For Quick Alerts
ALLOW NOTIFICATIONS  
For Daily Alerts

ನಿಮಗೇ ಗೊತ್ತಿಲ್ಲದೇ ನಿಮ್ಮ ನಿದ್ದೆ ಕೆಡಿಸುವ ಹತ್ತು ಕೆಟ್ಟ ಅಭ್ಯಾಸಗಳು

By Prabha Bhat
|

ಮನುಷ್ಯನ ಜೊತೆ ಎಷ್ಟೇ ಹಣವಿದ್ದರೂ ಅದನ್ನು ಅನುಭವಿಸುವುದಕ್ಕೆ ಆರೋಗ್ಯ ಬೇಕೇಬೇಕು. ಹಾಗಾಗಿಯೇ ಆರೋಗ್ಯವೇ ಭಾಗ್ಯವೆನ್ನಲಾಗಿದೆ. ನಾವು ಆರೋಗ್ಯವಂತರಾದರೆ ಯಾವ ಕೆಲಸವನ್ನಾದರೂ ಕೂಡ ಮಾಡಬಲ್ಲವರಾಗಿರುತ್ತೇವೆ. ವ್ಯಾಯಾಮಗಳು, ಆಟೋಟಗಳು ನಮ್ಮ ದೈಹಿಕ ಆರೋಗ್ಯವನ್ನು ಹೆಚ್ಚಿಸಿದರೆ ನಿಯಮಿತ ಮತ್ತು ನಿಗದಿತ ನಿದ್ರೆಯು ನಮ್ಮ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ.

ಮನುಷ್ಯನ ಶರೀರದ ಬೆಳವಣಿಗೆಯಾಗುತ್ತ ಬಂದಂತೆ ಮೆದುಳಿನ ರಚನೆ ಮತ್ತು ಕಾರ್ಯಗಳಲ್ಲಿಯೂ ಸೂಕ್ತ ಬದಲಾವಣೆ ಗಳಾಗುತ್ತಿರುತ್ತದೆ. ಈ ಬದಲಾವಣೆಗಳು ನಿದ್ರೆಯ ವೇಳಾಪಟ್ಟಿ ಅಥವಾ ಮಾದರಿಯ ಮೇಲೆಯೂ ಪರಿಣಾಮಗಳನ್ನು ಬೀರುವಂತದ್ದಾಗಿರುತ್ತದೆ. ಮನುಷ್ಯನ ವಯಸ್ಸು ಹೆಚ್ಚಾದಂತೆ ಅವನ ನಿದ್ರೆಯ ಅವಧಿಯೂ ಕೂಡ ಕಡಿತಗೊಳ್ಳುವುದು ಸಾಮಾನ್ಯವಾದ ಸಂಗತಿಯಾಗಿದೆ. ವಿವಿಧ ವಯೋಮಾನಕ್ಕೆ ಅನುಗುಣವಾಗಿ ನಿದ್ರೆಯ ಅವಧಿಯು ಭಿನ್ನವಾಗಿರುತ್ತದೆ.

ನಿದ್ರೆಯ ಸಮಸ್ಯೆ ಇದ್ದರೆ ಈ ಆಹಾರಗಳನ್ನು ಸೇವಿಸಿ...ನಿದ್ರೆ ಬಹು ಬೇಗ ಬರುವುದು

ನಾವು ವಯಸ್ಕರು ತೆಗೆದುಕೊಳ್ಳುವ ನಿದ್ರೆಯ ಅವಧಿ ಹದಿಹರೆಯದ ಮಕ್ಕಳ ನಿದ್ರೆಯ ಅವಧಿಗಿಂತ ಭಿನ್ನವಾಗಿರುತ್ತದೆ. ನಿದ್ದೆಯೇ ಆಗಿಲ್ಲ ಎಂದು ಕೊರಗುವ ಜನರೇ ಹೆಚ್ಚು. ಆರೋಗ್ಯಯುತವಾದ ಶರೀರಕ್ಕೆ, ಆರೋಗ್ಯಕರ ಆಹಾರ ಮತ್ತು ವ್ಯಾಯಾಮದೊಂದಿಗೆ ನಿದ್ರೆಯೂ ಕೂಡ ಬಹಳ ಮುಖ್ಯವಾದುದು. ಮಧ್ಯಮ ವಯಸ್ಕರಿಗೆ ಸುಮಾರು 7 ರಿಂದ 8 ಗಂಟೆಗಳ ನಿದ್ರೆಯು ಅತ್ಯವಶ್ಯಕವಾದುದು ಎನ್ನಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಕಾರ ನಿದ್ರಾಹೀನತೆಯೆಂಬುದು ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮಗಳನ್ನು ಬೀರುವಂತದ್ದಾಗಿದೆ.

