For Quick Alerts
ALLOW NOTIFICATIONS  
For Daily Alerts

ಬೊಕ್ಕೆಗಳು: ಇದಕ್ಕೆ ಕಾರಣಗಳು, ವಿಧಗಳು, ಲಕ್ಷಣಗಳು ಹಾಗೂ ಚಿಕಿತ್ಸೆ

|

ಬೊಕ್ಕೆ ಅಥವಾ ಕೀವುಗುಳ್ಳೆ ಕ್ಯಾನ್ಸರ್ ಅಲ್ಲದ ಚರ್ಮದ ಮೇಲೆ ಉಬ್ಬಿಸುವ ಚಿಕ್ಕ ಚೀಲಗಳಾಗಿದ್ದು ಒಳಭಾಗದಲ್ಲಿ ಸೋಂಕು ಪೀಡಿತ ದ್ರವ ತುಂಬಿದ್ದು ಹೆಚ್ಚೂ ಕಡಿಮೆ ಬೆಂಕಿ ಬಿದ್ದಾಗ ಏಳುವ ಗುಳ್ಳೆಯಂತೆಯೇ ಕಾಣುತ್ತದೆ. ಈ ಬೊಕ್ಕೆಗಳು ಸಾಮಾನ್ಯವಾಗಿ ಒಂಗಾಂಶವೊಂದರ ಒಳಗೆ ರೂಪುಗೊಳ್ಳುತ್ತದೆ ಹಾಗೂ ವಿವಿಧ ಗಾತ್ರದ ಇವು ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು

Cysts

ಬೊಕ್ಕೆಗಳು ಉಂಟಾಗಲು ಕಾರಣವೇನು?

ಬಹುತೇಕ ಎಲ್ಲಾ ಬೊಕ್ಕೆಗಳು ನಿರಪಾಯಕಾರಿಯಾಗಿವೆ ಹಾಗೂ ದೇಹದ ದುಗ್ಧನಾಳಗಳಲ್ಲಿ ತಡೆಯುಂಟಾದಾಗ ಕಾಣಿಸಿಕೊಳ್ಳುತ್ತವೆ. ಇತರ ಕಾರಣಗಳೆಂದರೆ:

  • ಸೋಂಕುಗಳು
  • ವಂಶಪಾರಂಪರ್ಯವಾಗಿ ಬರುವ ಕಾಯಿಲೆ
  • ಜೀವಕೋಶಗಳಲ್ಲಿ ದೋಶವಿರುವುದು
  • ಭ್ರೂಣದಲ್ಲಿ ಬೆಳೆಯುತ್ತಿರುವ ಮಗುವಿನ ಅಂಗವೊಂದರಲ್ಲಿ ಎದುರಾದ ತೊಂದರೆ
  • ಪರಾವಲಂಬಿ ಕ್ರಿಮಿಗಳು
  • ಅತೀವತರದ ಉರಿಯೂತದ ಸ್ಥಿತಿ
  • ದೇಹದ ದ್ರವಗಳನ್ನು ಕೊಂಡೊಯ್ಯುವ ನಾಳಗಳಲ್ಲಿ ಎದುರಾದ ತಡೆಯಿಂದಾಗಿ ಸಂಗ್ರಹಗೊಳ್ಳುವ ದ್ರವ
  • ಪೆಟ್ಟು ಅಥವಾ ಗಾಯದಿಂದಾಗಿ ತುಂಡಾದ ನರ

ಬೊಕ್ಕೆಗಳ ವಿಧಗಳು

1. ಮೊಡವೆ ಬೊಕ್ಕೆ:

