For Quick Alerts
ALLOW NOTIFICATIONS  
For Daily Alerts

ರಂಜಾನ್ ಉಪವಾಸ: ಆಹಾರ-ಪಥ್ಯದಲ್ಲಿ ಕಟ್ಟುನಿಟ್ಟಿನ ಶಿಸ್ತು ಪಾಲಿಸಿ

By Arshad
|

ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ ಮಾಸವಾದ ರಂಜಾನ್ (ಸರಿಯಾದ ಉಚ್ಛಾರಣೆ ಅಂದರೆ ರಮಧಾನ್) ಈಗ ಪ್ರಾರಂಭವಾಗಿದೆ. ವಿಶ್ವದಾದ್ಯಂತ ಈ ಒಂದು ಮಾಸದಲ್ಲಿ ಮುಸ್ಲಿಮರು ದಿನವಿಡೀ ಉಪವಾಸ ಆಚರಣೆ ಮಾಡುವ ಜೊತೆಗೇ ದಾನ ಧರ್ಮ, ವಿಶೇಷ ಪ್ರಾರ್ಥನೆಗಳನ್ನೂ ಆಚರಿಸುವ ಮೂಲಕ ಹೆಚ್ಚು ಹೆಚ್ಚಾಗಿ ಅಲ್ಲಾಹನ ಅನುಗ್ರಹ ಪಡೆಯಲು ಯತ್ನಿಸುತ್ತಾರೆ. ಈ ತಿಂಗಳಲ್ಲಿ ಬೆಳಗ್ಗಿನ ನಾಲ್ಕೂವರೆಯಿಂದ ಸಂಜೆಯ ಏಳು ಗಂಟೆಯವರೆಗೆ ಅನ್ನಾಹಾರಗಳನ್ನು ತ್ಯಜಿಸುವುದೇ ಉಪವಾಸವಲ್ಲ, ಬದಲಿಗೆ ಈ ಅವಧಿಯಲ್ಲಿ ಮನಸ್ಸಿನಲ್ಲಿ ಏಳುವ ಯಾವುದೇ ಬಯಕೆಗಳನ್ನು ನಿಗ್ರಹಿಸುವುದೇ ನಿಜವಾದ ಉಪವಾಸವಾಗಿದೆ.

ನೆನಪಿಲ್ಲದೇ ಊಟ ಮಾಡಿದರೂ ಆ ಉಪವಾಸ ಸ್ವೀಕೃತಗೊಳ್ಳುತ್ತದೆ. ಆದರೆ ನೆನಪಿದ್ದೂ ಸಕ್ಕರೆಯ ಒಂದು ಅಗುಳನ್ನು ತಿಂದರೂ ಉಪವಾಸ ವರ್ಜ್ಯವಾಗುತ್ತದೆ. ಬಾಯಾರಿಕೆಯಾಯ್ತೆಂದು ಮನಃಪೂರ್ವಕವಾಗಿ ಉಗುಳನ್ನೂ ನುಂಗುವಂತಿಲ್ಲ. ಆದ್ದರಿಂದ ಉಪವಾಸವೆಂದರೆ ಕೇವಲ ಅನ್ನಾಹಾರದಿಂದ ದೂರವಿರುವುದು ಮಾತ್ರವಲ್ಲ, ಮನಸ್ಸನ್ನು ಕೆಟ್ಟ ಬಯಕೆಗಳಿಂದ ರಕ್ಷಿಸಲು ಸಾಧ್ಯವಾಗುವಂತೆ ಮಾಡಲು ಇಡಿಯ ತಿಂಗಳು ಶ್ರಮಪಡುವುದೇ ನಿಜವಾದ ಅರ್ಥವಾಗಿದೆ.

ರಂಜಾನ್ ಸ್ಪೆಷಲ್: ಖರ್ಜೂರ-ಡ್ರೈ ಫ್ರುಟ್ಸ್ ಲಡ್ಡು-ನೀವೂ ಮಾಡಿ ನೋಡಿ...

