For Quick Alerts
ALLOW NOTIFICATIONS  
For Daily Alerts

ಅಷ್ಟ ಲಕ್ಷ್ಮಿಯರು: ಮಹಾಲಕ್ಷ್ಮಿಯ ಈ 8 ಸ್ವರೂಪದ ಮಹತ್ವ ಗೊತ್ತೇ?

|

ಮಹಾಲಕ್ಷ್ಮಿ ದೇವಿ...ಆಕೆಯದ್ದು ನಾನಾ ಸ್ವರೂಪ, ಆಕೆಯ ಒಂದೊಂದು ಸ್ವರೂಪವೂ ಒಂದೊಂದು ಕತೆಯನ್ನು, ಪ್ರಾಮುಖ್ಯತೆಯನ್ನು ಹೇಳುತ್ತದೆ.

ಧೈರ್ಯ, ಬುದ್ಧಿ, ವಿದ್ಯೆ, ಸಂಪತ್ತು, ಸಮೃದ್ಧಿಗೆ ಅಧಿ ದೇವತೆ ಮಹಾಲಕ್ಷ್ಮಿ. ಈಕೆಯದ್ದು 8 ಸ್ವರೂಪ, ಆ ಸ್ವರೂಪಗಳನ್ನು ಅಷ್ಟಲಕ್ಷ್ಮಿಯರು ಎಂದು ಕರೆಯಲಾಗುವುದು. ಸಕಲ ಐಶ್ವರ್ಯ ಪ್ರಾಪ್ತಿಗಾಗಿ ಅಷ್ಟಲಕ್ಷ್ಮಿಯನ್ನು ಪೂಜಿಸಬೇಕು. ವರಲಕ್ಷ್ಮಿ ವ್ರತ ಮಾಡಿದರೂ ಅಷ್ಟಲಕ್ಷ್ಮಿಯರನ್ನು ಆರಾಧಿಸಿದಾಗ ಸಿಕ್ಕಷ್ಟೇ ಫಲ ಸಿಗುವುದು. ನಾವಿಲ್ಲಿ ಮಹಾಲಕ್ಷ್ಮಿಯ ಅಷ್ಟಲಕ್ಷ್ಮಿ ಸ್ವರೂಪ ಹಾಗೂ ಪ್ರಾಮುಖ್ಯತೆ ಬಗ್ಗೆ ಹೇಳಿದ್ದೇವೆ ನೋಡಿ:

1. ಆದಿ ಲಕ್ಷ್ಮಿ

1. ಆದಿ ಲಕ್ಷ್ಮಿ

ಲಕ್ಷ್ಮಿ ಎಂಬ ಪದದ ಮೂಲ ಸಂಸ್ಕೃತದ ಲಕ್ಷ, ಅಂದ್ರೆ ಎಲ್ಲವನ್ನು ತಿಳಿದವಳು, ಗುರಿ, ವಸ್ತುನಿಷ್ಠ ಎಂಬುವುದಾಗಿದೆ. ಆದಿ ಅಂದರೆ ಪ್ರಥಮ ಎಂದರ್ಥ. ಆದಿ ಲಕ್ಷ್ಮಿಯು ಮೊದಲ ಸ್ವರೂಪವಾಗಿದ್ದು ಯಾರು ಭಕ್ತಿಯಿಂದ ಪ್ರಾರ್ಥಿಸುತ್ತಾರೋ ಅವರ ಬೇಡಿಕೆಗಳನ್ನೆಲ್ಲಾ ಈಡೇರಿಸುತ್ತಾಳೆ ಎಂದು ಹೇಳಲಾಗುವುದು. ಈಕೆ ಮೋಕ್ಷಗೆ ದಾರಿ ತೋರಿಸುವುದರಿಂದ ಮೋಕ್ಷ ಪ್ರದ್ಯಾಯನಿ ಎಂದು ಕರೆಯಲಾಗುವುದು.

ಶಾಂತ ಸ್ವರೂಪದ ಆದಿ ಲಕ್ಷ್ಮಿ ನಾಲ್ಕು ಕೈಗಳನ್ನು ಹೊಂದಿದ್ದು ಒಂದು ಕೈಯಲ್ಲಿ ಕಮಲ, ಮತ್ತೊಂದು ಕೈಯಲ್ಲಿ ಬಿಳಿ ಧ್ವಜ ಹಿಡಿದಿರುತ್ತಾಳೆ. ಇನ್ನೆರಡು ಕೈಗಳು ಅಭಯ ಮುದ್ರೆಯಲ್ಲಿರುತ್ತದೆ, ಈ ಸ್ವರೂಪದಲ್ಲಿ ಕಮಲದ ಮೇಲೆ ಆಸೀನಳಾಗಿರುತ್ತಾಳೆ.

