For Quick Alerts
ALLOW NOTIFICATIONS  
For Daily Alerts

ರಾತ್ರಿ ಮಲಗುವ ಮುನ್ನ ಹಾಲು ಕುಡಿದು ಮಲಗಿದರೆ, ಕಣ್ತುಂಬ ನಿದ್ದೆ ಗ್ಯಾರಂಟಿ!

|

ಸಾಮಾನ್ಯವಾಗಿ, ನಮ್ಮ ಜೀವಮಾನವಿಡೀ ನಮಗೆ ಬೋಧಿಸಲ್ಪಡುವ ಒಂದು ಮಂತ್ರವೆಂದರೆ "ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದು ಮಲಗಿ", ಅದರಲ್ಲೂ ಮಕ್ಕಳಿಗೆ ಪಾಲಕರು ಈ ಮಾತನ್ನು ಹೇಳುವ ಜೊತೆಗೇ ಇದರ ಪ್ರಯೋಜನಗಳನ್ನೂ, ಶರೀರದ ಬೆಳವಣಿಗೆಗೆ ಹಾಲಿನ ಅನಿವಾರ್ಯತೆಯ ಬಗ್ಗೆ ತಪ್ಪದೇ ತಿಳಿಸುತ್ತಾರೆ. ಹಾಲು ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಡಿ ಮೊದಲಾದ ಅವಶ್ಯಕ ಪೋಷಕಾಂಶಗಳನ್ನು ಹೊಂದಿರುವ ಒಂದು ಪರಿಪೂರ್ಣವಾದ ಮತ್ತು ಆರೋಗ್ಯಕರವಾದ ಆಹಾರವಾಗಿದ್ದು ಮಕ್ಕಳಿಗೆ ಮಾತ್ರವಲ್ಲ, ಹಿರಿಯರಿಂದ ವೃದ್ದರವರೆಗೆ ಎಲ್ಲರ ಆರೋಗ್ಯಕ್ಕೂ ಪೂರಕವಾಗಿದೆ.

ಆಹಾರತಜ್ಞರ ಪ್ರಕಾರ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಒಳ್ಳೆಯದು ಎನ್ನಲು ಕಾರಣವೇನೆಂದರೆ ಇದರಲ್ಲಿರುವ ಟ್ಪ್ರಿಪ್ಟೋಫ್ಯಾನ್ ಎಂಬ ಪೋಷಕಾಂಶ ಜೀರ್ಣಕ್ರಿಯೆಯ ಬಳಿಕ ಸೆರೋಟೋನಿನ್ ಎಂಬ ರಸದೂತವಾಗಿ ಪರಿವರ್ತಿತವಾಗುವುದು. ಗಾಢ ಮತ್ತು ಸೊಂಪಾದ ನಿದ್ದೆಗೆ ಈ ರಸದೂತದ ಇರುವಿಕೆ ಅವಶ್ಯ. ಅದರಲ್ಲೂ ಹಾಲು ಕೊಂಚ ಬಿಸಿಯಾಗಿದ್ದರೆ ಸೇವಿಸಿದ ತಕ್ಷಣವೇ ಮಾನಸಿಕವಾಗಿ ನಿರಾಳತೆಯನ್ನು ನೀಡುತ್ತದೆ ಹಾಗೂ ದೇಹದ ಒತ್ತಡವನ್ನೂ ನಿರಾಳವಾಗಿಸುವ ಮೂಲಕ ಹಾಯಾದ ಅನುಭವ ನೀಡುತ್ತದೆ.

drinking milk at night

ಅಷ್ಟೇ ಅಲ್ಲ, ರಾತ್ರಿ ನಿದ್ದೆಯ ಸಮಯದಲ್ಲಿ ಟ್ಪ್ರಿಪ್ಟೋಫ್ಯಾನ್ ಜೀರ್ಣಗೊಳ್ಳುವ ವೇಳೆ ಮೆಲಟೋನಿನ್ ಎಂಬ ಪೋಷಕಾಂಶವೂ ಉತ್ಪತ್ತಿಯಾಗುತ್ತದೆ. ಈ ಮೆಲಟೋನಿನ್ ಮೆದುಳು ನಿದ್ದೆಯ ಸಮಯದಲ್ಲಿ ಕೇವಲ ನಿದ್ದೆಗೆ ಪೂರಕ ಕೆಲಸವನ್ನು ಮಾತ್ರವೇ ನಿರ್ವಹಿಸಲು ನೆರವಾಗುತ್ತದೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದನ್ನು ಹಿರಿಯರ ಸಹಿತ ವೈದ್ಯರೂ ಶಿಫಾರಸ್ಸು ಮಾಡುತ್ತಾರೆ. ಈ ಮೂಲಕ ನಿದ್ದೆ ಮಾಡಬೇಕಾದ ಸಮಯದಲ್ಲಿ ನಿದ್ದೆಗೆಡಬೇಕಾಗಿ ಬರುವ ಹಾಗೂ ತನ್ಮೂಲಕ ಎದುರಿಸಬೇಕಾದ ಇತರ ತೊಂದರೆಗಳಿಂದ ರಕ್ಷಣೆ ಪಡೆಯಬಹುದು.

ಹಾಲಿನಲ್ಲಿರುವ ಕಾರ್ಬೋಹೈಡ್ರೇಟುಗಳು ಮತ್ತು ಆರೋಗ್ಯಕರ ಕೊಬ್ಬುಗಳು ದೇಹದಲ್ಲಿರುವ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ದೇಹದಲ್ಲಿ ಉತ್ಪತ್ತಿಯಾದ ಟ್ಪ್ರಿಪ್ಟೋಫ್ಯಾನ್ ರಸದೂತವನ್ನು ಮೆದುಳಿನ ಸಹಿತ ದೇಹದ ಇತರ ಭಾಗಗಳಿಗೂ ಪರಿಚಲಿಸುವಂತೆ ಮಾಡುತ್ತದೆ ಹಾಗೂ ಈ ಮೂಲಕವೂ ಗಾಢನಿದ್ದೆ ಪಡೆಯಲು ನೆರವಾಗುತ್ತದೆ.

