For Quick Alerts
ALLOW NOTIFICATIONS  
For Daily Alerts

ಚಳಿಗಾಲ: ಶೀತ, ಜ್ವರ ಬಾರದಿರಲು ತಿನ್ನಬಾರದ ಆಹಾರಗಳಿವು

|

ಮಳೆಗಾಲ ಮುಗಿದಿದ್ದು ಬಹುತೇಕ ಎಲ್ಲ ಕಡೆಗೂ ಚಳಿಗಾಲವು ಆವರಿಸಿಕೊಳ್ಳುತ್ತಿದೆ. ಮನೆಯ ಅಟ್ಟ, ಕಪಾಟುಗಳಲ್ಲಿದ್ದ ರಗ್ಗು, ಜಾಕೆಟ್, ಸ್ವೆಟರ್ ಎಲ್ಲವೂ ಈಗ ನೆನಪಾಗುತ್ತಿವೆ. ಜೊತೆಗೆ ಇಷ್ಟು ದಿನ ಕಾಡದೇ ಇದ್ದ ಕೆಮ್ಮು ಹಾಗೂ ನೆಗಡಿಗಳು ನಾವೂ ಇದ್ದೀವಿ ಅಂತಾ ನೆನಪಿಸುತ್ತಿವೆ.

ಬೇರಾವುದೇ ಸಮಯವಾಗಿದ್ದರೆ ಕೆಮ್ಮು, ನೆಗಡಿಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಆದರೆ ಈಗ ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಮಾಮೂಲಿ ಕೆಮ್ಮು, ನೆಗಡಿಯೂ ಆತಂಕ ಮೂಡಿಸುತ್ತಿರುವುದು ಸುಳ್ಳಲ್ಲ. ಹಾಗಂತ ಕೆಮ್ಮು, ನೆಗಡಿ ಕಾಣಿಸಿಕೊಂಡಾಕ್ಷಣ ಹೆದರುವ ಕಾರಣವೇ ಇಲ್ಲ.

ನೆಗಡಿ, ಕೆಮ್ಮು ಬಾರದಂತೆ ಮುಂಜಾಗ್ರತಾ ಕ್ರಮ ಅನುಸರಿಸಿ
ಅದೇನೇ ಇರಲಿ.. ಈ ಕೆಮ್ಮು ನೆಗಡಿ ಬಂದ ಮೇಲೆ ಔಷಧಿ ಮಾಡುವುದಕ್ಕಿಂತ ಅವು ನಮ್ಮ ಬಳಿ ಸುಳಿಯದಂತೆ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಜಾಣತನ. ಅದರಲ್ಲೂ ಮುಖ್ಯವಾಗಿ ಕೆಲ ಆಹಾರ ಪದಾರ್ಥಗಳಿಂದ ಈ ಚಳಿಗಾಲದಲ್ಲಿ ದೂರವಿದ್ದರೆ ನೆಗಡಿ, ಕೆಮ್ಮು ಬಾಧೆಯನ್ನು ಆದಷ್ಟು ಮಟ್ಟಿಗೆ ದೂರವಿಡಬಹುದು. ಹಾಗಾದರೆ ಈ ಚಳಿಗಾಲದಲ್ಲಿ ಯಾವೆಲ್ಲ ಆಹಾರ ಪದಾರ್ಥಗಳನ್ನು ವರ್ಜಿಸಬೇಕೆಂಬ ವಿವರ ಇಲ್ಲಿದೆ.

