For Quick Alerts
ALLOW NOTIFICATIONS  
For Daily Alerts

ರಾತ್ರಿಯಲ್ಲಿ ನಾಯಿ ಊಳಿಡಲು ಕಾರಣವೇನು ಗೊತ್ತಾ?

|

ಗಾಢ ನಿದ್ದೆಯಲ್ಲಿರುತ್ತೀರಿ ಇದ್ದಕ್ಕಿದ್ದಂತೆ ನಾಯಿ ಊಳಿಡಲು ಪ್ರಾರಂಭಿಸುತ್ತದೆ. ಅದರ ಶಬ್ದಕ್ಕೆ ನಿದ್ದೆ ಹಾರಿ ಹೋಗುವುದು, ಮನೆಯಲ್ಲೇ ಒಬ್ಬರೇ ಇದ್ದರೆ ಸ್ವಲ್ಪ ಆಗೋಚರ ಶಕ್ತಿಗಳನ್ನು ನಂಬುವವರಿಗೆ ನಾಯಿ ಈ ರೀತಿ ಊಳಿಡಲು ಪ್ರಾರಂಭಿಸಿದ ತಕ್ಷಣ ಭಯ ಶುರುವಾಗುವುದು, ಇನ್ನು ಯಾವುದೇ ಭಯವಿಲ್ಲದವರಿಗೆ ಈ ನಾಯಿ ಊಳಿಡುವ ಶಬ್ದಕ್ಕೆ ಕಿರಿಕಿರಿ ಉಂಟಾಗುವುದು.
ಮನೆಯ ನಾಯಿ ಆದರೆ ಕಿರುಚಬೇಡ ಎಂದು ಗದರುತ್ತೇವೆ, ಆದರೆ ನಮ್ಮ ಹಾಗೆಯೇ ಅದು ಒಂದು ಜೀವ, ನಾವು ಹೇಗೆ ನಮ್ಮ ಭಾವನೆಗಳನ್ನು ಹೊರಹಾಕುತ್ತೇವೋ ಹಾಗೆಯೇ ಅದು ಕೂಡ ತನ್ನದೇ ರೀತಿಯಲ್ಲಿ ಏನೋ ಹೇಳಲು ಪ್ರಯತ್ನಿಸುತ್ತವೆ,

ನಿಮ್ಮ ಮನೆಯ ನಾಯಿ ಊಳಿಡುತ್ತಿದ್ದರೆ ಇವು ಒಂದು ಕಾರಣಗಳಾಗಿರಬಹುದು ನೋಡಿ:

Dog

1. ನಾಯಿಗಳು ತನ್ನ ಮನೆಯವರ ಗಮನ ಸೆಳೆಯಲು ಈ ರೀತಿ ಊಳಿಡುವುದು

ಈ ಹಿಂದೆ ನಿಮ್ಮ ನಾಯಿ ಬೇರೆ ನಾಯಿ ಜತೆ ಮಲಗುತ್ತಿದ್ದು ಅಥವಾ ಮನೆಯೊಳಗೆ ಮಲಗುತ್ತಿದ್ದು ನಂತರ ಅದನ್ನು ಒಂಟಿಯಾಗಿ ಮಲಗಲು ಬಿಟ್ಟರೆ ಆಗ ನಾಯಿ ಊಳಿಡುವುದು. ದಿನಾ ಊಳಿಡುತ್ತಿದ್ದರೆ ಅದು ರಾತ್ರಿ ಹೊತ್ತಿನಲ್ಲಿ ಒಂಟಿಯಾಗಿರುವುದರಿಂದ ಆ ರೀತಿ ಮಾಡುತ್ತಿರುತ್ತದೆ. ಆಗ ಅದರ ಜತೆಗೆ ಬೇರೆಯೊಂದು ನಾಯಿಯನ್ನು ಸಾಕಿದರೆ ಈ ಸಮಸ್ಯೆ ಇಲ್ಲವಾಗುವುದು, ಇಲ್ಲ ಮನೆಯೊಳಗೆ ಮಲಗಲು ಅವಕಾಶ ಮಾಡಿಕೊಡಬೇಕಾಗುತ್ತದೆ. ಕೆಲವೊಂದು ನಾಯಿಗಳು ಒಂದು ನಾಲ್ಕು ದಿನ ಊಳಿಟ್ಟು ನಂತರ ಒಂಟಿಯಾಗಿ ಮಲಗುವುದು ರೂಢಿಸಿಕೊಳ್ಳುತ್ತವೆ.

