For Quick Alerts
ALLOW NOTIFICATIONS  
For Daily Alerts

Yoga Day 2022: ನೀವು ತುಂಬಾ ನಿಶ್ಯಕ್ತರಾಗಿದ್ದಾಗ ಈ ಯೋಗ ಮಾಡಿದರೆ ಥಟ್ ಅಂತ ಚಾರ್ಜ್ ಆಗುವಿರಿ

|

ಕೆಲವೊಮ್ಮೆ ಹೆಚ್ಚು ಕೆಲಸ ಮಾಡಿದಾಗ, ನೂರು ಕೆಲಸ ತಲೆಗೆ ಹತ್ತಿದಾಗ ದೇಹದಲ್ಲಿ ಶಕ್ತಿಗುಂದಿಂತೆ ಅನಿಸುತ್ತೆ. ಮನಸ್ಸು ದೇಹವೆರಡೂ ಒಂದಕ್ಕೊಂದು ಸಾಥ್‌ ನೀಡದೇ, ಮೈಯಿಡೀ ಮರಗಟ್ಟಿದಂತೆ ಅನಿಸುತ್ತೆ, ಹೀಗಾದ ತಕ್ಷಣ ಕೆಲವರು ಮತ್ತೆ ಲವಲವಿಕೆಗೆ ಹಿಂದಿರುಗಲು, ಎನರ್ಜಿಗಾಗಿ ಒಂದು ಕಪ್‌ ಕಾಫಿ ಅಥವಾ ಟೀ ಕುಡಿಯುದೋ ಮಾಡುತ್ತಾರೆ. ಇದೇ ನಾವು ಮಾಡುವ ತಪ್ಪು, ಕಾಫಿ ಕುಡಿದಾಗ ಒಂದಷ್ಟು ಹೊತ್ತು ಎನರ್ಜಿಟಿಕ್‌ ಆಗಿ ಕೆಲಸ ಮಾಡಬೋದು, ಆದರೆ ಇದರಿಂದ ಅನೇಕ ಸಮಸ್ಯೆಗಳು ನಿಮಗೆ ಗೊತ್ತಿಲ್ಲದ ಹಾಗೆ ಸುತ್ತುವರಿಯುತ್ತದೆ.

yoga to get instant energy

ಹಾಗಾದ್ರೆ ಒಂದು ಸಿಪ್‌ ಕಾಫಿ ಕುಡಿಯೋ ಬದಲು ಏನಪ್ಪಾ ಮಾಡಬೋದು ಅಂತಾ ಕೇಳಿದರೆ, ಯೋಗ ಮಾಡಿ ಎನ್ನುವುದು ನಮ್ಮ ಸಜೆಷನ್‌.. ಹೌದು ಕೆಲವೊಂದು ಯೋಗಗಳು ಶಕ್ತಗುಂದಿದ ದೇಹಕ್ಕೆ ಮರಳಿ ಚೈತನ್ಯವನ್ನು ನೀಡುತ್ತವೆ. ಆ ಯೋಗಾಸನಗಳು ಯಾವುವು ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ.

ಸೇತು ಬಂಧ ಸರ್ವಾಂಗಾಸನ

ಸೇತು ಬಂಧ ಸರ್ವಾಂಗಾಸನ

ಸೇತು ಬಂಧ ಸರ್ವಾಂಗಾಸನದ ಅಭ್ಯಾಸವು ನಿಮ್ಮ ಎದೆ, ಹೊಟ್ಟೆ, ಭುಜ ಮತ್ತು ತೋಳುಗಳನ್ನು ವಿಸ್ತರಿಸುತ್ತದೆ. ಜೊತೆಗೆ ಕಾಲುಗಳು ಮತ್ತು ಪೃಷ್ಠದ ಸ್ನಾಯುಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಯೋಗವನ್ನು ಮಾಡುವ ವಿಧಾನ,

* ಯೋಗ ಮ್ಯಾಟ್‌ ಮೇಲೆ ಮೇಲೆ ನೇರವಾಗಿ, ತೋಳುಗಳನ್ನು ಚಾಚಿ ಮಲಗಿಕೊಳ್ಳಿ.

* ಮೊಣಕಾಲುಗಳನ್ನು ಮೇಲ್ಮುಖವಾಗಿ ಬಾಗಿಸಿ, ಚಿತ್ರದಲ್ಲಿ ಕಾಣುವಂತೆ ಪಾದಗಳನ್ನು ನೆಲದ ಮೇಲೆ ನಿಮ್ಮ ಸೊಂಟದ ಅಂತರದಲ್ಲಿ ಇರಿಸಿ.