ದಿನದ ಹದಿನಾಲ್ಕು ಗಂಟೆಯ ಉಪವಾಸವನ್ನು ಸಮರ್ಥವಾಗಿ ನಿಭಾಯಿಸಲು ಬೆಳಿಗ್ಗೆ ನಾಲ್ಕೂವರೆಗೂ ಮುನ್ನ ಸೇವಿಸುವ ಆಹಾರ ಅಥವಾ ಸುಹೂರ್ ಸೇವಿಸುವುದು ಅಗತ್ಯವಾಗಿದೆ. ಅಲ್ಲದೇ ಧರ್ಮರೂಪದಲ್ಲಿ ಕಡ್ಡಾಯವೂ ಆಗಿದೆ. ಅಂತೆಯೇ ಸರಿಯಾಗಿ ಸೂರ್ಯಾಸ್ತದ ಸಮಯಕ್ಕೆ ಉಪವಾಸವನ್ನು ಸಂಪನ್ನಗೊಳಿಸುವುದಕ್ಕೆ ಇಫ್ತಾರ್ ಎಂದು ಕರೆಯುತ್ತಾರೆ. (ಕೆಲವರು ಇದನ್ನು ಉಪವಾಸ ತೊರೆಯುವುದು ಎಂದು ತಪ್ಪಾಗಿ ತಿಳಿಸುತ್ತಾರೆ. ಉಪವಾಸ ತೊರೆಯುವುದೆಂದರೆ ಸೂರ್ಯಾಸ್ತಕ್ಕೂ ಮುನ್ನಾ ಅವಧಿಯಲ್ಲಿ ಯಾವುದಾದರೂ ಅನಿವಾರ್ಯ ಕಾರಣ ಅಥವಾ ತೊಂದರೆಯಿಂದ ಉಪವಾಸವನ್ನು ಮೊಟಕುಗೊಳಿಸಬೇಕಾದರೆ ಇದನ್ನು ತೊರೆಯುವುದು ಎನ್ನುತ್ತಾರೆ. ಆ ಉಪವಾಸ ಗಣನೆಗೆ ಬರವುದಿಲ್ಲ. ಈ ದಿನ ಕಳೆದುಕೊಂಡ ಉಪವಾಸವನ್ನು ಮುಂದಿನ ದಿನಗಳಲ್ಲಿ ಪೂರೈಸಬೇಕಾಗುತ್ತದೆ).

ದಿನದ ಹದಿನಾಲ್ಕು ಗಂಟೆಗಳನ್ನು ಅನ್ನಾಹಾರವಿಲ್ಲದೇ ಕಳೆಯಬೇಕಾದರೆ ಸುಹೂರ್‌ನಲ್ಲಿ ಸೇವಿಸುವ ಆಹಾರ ನಿಧಾನವಾಗಿ ಜೀರ್ಣಗೊಂಡು ದಿನದ ಚಟುವಟಿಕೆಗಳಿಗೆ ನಿಧಾನವಾಗಿ ಶಕ್ತಿ ನೀಡುವಂತಿರಬೇಕು. ಈ ಅಹಾರಗಳಲ್ಲಿ ನೀರಿನಂಶ ಹಾಗೂ ಕರಗದ ನಾರೂ ಹೆಚ್ಚಿರಬೇಕು ಹಾಗೂ ಸಕ್ಕರೆ ಹೆಚ್ಚಿರಬಾರದು.

