For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು

|

ಕಿಬ್ಬೊಟ್ಟೆಯಲ್ಲಿ ಉಂಟಾಗುವ ನೋವಿಗೆ ಅನೇಕ ಕಾರಣಗಳಿರಬಹುದು. ಏಕೆಂದರೆ, ಹಲವಾರು ಮಹತ್ತರ ಅಂಗಾಂಗಳಿರೋದು ಕಿಬ್ಬೊಟ್ಟೆಯ ಕುಳಿಯಲ್ಲೇ.. ಹಾಗಾಗಿ ಕಿಬ್ಬೊಟ್ಟೆಯಲ್ಲಿ ತಲೆದೋರುವ ನೋವು, ಅಂಗವೊಂದರಲ್ಲಿನ ಕಾರ್ಯನಿರ್ವಹಣಾ ವೈಖರಿಯಲ್ಲಿನ ದೋಷವನ್ನೋ ಅಥವಾ ತೊಂದರೆಯನ್ನೋ ಸೂಚಿಸುತ್ತಿರಬಹುದು. ಇಂತಹ ನೋವು ಕಾಣಿಸಿಕೊಂಡಾಗ ತಜ್ಞ ವೈದ್ಯರನ್ನ ಭೇಟಿಯಾಗೋದು ಅತ್ಯಗತ್ಯ.

ಅವರು ನೋವಿನ ನಿಖರ ಕಾರಣವನ್ನ ಪತ್ತೆಮಾಡಿ ಸೂಕ್ತ ಸಲಹೆಯನ್ನ ನೀಡಬಲ್ಲವರಾಗಿರುತ್ತಾರೆ. ಕೆಲಬಗೆಯ ನೋವು ಕಾಲಕ್ರಮೇಣ ತನ್ನಿಂತಾನೇ ತಗ್ಗುವ ಸಾಧ್ಯತೆಯೂ ಇಲ್ಲದಿಲ್ಲ!! ನೋವು ಕಿಬ್ಬೊಟ್ಟೆಯ ಯಾವ ಭಾಗದಲ್ಲಿ ಕಾಣಿಸಿಕೊಂಡಿದೆ ಅನ್ನೋದರ ಆಧಾರದ ಮೇಲೆ ಬೇರೆ ಬೇರೆ ಬಗೆಯ ವಿವಿಧ ಖಾಯಿಲೆಗಳಿಗೆ ಆ ನೋವನ್ನ ಸಮೀಕರಿಸಬಹುದು. ಒಂದೊಮ್ಮೆ ನಿಮ್ಮ ಕಿಬ್ಬೊಟ್ಟೆಯ ಬಲಭಾಗದಲ್ಲಿ ಮೇಲ್ನೋಟಕ್ಕೆ ಅಕಾರಣವೆನಿಸುವ, ಅಜ್ಞಾತವಾದ ನೋವುಂಟಾಗಿದ್ದಲ್ಲಿ, ಅದಕ್ಕೆ ಕಾರಣಗಳು ಈ ಕೆಳಗಿನವುಗಳಾಗಿರಬಹುದು:

ಮಲಬದ್ಧತೆ:

ಮಲಬದ್ಧತೆ:

