For Quick Alerts
ALLOW NOTIFICATIONS  
For Daily Alerts

ಗುಲಾಬಿ ಗಿಡಗಳ ಆರೈಕೆ ಹೇಗೆ?

|

ಸಾಮಾನ್ಯವಾಗಿ ಹೂವುಗಳನ್ನು ಇಷ್ಟಪಡದ ವ್ಯಕ್ತಿಗಳೇ ಇಲ್ಲ ಅನ್ನಬಹುದು. ಮನುಷ್ಯರ ಮನಸ್ಸನ್ನೂ ಹೂವಿಗೆ ಹೋಲಿಸಲಾಗುತ್ತದೆ. ಆತನ/ಆಕೆಯ ಮನಸ್ಸು ಮೃದು ಎನ್ನುವುದನ್ನು 'ಹೂವಿನಂತೆ' ಎಂದೇ ಉಚ್ಚರಿಸಲಾಗುತ್ತದೆ. ಅದರಲ್ಲೂ ಗುಲಾಬಿ ಹೂವಿಗೆ ನಾವು ಕೊಡುವಷ್ಟು ಮಹತ್ವ ಬೇರೊಂದಕ್ಕಿಲ್ಲ. ಅದೇಷ್ಟೇ ಹೂವುಗಳು ಒಂದೇ ಕಡೆಗೆ ಬೆಳೆದಿದ್ದರೂ ನಮ್ಮನ್ನು ಆಕರ್ಷಿಸುವುದು ಮಾತ್ರ ಗುಲಾಬಿಯೇ!

ಹೆಚ್ಚಾಗಿ ಅದರಲ್ಲೂ ಮಹಿಳೆಯರಲ್ಲಿ ಹೂದೋಟವನ್ನು ಬೆಳೆಸುವುದು ಒಂದು ಹವ್ಯಾಸವಾಗಿರುತ್ತದೆ. ಮನೆಯ ಮುಂದೆ ನಾನಾ ವಿಧದ ಹೂಗಳಿಂದ ಅಲಂಕೃತಗೊಂಡ ಕೈತೋಟವನ್ನು ನೋಡಲು ಅದೇಷ್ಟು ಸಂತೋಷವಾಗುತ್ತದೆ. ಮಕ್ಕಳಂತೂ ನಗುತ್ತಿರುವ ಹೂಗಳನ್ನು ನೋಡಿಯೇ ಎರಡು ತುತ್ತು ಜಾಸ್ತಿ ಊಟ ಮಾಡುತ್ತವೆ.

ಇಂತಹ ಸಂತೋಷಕ್ಕೆ ಸಾಕ್ಷಿ ಮನೆಯ ಮುಂದೆ ನಗುತ್ತಿರುವ ಗುಲಾಬಿ ಹೂಗಳು. ಕೆಂಪು, ಹಳದಿ, ಬಿಳಿ, ಕೇಸರಿ ಹೀಗೆ ಹಲವಾರು ಬಣ್ಣಗಳಲ್ಲಿ ರಾರಾಜಿಸುವ ಈ ಗುಲಾಬಿ ಹೂಗಳನ್ನು ನೋಡುವುದೇ ಚಂದ.

How To Care For Rose Plants?

ಪ್ರೀತಿಯ ಸಂಕೇತವಾದ ಗುಲಾಬಿ ಹೂಗಳನ್ನು ನಿಮ್ಮ ಮನೆಗಳಲ್ಲೂ ಸುಲಭವಾಗಿ ಬೆಳೆಸಬಹುದು. ಗಿಡಗಳನ್ನು ನೆಲದಲ್ಲಿ ಬೆಳೆಸುವಷ್ಟು ಜಾಗ ನಗರಗಳ ಮನೆಗಳಲ್ಲಿ ಸಾಧ್ಯವಾಗದೇ ಇರಬಹುದು. ಹಾಗೆಂದು ನಿರಾಶೆಗೊಳ್ಳುವ ಅಗತ್ಯವಿಲ್ಲ. ಹೂಕುಂಡಗಳಲ್ಲಿ ಬೆಳೆಸಿ ನಿಮ್ಮ ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು.