ಅಷ್ಟೇ ಅಲ್ಲದೆ ನಿದ್ರಾಹೀನತೆಯು ನಿಮ್ಮ ದಿನನಿತ್ಯದ ಎಲ್ಲಾ ಚಟುವಟಿಕೆಗಳ ಮೇಲೆ ಮತ್ತು ಕಾರ್ಯಗಳ ಮೇಲೆಯೂ ಋಣಾತ್ಮಕ ಪರಿಣಾಮಗಳನ್ನು ಬೀರಬಲ್ಲದಾದುದರಿಂದ ಈ ಕುರಿತು ತಿಳುವಳಿಕೆಯನ್ನು ಹೊಂದುವುದು ಅತ್ಯಂತ ಮುಖ್ಯವಾದುದಾಗಿದೆ. ಆದ್ದರಿಂದ ನಿದ್ರಾಹೀನತೆಗೆ ಕಾರಣೀಭೂತವಾಗುವಂತಹ ಕೆಲವು ಅಂಶಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ....

ತಡವಾಗಿ ರಾತ್ರಿಯೂಟವನ್ನು ಸೇವಿಸುವುದು

ತಡವಾಗಿ ರಾತ್ರಿಯೂಟವನ್ನು ಸೇವಿಸುವುದು

ರಾತ್ರಿ 10 ಗಂಟೆಯ ನಂತರ ಊಟ ಮಾಡುವ ತೆಗೆದುಕೊಳ್ಳುವ ಅಭ್ಯಾಸವಿರುವವರಲ್ಲಿ ಸಾಮಾನ್ಯವಾಗಿ ನಿದ್ರಾಹೀನತೆಯ ಸಮಸ್ಯೆ ಕಂಡುಬರುತ್ತವೆ.ಒತ್ತಡದ ಜೀವನಕ್ರಮ ಮತ್ತು ಹೆಚ್ಚಿನ ಕೆಲಸಗಳಿರುವಾಗ 10 ಗಂಟೆಯ ಒಳಗೆ ಊಟವನ್ನು ಮಾಡುವುದು ಕಷ್ಟವೆನಿಸಿದರೂ ಆರೋಗ್ಯದ ದೃಷ್ಟಿಯಿಂದ ಆದಷ್ಟು 9 ರಿಂದ 10 ಗಂಟೆಯ ಒಳಗೆ ರಾತ್ರಿಯೂಟವನ್ನು ತೆಗೆದುಕೊಳ್ಳುವುದು ಸೂಕ್ತವಾದ ಕ್ರಮವೆನಿಸುತ್ತದೆ. ನಾವು ತೆಗೆದುಕೊಂಡ ಆಹಾರ ಜೀರ್ಣಗೊಳ್ಳಲು ಕೆಲವು ಸಮಯ ಬೇಕಿರುವುದರಿಂದ ಬೇಗ ಆಹಾರ ಸೇವನೆ ಮಾಡಿ ಕೆಲವು ಹೊತ್ತಿನ ಬಳಿಕ ನಂತರ ನಿದ್ರಿಸುವುದು ಒಳ್ಳೆಯ ದಿನಚರಿಯೆನಿಸುತ್ತದೆ.

