For Quick Alerts
ALLOW NOTIFICATIONS  
For Daily Alerts

ಮೂಗಿನಲ್ಲಿ ರಕ್ತಸ್ರಾವ: ಇದೇಕೆ ಎದುರಾಗುತ್ತದೆ? ಹೀಗಾದರೆ ಏನು ಮಾಡಬೇಕು?

|

ಮೂಗಿನಲ್ಲಿ ರಕ್ತಸ್ರಾವದ ಪ್ರಕರಣಗಳು ನಮಗೆ ಕಾಣಿಸುವುದಕ್ಕಿಂತಲೂ ಬಹಳವೇ ಹೆಚ್ಚಿವೆ. ಆರೋಗ್ಯವಂತರಲ್ಲಿಯೂ ಇದು ಹಠಾತ್ತಾಗಿ ಕಾಣಿಸಿಕೊಳ್ಳಬಹುದು. ಯಾವುದೇ ಸ್ಪಷ್ಟ ಕಾರಣವಿಲ್ಲದೇ ಮೂಗಿನ ಒಂದು ಹೊಳ್ಳೆಯಿಂದ ರಕ್ತ ನಿಧಾನವಾಗಿ ಹೊರ ಸುರಿಯುತ್ತಿದ್ದು ಆ ವ್ಯಕ್ತಿಗೆ ಇದರ ಅರಿವೇ ಆಗದಿರಬಹುದು. ಕೆಲವು ತೊಟ್ಟು ಕೆಳಕ್ಕೆ ಬಿದ್ದಾಗ ಅಥವಾ ಇನ್ನೊಬ್ಬರು ಈ ಬಗ್ಗೆ ತಿಳಿಸಿದಾಗಲೇ ಮೂಗಿನಿಂದ ರಕ್ತ ಬರುತ್ತಿದ್ದುದು ತಿಳಿದು ಆತಂಕಕ್ಕೆ ಒಳಗಾಗುತ್ತಾರೆ. ಅಚ್ಚರಿ ಎಂದರೆ ಈ ಜಗತ್ತಿನ ಪ್ರತಿಯೊಬ್ಬರಿಗೂ ಈ ಅನುಭವ ಜೀವಮಾನದಲ್ಲೊಮ್ಮೆಯಾದರೂ ಆಗಿಯೇ ಆಗುತ್ತದೆ. ಈ ಸ್ಥಿತಿಗೆ ವೈದ್ಯವಿಜ್ಞಾನ epistaxesಎಂದು ಕರೆಯುತ್ತದೆ ಹಾಗೂ ಇದಕ್ಕೆ ಸ್ಪಷ್ಟವಾದ ಕಾರಣವನ್ನು ಒದಗಿಸಲು ಇದುವರೆಗೆ ಸಾಧ್ಯವಾಗದೇ ಒಂದು ರಹಸ್ಯವಾಗಿ ಉಳಿದಿದೆ.

ಆದರೆ ಒಂದು ವೇಳೆ ಈ ತೊಂದರೆ ಸತತವಾಗಿದ್ದವರಿಗೆ ಇಲ್ಲೊಂದು ಕೊಂಚ ಸಮಾಧಾನಕರ ಸುದ್ದಿ ಇದೆ. ಏನೆಂದರೆ ಮೂಗಿನಲ್ಲಿ ರಕ್ತಸ್ರಾವಗೊಳ್ಳಲು ಏನೆಂದು ನಿಮಗೆ ಸ್ಪಷ್ಟವಾದ ಕಾರಣ ಗೊತ್ತಿರದಿದ್ದರೂ ಇದು ಪ್ರಾಣಾಪಾಯ ಉಂಟುಮಾಡಲಾರದು! ನಿಮ್ಮ ಮೂಗಿನ ರಕ್ತಸ್ರಾವಕ್ಕೆ ಏನು ಕಾರಣ ಎಂಬುದನ್ನು ಸೂಕ್ತ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳುವುದು ಅವಶ್ಯವಾಗಿದ್ದು ಈ ಮೂಲಕವೇ ಇದಕ್ಕೆ ಸೂಕ್ತ ಚಿಕಿತ್ಸೆ ಏನು ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ಈ ತೊಂದರೆ ಇರುವ ವ್ಯಕ್ತಿಗಳಿಗೆ ಅಮೂಲ್ಯವಾಗಿ ಪರಿಣಮಿಸಲಿದೆ:

frequent nose bleeds

ಮೂಗಿನ ರಕ್ತಸ್ರಾವ, ಏನು ಹಾಗೆಂದರೆ?

