For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

By Arshad
|

ನಮ್ಮ ಮೂಗಿನ ಮೂಳೆ ಮೃದುವಾಗಿದ್ದು ಈ ಮೂಳೆಯ ಹಿಂದೆ, ಎರಡೂ ಕಣ್ಣುಗಳ ನಡುವೆ ಮತ್ತು ಹಣೆಭಾಗದ ಕೊಂಚ ಅಡಿಯಲ್ಲಿ (ಅಂದರೆ ಹುಬ್ಬು ಪ್ರಾರಂಭವಾಗುವ ಕೆಳಗೆ) ಟೊಳ್ಳು ಭಾಗವೊಂದಿದೆ. ಇದೇ ಕುಹರ ಅಥವಾ ಸೈನಸ್. ಈ ಟೊಳ್ಳಿನಲ್ಲಿ ಸೋಂಕು ಉಂಟಾದರೆ ಇದರ ಅಕ್ಕಪಕ್ಕ ಹಾದು ಹೋಗುವ ನರಗಳಲ್ಲಿ ಭಾರೀ ಸಂವೇದನೆಯುಂಟಾಗಿ ತಲೆನೋವು, ಮುಖದ ಸ್ನಾಯುಗಳಲ್ಲಿ ನೋವು, ಮೂಗಿನ ಒಳಗಿನಿಂದ ಗಂಟಲವರೆಗೆ ಭಾರೀ ಉರಿ, ನೋವು, ವಾಕರಿಕೆ ಮೊದಲಾದವು ಎದುರಾಗುತ್ತವೆ. ಸೈನಸ್ ಸಮಸ್ಯೆಯ ಕಿರಿಕಿರಿ, ಇದಕ್ಕೆಲ್ಲಾ ಮನೆಮದ್ದೇ ಸರಿ

ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್‌ಗೂ ಈ ಸೈನಸ್‌ನಲ್ಲಿ ಸೋಂಕಿಗೂ ನಿಕಟ ಸಂಬಂಧವಿದೆ. ನಮ್ಮ ಮುಖದ ಮೂಳೆಗಳಲ್ಲಿ ಈ ಕುಹರದ ಹೊರತಾಗಿ ಮೂಗಿನ ಅಕ್ಕಪಕ್ಕ, ಕಿವಿಯ ಮುಂದಿನ ಹಣೆಯ ಭಾಗ ಮತ್ತು ಕೆನ್ನೆಯ ನಡುವೆಯೂ ತೆಳುವಾಗಿ ಟೊಳ್ಳು ಭಾಗಗಳಿವೆ. ಇಲ್ಲಿಯೂ ಸೋಂಕು ಆವರಿಸಬಹುದು.

Ayurvedic Remedies To Cure Sinus

ಆದರೆ ಹಣೆಯ ನಡುವಣ ಕುಹರ ಅತಿ ದೊಡ್ಡದಾಗಿದ್ದು ಬಹುತೇಕ ಸೋಂಕು ಮತ್ತು ನೋವಿಗೆ ಪ್ರಮುಖ ಕಾರಣವಾಗಿದೆ. ಈ ನೋವಿಗೆ ಸೈನುಸೈಟಿಸ್ ಎಂದು ಕರೆಯುತ್ತಾರೆ. ಮೂಗು ಕಟ್ಟುವುದು, ಮೂತಿ ಅತಿಯಾಗಿ ಸೋರುವುದು, ಉಸಿರಾಡಲು ಕಷ್ಟವಾಗುವುದು ಮೊದಲಾದವು ಇದರ ಲಕ್ಷಣವಾಗಿವೆ.

ವೈರಸ್ ಸೋಂಕಿನಿಂದ ಮೂಗು ಕಟ್ಟುವುದು ಸೈನುಸೈಟಿಸ್‌ಗೆ ಪ್ರಮುಖ ಕಾರಣವಾಗಿದೆ. ಬನ್ನಿ ಸೈನಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಾಗೂ ಆಯುರ್ವೇದ ಇದರ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ನೋಡೋಣ: ಸೈನಸ್ ಗುಣಪಡಿಸುವ ಆಹಾರಗಳಿವು

ಇದಕ್ಕೆ ಆಯುರ್ವೇದ ಏನು ಹೇಳುತ್ತದೆ?
ಆಯುರ್ವೇದದ ಪ್ರಕಾರ ನಮ್ಮ ದೇಹದ ದೋಷಗಳಲ್ಲಿ ಆಗಿರುವ ಏರುಪೇರು ಹಲವು ರೋಗಗಳಿಗೆ ಕಾರಣವಾಗಬಹುದು, ಇದರಲ್ಲಿ ಸೈನಸ್ ಸಹಾ ಒಂದು ಎನ್ನುತ್ತದೆ. ನಮ್ಮ ದೇಹದಲ್ಲಿ ಸಂಗ್ರಹವಾಗುವ ವಿಷಕಾರಿ ವಸ್ತುಗಳಾದ 'ಆಮ'ದ ಸಂಗ್ರಹದಿಂದಾಗಿ ನಮ್ಮ ಜೀರ್ಣಕ್ರಿಯೆ ಶಿಥಿಲಗೊಳ್ಳುತ್ತದೆ, ಅಲ್ಲದೇ ರೋಗ ನಿರೋಧಕ ಶಕ್ತಿಯೂ ಕುಂದುತ್ತದೆ. ಇದರಿಂದ ದೇಹದ ಸಮತೋಲನ ಏರುಪೇರಾಗುತ್ತದೆ.