ನೆಗಡಿ, ಕೆಮ್ಮು ಬಾರದಂತೆ ಈ 5 ಆಹಾರ ಪದಾರ್ಥ ಸೇವನೆ ಕಡಿಮೆ ಮಾಡಿ:

ಶತಾವರಿ

ಶತಾವರಿ

ಶತಾವರಿಯು ಸಾಮಾನ್ಯವಾಗಿ ಬೇಸಿಗೆಯ ಆರಂಭದಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯಾಗಿದೆ. ಆದರೆ ಇದನ್ನು ಯಾವುದೇ ಕಾರಣಕ್ಕೂ ಚಳಿಗಾಲದಲ್ಲಿ ಸೇವಿಸಕೂಡದು. ಬೇಸಿಗೆಯ ಬೆಳೆಯಾದರೂ ಮಾರುಕಟ್ಟೆಯಲ್ಲಿ ಶತಾವರಿ ಮಾರಾಟಕ್ಕಿರುವುದನ್ನು ನೀವು ಕಾಣಬಹುದು. ಆದರೆ ಇದು ಈ ಸಮಯದಲ್ಲಿ ಉತ್ತಮ ಗುಣಮಟ್ಟ ಹೊಂದಿಲ್ಲದಿರುವುದರಿಂದ ಆರೋಗ್ಯಕ್ಕೆ ಇದರಿಂದ ಉಪಯೋಗಕ್ಕಿಂತ ಹಾನಿಯೇ ಹೆಚ್ಚಾಗಬಹುದು.

ಕೆಫೀನ್ಯುಕ್ತ ಪಾನೀಯಗಳು

ಕೆಫೀನ್ಯುಕ್ತ ಪಾನೀಯಗಳು

ಕೊರೆಯುವ ಚಳಿಯಲ್ಲಿ ಬಿಸಿ ಬಿಸಿಯಾದ ಕಾಫಿ, ಟೀ ಹೀರುವುದೆಂದರೆ ಎಲ್ಲರಿಗೂ ಇಷ್ಟ. ಆದರೆ ಈ ಕೆಫೀನ್ಯುಕ್ತ ಪಾನೀಯಗಳು ತುಸು ಹೆಚ್ಚಾಗಿಯೇ ಮೂತ್ರವರ್ಧಕ ಗುಣ ಹೊಂದಿರುತ್ತವೆ. ಪದೇ ಪದೇ ಮೂತ್ರ ವಿಸರ್ಜಿಸುವುದರಿಂದ ದೇಹದಲ್ಲಿ ಡಿಹೈಡ್ರೇಶನ್ ಉಂಟಾಗುತ್ತದೆ. ಅಲ್ಲದೆ ಈ ಪಾನೀಯಗಳು ಸಿಂಬಳವನ್ನು ಹೆಚ್ಚಿಸಿ ಗಂಟಲು ಆರುವಂತೆ ಮಾಡುತ್ತವೆ. ಇದರಿಂದ ಮೂಗು ಹಾಗೂ ಗಂಟಲು ಕಟ್ಟಿಕೊಂಡಂತಾಗಿ ಉಸಿರಾಟಕ್ಕೆ ತೊಂದರೆಯಾಗಬಹುದು.

ಕರಿದ ಆಹಾರ ಪದಾರ್ಥಗಳು

ಕರಿದ ಆಹಾರ ಪದಾರ್ಥಗಳು

ಚಳಿಗಾಲದಲ್ಲಿ ಕರಿದ ಹಾಗೂ ಹುರಿದ ಪದಾರ್ಥಗಳನ್ನು ತಿನ್ನಲು ಮನಸ್ಸು ಹಾತೊರೆಯುತ್ತದೆ. ಆದರೂ ನೀವು ನಿಮ್ಮ ಆರೋಗ್ಯದ ದೃಷ್ಟಿಯಿಂದ ಅವುಗಳಿಂದ ದೂರವಿರುವುದೇ ಒಳ್ಳೆಯದು. ಕರಿದ ತಿಂಡಿಗಳು ಸಾಮಾನ್ಯವಾಗಿ ಹೆಚ್ಚು ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು ಹೊಂದಿರುವುದರಿಂದ ಇವು ಸುಲಭವಾಗಿ ಜೀರ್ಣವಾಗಲಾರವು. ಕರಿದ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದರಿಂದ ಭೇದಿ, ಅಜೀರ್ಣತೆ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹೀಗಾಗಿ ಸದ್ಯ ಚಳಿಗಾಲದಲ್ಲಿ ನಿಮ್ಮ ಮೆಚ್ಚಿನ ಕರಿದ, ಹುರಿದ ತಿಂಡಿಗಳಿಂದ ದೂರವಿರಿ.

