For Quick Alerts
ALLOW NOTIFICATIONS  
For Daily Alerts

ಹಬ್ಬದ ಸ್ವಚ್ಛತೆಗೆ ಇಲ್ಲಿದೆ ನೋಡಿ ಒಂದಿಷ್ಟು ಸರಳ ಉಪಾಯ

By Divya Pandith
|

ನವರಾತ್ರಿ ಹಬ್ಬದ ನಂತರ ಬರುವ ಇನ್ನೊಂದು ಸಡಗರದ ಹಬ್ಬವೆಂದರೆ ದೀಪಾವಳಿ. ಭಾರತೀಯರ ಪ್ರಮುಖ ಹಬ್ಬಳಲ್ಲಿ ಒಂದಾದ ದೀಪಾವಳಿಯನ್ನು ಪ್ರತಿಯೊಂದು ರಾಜ್ಯಗಳಲ್ಲೂ ವಿಶೇಷವಾಗಿ ಆಚರಿಸುತ್ತಾರೆ. ವಿವಿಧ ಜನಾಂಗದವರೂ ವಿಭಿನ್ನ ಬಗೆಯ ಪದ್ಧತಿಯನುಸಾರ ಆಚರಿಸುತ್ತಾರೆ. ಮಾರ್ವಾಡೀಸ್ ವರ್ಣರಂಜಿತ ರಂಗೋಲಿಯನ್ನು ಹಾಕುವುವುದು, ಕರ್ನಾಟಕದವರು ವಿಶೇಷ ಹಾಗೂ ವಿಜ್ರಂಭಣೆಯಲ್ಲಿ ಲಕ್ಷ್ಮಿ ಪೂಜೆ ಮಾಡುವುದು ಹಾಗೂ ಬಂಗಾಳಿಯವರು "ಕಲಿಪೂಜೆಯನ್ನು" ಮಾಡುವುದರ ಮೂಲಕ ಪೂಜೆಯ ವಿಶೇಷವನ್ನು ಹೆಚ್ಚಿಸುತ್ತಾರೆ.

ಲಕ್ಷ್ಮಿ ಪೂಜೆಗೆ ವಿಶೇಷವಾದ ಈ ಹಬ್ಬಕ್ಕೆ ಸಾಕಷ್ಟು ಸಿದ್ಧತೆಗಳು ಬೇಕಾಗುತ್ತದೆ. ಪೂಜಾ ಸಾಮಾಗ್ರಿಗಳ ಸಿದ್ಧತೆ, ಬಂಧುಗಳಿಗೆ ಉಡುಗೊರೆ ಹಾಗೂ ಮನೆಯ ಸ್ವಚ್ಛತೆ ಸೇರಿದಂತೆ ಅನೇಕ ಕೆಲಸಗಳನ್ನು ಕೈಗೊಳ್ಳಬೇಕಾಗುತ್ತದೆ. ಹಾಗಂತ ಮನೆಯ ಸ್ವಚ್ಛತೆಯ ಬಗ್ಗೆ ಹೇಗೆಂದರೆ ಹಾಗೆ ಮಾಡಲು ಆಗದು. ಮಾಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕು. ಸ್ಚಚ್ಛತೆಯ ಬಗ್ಗೆಯೇ ಹೆಚ್ಚು ಸಮಯ ಕಳೆದರೆ ಉಳಿದ ಕೆಲಸ ಮಾಡಲು ಸಮಯ ಸಿಗುವುದಿಲ್ಲ.

ದೀಪಾವಳಿ ಬಳಿಕವೂ ಮನೆ ಸ್ವಚ್ಛವಾಗಿರಲಿ

ಮನೆ ಚಿಕ್ಕದಾಗಿದ್ದರೆ ಸ್ವಲ್ಪ ಸಮಯದಲ್ಲಿಯೇ ಮನೆಯ ಸ್ವಚ್ಛತೆಯನ್ನು ಮಾಡಿ ಮುಗಿಸಬಹುದು. ಅದೇ ದೊಡ್ಡ ಮನೆಯಾಗಿದ್ದರೆ ಅದರ ಸ್ವಚ್ಛತೆ ಹಾಗೂ ಅಲಂಕಾರಕ್ಕೆ ದೀರ್ಘ ಸಮಯ ಬೇಕಾಗುವುದು. ದೊಡ್ಡ ಮನೆಯಾಗಿದ್ದರೂ ಸೂಕ್ತ ಸಿದ್ಧತೆ ಹಾಗೂ ವೇಳಾಪಟ್ಟಿಯನ್ನು ಮಾಡಿಕೊಂಡರೆ ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿ, ಹಬ್ಬದ ಪೂಜೆಗೆ ಸಿದ್ಧರಾಗಬಹುದು. ಅದು ಹೇಗೆ ಎನ್ನುವ ಗೊಂದಲಗಳಿದ್ದರೆ ನಾವಿಲ್ಲಿ ನೀಡಿರುವ ಸಲಹೆಗಳನ್ನು ಪರಿಶೀಲಿಸಿ.

