For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಕ್ಯಾನ್ಸರ್ ರೋಗಕ್ಕೆ ಮದ್ಯಪಾನವೇ ಮೂಲ ಕಾರಣ

By Arshad
|

"ಕೊಡು ತಾಯೆ ವರವ, ಕುಡುಕನಲ್ಲದ ಗಂಡನ" ಇದು ಕರ್ನಾಟಕ ಸರ್ಕಾರ ಸುಮಾರು ಎಂಭತ್ತರ ದಶಕದಲ್ಲಿ ಮದ್ಯಪಾನದ ವಿರುದ್ಧ ಜನಜಾಗೃತಿಯುಂಟುಮಾಡಲು ಉಪಯೋಗಿಸುತ್ತಿದ್ದ ವಾಕ್ಯ. ಅಂದು ಪ್ರತಿ ಊರಿನ ಗೋಡೆಗಳಲ್ಲೆಲ್ಲಾ ಈ ವಾಕ್ಯ ರಾರಾಜಿಸುತ್ತಿತ್ತು. ಆದರೆ ಮದ್ಯಪಾನಕ್ಕೆ ವ್ಯಸನರಾದವರು ತಾಯಿಗೆ ವರ ನೀಡಲು ಅವಕಾಶವನ್ನೇ ನೀಡಲಿಲ್ಲ.

ಆದರೆ ಇಂದು ಅರವತ್ತು ದಾಟಿದ ವೃದ್ಧರಲ್ಲಿ ಅಂದಿನಮದ್ಯಪಾನದ ಪರಿಣಾಮ ಕ್ಯಾನ್ಯರ್ ರೂಪದಲ್ಲಿ ಹೊರಬರುತ್ತಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಮದ್ಯಪಾನದ ಆರೋಗ್ಯದ ಮೇಲಿನ ದುಷ್ಪರಿಣಾಮಕ್ಕಿಂತಲೂ ಇದರ ಅಮಲಿನಿಂದ ಪರೋಕ್ಷವಾಗಿ ಆಗುವ ಹಾನಿಗಳೇ ಅತ್ಯಂತ ಹೆಚ್ಚು. ಅದರಲ್ಲೂ ಮದ್ಯದ ಅಮಲಿನಲ್ಲಿ ಅಪಘಾತ ಎಸಗಿ ಅಮಾಯಕ, ಮುಗ್ಧ ಹಾಗೂ ಮಕ್ಕಳ ಪ್ರಾಣವನ್ನು ಬಲಿ ತೆಗೆದುಕೊಂಡ ಪ್ರಕರಣಗಳು ಲಕ್ಷಾಂತರ ಇವೆ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

ಮದ್ಯಪಾನ ಕೆಟ್ಟದ್ದು, ಆರೋಗ್ಯಕ್ಕೆ ಮಾರಕ ಎಂಬ ಅರಿವು ಕುಡಿಯುವವನಿಗೆ ಸ್ಪಷ್ಟವಾಗಿಯೇ, ಚೆನ್ನಾಗಿಯೇ ತಿಳಿದಿರುತ್ತದೆ. ಎಲ್ಲಿಯವರೆಗೆ ವೈದ್ಯರು 'ಇನ್ನೊಂದು ತೊಟ್ಟು ಕುಡಿದರೂ ನೀನು ಸಾಯುತ್ತೀಯಾ' ಎಂಬ ಕಟ್ಟಪ್ಪಣೆ ದೊರಕುವವರೆಗೂ ಇವರ ಕುಡಿತ ಮುಂದುವರೆಯುತ್ತದೆ. ಇದಕ್ಕೆ ವ್ಯಸನಿಯ ಮೆದುಳಿನಲ್ಲಿ ಉತ್ಪನ್ನವಾಗಿರುವ THIQUE ಎಂಬ ರಾಸಾಯನಿಕವೇ ಕಾರಣ. ವಿಷ ಎಷ್ಟು ಕಡಿಮೆ ಪ್ರಮಾಣದಲ್ಲಿದ್ದರೂ ವಿಷವೇ.