ಅತಿ ಸಾಮಾನ್ಯವಾಗಿ ಕಾಣಬರುವ ಮೂಗಿನ ರಕ್ತಸ್ರಾವದ ಕಾರಣವೆಂದರೆ ಮೂಗಿನ ಹೊಳ್ಳೆಯ ಒಳಭಾಗದಿಂದ ಒಸರುವ ರಕ್ತ (anterior nosebleed).ಸಾಮಾನ್ಯವಾಗಿ ಮೂಗಿನ ಒಳಚರ್ಮದ ಪದರ ಅತಿ ತೆಳುವಾಗಿದ್ದು ಸೂಕ್ಷ್ಮ ನರಗಳ ತುದಿಗಳು ಇಲ್ಲಿರುತ್ತವೆ. ಈ ನರಾಗ್ರಗಳು ಒಡೆದರೆ ಇಲ್ಲಿಂದ ರಕ್ತ ಒಸರುತ್ತದೆ.

ಇನ್ನೊಂದು ಕಾರಣವೆಂದರೆ ಮೂಗಿನ ಹಿಂಭಾಗದಿಂದ ಕಾಣಬರುವ ರಕ್ತ (posterior nosebleed). ಈ ಬಗೆಯಲ್ಲಿ ಮೂಗಿನ ಹೊಳ್ಳೆಯಿಂದಲ್ಲದೇ ಗಂಟಲ ಮೇಲ್ಭಾಗದ ಸೋಂಕು ಅಥವಾ ಗಾಯದಿಂದ ಆಗಿರುವ ರಕ್ತಸ್ರಾವ ಮೂಗಿನ ಮೂಲಕ ಹೊರಬರುತ್ತದೆ. ಸಾಮಾನ್ಯವಾಗಿ ಇದು ವಯಸ್ಕರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗಂಟಲು ಅಥವಾ ಮೂಗಿನ ಮೇಲ್ಭಾಗದಲ್ಲಿ ಆದ ಪೆಟ್ಟು, ಗಾಯ ಅಥವಾ ಇತರ ಕಾರಣದಿಂದ ಗಂಟಲ ಒಳಪದರ ಸೋಂಕಿಗೊಳಗಾದರೆ ಈ ಬಗೆಯ ಸ್ರಾವ ಕಾಣಿಸಿಕೊಳ್ಳುತ್ತದೆ.

ಮೂಗಿನ ರಕ್ತಸ್ರಾವಕ್ಕೇನು ಕಾರಣ?

ಈ ಸ್ರಾವ ಎದುರಾಗಲು ಕೆಲವಾರು ಕಾರಣಗಳಿವೆ. ಸಾಮಾನ್ಯವಾದವೆಂದರೆ ಒಣ ಹವೆ, ಅತಿಯಾದ ಶೀತ, ಕುಹರದ ಸೋಂಕು (sinusitis),ಕೆಲವು ಕಣಗಳಿಗೆ ದೇಹ ಒಡ್ಡುವ ಅಲರ್ಜಿ ಮತ್ತು ಕೆಲವು ಸಮಯದಲ್ಲಿ ಮೂಗಿನ ಒಳಭಾಗವನ್ನು ಉಗುರಿನಿಂದ ಬಲವಾಗಿ ಕೆರೆದು ಸ್ವಚ್ಛಗೊಳಿಸುವುದೂ ಆಗಿದೆ.