ನೋಡ್ಯುಲೋಸಿಸ್ಟಿಕ್ ಆಕ್ನೆ ಎಂದು ಕರೆಯಲ್ಪಡುವ ಈ ಪರಿಯ ಬೊಕ್ಕೆಗಳು ಚರ್ಮದ ಸೂಕ್ಷ್ಮರಂಧ್ರಗಳು ಯಾವುದೋ ಕಾರಣದಿಂದ ಮುಚ್ಚಿಹೋಗಿ ಒಳಭಾಗದ ಕಲ್ಮಶಗಳು ಹೊರಬರದೇ ಒಳಗೇ ಉಳಿದು ಸೋಂಕು ಉಂಟಾಗಲು ಕಾರಣವಾಗುತ್ತದೆ. ಇದರ ಹೊರತಾಗಿ ಕೆಲವು ರಸದೂತಗಳ ಸಂಯುಕ್ತ ಬದಲಾವಣೆ, ಚರ್ಮದಲ್ಲಿರುವ ಎಣ್ಣೆಜೆಡ್ಡು, ಬ್ಯಾಕ್ಟೀರಿಯಾ ಹಾಗೂ ಚರ್ಮದ ಹೊರಪದರಕ್ಕೆ ಅಂಟಿಕೊಂಡಿರುವ ಸತ್ತ ಜೀವಕೋಶಗಳು ಚರ್ಮದ ಸೂಕ್ಷ್ಮರಂಧ್ರಗಳನ್ನು ಮುಚ್ಚಿರುವುದು ಈ ಮೊಡವೆಗಳು ಮೂಡಲು ಕಾರಣವಾಗಿವೆ. ಮೊಡವೆಗಳು ಹೆಚ್ಚಾಗಿ ಮುಖ, ಕುತ್ತಿಗೆ, ಎದೆ, ಬೆನ್ನು ಮತ್ತು ತೋಳುಗಳ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.

2. ಬಾಣಸಿಗನ ಬೊಕ್ಕೆ (Baker's cysts)

ಪಾಪ್ಲೈಟಿಯಲ್ ಸಿಸ್ಟ್ (popliteal cysts)ಎಂದೂ ಕರೆಯಲ್ಪಡುವ ಈ ಬಗೆಯ ಬೊಕ್ಕೆಗಳು ಸಾಮಾನ್ಯವಾಗಿ ಮೊಣಗಂಟಿನ ಹಿಂಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಮೊಣಗಂಟಿಗೆ ಎದುರಾದ ಪೆಟ್ಟು, ಸಂಧಿವಾತ ಇದಕ್ಕೆ ಕಾರಣವಾಗಿದೆ. ಈ ಬೊಕ್ಕೆಗಳಿಗೆ ಚಿಕಿತೆಯಾಗಿ ಕೆಲವು ಔಷಧಿಳು, ದೈಹಿಕ ಚಿಕಿತ್ಸೆ ಹಾಗೂ ಈ ಭಾಗದಲ್ಲಿ ತುಂಬಿಕೊಂಡಿದ್ದ ಕೀವನ್ನು ಹೀರಿ ಹೊರತೆಗೆಯುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

3. ಸ್ತನದ ಬೊಕ್ಕೆ:

ಸ್ತನಗಳ ಮೇಲೆ ಕಾಣಿಸಿಕೊಳ್ಳುವ ಈ ಬೊಕ್ಕೆಗಳು ಕ್ಯಾನ್ಸರ್ ಕಾರಕವಲ್ಲದಿದ್ದರೂ ಸಾಕಷ್ಟು ನೋವಿನಿಂದ ಕೂಡಿರುತ್ತವೆ. ಈ ಬೊಕ್ಕೆ ಸಾಮಾನ್ಯವಾಗಿ ಸ್ತನದ ಚರ್ಮದ ಅಡಿಯಲ್ಲಿ ಕಾಣಿಸಿಕೊಂಡು ಚರ್ಮವನ್ನು ಉಬ್ಬಿಸಿರುತ್ತದೆ ಹಾಗೂ ಸ್ತನತೊಟ್ಟಿನಿಂದ ದ್ರವ ಹೊರಸೂಸುತ್ತದೆ.

4. ಆರ್ಕನಾಯ್ಡ್ ಬೊಕ್ಕೆ:

ಈ ಬಗೆಯ ಬೊಕ್ಕೆಗಳು ನವಜಾತ ಶಿಶುಗಳನ್ನು ಕಾಡುತ್ತದೆ. ಗರ್ಭದೊಳಗಿನ ಭ್ರೂಣ ಬೆಳವಣಿಗೆಯ ಹಂತದಲ್ಲಿರುವಾಗಲೇ ಶಿಶುವಿನ ಮೆದುಳಿನ ರಕ್ಷಾಕವಚವಾದ arachnoid membrane ಎಂಬ ಬಲೆಯಾಕಾರದ ಪದರ ಸೀಳಿ ಮೆದುಳನ್ನು ಸುತ್ತುವರೆದಿರುವ cerebrospinal fluid ಎಂಬ ದ್ರವದಲ್ಲಿ ಅಸಹಜ ಚೀಲವೊಂದನ್ನು ಉಂಟುಮಾಡುತ್ತದೆ. ಈ arachnoid membrane ಮೆದುಳು ಹಾಗೂ ಮೆದುಳುಬಳ್ಳಿಗಳನ್ನು ಸುತ್ತುವರೆಯುವ ಮೂರು ಸೂಕ್ಷ್ಮ ಪದರಗಳಲ್ಲಿ ನಡುವಿನದ್ದಾಗಿದೆ.್