ಆದರೆ ಹೆಚ್ಚಿನವರು ಅರಿಯದೇ ಈ ತಪ್ಪನ್ನೇ ಹೆಚ್ಚಾಗಿ ಮಾಡುತ್ತಾರೆ. ಸುಹೂರ್ ಮತ್ತು ಇಫ್ತಾರ್ ನಲ್ಲಿ ಅತಿ ಹೆಚ್ಚಿನ ಪೋಷಕಾಂಶ, ಸಕ್ಕರೆ ಅಂಶವಿರುವ ಆಹಾರಗಳನ್ನೇ ಹೆಚ್ಚು ಹೆಚ್ಚಾಗಿ ಸೇವಿಸುವ ಮೂಲಕ ದೇಹಕ್ಕೆ ಅನಗತ್ಯವಾಗಿ ಕ್ಯಾಲೋರಿಗಳನ್ನು ಸೇರಿಸುತ್ತಾರೆ. ಇದರಿಂದ ಕೆಲವೇ ಗಂಟೆಗಳಲ್ಲಿ ಹೊಟ್ಟೆಯಲ್ಲಿ ಉರಿ, ವಾಕರಿಕೆ ಹಾಗೂ ಮಧುಮೇಹ ಆವರಿಸುವ ಸಾಧ್ಯತೆ ಇರುವ ವ್ಯಕ್ತಿಗಳಿಗೆ ಇನ್ನೂ ಬೇಗನೇ ಮಧುಮೇಹ ಆವರಿಸಲು ಕಾರಣವಾಗುತ್ತದೆ. ಸ್ಥೂಲಕಾಯವೂ ಆವರಿಸುತ್ತದೆ.

ರಂಜಾನ್ ಪಥ್ಯ- ಕಷ್ಟವಾದರೂ, ಇಷ್ಟಪಟ್ಟು ಅನುಸರಿಸಿ

ರಂಜಾನ್ ತಿಂಗಳ ಉಪವಾಸದ ಬಳಿಕವೂ ತೂಕ ನಾಲ್ಕಾರು ಕೇಜಿ ಹೆಚ್ಚಲಿಕ್ಕೆ ಇದೇ ಕಾರಣ. ಆದ್ದರಿಂದ ಒಂದು ವೇಳೆ ಈ ವರ್ಷದ ರಂಜಾನ್‌ನಲ್ಲಿ ಈ ತಪ್ಪು ಮಾಡದೇ, ಉಪವಾಸವನ್ನು ತೊಂದರೆಯಿಲ್ಲದೇ ಪೂರೈಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಕೆಲವು ಆಹಾರಗಳನ್ನು ತ್ಯಜಿಸುವುದು ಹಾಗೂ ಕೆಲವು ಆಹಾರಗಳನ್ನು ಹೆಚ್ಚಾಗಿ ಸೇವಿಸುವುದೇ ಜಾಣತನದ ಕ್ರಮವಾಗಿದೆ. ಬನ್ನಿ, ಜಾಣರಾಗಬೇಕೆಂದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ....

ಸೇವಿಸಬೇಕಾದ ಆಹಾರಗಳು

ಸೇವಿಸಬೇಕಾದ ಆಹಾರಗಳು

ಇಡಿಯ ಧಾನ್ಯಗಳು: ಇಡಿಯ ಧಾನ್ಯಗಳಲ್ಲಿ ಹೆಚ್ಚಿನ ಕರಗದ ನಾರು ಮತ್ತು ಕಾರ್ಬೋಹೈಡ್ರೇಟುಗಳಿರುತ್ತವೆ. ಇವು ನಿಧಾನವಾಗಿ ಜೀರ್ಣಗೊಳ್ಳುವ ಮೂಲಕ ಇಡಿಯ ದಿನ ಹಸಿವನ್ನು ನಿಗ್ರಹಿಸಲು ನೆರವಾಗುತ್ತವೆ. ಸುಹೂರ್ ನಲ್ಲಿಯೂ, ಇಫ್ತಾರ್ ನಲ್ಲಿಯೂ ಇಡಿಯ ಧಾನ್ಯಗಳಿಂದ ಮಾಡಿದ ಖಾದ್ಯ ನಿಮ್ಮ ಪ್ರಮುಖ ಆಹಾರವಾಗಿರುವಂತೆ ನೋಡಿಕೊಳ್ಳುವುದು ಪ್ರಥಮ ಅಗತ್ಯವಾಗಿದೆ. ಈ ಅಗತ್ಯವನ್ನು ಕಂಡುಕೊಂಡ ಅರಬರು ಗೋಧಿಯಿಂದ ಮಾಡಿದ 'ಹರೀಸ್' ಎಂಬ ಖಾದ್ಯವನ್ನು ಎರಡೂ ಹೊತ್ತುಗಳಲ್ಲಿ ಕಡ್ಡಾಯವಾಗಿ ಸೇವಿಸುತ್ತಾರೆ. ಕುಚ್ಚಿಗೆ ಗಂಜಿ, ಗೋಧಿ ಬೇಯಿಸಿ ಮಾಡಿದ ಖಾದ್ಯಗಳು ಉತ್ತಮ ಆಯ್ಕೆಯಾಗಿವೆ. ಇನ್ನುಳಿದಂತೆ ಗೋಧಿಯ ಶ್ಯಾವಿಗೆ, ಇಡಿಯ ಗೋಧಿಯ ಬ್ರೆಡ್, ಓಟ್ಸ್ ಮೊದಲಾದವುಗಳನ್ನು ಸೇವಿಸಬಹುದು. ಮೈದಾ ಬೇಡ. ಏಕೆಂದರೆ ಮೈದಾದಲ್ಲಿ ನಾರು ಇಲ್ಲವಾದುದರಿಂದ ಮಲಬದ್ದತೆಗೆ ಕಾರಣವಾಗಬಹುದು.