ಚೆನ್ನಾಗಿ ನಿದ್ದೆ ಬರುತ್ತದೆ

ಚೆನ್ನಾಗಿ ನಿದ್ದೆ ಬರುತ್ತದೆ

ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿಯುವುದರಿಂದ ಗಾಢ ನಿದ್ದೆ ಆವರಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಯೂ ಇದೆ. ಆದರೆ ವಯಸ್ಸಿಗನುಗುಣವಾಗಿ ಇದರ ಪರಿಣಾಮದಲ್ಲಿ ಕೊಂಚ ವ್ಯತ್ಯಾಸವೂ ಇದೆ. ಮಕ್ಕಳಲ್ಲಿ ಬೆಳವಣಿಗೆಗೆ ಹಾಲು ಹೆಚ್ಚಿನ ನೆರವು ನೀಡುತ್ತದೆ. ಇದಕ್ಕಾಗಿ ಪರಿಪೂರ್ಣ ಹಾಲು ಅಥವಾ ಕೊಬ್ಬುಯುಕ್ತ ಹಾಲು ಸೂಕ್ತ. ಆದರೆ ಸುಮಾರು ಮೂವತ್ತು ಮೂವತ್ತೈದು ವರ್ಷಗಳ ಬಳಿಕ ಈ ಕೊಬ್ಬುಯುಕ್ತ ಹಾಲಿನ ಸೇವನೆಯಿಂದ ದೇಹದ ತೂಕ ಅನಗತ್ಯವಾಗಿ ಏರತೊಡಗುತ್ತದೆ. ಹಾಗಾಗಿ ನಡುವಯಸ್ಸಿನವರಿಗೆ ಕೊಬ್ಬು ರಹಿತ ಅಥವಾ ಹಾಲಿನ ಪುಡಿಯಿಂದ ತಯಾರಿಸಿದ (ಸ್ಕಿಮ್ಡ್ ಮಿಲ್ಕ್) ಹಾಲಿನ ಸೇವನೆ ಸೂಕ್ತ. ಅಲ್ಲದೇ, ಕೆಲವು ವ್ಯಕ್ತಿಗಳಿಗೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಒಗ್ಗದೇ ಹೋಗಬಹುದು, ಈ ವ್ಯಕ್ತಿಗಳು ವೈದ್ಯರ ಸಲಹೆ ಪಡೆದೇ ಸೂಕ್ತ ಪ್ರಮಾಣದ ಮತ್ತು ಗುಣಮಟ್ಟದ ಹಾಲನ್ನು ಸೇವಿಸಬೇಕು.

ರಾತ್ರಿ ಮಲಗುವ ಸುಮಾರು ಹದಿನೈದು ನಿಮಿಷಗಳ ಮುನ್ನ ಹಾಲು ಕುಡಿಯಬೇಕು

ರಾತ್ರಿ ಮಲಗುವ ಸುಮಾರು ಹದಿನೈದು ನಿಮಿಷಗಳ ಮುನ್ನ ಹಾಲು ಕುಡಿಯಬೇಕು

ರಾತ್ರಿ ಮಲಗುವ ಮುನ್ನ ಕುಡಿಯಿರಿ ಎಂದರೆ ಸಾಕೇ? ಎಷ್ಟು ಮುನ್ನ ಕುಡಿದರೆ ಉತ್ತಮ? ಆಹಾರ ತಜ್ಞರ ಪ್ರಕಾರ ರಾತ್ರಿ ಮಲಗುವ ಸುಮಾರು ಹದಿನೈದು ನಿಮಿಷಗಳ ಮುನ್ನ ಕುಡಿಯುವುದು ಅತ್ಯುತ್ತಮ. ಅಷ್ಟೇ ಅಲ್ಲ, ರಾತ್ರಿಯ ಊಟಕ್ಕೂ ಮುನ್ನ ಬಿಸ್ಕತ್, ಕುಕ್ಕೀಸ್ ಮೊದಲಾದ ಅತಿ ಹೆಚ್ಚಿನ ಸಕ್ಕರೆ ಮತ್ತು ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬಾರದು, ಇದರಿಂದ ಜೀರ್ಣಾಂಗಗಳು ಅನಿವಾರ್ಯವಾಗಿ ತಮ್ಮ ಕೆಲಸವನ್ನು ಮುಂದುವರೆಸಬೇಕಾಗುತ್ತದೆ ಹಾಗೂ ನಿದ್ದೆಗೆ ಅಡ್ಡಿಯಾಗುತ್ತದೆ.

ಹಾಲು ಇಷ್ಟವಾಗದವರಿಗೆ

ಹಾಲು ಇಷ್ಟವಾಗದವರಿಗೆ

ಲ್ಯಾಕ್ಟೋಸ್ ಒಗ್ಗದೇ ಹೋಗುವ ವ್ಯಕ್ತಿಗಳಿಗೆ ಅಥವಾ ಹಾಲು ಕುಡಿಯುವುದು ಇಷ್ಟವಾಗದೇ ಇರುವ ವ್ಯಕ್ತಿಗಳು ರಾತ್ರಿ ಮಲಗುವ ಮುನ್ನ ಹಾಲಿನ ಬದಲು ಬಾಳೆಹಣ್ಣು, ಚೆರ್ರಿಹಣ್ಣು, ಧಾನ್ಯಗಳು, ಟೊಮಾಟೋ, ಲೆಟ್ಯೂಸ್, ಮೀನು, ಒಣಫಲ ಮೊದಲಾದವುಗಳನ್ನು ಸೇವಿಸಿದರೆ ಗಾಢನಿದ್ದೆಯನ್ನು ಪಡೆಯಬಹುದು.

ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಮಲಗುವ ಮುನ್ನ ಕುಡಿಯುವ 'ಒಂದು ಲೋಟ ಹಾಲು' ಕೇವಲ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲ, ನಿದ್ದೆಯ ಸಮಯದಲ್ಲಿ ಜರುಗುವ ಹಲವಾರು ಅನೈಚ್ಛಿಕ ಕಾರ್ಯಗಳನ್ನು ಸುಲಲಿತವಾಗಿ ಸಾಗಲು ನೆರವಾಗುವ ಮೂಲಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಹಾಲಿನಲ್ಲಿ ನೀರು, ಪ್ರೋಟೀನ್, ಖನಿಜಗಳು, ಅಮೈನೋ ಆಮ್ಲಗಳು, ಹೈಡ್ರೇಟುಗಳು ಮೊದಲಾದ ಹಲವಾರು ಅವಶ್ಯಕ ಪೋಷಕಾಂಶಗಳಿದ್ದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಇವೂ ಗಾಢನಿದ್ದೆಗೆ ಪರೋಕ್ಷವಾಗಿ ನೆರವಾಗುತ್ತವೆ ಹಾಗೂ ರಾತ್ರಿಯಿಡೀ ಭಂಗವಿಲ್ಲದ ಗಾಢನಿದ್ದೆ ಪಡೆಯಲು ಸಾಧ್ಯವಾಗುತ್ತದೆ.

ಈ ನಂಬಿಕೆಗೆ ವೈಜ್ಞಾನಿಕ ಆಧಾರವೇನು?

ಈ ನಂಬಿಕೆಗೆ ವೈಜ್ಞಾನಿಕ ಆಧಾರವೇನು?

ಹಾಲಿನಲ್ಲಿರುವ ಕೆಲವು ಪೋಷಕಾಂಶಗಳು ಗಾಢನಿದ್ದೆಗೆ ನೆರವಾಗುತ್ತವೆ ಎಂಬುದನ್ನು ಸಂಶೋಧನೆಗಳಿಂದ ಸಾಬೀತಾಗಿದ್ದು ಇವುಗಳಲ್ಲಿ ಪ್ರಮುಖವಾದವು ಇಂತಿವೆ:

ಟ್ಪ್ರಿಪ್ಟೋಫ್ಯಾನ್

ಟ್ಪ್ರಿಪ್ಟೋಫ್ಯಾನ್

ಇದೊಂದು ಪ್ರಮುಖ ಅಮೈನೋ ಆಮ್ಲವಾಗಿದ್ದು ದೇಹದ ಹಲವು ರಸದೂತಗಳನ್ನು ನಿಯಂತ್ರಿವುದು ಇದರ ಪ್ರಮುಖ ಕಾರ್ಯವಾಗಿದೆ. ರಕ್ತದ ಮೂಲಕ ಮೆದುಳಿಗೆ ಆಗಮಿಸುವ ಟ್ಪ್ರಿಪ್ಟೋಫ್ಯಾನ್ ಸೆರೋಟೋನರ್ಜಿಕ್ ನ್ಯೂರಾನ್ ಎಂಬ ಭಾಗದಲ್ಲಿ ಸೆರೋಟೋನಿನ್ ಎಂಬ ರಸದೂತವಾಗಿ ಪರಿವರ್ತಿತವಾಗುತ್ತದೆ. ಈ ಮೂಲಕ ಮೆಲಟೋನಿನ್ ಉತ್ಪಾದನೆಗೆ ಪ್ರಚೋದನೆ ದೊರಕುತ್ತದೆ. ಮೆಲಟೋನಿನ್ ನ ಪ್ರಮುಖ ಕಾರ್ಯವೆಂದರೆ ಯಾವಾಗ ಮಲಗಬೇಕು ಮತ್ತು ಯಾವಾಗ ಎಚ್ಚರಗೊಳ್ಳಬೇಕು ಎಂಬುದನ್ನು ನಿರ್ಧರಿಸುವುದಾಗಿದೆ ( sleep-wake cycles).ಈ ಮೆಲಟೋನಿನ್ ಬೆಳಕಿಗೆ ಪ್ರತಿಕ್ರಿಯಿಸುವ ಗುಣ ಹೊಂದಿದ್ದು ಬೆಳಕು ಕ್ಷೀಣವಾದಾಗ (ಅಂದರೆ ರಾತ್ರಿ ಹೊತ್ತಿನಲ್ಲಿ) ನಿದ್ದೆ ಆವರಿಸಲು ಮತ್ತು ಬೆಳಕು ಹರಿದಾಗ ಎಚ್ಚರಾಗಲು ನೆರವಾಗುತ್ತದೆ ಹಾಗೂ ಗಾಢ ನಿದ್ದೆಯ ಸಮಯದಲ್ಲಿ ಕನಸುಗಳು ಬೀಳಲೂ ಈ ಮೆಲಟೋನಿನ್ ಇರುವುದು ಅಗತ್ಯವಾಗಿದೆ.

ಕ್ಯಾಲ್ಸಿಯಂ

ಕ್ಯಾಲ್ಸಿಯಂ

ಮೆದುಳಿನಲ್ಲಿರುವ ನ್ಯೂರಾನ್ ಗಳ ಚಟುವಟಿಕೆಗೆ ಹಾಲಿನಲ್ಲಿರುವ ಕ್ಯಾಲ್ಸಿಯಂ ನಿಕಟ ಸಂಬಂಧ ಹೊಂದಿದೆ ಹಾಗೂ ಈ ಚಟುವಟಿಕೆಯೇ ನಿದ್ದೆಯ ಸಮಯದಲ್ಲಿ ಗಾಢನಿದ್ದೆ ಅಥವಾ ಕಣ್ಣುಗುಡ್ಡೆಗಳು ಕ್ಷಿಪ್ರವಾಗಿ ಚಲಿಸುವ (REM-Random Eye movement) ಹಾಗೂ ಗಾಢವಲ್ಲದ ನಿದ್ದೆ (non-REM) ಯ ಅವಧಿಯನ್ನು ನಿರ್ಧರಿಸುತ್ತವೆ.

