For Quick Alerts
ALLOW NOTIFICATIONS  
For Daily Alerts

ಮಾನ್ಸೂನ್‌ನಲ್ಲಿ ಕೈತೋಟದ ಕಾಳಜಿ ಹೀಗಿರಲಿ

|

ವರ್ಷದ 365 ದಿನಗಳಲ್ಲಿ ವಸಂತ ಋತು ಹಾಗೂ ಮಳೆಗಾಲ ಪ್ರಕೃತಿಯ ಸೊಬಗನ್ನು ಸವಿಯಲು ಕಣ್ಣಿಗೆ ಸೊಗಸಾದ ಹಚ್ಚ ಹಸಿರಾದ ನಿಸರ್ಗದ ಹೂರಣವನ್ನು ಉಣಬಡಿಸುತ್ತದೆ. ವಸಂತ ಋತುವಿನಲ್ಲಿ ಹಳೇ ಎಲೆಗಳು ಉದುರಿ ಹೊಸದಾಗಿ ಮೂಡಿಬಂದ ಚಿಗುರೆಲೆಗಳು ತಮ್ಮ ಸೌಂದರ್ಯದಿಂದ ನಮ್ಮ ಕಣ್ಮನ ಸೆಳೆದರೆ, ಮಳೆಗಾಲದಲ್ಲಿ ಹಿಂದಿನ ಬೇಸಿಗೆಗಾಲದಲ್ಲಿ ಬಾಡಿ ಹೋಗಿದ್ದ ಗಿಡಮರಗಳು ಮತ್ತೊಮ್ಮೆ ಹಸಿರು ಬಣ್ಣವನ್ನು ಮೈದುಂಬಿಕೊಂಡು ನಿಸರ್ಗದ ರಮಣೀಯ ದೃಶ್ಯವನ್ನು ಮತ್ತೊಮ್ಮೆ ನಮ್ಮ ಮುಂದೆ ಸಾಬೀತು ಪಡಿಸುತ್ತವೆ. ಅಲ್ಲಲ್ಲಿ ಕಂಡು ಬರುವ ಮಳೆಯ ನೀರಿನ ಜೊತೆಗೆ ಗಿಡಮರಗಳ ಇಂಪು ನಮ್ಮ ಕಣ್ಣುಗಳಿಗೆ ಹಾಗೂ ದೇಹಕ್ಕೆ ಸೊಗಸಾದ ಅನುಭವವನ್ನು ನೀಡುತ್ತವೆ.

ನಾವು ಮನೆಯಂಗಳದಲ್ಲಿ ಬೆಳೆಸಿದ ಸಣ್ಣಪುಟ್ಟ ಗಿಡ ಹಾಗೂ ಬಳ್ಳಿಗಳು ಮಳೆಗಾಲದಲ್ಲಿ ತಮ್ಮ ಬೆಳವಣಿಗೆಯನ್ನು ವೃದ್ಧಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ನಾವು ಹೇಗೂ ಮಳೆನೀರು ಬೀಳುತ್ತಿದೆ. ನೋಡಲು ಗಿಡಗಳೂ ಸಹ ಚೆನ್ನಾಗಿ ಕಾಣುತ್ತಿವೆ. ಹಾಗಾಗಿ ನಮ್ಮ ಕೆಲಸ ಏನೂ ಇಲ್ಲ ಎಂದು ನಿರ್ಲಕ್ಷ ತೋರುತ್ತೇವೆ. ಆದರೆ ಕೆಲವು ಗಿಡಬಳ್ಳಿಗಳು ಅಗತ್ಯ ಪ್ರಮಾಣದ ಸೂರ್ಯನ ಕಿರಣಗಳು ಸಿಗದೆ ಅಗತ್ಯಕ್ಕಿಂತ ಹೆಚ್ಚಾದ ಮಳೆ ನೀರಿನಿಂದ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಹಾಗಾಗಿ ನಿಮ್ಮ ಮನೆಯಂಗಳದಲ್ಲಿ ಕುಂಡಗಳಲ್ಲಿ ಬೆಳೆಸಿದ ಗಿಡಬಳ್ಳಿಗಳನ್ನು ಮಳೆಗಾಲದಲ್ಲಿ ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಬಗ್ಗೆ ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.