Cysts

5. ಗರ್ಭಕೋಶದ ಬೊಕ್ಕೆಗಳು:

ಈ ನಿರಪಾಯಕಾರಿ ಗುಳ್ಳೆಗಳು ಐದು ಸೆಂಟಿಮೀಟರ್ ನ ಅಕ್ಕಪಕ್ಕದ ಅಳತೆಗಳಲ್ಲಿ ಬೆಳಯುತ್ತವೆ. ಮಹಿಳೆಯ ಸಂತಾನೋತ್ಪತ್ತಿ ಸಾಧ್ಯವಿರುವ ವರ್ಷಗಳಲ್ಲಿ ಈ ಬೊಕ್ಕೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು American Journal of Roentgenology ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿ ತಿಳಿಸುತ್ತದೆ. ಬೊಕ್ಕೆಗಳು ಸಾಮಾನ್ಯವಾದರೂ ಅತಿ ಕಡಿಮೆ ಶೇಖಡಾವಾರು ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಪತ್ತೆಯಾಗಿದೆ.

6. ಬಾರ್ಥೋಲಿನ್ ಬೊಕ್ಕೆ:

ಮಹಿಳೆಯರ ಜನನಾಂಗದ ಆಳದಲ್ಲಿರುವ ಬಾರ್ಥೋಲಿನ್ ಗ್ರಂಥಿಯ ನಾಳಗಳು ಯಾವುದಾದರೊಂದು ಕಾರಣದಿಂದ ಮುಚ್ಚಿದಾಗ ಈ ಭಾಗದಲ್ಲಿ ಬೊಕ್ಕೆ ಕಾಣಿಸಿಕೊಳ್ಳುತ್ತದೆ.

7. ಕೊಲಾಯ್ಡ್ ಬೊಕ್ಕೆ (Colloid cysts)

ಈ ಬೊಕ್ಕೆಗಳು ಸಹಾ ನಿರಪಾಯಕಾರಿಯಾಗಿದ್ದು ಮೆದುಳಿನ ದ್ರವತುಂಬಿದ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಮೆದುಳಿನ ವಿವಿಧ ಭಾಗಗಳು ಪರಸ್ಪರ ತಾಕಿರುವಲ್ಲಿ ಈ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ ಹಾಗೂ ಮೆದುಳಿನ ದ್ರವದ ಹರಿಯುವಿಕೆಗೆ ಅಡ್ಡಿ ಮಾಡಬಹುದು. (cerebrospinal fluid blockage)

8 ಮೈಬೋಮಿಯನ್ ಬೊಕ್ಕೆ (Meibomian cysts)

ಕಣ್ಣಿನ ರೆಪ್ಪೆಗಳಲ್ಲಿರುವ ಸೂಕ್ಷ್ಮಗ್ರಂಥಿಗಳಾದ ಮೈಬೋಮಿಯನ್ ಗ್ರಂಥಿಗಳ ನಾಳಗಳು ಯಾವುದೋ ಕಾರಣದಿಂದ ಮುಚ್ಚಲ್ಪಟ್ಟರೆ ಇದು ಚಿಕ್ಕ ಚಿಕ್ಕ ಗುಳ್ಳೆಗಳಾಗಲು ಕಾರಣವಾಗುತ್ತದೆ. ಇವು ಸಹಾ ನಿರಪಾಯಕಾರಿಯಾಗಿದ್ದು ಕಾಲಕ್ರಮೇಣ ತನ್ನಿಂತಾನೇ ವಾಸಿಯಾಗುತ್ತದೆ.

