For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ ತಿಂಗಳ ಆ ರಜಾ ದಿನಗಳಲ್ಲಿ ಈ ಆಹಾರಗಳಿಗೂ ರಜಾ ನೀಡಿ!

By Arshad
|

ಈ ಜಗತ್ತಿಯ ಪ್ರತಿಯೊಬ್ಬ ವಯಸ್ಸಿಗೆ ಬಂದ ಮಹಿಳೆಯೂ ಕಡ್ಡಾಯವಾಗಿ ಅನುಭವಿಸಬೇಕಾದ ಮಾಸಿಕ ದಿನಗಳಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಜರ್ಝರಿತರಾಗಬೇಕಾಗುತ್ತದೆ. ಪ್ರತಿತಿಂಗಳೂ ಅನಿವಾರ್ಯವಾದ ಈ ಬವಣೆ ಪ್ರತಿ ಮಹಿಳೆಗೂ ಕೊಂಚ ಭಿನ್ನವಾಗಿದ್ದು ಹೆಚ್ಚಿನವರಿಗೆ ನಿದ್ದೆಯಿಲ್ಲದ ರಾತ್ರಿ, ಸಕ್ಕರೆ ತಿನ್ನುವ ಬಯಕೆ ಮೊದಲಾದ ಹತ್ತು ಹಲವು ಅನುಭವಗಳಾಗುತ್ತವೆ.

ಕೆಳಹೊಟ್ಟೆಯಲ್ಲಿ ತೀವ್ರತರನೆಯ ನೋವು, ಹೊಟ್ಟೆಯುಬ್ಬರಿಕೆಯಿಂದ ಎದುರಾಗುವ ಅಹಿತಕರ ಭಾವನೆ, ಮನೋಭಾವ ಬದಲಾಗುವುದು, ಸಿಡುಕುತನ ಮೊದಲಾದವು ಈ ದಿನಗಳಲ್ಲಿ ಸಾಮಾನ್ಯ. ಇವುಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಅಸಾಧ್ಯವಾದರೂ ಈ ಸಮಯದಲ್ಲಿ ಕೆಲವು ಪೌಷ್ಟಿಕ ಹಾಗೂ ಸೂಕ್ತ ಆಹಾರಗಳನ್ನು ಸೇವಿಸುವ ಮೂಲಕ ಇದರ ಪ್ರಭಾವವನ್ನು ಕನಿಷ್ಟವಾಗಿಸಬಹುದು. ಇಷ್ಟ ಅಥವಾ ಆಕರ್ಷಕ ಎಂದು ತಿನ್ನುವ ಪಿಜ್ಜಾ, ಕಪ್ ಕೇಕ್ ಮೊದಲಾದವು ನಿಮ್ಮ ಮಾಸಿಕ ದಿನಗಳ ಬವಣೆಯ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ. ಏಕೆಂದರೆ ಮಾಸಿಕ ದಿನಗಳಲ್ಲಿ ದೇಹ ಕಳೆದುಕೊಳ್ಳುವ ರಕ್ತವನ್ನು ಈ ಆಹಾರಗಳು ಮರುಪೂರೈಸಲಾರವು.

ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ಆದ್ದರಿಂದ ಈ ಸಮಯದಲ್ಲಿ ತಪ್ಪಾದ ಆಹಾರ ಸೇವನೆಯಿಂದ ಸ್ನಾಯುಗಳ ಸೆಡೆತ, ಅಹಿತಕರವಾದ ಹೊಟ್ಟೆಯುಬ್ಬರಿಕೆ, ತಲೆನೋವು, ತಡೆತಡೆದು ಎದುರಾಗುವ ಅಜೀರ್ಣತೆ ಮೊದಲಾದವು ಸಾಮಾನ್ಯವಾಗಿ ಎದುರಾಗುತ್ತವೆ. ಈ ತೊಂದರೆಗಳು ನೇರವಾಗಿ ಎಷ್ಟು ತೊಂದರೆ ನೀಡುತ್ತದೆಯೋ, ಅದಕ್ಕಿಂತ ಹೆಚ್ಚಾಗಿ ಭಾವನಾತ್ಮಕವಾಗಿ ಪೀಡಿಸುತ್ತವೆ. ಆದ್ದರಿಂದ ಮಾಸಿಕ ದಿನಗಳಲ್ಲಿ ಕೆಲವು ಆಹಾರಗಳನ್ನು ವರ್ಜಿಸುವುದೇ ಸೂಕ್ತ. ಈ ನಿಟ್ಟಿನಲ್ಲಿ ನೀವು ಸೇವಿಸಲೇಬಾರದ ಹತ್ತು ಪ್ರಮುಖ ಆಹಾರಗಳನ್ನು ಪಟ್ಟಿ ಮಾಡಲಾಗಿದ್ದು ಈ ಆಹಾರಗಳನ್ನು ಸೇವಿಸದೇ ಇರುವ ಮೂಲಕ ದೇಹ ಶೀಘ್ರವೇ ಸಾಮಾನ್ಯ ಸ್ಥಿತಿಗೆ ಮರಳಲು ನೆರವಾಗುತ್ತದೆ...

ಸಂಸ್ಕರಿಸಿದ ಸಿದ್ಧ ಆಹಾರಗಳು

ಸಂಸ್ಕರಿಸಿದ ಸಿದ್ಧ ಆಹಾರಗಳು

ಮಾಸಿಕ ದಿನಗಳಲ್ಲಿ ಗರ್ಭಾಶಯ ಹಾಗೂ ಇತರ ಪ್ರಮುಖ ಅಂಗಗಳು ಮುಖ್ಯ ಬದಲಾವಣೆಗೆ ಒಳಗಾಗುತ್ತಿರುವ ಕಾರಣ ಈ ಭಾಗದಲ್ಲಿ ಹೆಚ್ಚಿನ ನೀರಿನ ಅಗತ್ಯ ಬೀಳುತ್ತದೆ. ತನ್ಮೂಲಕ ಹೊಟ್ಟೆಯ ಕೆಳಭಾಗದಲ್ಲಿ ನೀರು ತುಂಬಿಕೊಂಡಂತಹ ಅನುಭವವಾಗುತ್ತದೆ. ಈ ಸಮಯದಲ್ಲಿ ಸಂಸ್ಕರಿಸಿದ ಅಹಾರ ಸೇವಿಸಿದರೆ ಈ ಹೊಟ್ಟೆಯುಬ್ಬರಿಕೆ ಅಪಾರವಾಗಿ ಹೆಚ್ಚುತ್ತದೆ. ಈ ಆಹಾರಗಳಲ್ಲಿರುವ ಸಂರಕ್ಷಕ, ಹೆಚ್ಚಿನ ಕೊಬ್ಬು ಇರುವ ಎಣ್ಣೆಜಿಡ್ಡು ಹಾಗೂ ಮುಖ್ಯವಾಗಿ ಸಿಹಿಕಾರಕವಾಗಿ ಸೇರಿಸಿರುವ ಸಕ್ಕರೆ ಮತ್ತು ಸ್ಯಾಕರೀನ್ ಹೊಟ್ಟೆಯಲ್ಲಿ ಇನ್ನಷ್ಟು ನೀರು ತುಂಬಿಕೊಳ್ಳಲು ಕಾರಣವಾಗುತ್ತವೆ. ಅಲ್ಲದೇ ಈ ಸಿಹಿ ಇನ್ನಷ್ಟು ಸಿಹಿ ಪದಾರ್ಥಗಳನ್ನು ತಿನ್ನಲು ಪ್ರಚೋದಿಸುತ್ತದೆ.