ಗುಲಾಬಿ ಗಿಡಗಳಿಗೆ ಬೆಳೆಯಲು ತಕ್ಕ ವಾತಾವರಣ ಬೇಕು. ಅಲ್ಲದೇ ಬೇರೆ ಬೇರೆ 100ಕ್ಕೂ ಅಧಿಕ ಪ್ರಬೇಧಗಳು ಗಿಲಾಬಿ ಹೂವುಗಳಲ್ಲಿವೆ. ಎಲ್ಲಾ ಪ್ರಬೇಧಗಳು ಎಲ್ಲಾ ರೀತಿಯ ಮಣ್ಣುಗಳಲ್ಲಿಯೂ ಬೆಳೆಯುವುದಿಲ್ಲ. ಒಂದೊಮ್ಮೆ ಬೆಳೆಸಿದರೂ ಅದು ಬಹಳ ಕಾಲ ಬದುಕಿರುವುದಿಲ್ಲ. ಆದ್ದರಿಂದ ಗುಲಾಬಿ ಗಿಡಗಳನ್ನು ಬೆಳೆಸುವಾಗ ಕೆಲವು ಮುಖ್ಯ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ.

ಮಣ್ಣು ಫಲವತ್ತಾಗಿರಬೇಕು: ಗಲಾಬಿ ಗಿಡಗಳು ಬಹಳ ಸೂಕ್ಷ್ಮ. ಅವು ಎಲ್ಲಾ ಮಣ್ಣಿನಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿಲ್ಲ. ಒಳ್ಳೆಯ ಒಣಗಿದ (well-drained)ಮಣ್ಣಿನಲ್ಲಿ ಗುಲಾಬಿ ಗಿಡಗಳನ್ನು ಬೆಳೆಸಬಹುದು.ಜೇಡಿಮಣ್ಣು ಹಾಗೂ ಕೆಂಪು ಮಣ್ಣು ಗಿಡ ಬೆಳೆಸಲು ಸೂಕ್ತವಾದುದು. ಗುಲಾಬಿ ಗಿಡಗಳಿಗೆ ಕನಿಷ್ಠ ಆರು ಗಂಟೆಗಳಾದರೂ ಸೂರ್ಯನ ನೇರವಾದ ಕಿರಣಗಳು ಬೇಕು. ಗುಲಾಬಿ ಗಿಡಗಳು ಬೆಳೆಯಲು ಅವುಗಳನ್ನು ಆದಷ್ಟು ತೇವಾಂಶಗಳಿಂದ ಕೂಡಿರುವಂತೆ ನೋಡಿಕೊಳ್ಳಬೇಕು.

ಆದರೆ ಗಿಡದ ಬುಡದಲ್ಲಿ ಸದಾ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಇಲ್ಲವಾದರೆ ಸಸ್ಯ ಕೊಳೆಯುವ ಸಾಧ್ಯತೆಗಳಿರುತ್ತವೆ.ಅಲ್ಲದೇ ಅವು ದುರ್ಬಲವಾಗಿ ರೋಗಗಳಿಗೆ ಒಳಗಾಗುತ್ತವೆ.

ಗುಲಾಬಿ ಗಿಡಗಳನ್ನು ತಿನ್ನುವ ಹುಳಗಳಿಂದ ರಕ್ಷಿಸಬೇಕಾದದ್ದು ಬಹಳ ಮುಖ್ಯ. ಇಲ್ಲವಾದರೆ ಗಿಡದ ಬೆಳವಣಿಗೆಯಲ್ಲಿ ಕುಂಠಿತಗೊಂಡು ಕ್ರಮೇಣ ಅದು ಸಾಯಬಹುದು. ಆದ್ದರಿಂದ ಹಸಿಗೊಬ್ಬರಗಳನ್ನು ಹಾಕಿ ಹಾಗೂ ಆಗಾಗ ಕ್ರಿಮಿನಾಶಕಗಳನ್ನು ಸಿಂಪಡಿಸುತ್ತಿರಬೇಕು.

ಫಲವತ್ತತತೆಗಾಗಿ ಸೆಗಣಿ / ಹಸುವಿನ ತ್ಯಾಜ್ಯವನ್ನು ಬಳಸುವುದು ಉತ್ತಮ. ಈ ಗೊಬ್ಬರದಿಂದ ಗುಲಾಬಿ ಗಿಡಗಳು ಎಲ್ಲದಲ್ಲಿಂತ ಹೆಚ್ಚು ಸದೃಢವಾಗಿ ಬೆಳೆಯುತ್ತವೆ.