ವಿಟಮಿನ್ B12

ವಿಟಮಿನ್ B12

ಹಾಲಿನಲ್ಲಿರುವ ಇತರ ವಿಟಮಿನ್ನುಗಳಿಗಿಂತಲೂ ಈ ಪೋಷಕಾಂಶಕ್ಕೆ ಹೆಚ್ಚಿನ ಮಹತ್ವವೇಕಿದೆ ಗೊತ್ತೇ? ಮೆದುಳಿನಲ್ಲಿರುವ ಪಿನಿಯಲ್ ಗ್ರಂಥಿ ಮೆಲಟೋನಿನ್ ಅನ್ನು ಉತ್ಪಾದಿಸಿ ನಿಯಂತ್ರಿಸಲು ಈ ವಿಟಮಿನ್ ಅವಶ್ಯವಾಗಿದೆ. ಈ ಗುಣವನ್ನು ಕಂಡುಕೊಂಡ ಬಳಿಕ ಅಗತ್ಯ ಪ್ರಮಾಣದ ವಿಟಮಿನ್ B12 ಹೊಂದಿರುವ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದ್ದು ಈ ಗುಳಿಗೆಗಳ ಸೇವನೆಯಿಂದ ನಿದ್ರಾರಾಹಿತ್ಯದ ತೊಂದರೆಯನ್ನು ನೀಗಿಸಲಾಗುತ್ತದೆ. ಅಗ್ಗದ ಹಾಲಿನಲ್ಲಿ ನೈಸರ್ಗಿಕವಾಗಿ ದೊರಕುವ ಈ ಅಮೂಲ್ಯ ವಿಟಮಿನ್ ಅನ್ನು ದುಬಾರಿ ಬೆಲೆ ತೆತ್ತು ಗುಳಿಗೆಗಳ ರೂಪದಲ್ಲಿ ಕೊಳ್ಳುವ ಅವಶ್ಯಕತೆ ಇದೆಯೇ?

ತೂಕ ಹೆಚ್ಚಿಸಿಕೊಳ್ಳಬೇಕೇ? ರಾತ್ರಿ ಮಲಗುವ ಮುನ್ನ ಹಾಲು ಕುಡಿಯಿರಿ

ತೂಕ ಹೆಚ್ಚಿಸಿಕೊಳ್ಳಬೇಕೇ? ರಾತ್ರಿ ಮಲಗುವ ಮುನ್ನ ಹಾಲು ಕುಡಿಯಿರಿ

ಕೃಶಶರೀರ ಹೊಂದಿರುವ ಮೂಲಕ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳನ್ನು ಪಟ್ಟಿಮಾಡಬಹುದಾದರೂ ಕೆಲವು ವ್ಯಕ್ತಿಗಳಿಗೆ ಕೆಲವೊಂದು ಆರೋಗ್ಯ ಸಂಬಂಧಿತ ಅಗತ್ಯತೆಗಾಗಿಯಾದರೂ ತೂಕ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ದೇಹದಾರ್ಢ್ಯ ಪಟುಗಳು, ಅನಾರೋಗ್ಯದಿಂದ ಕಳೆದುಕೊಂಡ ತೂಕವನ್ನು ಮರುಪಡೆಯಲು, ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಮೊದಲಾದ ಸಕಾರಣಗಳಿದ್ದರೆ ದೇಹದ ತೂಕ ಹೆಚ್ಚಿಸಿಕೊಳ್ಳಲು ಹಾಲು ಅಮೂಲ್ಯ ನೆರವು ನೀಡುತ್ತದೆ. ಸಾಮಾನ್ಯವಾಗಿ ನಮ್ಮ ದೇಹದ ಜೀವಕೋಶಗಳ ಬೆಳವಣಿಗೆ ರಾತ್ರಿ ಮಲಗಿದ್ದ ಸಮಯದಲ್ಲಿ ಹೆಚ್ಚಾಗಿ ಜರುಗುತ್ತದೆ. ಆದರೂ, ದೇಹದ ತೂಕದ ಏರಿಕೆಗೆ ಹಾಲಿನ ಸೇವನೆ ಒಂದು ಪೂರಕ ಅಂಶವೇ ಹೊರತು ಎಲ್ಲವೂ ಅಲ್ಲ, ದೇಹದ ತೂಕದ ಏರಿಕೆಗೆ ಇನ್ನೂ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ.