ಕೆಂಪು ಮಾಂಸ

ಕೆಂಪು ಮಾಂಸ

ಕೆಂಪು ಮಾಂಸದ ಖಾದ್ಯಗಳಲ್ಲಿ ಸಂತೃಪ್ತ ಕೊಬ್ಬುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಮಾಸಿಕ ದಿನಗಳಲ್ಲಿ ಈ ಕೊಬ್ಬುಗಳು ಆರೋಗ್ಯಕ್ಕೆ ಅತಿಯಾಗಿ ಮಾರಕವಾಗಿರುವ ಕಾರಣ ಈ ದಿನಗಳಲ್ಲಿ ಕೆಂಪು ಮಾಂಸ ಬೇಡವೇ ಬೇಡ. ಇವುಗಳ ಸೇವನೆಯಿಂದ ಹೊಟ್ಟೆಯ ಸೆಡೆತ ಇನ್ನಷ್ಟು ಹೆಚ್ಚುತ್ತದೆ ಹಾಗೂ ನೋವು ಅಪಾರವಾಗಿ ಉಲ್ಬಣಿಸುತ್ತದೆ. ಒಂದು ವೇಳೆ ನಿಮಗೆ ಮಾಂಸಾಹಾರ ಸೇವನೆಯ ಬಯಕೆ ಅತಿಯಾಗಿದ್ದರೆ ಕೆಂಪು ಮಾಂಸದ ಬದಲು ಕಡಿಮೆ ಕೊಬ್ಬಿನ ಬಿಳಿ ಮಾಂಸ, ಉದಾಹರಣೆಗೆ ಕೋಳಿ ಮಾಂಸದ ಎದೆಯ ಭಾಗ, ಎಣ್ಣೆಯುಕ್ತ ಮೀನು, ಸಿಗಡಿ ಮೊದಲಾದವುಗಳನ್ನು ಸೇವಿಸಬಹುದು.

ಮದ್ಯ

ಮದ್ಯ

ಯಾವುದೇ ಸಮಯದಲ್ಲಿ ಮದ್ಯ ಸೇವನೆ ಆರೋಗ್ಯಕ್ಕೆ ಮಾರಕವೇ ಹೌದು. ಆದರೆ ಮಾಸಿಕ ದಿನಗಳಲ್ಲಿ ಇದು ನೇರವಾಗಿ ವಿಷಕ್ಕೆ ಸಮಾನವಾಗಿರುತ್ತದೆ. ನಿತ್ಯದ ಅಭ್ಯಾಸದಂತೆ ಒಂದು ಅಥವಾ ಎರಡು ಪ್ರಮಾಣಗಳ ಸೇವನೆಯಿಂದ ಏನೂ ತೊಂದರೆಯಿಲ್ಲ ಎಂದು ತಮಗೆ ತಾವೇ ಸಮಾಧಾನ ಪಟ್ಟುಕೊಂಡು ಸೇವಿಸಿದರೆ ಇದು ನಿಮಗೆ ನೀವೇ ವಿಧಿಸುವ ಘೋರವಾದ ಶಿಕ್ಷೆಯಾಗಿದೆ. ಏಕೆಂದರೆ ಮಾಸಿಕ ದಿನಗಳಲ್ಲಿ ದೇಹಕ್ಕೆ ಸೇರುವ ಮದ್ಯ ಎಷ್ಟೇ ಚಿಕ್ಕ ಪ್ರಮಾಣದಲ್ಲಿದ್ದರೂ ಸರಿ, ಇದು ನಿಮ್ಮ ಮಾಸಿಕ ದಿನಗಳ ಬವಣೆಯನ್ನು ಹೆಚ್ಚಿಸುತ್ತದೆ.