Clean Your Home For Diwali

ಹಬ್ಬದ ದಿನಗಳಿಗೆ ನಾವು ಬಹಳ ಹತ್ತಿರದಲ್ಲಿಯೇ ಇದ್ದೇವೆ. ನೀವಿನ್ನೂ ಮನೆಯ ಸ್ವಚ್ಛತೆಯ ಬಗ್ಗೆ ಯಾವುದೇ ತಯಾರಿ ಮಾಡಿಕೊಂಡಿರದಿದ್ದರೆ ನಾವಿಲ್ಲಿ ನೀಡಿರುವ ತ್ವರಿತ ಉಪಾಯಗಳನ್ನು ಬಳಸಿ ಸ್ವಚ್ಛಗೊಳಿಸಿ. ಆಗ ಮನೆಯು ಹೆಚ್ಚು ಸ್ವಚ್ಛ ಹಾಗೂ ಆಕರ್ಷಕವಾಗಿ ಕಾಣುತ್ತದೆ. ಮನೆಗೂ ವಿಶೇಷವಾದ ಹಬ್ಬದ ಕಳೆ ಬರುತ್ತದೆ. ಬಂದವರ ಮುಂದೆ ತಲೆತಗ್ಗಿಸುವುದು ಅಥವಾ ಮನೆಗೆ ಬಂದ ವ್ಯಕ್ತಿಗೆ ನಿಮ್ಮ ಮನೆಯ ಹೊಲಸನ್ನು ನೋಡಿ ಮನಸ್ಸಿಗೆ ಇರಿಸು ಮುರಿಸು ಆಗುವುದನ್ನು ತಪ್ಪಿಸಬಹುದು. ಹಬ್ಬವೂ ಬಹಳ ಸಡಗರ ಹಾಗೂ ಖುಷಿಯಿಂದ ಆಚರಿಸಲು ಅನುವುಮಾಡಿಕೊಡುವುದು.

ಸಮಯ ನಿಗದಿಪಡಿಸಿಕೊಳ್ಳಿ
ಹಬ್ಬಕ್ಕೆ ಇನ್ನೇನು ಒಂದೇ ವಾರ ಉಳಿದಿದೆ ಎನ್ನುವ ಗಡಿಬಿಡಿಯನ್ನು ಬಿಟ್ಟುಬಿಡಿ. ಪ್ರತಿಯೊಂದು ಸ್ಥಳಕ್ಕೂ ನೀವು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳಿ. ಆಗ ನಿಮ್ಮ ಕೆಲಸ ಸುಲಭವಾಗುವುದು. ಉದಾರಣೆಗೆ ಮಲಗುವ ಕೋಣೆಗೆ 2 ದಿನ ಹಾಗೂ ಇತರ ಕೊಠಡಿಗಳಿಗೆ 2 ದಿನ ಇರಿಸಿಕೊಳ್ಳಿ. ನಂತರದ ದಿನಗಳಲ್ಲಿ ಇತರ ಕೆಲಸಗಳಿಗೆ ಸಮಯ ನೀಡಿ. ಇಲ್ಲವಾದರೆ ಹಬ್ಬದ ಗಡಿಬಿಡಿ ಹಾಗೂ ಬಂಧುಗಳ ಆಗಮನ, ಸಿಹಿ ಖಾದ್ಯಗಳ ತಯಾರಿ ಎನ್ನುತ್ತಾ ಯಾವ ಕೆಲಸ ಮೊದಲು ಮಾಡಬೇಕು? ಯಾವುದು ನಂತರ ಮಾಡಬೇಕು ಎನ್ನುವ ಗೊಂದಲದಲ್ಲಿಯೇ ಒಂದಿಷ್ಟು ಸಮಯ ವ್ಯರ್ಥವಾಗಿರುತ್ತದೆ.