ಆಯುರ್ವೇದ ಸೈನಸ್ ಗೆ ಯಾವ ಚಿಕಿತ್ಸೆ ಸೂಚಿಸುತ್ತದೆ?
ಹಲವು ಗಿಡಮೂಲಿಕೆ ಮತ್ತು ಇತರ ರೂಪದ ಚಿಕಿತ್ಸೆಯ ಜೊತೆಗೇ ನಮ್ಮ ನಿತ್ಯದ ಆಹಾರ ಮತ್ತು ಜೀವನದ ಅಭ್ಯಾಸಗಳನ್ನೂ ಬದಲಾವಣೆ ಮಾಡಿಕೊಳ್ಳಲು ಆಯುರ್ವೇದ ಸಲಹೆ ಮಾಡುತ್ತದೆ. ವಿಶೇಷವಾಗಿ ಜೀರ್ಣಕ್ರಿಯೆಗೆ ಕಷ್ಟವಾಗುವ ಆಹಾರಗಳನ್ನು ವರ್ಜಿಸುವುದು ಮತ್ತು ಒತ್ತಡ ರಹಿತ ಜೀವನ ಕಳೆಯುವಂತೆ ತಿಳಿಸಲಾಗಿದೆ.

ಸಿದ್ಧ ಆಹಾರಗಳಾದ ಬಿಸ್ಕತ್ತು, ಬ್ರೆಡ್, ಮಾದಕ ಪದಾರ್ಥಗಳಾದ ಆಲ್ಕೋಹಾಲ್, ಸಿಗರೇಟು, ಕಾಫಿ, ನಾರು ಇಲ್ಲದ ಆಹಾರಗಳಾದ ಬಿಳಿಯ ಹಿಟ್ಟು ಅಥವಾ ಮೈದಾ, ಬುರುಗು ಬರುವ ಪಾನೀಯಗಳು ಮೊದಲಾದವುಗಳನ್ನು ವರ್ಜಿಸುವಂತೆ ಸಲಹೆ ಮಾಡಲಾಗಿದೆ. ಇದರಿಂದ ಈಗಿರುವ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಆಯುರ್ವೇದ ಇದಕ್ಕೆ ಯಾವ ರೀತಿಯ ಆಹಾರ ಮತ್ತು ಔಷಧಿಗಳನ್ನು ಸೂಚಿಸುತ್ತದೆ? ಸೈನಸ್ ಸಮಸ್ಯೆಗೆ ಪರಿಣಾಮಕಾರಿಯಾದ ಮನೆಮದ್ದು

ತುಳಸಿ ಟೀ
ತುಳಸಿ ಒಂದು ಅದ್ಭುತ ಔಷಧೀಯ ಮೂಲಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯನ್ನು ಅತಿ ಪವಿತ್ರ ಎಂದು ಭಾವಿಸಲಾಗುತ್ತದೆ. ಇದರ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳು ಸೈನಸ್‪ನಂತಹ ಉರಿಯೂತ ಸಂಬಂಧಿತ ತೊಂದರೆಗಳನ್ನು ನಿವಾರಿಸಲು ನೆರವಾಗುತ್ತದೆ.

ಇದರ ಬಳಕೆ ಹೇಗೆ?
ಕೆಲವು ತುಳಸಿ ಎಲೆಗಳು, ಸುಮಾರು ಏಳೆಂಟು ಕಾಳುಮೆಣಸು ಮತ್ತು ಹಸಿಶುಂಠಿಯ ಒಂದು ಚಿಕ್ಕ ತುಂಡನ್ನು ಸೇರಿಸಿ ಜಜ್ಜಿ ಎರಡು ಕಪ್ ನೀರಿಗೆ ಹಾಕಿ ಕುದಿಸಿ. ಚಿಕ್ಕ ಉರಿಯಲ್ಲಿ ಈ ನೀರು ಆವಿಯಾಗುತ್ತಾ ಒಂದು ಕಪ್ ಮಟ್ಟಕ್ಕೆ ಬಂದ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ತಣಿದ ಬಳಿಕ ಈ ನೀರನ್ನು ಸೋಸಿ ರೋಗಿಗೆ ದಿನಕ್ಕೆ ಎರಡು ಬಾರಿ ಕುಡಿಯಲು ನೀಡಿ. ಸೈನಸ್ ಕಡಿಮೆಯಾಗುತ್ತಾ ಬಂದಂತೆ ದಿನಕ್ಕೊಂದು ಕಪ್ ನೀಡಿ ಪೂರ್ಣವಾಗಿ ಗುಣವಾದ ಬಳಿಕವೂ ಒಂದೆರಡು ದಿನ ಮುಂದುವರೆಸಿ.