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು

ಈ ಮಾಹಿತಿ ನಿಮ್ಮನ್ನು ಅಚ್ಚರಿಗೊಳಿಸಬಹುದು. ಏಕೆಂದರೆ ನೀವು ಇದುವರೆಗೆ ಸುರಕ್ಷಿತ ಎಂದುಕೊಂಡಿದ್ದ ಹಾಲು, ಕ್ರೀಮ್, ಚೀಸ್ ಮೊದಲಾದವುಗಳನ್ನೂ ಮಾಸಿಕ ರಜಾದಿನಗಳಲ್ಲಿ ಸೇವಿಸದಿರುವುದೇ ಉತ್ತಮ. ಏಕೆಂದರೆ ಇವುಗಳಲ್ಲಿರುವ ಅರಾಖೈಡಾನಿಕ್ ಆಮ್ಲ (arachidonic acid) ಎಂಬ ಪೋಷಕಾಂಶ ಮಾಸಿಕ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ಸೆಳೆತಕ್ಕೆ ಪ್ರಚೋದನೆ ನೀಡಬಹುದು. ಆದರೆ ಈ ಉತ್ಪನ್ನಗಳ ಬದಲು ಮಜ್ಜಿಗೆಯನ್ನು ಸೇವಿಸಿದರೆ ಹೊಟ್ಟೆಯ ಉರಿಯನ್ನು ತಣಿಸಲು ಸಾಧ್ಯವಾಗುತ್ತದೆ.

ಕೆಫೀನ್

ಕೆಫೀನ್

ಕೆಫೀನ್ ಪ್ರಮಾಣ ಹೆಚ್ಚಾಗಿರುವ ಕಾಫಿ, ಬುರುಗು ಪಾನೀಯ, ಮೊದಲಾದ ಆಹಾರಗಳನ್ನು ಈ ಅವಧಿಯಲ್ಲಿ ಸೇವಿಸದಿರುವುದು ಒಳಿತು. ಕೆಫೀನ್ ನಿಂದ ರಕ್ತದೊತ್ತಡ ಹೆಚ್ಚುತ್ತದೆ ಹಾಗೂ ಇದು ಉದ್ವೇಗ, ನಿರ್ಜಲೀಕರಣ, ನಿದ್ದೆಯ ಸಮಯದಲ್ಲಿ ಏರುಪೇರು ಮೊದಲಾದವುಗಳಿಗೆ ಕಾರಣವಾಗಬಹುದು. ಇದರ ಬದಲಿಗೆ ಗಿಡಮೂಲಿಕೆಗಳ ಟೀ ಕುಡಿಯಬಹುದು.

ಕೊಬ್ಬಿರುವ ಆಹಾರಗಳು

ಕೊಬ್ಬಿರುವ ಆಹಾರಗಳು

ಅತಿ ಹೆಚ್ಚಿನ ಕೊಬ್ಬು ಇರುವ ಬರ್ಗರ್, ಚಿಪ್ಸ್, ಹುರಿದ ಆಲುಗಡ್ಡೆ ಮೊದಲಾದವುಗಳನ್ನು ಈ ಸಮಯದಲ್ಲಿ ಸೇವಿಸಿದರೆ ಇವುಗಳಲ್ಲಿರುವ ಕೆಲವು ರಾಸಾಯನಿಕಗಳು ನಿಮ್ಮ ದೇಹದ ರಸದೂತಗಳ ಮೇಲೆ ತಮ್ಮ ಪ್ರಭಾವ ಬೀರಿ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗಿ ಬರಬಹುದು. ಕೆಳಹೊಟ್ಟೆಯಲ್ಲಿ ಅಪಾರವಾದ ನೋವು, ಹೊಟ್ಟೆಯೊಳಗೆ ವಾಯುತುಂಬಿಕೊಂಡು ಆಗುವ ಗುಡುಗುಡು ಮೊದಲಾದವು ಎದುರಾಗಬಹುದು. ರಸದೂತಗಳ ಏರುಪೇರಿನಿಂದ ದೇಹದ ಮೇಲೆ ಯಾವ ಬಗೆಯ ಪ್ರತಿಕೂಲ ಪರಿಣಾಮಗಳು ಎದುರಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇದರೊಂದಿಗೆ ನಿರ್ಜಲೀಕರಣ, ಆರ್ದ್ರತೆಯ ಕೊರತೆಯಿಂದ ಮೈಯೆಲ್ಲಾ ಒಣಗುವುದು ಮೊದಲಾದ ತೊಂದರೆಗಳು ಸ್ಪಷ್ಟವಾಗಿ ಗೋಚರಿಸತೊಡಗುತ್ತವೆ. ಇದು ಬಂದ ಬಳಿಕ ಮೈ ತುರಿಸಿಕೊಳ್ಳುತ್ತಾ ಹಳಿಯುವ ಬದಲು ಆಕರ್ಷಕ ಬರ್ಗರ್ ಸೇವನೆಯನ್ನು ಮುಂದಿನ ವಾರಕ್ಕೆ ಮುಂದೂಡುವುದೇ ಸರಿಯಾದ ಮಾರ್ಗ.

