For Quick Alerts
ALLOW NOTIFICATIONS  
For Daily Alerts

ಸೊಂಟದ ಕೊಬ್ಬನ್ನು ಕರಗಿಸಲು ಇಲ್ಲಿದೆ, ಅತ್ಯಂತ ಪರಿಣಾಮಕಾರಿ ಟಿಪ್ಸ್

By Arshad
|

ನಮ್ಮ ಸುತ್ತ ಮುತ್ತಲಿರುವ ಜನರಲ್ಲಿ ಹಲವರು ತಮ್ಮ ಸೊಂಟದ ಕೊಬ್ಬು ಇತರರಿಗೆ ಸುಲಭವಾಗಿ ಕಾಣಬಾರದು ಎಂದು ಸಡಿಲ ಬಟ್ಟೆಗಳನ್ನು ಧರಿಸುವುದು, ಸೊಂಟದ ಬೆಲ್ಟ್ ಬಿಗಿಗೊಳಿಸುವುದು ಅಥವಾ ಬೆನ್ನು ನೋವಾಗುವಷ್ಟು ನೆಟ್ಟಗೆ ಕುಳಿತುಕೊಳ್ಳುವುದು (ವಾಸ್ತವವಾಗಿ ಬೆನ್ನುಮೂಳೆ ನೆಟ್ಟಗಿರುವಂತೆ ಕುಳಿತುಕೊಳ್ಳುವುದು ಉತ್ತಮ ಅಭ್ಯಾಸವಾಗಿದ್ದರೂ ಅತಿಯಾಗಿಯೇ ಹೆಚ್ಚು ನೆಟ್ಟಗಾಗಿಸಿ ಕುಳಿತುಕೊಳ್ಳುವುದೂ ಆರೋಗ್ಯಕರವಲ್ಲ), ಒಟ್ಟಾರೆ ತಮ್ಮ ಸೊಂಟದ ಕೊಬ್ಬು ಇತರರಿಗೆ ಕಾಣದಿರುವಂತೆ ಎಲ್ಲಾ ಬಗೆಯ ಪ್ರಯತ್ನಗಳನ್ನು ನಡೆಸುತ್ತಾರೆ.

ಏಕೆಂದರೆ ಈ ಕೊಬ್ಬು ಕರಗಿಸುವುದು ಅಷ್ಟು ಸುಲಭವಲ್ಲ, ಕರಗಿಸಲು ಯತ್ನಿಸಿದ್ದಷ್ಟೂ ಇದು ಹೆಚ್ಚಾಗುವುದನ್ನು ಅವರು ಈಗಾಗಲೇ ಎದುರಿಸಿ ಸೋಲೊಪ್ಪಿಕೊಂಡು ಬಿಟ್ಟಿದ್ದಾರೆ. ವಾಸ್ತವವಾಗಿ ಸೊಂಟದ ಕೊಬ್ಬು ಕರಗಿಸುವುದು ಕಷ್ಟವೇ ಆಗಿದ್ದರೂ, ಅಸಾಧ್ಯವಲ್ಲ. ನಿಜವಾಗಿ, ಈ ಕೊಬ್ಬನ್ನು ಕರಗಿಸಲು ಯತ್ನಿಸುವವರು ಕೊಬ್ಬನ್ನು ಕರಗಿಸುವ ಪ್ರಯತ್ನಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆಯೇ ವಿನಃ ಇಂತಹ ಅಡಗಿಸುವಿಕೆಯಲ್ಲ! ಸಾಮಾನ್ಯವಾಗಿ ಈ ಪರಿಯಾಗಿ ಕೊಬ್ಬನ್ನು ಅಡಗಿಸುವ ಯತ್ನಗಳು ಅನಾರೋಗ್ಯಕರವೂ, ಸಮಾಜದಲ್ಲಿ ಮುಜುಗರವನ್ನು ಎದುರಿಸಬೇಕಾಗುವಂತಹದ್ದೂ ಆಗಿರುತ್ತವೆ.