ಅಂತೆಯೇ ಮದ್ಯವೂ ಸಹಾ. ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುವ ಬಿಯರ್ ಕುಡಿದರೆ ತೊಂದರೆ ಇಲ್ಲ ಎಂದು ಯುವಜನಾಂಗ ತಿಳಿದುಕೊಂಡಿದೆ. ವೈನ್, ವಿಸ್ಕಿ ಮೊದಲಾದವುಗಳಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಿದ್ದು ಇದೇ ತಮಗೆ ಬೇಕಾಗಿರುವುದು ಎಂದು ಉಳಿದವರು ಅಭಿಪ್ರಾಯಪಡುತ್ತಾರೆ.

ಆದರೆ ಚಿಕ್ಕ ಬ್ಲೇಡಿನಿಂದ ಗಾಯ ಮಾಡಿಕೊಂಡರೂ, ದೊಡ್ಡ ತಲವಾರಿನಿಂದ ಗಾಯ ಮಾಡಿಕೊಂಡರೂ ನಷ್ಟ ನಮಗೇ ಎಂಬ ಸತ್ಯ ಎಲ್ಲಿಯವರೆಗೆ ಮದ್ಯಪಾನಿಗಳಿಗೆ ಸ್ಪಷ್ಟವಾಗುವುದಿಲ್ಲವೋ ಅಲ್ಲಿಯವರೆಗೂ ಇವರಿಗೆ ಮದ್ಯಪಾನದ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳು ಎದುರಾಗುತ್ತಲೇ ಇರುತ್ತವೆ. ಮದ್ಯಪಾನ ಬಿಟ್ಟ ಬಳಿಕ, ಆರೋಗ್ಯ ಹೇಗಿರುತ್ತೆ ನೋಡಿ....

ಇಂದು ಕ್ಯಾನ್ಸರ್‌ಗೆ ತುತ್ತಾದವರ ಮದ್ಯಪಾನದ ಇತಿಹಾಸವನ್ನು ಗಮನಿಸಿದರೆ ಕೇವಲ ಅಲ್ಪ ಪ್ರಮಾಣದಲ್ಲಿ, ಆಗಾಗ ಬಿಯರ್ ಮಾತ್ರ ಕುಡಿಯುತ್ತಿದ್ದವರಿಗೂ ಗಂಭೀರ ರೂಪದಲ್ಲಿ ಕ್ಯಾನ್ಸರ್ ಆವರಿಸಿರುವುದು ಖಚಿತವಾಗಿದೆ. ಆದ್ದರಿಂದ ಮದ್ಯಪಾನದ ವಿಷಯದಲ್ಲಿ ಸುರಕ್ಷಿತ ಪ್ರಮಾಣ ಎಂಬುದೇ ಇಲ್ಲ. ಒಂದು ತೊಟ್ಟೇ ಆದರೂ ಅದು ಮುಂದೆಂದೋ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಸಂಶೋಧನೆಗಳು ಸ್ಪಷ್ಟಪಡಿಸಿವೆ.

ನಿಯಮಿತ ಮದ್ಯಪಾನಿಗಳು ಅಥವಾ ವ್ಯಸನಿಗಳಿಗೆ ಕ್ಯಾನ್ಸರ್ ಆವರಿಸುವ ಮುನ್ನವೇ ಯಕೃತ್ ಸಹಿತ ಇತರ ಅಂಗಗಳು ಹಾಳಾಗುವುದರಿಂದ ಕ್ಯಾನ್ಸರ್‌ಗಿಂತಲೂ ಮುನ್ನವೇ ಅಂಗವೈಫಲ್ಯದಿಂದ ಇವರಿಗೆ ಸಾವು ಎದುರಾಗುತ್ತದೆ. ಆಗಾಗ ಸೇವಿಸುವವರಲ್ಲಿಯೇ ಕೆಲವು ಬಗೆಯ ಕ್ಯಾನ್ಸರ್ ಎದುರಾಗಿ ಸಾವಿಗೆ ಕಾರಣವಾಗಿರುವ ಗಾಬರಿಪಡಿಸುವ ಅಂಶವನ್ನು ಇಂದು ಸಂಶೋಧನೆಗಳು ದೃಢಪಡಿಸಿವೆ. ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡ ತಜ್ಞರ ಪ್ರಕಾರ ಆಗಾಗ ಮದ್ಯ ಸೇವಿಸುವವರಲ್ಲಿ ಕೆಲವು ಬಗೆಯ ಕ್ಯಾನ್ಸರ್ ಸಾಮಾನ್ಯವಾಗಿದ್ದು ಸಾವಿನತ್ತ ದೂಡುತ್ತಿದೆ.