ಖರ್ಜೂರ

ಖರ್ಜೂರ

ಸುಹೂರ್‌ನಲ್ಲಿ ಒಂದೆರಡು ಖರ್ಜೂರಗಳನ್ನು ಸೇವಿಸುವ ಮೂಲಕ ದಿನದ ಸಕ್ಕರೆಯ ಅಗತ್ಯತೆಯನ್ನು ಪೂರೈಸಿಕೊಳ್ಳಬಹುದು. ಇಫ್ತಾರ್ ಹೊತ್ತಿನಲ್ಲಿಯೂ ಒಂದೆರಡು ಖರ್ಜೂರ ಸೇವಿಸಿದರೆ ಸಾಕು. ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆಯಾಗಿರುವ ಫ್ರುಕ್ಟೋಸ್ ಹಾಗೂ ಕರಗದ ನಾರು ಇದ್ದು ದೇಹದಲ್ಲಿ ಗ್ಲುಕೋಸ್ ಮಟ್ಟವನ್ನು ಸಂತುಲಿತ ಮಟ್ಟದಲ್ಲಿರಿಸಲು ನೆರವಾಗುತ್ತವೆ.

ಹಣ್ಣು ಮತ್ತು ತರಕಾರಿಗಳು

ಹಣ್ಣು ಮತ್ತು ತರಕಾರಿಗಳು

ಸುಹೂರ್ ನಲ್ಲಿ ಹಸಿಯಾಗಿ ಸೇವಿಸಬಹುದಾದ ತರಕಾರಿಗಳು, ಸೊಪ್ಪುಗಳು ಹಾಗೂ ಹಣ್ಣುಗಳನ್ನು ಕಡ್ಡಾಯವಾಗಿ ಸೇವಿಸಬೇಕು. ಇವುಗಳಲ್ಲಿ ನೀರಿನಂಶ ಹೆಚ್ಚಾಗಿದ್ದು ಕರಗದ ನಾರು ಸಹಾ ಹೆಚ್ಚಿರುತ್ತದೆ. ಅಲ್ಲದೇ ವಿಟಮಿನ್ನುಗಳು, ಕ್ಯಾಲ್ಸಿಯಂ ಹಾಗೂ ಅಗತ್ಯ ಖನಿಜಗಳು ದಿನದ ಉಪವಾಸದ ಅವಧಿಯನ್ನು ಎದುರಿಸಲು ನೆರವಾಗುತ್ತವೆ.