lime juice

ಸೊಂಟದ ಕೊಬ್ಬು ಅನಾರೋಗ್ಯದ ಲಕ್ಷಣವಾಗಿದ್ದು ಕೊಬ್ಬು ಹೆಚ್ಚಿದಷ್ಟೂ ಅನಾರೋಗ್ಯವೂ ಹೆಚ್ಚು. ಸೊಂಟದ ಸುತ್ತಳತೆ ಹೆಚ್ಚಾದಷ್ಟೂ ಹಲವಾರು ಕಾಯಿಲೆಗಳು ಆವರಿಸುವ ಸಾಧ್ಯತೆಗಳೂ ಹೆಚ್ಚುವ ಕಾರಣ ಇದನ್ನು ಕಡಿಮೆಗೊಳಿಸಲು ಪ್ರಾಮಾಣಿಕ ಯತ್ನ ನಡೆಸಬೇಕಾಗುತ್ತದೆ. ಅಲಕ್ಷಿಸಿದರೆ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ನಿದ್ದೆ ಸರಿಯಾಗಿ ಬರದಿರುವುದು, ಮಧುಮೇಹ, ಖಿನ್ನತೆ, ನಂಪುಂಸಕತ್ವ ಹಾಗೂ ಮರೆಗುಳಿತನ ಮೊದಲಾದ ಕಾಯಿಲೆಗಳು ಆವರಿಸುವ ಸಾಧ್ಯತೆ ದಟ್ಟವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಗಳು ಜಗತ್ತಿನಾದ್ಯಂತ ಅತಿ ಹೆಚ್ಚು ಸಂಖ್ಯೆಯಲ್ಲಿ ಕಂಡುಬಂದಿದ್ದು ಇವುಗಳ ಹಿನ್ನೆಲೆಯನ್ನು ಕೆದಕಿದರೆ ಇವರಲ್ಲಿ ಗರಿಷ್ಠ ಪ್ರಮಾಣದವರು ಸ್ಥೂಲದೇಹವನ್ನು ಹೊಂದಿರುವುದು ಖಚಿತವಾಗಿದೆ. ಇಂದು ಜನರಿಗೆ ಅಂತರ್ಜಾಲದ ಮೂಲಕ ಅಪಾರವಾದ ಮಾಹಿತಿ ಲಭ್ಯವಿದ್ದು ಆರೋಗ್ಯದ ಕಾಳಜಿಯನ್ನು ಹೊಂದಿರುವ ಪ್ರತಿಯೊಬ್ಬರೂ ಕೊಬ್ಬನ್ನು ಕರಗಿಸಲು ಏನು ಮಾಡಬೇಕೆಂದು ಈ ಮಾಹಿತಿಗಳನ್ನು ಜಾಲಾಡುತ್ತಲೇ ಇರುತ್ತಾರೆ. ಉಳ್ಳವರು ವೃತ್ತಿಪರರ ಹಾಗೂ ತಜ್ಞರ ಸಲಹೆಯನ್ನು ಮತ್ತು ತೂಕ ಇಳಿಸಲು ಲಭ್ಯವಿರುವ ಕಾರ್ಯಕ್ರಮಗಳಲ್ಲಿ ದಾಖಲಾತಿ ಪಡೆದುಕೊಳ್ಳುತ್ತಾರೆ.

ಕ್ಯಾಲೋರಿ ಕಡಿಮೆ ಇರುವ ಹಾಗೂ ಕೊಬ್ಬನ್ನು ಕರಗಿಸುವ ಆಹಾರಗಳನ್ನು ಸೇವಿಸುವ ಮೂಲಕ ಸೊಂಟದ ಸುತ್ತಳತೆ ಕಡಿಮೆಗೊಳಿಸಲು ಯತ್ನಿಸುತ್ತಾರೆ. ಆದರೆ ಇದಕ್ಕೂ ಸುಲಭವಾದ ಹಾಗೂ ಅತಿ ಪರಿಣಾಮಕಾರಿಯಾದ ಇನ್ನೊಂದು ವಿಧಾನವಿದೆ. ಅದೆಂದರೆ ಮುಂಜಾನೆ ಪ್ರಥಮ ಆಹಾರವಾಗಿ ಉಗುರುಬೆಚ್ಚನೆಯ ನೀರಿನಲ್ಲಿ ಲಿಂಬೆರಸವನ್ನು ಬೆರೆಸಿ ಕುಡಿಯುವುದು.