ಅಷ್ಟಕ್ಕೂ ಮದ್ಯಪಾನದ ಕೆಡುಕುಗಳ ಅರಿವಿದ್ದೂ ಮತ್ತಷ್ಟು ಹೆಚ್ಚು ಕುಡಿಯಲು ವ್ಯಸನಿಗಳು ಮುಂದಾಗುವುದೇಕೆ? ಇದಕ್ಕೆ ಪ್ರಮುಖ ಕಾರಣ ಸ್ಪಷ್ಟವಾಗಿಲ್ಲ. ಇನ್ನೊಬ್ಬರೊಂದಿಗೆ ಹೋಲಿಕೆ, ಕುಡಿಯದೇ ಮಾನಸಿಕ ಅಥವಾ ದೈಹಿಕ ನೋವು ಕಡಿಮೆಯಾಗುವುದಿಲ್ಲ, ಚಿಂತೆ ಮರೆಯಲು ಸಾಧ್ಯ ಎಂಬ ನಂಬಿಕೆ ಪ್ರಮುಖವಾಗಿವೆ. ಮದ್ಯಪಾನ ಜಠರ ಸೇರಿದ ಬಳಿಕ ಜಠರ ರಸದೊಡನೆ ಸಂಯುಕ್ತಗೊಂಡು ಆಲ್ಕೋಹಾಲ್

ಅಸಿಟಾಲ್ಡಿಹೈಡ್ ಎಂಬ ಕಾರ್ಸಿನೋಜನ್ ಅಥವಾ ಕ್ಯಾನ್ಸರ್ ಕಾರಕ ಕಣವಾಗಿ ಮಾರ್ಪಾಡಾಗುತ್ತದೆ. ಈ ರಾಸಾಯನ ನೇರವಾಗಿ ರಕ್ತಕ್ಕೆ ಬೆರೆತು ನಮ್ಮ ದೇಹದ ಪ್ರೋಟೀನುಗಳು ಹಾಗೂ ಜೀವಕೋಶಗಳ ಡಿಎನ್ ಎ ರಚನೆಯನ್ನೇ ಬದಲಿಸಿಬಿಡುವಷ್ಟು ಪ್ರಬಲವಾಗಿದೆ.

ಇದರಿಂದ ನಮ್ಮ ದೇಹ ಪ್ರೋಟೀನು ಮತ್ತು ವಿಟಮಿನ್ ಎ, ಬಿ ಕಾಂಪ್ಲೆಕ್ಸ್, ಸಿ, ಡಿ, ಇ, ಫೋಲಿಕ್ ಆಮ್ಲ, ಕ್ಯಾರೋಟಿನಾಯ್ಡ್ ಮೊದಲಾದ ಅತ್ಯಗತ್ಯ ಪೋಷಕಾಂಶಗಳು ಪಡೆಯದಂತೆ ಮತ್ತು ಯಾವುದಾದರೊಂದು ಬಗೆಯ ಜೀವಕೋಶಗಳು ನಿಯಂತ್ರಣವಿಲ್ಲದೇ ಬೆಳೆಯಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಆದರೆ ಇ ಪ್ರಕ್ರಿಯೆ ಅತಿ ನಿಧಾನವಾಗಿ ಆಗುವುದರಿಂದ ಕ್ಯಾನ್ಸರ್ ಆವರಿಸಿರುವ ವಿಷಯ ಮದ್ಯಪಾನಿಗೆ ತಿಳಿಯುವ ವೇಳೆಗೆ ಅತಿ ತಡವಾಗಿರುತ್ತದೆ. ಮದ್ಯಪಾನ ಸೇವಿಸುವವರ ಅತಿ ವಿಶಿಷ್ಟ ರಹಸ್ಯಗಳು!