ಸಂಸ್ಕರಿಸಿದ ಧಾನ್ಯಗಳು:

ಸಂಸ್ಕರಿಸಿದ ಧಾನ್ಯಗಳು:

ಧಾನ್ಯಗಳನ್ನು ಸಂಸ್ಕರಿಸಿ ತಯಾರಿಸಲಾದ ಬ್ರೆಡ್, ಪಿಜ್ಜಾ, ಸಿದ್ಧ ರೂಪದ ಉಪಾಹಾರ ಪದಾರ್ಥಗಳು, ಟೋರ್ಟಿಲ್ಲಾ ಮೊದಲಾದವುಗಳನ್ನೂ ಈ ದಿನಗಳಲ್ಲಿ ಸೇವಿಸಬಾರದು. ಇದರಿಂದ ಮಲಬದ್ದತೆ ಹಾಗೂ ಹೊಟ್ಟೆಯುಬ್ಬರಿಕೆ ಎದುರಾಗಬಹುದು. ಇದರ ಬದಲಿಗೆ ಪೂರ್ಣಧಾನ್ಯಗಳಿಂದ ತಯಾರಿಸಿದ ಆಹಾರಗಳನ್ನು ಸೇವಿಸಬಹುದು. ಇವುಗಳ ಜಿ ಐ ಕೋಷ್ಟಕ (ಅಂದರೆ ಆಹಾರ ಜೀರ್ಣಗೊಳ್ಳಲು ಪಡೆಯುವ ಹೊತ್ತು) ಕಡಿಮೆ ಇರುವುದರಿಂದ (ಅಂದರೆ ಹೆಚ್ಚು ಹೊತ್ತು ತೆಗೆದುಕೊಳ್ಳುವುದರಿಂದ) ನಿಮ್ಮ ಜೀರ್ಣಾಂಗಗಳಿಗೆ ಸಾಕಷ್ಟು ಸಮಯ ಸಿಗುತ್ತದೆ ಹಾಗೂ ಹೆಚ್ಚು ಹೊತ್ತು ಹಸಿವಾಗದೇ ಇರುವ ಮೂಲಕ ಮಾಸಿಕ ದಿನಗಳಲ್ಲಿ ಅಗತ್ಯವಿರುವ ಹೆಚ್ಚಿನ ಪ್ರಮಾಣದ ರಕ್ತವನ್ನು ಒದಗಿಸಲು ಸಾಧ್ಯವಾಗುತ್ತದೆ.

