For Quick Alerts
ALLOW NOTIFICATIONS  
For Daily Alerts

ಭೀಮನ ಅಮವಾಸ್ಯೆ 2021: ಪೂಜೆ ಶುಭ ಮುಹೂರ್ತ, ಪೂಜಾ ವಿಧಾನ ಹಾಗೂ ಮಹತ್ವ

|

ಆಗಸ್ಟ್‌ 8ಕ್ಕೆ ಆಷಾಢ ಅಮವಾಸ್ಯೆ ಅಥವಾ ಆಟಿ ಅಮವಾಸ್ಯೆ. ಈ ದಿನದಂದು ಭೀಮನ ಅಮವಾಸ್ಯೆ ವ್ರತ ಮಾಡಲಾಗುವುದು. ಮಹಿಳೆಯರು ತಮ್ಮ ಪತಿಯ ಆಯುಸ್ಸು ಹಾಗೂ ಆರೋಗ್ಯಕ್ಕಾಗಿ ಈ ವ್ರತ ಪಾಲಿಸುತ್ತಾರೆ. ಈ ದಿನ ವಿವಾಹಿತ ಮಹಿಳೆಯರು ತಮ್ಮ ಸಂಬಂಧ ಶಿವ-ಪಾರ್ವತಿಯಷ್ಟೇ ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸಿದರೆ, ಅವಾಹಿತ ಮಹಿಳೆಯರು ತಮಗೆ ಶಿವನಂಥ ಪತಿ ಸಿಗಲಿ ಎಂದು ಈ ವ್ರತ ಪಾಲಿಸುತ್ತಾರೆ.

ಭೀಮನ ಅಮವಾಸ್ಯೆ ಪೂಜಾ ಮುಹೂರ್ತ ಹಾಗೂ ಈ ವ್ರತದ ನಿಯಮಗಳೇನು, ಮಹತ್ವವೇನು, ಪೌರಾಣಿಕ ಹಿನ್ನಲೆಯೇನು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

ಭೀಮನ ಅಮವಾಸ್ಯೆ ಪೂಜಾ ಮುಹೂರ್ತ

ಭೀಮನ ಅಮವಾಸ್ಯೆ ಪೂಜಾ ಮುಹೂರ್ತ

ಪೂಜೆಗೆ ಶುಭ ಮುಹೂರ್ತ: ಆಗಸ್ಟ್‌ 8 ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12:53ರವರೆಗೆ

ಈ ದಿನ ವ್ರತ ಪಾಲಿಸುವವರು ಮಧ್ಯಾಹ್ನ 12 ಗಂಟೆಯ ಒಳಗಾಗಿ ಪೂಜೆ ಮಾಡಿ.

ಅಮವಾಸ್ಯೆಯಂದು ಲಕ್ಷ್ಮಿ ಪೂಜೆಗೆ ಶುಭ ಸಮಯ: ಸಂಜೆ 7:30ರಿಂದ 9 ಗಂಟೆಯವರೆಗೆ

ಪೂಜಾ ಸಾಮಾಗ್ರಿ:

ಪೂಜಾ ಸಾಮಾಗ್ರಿ:

ಮಣೆ / ಮಂಟಪ, ಭೀಮೇಶ್ವರ ದೇವರ ಪಟ

* ನಂದಾ ದೀಪ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಬತ್ತಿ

* ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು

* ಅರಿಶಿನ, ಕುಂಕುಮ, ಮಂತ್ರಾಕ್ಷತೆ

* ಶ್ರೀಗಂಧ, ಊದಿನ ಕಡ್ಡಿ

* ವಿವಿಧ ಹೂವು, ಬಿಲ್ವ ಪತ್ರೆ, ಗೆಜ್ಜೆ ವಸ್ತ್ರ

* ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ,ದಕ್ಷಿಣೆ

* ನೈವೇದ್ಯ - ಪಾಯಸ, ಹಣ್ಣು..ಭಂಡಾರಕ್ಕೆ ಮಾಡಿದ ಹಿಟ್ಟಿನ ಪದಾರ್ಥ

*ಆರತಿ ತಟ್ಟೆ, ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ.

ಪೂಜಾ ವಿಧಾನಗಳು

ಪೂಜಾ ವಿಧಾನಗಳು

ಈ ಗೋಧಿ ಹಿಟ್ಟಿನಿಂದ ಮಾಡಿದ ಹಣತೆಯಲ್ಲಿ ದೀಪವನ್ನು ಬೆಳಗಲಾಗುವುದು. ದೀಪದಿಂದ ಪ್ರಜ್ವಲಿಸುವ ಬೆಳಕಿನಂತೆ ಆತ್ಮ ಕೂಡ ಪ್ರಕಾಶಮಾನವಾಗಿ, ಶುದ್ಧವಾಗಿರಬೇಕು ಎಂಬುವುದು ಇದರ ಸಂಕೇತವಾಗಿದೆ.