ತೂಕದ ಬಗ್ಗೆ ಇನ್ನೂ ಕೆಲವಾರು ನಿರ್ಣಾಯಕ ಅಂಶಗಳು

ತೂಕದ ಬಗ್ಗೆ ಇನ್ನೂ ಕೆಲವಾರು ನಿರ್ಣಾಯಕ ಅಂಶಗಳು

ದೇಹದ ತೂಕ ಹಲವಾರು ಅಂಶಗಳನ್ನು ಆಧರಿಸಿದೆ. ಅನುವಂಶಿಕ ಸೂಚನೆಗಳು ಇದರಲ್ಲಿ ಪ್ರಮುಖವಾಗಿದ್ದು ಕೇವಲ ಹಾಲಿನ ಸೇವನೆಯಿಂದಲೇ ತೂಕ ಏರುತ್ತದೆ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಉದಾಹರಣೆಗೆ ಹೆಚ್ಚಿನ ಬಿ ಎಂ ಐ ( BMI-ದೇಹದ ಎತ್ತರಕ್ಕೆ ತಕ್ಕ ತೂಕ) ಹೊಂದಿರುವ ವ್ಯಕ್ತಿಗಳು ರಾತ್ರಿ ಮಲಗುವ ಮುನ್ನ ಹಾಲು ಕುಡಿದರೆ ಇವರ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ. ಅಲ್ಲದೇ ಎಷ್ಟು ಘಂಟೆಗಳ ಕಾಲ ನಿದ್ರಿಸಿದಿರಿ ಎಂಬುದೂ ತೂಕ ಏರಲು ಪರಿಗಣಿಸುವ ನಿರ್ಣಾಯಕ ಅಂಶವಾಗಿದೆ. ಅಚ್ಚರಿ ಎಂದರೆ, ಕಡಿಮೆ ನಿದ್ದೆ ಮಾಡಿದವರು ಹಾಲು ಕುಡಿಯುವ ಪ್ರಮಾಣಕ್ಕೂ ತಾಳಮೇಳವೇ ಇಲ್ಲದಂತೆ ಹೆಚ್ಚು ತೂಕವನ್ನು ಪಡೆಯುತ್ತಾರೆ ಎಂಬ ವಿಷಯವನ್ನು Obesity ಎಂಬ ನಿಯತಕಾಲಿಕೆಯ 2011ರ ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ಹಾಲಿನಲ್ಲಿರುವ ಸಿಸ್ಟೈನ್ ಅಂಬ ಅದ್ಭುತ

ಹಾಲಿನಲ್ಲಿರುವ ಸಿಸ್ಟೈನ್ ಅಂಬ ಅದ್ಭುತ

ಹಾಲಿನಲ್ಲಿ ಹಲವಾರು ಅಮೈನೋ ಆಮ್ಲಗಳಿದ್ದು ಇವು ದೇಹದ ಬೆಳವಣಿಗೆಗೆ ಅಗತ್ಯವಾದ ಇಟ್ಟಿಗೆಗಳಂತಿವೆ. ಇವುಗಳಲ್ಲಿ ಪ್ರಮುಖವಾದುದೆಂದರೆ ಸಿಸ್ಟೈನ್ ಎಂಬ ಅಮೈನೋ ಆಮ್ಲ ತೂಕ ಹೆಚ್ಚಿಸಲು ಮತ್ತು ಸ್ಥೂಲಕಾಯ ಪಡೆಯಲು ನಿರ್ಣಾಯಕ ಅಂಶವಾಗಿದೆ. ನೀವು ಕುಡಿಯುವ ಹಾಲಿನಲ್ಲಿ ಎಷ್ಟು ಪ್ರಮಾಣದ ಸಿಸ್ಟೈನ್ ಇದೆ ಎಂಬ ಅಂಶ ತೂಕ ಹೆಚ್ಚಳಕ್ಕೆ ನಿರ್ಣಾಯಕವಾಗಿದೆ. ಅಲ್ಲದೇ ಹಾಲನ್ನು ಸಂಗ್ರಹದ ಅವಧಿಯನ್ನು ನಿರ್ಧರಿಸುವುದೂ ಇದೇ ಅಮೈನೋ ಆಮ್ಲ. ಬೆಳಕಿಗೆ ತೆರೆದಿಟ್ಟ ಹಾಲು ಬೇಗನೇ ಹುಳಿಬಂದು ಹಾಳಾಗಲು ಸಿಸ್ಟೈನ್ ಕಾರಣ. ಅಲ್ಲದೇ ಹಾಲಿನಲ್ಲಿರುವ ವಿವಿಧ ಅಮೈನೋ ಆಮ್ಲಗಳ ಪ್ರಮಾಣವೂ ಹಾಲಿನ ಗುಣಮಟ್ಟ ಮತ್ತು ರುಚಿಯಲ್ಲಿ ವ್ಯತ್ಯಾಸ ಮೂಡಿಸುತ್ತವೆ. ಉದಾಹರಣೆಗೆ ಸೋಯಾ ಅವರೆಯ ಹಾಲಿನಲ್ಲಿ ಫೈಟೇಟ್ಸ್ ಎಂಬ ಪೋಷಕಾಂಶವಿದೆ ಹಾಗೂ ಇವು ನಮ್ಮ ದೇಹದಲ್ಲಿ ಇಲ್ಲದೇ ಇರುವ ಅಮೈನೋ ಆಮ್ಲಗಳನ್ನು ನಿರ್ಮಿಸಿಕೊಳ್ಳಲು ನೆರವಾಗುತ್ತವೆ.

ರಾತ್ರಿ ಎಂಟರ ಬಳಿಕ ಊಟ ಮಾಡಿ

ರಾತ್ರಿ ಎಂಟರ ಬಳಿಕ ಊಟ ಮಾಡಿ

"Obesity" ನಿಯತಕಾಲಿಕೆಯ 2008 ರ ಏಪ್ರಿಲ್ ಸಂಚಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ರಾತ್ರಿ ಎಂಟು ಘಂಟೆಯ ಬಳಿಕ ಸೇವಿಸುವ ಆಹಾರ ನಿದ್ದೆಯ ಅವಧಿ ಮತ್ತು ಗಾಢತೆಯ ಪ್ರಮಾಣಕ್ಕೂ ಹೊರತಾಗಿ ತೂಕದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆ ಪ್ರಕಾರ ರಾತ್ರಿ ಮಲಗುವ ಮುನ್ನ ಕುಡಿಯುವ ನಿದ್ದೆಯಿಂದ ತೂಕ ಏರುವುದು ಬಹುತೇಕ ಖಚಿತ! ನಿದ್ದೆಯ ಸಮಯದಲ್ಲಿ ದೇಹದ ಹೆಚ್ಚಿನ ಭಾಗಗಳಿಗೆ ಕೆಲಸವಿಲ್ಲದೇ ಹೋಗುವ ಕಾರಣ ಅನೈಚ್ಛಿಕ ಕಾರ್ಯಗಳು ತಡೆಯಿಲ್ಲದೇ ಮುಂದುವರೆಯುತ್ತವೆ. ಆದರೆ ಈ ಸಂಚಿಕೆಯಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ ನಿದ್ದೆ, ತೂಕದಲ್ಲಿ ಏರಿಕೆ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸುವ ಹಾಲು ಇವುಗಳ ನಡುವೆ ಇರುವ ಖಚಿತ ಸಂಬಂಧವನ್ನು ವಿವರಿಸುವುದು ಸುಲಭವಲ್ಲ.