ರಾತ್ರಿ ಸಮಯದಲ್ಲಿ ಹುಳಿ ಹಣ್ಣುಗಳನ್ನು ಸೇವಿಸುವುದು

ರಾತ್ರಿ ಸಮಯದಲ್ಲಿ ಹುಳಿ ಹಣ್ಣುಗಳನ್ನು ಸೇವಿಸುವುದು

ರಾತ್ರಿ ವೇಳೆಯಲ್ಲಿ ಕಿತ್ತಳೆ ಅಥವಾ ದ್ರಾಕ್ಷಿಹಣ್ಣುಗಳನ್ನು ಸೇವಿಸುವುದು ಕೂಡ ನಿದ್ರಾಹೀನತೆಯನ್ನು ಉಂಟುಮಾಡಬಲ್ಲವು. ಈ ಬಗೆಯ ಹಣ್ಣುಗಳಲ್ಲಿ ಸಿಟ್ರಿಕ್ ಆಸಿಡ್ ಅಂಶವಿರುವುದರಿಂದ ಎದೆಯುರಿ ಇನ್ನಿತರ ಸಮಸ್ಯೆಗಳನ್ನು ತಂದೊಡ್ಡುವ ಅವಕಾಶಗಳು ಹೆಚ್ಚಿದ್ದು ತನ್ಮೂಲಕ ಆರಾಮದಾಯಕ ನಿದ್ರೆಗೆ ತಡೆಯುಂತಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ನಿದ್ರಿಸುವುದು

ಖಾಲಿ ಹೊಟ್ಟೆಯಲ್ಲಿ ನಿದ್ರಿಸುವುದು

ಅತಿಯಾದ ಆಹಾರ ಸೇವನೆ ಮತ್ತು ನಿರಾಹಾರ ಇವೆರಡೂ ಕೂಡ ರಾತ್ರಿ ನಿದ್ರೆಯನ್ನು ನಿರ್ಧರಿಸುವ ಅಂಶಗಳಾಗಿವೆ. ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸೇವಿಸಿದಂತಹ ಸಂದರ್ಭಗಳಲ್ಲಿ 2 ರಿಂದ 3 ತಾಸು ಬಿಟ್ಟು ನಿದ್ರಿಸುವುದು ಉತ್ತಮವಾದುದು. ಅಂತೆಯೇ ಖಾಲಿ ಹೊಟ್ಟೆಯಲ್ಲಿ ಸುಖನಿದ್ರೆಯನ್ನು ಪಡೆಯುವುದು ಅಸಾಧ್ಯವಾದುದು. ಆದ್ದರಿಂದ ರಾತ್ರಿಯೂಟವನ್ನು ಬಿಡುವುದು ನಿಮ್ಮ ನಿದ್ರಾಹೀನತೆಗೆ ಕಾರಣವಾಗಬಲ್ಲದು.

ಮಲಗುವಾಗ ಅತಿಯಾದ ಮೊಬೈಲ್ ಬಳಕೆ(ಸ್ಮಾರ್ಟ್ ಫೋನುಗಳು)

ಮಲಗುವಾಗ ಅತಿಯಾದ ಮೊಬೈಲ್ ಬಳಕೆ(ಸ್ಮಾರ್ಟ್ ಫೋನುಗಳು)

ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲಿಯೂ ಮೊಬೈಲುಗಳದ್ದೇ ಕಾರುಬಾರು. ಹಗಲು ರಾತ್ರಿಯೆನ್ನದೆ ಕೈಗೆ ಅಂಟಿಕೊಂಡಿರುವ ಮೊಬೈಲ್ ಮಲಗುವಾಗಲೂ ಬಳಕೆ ಯಾದಾಗ ಅದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ. ಮೊಬೈಲಿನಿಂದ ಹೊರಹೊಮ್ಮುವ ಬೆಳಕು ನಮ್ಮ ದೇಹದ ತರಂಗಗಳ ಮೇಲೆ ಪರಿಣಾಮಗಳನ್ನು ಬೀರುವುದರ ಮೂಲಕ ನಮ್ಮ ಎಚ್ಚರಿಕೆಯನ್ನು ಹೆಚ್ಚಿಸುವ ಹಾರ್ಮೋನುಗಳನ್ನು ಸ್ರವಿಸುವಂತೆ ಮಾಡೂತ್ತದೆ. ಈ ಮೂಲಕ ನಿದ್ರೆಯಲ್ಲಿ ಅಡಚಣೆಯನ್ನುಂಟುಮಾಡುತ್ತದೆ.