ಅಕ್ಕಿ

ಅಕ್ಕಿ

ಅಕ್ಕಿಯಲ್ಲಿರುವ, ವಿಶೇಷವಾಗಿ ಕುಚ್ಚಿಗೆ ಅಕ್ಕಿಯಲ್ಲಿರುವ ಸಂಯುಕ್ತ ಕಾರ್ಬೋಹೈಡ್ರೇಟುಗಳು ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಇಡಿಯ ದಿನದ ಅಗತ್ಯತೆಯನ್ನು ನಿಧಾನವಾಗಿ ಪೂರೈಸುತ್ತಾ ಹೋಗುತ್ತದೆ. ತನ್ಮೂಲಕ ಸೂರ್ಯಾಸ್ತದವರೆಗೂ ಹಸಿವಾಗದೇ ಇರಲು ಸಾಧ್ಯವಾಗುತ್ತದೆ.

ಕಡಿಮೆ ಕೊಬ್ಬಿನ ಮಾಂಸ

ಕಡಿಮೆ ಕೊಬ್ಬಿನ ಮಾಂಸ

ಸುಹೂರ್ ಹೊತ್ತಿನಲ್ಲಿ ಕೊಂಚ ಪ್ರಮಾಣದಲ್ಲಿ ಕಡಿಮೆ ಕೊಬ್ಬಿನ ಮಾಂಸವನ್ನು ಸೇವಿಸುವುದು ಉತ್ತಮವಾಗಿದೆ. ಇದರಿಂದ ದಿನದ ಹೊತ್ತಿನಲ್ಲಿ ಅಗತ್ಯವಿರುವ ಪ್ರೋಟೀನುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಚರ್ಮರಹಿತ ಕೋಳಿಮಾಂಸ, ಮೀನು, ಸಿಗಡಿ ಮೊದಲಾದವು ಉತ್ತಮ ಅಯ್ಕೆಯಾಗಿವೆ. ಮಾಂಸ ಲಭ್ಯವಿಲ್ಲದಿದ್ದರೆ ಬೀನ್ಸ್, ಮೊಳಕೆ ಬರಿಸಿದ ಹೆಸರು ಕಾಳು, ಹುರುಳಿಕಾಳುಗಳೂ ಈ ಅಗತ್ಯತೆಯನ್ನು ಪೂರೈಸಬಲ್ಲವು. ಇವು ದಿನವಿಡೀ ದೇಹದ ಜೀವರಾಸಾಯನಿಕ ಕ್ರಿಯೆ ಸೂಕ್ತಕ್ರಮದಲ್ಲಿರಲು ನೆರವಾಗುತ್ತವೆ.

ಸೂಪ್ ಗಳು

ಸೂಪ್ ಗಳು

ನಿಮ್ಮ ಸುಹೂರ್ ಅಥವಾ ಇಫ್ತಾರ್ ನ ಊಟಕ್ಕೂ ಮೊದಲು ಕೊಂಚ ಸೂಪ್ ಕುಡಿಯುವುದು ಅತ್ಯುತ್ತಮ ಆಯ್ಕೆಯಾಗಿದೆ. ಇದು ದೇಹಕ್ಕೆ ಹೆಚ್ಚಿನ ಆರ್ದ್ರತೆಯನ್ನು ನೀಡುವುದು ಮಾತ್ರವಲ್ಲ, ದೇಹ ಕಳೆದುಕೊಂಡಿದ್ದ ಶಕ್ತಿಯನ್ನು ಮರುತುಂಬಿಕೊಳ್ಳಲೂ ನೆರವಾಗುತ್ತದೆ.

ನೀರು

ನೀರು

ನಿಮ್ಮ ಸುಹೂರ್ ಅಥವಾ ಇಫ್ತಾರ್ ನ ಊಟಕ್ಕೂ ಮೊದಲು ಒಂದು ದೊಡ್ಡ ಲೋಟ ನೀರು ಕುಡಿಯುವುದು ತುಂಬಾ ಒಳ್ಳೆಯದು. ಇದು ದೇಹಕ್ಕೆ ಅಗತ್ಯವಾದ ಆರ್ದ್ರತೆಯನ್ನು ನೀಡುವುದು ಮಾತ್ರವಲ್ಲ ನೀರಡಿಕೆಯನ್ನು ಇಂಗಿಸಿ ಮೂತ್ರದಲ್ಲಿ ಸೋಂಕು ಉಂಟಾಗದಿರುವಂತೆಯೂ ನೋಡಿಕೊಳ್ಳುತ್ತದೆ.