ಆದಿ ಲಕ್ಷ್ಮಿಯ ಮಹತ್ವ: ಆದಿ ಲಕ್ಷ್ಮಿ ಮೋಕ್ಷವನ್ನು ನೀಡುವವಳು, ಈ ಈಕೆಯನ್ನು ದೇವತೆಗಳೂ ಪೂಜಿಸುತ್ತಾರೆ. ಭಕ್ತರು ಈಕೆಯನ್ನು ಭಕ್ತಿಯಿಂದ ಬೇಡಿದರೆ ಅದು ನೆರವೇರುವುದು.

2. ಧನ ಲಕ್ಷ್ಮಿ

2. ಧನ ಲಕ್ಷ್ಮಿ

ಇದು ಲಕ್ಷ್ಮಿಯ ಮತ್ತೊಂದು ಸ್ವರೂಪವಾಗಿದ್ದು ಆಸ್ತಿ, ಐಶ್ವರ್ಯ, ಸಂಪತ್ತಿಗಾಗಿ ಈ ಲಕ್ಷ್ಮಿಯನ್ನು ಪೂಜಿಸಲಾಗುವುದು. ಯಾರು ಕಷ್ಟಪಟ್ಟು ದುಡಿಯುತ್ತಾರೋ ಅವರನ್ನು ಈ ಲಕ್ಷ್ಮಿ ಎಂದಿಗೂ ಕೈ ಬಿಡಲ್ಲ ಎಂದು ಹೇಳುತ್ತಾರೆ. ತುಂಬಾ ಆರ್ಥಿಕ ಸಂಕಷ್ಟ ಇದ್ದವರು ಈಕೆಯನ್ನು ಭಕ್ತಿಯಿಂದ ಶುಕ್ರವಾರ ಆರಾಧಿಸಿದರೆ ಕಷ್ಟವೆಲ್ಲಾ ನೀಗಿ, ಸಂಪತ್ತು, ಐಶ್ವರ್ಯ ಹೆಚ್ಚುವಂತೆ ಮಾಡುತ್ತಾಳೆ. ಈಕೆಯ ಸ್ವರೂಪ ನೀವು ನೋಡಿದಾಗ ಈಕೆಯ ಕೈಗಳಿಂದ ನಾಣ್ಯಗಳನ್ನು ಹರಿಯ ಬಿಟ್ಟಿರುವ ಚಿತ್ರ ನೋಡಬಹುದು.

ಧನ ಲಕ್ಷ್ಮಿ ಮಹತ್ವ: ಧನ ಲಕ್ಷ್ಮಿಯನ್ನು ಆರಾಧನೆ ಮಾಡಿದರೆ ಬಡತನ ಇರಲ್ಲ, ಸಂಪತ್ತು ವೃದ್ಧಿಯಾಗುವುದು, ಮನೋಬಲ ಹೆಚ್ಚುವುದು.

3. ಧಾನ್ಯ ಲಕ್ಷ್ಮಿ

3. ಧಾನ್ಯ ಲಕ್ಷ್ಮಿ

ಮಹಾಲಕ್ಷ್ಮಿಯ ಮತ್ತೊಂದು ಸ್ವರೂಪ ಧಾನ್ಯ ಲಕ್ಷ್ಮಿ. ಬಿತ್ತಿದ ಬೆಳೆ ಚೆನ್ನಾಗಿ ಬೆಳೆದು ಒಳ್ಳೆಯ ಫಸಲು ನೀಡುವಂತೆ ಮಾಡು ತಾಯಿಯೇ ಎಂದು ರೈತರು ಈಕೆಯನ್ನು ಪ್ರಾರ್ಥಿಸುತ್ತಾರೆ. ಈಕೆ ಸಮೃದ್ಧಿಯ ಸಂಕೇತ. ಈಕೆ 8 ಕೈಗಳನ್ನು ಹೊಂದಿದ್ದು ಕೈಯಲ್ಲಿ ಕಬ್ಬು, ಬಾಳೆಗೊನೆ ಹಿಡಿದಿರುವುದನ್ನು ಕಾಣಬಹುದು.