ಕೆಲವೊಮ್ಮೆ ಗಾಳಿಯಲ್ಲಿನ ತೇವಾಂಶ ಪೂರ್ಣವಾಗಿ ಆವಿಯಾಗಿ ಒಣಹವೆ ಎದುರಾಗುತ್ತದೆ. ಅತಿಸೆಖೆ ಅಥವಾ ಚಳಿಗಾಲದಲ್ಲಿ ನೀರು ಒಣಗದೇ ಹವೆಯಲ್ಲಿ ಆರ್ದ್ರತೆಯೇ ಇಲ್ಲವಾಗುವ ಕಾರಣ ಈ ಹವೆಯನ್ನು ಸೇವಿಸುವ ಮೂಗಿಗೂ ಆರ್ದ್ರತೆಯೇ ದೊರಕದೇ ಮೂಗಿನ ಒಳಭಾಗ ಸದಾ ತೇವವಾಗಿರಬೇಕಾಗಿದ್ದುದು ಈಗ ಒಣಗುತ್ತದೆ. ಈ ಒಣಗಿದ ಪದರ ಬಿರುಕುಬಿಟ್ಟು ಮೂಗಿನ ಒಳಭಾಗದ ಕೂದಲುಗಳನ್ನು ಬುಡದಿಂದ ಕೀಳುವಂತೆ ಸೆಳೆದಾಗ ಇದು ತಡೆಯಲಾರದ ಕೆರೆತ ಅಥವಾ ನವೆಯನ್ನುಂಟುಮಾಡುತ್ತವೆ. ಅಲರ್ಜಿ, ಕುಹರದ ಸೋಂಕಿನಿಂದಲೂ ನವೆಯುಂಟಾಗಬಹುದು. ಇದನ್ನು ನಿವಾರಿಸಲು ಮೂಗಿನ ಒಳಭಾಗವನ್ನು ಕೆರೆದುಕೊಂಡಾಗ ಅಥವಾ ಸತತವಾದ ಸೀನು ಮತ್ತು ಮೂಗಿನಿಂದ ವಾಯುವನ್ನು ವೇಗವಾಗಿ ಹೊರಹಾಕಿದಾಗ ಈ ಪದರದೊಂದಿಗೇ ಹೊರಚರ್ಮವೂ ಹರಿದು ರಕ್ತ ಒಸರುತ್ತದೆ. ಆದರೆ ರಕ್ತ ಹೆಪ್ಪುಗಟ್ಟುವ ಸಾಮರ್ಥದ ಕಾರಣ ಇದು ಶೀಘ್ರವೇ ನಿಲ್ಲುತ್ತದೆ.

ಈ ಕಾಯಿಲೆಯಿಂದ ರಕ್ತ ದೇಹದಿಂದ ಹೊರಬಂದು ಆತಂಕಕ್ಕೆ ಕಾರಣವಾಗುತ್ತದೆಯೇ ಹೊರತು ಇದು ಮಾರಣಾಂತಿಕವಂತೂ ಅಲ್ಲ. ಅಪರೂಪದ ಸಂದರ್ಭಗಳಲ್ಲಿ ಅತಿಯಾದ ರಕ್ತದ ನಷ್ಟವಾಗುವ ಮೂಲಕ ರಕ್ತಹೀನತೆ ಎದುರಾಗುತ್ತದೆ. ಇದು ರಕ್ತಹೆಪ್ಪುಗಟ್ಟಲು ಅಸಮರ್ಥತೆ ಇರುವ ಅಥವಾ ರಕ್ತದಲ್ಲಿ ಪ್ಲೇಟ್ಲೆಟ್ ಗಳು ಅಗತ್ಯಕ್ಕೂ ಕಡಿಮೆ ಇರುವ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಇವರಿಗೆ ರಕ್ತದ ಬದಲಿ ಪೂರೈಕೆಯ ಅಗತ್ಯವಿರುತ್ತದೆ.