ರಾತ್ರಿ ವ್ಯಾಯಾಮಗಳನ್ನು ಮಾಡುವುದು

ರಾತ್ರಿ ವ್ಯಾಯಾಮಗಳನ್ನು ಮಾಡುವುದು

ಅಧ್ಯಯನಗಳ ಪ್ರಕಾರ ನಿಯಮಿತ ವ್ಯಾಯಾಮಗಳನ್ನು ಮಾಡುವಿಕೆ ಆಯಾಸವನ್ನುಂಟುಮಾಡುವುದರ ಮೂಲಕ ಬಲು ಬೇಗ ನಿದ್ರಾವಸ್ಥೆಗೆ ಒಯ್ಯುತ್ತದೆ. ಆದರೆ ನಿದ್ರಾಪೂರ್ವ ಮಾಡುವ ವ್ಯಾಯಾಮಗಳು ನಿಮ್ಮ ನಿದ್ರಾಹೀನತೆಗೆ ಕಾರಣೀಭೂತವಾಗುತ್ತದೆ. ಆದ್ದರಿಂದ ರಾತ್ರಿ ವ್ಯಾಯಮವನ್ನು ಮಾಡದೆ ಬೆಳಗಿನ ಸಮಯದಲ್ಲಿಯೇ ವ್ಯಾಯಾಮ ಮಾಡುವುದು ಹೆಚ್ಚು ಸೂಕ್ತವಾದುದು.

ಅನಿರ್ದಿಷ್ಟವಾದ ಜೀವನ ಕ್ರಮಗಳು ಮತ್ತು ವೇಳಾಪಟ್ಟಿಗಳು

ಅನಿರ್ದಿಷ್ಟವಾದ ಜೀವನ ಕ್ರಮಗಳು ಮತ್ತು ವೇಳಾಪಟ್ಟಿಗಳು

ನಮ್ಮ ಅನಿರ್ದಿಷ್ಟವಾದ ಜೀವನ ಕ್ರಮಗಳು ಅಥವ ಅಚಾನಕ್ಕಾಗಿ ಆಗಮಿಸುವ ಕೆಲಸಗಳನ್ನು ನಿರ್ವಹಿಸುವಾಗಿನ ಬದಲಾವಣೆಗಳ ಪರಿಣಾಮಗಳು ನಮ್ಮ ನಿದ್ರೆಯ ಮೇಲೆ ಬೀಳುವುದು ಸಾಮಾನ್ಯವಾದುದು. ನಿತ್ಯವೂ ನಾವು ಮಲಗುವ ಸಮಯ ತಪ್ಪಿದಾಗ ಕೂಡಲೆ ನಿದ್ದೆ ಆವರಿಸದೆ ಇರುವುದನ್ನು ಸಾಮನ್ಯವಾಗಿ ಎಲ್ಲರೂ ಅನುಭವಿಸಿರುತ್ತಾರೆ. ನಮ್ಮ ದೇಹದ ತರಂಗಗಳು ನಮ್ಮ ಅಂತರಿಕ ಗಡಿಯಾರವಿದ್ದಂತೆ, ನಮ್ಮ ನಿದ್ರಾವಧಿಯಲ್ಲಿನ ಬದಲಾವಣೆಗಳಿಗೆ ಅವುಗಳೂ ಕೂಡ ತಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತವೆ.

ಅತಿಯಾದ ಅಡಚಣೆಗಳು

ಅತಿಯಾದ ಅಡಚಣೆಗಳು

ನಮ್ಮ ನಿದ್ರಾಕೊಠಡಿಯೆಂಬುದು ಆರಾಮ ತೆಗೆದುಕೊಳ್ಳುವುದಕ್ಕೆ ಮಾತ್ರವೇ ಸೀಮೀತವಾಗಿರಬೇಕು. ಅಲ್ಲಿ ಟಿವಿ ಅಥವ ಕಂಪ್ಯೂಟರುಗಳಿದ್ದಾಗ ನಮ್ಮ ಮೆದುಳನ್ನು ನಿದ್ರೆಯಲ್ಲಿ ಕೇಂದ್ರೀಕರಿಸುವಲ್ಲಿ ಅಡಚಣೆಯನ್ನುಂಟುಮಾಡುತ್ತವೆ. ಆದ್ದರಿಂದ ತಡರಾತ್ರಿವರೆಗೂ ಇವುಗಳು ನಮ್ಮನ್ನು ನಿದ್ರೆಯಿಂದ ದೂರವಿರಿಸುತ್ತವೆ.