ಯಾವುದೇ ಬಗೆಯ ಕೊಬ್ಬನ್ನು ಕರಗಿಸಲು ಈ ವಿಧಾನ ಅತ್ಯಂತ ಸೂಕ್ತವಾದ ಮನೆಮದ್ದಾಗಿದೆ. ಲಿಂಬೆಯ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ವಿಟಮಿನ್ ಸಿ ಸಮೃದ್ದವಾಗಿರುವ ಲಿಂಬೆರಸದ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವ ಜೊತೆಗೇ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಹಾಗೂ ಯಕೃತ್ ನ ಕಾರ್ಯಕ್ಷಮತೆಯನ್ನೂ ಹೆಚ್ಚಿಸುತ್ತದೆ.

ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಸೊಂಟದ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಈ ಭಾಗದಲ್ಲಿ ಕೊಬ್ಬು ಮೊದಲಾಗಿ ಸಂಗ್ರಹಗೊಳ್ಳಲು ಪ್ರಾರಂಭವಾಗಿ ಅತ್ಯಂತ ಕಡೆಯದಾಗಿ ಕರಗುತ್ತದೆ. ಇದಕ್ಕಾಗಿ ನಮ್ಮ ಜೀರ್ಣಶಕ್ತಿ ಹಾಗೂ ಯಕೃತ್ ಅತಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಜೀರ್ಣಶಕ್ತಿ ಅಥವಾ ಜೀವರಾಸಾಯನಿಕ ಕ್ರಿಯೆ ಕುಂಠಿತಗೊಂಡರೆ ಕೊಬ್ಬು ಕರಗಲು ಬಹಳ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗೂ ಆಹಾರದ ಪೋಷಕಾಂಶಗಳನ್ನು ಹೀರಿಕೊಳ್ಳುವ ಮತ್ತು ಇವನ್ನು ಬಳಸಿಕೊಳ್ಳಲು ಕೊಬ್ಬನ್ನು ಬಳಸಿಕೊಳ್ಳುವ ಕ್ಷಮತೆಯೂ ಕುಗ್ಗುತ್ತದೆ.

ಲಿಂಬೆ ವಾಸ್ತವವಾಗಿ ಸಿಟ್ರಸ್ ಜಾತಿಯ ಫಲವಾಗಿದೆ ಅಂದರೆ ಇದರ ರಸದಲ್ಲಿ ಪ್ರಮುಖವಾಗಿ ಸಿಟ್ರಿಕ್ ಆಮ್ಲವಿದೆ. ಈ ಫಲಗಳಲ್ಲಿ ಹೆಚ್ಚಿನ ಕರಗುವ ನಾರು, ಕಡಿಮೆ ಸೋಡಿಯಂ ಮತ್ತು ಕೊಲೆಸ್ಟ್ರಾಲ್ ಹಾಗೂ ಕೊಬ್ಬು ಇರುವ ಕಾರಣ ತೂಕ ಇಳಿಸಲು ನೆರವಾಗುತ್ತವೆ. ಲಿಂಬೆ, ವಿಶೇಷವಾಗಿ ಎಲ್ಲ ಸಿಟ್ರಸ್ ಫಲಗಳಲ್ಲಿಯೇ ಹೆಚ್ಚು ಪ್ರಬಲವಾಗಿದ್ದು ಇದರಲ್ಲಿ ಪೆಕ್ಟಿನ್ ಎಂಬ ಕರಗುವ ನಾರು, ವಿಟಮಿನ್ ಸಿ, ಸಿಟ್ರಿಕ್ ಆಮ್ಲ ಸಹಿತ ಇನ್ನೂ ಹಲವಾರು ಪೋಷಕಾಂಶಗಳಿವೆ.

ಇವುಗಳನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗಗಳಿಗೆ ಹೆಚ್ಚೇ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಇದೇ ತೂಕ ಇಳಿಕೆಯ ರಹಸ್ಸ! ಜೊತೆಗೇ ದೇಹದಿಂದ ಕಲ್ಮಶಗಳನ್ನು ನಿವಾರಿಸಲು, ಶಕ್ತಿಯನ್ನು ಒದಗಿಸಲು ಹಾಗೂ ರಸದೂತಗಳ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಆ ಪ್ರಕಾರ ಲಿಂಬೆ ಒಂದೇ ತೂಕ ಇಳಿಸಲು ಹಾಗೂ ಆರೋಗ್ಯವನ್ನು ಕಾಪಾಡಲು ಸಾಕು.

lime juice

ಅಷ್ಟಕ್ಕೂ, ಖಾಲಿಹೊಟ್ಟೆಯಲ್ಲಿ ಲಿಂಬೆರಸವನ್ನೇಕೆ ಕುಡಿಯಬೇಕು?

ಈ ಮೊದಲು ವಿವರಿಸಿದಂತೆ, ಲಿಂಬೆಯ ಸೇವನೆಯಿಂದ ಜೀರ್ಣಕ್ರಿಯೆ ಹಾಗೂ ಒಟ್ಟಾರೆ ಆರೋಗ್ಯವನ್ನು ಲಿಂಬೆರಸ ಹೇಗೆ ಉತ್ತಮಗೊಳಿಸುತ್ತದೆ ಎಂದು ಈಗಾಗಲೇ ತಿಳಿದುಕೊಂಡಿದ್ದೇವೆ. ಲಿಂಬೆರಸ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ, ಯಕೃತ್ ನ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಸೊಂಟದ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಬೆಳಗ್ಗಿನ ಸಮಯದಲ್ಲಿ, ಅಂದರೆ ರಾತ್ರಿಯಿಡೀ ಯಾವುದೇ ಆಹಾರ ಹೊಟ್ಟೆಗೆ ಸೇರದೇ ಹಲವಾರು ಅನೈಚ್ಛಿಕ ಕಾರ್ಯಗಳು ನಡೆದಿರುತ್ತವೆ ಹಾಗೂ ಕಲ್ಮಶಗಳು ವಿಸರ್ಜಿಸಲು ಸಂಗ್ರಹಗೊಂಡಿರುತ್ತದೆ.

ಈ ಸಮಯದಲ್ಲಿ ಲಿಂಬೆರಸ ಬೆರೆಸಿದ ಉಗುರುಬೆಚ್ಚನೆಯ (ಅಥವಾ ಕೊಂಚ ಶುಂಠಿರಸ ಅಥವಾ ಜೇನನ್ನು ಬೆರೆಸಿ ಇನ್ನಷ್ಟು ರುಚಿಕರವಾಗಿಸಿದ ) ನೀರನ್ನು ಕುಡಿಯುವ ಮೂಲಕ ದೇಹದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ತನ್ಮೂಲಕ ಯಕೃತ್ ನ ಮೇಲಿರುವ ದೊಡ್ಡ ಹೊರೆಯನ್ನು ಸಾಕಷ್ಟು ಕಡಿಮೆ ಮಾಡಿದಂತಾಗುತ್ತದೆ. ತೂಕ ಇಳಿಕೆಗೆ ಇದು ಮುಖ್ಯ ಅಂಶವಾಗಿದೆ.

ಅಲ್ಲದೇ ಈ ನೀರು ಉಗುರುಬೆಚ್ಚಗಿರುವ ಮೂಲಕ ಕಲ್ಮಶಗಳನ್ನು ನಿವಾರಿಸುವ ಕೆಲಸಕ್ಕೆ ಹೆಚ್ಚಿನ ಚುರುಕು ದೊರಕುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ, ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ಜೀರ್ಣರಸಗಳ ಆಮ್ಲೀಯ-ಕ್ಷಾರೀಯ ಮಟ್ಟ ಅಥವಾ ಪಿ ಎಚ್ ಮಟ್ಟವನ್ನು ಸಂತುಲಿತ ಮಟ್ಟದಲ್ಲಿರಿಸಲು ಹಾಗೂ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.