ಟೀ ಕುಡಿಯದಿರಿ

ಟೀ ಕುಡಿಯದಿರಿ

ಹಾಲು ಕುಡಿಯುವ ಮೂಲಕ ಪಡೆಯಬಹುದಾದ ಪ್ರಯೋಜನಗಳನ್ನು ಗರಿಷ್ಟವಾಗಿಸಲು ಯಾವ ರೂಪದಲ್ಲಿ ಸೇವಿಸುತ್ತೀರಿ ಎಂಬುದು ಮುಖ್ಯ. ಹಾಲಿನಲ್ಲಿ ಟೀ ಇದ್ದರೆ (ಅಥವಾ ಹಾಲು ಬೆರೆಸಿದ ಟೀ ಕುಡಿದರೆ) ನಿದ್ದೆ ಬರದೇ ಹೋಗಬಹುದು ಹಾಗೂ ತೂಕ ಕಳೆಯಲು ನೆರವಾಗಬಹುದು. ಭಾರತದ ಟೀ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿರುವ ಡಾ. ದೇವಜಿನ್ ಬೋರ್ಥಾಕುರ್ ರವರು 'ದ ಟೆಲಿಗ್ರಾಫ್' ಎಂಬ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾಹಿತಿಯ ಪ್ರಕಾರ, ಟೀಯಲ್ಲಿ ಹಾಲು ಬೆರೆಸಿದಾಗ ಹಾಲಿನ ಪ್ರೋಟೀನುಗಳು ಪರಿವರ್ತನೆಗೊಂಡು ಸಂಕೀರ್ಣ ರೂಪ ಪಡೆಯುತ್ತವೆ ಹಾಗೂ ಇವುಗಳನ್ನು ದೇಹ ಪಡೆದುಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ. ಪರಿಣಾಮವಾಗಿ ಟೀ ಕುಡಿಯುವ ಮೂಲಕ ಪಡೆಯಬಹುದಾದ ತೂಕ ಇಳಿಕೆಯ ಪ್ರಯೋಜನವನ್ನೂ ಅಥವಾ ಹಾಲು ಕುಡಿಯುವ ಮೂಲಕ ಪಡೆಯುವ ತೂಕ ಏರಿಕೆಯ ಪ್ರಯೋಜನವನ್ನೂ ಪಡೆಯದೇ ಹೋಗಬಹುದು.

ಒಂದು ಭಿನ್ನವಾದ ವ್ಯಾಖ್ಯಾನ

ಒಂದು ಭಿನ್ನವಾದ ವ್ಯಾಖ್ಯಾನ

"Obesity" ನಿಯತಕಾಲಿಕೆಯ 2008 ರ ಏಪ್ರಿಲ್ ಸಂಚಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ದಿನವೊಂದರಲ್ಲಿ ಎರಡು ಅಥವಾ ಹೆಚ್ಚಿನ ಡೈರಿ ಉತ್ಪನ್ನಗಳನ್ನು ಸೇವಿಸುವ ವ್ಯಕ್ತಿಗಳ ದೇಹದಲ್ಲಿ ಕೊಬ್ಬಿನ ಜೀವಕೋಶಗಳ ಸಂಗ್ರಹವನ್ನು ಕಡಿಮೆ ಮಾಡುತ್ತವೆ. ಈ ವರದಿ ರಾತ್ರಿ ಮಲಗುವ ಮೂಲಕ ಕುಡಿಯುವ ಹಾಲಿನ ಮೂಲಕ ಪಡೆಯುವ ತೂಕದ ಹೆಚ್ಚಳವನ್ನೇ ಪ್ರಶ್ನಿಸುವಂತಿದೆ. ಇದರ ಜೊತೆಗೇ ಮಾರ್ಚ್ 2011ರ ಸಂಚಿಕಯಲ್ಲಿ ಪ್ರಕಟವಾದ ವರದಿಯಲ್ಲಿ ಪ್ರೋಟೀನ್ ಯುಕ್ತ ಆಹಾರದ ಸೇವನೆಯಿಂದ ಹಸಿವು ನಿಗ್ರಹಗೊಳ್ಳುತ್ತದೆ ಹಾಗೂ ವಿಶೇಷವಾಗಿ ಘನ ಆಹಾರಗಳಲ್ಲಿರುವ ಪ್ರೋಟೀನ್ ಹೆಚ್ಚಿನ ಪ್ರಭಾವ ಬೀರುತ್ತದೆ. ಹಾಗಾಗಿ, ಒಂದು ವೇಳೆ ತೂಕದ ಹೆಚ್ಚಳಕ್ಕಾಗಿ ಹಾಲು ಸೇವಿಸಿದ ಬಳಿಕವೂ ತೂಕ ಏರದೇ ಇದ್ದರೆ ಇದಕ್ಕೆ ಘನ ಆಹಾರದ ಪ್ರೋಟೀನ್ ಕೊರತೆ ಪ್ರಮುಖ ಕಾರಣವಾಗಿದ್ದು ವಾಸ್ತವವಾಗಿ ಹಾಲಿನ ಸೇವನೆ ತೂಕ ಕಳೆದುಕೊಳ್ಳಲು ನೆರವಾಗುತ್ತಿರಬಹುದು!