ಈ ಆಹಾಗಳಿಂದ ದೂರವಿರಿ

ಈ ಆಹಾಗಳಿಂದ ದೂರವಿರಿ

ಸಕ್ಕರೆ ಭರಿತ ಆಹಾರಗಳು

ಈ ಆಹಾರಗಳಲ್ಲಿ ಅಗತ್ಯಕ್ಕೂ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳಿರುತ್ತವೆ ಹಾಗೂ ಕಡಿಮೆ ಪೋಷಕಾಂಶಗಳಿರುತ್ತವೆ. ಆದ್ದರಿಂದ ಸಕ್ಕರೆ ಹೆಚ್ಚಿರುವ ಆಹಾರಗಳನ್ನು ವರ್ಜಿಸುವುದೇ ಉತ್ತಮ. ಸಕ್ಕರೆ ಹಾಕಲೇಬೇಕೆಂದಿದ್ದರೆ ನೈಸರ್ಗಿಕ ಸಕ್ಕರೆ ಅಥವಾ ಬೆಲ್ಲವನ್ನು ಕಡಿಮೆ ಪ್ರಮಾಣದಲ್ಲಿ ಬಳಸಬಹುದು. ಸುಹೂರ್ ನಲ್ಲಿ ಸಕ್ಕರೆಭರಿತ ಆಹಾರವನ್ನು ಸೇವಿಸಲೇಬಾರದು. ಇದರಿಂದ ಮಧ್ಯಾಹ್ನಕ್ಕೇ ಇರುವ ಸಕ್ಕರೆ ಖರ್ಚಾಗಿ ಹಸಿವಾಗತೊಡಗುತ್ತದೆ ಹಾಗೂ ಹೊಟ್ಟೆಯಲ್ಲಿ ವಾಯುತುಂಬಿಕೊಂಡು ವಾಕರಿಕೆಯ ಅನುಭವವಾಗುತ್ತದೆ. ಅಲ್ಲದೇ ನೀರಡಿಯನ್ನೂ ಹೆಚ್ಚಿಸುತ್ತದೆ. ಇಫ್ತಾರ್ ಸಮಯಕ್ಕೆ ಕೊಂಚ ಪ್ರಮಾಣದಲ್ಲಿ ಸಕ್ಕರೆಯನ್ನು ಸೇವಿಸಬಹುದಾದರೂ ಇದರ ಪ್ರಮಾಣ ಎರಡು ಚಮಚಕ್ಕೆ ಮೀರದಿರುವಂತೆ ನೋಡಿಕೊಳ್ಳಬೇಕು.

ಕೆಫೀನ್ ಯುಕ್ತ ಆಹಾರಗಳು

ಕೆಫೀನ್ ಯುಕ್ತ ಆಹಾರಗಳು

ವರ್ಷವಿಡೀ ಟೀ ಕಾಫಿಯನ್ನು ಸೇವಿಸುತ್ತಾ ಬಂದಿರುವ ವ್ಯಕ್ತಿಗಳು ಸುಹೂರ್ ನಲ್ಲಿಯೂ ಕೊಂಚವೇ ಪ್ರಮಾಣದ, ಅಂದರೆ ಕಾಲು ಕಪ್ ನಷ್ಟು ಮಾತ್ರ ಕೆಫೀನ್ ಯುಕ್ತ ಪಾನೀಯಗಳನ್ನು ಸೇವಿಸಬಹುದು. ಏಕೆಂದರೆ ಈ ವ್ಯಕ್ತಿಗಳಿಗೆ ಈ ಪಾನೀಯಗಳನ್ನು ಸೇವಿಸದೇ ಇದ್ದರೆ ಕೆಫೀನ್ ಕೊರತೆಯಿಂದ ದಿನವಿಡೀ ತಲೆಸುತ್ತು, ತಲೆನೋವು ಮೊದಲಾದವು ಆವರಿಸುವ ಸಾಧ್ಯತೆಗಳಿವೆ. ಇನ್ನುಳಿದಂತೆ ಟೀ ಕಾಫಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವವರು ಸುಹೂರ್ ನಲ್ಲಿ ಸೇವಿಸದೇ ಇರುವುದೇ ಉತ್ತಮ. ಆದರೆ ಯಾವುದೇ ಕಾರಣಕ್ಕೂ ಸುಹೂರ್ ನಲ್ಲಿಯೇ ಆಗಲಿ, ಇಫ್ತಾರ್ ನಲ್ಲಿಯೇ ಆಗಲಿ, ಬುರುಗು ಬರುವ ಸೋಡಾ ಅಥವಾ ಸಾಫ್ಟ್ ಡ್ರಿಂಕ್ ಗಳನ್ನು ಸೇವಿಸಕೂಡದು.