2. ನಾಯಿಗೆ ವಯಸ್ಸಾಗಿದ್ದರೆ

ಮನುಷ್ಯರಿಗೆ ವಯಸ್ಸಾಗುತ್ತಿದ್ದಂತೆ ಮರೆವು, ಮತ್ತಿತರ ಆರೋಗ್ಯ ಸಮಸ್ಯೆ ಹೇಗೆ ಕಾಡುತ್ತದೆಯೋ ಅದೇ ರೀತಿ ಪ್ರಾಣಿಗಳಿಗೂ ಉಂಟಾಗುವುದು. ಸಾಮಾನ್ಯವಾಗಿ ನಾಯಿಗಳಿಗೆ ನೆನಪಿನ ಶಕ್ತಿ ತುಂಬಾ ಇರುತ್ತದೆ. ಚಿಕ್ಕ ಮರಿ ಆಗಿದ್ದಾಗ ಅದರ ಜತೆ ಆಡುತ್ತಿದ್ದು, ನಂತರ ಅದು ಬೆಳೆಯುತ್ತಿದ್ದಾಗ ವಿದ್ಯಾಭ್ಯಾಸ, ಉದ್ಯೋಗ ಅಂತ ಮನೆ ಸದಸ್ಯರು ಒಂದಿಷ್ಟು ವರ್ಷಗಳು ಮನೆಯಿಂದ ದೂರವಿದ್ದು ನಂತರ ಮರಳಿ ಬಂದಾಗ ಅವರನ್ನು ಗುರಿತು ಹಿಡಿಯುತ್ತದೆ. ಆದರೆ ಕೆಲವೊಂದು ನಾಯಿಗಳಿಗೆ ವಯಸ್ಸಾಗುತ್ತಾ ಬರುತ್ತಿದ್ದಂತೆ ಆರೋಗ್ಯ ಸಮಸ್ಯೆ ಕಾಡುವುದು. ಮರೆವಿನ ಸಮಸ್ಯೆ ಕೂಡ ಉಂಟಾಗುವುದು, ತಾನು ಏನು ಮಾಡಬೇಕು ಎಂದು ತಿಳಿಯದೆ ಗೊಂದಲಕ್ಕೆ ಬಿದ್ದು, ಅದನ್ನು ಊಳಿಡುವ ಮೂಲಕ ತನ್ನ ಭಾವನೆಗಳನ್ನು ವ್ಯಕ್ತ ಪಡಿಸುತ್ತದೆ. ಈ ರೀತಿ ಊಳಿಡುತ್ತಿದ್ದರೆ ಏನು ಮಾಡಬೇಕು ಎಂದು ಪ್ರಾಣಿ ತಜ್ಞರ ಸಲಹೆ ಪಡೆದುಕೊಳ್ಳಿ.