ಅವಿಶ್ರಾಂತ ಕಾಲು ರೋಗ (ರೆಸ್ಟ್ಲೆಸ್ ಲೆಗ್ ಸಿಂಡ್ರೋಮ್)

ಅವಿಶ್ರಾಂತ ಕಾಲು ರೋಗ (ರೆಸ್ಟ್ಲೆಸ್ ಲೆಗ್ ಸಿಂಡ್ರೋಮ್)

ಕುಳಿತಿರುವಾಗ ಅಥವ ಮಲಗಿರುವಾಗ ಕೆಲವರು ತಮ್ಮ ಕಾಲುಗಳನ್ನು ಅಲ್ಲಾಡಿಸುವುದನ್ನು ಹವ್ಯಾಸವನ್ನಾಗಿಸಿಕೊಂಡಿರುತ್ತಾರೆ. ಇದು ಕೇವಲ ಹವ್ಯಾಸವಾಗಿರದೆ ಒಂದು ಚಟವಾಗಿ, ಒಂದು ರೋಗವೇ ಆಗಿ ಪರಿಣಮಿಸಿರುತ್ತವೆ.. ಇದರಿಂದ ಮಲಗಿರುವಾಗ ಬೇಗ ನಿದ್ರೆಗೆ ಜಾರಲು ಅಸಾಧ್ಯವೆನಿಸುತ್ತದೆ. ಈ ಮೂಲಕ ನಿದ್ರಾಭಂಗವನ್ನುಂಟಾಗುತ್ತದೆ.

ಮಲಗುವ ಮುನ್ನ ತಣ್ಣೀರಿನಲ್ಲಿ ಮುಖ ತೊಳೆಯುವ ಪದ್ಧತಿ

ಮಲಗುವ ಮುನ್ನ ತಣ್ಣೀರಿನಲ್ಲಿ ಮುಖ ತೊಳೆಯುವ ಪದ್ಧತಿ

ಮಲಗುವ ಮುನ್ನ ತಣ್ಣೀರಿನಿಂದ ಮುಖವನ್ನು ತೊಳೆಯುವ ಅಭ್ಯಾಸ ಹಲವರಿಗಿರುತ್ತದೆ. ಆದರೆ ಈ ಅಭ್ಯಾಸವನ್ನು ಬಿಟ್ಟುಬಿದುವುದು ಒಳ್ಳೆಯದು. ಯಾಕೆಂದರೆ ಮಲಗುವ ಮುನ್ನ ತಣ್ಣೀರಿನಿಂದ ಮುಖವನ್ನು ತೊಳೆಯುವುದೂ ಕೂಡ ನಿಮ್ಮ ನಿದ್ರೆಯ ಮೇಲೆ ಪರಿಣಾಮಗಳನ್ನು ಬೀರುವಂತಹ ಅಂಶಗಳಲ್ಲೊಂದಾಗಿದೆ. ತಣ್ಣೀರು ನಮ್ಮ ದೇಹದ ಅಂಗಾಂಶಗಳನ್ನು ಕ್ರಿಯಾಶೀಲವನ್ನಾಗಿಸಿ ಶಕ್ತಿಯನ್ನು ಉತ್ಪತ್ತಿ ಮಾಡುವುದರ ಮೂಲಕ ನಮ್ಮನ್ನು ನಿದ್ರೆಯಿಂದ ದೂರವುಳಿಯುವಂತೆ ಮಾಡುತ್ತದೆ. ಈ ಬಗೆಯ ರೋಗದ ಲಕ್ಷಣವಿರುವವರಲ್ಲಿ 5ರಿಂದ 10ಮಂದಿಗೆ ನಿದ್ರಾಹೀನತೆಯ ಸಮಸ್ಯೆ ಕಂಡುಬರುತ್ತದೆ.