ಯಾವ ವಸ್ತು ಬೇಕೆನ್ನುವುದನ್ನು ನಿರ್ಧರಿಸಿ
ಮನೆಯ ಅಲಂಕಾರಕ್ಕೆ ಹಾಗೂ ಅಗತ್ಯಕ್ಕೆ ಯಾವ ಯಾವ ವಸ್ತುಗಳು ಬೇಕು ಎನ್ನುವುದನ್ನು ಮೊದಲು ನಿರ್ಧರಿಸಿ. ನಂತರ ಬೇಡದ ವಸ್ತುಗಳನ್ನು ಸ್ಟೋರ್ ರೂಮ್‍ನಲ್ಲಿ ಇರಿಸಿ. ಬೇಡದ ವಸ್ತುಗಳನ್ನು ಸ್ವಚ್ಛಮಾಡುತ್ತಾ ಕುಳಿತರೆ ಹೆಚ್ಚು ಸಮಯ ಬೇಕಾಗುವುದು. ಬೇಡದ ವಸ್ತುಗಳನ್ನು ಒಂದೆಡೆ ಇಟ್ಟರೆ, ಬೇಕಾಗಿರುವ ವಸ್ತುಗಳನ್ನು ಮಾತ್ರ ಸ್ವಚ್ಛಗೊಳಿಸಿಕೊಂಡರೆ ಸಾಕಾಗುವುದು. ಬೇಡದ ವಸ್ತುಗಳನ್ನು ಅಲ್ಲಲ್ಲಿಯೇ ತುರುಕಿ ಇಡುವುದರಿಂದ ಮನೆಯ ಸೌಂದರ್ಯವೂ ಹಾಳಾಗುತ್ತದೆ. ಜೊತೆಗೆ ನೀವು ಇಟ್ಟಿರುವ ಹೊಸ ವಸ್ತುವಿನ ಆಕರ್ಷಣೆಯನ್ನು ಹಳೆವಸ್ತುಗಳು ಕಡಿಮೆಗೊಳಿಸುತ್ತವೆ.

ವಿನೆಗರ್ ಬಳಸಿ
ಕಡಿಮೆ ಸಮಯದಲ್ಲಿ ಬಹು ಬೇಗ ಸ್ವಚ್ಛಗೊಳಿಸಲು ವಿನೆಗರ್ ಬಹಳ ಉಪಯುಕ್ತವಾದದ್ದು. ನೆಲದ ಕಲೆಗಳು ಅಂಟು, ಗೋಡೆಯ ಮೇಲಿರುವ ಕಲೆಯನ್ನು ತೆಗೆಯಲು ಬಹಳ ಸಮಯ ಬೇಕಾಗುವುದು. ನೀವು ಸ್ವಚ್ಛಮಾಡುವ ನೀರಿಗೆ ಬಿಳಿ ವಿನೆಗರ್ ಬಳಸಿಕೊಂಡರೆ ಬಹು ಬೇಗ ಸ್ವಚ್ಛಗೊಳಿಸಬಹುದು. ಆಗ ನೀವು ಕಡಿಮೆ ಸಮಯದಲ್ಲಿ ಸ್ವಚ್ಛ ಮಾಡಿದಂತಾಗುವುದು. ಉಳಿದ ಸಮಯವನ್ನು ಬೇರೆ ಕೆಲಸಕ್ಕೆ ತೊಡಗಿಸಿಕೊಳ್ಳಬಹುದು.

ಹಾಸಿಗೆ ಬಟ್ಟೆ ಮತ್ತು ಕರ್ಟ್‍ನ್‍ಗಳನ್ನು ಬದಲಿಸಿ
ಮನೆಯ ಸ್ವಚ್ಛಗೊಳಿಸಲು ಹಾಸಿಗೆ ಬಟ್ಟೆ ಮತ್ತು ಕರ್ಟ್‍ನ್ ಬದಲಾವಣೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಳೆಯದು ಅಥವಾ ನಿತ್ಯದ ಬಳಕೆಗೆ ಹಾಕಿರುವ ಬೆಡ್ ಕವರ್ ಹಾಗೂ ಕರ್ಟ್‍ನ್‍ಗಳನ್ನು ತೆಗೆದು ಹೊಸದನ್ನು ಬಳಸಿದರೆ ಹೊಸ ಲುಕ್ ಹಾಗೂ ಸ್ವಚ್ಛತೆಯು ಎದ್ದು ಕಾಣುತ್ತದೆ. ಜೊತೆಗೆ ಮನೆಯ ಅಲಂಕಾರವೂ ಸುಂದರವಾಗಿ ಕಾಣುವುದು. ಹೊಸ ಬಟ್ಟೆಗಳು ಹೆಚ್ಚು ಸ್ವಚ್ಛವಾಗಿ ಮತ್ತು ಆಕರ್ಷಕವಾಗಿ ಕಾಣುವುದರಿಂದ ಮನೆಗೆ ಬಂಧ ಅತಿಥಿಗಳಿಗೂ ಮನೆಯ ಅಲಂಕಾರವನ್ನು ನೋಡಿ ಮನಸ್ಸಿಗೆ ಹಿತ ಎನಿಸುವುದು.