ಉಪ್ಪುಭರಿತ ಆಹಾರಗಳು:

ಉಪ್ಪುಭರಿತ ಆಹಾರಗಳು:

ಕ್ಯಾನುಗಳಲ್ಲಿ ಬರುವ ಸಿದ್ದರೂಪದ ಸೂಪ್, ಬೇಕನ್, ಚಿಪ್ಸ್ ಮೊದಲಾದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಇರುತ್ತದೆ. ಈ ಆಹಾರಗಳನ್ನೂ ಮಾಸಿಕ ದಿನಗಳಲ್ಲಿ ವರ್ಜಿಸಬೇಕು. ಮಾಸಿಕ ದಿನಗಳಲ್ಲಿ ಗರ್ಭಾಶಯಕ್ಕೆ ಅಗತ್ಯವಿರುವ ಹೆಚ್ಚಿನ ನೀರನ್ನು ಉಳಿಸಿಕೊಳ್ಳಲು ಈ ಸಮಯದಲ್ಲಿ ಸ್ರವಿಸುವ ಕೆಲವು ರಸದೂತಗಳು ಈಗಾಗಲೇ ತಮ್ಮ ಕಾರ್ಯ ಆರಂಭಿಸಿರುತ್ತವೆ. ಈ ಸಮಯದಲ್ಲಿ ಇನ್ನೂ ಹೆಚ್ಚಿನ ಉಪ್ಪು ಹೊಟ್ಟೆ ಸೇರಿದರೆ ಇದು ಹೊಟ್ಟೆಯುಬ್ಬರಿಕೆ ಹಾಗೂ ಉಪ್ಪನ್ನು ವರ್ಜಿಸಲು ಕಷ್ಟಪಟ್ಟು ಉಳಿಸಿರುವ ನೀರನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಇದು ಮಾಸಿಕ ದಿನಗಳಲ್ಲಿ ನಡೆಯುವ ಕಾರ್ಯಗಳಿಗೆ ಬಾಧೆಯುಂಟು ಮಾಡುತ್ತದೆ. ಆದ್ದರಿಂದ ಈ ಸಮಯದಲ್ಲಿ ಉಪ್ಪನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ಮುಟ್ಟಿನ ನೋವನ್ನು ತಡೆಯಲು ಪರಿಣಾಮಕಾರಿ ಸಲಹೆಗಳು

ಸಿಹಿಪದಾರ್ಥಗಳು

ಸಿಹಿಪದಾರ್ಥಗಳು

ಮಾಸಿಕ ದಿನಗಳಲ್ಲಿ ರಸದೂತಗಳ ಸ್ರಾವದಿಂದ ಎದುರಾಗುವ ಬದಲಾವಣೆಯಿಂದಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣವೂ ಏರುಪೇರಾಗುತ್ತಾ ಇರುತ್ತದೆ. ಒಂದು ಹಂತದಲ್ಲಿ ಇದೊಂದು ತಾತ್ಕಾಲಿಕ ಮಧುಮೇಹವಾಗಿಯೂ ಮಾರ್ಪಾಡಾಗುತ್ತದೆ (ಇದಕ್ಕೆ gestational diabetes ಎಂದು ಕರೆಯುತ್ತಾರೆ). ಈ ಸಮಯದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುವ ಸಿಹಿಪದಾರ್ಥಗಳನ್ನು ಸೇವಿಸಿದರೆ ಇದು ಇನ್ನಷ್ಟು ರಕ್ತದಲ್ಲಿ ಸಕ್ಕರೆಯ ಏರುಪೇರಿಗೆ ಕಾರಣವಾಗುತ್ತದೆ ಹಾಗೂ ಪರಿಣಾಮವಾಗಿ ಮಾನಸಿಕ ಒತ್ತಡ ಹಾಗೂ ಮನೋಭಾವದಲ್ಲಿ ತೀವ್ರತರನೆಯ ಬದಲಾವಣೆ ಕಾಣುತ್ತದೆ. ಕ್ಷುಲ್ಲುಕ ವಿಷಯಗಳಿಗೆಲ್ಲಾ ಸಿಡುಕುತನ ತೋರುವುದು ಇದೇ ಕಾರಣಕ್ಕೆ! ಆದ್ದರಿಂದ ಈ ಸಮಯದಲ್ಲಿ ಸಕ್ಕರೆ ತಿನ್ನುವ ಬಯಕೆಯಾದರೆ ಇದರಲ್ಲಿ ಹೆಚ್ಚಿನ ನಾರು ಇರುವ ಹಣ್ಣುಗಳ ಸಾಲಾಡ್ ಮೇಲೆ ಕಡಿಮೆ ಕೊಬ್ಬಿನ ಮೊಸರು ಸುರುವಿಕೊಂಡು ಸೇವಿಸಿದರೆ ಸಾಕು.