ಈ ರಕ್ತಸ್ರಾವ ಎದುರಾದರೆ ಏನು ಮಾಡಬೇಕು

ರಕ್ತ ಕಂಡಾಕ್ಷಣ ನಾವೆಲ್ಲಾ ಕೊಂಚ ಅಧೀರರಾಗುತ್ತೇವೆ. ರಕ್ತದ ಬಣ್ಣ ಕೆಂಪಾಗಿದ್ದು ಅಪಾಯದ ಸಂಕೇತವಾಗಿರುವುದೇ ಈ ಆತಂಕಕ್ಕೆ ಕಾರಣ. ಈ ಸ್ಥಿತಿ ಕಂಡ ತಕ್ಷಣ ಮೊದಲಿಗೆ ಯಾವುದೇ ಉದ್ವೇಗಕ್ಕೆ ಒಳಗಾಗದೇ ಸುಮ್ಮನೇ ಉಳಿತುಕೊಂಡು ಮುಂದಕ್ಕೆ ಬಾಗಿ ಮೂಗಿನ ಮೃದು ಭಾಗವನ್ನು ಒತ್ತಿ. ಈ ಸಮಯದಲ್ಲಿ ಲಭ್ಯವಿರುವ ಯಾವುದೇ ಮೃದುವಸ್ತುವಿನಿಂದ, ಟಿಶ್ಯೂ ಕಾಗದ, ಕರವಸ್ತ್ರ, ಹತ್ತಿ ಮೊದಲಾದ ಯಾವುದೇ ವಸ್ತುವಿನಿಂದ ಮೂಗಿನ ಕೆಳಭಾಗದಲ್ಲಿ ಅಡ್ಡಲಾಗಿ ಹಿಡಿದು ನಿಧಾನವಾಗಿ ಮೂಗಿನಿಂದ ಉಸಿರನ್ನು ಹೊರಬಿಡುತ್ತಾ ರಕ್ತ ಬೀಳುವಂತೆ ಮಾಡಿ. ಆದರೆ ಮೂಗಿನಿಂದ ಉಸಿರೆಳೆದುಕೊಳ್ಳದೇ ಬಾಯಿಯಿಂದ ಉಸಿರೆಳೆದುಕೊಂಡು ಮೂಗಿನಿಂದ ಹೊರಬಿಡಿ. ಸಾಮಾನ್ಯ ಆರೋಗ್ಯವಂತರಲ್ಲಿ ನಾಲ್ಕೈದು ನಿಮಿಷಗಳಲ್ಲಿಯೇ ರಕ್ತ ಹೆಪ್ಪುಗಟ್ಟುತ್ತದೆ. ಆದರೂ ಹತ್ತು ಹದಿನೈದು ನಿಮಿಷಗಳವರೆಗೆ ಹೀಗೇ ಉಸಿರಾಡುತ್ತಿರಿ. ಒಂದು ವೇಳೆ ಹದಿನೈದು ನಿಮಿಷದ ಬಳಿಕವೂ ನಿಲ್ಲದೇ ಇದ್ದರೆ ಇದೇ ಭಂಗಿಯಲ್ಲಿ ಇನ್ನೂ ಹತ್ತು ನಿಮಿಷ ತಡೆದುಕೊಳ್ಳಿ, ಉಸಿರು ಬಿಡುವುದನ್ನು ಆದಷ್ಟೂ ನಿಧಾನವಾಗಿಸಿ.

ಆದರೂ ನಿಲ್ಲದೇ ಇದ್ದರೆ?