9. ಮೇದೋಜೀರಕ ಗ್ರಂಥಿಯ ಬೊಕ್ಕೆ (Pancreatic cysts)

ಇವು ಒಂದು ಬಗೆಯ ಮಿಥ್ಯಾ ಬೊಕ್ಕೆಗಳಾಗಿವೆ. ಏಕೆಂದರೆ ಈ ಬೊಕ್ಕೆಗಳಲ್ಲಿ ಇತರ ಬೊಕ್ಕೆಗಳಲ್ಲಿ ಕಾಣಬರುವಂತೆ ಯಾವುದೇ ಜೀವಕೋಶಗಳನ್ನು ಹೊಂದಿರುವುದಿಲ್ಲ. ಬದಲಿಗೆ ಈ ಗುಳ್ಳೆಗಳಲ್ಲಿ ಬೇರೆ ಅಂಗದಲ್ಲಿ ಕಂಡುಬರುವ ಜೀವಕೋಶಗಳು (ಸಾಮಾನ್ಯವಾಗಿ ಕರುಳು ಮತ್ತು ಜಠರ) ಕಂಡುಬರುತ್ತವೆ.

10. ಪೈಲರ್ ಬೊಕ್ಕೆ

ಕೂದಲ ಬುಡದಲ್ಲಿ ಕಾಣಿಸಿಕೊಳ್ಳುವ ಈ ಬೊಕ್ಕೆಗಳನ್ನು trichilemmal cysts ಎಂದೂ ಕರೆಯುತ್ತಾರೆ. ಇವುಗಳಲ್ಲಿ ದ್ರವ ತುಂಬಿಕೊಂಡು ನೋವಿನಿಂದ ಕೂಡಿದ್ದು ತಲೆ ಬಾಚಿಕೊಳ್ಳಲು ಅಸಾಧ್ಯವಾಗಿಸುತ್ತವೆ.

11. ಡೆಂಟಿಜೆರಸ್ ಬೊಕ್ಕೆ ( Dentigerous cysts)

ದವಡೆಯೊಳಗೆ, ಹಲ್ಲಿನ ಬುಡದ ಮೃದು ಭಾಗದಲ್ಲಿ ಈ ಬೊಕ್ಕೆಗಳುಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ದವಡೆಯೊಳಗಿರುವ ,ಇನ್ನೂ ಹುಟ್ಟಬೇಕಾಗಿರುವ ಹಲ್ಲಿನ ತುದಿಯ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಕೋರೆ ಮತ್ತು ದವಡೆಹಲ್ಲುಗಳ ಬುಡದಲ್ಲಿ ಇವು ಕಾಣಿಸಿಕೊಳ್ಳುತ್ತವೆ.

12. ಎಪಿಡೈಡಿಮಲ್ ಬೊಕ್ಕೆ (Epididymal cysts)

ವೃಷಣಗಳ ಒಳಗಿನ ನಾಳಗಳಲ್ಲಿ ಈ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಬೊಕ್ಕೆಗಳಲ್ಲಿರುವ ದ್ರವವನ್ನು ಪರೀಕ್ಷಿಸಿದಾಗ ಇವುಗಳಲ್ಲಿ ಸತ್ತ ವೀರ್ಯಾಣುಗಳೂ ಕಾಣಿಸಿಕೊಳ್ಳುತ್ತವೆ.

13. ಹೈಡೇಟಿಡ್ ಬೊಕ್ಕೆ (Hydatid cysts)

ಈ ಬೊಕ್ಕೆಗಳು ನಮ್ಮ ದೇಹದಲ್ಲಿ ಆಶ್ರಯ ಪಡೆಯುವ ಲಾಡಿಹುಳಕ್ಕೆ ಸಂಬಂಧಿಸಿದ್ದು ಯಕೃತ್, ಶ್ವಾಸಕೋಶ, ಮೆದುಳು ಹಾಗೂ ಇತರ ಪ್ರಮುಖ ಅಂಗಗಳಲ್ಲಿ ಬೊಕ್ಕೆಗಳನ್ನುಂಟುಮಾಡುತ್ತದೆ. ಈ ಬೊಕ್ಕೆಗಳಿಗೆ ಔಷಧಿಗಳ ಹೊರತಾಗಿ ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಗಬಹುದು.