ಮದ್ಯಪಾನದಿಂದ ಕ್ಯಾನ್ಸರ್ ಆವರಿಸುವ ಪ್ರಮುಖವಾದ ಏಳು ಅಂಗಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಅವೆಂದರೆ ಅನ್ನನಾಳ, ಗಂಟಲಪೆಟ್ಟಿಗೆ, ಬಾಯಿ, ಗಂಟಲ ಮೇಲ್ಭಾಗ, ಸ್ತನ, ಕರುಳು ಮತ್ತು ಯಕೃತ್. ಇದರಲ್ಲಿ ಬಾಯಿಯ ಕ್ಯಾನ್ಸರ್ ಇತರರಿಗಿಂತಲೂ ಮದ್ಯಪಾನಿಗಳಿಗೆ ಆವರಿಸುವ ಸಾಧ್ಯತೆ ಆರು ಪಟ್ಟು ಅಧಿಕ ಎಂಬುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ.

ಪ್ರತಿದಿನ ಎರಡರಿಂದ ಐದು ಲೋಟ ಆಲ್ಕೋಹಾಲ್ ಇರುವ ಪೇಯಗಳನ್ನು ಕುಡಿಯುವ ಅಭ್ಯಾಸವಿರುವ ಮಹಿಳೆಯರಿಗೆ ಸ್ತನದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಪ್ರತಿದಿನ ಒಂದು ಅಥವಾ ಅದಕ್ಕಿಂತ ಕಡಿಮೆ ಸೇವಿಸುವ ಮಹಿಳೆಯರಿಗಿಂತ ಹೆಚ್ಚು ಇರುತ್ತದೆ. ಮದ್ಯಪಾನದ ಅಭ್ಯಾಸವಿರದ ಮಹಿಳೆಯರಿಗೆ ಕಡಿಮೆ ಇರುತ್ತದೆ ಎಂದು ಕಂಡುಕೊಳ್ಳಲಾಗಿದೆ.

ಅತಿ ಹೆಚ್ಚು ಮದ್ಯಪಾನದ ಅಭ್ಯಾಸವಿರುವವರಲ್ಲಿ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್ ಸಾಧ್ಯತೆ ಅಧಿಕವಾಗಿರುತ್ತದೆ. ಯಕೃತ್ ಅನ್ನೇ ಹಾಳುಗೆಡವುವ ಸಿರ್ರೋಸಿಸ್ (cirrhosis) ಎಂಬ ಕಾಯಿಲೆಗೂ ಅತಿ ಮದ್ಯಪಾನವೇ ಮೂಲವಾಗಿದೆ. ಈ ಕಾಯಿಲೆಗೆ ತುತ್ತಾದ ಯಕೃತ್ ಸುಲಭವಾಗಿ ಕ್ಯಾನ್ಸರ್‌ಗೂ ತುತ್ತಾಗುತ್ತದೆ. ಆಗ ಯಕೃತ್ ಅನ್ನು ದಾನಿಯಿಂದ ಪಡೆದು ಬದಲಿಸದೇ ಅನ್ಯಮಾರ್ಗವೇ ಇಲ್ಲ.

English summary

Drinking alcohol can Cause Certain Cancers

According to new recommendations on alcohol use, drinking any amount of alcohol is linked to distinct cancers. The more alcohol an individual drinks, the higher her or his risk of suffering from an alcohol linked cancer. The kind of alcohol one drinks, be it beer, wine or whiskey, does not appear to make any distinction as there is no safe limit for alcohol with regards to cancer.
X