For Quick Alerts
ALLOW NOTIFICATIONS  
For Daily Alerts

ಆಹಾ ಏನು ಚೆಂದ ಜಿಲೇಬಿ ಹೂಗಳ ಅಂದ!

By * ಬಿ.ಎಂ. ಲವಕುಮಾರ್, ಮೈಸೂರು
|

Jilebi flowers
ಮನೆಗೊಂದು ಮಿಂಚುಬಳ್ಳಿಯಾಗಿ ಮನೆಯ ಛಾವಣಿಯಲ್ಲಿ, ಹೂತೋಟದ ಮರಗಳಲ್ಲಿ, ಚಪ್ಪರಗಳಲ್ಲಿ, ಕಾಂಪೌಂಡ್‌ನಲ್ಲಿ ಹೀಗೆ ಎಲ್ಲೆಂದರಲ್ಲಿ ಹಬ್ಬಿ ದೊಡ್ಡ ದೊಡ್ಡ ಗೊಂಚಲುಗಳಲ್ಲಿ ತುತ್ತೂರಿಯಾಕಾರದ ಹೂಗಳೊಂದಿಗೆ ಕಣ್ಮನ ಸೆಳೆಯುವ ಪಿರೋಸ್ಟೇಜಿಯಾ ವೀನ್ ಸ್ಟಾ ಎಂಬ ಸುಂದರ ಹೂವುಗಳನ್ನು ನೋಡದವರು ವಿರಳವೇ ಎನ್ನಬೇಕು. ಇದನ್ನು ಕೆಲವರು ಜಿಲೇಬಿ ಹೂವೆಂದು ಕರೆದರೆ, ಮತ್ತೆ ಕೆಲವರು ತುತ್ತೂರಿ ಹೂ ಎಂದೇ ಕರೆಯುತ್ತಾರೆ.

ಈ ಹೂಬಳ್ಳಿ ಚಪ್ಪರದಲ್ಲೋ, ಕಾಂಪೌಂಡ್‌ನಲ್ಲೋ ಹಬ್ಬಿ ಹೂಬಿಟ್ಟಿತೆಂದರೆ ಅದರ ಸೌಂದರ್ಯವನ್ನು ಸವಿಯುವುದೇ ಒಂದು ರೀತಿಯ ಮಜಾ. ಹಾಗಾಗಿ ಇದನ್ನು ಮನೆಯ ಮುಂದಿನ ಚಿನ್ನದ ಮಳೆಗೆರೆವ ಹೂಬಳ್ಳಿ ಎಂದರೂ ತಪ್ಪಾಗಲಾರದು. ಸದಾ ಹೂಬಿಟ್ಟು ಕಂಗೊಳಿಸುತ್ತಾ ಮನೆಗೆ, ಉದ್ಯಾನವನಕ್ಕೆ ಮೆರಗು ತರುವ ಈ ಹೂಬಳ್ಳಿ ಮೂಲತಃ ಬ್ರೆಜಿಲ್ ದೇಶದ್ದು. ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲಿ ಹುಲುಸಾಗಿ ಬೆಳೆಯುತ್ತದೆ.

ನಮ್ಮ ದೇಶದಲ್ಲಿ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ದಕ್ಷಿಣ ಅಮೆರಿಕಾದಲ್ಲಿ ಪಿರೋಸ್ಟೆಜಿಯಾ ವೀನ್ ಸ್ಟಾಗೆ ಸೇರಿದ ಐದು ತಳಿಗಳಿವೆ. ಮನೆಯ ಮುಂದೆ ಚಪ್ಪರ ಹಾಕಿ ಹಬ್ಬಿಸಿದ್ದೇ ಆದರೆ ಸದಾ ಹೂಬಿಟ್ಟು ಮನೆಗೆ ಶೋಭೆ ತರುವುದರೊಂದಿಗೆ ತಂಪು ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಇದನ್ನು ಬೃಂದಾವನಗಳಲ್ಲಿ ಸುಂದರವಾಗಿ ವಿವಿಧ ವಿನ್ಯಾಸದಲ್ಲಿ ಹಬ್ಬಿಸಲಾಗುತ್ತದೆ. ಇದು ಹೂಬಿಟ್ಟಾಗ ತನ್ನ ಚೆಲುವಿನಿಂದ ದೂರದಿಂದಲೇ ಪುಷ್ಪಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತದೆ.

ಪಿರೋಸ್ಟೆಜಿಯಾ ವೀನ್ ಸ್ಟಾ ಚಪ್ಪರ ಹಾಗೂ ಕಾಂಪೌಂಡ್‌ನ್ನು ಹುಲುಸಾಗಿ ಹಬ್ಬಿ ಬೆಳೆಯಲು ನೇರವಾಗಿ ಬೀಳುವ ಸುರ್ಯನ ಬೆಳಕು ಮತ್ತು ಅಧಿಕ ತೇವಾಂಶದ ಮಣ್ಣು ಬೇಕು. ಬಳ್ಳಿಯು ಹಬ್ಬುತ್ತಾ ಸಾಗಲು ಮರಿ ಬಳ್ಳಿಗಳು ಸಹಾಯ ಮಾಡುತ್ತವೆ. ಬಳ್ಳಿಯಲ್ಲಿ ಎರಡು ಅಥವಾ ಮೂರು ಎಲೆಗಳು ಮತ್ತೆ ಕಾಂಡ ಎಲೆಗಳು ಹೀಗೆ ಇದ್ದು ಇವು ಬಳ್ಳಿ ಹಬ್ಬಲು ಅಂದರೆ ನಾವು ನಿರ್ಮಿಸಿದ ಆಧಾರವನ್ನು ಆಶ್ರಯಿಸಿಕೊಂಡು ಬೆಳೆಯಲು ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್ ನಡುವೆ ಬಳ್ಳಿಯ ತುಂಬಾ ಕಡು ಕೇಸರಿ ಬಣ್ಣದ ತುತ್ತೂರಿ ಆಕಾರದ ಹೂಗಳು ಗೊಂಚಲು ಗೊಂಚಲಾಗಿ ಬಳ್ಳಿ ತುಂಬಾ ಅರಳಿ ಕಂಗೊಳಿಸುವುದರೊಂದಿಗೆ ನೋಡುಗರನ್ನು ತನ್ನತ್ತ ಸೆಳೆಯುತ್ತವೆ.

English summary

Beautiful flowers in home garden | Pyrostegia venusta flower | Jilebi flowers | ಮನೆಯಂಗಳದಲ್ಲಿ ಜಿಲೇಬಿ ಹೂಗಳು | ತುತ್ತೂರು ಹೂಗಳ ಅಂದ

Decorate compound of your home by planting beautiful Pyrostegia venusta flower plants. These flowers are also called as Jilegi flowers of Tuttoori flowers. Orange colored flowers are ascends the beauty of any home. An article by BM Lavakumar, Mysore.
X
Desktop Bottom Promotion