ಬಹುದಿನಗಳಿಂದ ಮಲವಿಸರ್ಜನೆ ಸರಿಯಾಗಿ ಆಗುತ್ತಿಲ್ಲವೇ ? ಹಾಗಿದ್ದಲ್ಲಿ ನಿಮ್ಮ ಬಲ ಕಿಬ್ಬೊಟ್ಟೆಯ ನೋವಿಗೆ ಈ ಮಲಬದ್ಧತೆಯೂ ಕಾರಣವಾಗಿರಬಹುದು. ವಾರದಲ್ಲಿ ಮೂರಕ್ಕಿಂತಲೂ ಕಡಿಮೆ ಬಾರಿ ಮಲವಿಸರ್ಜನೆಯಾಗುತ್ತಿದ್ದಲ್ಲಿ, ಅಂತಹವರ ಮಲವು ಕುರುಳು ಕುರುಳಾಗಿ ಬಿರುಸಾಗುತ್ತದೆ. ಗುದದ್ವಾರದ ಭಾಗದಲ್ಲಿ ಏನೋ ತಡೆಯಿರುವ ಹಾಗೆ ಅಂತಹವರಿಗೆ ಅನಿಸತೊಡಗುತ್ತದೆ. ಜೌಷಧಾಲಯಗಳಿಂದಲೇ ನೇರವಾಗಿ ಪಡೆಯಬಹುದಾದ ಜೌಷಧದಿಂದಲೂ ಈ ಮಲಬದ್ಧತೆಯನ್ನ ನಿವಾರಿಸಿಕೊಳ್ಳಬಹುದು.

ಆದರೆ ಒಂದೊಮ್ಮೆ ಈ ಮಲಬದ್ಧತೆಯು ದೀರ್ಘಕಾಲೀನದ್ದಾಗಿದ್ದಲ್ಲಿ, ಅದರ ಕಾರಣವನ್ನ ಪರಿಶೀಲಿಸಿ ತಿಳಿದುಕೊಳ್ಳಬೇಕಾಗುತ್ತದೆ. ಮಲಬದ್ಧತೆಗಿರಬಹುದಾದ ಕೆಲವು ವೈದ್ಯಕೀಯ ಕಾರಣಗಳೆಂದರೆ ಅವು ಹೈಪೋಥೈರಾಯ್ಡಿಸಂ, ಕರುಳು ಹಾಗೂ ಗುದಭಾಗದ ಸೋಂಕುಗಳು, ಕರುಳಿನ ಉರಿಯೂತ (ಇರಿಟೇಬಲ್ ಬೌಲ್ ಸಿಂಡ್ರೋಮ್), ಕರುಳಿನ ಕ್ಯಾನ್ಸರ್ ಇತ್ಯಾದಿ. ಮಲಬದ್ಧತೆಯ ಮೂಲಕಾರಣವನ್ನ ಪತ್ತೆಮಾಡಿ, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದಲ್ಲಿ, ಅದನ್ನ ಜೊತೆಗೂಡಿರುವ ಕಿಬ್ಬೊಟ್ಟೆಯ ನೋವು ತನ್ನಿಂತಾನೇ ನಿವಾರಣೆಯಾಗುತ್ತದೆ.

ಹೊಟ್ಟೆಯ ಹುಣ್ಣು:

ಹೊಟ್ಟೆಯ ಹುಣ್ಣು:

ನಾವು ಸೇವಿಸುವ ಆಹಾರವನ್ನ ಜೀರ್ಣಗೊಳಿಸುವುದು ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಹೈಡ್ರೋಕ್ಲೋರಿಕ್ ಆಮ್ಲ. ಈ ಆಮ್ಲದ ಉತ್ಪತ್ತಿಯು ಹೆಚ್ಚಾದಾಗ ಅದು ಹೊಟ್ಟೆಯ, ಅನ್ನನಾಳದ, ಅಥವಾ ಸಣ್ಣಕರುಳಿನ ಒಳಮೇಲ್ಮೈ ಗೋಡೆಗಳ ಮೇಲೆ ಹುಣ್ಣುಗಳನ್ನು ಉಂಟುಮಾಡುತ್ತದೆ. ಹೀಗೆ ಹುಣ್ಣಾದಾಗಲೂ ಕಿಬ್ಬೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುವುದರೊಂದಿಗೆ ಎದೆನೋವು, ವಾಕರಿಕೆ, ಅಜೀರ್ಣತೆ, ಹುಳಿತೇಗು, ವಾಂತಿ ಮತ್ತು ನಿತ್ರಾಣಗಳಂತಹ ತೊಂದರೆಗಳೂ ಕಾಣಿಸಿಕೊಳ್ಳಬಹುದು. ಹೊಟ್ಟೆಯ ಹುಣ್ಣಿಗೆ ಸಾಧ್ಯವಿರಬಹುದಾದ ಚಿಕಿತ್ಸೆಗಳೆಂದರೆ ಅವು ಅಂಟಾಸಿಡ್ ಗಳ ಅಥವಾ ಆ್ಯಂಟಿ ಬಯಾಟಿಕ್ ಗಳ ಬಳಕೆ.