ಸರಿಯಾಗಿ ಗಿಡ ನೆಡುವುದು: ಗುಲಾಬಿ ಗಿಡವನ್ನು ತಂದ ತಕ್ಷಣ ನೆಡಬಾರದು.ಗಿಡವನ್ನು ತಂದ ನಂತದ ಅದನ್ನು ಒಂದು ಬುಟ್ಟಿ ಅಥವಾ ಹೂಕುಂಡದಲ್ಲಿ ಹಾಕಿ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ನೀರು ಚಿಮುಕಿಸಿ. ಯಾವುದೇ ಕಾರಣಕ್ಕೂ ಗಿಡದ ಬೇರುಗಳು ಒಣಗುವುದಕ್ಕೆ ಬಿಡಬಾರದು.ಒಂದು ದಿನದ ನಂತರ ಗಿಡವನ್ನು ಸೂಕ್ತ ಸ್ಥಳದಲ್ಲಿ ನೆಡಬೇಕು.

ಗಿಡ ನೆಡುವ ವಿಧಾನ ಹೀಗೆ: ಗುಲಾಬಿ ಗಿಡಗಳನ್ನು ಮಣ್ಣಿನಲ್ಲಿ ನೆಡುವಾಗ ಅತ್ಯಂತ ಸೂಕ್ಷ್ಮ್ವವಾಗಿ ನೆಡಬೇಕು. ಅಂದರೆ ಗುಲಾಬಿ ಗಿಡವು ಒಂದೆರಡು ವರ್ಷ ಹಳೆಯ ಗಿಡದ ಭಾಗವಾಗಿದ್ದರೆ ಅದನ್ನು ಸುಮಾರು 6" ಆಳವಾಗಿ ನೆಡಬೇಕು.ಮಣ್ಣಿನಲ್ಲಿ ಗಿಲಾಬಿ ಗಿಡದ ಬೇಕುಗಳು ಸರಿಯಾಗಿ ತಳವೂರುವುದಕ್ಕೆ ಬೇಕಾದಷ್ಟು ದೊಡ್ಡ ಗುಂಡಿಯನ್ನು ಮಾಡಿ. ಅದರಲ್ಲಿ ಗಿಡದ ಬೇರನ್ನಿಟ್ಟು ಸರಿಯಾಗಿ ಮಣ್ಣಿನಿಂದ ಮುಚ್ಚಿ. ಮಣ್ಣು ಮುಚ್ಚಿದ್ದು ಬಹಳ ಒತ್ತವಾಗಿರಬೇಕು. ಇಲ್ಲವಾದರೆ ಗಿಡವು ಕಿತ್ತುಬೀಳುವ ಸಾಧ್ಯತೆಗಳಿರುತ್ತವೆ. ಅಷ್ಟು ಹಳೆಯ ಗಿಡದ ಬೇರಲ್ಲದಿದ್ದರೆ ಬೇರುಗಳು ಚಿಕ್ಕದಾಗಿರುವುದರಿಂದ ಅಷ್ಟು ಆಳವಾಗಿ ನೆಡುವ ಅಗತ್ಯವಿಲ್ಲ. ಗಿಡವನ್ನು ನೆಟ್ಟು ನಂತರ ಅದಕ್ಕೆ ಗೊಬ್ಬರವನ್ನೂ ಮಿತವಾಗಿ ನೀರನ್ನೂ ಹಾಕಬೇಕು. ಇದಕ್ಕೆ ಸೂರ್ಯನ ಶಾಖ ಸರಿಯಾಗಿ ಸಿಗುವಂತೆ ನೋಡಿಕೊಳ್ಳಿ.

ಗುಲಾಬಿ ಗಿಡದ ಕಟಾವು: ಬೆಳೆದ ಗಿಡಗಳನ್ನು ಅದು ಪುನಃ ಚೆನ್ನಾಗಿ ಬೆಳೆಯಬೇಕೆಂದರೆ ಕಾಲಕ್ಕೆ ತಕ್ಕ ಹಾಗೆ ಬೆಳೆದ ಗಿಡಗಳನ್ನು ಸರಿಯಾಗಿ ಕಟಾವು ಮಾಡಬೇಕು. ಹೀಗೆ ಕಟಾವು ಮಾಡಿದ ಗಿಡವನ್ನು ಮತ್ತೆ ಬೇರೊಂದು ಜಾಗಗಳಲ್ಲು ನೆಡಬಹುದು.