ಹೊಳಪಿನ ವಸ್ತುಗಳನ್ನು ಬಳಸಿ
ಆರತಿ ಬಟ್ಟಲು, ಮನೆಯ ತೋರಣ, ಅಲಂಕಾರಿ ವಸ್ತುಗಳು ತಾಮ್ರ ಮತ್ತು ಹಿತ್ತಾಳೆಯದ್ದಾಗಿದ್ದರೆ ಅವುಗಳನ್ನು ಸ್ವಚ್ಛಗೊಳಿಸಿ, ಹೊಳಪಿನಿಂದ ಕೂಡಿರುವಂತೆ ಮಾಡಿ. ತೋರಣ ಹಾಗೂ ಆರತಿ ಬಟ್ಟಲುಗಳನ್ನು ಹೊಸದಾಗಿ ಶೃಂಗರಿಸಿ ಆಕರ್ಷಕವಾಗಿ ಕಾಣುವಂತೆ ಮಾಡಿ. ಉದಾರಣೆಗೆ ನೀವು ಮನೆಗೆ ಬಂದ ಅತಿಥಿಗಳಿಗೆ ಸಿಹಿ ತಿಂಡಿ ಅಥವಾ ಕಾಫಿ-ಟೀಗಳನ್ನು ನೀಡುವಾಗ, ಬಳಸುವ ಪ್ಲೇಟ್ ಹಾಳಾಗಿದ್ದರೆ ಅಥವಾ ಅದರಲ್ಲಿ ಯಾವುದೋ ಪಾದರ್ಥಗಳು ತಾಗಿ ಒಣಗಿದ್ದರೆ ಅದು ನೋಡುಗರ ಕಣ್ಣಿಗೆ ಹೊಲಸಾಗಿ ಕಾಣುವುದು. ಅಲ್ಲದೆ ಅದನ್ನು ಸ್ವೀಕರಿಸುವಾಗ ಬಂಧುಗಳಿಗೆ ಇರಿಸು ಮುರಿಸು ಉಂಟಾಗಬಹುದು. ಹಾಗಾಗಿ ನೀವು ಬಳಸುವ ಪಾತ್ರೆ ಹಾಗೂ ತಟ್ಟೆಗಳು ಸಹ ಹೆಚ್ಚು ಹೊಳಪಿನಿಂದ ಕೂಡಿರಲಿ.

ಸ್ನಾನ ಗೃಹದ ಬಗ್ಗೆ ಕಾಳಜಿ ಬೇಕು
ಮನೆಯ ಸ್ವಚ್ಛತೆಯನ್ನು ಪ್ರತಿಬಿಂಬಿಸುವಲ್ಲಿ ಸ್ನಾನಗೃಹ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದೇ ವಾಸನೆ ಹಾಗೂ ಕೊಳೆಯಿಂದ ಕೂಡಿದ್ದರೆ ಮನೆಯ ಸೊಗಸನ್ನೇ ಹಾಳುಮಾಡಿಬಿಡುತ್ತದೆ. ಬಂಧುಗಳು ಬಂದಾಗ ಸ್ನಾನಗೃಹದ ಬಳಕೆಯನ್ನು ಒಮ್ಮೆಯಾದರೂ ಮಾಡುತ್ತಾರೆ. ಹಾಗಾಗಿ ಸ್ನಾನ ಗೃಹದ ಸ್ವಚ್ಛತೆ ಬಹು ಮುಖ್ಯವಾದದ್ದು ಎನ್ನುವುದನ್ನು ನೀವು ಮರೆಯ ಬಾರದು. ಸ್ವಚ್ಛತೆಗೆ ಸಹಾಯ ಮಾಡುವ ನಿಂಬೆ ರಸ, ವಿನೆಗರ್‍ಅನ್ನು ನೀರಿಗೆ ಬಳಸಿ ಕಲೆಯನ್ನು ತೆಗೆಯಿರಿ. ಇಲ್ಲವೇ ಮಾರುಕಟ್ಟೆಯಲ್ಲಿ ದೊರೆಯುವ ಪಿನೈಲ್ ಅಥವಾ ಡೊಮೆಕ್ಸ್‍ನಂತಹ ಉತ್ಪನ್ನಗಳನ್ನು ಬಳಸಿ. ಜೊತೆಗೆ ಸ್ನಾನ ಗೃಹ ಸುವಾಸನೆಯಿಂದ ಕೂಡಿರಲು ರೂಮ್ ಫ್ರೆಶ್ನರ್ ಬಳಸಿ. ಹಬ್ಬದ ದಿನ ಬಂದವರು ಕೈತೊಳೆಯಲು ಸೂಕ್ತವಾದ ಸೋಪ್ ಅಥವಾ ಲಿಕ್ವಿಡ್‍ಗಳನ್ನು ಇರಿಸಿ. ಹಾಗೆಯೇ ಒಂದು ಕೈ ಒರೆಸುವ ಟವೆಲ್ ಅಥವಾ ಟಿಶ್ಯುಗಳನ್ನು ಇಡಲು ಮರೆಯದಿರಿ.