ಅಪೆಂಡಿಕ್ಸ್ ನ ಉರಿಯೂತ (ಅಪೆಂಡಿಸೈಟಿಸ್):

ಅಪೆಂಡಿಕ್ಸ್ ನ ಉರಿಯೂತ (ಅಪೆಂಡಿಸೈಟಿಸ್):

ಬಲಕಿಬ್ಬೊಟ್ಟೆಯ ನೋವಿಗೆ ಅತ್ಯಂತ ಸಾಮಾನ್ಯವಾದ ಕಾರಣವೆಂದರೆ ಅದು ಅಪೆಂಡಿಸೈಟಿಸ್. ಅಪೆಂಡಿಕ್ಸ್ ನಲ್ಲಿ ಉರಿಯುಂಟಾಗಿದ್ದಲ್ಲಿ, ಅದು ಅಪೆಂಡಿಸೈಟಿಸ್ ಗೆ ದಾರಿಮಾಡಿ ಕೊಡುತ್ತದೆ. ಅಪೆಂಡಿಸೈಟಿಸ್ ನ ರೋಗಲಕ್ಷಣಗಳನ್ನ ತಿಳಿದುಕೊಳ್ಳಬೇಕಾಗಿರೋದು ತುಂಬಾನೇ ಮುಖ್ಯ. ಏಕೆಂದರೆ ಅಪೆಂಡಿಸೈಟಿಸ್ ಅನ್ನ ಸರಿಯಾಗಿ ಆರೈಕೆ ಮಾಡದೇ ಹೋದಲ್ಲಿ, ಅದು ಬಹು ಗಂಭೀರ ಪರಿಸ್ಥಿತಿಗೆ ಕಾರಣವಾಗುತ್ತದೆ.

ಅಪೆಂಡಿಸೈಟಿಸ್ ನ ಇನ್ನಿತರ ರೋಗಲಕ್ಷಣಗಳೆಂದರೆ ಅವು ವಾಕರಿಕೆ, ವಾಂತಿ, ಹಸಿವಿಲ್ಲದಿರುವುದು, ಹೊಟ್ಟೆಯುಬ್ಬರ, ಜ್ವರ ಇತ್ಯಾದಿ. ಅಪೆಂಡಿಕ್ಸ್ ಅಂಗವನ್ನೇ ಬಿರಿಯುವಂತೆ ಮಾಡಬಲ್ಲ ಈ ಅಪೆಂಡಿಸೈಟಿಸ್ ಗೆ ಚಿಕಿತ್ಸೆ ನೀಡದೇ ಹೋದಲ್ಲಿ ಅದು ಪ್ರಾಣಾಂತಿಕವಾದೀತು!! ಅಪೆಂಡಿಸೈಟಿಸ್ ಗೆ ಚಿಕಿತ್ಸೆಯು ಸಾಮಾನ್ಯವಾಗಿ ಆ್ಯಂಟಿ ಬಯಾಟಿಕ್ ನದ್ದಾಗಿರುತ್ತದೆ ಇಲ್ಲವೇ ಪರಿಸ್ಥಿತಿಯು ಕೈಮೀರಿದ್ದಲ್ಲಿ, ಅಪೆಂಡಿಕ್ಸ್ ಅನ್ನೇ ತೆಗೆದುಹಾಕುವಂತಹ ಅಪೆಂಡೆಕ್ಟಮಿಯಂತಹ ಶಸ್ತ್ರಚಿಕಿತ್ಸೆಯನ್ನೂ ನಡೆಸಬೇಕಾಗುತ್ತದೆ.