ಮಸಾಲೆಯುಕ್ತ ಆಹಾರಗಳು

ಮಸಾಲೆಯುಕ್ತ ಆಹಾರಗಳು

ಮಾಸಿಕ ದಿನಗಳಲ್ಲಿ ಮಸಾಲೆಯುಕ್ತ ಆಹಾರಗಳನ್ನು ಸೇವಿಸುವುದರಿಂದ ಅತಿಶೀಘ್ರವಾಗಿ ಏರುವ ಉಷ್ಣಜ್ವರ (feverish heat ಅಥವಾ hot flash) ಎದುರಾಗಬಹುದು. ಅಲ್ಲದೇ ಮುಂದಿನ ತಿಂಗಳ ಮುಟ್ಟನ್ನೂ ಮುಂದೂಡಬಹುದು ಹಾಗೂ ಮುಖದಲ್ಲಿ ಮೊಡವೆ, ಚರ್ಮದಲ್ಲಿ ತುರಿಕೆ ಹಾಗೂ ತುರಿಸಿದಾಗ ಚರ್ಮ ಕೆಂಪಗಾಗುವುದು ಮೊದಲಾದವು ಎದುರಾಗಬಹುದು. ಮಸಾಲೆ ಪದಾರ್ಥಗಳು ಹೊಟ್ಟೆ ಮತ್ತು ಕರುಳುಗಳ ಒಳಭಾಗದ ಪದರಗಳ ಮೇಲೆ ಪ್ರಚೋದನೆ ನೀಡಿ ಹೆಚ್ಚಿನ ಜೀರ್ಣರಸಗಳು ಸ್ರವಿಸಲು ಕಾರಣವಾಗಬಹುದು. ಈ ರಸಗಳು ಹೆಚ್ಚು ಆಮ್ಲೀಯವಾಗಿರುವ ಕಾರಣ ಮಾಸಿಕ ದಿನಗಳಲ್ಲಿ ಈಗಾಗಲೇ ಎದುರಾಗಿರುವ ಹೊಟ್ಟೆಯುರಿತವನ್ನು ಇವು ಇನ್ನಷ್ಟು ಉಲ್ಬಣಗೊಳಿಸುತ್ತವೆ. ಒಂದು ವೇಳೆ ನಿಮಗೆ ಈ ಮಾಹಿತಿ ಉಪಯುಕ್ತವೆಂದು ಕಂಡುಬಂದರೆ ಇದರ ಕೊಂಡಿಯನ್ನು ನಿಮ್ಮ ಆಪ್ತರು, ಸ್ನೇಹಿತೆಯರೊಂದಿಗೆ ಹಂಚಿಕೊಳ್ಳುವ ಮೂಲಕ ಇದರ ಪ್ರಯೋಜನವನ್ನು ಅವರೂ ಪಡೆಯುವಂತಾಗಲಿ.

English summary

10 Foods Not To Eat During Periods

Every woman in this world goes through different kinds of problems when it comes to menstruation. It is the worst feeling that every woman faces each month. Periods give you sleepless nights, sugar cravings and what not. The awful cramps and uncomfortable bloating is all a part of menstruation, which can be reduced if you eat nutrient-dense foods. However, if you gorge on those sinful cupcakes and pizzas, it might make your periods worse because your body must replenish this blood which is lost during menstruation.
X
Desktop Bottom Promotion