ಮಹಿಳೆಯರು ಬೆಳಗ್ಗೆ ಎದ್ದು ಸ್ನಾನ ಮಾಡಿ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರ ಮೇಲೆ ಎರಡು ಹಣತೆ ಇಟ್ಟು ದೀಪ ಬೆಳಗಿ ಶಿವ-ಪಾರ್ವತಿಯನ್ನು ಆವಾಹನೆ ಮಾಡುತ್ತಾರೆ. ಪೂಜೆ ಮಾಡುವಾಗ 9 ಗಂಟಿನ ಗೌರಿದಾರವನ್ನು ಕೂಡ ಇಟ್ಟು ಪೂಜಿಸಲಾಗುವುದು. ಶಿವ-ಪಾರ್ವತಿಗೆ ಪೂಜೆ ಸಲ್ಲಿಸುವ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸಬೇಕು. ನಂತರ ಶಿವ-ಪಾರ್ವತಿಯನ್ನು ಆರಾಧನೆ ಮಾಡಿ, ದೇವರಿಗೆ ಕಡುಬುಗಳನ್ನು ನೈವೇದ್ಯವಾಗಿ ಇಟ್ಟು , ನಂತರ ಗಂಡನ ಪಾದ ಮುಟ್ಟಿ ನಮಸ್ಕರಿಸಿ, ಗೌರಿ ದಾರವನ್ನು ಕೈಗೆ ಕಟ್ಟಿಕೊಳ್ಳಲಾಗುವುದು.

ಯಾರು ಈ ವ್ರತ ಮಾಡುತ್ತಾರೋ ಅವರು 5, 9 ಅಥವಾ 16 ವರ್ಷಗಳು ಮಾಡಬೇಕು. ಈ ದಿನ ಯಾವುದೇ ಕರಿದ ಪದಾರ್ಥಗಳನ್ನು ತಿನ್ನಬಾರದು.

ವ್ರತ ಕತೆ

ವ್ರತ ಕತೆ

ಒಬ್ಬ ಬಡ ಹುಡುಗಿ ಇರುತ್ತಾಳೆ. ಅವಳು ಶಿವ-ಪಾರ್ವತಿಯ ಆರಾಧಕಳಾಗಿರುತ್ತಾಳೆ. ಅವಳನ್ನು ಅವಳ ಅಣ್ಣನ ಬಳಿ ಬಿಟ್ಟು ಪೋಷಕರು ಕಾಶಿಗೆ ಹೋಗುತ್ತಾರೆ. ಮದುವೆ ಪ್ರಾಯಕ್ಕೆ ಬಂದ ಆ ಹುಡುಗಿಯನ್ನು ಖರ್ಚಾಗುವುದು ಎಂದು ಅಣ್ಣ ಮದುವೆ ಮಾಡಿ ಕೊಡುವುದಿಲ್ಲ. ಹೀಗಿರುವಾಗ ಅವರಿರುವ ರಾಜ್ಯದ ರಾಜ ಒಂದು ಡಂಗೂರ ಸಾರುತ್ತಾನೆ. ತನ್ನ ಸತ್ತ ಮಗನಿಗೆ ಹೆಣ್ಣು ಬೇಕೆಂದು ಕೇಳಿ ಸಾರುವ ಡಂಗೂರ ಅದಾಗಿರುತ್ತೆ. ಅಣ್ಣ ಇದೇ ಸಂದರ್ಭ ಎಂದು ಆಕೆಯನ್ನು ಸತ್ತ ರಾಜ ಕುಮಾರನ ಜೊತೆ ಮದುವೆ ಮಾಡಿಸುತ್ತಾನೆ. ಈಕೆಗೆ ತನ್ನ ಗಂಡ ಬದುಕಿ ಬರುತ್ತಾನೆ ಎಂಬ ನಂಬಿಕೆ. ಆಕೆ ಶ್ರದ್ಧೆಯಿಂದ ಹಣತೆಯನ್ನು ಮಾಡಿ, ದೀಪ ಹಚ್ಚಿ ಶಿವ-ಪಾರ್ವತಿಯನ್ನುಪ್ರಾರ್ಥಿಸುತ್ತಾ ಕುಳಿತು ಬಿಡುತ್ತಾಳೆ. ಆಗ ಅಲ್ಲಿಗೆ ವೃದ್ಧ ದಂಪತಿ ಬರುತ್ತಾರೆ, ಅವರು ಏನಾಯ್ತು ಎಂದು ಕೇಳುವಾಗ ಇವಳು ನಡೆದ ಕತೆ ತಿಳಿಸುತ್ತಾಳೆ. ಆಗ ಆ ವೃದ್ಧ ದಂಪತಿಯ ವೇಷದಲ್ಲಿದ್ದ ಶಿವ-ಪಾರ್ವತಿ ಪ್ರತ್ಯಕ್ಷವಾಗಿ ಅವಳ ಗಂಡನನ್ನು ಬದುಕಿಸಿ ಕೊಡುತ್ತಾರೆ. ಈ ಸಂದರ್ಭದಲ್ಲಿ ಶಿವನು ಮಣ್ಣಿನ ಕಡಬು ತುಂಡರಿಸುತ್ತಾನೆ, ಇದು ದೀರ್ಘಾಯುಷ್ಯ ಹಾಗೂ ಸಮೃದ್ಧಿಯ ಸಂಕೇತವಾಗಿದೆ.

ಹೀಗೆ ಭೀಮನ ಅಮವಾಸ್ಯೆಗೆ ಶಿವ-ಪಾರ್ವತಿಯ ಆರಾಧನೆ ಮಾಡಿದರೆ ಗಂಡನ ಆಯುಸ್ಸು ಹಾಗೂ ಆರೋಗ್ಯ, ಸಮೃದ್ಧಿ ಹೆಚ್ಚುವುದು ಎಂಬ ನಂಬಿಕೆ.

English summary

Bheemana Amavasya 2021: Date, Shubh Muhurat, Puja Vidhi, Vrat Benefits, Vrat Katha and Importance in Kannada

Bheemana Amavasya 2021: Date, Shubh Muhurat, Puja Vidhi, Vrat Benefits, Vrat Katha and Importance in Kannada,read on..
Story first published: Saturday, August 7, 2021, 17:44 [IST]
X
Desktop Bottom Promotion