ಪಿತ್ತಕೋಶದ ಹರಳುಗಳು (ಕಲ್ಲುಗಳು):

ಪಿತ್ತಕೋಶದ ಹರಳುಗಳು (ಕಲ್ಲುಗಳು):

ಪ್ಲೀಹ (ಗಾಲ್ ಬ್ಲ್ಯಾಡರ್) ದಲ್ಲಿ ರೂಪುಗೊಳ್ಳುವ ಜೀರ್ಣರಸದ ಸಣ್ಣ, ಗಟ್ಟಿಯಾದ ಹರಳುಗಳನ್ನೇ ಪಿತ್ತಕೋಶದ ಹರಳುಗಳೆನ್ನುವರು. ಈ ಪಿತ್ತಕೋಶದ ಹರಳುಗಳೂ ಕೂಡ ಬಲಕಿಬ್ಬೊಟ್ಟೆಯ ನೋವಿಗೆ ಕಾರಣವಾದಾವು. ಪಿತ್ತಕೋಶದಲ್ಲಿ ಹರಳುಗಳುಂಟಾಗಿರುವುದನ್ನು ಸೂಚಿಸುವ ಇನ್ನಿತರ ಲಕ್ಷಣಗಳೆಂದರೆ ಅವು ಬೆನ್ನುನೋವು, ಸೆಳೆತ, ವಾಕರಿಕೆ, ವಾಂತಿ, ಹಾಗೂ ಅಜೀರ್ಣತೆ.

ನೆನಪಿಟ್ಟುಕೊಳ್ಳಿ:

ನೆನಪಿಟ್ಟುಕೊಳ್ಳಿ:

ನಿಮ್ಮ ಬಲಕಿಬ್ಬೊಟ್ಟೆಯ ನೋವಿಗೆ ಗಂಭೀರ ಕಾರಣಗಳಾಗಿರಬಹುದಾದವುಗಳ ಪೈಕಿ ಕೆಲವೇ ಕೆಲವನ್ನ ಮೇಲೆ ಪ್ರಸ್ತಾಪಿಸಲಾಗಿದೆ. ಇನ್ನೂ ಹಲವು ಬೇರೆ ಬೇರೆ ಕಾರಣಗಳಿರಬಹುದಾದ ಸಾಧ್ಯತೆಗಳೂ ಇರುವುದರಿಂದ, ನೈಜ ಕಾರಣವನ್ನ ಪತ್ತೆ ಹಚ್ಚೋದಕ್ಕಿರುವ ಏಕೈಕ ಮಾರ್ಗೋಪಾಯವೆಂದರೆ ಅದು ನುರಿತ ವೈದ್ಯರ ಬಳಿ ತಪಾಸಣೆಗೆ ಒಳಗಾಗುವುದು. ನಿಮ್ಮ ವೈದ್ಯರೊಡನೆ ಸಮಾಲೋಚಿಸಿ, ಅವರ ನೆರವಿನಿಂದ ಸರಿಯಾದ ಕಾರಣವನ್ನ ಕಂಡುಕೊಳ್ಳಿ, ಹಾಗೂ ಬಲಕಿಬ್ಬೊಟ್ಟೆಯ ನೋವಿನಿಂದ ಪಾರಾಗೋದಕ್ಕೆ ಸೂಕ್ತ ಚಿಕಿತ್ಸಾ ವಿಧಾನವೊಂದನ್ನ ಕೈಗೆತ್ತಿಕೊಳ್ಳಿ.

English summary

Reasons For Pain In The Right Side Of Your Abdomen in Kannada

Know the Reasons for Pain in the Right Side of Your Abdomen, Read on...
X
Desktop Bottom Promotion