ಧಾನ್ಯ ಲಕ್ಷ್ಮಿಯ ಮಹತ್ವ: ಯಾರು ದಾರಿದ್ರ್ಯದಿಂದ ಕಷ್ಟಪಡುತ್ತಿದ್ದಾರೋ ಅವರು ಧಾನ್ಯ ಲಕ್ಷ್ಮಿಯನ್ನು ಬೇಡಿದರೆ ಹಸಿವು ದೂರವಾಗುವುದು. ಇನ್ನು ರೈತರು ಈ ಲಕ್ಷ್ಮಿ ಸ್ವರೂಪವನ್ನು ಆರಾಧಿಸುವುದರಿಂದ ಬೆಳೆ ಚೆನ್ನಾಗಿ ಬೆಳೆಯುವುದು.

4. ಗಜ ಲಕ್ಷ್ಮಿ

4. ಗಜ ಲಕ್ಷ್ಮಿ

ಗಜ ಲಕ್ಷ್ಮಿಯನ್ನು ಆರಾಧಿಸಿದರೆ ಅಧಿಕಾರ ಹಾಗೂ ರಾಜ ವೈಭವ ನೀಡುತ್ತಾಳೆ ಎಂಬ ನಂಬಿಕೆ ಇದೆ. ಗಜ ಲಕ್ಷ್ಮಿ ತನ್ನನ್ನು ನಂಬಿ ಆರಾಧಿಸುವ ಭಕ್ತರಿಗೆ ಸಂಪತ್ತು, ಹಣ, ಅಧಿಕಾರವನ್ನು ಕರುಣಿಸುತ್ತಾಳೆ. ಈಕೆಯ ಎರಡು ಕೈಗಳಲ್ಲಿ ಕಮಲ ಹಿಡಿದಿದ್ದರೆ, ಇನ್ನೆರಡು ಕೈಗಳು ಅಭಯ ಮುದ್ರೆ ಹಾಗೂ ವರದ ಮುದ್ರೆಯನ್ನು ಹೊಂದಿರುತ್ತದೆ. ಆನೆಗಳು ಆಕೆಯ ಪಕ್ಕದಲ್ಲಿ ನಿಂತು ನೀರು ಪ್ರೋಕ್ಷಣೆ ಮಾಡುತ್ತಿರುತ್ತವೆ.

ಗಜ ಲಕ್ಷ್ಮಿಯ ಮಹತ್ವ: ಗಜ ಲಕ್ಷ್ಮಿಯನ್ನು ಪೂಜಿಸುವುದರಿಂದ ಅಧಿಕಾರ ಸಿಗುವುದು, ಶ್ರೇಯಸ್ಸು ಹೆಚ್ಚುವುದು.

5. ಸಂತಾನ ಲಕ್ಷ್ಮಿ

5. ಸಂತಾನ ಲಕ್ಷ್ಮಿ

ಪ್ರತಿಯೊಬ್ಬ ಮಹಿಳೆ ತಾನು ತಾಯಿಯಾಗಬೇಕೆಂದು ಬಯಸುತ್ತಾಳೆ. ಲಕ್ಷ್ಮಿಯ ಈ ಸ್ವರೂಪವೂ ಸಂತಾನ ಭಾಗ್ಯವನ್ನು ಕರುಣಿಸುತ್ತದೆ. ಈ ಸ್ವರೂಪದ ಲಕ್ಷ್ಮಿಯ ಮಡಿಲಿನಲ್ಲಿ ಒಂದು ಮಗುವಿರುತ್ತದೆ, ಆ ಮಗು ಕಮಲವನ್ನು ಹಿಡಿದಿರುತ್ತದೆ.

ಸಂತಾನ ಲಕ್ಷ್ಮಿಯ ಮಹತ್ವ

ಸಂತಾನ ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂತಾನಭಾಗ್ಯ ಇಲ್ಲದವರಿಗೆ ಮಕ್ಕಳಾಗುವುದು. ಅಲ್ಲದೆ ಈಕೆಯನ್ನು ಆರಾಧಿಸುವುದರಿಂದ ದೀರ್ಘಾಯುಸ್ಸು ಹೊಂದಿರುವ, ಆರೋಗ್ಯಯುತ ಮಗು ಪ್ರಾಪ್ತಿಯಾಗುವುದು.