ಹಾಲಿನ ಸೇವನೆಯ ಇತರ ಪ್ರಯೋಜನಗಳು

ಹಾಲಿನ ಸೇವನೆಯ ಇತರ ಪ್ರಯೋಜನಗಳು

ದೇಹದ ಬೆಳವಣಿಗೆಗೆ ಹಾಲು ಕುಡಿಯುವುದು ತುಂಬಾ ಅಗತ್ಯ. ಮಕ್ಕಳಿಗೆ ಹಾಲಿನ ಅಗತ್ಯತೆಯನ್ನು ಸೂಚಿಸಲು ಹಲವಾರು ಬಾಲಗೀತೆಗಳನ್ನೂ ರಚಿಸಲಾಗಿದೆ. ಚಿಕ್ಕಂದಿನಿಂದಲೂ ನಮ್ಮ ತಾಯಂದಿರು ಮತ್ತು ಅಜ್ಜಿಯಂದಿರು ಈ ವಿಷಯವನ್ನು ಸತತವಾಗಿ ಹೇಳುತ್ತಾ ಬಂದಿದ್ದಾರೆ. ಮಕ್ಕಳ ಸಹಿತ ಎಲ್ಲಾ ವಯೋಮಾನದವರು ನಿತ್ಯವೂ ಸೇವಿಸಬೇಕಾದ ಹಾಲು ಕ್ಯಾಲ್ಸಿಯಂ, ವಿಟಮಿನ್ ಎ, ಡಿ ಮೊದಲಾದ ಪೋಷಕಾಂಶಗಳಿಂದ ಸಮೃದ್ದವಾಗಿದ್ದು ವಿಶೇಷವಾಗಿ ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ದೃಢತೆಗೆ ಅಗತ್ಯವಾಗಿದೆ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ಶಿಥಿಲವಾಗುವ ಓಸ್ಟಿಯೋಪೋರೋಸಿಸ್ ಹಾಗೂ ಅಧಿಕ ರಕ್ತದೊತ್ತಡ ಮೊದಲಾದ ತೊಂದರೆಗಳು ಎದುರಾಗುತ್ತವೆ. ಹಾಲಿನ ಸೇವನೆಯಿಂದ ಈ ಕೊರತೆಯನ್ನು ನೀಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಯಾವ ಹಾಲು ಉತಮ?- ತಜ್ಞರ ಪ್ರಕಾರ ಸ್ಕಿಮ್ಡ್ ಹಾಲು

ಯಾವ ಹಾಲು ಉತಮ?- ತಜ್ಞರ ಪ್ರಕಾರ ಸ್ಕಿಮ್ಡ್ ಹಾಲು

ಆಹಾರತಜ್ಞರ ಪ್ರಕಾರ ವಯಸ್ಕರಿಗೆ ಹಾಲಿನ ಪುಡಿಯಿಂದ ತಯಾರಿಸಿದ ಸ್ಕಿಮ್ಡ್ ಹಾಲು ಉತ್ತಮ. ಏಕೆಂದರೆ ಈ ಹಾಲಿನಲ್ಲಿ ನೈಸರ್ಗಿಕ ಹಾಲಿನಲ್ಲಿರುವ ಪೋಷಕಾಂಶಗಳಿದ್ದರೂ ಪರಿಪೂರ್ಣ ಕೊಬ್ಬು ರಹಿತವಾಗಿದ್ದು ಈ ಮೂಲಕ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಏರಿಸದೇ ಇರಲು ನೆರವಾಗುತ್ತದೆ.

ಕ್ರೀಡಾಪಟುಗಳಿಗೆ: ಚಾಕಲೇಟ್ ಬೆರೆಸಿದ ಹಾಲು

ಕ್ರೀಡಾಪಟುಗಳಿಗೆ: ಚಾಕಲೇಟ್ ಬೆರೆಸಿದ ಹಾಲು

ಕ್ರೀಡೆಯ ಬಳಿಕ ಬಳಲಿ ಬರುವ ಕ್ರೀಡಾಪಟುಗಳಿಗೆ ಹಾಲು ಅತ್ಯುತ್ತಮವಾದ ಚೈತನ್ಯವನ್ನು ನೀಡುತ್ತದೆ. ಐರೋಪ್ಯ ರಾಷ್ಟ್ರಗಳಲ್ಲಿ ಇದು ಸಾಮಾನ್ಯವಲ್ಲದೇ ಹೋದರೂ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಟೆಕ್ಸಸ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ವ್ಯಾಯಾಮದ ಬಳಿಕ ಸ್ನಾಯುಗಳನ್ನು ಹೆಚ್ಚಿಸಲು, ಕೊಬ್ಬು ಕರಗಿಸಲು ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಚಾಕಲೇಟು ಬೆರೆಸಿದ ಹಾಲಿನ ಸೇವನೆ ಸೂಕ್ತವಾಗಿದೆ. ಈ ಹಾಲಿನಲ್ಲಿ ಕಡಿಮೆ ಕೊಬ್ಬು ಹಾಗೂ ಸರಿಯಾದ ಪ್ರಮಾಣದ ಕಾರ್ಬೋಹೈಡ್ರೇಟು ಮತ್ತು ಪ್ರೋಟೀನುಗಳ ಮಿಶ್ರಣವಿರುತ್ತದೆ. ಇವು ಸ್ನಾಯುಗಳ ಅಂಗಾಂಶಗಳು ಒಡೆದು ಬೆಳೆಯುವ ಕ್ರಿಯೆಗೆ ಅಡ್ಡಿಪಡಿಸದೇ ಬಳಲಿದ್ದ ಸ್ನಾಯುಗಳು ಕಳೆದುಕೊಂಡಿದ್ದ ಸಕ್ಕರೆಯನ್ನು ಮರುದುಂಬಿಸಲು ನೆರವಾಗುತ್ತವೆ.