* ನಿಮ್ಮ ಸೊಂಟವನ್ನು ಹಿಮ್ಮಡಿಗೆ ಹತ್ತಿರವಾಗುವಂತೆ ಇಟ್ಟುಕೊಂಡು, ನಿಮ್ಮ ಕಿಬ್ಬೊಟ್ಟೆ ಮತ್ತು ಪೃಷ್ಠದ ಭಾಗವನ್ನು ಬಿಗಿಗೊಳಿಸಿ

* ನಿಮ್ಮ ಪೃಷ್ಠದ ಭಾಗವನ್ನು ನಿಧಾನವಾಗಿ ಮೇಲಕ್ಕೆತ್ತಿ. ಎರಡೂ ಕೈಗಳು ಹಿಮ್ಮಡಿಗೆ ತಾಗುವಂತಿರಬೇಕು.

* ಆದಷ್ಟು ಹೊಟ್ಟೆ, ಎದೆಯ ಭಾಗವನ್ನು ಸಾಧ್ಯವಾಗುವಷ್ಟು ಮೇಲಕ್ಕೆತ್ತಿ. ನಿಮ್ಮ ಗಲ್ಲವು ಕಾಲರ್‌ ಬೋನ್‌ಗೆ ತಾಗುವಂತಿರಬೇಕು.

* ಇದೇ ಭಂಗಿಯಲ್ಲಿ ಒಂದೆರಡು ದೀರ್ಘ ಉಸಿರಾಟ ಮಾಡಿ, ಉಸಿರನ್ನು ಬಿಡುತ್ತಾ ನಿಧಾನವಾಗಿ ಸಹಜ ಸ್ಥಿತಿಗೆ ಬನ್ನಿ, ವಿಶ್ರಾಂತಿ ಪಡೆಯಿರಿ.

ಉಷ್ಟ್ರಾಸನ

ಉಷ್ಟ್ರಾಸನ

ಹಿಂದೆ ಬಾಗಿ ಮಾಡುವ ಈ ಆಸನವು ನಿಮ್ಮ ಹೃದಯವನ್ನು ವಿಸ್ತರಿಸುತ್ತದೆ. ಬೆನ್ನುಮೂಳೆಯ ಚಲನೆಯು ಸುಧಾರಿಸುವುದರ ಜೊತೆಗೆ ನಿಮ್ಮ ಭುಜ ಮತ್ತು ಬೆನ್ನನ್ನು ಬಲಪಡಿಸುತ್ತದೆ. ಇದನ್ನು ಮಾಡುವ ವಿಧಾನ ಹೀಗೆ ನೋಡಿ.

* ಮೊದಲಿಗೆ ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಭುಜ ಮತ್ತು ಮೊಣಕಾಲುಗಳು ಸಮಾನಾಂತರದಲ್ಲಿರಲಿ.

* ನಿಮ್ಮ ಅಂಗೈಗಳನ್ನು ಸೊಂಟದ ಮೇಲಿಟ್ಟುಕೊಳ್ಳಿ, ಶ್ವಾಸ ತೆಗೆದುಕೊಳ್ಳುತ್ತಾ ಹಿಂದಕ್ಕೆ ಬಾಗಿ

* ನಿಮ್ಮ ಅಂಗಾಲುಗಳನ್ನು ಅಂಗೈಗಳಿಂದ ಹಿಡಿದುಕೊಳ್ಳಲು ಸಾಧ್ಯವಾಗುವಷ್ಟು ಬಿಲ್ಲಿನಂತೆ ಹಿಂದಕ್ಕೆ ಬಾಗಿ.

* ಅದೇ ಸ್ಥಿತಿಯಲ್ಲಿ ಒಂದೆರಡು ಉಸಿರಾಟ ಮಾಡಿ, ನಿಧಾನವಾಗಿ ಸಹಜ ಸ್ಥಿತಿಗೆ ಬಂದು, ವಿಶ್ರಾಂತಿ ಪಡೆಯಿರಿ.

ಅಧೋಮುಖ ಶ್ವಾನಾಸನ

ಅಧೋಮುಖ ಶ್ವಾನಾಸನ

ಅಧೋಮುಖ ಶ್ವಾನಾಸನವು ನಿಮ್ಮ ದೇಹದ ಪ್ರತಿಯೊಂದು ಭಾಗವನ್ನು ಬಳಸಿಕೊಳ್ಳುತ್ತದೆ, ಈ ಆಸನದ ಅಭ್ಯಾಸದಿಂದ ಸಮತೋಲನ, ಶಕ್ತಿ ಮತ್ತು ಬಾಡಿ ಫ್ಲೆಕ್ಸಿಬಿಲಿಟಿ ಪಡೆಯುವಿರಿ. ಇದನ್ನು ಮಾಡುವ ವಿಧಾನ,

* ನೇರವಾಗಿ ನಿಂತುಕೊಳ್ಳಿ, ಕೈಗಳು ನೇರವಾಗಿರಲಿ, ಕಾಲುಗಳನ್ನು ಸೊಂಟದ ನೇರಕ್ಕೆ ಇಟ್ಟುಕೊಳ್ಳಿ. ಅಂದರೆ ಪಾದಗಳ ಮಧ್ಯೆ ಸ್ವಲ್ಪ ಅಂತರವಿಟ್ಟುಕೊಳ್ಳಿ.