ಸಾಮಾನ್ಯವಾಗಿ ರಕ್ತಸ್ರಾವ ತಾನಾಗಿಯೇ ಅಥವಾ ಮೇಲಿನ ವಿಧಾನದಿಂದ ಕೆಲವು ನಿಮಿಷಗಳ ಬಳಿಕವಾದರೂ ನಿಂತೇ ನಿಲ್ಲುತ್ತದೆ. ಅರ್ಧ ಗಂಟೆಯಾದರೂ ನಿಲ್ಲಲೇ ಇಲ್ಲವೆಂದರೆ ವೈದ್ಯರನ್ನು ಕಾಣುವುದು ಅಗತ್ಯ. ಇದಕ್ಕೆ ಕಾರಣವನ್ನು ಕಂಡುಕೊಳ್ಳಲು ವೈದ್ಯರು ಸೂಕ್ತ ಪರೀಕ್ಷೆ ಮತ್ತು ಉಪಕರಣಗಳಿಂದ ಹಾಗೂ ಮೂಗಿನ ಮೇಲೆ ಸೂಕ್ತ ಒತ್ತಡ ಹೇರುವ ಮೂಲಕ ಇದನ್ನು ನಿಲ್ಲಿಸಲು ಯತ್ನಿಸುತ್ತಾರೆ.

ಒಂದು ವೇಳೆ ರಕ್ತಸ್ರಾವ ಸತತವಾಗಿದ್ದರೆ ಮೂಗಿನ ಒಳಭಾಗದಲ್ಲಿ ಸಡಿಲಗೊಳಿಸುವ ಸ್ಪ್ರೇ (nasal decongestant) ಅಥವಾ ವ್ಯಾಸೆಲಿನ್ / ಪೆಟ್ರೋಲಿಯಂ ಜೆಲ್ಲಿಯಂತಹ ತೇವಕಾಕರ ವಸ್ತುವನ್ನು ಲೇಪಿಸಿ.

ಎಳ್ಳೆಣ್ಣೆ ಆಧಾರಿತ ಮೂಗಿನ ಸ್ಪ್ರೇಗಳು ಸಹಾ ಮಾರುಕಟ್ಟೆಯಲ್ಲಿ ದೊರಕುತ್ತದೆ ಇವುಗಳನ್ನು ಲೇಪಿಸಿಕೊಳ್ಳುವ ಮೂಲಕ ಒಣದಾಗಿರುವ ಮೂಗಿನ ಒಳಭಾಗಕ್ಕೆ ಹೆಚ್ಚಿನ ಆರ್ದ್ರತೆ ದೊರಕುತ್ತದೆ. ಆದರೆ ಕೇವಲ ಎಳ್ಳೆಣ್ಣೆಯನ್ನು ಮಾತ್ರವೇ ಬಳಸಿದರೆ ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಇನ್ನಷ್ಟೇ ಖಚಿತಪಡಿಸಬೇಕಾಗಿದೆ.

ಒಂದು ವೇಳೆ ಮೂಗಿನ ಒಳಭಾಗದಲ್ಲಿ ಆದ ಯಾವುದೋ ಗಾಯದಿಂದಾಗಿ ರಕ್ತಸ್ರಾವ ಇಪ್ಪತ್ತು ನಿಮಿಷಗಳಾದರೂ ನಿಲ್ಲದೇ ಇದ್ದರೆ ಇದು ಅಪಾಯಕರ ಸ್ಥಿತಿಯಾಗಿದ್ದು ತಕ್ಷಣವೇ ತುರ್ತು ವೈದ್ಯಕೀಯ ನೆರವನ್ನು ಪಡೆದುಕೊಳ್ಳಲು ಹತ್ತಿರದ ಆಸ್ಪತ್ರೆಗೆ ಧಾವಿಸಬೇಕು.

ಒಂದು ವೇಳೆ ರಕ್ತಸ್ರಾವ ಸತತವಾಗಿದ್ದರೆ ಏನು ಮಾಡಬೇಕು?