3. ತನ್ನ ಗುಂಪಿಗೆ ನೀಡುವ ಸೂಚನೆ ಆಗಿರುತ್ತದೆ

ಕಾಡು ನಾಯಿಗಳು ಈ ರೀತಿ ಊಳಿಡುತ್ತಿದ್ದರೆ ತನ್ನ ಇತರ ಗುಂಪಿಗೆ ತಾನಿರುವ ಸ್ಥಳಕ್ಕೆ ಬರಲು ನೀಡುವ ಸೂಚನೆ ಅದಾಗಿದೆ. ಯಾವುದಾದರೂ ಪ್ರಾಣಿಯನ್ನು ಗುಂಪಾಗಿ ಬೇಟೆಯಾಡಲು ಈ ರೀತಿ ಊಳಿಟ್ಟು ತನ್ನ ಬಳಗವನ್ನು ಕರೆಸಿಕೊಳ್ಳುತ್ತವೆ. ಇನ್ನು ಮನೆಯಲ್ಲಿ ಬೆಳೆಯುವ ನಾಯಿಯಾದರೆ ಈ ರೀತಿ ಊಳಿಡಲು ಬೇರೆಯದೇ ಕಾರಣವಿರುತ್ತದೆ. ದಿನಾ ಮನೆಯಲ್ಲಿ ಜನ ಇರುತ್ತಿದ್ದು, ಒಂದು ದಿನ ಮನೆ ಬಾಗಿಲು ಹಾಕಿ ಎಲ್ಲಿಗಾದರೂ ಹೋದರೆ ಆಗ ನಾಯಿಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ರೀತಿ ಊಳಿಡುವ ಮೂಲಕ ತನ್ನ ಒಂಟಿತನವನ್ನು ಹೊರ ಹಾಕುತ್ತದೆ. ಅದು ಊಳಿಟ್ಟರೆ ನೀವು ಬರಬಹುದು ಎಂದು ನಿರೀಕ್ಷಿಸಿ ಊಳಿಡುವುದು.

4. ತನ್ನ ಪ್ರದೇಶಗಳಿಗೆ ಬೇರೆ ನಾಯಿಗಳು ಬಂದರೆ

ಸಾಮಾನ್ಯವಾಗಿ ನಾಯಿಗಳು ತಮ್ಮದೇ ಆದ ಗಡಿಯನ್ನು ಹಾಕಿಕೊಂಡಿರುತ್ತವೆ. ಆ ಗಡಿಯನ್ನು ದಾಟಿ ಬೇರೆ ಬೀದಿಯ ನಾಯಿ ಬಂದರೆ ಸಾಕು ಅದನ್ನು ಕಂಡ ತಕ್ಷಣ ಒಂದು ನಾಯಿ ಊಳಿಡಲು ಪ್ರಾರಂಭಿಸುತ್ತದೆ, ಉಳಿದ ನಾಯಿಗಳು ಅದರ ಜತೆ ಸೇರಿ ಬಂದಂತಹ ನಾಯಿ ಮೇಲೆ ಆಕ್ರಮಣ ಮಾಡಲು ಮುಂದಾಗುತ್ತದೆ. ಈ ರೀತಿಯ ಕಚ್ಚಾಟವನ್ನು ಬೀದಿ ನಾಯಿಯಲ್ಲಿ ಹೆಚ್ಚಾಗಿ ಕಾಣಬಹುದು.

ಮೂಢನಂಬಿಕೆಗಳು

ನಾಯಿಗಳು ಊಳಿಟ್ಟರೆ ಏನೋ ಅನಾಹುತ ಸಂಭವಿಸುತ್ತದೆ ಎಂಬ ಮೂಢನಂಬಿಕೆಯಿದೆ. ನಾಯಿಗಳು ಊಳಿಟ್ಟರೆ ಯಾವುದೋ ಕೆಟ್ಟ ಸುದ್ದಿ ಕೇಳಿ ಬರುತ್ತದೆ , ಮನೆಯಲ್ಲಿ ಯಾರಿಗಾದರೂ ಹುಷಾರು ಇಲ್ಲದಿದ್ದರೆ ನಾಯಿ ಈ ರೀತಿ ಊಳಿಟ್ಟರೆ ಅಶುಭ ಘಟನೆ ನಡೆಯುವುದು ಎಂದು ಹೇಳಲಾಗುವುದು. ಇದು ನಿಜವೋ, ಸುಳ್ಳೋ ಎನ್ನುವದು ಅವರವರ ಭಾವಕ್ಕೆ ಬಿಟ್ಟಿದ್ದು.

English summary

Do You know why dog Cry At Night

Have you ever get disturbed in the middle of the night because of your dog crying? If so,do you know the reason Why is your pet is crying, how you can stop that, To know this read this article.
Story first published: Tuesday, November 5, 2019, 10:38 [IST]
X
Desktop Bottom Promotion