* ನಿಮ್ಮ ಅಂಗೈಗಳನ್ನು ಮುಂದಕ್ಕೆ ಚಾಚಿ ಹಾಗೆ ಮುಂದಕ್ಕೆ ಬಾಗಿ, ಅಂಗೈಯನ್ನು ನೆಲದ ಮೇಲಿಡಿ.

* ನಿಮ್ಮ ತಲೆಕೆಳಗಾಗಿರುವಂತೆ ಬಾಗಿ, ನೆಲದ ಮೇಲೆ ತಲೆ ತಾಕಿಸಬೇಡಿ, ಒಟ್ಟಿನಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಬಾಗಿದ ದೇಹವು 'V'ಆಕಾರದಲ್ಲಿರಬೇಕು.

* ಇದೇ ಭಂಗಿಯಲ್ಲಿ ಒಂದೆರಡು ಉಸಿರಾಟ ಮಾಡಿ. ನಿಧಾನವಾಗಿ ಸಹಜ ಸ್ಥಿತಿಗೆ ಬನ್ನಿ.

ಸಾಲಂಭ ಭುಜಂಗಾಸನ

ಸಾಲಂಭ ಭುಜಂಗಾಸನ

* ಹೊಟ್ಟೆಯ ಮೇಲೆ ಬೋರಲಾಗಿ ಮಲಗಿಕೊಳ್ಳಿ, ಗಲ್ಲ ನೆಲಕ್ಕೆ ತಾಗುವಂತಿರಲಿ.

* ಕಾಲುಗಳು ನೇರವಾಗಿದ್ದು ಉಗುರುಗಳು ನೆಲಕ್ಕೆ ತಾಕುವಂತಿರಲಿ, ಆದರೆ ಬೆರಳುಗಳು ಮಡಚಿರಬಾರದು.

* ಎರಡೂ ಕಾಲುಗಳು ಪರಸ್ಪರ ತಾಕುವಂತಿದ್ದು, ಮೊಣಕೈಯನ್ನು ಸೊಂಟದ ಪಕ್ಕದಲ್ಲಿ ಮಡಚಿ, ಅಂಗೈಕೆಳಮುಖವಾಗಿರುವಂತೆ ಚಾಚಿ.

* ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ತಲೆಯನ್ನು ಮೇಲಕ್ಕೆತ್ತಬೇಕು ಹಾಗೂ ಕುತ್ತಿಗೆಯನ್ನು ಸಾಧ್ಯವಾದಷ್ಟು ಹಿಂದೆ ಎಳೆಯಬೇಕು.

* ಹೊಟ್ಟೆಯವರೆಗೆ ಶರೀರವನ್ನು ಮೇಲಕ್ಕೆತ್ತಿ, ಸೊಂಟದಿಂದ ಕೆಳಭಾಗ ನೆಲದಲ್ಲಿರಬೇಕು.

* ಎರಡೂ ಕೈಗಳು ತೊಂಭತ್ತು ಡಿಗ್ರಿಯಲ್ಲಿ ಮಡಚಿರಬೇಕು.

* ಇದೇ ಸ್ಥಿತಿಯಲ್ಲಿ ಒಂದೆರಡು ಉಸಿರಾಟ ಮಾಡಿ

ಭುಜಂಗಾಸನ

ಭುಜಂಗಾಸನ

* ಮೊದಲಿಗೆ ಹೊಟ್ಟೆಯ ಮೇಲೆ ಮಲಗಿ, ನಿಮ್ಮ ಅಂಗೈಗಳನ್ನು ಭುಜದ ಪಕ್ಕದಲ್ಲಿ ಇರಿಸಿ.

* ದೀರ್ಘವಾಗಿ ಉಸಿರು ತೆಗೆದುಕೊಳ್ಳುತ್ತಾ ತಲೆ ಮತ್ತು ಎದೆಯನ್ನು ನೆಲದಿಂದ ನಿಧಾನವಾಗಿ ಎತ್ತಿ.

* ಮೊಣಕೈಯನ್ನು ಬಗ್ಗಿಸಿ, ಇದೇ ಸ್ಥಿತಿಯಲ್ಲಿ ಒಂದೆರಡು ಉಸಿರಾಟ ಮಾಡಿ, ನಿಧಾನವಾಗಿ ಸಹಜ ಸ್ಥಿತಿಗೆ ಬನ್ನಿ.