ಒಂದು ವೇಳೆ ಕನಿಷ್ಟ ವಾರಕ್ಕೊಮ್ಮೆಯಾದರೂ ಇದು ಕಂಡುಬಂದರೆ ಇದನ್ನು ಸತತ ರಕ್ತಸ್ರಾವ ಎನ್ನುತ್ತಾರೆ. ಈ ಸ್ಥಿತಿಯನ್ನು ತಕ್ಷಣವೇ ತಜ್ಞ ಮೂಗು-ಗಂಟಲು-ಕಿವಿ ತಜ್ಞವೈದ್ಯರಲ್ಲಿ ಪರೀಕ್ಷೆಗೊಳಪಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಸ್ಥಿತಿ ನಿಮ್ಮ ಕುಟುಂಬದಲ್ಲಿ ಬೇರೆ ಯಾರಿಗಾದರೂ ಇದೆಯೇ ಅಥವಾ ಇದಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳೇನಾದರೂ ಇದೆಯೇ ಎಂಬ ಮಾಹಿತಿಯನ್ನೂ ಒದಗಿಸಬೇಕು. ಕೆಲವು ಸಂದರ್ಭಗಳಲ್ಲಿ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕಾಗಬಹುದು. ಇದರಿಂದ ರಕ್ತ ಹೆಪ್ಪುಗಟ್ಟಲು ಅಗತ್ಯವಾದ ಪ್ಲೇಟ್ಲೆಟ್ ಸಂಖ್ಯೆಯ ವಿವರ ಅಥವಾ ರಕ್ತಹೀನತೆಯ ತೊಂದರೆಗಳು ಇದ್ದರೆ ತಿಳಿದುಬರುತ್ತದೆ. ಸ್ರಾವಕ್ಕೆ ಕಾರಣವನ್ನು ಕಂಡುಕೊಂಡ ಬಳಿಕವೇ ಇದಕ್ಕೆ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಅಲರ್ಜಿ, ಹೆಪ್ಪುಗಟ್ಟುವಿಕೆಯ ಅಸಾಮರ್ಥ್ಯ, ಸೋಂಕು ಮೊದಲಾದ ಕಾರಣಗಳಿಗೆ ನೀಡುವ ಚಿಕಿತ್ಸೆಗಳೂ ಭಿನ್ನವಾಗಿರುತ್ತವೆ.

ಹೆಚ್ಚಿನ ಸಂದರ್ಭಗಳಲ್ಲಿ ಈ ರಕ್ತಸ್ರಾವಕ್ಕೆ ಮೂಗಿನ ಒಳಗೆ ಬೆರಳು ಹಾಕಿ ಕೆರೆಯುವುದೇ ಕಾರಣವಾಗಿದ್ದು ಇದಕ್ಕೆ ಚಿಕಿತ್ಸೆಯನ್ನೂ ಸರಳ ವಿಧಾನದಲ್ಲಿ ನೀಡಬಹುದು. ಒಂದು ವೇಳೆ ಬೇರೆ ಕಾರಣವಿದ್ದರೆ ಈ ಕಾರಣವನ್ನು ಕಂಢುಹಿಡಿದು ಅಗತ್ಯ ಚಿಕಿತ್ಸೆಯನ್ನು ವೈದ್ಯರ ಮಾರ್ಗದರ್ಶನದಲ್ಲಿಯೇ ಪಡೆದುಕೊಳ್ಳಬೇಕು. ಈ ಲೇಖನದಲ್ಲಿ ವಿವರಿಸಿರುವ ಮಾಹಿತಿಗಳ ಬಗ್ಗೆ ಯಾವುದೇ ಅನುಮಾನ ಅಥವಾ ಸಲಹೆಗಳಿದ್ದಲ್ಲಿ ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ, ಇದನ್ನು ಪರಿಹರಿಸಲು ಖಂಡಿತಾ ಯತ್ನಿಸುತ್ತೇವೆ.

English summary

Nose Bleeds: Why Do We Get It And What Should We Do?

Nosebleeds are more common than you think. It happens to us suddenly. Without any obvious cause, bright red blood starts to stream from one nostril. And what's even worse? To majority of us who have had it at least once in our lifetime, nosebleeds or medically called epistaxes are often a mystery. However, there's good news. Although it seems scary while your nose is bleeding and you're not sure why it's happening, let us tell you that a nosebleed isn't usually dangerous. You just need proper information on why a nosebleed happens, how to treat it and ways to prevent it. In this article we're going to talk about all these aspects of nosebleeds. Read on to find out.
Story first published: Thursday, August 16, 2018, 16:06 [IST]
X
Desktop Bottom Promotion