ಅಡುಗೆ ಮನೆಯ ಸ್ವಚ್ಛತೆ
ಅಡುಗೆ ಮನೆಯಲ್ಲಿ ಮರದ ಹಲಗೆಗಳು ದೂಳಿನ ಕಣಗಳನ್ನು ಸಂಗ್ರಹಿಸಿಕೊಳ್ಳುತ್ತವೆ. ಎಣ್ಣೆ ಪದಾರ್ಥಗಳನ್ನು ತಯಾರಿಸಿದಾಗ ಅವು ಗಾಳಿಯಲ್ಲಿ ಎಣ್ಣೆಯ ಜಿಡ್ಡುಗಳು ಎಲ್ಲಾ ಪಾತ್ರೆ ಹಾಗೂ ಕಪಾಡುಗಳ ಮೇಲೆ ಸಂಗ್ರಹವಾಗಿ ಕುಳಿತುಕೊಳ್ಳುತ್ತವೆ. ಅವುಗಳನ್ನು ಆಗಾಗ ಸ್ವಚ್ಛ ಮಾಡುತ್ತಿರಬೇಕು. ಇಲ್ಲವಾದರೆ ಅದೊಂದು ಬಗೆಯಲ್ಲಿ ಗಟ್ಟಿಯಾಗಿ ಅಂಟಿನಂತೆ ಹಿಡಿದುಕೊಂಡಿರುತ್ತವೆ. ಅವುಗಳ ಸ್ವಚ್ಛತೆಗೆ ಒಂದೆರಡು ದಿನ ತೆಗೆದುಕೊಂಡರು ಸಾಕಾಗುವುದಿಲ್ಲ. ಪಾತ್ರೆಗಳ ಸ್ವಚ್ಛತೆಗೆ ಸೂಕ್ತ ರೀತಿಯ ಸೋಪ್ ಲಿಕ್ವಿಡ್‍ಗಳನ್ನು ಬಳಸಿ. ಕಪಾಟ್ ಒಳಗಡೆಯ ಸ್ವಚ್ಛತೆಗೆ ವ್ಯಾಕ್ಯೂಮ್ ಕ್ಲೀನರ್ ಬಳಸಿ ಧೂಳನ್ನು ತೆಗೆಯಿರಿ. ನಂತರ ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಬೇಡದ ಕಸ, ಕಸದ ಪೊರಕೆ, ತ್ಯಾಜ್ಯ ವಸ್ತು ಮತ್ತು ಮನೆ ಸ್ವಚ್ಛಗೊಳಿಸುವ ಸಾಮಾಗ್ರಿಗಳನ್ನು ಅಡುಗೆ ಮನೆಯೊಳಗೆ ಇರಿಸದಿರಿ.

English summary

Quick Ways To Clean Your Home For Diwali

India celebrates many festivals. In the months of October and November, there are several occasions to rejoice. After Navratri, Karva Chauth and Dhanteras comes the festival of lights- Diwali. In every state of India, Diwali is celebrated with pomp and glitter. If Marwaris decorate their houses with colourful rangolis, Bengalis celebrate their ‘Kalipujo’ in gaiety.
X
Desktop Bottom Promotion