6. ಧೈರ್ಯ ಲಕ್ಷ್ಮಿ

6. ಧೈರ್ಯ ಲಕ್ಷ್ಮಿ

ಜೀವನದಲ್ಲಿರುವ ಉನ್ನತ ಗುರಿ ತಲುಪಲು ಈಕೆ ಧೈರ್ಯ ತುಂಬುತ್ತಾಳೆ. ಈಕೆಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಮನೋಧೈರ್ಯ ಹೆಚ್ಚುವುದು. ಮನೋಧೈರ್ಯ ಹೆಚ್ಚಿದರೆ ನಮ್ಮ ಗುರಿ ಸುಲಭವಾಗಿ ಮುಟ್ಟುತ್ತೇವೆ. ಕೈಗಳಲ್ಲಿ ಚಕ್ರ, ಶಂಖ, ಬಾಣ, ಖಡ್ಗ, ಚಿನ್ನದ ಬಿಲ್ಲು ಅಥವಾ ಪುಸ್ತಕ ಹಿಡಿದು, ಇನ್ನೆರಡು ಕೈಗಳು ಅಭಯ ಮುದ್ರೆ ಹಾಗೂ ವರದ ಮುದ್ರೆ ಹಿಡಿದು ಆಸೀನಳಾಗಿರುತ್ತಾಳೆ.

ಧೈರ್ಯ ಲಕ್ಷ್ಮಿ ಮಹತ್ವ

ವೀರ ಲಕ್ಷ್ಮಿಯನ್ನು ಪೂಜಿಸುವುದರಿಂದ ಧೈರ್ಯ ಹೆಚ್ಚುವುದು. ನಮ್ಮಲ್ಲಿ ಏನಾದರೂ ಗೊಂದಲವಿದ್ದರೆ ಅದನ್ನು ನಿವಾರಣೆ ಮಾಡಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತಾಳೆ.

7. ವಿದ್ಯಾ ಲಕ್ಷ್ಮಿ

7. ವಿದ್ಯಾ ಲಕ್ಷ್ಮಿ

ವಿದ್ಯಾ ಲಕ್ಷ್ಮಿಯನ್ನು ವಿದ್ಯಾರ್ಥಿಗಳು ಪೂಜಿಸಿದರೆ ಒಳ್ಳೆಯದು. ನಾಲ್ಕು ಕೈಗಳನ್ನು ಹೊಂದಿರುತ್ತಾಳೆ. ಎರಡು ಕೈಗಳಲ್ಲಿ ಕಮಲ ಹಿಡಿದಿರುತ್ತಾಳೆ, ಮತ್ತೆರಡು ಕೈಗಳು ಅಭಯ ಹಾಗೂ ವರದ ಮುದ್ರೆ ಸ್ಥಿತಿಯಲ್ಲಿರುತ್ತದೆ.

ವಿದ್ಯಾ ಲಕ್ಷ್ಮಿ ಪೂಜೆಯ ಮಹತ್ವ: ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಈಕೆಯನ್ನು ಪೂಜಿಸಿದರೆ ಒಳ್ಲೆಯದು. ವಿದ್ಯಾ ಲಕ್ಷ್ಮಿಗೆ ಬುಧವಾರ ಪೂಜೆ ಸಲ್ಲಿಸಲಾಗುವುದು.

8. ವಿಜಯ ಲಕ್ಷ್ಮಿ

8. ವಿಜಯ ಲಕ್ಷ್ಮಿ

ಈಕೆಯನ್ನು ಪೂಜಿಸುವುದರಿಂದ ವಿಜಯ ನಿಮ್ಮದಾಗುವುದು. ಕೆಂಪು ಸೀರೆಯುಟ್ಟು 8 ಕೈಗಳನ್ನು ಹೊಂದಿರುವ ಈ ಲಕ್ಷ್ಮಿ ಸ್ವರೂಪ ಏನೇ ಅವಾಲುಗಳಿದ್ದರೂ ಅದನ್ನು ಸರಿಸಿ ವಿಜಯ ನಮ್ಮದಾಗಲು ಅವಳ ಆಶೀರ್ವಾದ ಸಿಗುವುದು.

ವಿಜಯ ಲಕ್ಷ್ಮಿಯ ಮಹತ್ವ: ಈ ಸ್ವರೂಪವನ್ನು ಆರಾಧಿಸುವುದರಿಂದ ಆಂತರಿಕ ಶಕ್ತಿ ಹಾಗೂ ಗೆಲುವಿನ ಮನೋಭಾವ, ಮನೋಧೈರ್ಯ ಹೆಚ್ಚುವುದು.

English summary

Ashta Lakshmi: The eight forms of Goddess Lakshmi and significance in Kannada

Ashta Lakshmi: The eight forms of Goddess Lakshmi and significance in Kannada, read on...
X
Desktop Bottom Promotion