ಹುರಿದ ಆಹಾರಗಳು

ಹುರಿದ ಆಹಾರಗಳು

ಸುಹೂರ್ ನಲ್ಲಿ ಹುರಿದ ಆಹಾರಗಳು ಬೇಡವೇ ಬೇಡ. ಇವುಗಳ ಸೇವನೆಯಿಂದ ಕೆಲವೇ ಘಂಟೆಗಳಲ್ಲಿ ತಡೆಯಲಾರದ ಬಾಯಾರಿಕೆಯಾಗಲು ಆರಂಭಿಸುತ್ತದೆ ಹಾಗೂ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳತೊಡಗುತ್ತದೆ. ಆದರೆ ಇಫ್ತಾರ್ ಸಮಯಕ್ಕೆ ಕೊಂಚ ಪ್ರಮಾಣದಲ್ಲಿ ಸೇವಿಸಬಹುದು.

ಉಪ್ಪುಭರಿತ ಹಾಗೂ ಖಾರವಾದ ಆಹಾರಗಳು

ಉಪ್ಪುಭರಿತ ಹಾಗೂ ಖಾರವಾದ ಆಹಾರಗಳು

ಸುಹೂರ್ ನಲ್ಲಿ ತಯಾರಿಸುವ ಯಾವುದೇ ಆಹಾರದಲ್ಲಿ ಉಪ್ಪು ಅತಿ ಕಡಿಮೆ ಇರುವಂತೆ ನೋಡಿಕೊಳ್ಳಿ. ಏಕೆಂದರೆ ಉಪ್ಪು ಹೆಚ್ಚಾದರೆ ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾಗಿ ಇದನ್ನು ಸರಿಪಡಿಸಲು ನೀರಿನ ಅಗತ್ಯತೆಯುಂಟಾಗುತ್ತದೆ. ಆಗ ಹೆಚ್ಚಿನ ಬಾಯಾರಿಕೆ ಆವರಿಸುತ್ತದೆ. ಖಾರವಾದ ಆಹಾರಗಳಲ್ಲಿರುವ ಕ್ಯಾಪ್ಸೈಸಿನ್ ಅಂಶವೂ ಹೆಚ್ಚೂ ಕಡಿಮೆ ಇದೇ ಪರಿಣಾಮವನ್ನುಂಟುಮಾಡುತ್ತದೆ. ಆದ್ದರಿಂದ ಉಪ್ಪಿನಕಾಯಿ, ಉಪ್ಪಿನಲ್ಲಿ ಮುಳುಗಿಸಿಟ್ಟ ಸಾಲಾಡ್ ಮೊದಲಾದವುಗಳನ್ನು ಸುಹೂರ್ ಹೊತ್ತಿಗೆ ಸೇವಿಸಬಾರದು.

English summary

What To Eat and What To Avoid During Suhoor

The holy month of Ramzan is here. This is the month which is considered holy and Muslims across the world observe a month long fasting. Let's learn a bit about the history of fasting during ramzan here. It is not just the time to observe fast but a time for retrospection, self-reflection and connecting to your faith. So if you are planning to observe the fast then we have \listed a few foods that need to be strictly avoided and a few must-have foods for suhoor and iftar.
X
Desktop Bottom Promotion