 ದ್ರಾಕ್ಷಿ ಹಣ್ಣುಗಳು

ದ್ರಾಕ್ಷಿ ಹಣ್ಣುಗಳು

ದ್ರಾಕ್ಷಿ ಅಥವಾ ಬೆರ್ರಿ ಹಣ್ಣುಗಳನ್ನು ಚಳಿಗಾಲದಲ್ಲಿ ಸೇವಿಸದಿರುವುದೇ ಸೂಕ್ತ. ಬೆರ್ರಿ ಹಾಗೂ ದ್ರಾಕ್ಷಿಗಳು ಚಳಿಗಾಲದಲ್ಲಿ ಬೆಳೆಯುವ ಹಣ್ಣುಗಳಲ್ಲ. ಇವೇನಿದ್ದರೂ ಬೇಸಿಗೆಯಲ್ಲಿ ಬೆಳೆಯುವಂಥವಾಗಿದ್ದು, ಆಗಲೇ ಇವನ್ನು ತಿನ್ನುವುದು ಒಳ್ಳೆಯದು. ಇನ್ನು ಈ ಸಮಯದಲ್ಲಿ ದೊರೆಯುವ ಬೆರ್ರಿಗಳ ಗುಣಮಟ್ಟ ಉತ್ತಮವಾಗಿಲ್ಲದೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಹೈನೋತ್ಪನ್ನಗಳು

ಹೈನೋತ್ಪನ್ನಗಳು

ಚಳಿಗಾಲದಲ್ಲಿ ಹೈನೋತ್ಪನ್ನಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಚೀಸ್, ಮೊಸರು ಅಥವಾ ಹಾಲು ಹೀಗೆ ಯಾವುದೇ ಡೇರಿ ಉತ್ಪನ್ನಗಳ ಸೇವನೆ ಈಗ ಬೇಡ. ಹಾಲು ಹಾಗೂ ಹಾಲಿನ ಉತ್ಪನ್ನಗಳಿಂದ ಸಿಂಬಳದ ಪ್ರಮಾಣ ಹೆಚ್ಚಾಗಿ ನೆಗಡಿಯ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಜೊತೆಗೆ ಚಳಿಗಾಲದಲ್ಲಿ ಇವುಗಳ ಸೇವನೆಯಿಂದ ಅಜೀರ್ಣತೆಯೂ ಉಂಟಾಗಬಹುದು.

ಆರೋಗ್ಯಕರ ಚಳಿಗಾಲ ನಿಮ್ಮದಾಗಿರಲಿ

ಆರೋಗ್ಯಕರ ಚಳಿಗಾಲ ನಿಮ್ಮದಾಗಿರಲಿ

ಕೊರೊನಾ ವೈರಸ್, ಲಾಕ್ಡೌನ್ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲಿರುವ ಎಲ್ಲರಿಗೂ ಈ ಚಳಿಗಾಲ ಆರೋಗ್ಯ ಭಾಗ್ಯವನ್ನು ತರಲಿ. ಎಲ್ಲರೂ ಆರೋಗ್ಯವಂತರಾಗಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮತ್ತೆ ಮೊದಲಿನಂತೆ ಪಾಲ್ಗೊಳ್ಳುವಂತಾಗಲಿ. ಆರೋಗ್ಯ ಭಾಗ್ಯಕ್ಕಿಂತ ಮತ್ತೊಂದು ಭಾಗ್ಯವಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಹಾಂ.. ಮತ್ತೊಂದು ಮಾತು.. ಏನೇ ಆದರೂ ಮಾಸ್ಕ್ ಧರಿಸಲು ಮರೆಯಬೇಡಿ.. ಎರಡು ಮೀಟರ್ ಸಾಮಾಜಿಕ ಅಂತರ ಕಡ್ಡಾಯವಾಗಿರಲಿ..

English summary

Foods to Avoid to Prevent Cold and Flu

Here are list of foods to avoid to prevent cold and flu, have a look,
X
Desktop Bottom Promotion