಜೆಯಲ್ಲಿ ಬಿಳಿಯ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಅಲಂಕಾರದಲ್ಲಿ ಬಿಳಿಯ ವಸ್ತುಗಳನ್ನೇ ಹೆಚ್ಚು ಬಳಸಿ. ವಿಶೇಷವಾಗಿ ನೈವೇದ್ಯಕ್ಕಾಗಿ ಬಿಳಿಯ ಬಣ್ಣದ ಖಾದ್ಯಗಳನ್ನೇ ತಯಾರಿಸಿ. ಉದಾಹರಣೆಗೆ ಅಕ್ಕಿಯ ಪಾಯಸ, ಹಾಲು, ಅವಲಕ್ಕಿಯ ಖಾದ್ಯ, ತಾಜಾ ತೆಂಗಿನ ತುರಿಯ ಖಾದ್ಯಗಳು ಇತ್ಯಾದಿಗಳನ್ನೇ ತಯಾರಿಸಿ ಪೂಜೆಯ ಸಮಯದಲ್ಲಿ ಅರ್ಪಿಸಿ.

ಸರಸ್ವತಿ ಧನಂ

ಸರಸ್ವತಿ ಧನಂ

ಕೆಲವು ಮನೆಗಳಲ್ಲಿ ಸರಸ್ವತಿ ಪೂಜೆಯ ಸಂದರ್ಭವನ್ನು ಹೆಣ್ಣುಮಕ್ಕಳಿಗೆ ಹೊಸ ಬಟ್ಟೆಗಳನ್ನು ಒದಗಿಸುವ ಸಂದರ್ಭವಾಗಿ ಬಳಸಲಾಗುತ್ತದೆ. ಈ ಉಡುಗೊರೆಗೆ ಸರಸ್ವತಿ ಧನಂ ಎಂದು ಕರೆಯುತ್ತಾರೆ. ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ, ಬಳೆ, ಅಲಂಕಾರಿಕಾ ವಸ್ತುಗಳು, ವೀಳ್ಯದ ಎಲೆ, ಅಡಿಕೆ ಮತ್ತು ಬಾಳೆಹಣ್ಣುಗಳಿರುವ ಬುಟ್ಟಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಇವೆಲ್ಲವೂ ಸರಸ್ವತಿಯ ಸಂಕೇತಗಳಾಗಿದ್ದು ಹೆಣ್ಣು ಮಕ್ಕಳಲ್ಲಿ ವಿವೇಕ ಮೂಡಲು ನೆರವಾಗುತ್ತದೆ ಎಂದು ಹಿರಿಯರು ನಂಬುತ್ತಾರೆ. ಪೂಜೆಯ ಬಳಿಕವೂ ಮರುದಿನದವರೆಗೆ ಪುಸ್ತಕಗಳು, ಆಯುಧಗಳು, ಸಲಕರಣೆಗಳು, ಸಂಗೀತ ಉಪಕರಣಗಳು ಮೊದಲಾದವುಗಳನ್ನು ಮುಟ್ಟಲು ಅವಕಾಶವಿಲ್ಲ. ಮರುದಿನ ಅಂದರೆ ದಶಮಿಯ ದಿನದ ವಿಜಯದಶಮಿಯ ಪೂಜೆಯ ಬಳಿಕವೇ ಈ ವಸ್ತುಗಳನ್ನು ಮುಟ್ಟಬಹುದು. ಪೂಜಾ ಸ್ಥಳದಲ್ಲಿಟ್ಟ ವಸ್ತುಗಳನ್ನೂ ಮೊದಲಿನ ಸ್ಥಾನಕ್ಕೆ ಹಿಂದಿರುಗಿಸಬೇಕು.

English summary

How Is Saraswati Puja Celebrated In South India

According to the Hindu religion, Devi Saraswati is regarded as the goddess of knowledge, education, wisdom, arts and culture. In every state, Goddess Saraswati is worshipped in different style. Usually, she is worshipped mainly on Basant Panchami, but during Navratri, Goddess Saraswati is worshipped, especially in South India
X
Desktop Bottom Promotion