ಇತರ ಬಗೆಯ ಬೊಕ್ಕೆಗಳು:

*ಗ್ಯಾಂಗ್ಲಿಯಾನ್ ಬೊಕ್ಕೆ

*ಡರ್ಮಾಯ್ಡ್ ಬೊಕ್ಕೆ

*ಪೆರಿಯಾಪಿಕಲ್ ಬೊಕ್ಕೆ

*ರೀನಲ್ ಬೊಕ್ಕೆ

*ಪೀನಿಯಲ್ ಗ್ರಂಥಿ ಬೊಕ್ಕೆ

*ಟಾರ್ಲೋವ್ ಬೊಕ್ಕೆ

*ಸಬೇಶಿಯಸ್ ಬೊಕ್ಕೆ

*ಧ್ವನಿಪೆಟ್ಟಿಗೆಯಲ್ಲಿ ಮಡಿಕೆಯ ಬೊಕ್ಕೆ ಹಾಗೂ ಪೈಲೋನಿಡಲ್ ಬೊಕ್ಕೆ

ಬೊಕ್ಕೆಗಳ ಲಕ್ಷಣಗಳು:

ಈ ಬೊಕ್ಕೆಗಳು ಯಾವ ಅಂಗದ ಅಥವಾ ದೇಹದ ಯಾವ ಭಾಗದ ಮೇಲೆ ಕಾಣಿಸಿಕೊಳ್ಳುತ್ತದೆಯೋ ಆ ಪ್ರಕಾರದಲ್ಲಿ ಲಕ್ಷಣಗಳೂ ಕೊಂಚ ಭಿನ್ನವಾಗಿರುತ್ತವೆ. ದೇಹದ ಯಾವುದೇ ಭಾಗದಲ್ಲಿ ಅಸಹಜವಾಗಿ ಉಬ್ಬಿದಂತೆ ಕಾಣುವ ಯಾವುದೇ ಚಿಹ್ನೆ ಬೊಕ್ಕೆಯ ಮೊದಲ ಲಕ್ಷಣವಾಗಿದೆ. ಮೆದುಳಿನ ಬೊಕ್ಕೆಗಳು ತಲೆನೋವು ಹಾಗೂ ಇತರ ತೊಂದರೆಗಳನ್ನು ತಂದೊಡ್ಡುತ್ತದೆ. ಹಾಗೂ ಮೂತ್ರಪಿಂಡ ಮತ್ತು ಯಕೃತ್ ನಲ್ಲಿರುವ ಬೊಕ್ಕೆಗಳು ನೀಡುವ ಲಕ್ಷಣಗಳು ಎಂ ಆರ್ ಐ, ಸಿಟಿ ಸ್ಕ್ಯಾನ್ ಅಥವಾ ಅಲ್ಟ್ರಾಸೌಂಡ್ ಪರೀಕ್ಷೆಯ ಹೊರತು ಗಮನಕ್ಕೆ ಬಾರದೇ ಹೋಗುತ್ತವೆ.

ಬೊಕ್ಕೆಗಳ ಪತ್ತೆಹಚ್ಚುವಿಕೆ:

ವೈದ್ಯರು ಬೊಕ್ಕೆಗಳನ್ನು ಹೊರನೋಟದಿಂದ, ಅಗತ್ಯ ಬಿದ್ದರೆ ಈ ಭಾಗದ ಚರ್ಮದ ಜೀವಕೋಶಗಳನ್ನು ಕೆರೆದು ತೆಗೆದು ಪರೀಕ್ಷಿಸುವ ಮೂಲಕ ಬೊಕ್ಕೆಯ ಮೂಲವನ್ನು ಅರಿಯಲು ಯತ್ನಿಸುತ್ತಾರೆ. ಪ್ರಯೋಗಾಲಯದಲ್ಲಿ ಈ ಜೀವಕೋಶಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಧ್ಯಯನ ಮಾಡಲಾಗುತ್ತದೆ.

ಬೊಕ್ಕೆಗಳಿಗೆ ಚಿಕಿತ್ಸೆ:

ಬೊಕ್ಕೆಗಳು ಎದುರಾಗಿರುವ ಭಾಗ, ಗಾತ್ರ, ಉಂಟುಮಾಡುವ ತೊಂದರೆ ಹಾಗೂ ವಿಧಕ್ಕನುಗುಣವಾಗಿ ಚಿಕಿತ್ಸೆಯೂ ಭಿನ್ನವಾಗಿರುತ್ತದೆ. ಬೊಕ್ಕೆಗಳು ತೀರಾ ದೊಡ್ಡದಾಗಿದ್ದು ರೋಗಿಗೆ ಅತಿ ಹೆಚ್ಚು ತೊಂದರೆ ನೀಡುತ್ತಿದ್ದರೆ ಅಥವಾ ಚಿಕ್ಕದಾಗಿದ್ದರೂ ರೋಗಿಗೆ ಹೆಚ್ಚಿನ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದ್ದರೆ ಈ ಬೊಕ್ಕೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಬುಡದಿಂದಲೇ ನಿವಾರಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಬೊಕ್ಕೆಯ ಒಳಗಿನ ದ್ರವವನ್ನು ಮಾತ್ರವೇ ಸೂಜಿ ಚುಚ್ಚಿ ಅಥವಾ ದ್ರವಹೀರುವ ಕ್ಯಾಥೆಟರ್ ಎಂಬ ಉಪಕರಣ ಬಳಸಿ ಹೀರಿ ತೆಗೆಯಲಾಗುತ್ತದೆ. ಕೆಲವೊಮ್ಮೆ ಈ ದ್ರವದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳಿವೆಯೇ ಎಂಬುದನ್ನೂ ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಹೌದು ಎಂದಾದರೆ ಈ ಬೊಕ್ಕೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಬುಡಸಹಿತ ನಿವಾರಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಬೊಕ್ಕೆಗಳು ತಾವು ತಾವಾಗಿಯೇ ಗುಣವಾಗುತ್ತವೆ. ಈ ಭಾಗದ ಮೇಲೆ ಬೆಚ್ಚಗಿನ ಶಾಖವನ್ನು ನೀಡಿದಾಗ ಗುಣವಾಗುವುದು ಇನ್ನಷ್ಟು ಶೀಘ್ರವಾಗುತ್ತದೆ.

ಬೊಕ್ಕೆಗಳು ಬಾರದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು:

ಬಹುತೇಕ ಬೊಕ್ಕೆಗಳನ್ನು ಬಾರದೇ ಇರದಂತೆ ಮಾಡಲು ಸಾಧ್ಯವಿಲ್ಲ. ಆದರೆ ಕೆಲವು ಅಪವಾದಗಳಿವೆ. ಆದರೂ ಈ ಬೊಕ್ಕೆಗಳು ಎದುರಾಗುವ ಸಂಭವ ಕನಿಷ್ಟವಾಗಿರಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು:

* ಕಣ್ಣುಗಳ ರೆಪ್ಪೆಗಳ ಅಂಚುಗಳನ್ನು ಸೌಮ್ಯ ಸ್ವಚ್ಛತಾ ದ್ರವ (gentle cleanser)ಬಳಸಿ ತೊಳೆದುಕೊಳ್ಳುವ ಮೂಲಕ ರೆಪ್ಪೆಗಳಲ್ಲಿರುವ ಎಣ್ಣೆಗ್ರಂಥಿಗಳ ನಾಳಗಳು ಮುಚ್ಚಿಕೊಳ್ಳುವುದನ್ನು ತಡೆಯಬಹುದು.

* ಗರ್ಭಕೋಶದ ಬೊಕ್ಕೆಗಳು ಎದುರಾಗುವ ಸಾಧ್ಯತೆ ಹೆಚ್ಚಿರುವ ಮಹಿಳೆಯರು ಈ ಸಂಭವವನ್ನು ಕನಿಷ್ಟವಾಗಿಸಲು hormonal contraceptivesಅಥವಾ ಗರ್ಭನಿರೋಧಕ ಕ್ರಮಗಳನ್ನು ಕೈಗೊಳ್ಳಬೇಕು.

* ಪೈಲೋನಿಡಲ್ ಬೊಕ್ಕೆಗಳು ಎದುರಾಗದಂತೆ ಈ ಭಾಗದ ತ್ವಚೆಯನ್ನು ಸಾಕಷ್ಟು ಸ್ವಚ್ಛ ಹಾಗೂ ಒಣದಾಗಿರಿಸುವ ಮೂಲಕ ಕಾಪಾಡಿಕೊಳ್ಳಬಹುದು.

English summary

Cysts: Causes, Types, Symptoms & Treatment

Cysts are non-cancerous and have sac-like structures, which are filled with liquid almost resembling like a blister. Cysts vary in size and they mostly occur within a tissue and can affect any part of the body. The types of cyst are acne cyst, Baker's cyst, breast cyst, ovarian cyst, pancreatic cyst, etc.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more