ಗಿಡಗಳ ಕುಂಡಗಳನ್ನು ಹೆಚ್ಚು ಮಳೆ ನೀರಿನಿಂದ ರಕ್ಷಿಸಿ

ಗಿಡಗಳ ಕುಂಡಗಳನ್ನು ಹೆಚ್ಚು ಮಳೆ ನೀರಿನಿಂದ ರಕ್ಷಿಸಿ

ಅತಿಯಾದ ಮಳೆ ನೀರು ಬಿದ್ದು ನೀವು ಇಷ್ಟಪಟ್ಟು ನಿಮ್ಮ ಮನೆಯ ಹಿಂದೆ ಮುಂದೆ ಕುಂಡಗಳಲ್ಲಿ ಬೆಳೆಸಿದ ಗಿಡಗಳು ಹಾಳಾಗುವ ಸಂಭವವನ್ನು ತಪ್ಪಿಸಲು ನಿಮ್ಮ ಗಿಡಗಳ ಕುಂಡಗಳನ್ನು ಗಿಡಗಳಿಗೆ ಅಗತ್ಯವಾದ ಮಳೆನೀರು ಸಿಗುವಷ್ಟು ಮಾತ್ರ ಎಲ್ಲಿ ಸಾಧ್ಯವಿರುವುದೋ ಅಲ್ಲಿಗೆ ವರ್ಗಾಯಿಸಿ. ಇದರಿಂದ ಗಿಡ ಬಳ್ಳಿಗಳ ಬೇರು ಮತ್ತು ಕಾಂಡ ಕೊಳೆಯುವುದು ತಪ್ಪುವುದರ ಜೊತೆಗೆ ಮಣ್ಣಿನ ಹಾನಿ ಕೂಡ ತಪ್ಪುತ್ತದೆ. ಒಂದು ವೇಳೆ ಅತಿಯಾದ ಮಳೆ ನೀರು ಬಿದ್ದರೂ ಕೂಡ ಹೆಚ್ಚಾದ ನೀರು ಸರಾಗವಾಗಿ ಕುಂಡಗಳಿಂದ ಹೊರ ಹೋಗುವ ವ್ಯವಸ್ಥೆ ಇರಬೇಕು.

ಮಳೆಗಾಲವಾದರೂ ಮಣ್ಣಿನ ಫಲವತ್ತತೆ ಬಹಳ ಮುಖ್ಯ

ಮಳೆಗಾಲವಾದರೂ ಮಣ್ಣಿನ ಫಲವತ್ತತೆ ಬಹಳ ಮುಖ್ಯ

ಮಳೆಗಾಲದಲ್ಲಿ ಸೂರಿನಿಂದ ಮಳೆ ನೀರು ಬಿದ್ದು ಖಂಡಗಳಲ್ಲಿರುವ ಮಣ್ಣು ನೆಲದ ಮೇಲೆ ಬಿದ್ದು ಕೊಚ್ಚಿಕೊಂಡು ಹೋಗಿರುತ್ತದೆ. ಈ ಸಮಯದಲ್ಲಿ ಮಣ್ಣಿನಲ್ಲಿರುವ ಗಿಡಗಳಿಗೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶ ಕೂಡ ಮಳೆನೀರಿನ ಪಾಲಾಗುತ್ತದೆ. ಹಾಗಾಗಿ ಗಿಡಗಳಿಗೆ ಪೌಷ್ಟಿಕ ಸತ್ವಗಳ ಕೊರತೆ ಉಂಟಾಗುತ್ತದೆ. ಈ ಸಮಯದಲ್ಲಿ ನೀವು ಮತ್ತೊಮ್ಮೆ ಗೊಬ್ಬರ ಮಿಶ್ರಣ ಮಾಡಿ ಹೊಸ ಮಣ್ಣನ್ನು ನಿಮ್ಮ ನೆಚ್ಚಿನ ಗಿಡಬಳ್ಳಿ ಗಳಿಗೆ ಒದಗಿಸಬೇಕಾಗುತ್ತದೆ. ಎರೆಹುಳುಗಳ ಮಿಶ್ರಣ ಮಾಡಿದ ಗೊಬ್ಬರ ಗಿಡಗಳಿಗೆ ಇನ್ನೂ ಒಳ್ಳೆಯದು.