ಉಗುರುಬೆಚ್ಚನೆಯ ನೀರಿನಲ್ಲಿ ಲಿಂಬೆರಸ ಬೆರೆಸಿ ಕುಡಿಯುವ ಮೂಲಕ ಜೀವರಾಸಾಯನಿಕ ಕ್ರಿಯೆ ಇನ್ನಷ್ಟು ಚುರುಕುಗೊಳ್ಳುತ್ತದೆ ಹಾಗೂ ಲಿಂಬೆರಸದಲ್ಲಿರುವ ಪೆಕ್ಟಿನ್ ಹಸಿವಿನ ಬಯಕೆಗಳನ್ನು ಅದುಮಿಡುತ್ತದೆ. ತನ್ಮೂಲಕ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ ಹಾಗೂ ಹೊಟ್ಟೆಯ ಗಾತ್ರವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಲಿಂಬೆರಸವನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಪ್ರಮಾಣದ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ಸೊಂಟದ ಕೊಬ್ಬು ಅನಿವಾರ್ಯವಾಗಿ ಕರಗಲೇಬೇಕಾಗುತ್ತದೆ.

ಒಂದು ವೇಳೆ ಸೊಂಟದ ಕೊಬ್ಬನ್ನು ಕರಗಿಸುವುದು ನಿಮ್ಮ ಪ್ರಾಮಾಣಿಕ ಪ್ರಯತ್ನವಾಗಿದ್ದರೆ ಬೆಳಗ್ಗಿನ ಪ್ರಥಮ ಆಹಾರವಾಗಿ ಲಿಂಬೆರಸವನ್ನು ಸೇವಿಸುವುದರ ಮೂಲಕ ಹೆಚ್ಚಿನ ಪ್ರಗತಿಯನ್ನು ಗಮನಿಸಬಹುದು.

lime juice

ಕೆಲವು ಅಗತ್ಯ ಮಾಹಿತಿಗಳು

* ಸೊಂಟದ ಕೊಬ್ಬು ಕರಗಲು ಪ್ರಾರಂಭವಾಗಲು ದೇಹದ ಇತರ ಭಾಗದಲ್ಲಿರುವ ಕೊಬ್ಬು ಕರಗಬೇಕು. ಇದು ಸಾಧ್ಯವಾಗಲು ಸುಮಾರು ಎಂಭತ್ತು ದಿನಗಳೇ ಬೇಕು. ಆದ್ದರಿಂದ ಇಂದಿನಿಂದಲೇ ಲಿಂಬೆರಸದ ಸೇವನೆ ಪ್ರಾರಂಭಿಸಿದರೂ, ಒಂದು ದಿನವೂ ತಪ್ಪದೇ ಮುಂದುವರೆಸಿದರೆ ಇದರ ಪರಿಣಾಮವನ್ನು ಕಂಡುಕೊಳ್ಳಲು ಎಂಭತ್ತು ದಿನ ಕಾಯಬೇಕಾಗುತ್ತದೆ. ಸುಮಾರು ತೊಂಭತ್ತು ದಿನಗಳ ಬಳಿಕವೇ ಹೊಟ್ಟೆ ಇಳಿಯಲು ಪ್ರಾರಂಭವಾಗುತ್ತದೆ. ಆದರೆ ನಡುವೆ ಒಂದು ದಿನ ಸೇವಿಸದೇ ಬಿಟ್ಟರೂ, ಅದರ ಮರುದಿನದ ಸೇವನೆ ಮೊದಲ ದಿನವಾಗುತ್ತದೆ. ಹಾಗಾಗಿ ಸತತ ಪ್ರಯತ್ನ ಅಗತ್ಯ.

* ಎಷ್ಟು ಲಿಂಬೆರಸ ಸೇವಿಸಬೇಕು? ಸುಮಾರು ಎಪ್ಪತ್ತೈದು ಕೇಜಿ ತೂಕದ ವ್ಯಕ್ತಿಗಳಿಗೆ ದಿನಕ್ಕೆ ಒಂದು ಮಧ್ಯಮ ಗಾತ್ರದ ಲಿಂಬೆ ಸಾಕು. ದೊಡ್ಡದಾದರೆ ಅರ್ಧ ಸಾಕು.

ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

English summary

Here's One Of The Most Effective Ways To Lose Belly Fat

Lemons, in particular, are full of pectin fibre, magnesium, vitamin C, citric acid and so on, which helps in burning fat, removing the toxins from the body, energising yourself as well as improving hormonal balance. Therefore, lemon alone is an amazing source of reducing weight and burning belly fat.
Story first published: Monday, April 2, 2018, 10:39 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more