ಮಧುಮೇಹಿಗಳಿಗೆ ದಾಲ್ಚಿನ್ನಿ ಪುಡಿ ಬೆರೆಸಿದ ಹಾಲು

ಮಧುಮೇಹಿಗಳಿಗೆ ದಾಲ್ಚಿನ್ನಿ ಪುಡಿ ಬೆರೆಸಿದ ಹಾಲು

ಮಧುಮೇಹಿಗಳಿಗೆ ದಾಲ್ಚಿನ್ನಿ ಪುಡಿ ಬೆರೆಸಿದ ಹಾಲು ಅತ್ಯುತ್ತಮವಾಗಿದೆ. ದಾಲ್ಚಿನ್ನಿ ಪುಡಿ ರಕ್ತದಲ್ಲಿ ಬೆರೆಯುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಸೂಕ್ಷ್ಮಜೀವಿಗಳ ವಿರುದ್ದ ಹೋರಡುವ ಗುಣವಿದೆ. ತನ್ಮೂಲಕ ರಕ್ತದಲ್ಲಿ ಕೊಲೆಸ್ಟಾಲ್ ಮತ್ತು ಟ್ರೈಗ್ಲಿಸರೈಡ್ ಗಳ ಮಟ್ಟವನ್ನು ಕಡಿಮೆಗೊಳಿಸಲು, ಜೀರ್ಣಕ್ರಿಯೆ ಹಾಗೂ ರಕ್ತಪರಿಚಲನೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ.

ಊಟದ ಸಮಯದಲ್ಲಿ ಸೇವಿಸಲು

ಊಟದ ಸಮಯದಲ್ಲಿ ಸೇವಿಸಲು

ಸಾಮಾನ್ಯವಾಗಿ ಸೇವಿಸಲು ಇಷ್ಟಪಡದೇ ಹೋಗುವ ಆರೋಗ್ಯಕರ ಆಹಾರವನ್ನು ಸೇವಿಸಲು ರುಚಿಕರವಾಗಿಸಲು ಹಾಲನ್ನು ಬೆರೆಸುವ ಮೂಲಕ ಇವುಗಳ ಸೇವನೆಯನ್ನು ಇಷ್ಟವಾಗಿಸಬಹುದು. ಉದಾಹರಣೆಗೆ ತರಕಾರಿಯ ಸೂಪ್ ಅಥವಾ ಹಸಿ ತರಕಾರಿಗಳ ಸಾಲಾಡ್. ಆದರೆ ಈ ಬಗ್ಗೆ ಕೊಂಚ ಎಚ್ಚರಿಕೆ ವಹಿಸಬೇಕು. ಪಾಲಕ್ ಅಥವಾ ಬಸಲೆ ಮೊದಲಾದ ಕಬ್ಬಿಣಯುಕ್ತ ಆಹಾರಗಳಲ್ಲಿ ಸಕ್ಕರೆ ಬೆರೆಸಿದರೆ ಇವುಗಳಲ್ಲಿರುವ ಕಬ್ಬಿಣದ ಅಂಶವನ್ನು ದೇಹ ಹೀರಿಕೊಳ್ಳಲು ಸಾಧ್ಯವಾಗದೇ ಹೋಗಬಹುದು, ಹಾಗಾಗಿ ಈ ಅಹಾರಗಳಲ್ಲಿ ಹಾಲು ಬೆರೆಸಬಾರದು.

ಕುದಿಸಿದ ಹಾಲು ಅಥವಾ ಉಗುರುಬೆಚ್ಚನೆಯ ಹಾಲು ಯಾವುದು ಉತ್ತಮ?

ಕುದಿಸಿದ ಹಾಲು ಅಥವಾ ಉಗುರುಬೆಚ್ಚನೆಯ ಹಾಲು ಯಾವುದು ಉತ್ತಮ?

ಕೆಲವು ತಜ್ಞರ ಪ್ರಕಾರ ಹಾಲು ಕುಡಿದ ಬಳಿಕ ಆವರಿಸುವ ನಿದ್ದೆಗೆ ಹಾಲಿನಲ್ಲಿರುವ ಪೋಷಕಾಂಶಗಳು ನೇರವಾಗಿ ಕಾರಣವಲ್ಲ, ಬದಲಿಗೆ ಹಾಲಿನ ಬಿಸಿ ದೇಹದಲ್ಲಿ ಒಂದು ಬಗೆಯ ಮನೋವೈಜ್ಞಾನಿಕ ಪರಿಣಾಮವನ್ನುಂಟುಮಾಡುತ್ತದೆ. ರಾತ್ರಿ ಮಲಗುವ ಮುನ್ನ ಉಗುರುಬೆಚ್ಚನೆಯ ಹಾಲನ್ನು ಸೇವಿಸುವ ಮೂಲಕ ಹೊಟ್ಟೆಯಲ್ಲಿಯೂ ಬೆಚ್ಚನೆಯ ಅನುಭವವಾಗುವ ಮೂಲಕ ಸ್ನಾಯುಗಳನ್ನು ನಿರಾಳಗೊಳಿಸಲು ಹಾಗೂ ಒಟ್ಟಾರೆಯಾಗಿ ಹಿತವಾದ ಭಾವನೆಯನ್ನು ಪಡೆಯಲು ಸಾಧ್ಯವಾಗುತ್ತದೆ.

English summary

Benefits of drinking milk at night before sleeping

Throughout our life, we have heard our elders say that having a glass of milk before bed was good. Especially, when we were little and our parents told us the benefits of drinking milk at night and grow more. Milk is a fundamental food, not only for children but also for adults because it contains calcium, Vitamin A, and Vitamin D.
X
Desktop Bottom Promotion