ಸಾವಯವ ಗೊಬ್ಬರದ ಕಡೆ ಗಮನಕೊಡಿ

ಸಾವಯವ ಗೊಬ್ಬರದ ಕಡೆ ಗಮನಕೊಡಿ

ಇತ್ತೀಚಿಗೆ ಮಾರುಕಟ್ಟೆಗಳಲ್ಲಿ ರೈತರು ಬೆಳೆಯುವ ಬೆಳೆಯಿಂದ ಹಿಡಿದು ಮನೆಯಲ್ಲಿ ಬೆಳೆಸುವ ಗಿಡ-ಬಳ್ಳಿಗಳಿಗೂ ರಾಸಾಯನಿಕ ಗೊಬ್ಬರಗಳು ಸುಲಭವಾಗಿ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಆದರೆ ಇವುಗಳಿಂದ ಗಿಡಗಳ ಆರೋಗ್ಯಕ್ಕೆ ಹಾನಿ ಮಾತ್ರವಲ್ಲದೆ ಗಿಡ-ಬಳ್ಳಿಗಳಿಂದ ಲಭ್ಯವಾಗುವ ಫಲಗಳನ್ನು ಸೇವಿಸಿದ ನಮಗೂ ಆಪತ್ತಿದೆ. ಹಾಗಾಗಿ ಗಿಡಗಳಿಗೆ ಹೆಚ್ಚು ಸಗಣಿ ಗೊಬ್ಬರಗಳನ್ನು ಹಾಕಲು ಮುಂದಾಗಿ. ಇದು ನೈಸರ್ಗಿಕವಾಗಿರುವುದರಿಂದ ಗಿಡಗಳ ಫಲವತ್ತತೆ ಮತ್ತು ಆರೋಗ್ಯ ದುಪ್ಪಟ್ಟಾಗುತ್ತದೆ.

ಸೂಕ್ಷ್ಮ ಗಿಡಗಳ ಬಗ್ಗೆ ಗಮನವಿರಲಿ

ಸೂಕ್ಷ್ಮ ಗಿಡಗಳ ಬಗ್ಗೆ ಗಮನವಿರಲಿ

ಸೂಕ್ಷ್ಮ ಗಿಡಗಳು ಎಂದರೆ ಬಳ್ಳಿಗಳು ಅಥವಾ ದುರ್ಬಲ ಕಾಂಡಗಳನ್ನು ಹೊಂದಿದ ಗಿಡಗಳು. ಸಾಮಾನ್ಯವಾಗಿ ಇಂತಹ ಗಿಡಗಳು ಹೆಚ್ಚು ಗಾಳಿ ಬಂದರೆ ಮುರಿದುಹೋಗುವ ಅಥವಾ ತಿರುಚಿಕೊಳ್ಳುವ ಸಂಭವವಿರುತ್ತದೆ. ಉದಾಹರಣೆಗೆ ಟೊಮ್ಯಾಟೊ, ಬೀನ್ಸ್, ಡೇರೆ ಹೂವಿನ ಗಿಡ, ಚಂಡು ಹೂವಿನ ಗಿಡ, ಬಟಾಣಿ ಬಳ್ಳಿ ಇತ್ಯಾದಿ. ಇಂತಹ ಗಿಡಗಳಿಗೆ ಮಳೆಗಾಲ ಶುರುವಾಗುವ ಮುಂಚೆ ಕಡ್ಡಿಗಳನ್ನು ಬೆಂಬಲವಾಗಿ ಕೊಡಿ. ಬಳ್ಳಿಗಳನ್ನು ಉದ್ದಕ್ಕೆ ನಿಲ್ಲಿಸಿ ಅಲ್ಲಲೇ ದಾರಗಳಿಂದ ನಯವಾಗಿ ಕಟ್ಟಿ.

ಹೆಚ್ಚು ನೀರುಣಿಸಬೇಡಿ

ಹೆಚ್ಚು ನೀರುಣಿಸಬೇಡಿ

ಬೇಸಿಗೆ ಕಾಲದಿಂದಲೂ ನಮ್ಮ ನೆಚ್ಚಿನ ಹೂ ಕುಂಡಗಳಿಗೆ ಹಾಗೂ ಮನೆಯಂಗಳದ ಗಿಡ ಬಳ್ಳಿಗಳಿಗೆ ನೀರು ಹಾಕಿ ನಮಗೆ ಅಭ್ಯಾಸ. ಆದರೆ ಈಗ ಮಳೆಗಾಲ ವಾಗಿರುವುದರಿಂದ ಈ ಅಭ್ಯಾಸವನ್ನು ಸ್ವಲ್ಪ ದಿನಗಳ ಕಾಲ ಮುಂದೂಡುವುದು ಒಳ್ಳೆಯದು. ಮಳೆಗಾಲದಲ್ಲಿ ಸಾಕಷ್ಟು ಮಳೆ ನೀರು ಗಿಡಗಳಿಗೆ ಲಭ್ಯವಾಗುವುದರಿಂದ ನೀವು ಹಾಕುವ ನೀರಿನ ಅವಶ್ಯಕತೆ ಇರುವುದಿಲ್ಲ. ಹೆಚ್ಚು ನೀರು ಗಿಡಗಳಿಗೆ ಸೇರಿದರೆ ಗಿಡದ ಬೇರುಗಳು ಕೊಳೆತು ಎಲೆ ಉದುರಿ ಹೋಗುವ ಸಾಧ್ಯತೆ ಇರುತ್ತದೆ.

English summary

During The Monsoon Season Potted Plants Need Extra Care

Here we are discussing about During The Monsoon Season Potted Plants Need Extra Care. Read more.
X