ಹೀಗೆ ಗಿಡಗಳನು ಕಟಾವು ಮಾಡುವಾಗ ಸರಿಯಾದ ಕತ್ತರಿಯನ್ನೇ ಉಪಯೋಗಿಸಬೇಕು. ಗಿಡವನ್ನು ಬರಿಗೈಯಲ್ಲಿ ಕತ್ತರಿಸಿದರೆ ಉಗುರು ತಾಗಿ ಗಿಡ ನಿಷ್ಪ್ರಯೋಜಕವಾಗಬಹುದು.

ಗುಲಾಬಿ ಹೂವುಗಳನ್ನು ಕೀಳುವಾಗಲು ಕೈಯಲ್ಲಿ ಚಿವುಟದೆ ಕತ್ತರಿಗಳನ್ನು ಬಳಸಿ.

ಗುಲಾಬಿ ಗಿಡಗಳಿಗೆ ಮುಳ್ಳು ಇರುವುದರಿಂದ ಮಕ್ಕಳು ಗಿಡವನ್ನು ಮುಟ್ಟದಂತೆ ಎಚ್ಚರವಹಿಸಿ.ಈ ಗಿಡಗಳನ್ನು ಮನೆಯ ಒಳಗಡೆ ಬೆಳೆಸದಿರುವುದು ಉತ್ತಮ. ಫಾಟ್ ಗಳಲ್ಲಿ ಮನೆಯ ಒಳಗಡೆ ಇಟ್ಟರೆ ಗಿಡ ಸರಿಯಾಗಿ ಬೆಳೆಯುವುದಿಲ್ಲ.

ಗುಲಾಬಿ ಗಿಡದ ಬೇರಿನ ಬುಡದಲ್ಲಿ ಟೀ ಮಾಡಿದ ನಂತರ ಉಳಿದ ಮಡ್ಡಿಯನ್ನು ಹಾಕಿದರೆ ಗಿಡಕ್ಕೆ ಒಳ್ಳೆಯದು.

ಒಂದೊಮ್ಮೆ ನೀವು ಬೆಳೆಸುತ್ತಿರುವ ಗಿಡ ಕಸಿಕಟ್ಟಿದ್ದಾದರೆ ಅದನ್ನು ಇನ್ನಷ್ಟು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಏಕೆಂದರೆ ಇಂದು ಹೈಬ್ರಿಡ್ ತಳಿಗಳನ್ನೇ ಹೆಚ್ಚಾಗಿ ಬೆಳೆಸುತ್ತಿರುವುದರಿಂದ ಅವು ಸಾಧಾರಣ ತಳಿಗಳಿಗಿಂತ ಇನ್ನೂ ಹೆಚ್ಚು ಸೂಕ್ಷ್ಮವಾಗಿರುತ್ತವೆ.

ನಿಮ್ಮ ಸುಂದರವಾದ ಮನೆಯ ಕಳೆಯನ್ನು ಹೆಚ್ಚಿಸಲು ನಿಮ್ಮ ನೆಚ್ಚಿನ ಗುಲಾಬಿಗಿಡಗಳನ್ನು ನೆಡುವುದು ಅಂತಹ ದುಸ್ಸಾಹಸವೇನಲ್ಲ. ಜಾಗರೂಕತೆಯಿಂದ ಗಿಡಗಳನ್ನು ಆಯ್ದು ತಂದು, ಬೆಳೆಸಿ ಗುಲಾಬಿ ಕಂಪನ್ನು ಸವಿಯಬಹುದು ಏನಂತೀರಿ?

English summary

How To Care For Rose Plants? | How To Do Tips | ಗುಲಾಬಿ ಗಿಡಗಳ ಆರೈಕೆ ಹೇಗೆ?

Common flower types vary significantly by geographical location, climate and culture, but some hearty varieties of flowers remain universal.
X
Desktop Bottom Promotion