ನಟರಾಜಾಸನ

ನಟರಾಜಾಸನ

* ನೇರವಾಗಿ ನಿಂತುಕೊಳ್ಳಿ, ನಿಮ್ಮ ಎಡಗಾಲಿಗೆ ದೇಹದ ಭಾರವನ್ನು ಹಾಕಿ, ಬಲಗಾಲನ್ನು ನೆಲದಿಂದ ಸ್ವಲ್ಪ ಇಂಚಿನಷ್ಟು ಮೇಲಕ್ಕೆತ್ತಿ.

* ಹಾಗೆಯೇ ಬಲಮೊಣಕಾಲನ್ನು ಹಿಂದಿನಿಂದ ಬಾಗಿಸಿ, ಬಲಪೃಷ್ಠದವರೆಗೂ ಮೇಲಕ್ಕೆತ್ತಿ

* ನಿಮ್ಮ ಬಲಪಾದವನ್ನು ಬಲಗೈಯಿಂದ ಹಿಡಿದು ನಿಧಾನವಾಗಿ ಮೇಲಕ್ಕೆತ್ತಲು ಪ್ರಾರಂಭಿಸಿ

* ಸಮತೋಲನ ಕಾಪಾಡಿಕೊಳ್ಳಲು ಮುಂದಕ್ಕೆ ಬಾಗಿ

* ಬಲಪಾದವನ್ನು ಸಾಧ್ಯವಾದಷ್ಟು ಬಲಗೈಯ ಸಹಾಯದಿಂದ ಮೇಲಕ್ಕೆತ್ತಿ. ಎಡಗೈಯನ್ನು ನೇರವಾಗಿ ಮುಂದಕ್ಕೆ ಚಾಚಿ,

* ಬೆನ್ನು ಮೂಳೆಯು ಬೆಂಡಾಗಿ ಕಾಣುವಂತೆ ಈ ಸ್ಥಿತಿಯಲ್ಲಿ ಇರಬೇಕು.

* ಸಾಧ್ಯವಾದಷ್ಟು ಈ ಸ್ಥಿತಿಯಲ್ಲಿ ಸಮತೋಲನ ಸಾಧಿಸಿ, ನಿಧಾನವಾಗಿ ಸಹಜ ಸ್ಥಿತಿಗೆ ಬನ್ನಿ.

* ಮತ್ತೆ ಎಡಗಾಲನ್ನು ಮೇಲಕ್ಕೆತ್ತಿ ಇದೇ ಆಸನವನ್ನು ಪುನರಾವರ್ತಿಸಿ.

ಊರ್ಧ್ವ ಮುಖ ಶ್ವಾನಾಸನ

ಊರ್ಧ್ವ ಮುಖ ಶ್ವಾನಾಸನ

* ಯೋಗ ಮ್ಯಾಟ್‌ ಮೇಲೆ ಬೋರಲಾಗಿ ಮಲಗಿ, ನಿಮ್ಮ ಅಂಗೈಗಳನ್ನು ಭುಜದ ಬಳಿ ಇಟ್ಟುಕೊಳ್ಳಿ.

* ಉಸಿರನ್ನು ತೆಗೆದುಕೊಳ್ಳುತ್ತಾ, ನಿಮ್ಮ ಮುಖ, ಎದೆ ಮತ್ತು ಹೊಟ್ಟೆಯನ್ನು ನೆಲದಿಂದ ಮೇಲಕ್ಕೆತ್ತಿ, ಮುಖವು ಮೇಲ್ಮುಖವಾಗಿರಲಿ

* ದೃಷ್ಟಿಯು ಆಕಾಶವನ್ನು ದಿಟ್ಟಿಸುವಂತಿರಬೇಕು, ತೋಳುಗಳು ನೇರವಾಗಿರುವವರೆಗೆ ನಿಮ್ಮ ದೇಹವನ್ನು ಮೇಲಕ್ಕೆತ್ತಬೇಕು.

* ಸಾಧ್ಯವಾದಷ್ಟು ಇದೇ ಸ್ಥಿತಿಯಲ್ಲಿ ಒಂದೆರಡು ಉಸಿರಾಟ ಮಾಡಿ. ನಿಧಾನವಾಗಿ ಸಹಜ ಸ್ಥಿತಿಗೆ ಬನ್ನಿ.

English summary

Yoga Poses To Keep Up Your Energy Levels in Kannada

these are the yoga asanas which keep up your energy levels in kannada. Read more.
Story first published: Monday, June 20, 2022, 11:33 [IST]
X
Desktop Bottom Promotion