ನಿದ್ರಾ ಪೂರ್ವ ಕಾಫಿ ಸೇವನೆ

ನಿದ್ರಾ ಪೂರ್ವ ಕಾಫಿ ಸೇವನೆ

ಕಾಫಿ ಸೇವನೆಯೂ ಕೂಡ ನಿಮ್ಮ ನಿದ್ರೆಯನ್ನು ಭಗ್ನಗೊಳಿಸುವ ಅಂಶಗಳಲ್ಲೊಂದು. ಕಾಫಿಯಲ್ಲಿರುವ ಕಫಿನ್ ನಮ್ಮ ಶರೀರವನ್ನು ಕ್ರಿಯಾಶೀಲಗೊಳಿಸಿ, ಶಕ್ತಿಯನ್ನು ಉತ್ಪತ್ತಿ ಮಾಡುವುದರ ಮೂಲಕ ನಿದ್ರೆಯನ್ನು ಮುಂದೂಡುತ್ತದೆ. ಆದ್ದರಿಂದ ಮಲಗುವ ಮುನ್ನ ಕಾಫಿಯನ್ನು ಕುಡಿಯುವ ಬದಲು ಚಾಕೊಲೇಟಿನ ತುಂಡನ್ನು ಸೇವಿಸುವುದು ಉತ್ತಮವೆನ್ನಲಾಗಿದೆ. ಈ ಮೇಲಿನ ಎಲ್ಲಾ ಕಾರಣಗಳೂ ಕೂಡ ನಮ್ಮ ನಿದ್ರಾಹೀನತೆಯನ್ನು ಹೆಚ್ಚಿಸುವ ಅಂಶಗಳಾದ್ದರಿಂದ ನಮ್ಮ ನಿತ್ಯದ ಜೀವನದಲ್ಲಿ ಆದಷ್ಟು ಇವುಗಳಿಂದ ದೂರ ಇರುವ ಮೂಲಕ ನಿದ್ರೆಯ ಜೊತೆಗೆ ಉತ್ತಮ ಆರೋಗ್ಯವನ್ನೂ ನಮ್ಮದಾಗಿಸಿಕೊಳ್ಳಬಹುದು. ಮೇಲಿನವುಗಳ ಬದಲು ಉತ್ತಮ ಹವ್ಯಾಸಗಳು ನಮ್ಮ ದಿನಚರಿಯ ಭಾಗವಾದಾಗ ನಿದ್ರಾಹೀನತೆಯ ಸಮಸ್ಯೆಯಿಂದ ನಮ್ಮನ್ನು ನಾವು ದೂರವಿರಿಸಿಕೊಳ್ಳಬಹುದು. ಒಳ್ಳೆಯ ನಿದ್ರೆಯಿಂದ ಮನಸ್ಸು ಉಲ್ಲಸಿತವಾಗಿರುತ್ತದೆ. ಅರೆನಿದ್ರೆ ಅಥವ ನಿದ್ರಾಹೀನತೆಯಿಂದ ಮನಸ್ಸು ಜಡತ್ವವನ್ನೂ ಹೊಂದಿ ಜೀವನದ ಸಂತಸದ ಕ್ಷಣಗಳನ್ನೂ ಅನುಭವಿಸಲಾಗದು. ಹಾಗಾಗಿ ನಿದ್ದೆಗೆ ಹೋಗುವ ಮುನ್ನ ಈ ಹತ್ತು ಸಂಗತಿಗಳು ನಿಮ್ಮ ನೆನಪಿನಲ್ಲಿರಲಿ.

English summary

10 Unexpected Things That Can Affect Your Sleep

Sleep is vital for the body alongside a healthy balanced diet and exercise. An average adult requires 7 to 8 hours of sound sleep every day. Sleep disturbances can escalate the risk of physical and mental health problems, according to the National Institute For Health. A poor sleep can affect your day-to-day activities and also affect your ability to make sound judgements. So, read to know more about the things that can affect your sleep in this article
X
Desktop Bottom Promotion