ಜೀರಿಗೆ
ಸಾಮಾನ್ಯವಾಗಿ ಭಾರತೀಯ ಮಸಾಲೆಗಳಲ್ಲಿ ಜೀರಿಗೆ ಇಲ್ಲದ ಮಸಾಲೆಯೇ ಇಲ್ಲ. ಇದರಲ್ಲಿರುವ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳನ್ನು ಆಯುರ್ವೇದ ಸೈನಸ್ ಸಹಿತ ಇತರ ಹಲವಾರು ತೊಂದರೆಗಳಿಗೆ ಔಷಧಿಯ ರೂಪದಲ್ಲಿ ಬಳಸುತ್ತಾ ಬಂದಿದೆ.

ಇದರ ಬಳಕೆ ಹೇಗೆ?
ಒಂದು ದೊಡ್ಡ ಚಮಚ ಜೀರಿಗೆಯನ್ನು ಚಿಕ್ಕ ಉರಿಯಲ್ಲಿ ಕೊಂಚವೇ ಹುರಿಯಿರಿ, ಸುಡಬಾರದು. ಬಳಿಕ ಇದನ್ನು ನುಣ್ಣಗೆ ಒಣದಾಗಿ ಪುಡಿಮಾಡಿ. ಈ ಪುಡಿಯನ್ನು ಒಂದು ದೊಡ್ಡಚಮಚ ಜೇನಿನಲ್ಲಿ ಬೆರೆಸಿ ಪ್ರತಿದಿನ ಕೊಂಚ ಪ್ರಮಾಣವನ್ನು ದಿನಕ್ಕೆರಡು ಬಾರಿ ಸೇವಿಸಿ. ಸೋಂಕು ಕಡಿಮೆಯಾದ ಬಳಿಕವೂ ಕೆಲದಿನಗಳ ಕಾಲ ದಿನಕ್ಕೊಂದು ಬಾರಿ ಮುಂದುವರೆಸಿ.

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿರುವ ಕಮಟು ವಾಸನೆಗೆ ಇದಲ್ಲಿರುವ ಗಂಧಕವೇ ಕಾರಣ. ಗಂಧಕ ಮತ್ತು ವಿಟಮಿನ್ ಸಿ ಸೈನಸ್ ನ ಸೋಂಕನ್ನು ನಿವಾರಿಸಲು ಸಮರ್ಥವಾಗಿವೆ. ಇದರ ಶಿಲೀಂಧ್ರನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳು ಕಟ್ಟಿಕೊಂಡಿರುವ ಮೂಗನ್ನು ತೆರೆದು ಮೂಗಿನ ಅಡಿಯಲ್ಲಿ ಆವರಿಸಿದ್ದ ಸೋಂಕನ್ನು ನಿವಾರಿಸಲು ಸಮರ್ಥವಾಗಿವೆ. ತನ್ಮೂಲಕ ಸೈನಸ್ ತೊಂದರೆಯನ್ನು ಇಲ್ಲವಾಗಿಸುತ್ತವೆ.

ಇದರ ಬಳಕೆ ಹೇಗೆ?
ಅತಿ ಉತ್ತಮವಾದ ವಿಧಾನವೆಂದರೆ ಕೆಲವು ಬೆಳ್ಳುಳ್ಳಿಯ ಎಸಳುಗಳನ್ನು ಹಸಿಯಾಗಿಯೇ ತಿನ್ನುವುದು. ಇದರ ಕಮಟು ರುಚಿಯಿಂದಾಗಿ ಇದು ಸಾಧ್ಯವಾಗದಿದ್ದಲ್ಲಿ ಅನ್ನದೊಡನೆ ಬೆರೆಸಿಕೊಂಡು ನಿತ್ಯ ರಾತ್ರಿ ಮೂರರಿಂದ ನಾಲ್ಕು ಹಸಿ ಎಸಳುಗಳನ್ನು ತಿನ್ನಬೇಕು. ಇಲ್ಲದಿದ್ದರೆ ಬೆಳ್ಳುಳ್ಳಿಯನ್ನು ಜಜ್ಜಿ ಸಮಪ್ರಮಾಣದಲ್ಲಿ ಜೇನಿನೊಡನೆ ಬೆರೆಸಿ ದಿನಕ್ಕೆರಡು ಬಾರಿ ಕೊಂಚ ಪ್ರಮಾಣವನ್ನೂ ಸೇವಿಸಬಹುದು.

ಈರುಳ್ಳಿ
ಈರುಳ್ಳಿಯಲ್ಲಿಯೂ ಉತ್ತಮ ಪ್ರಮಾಣದ ಗಂಧಕವಿದೆ. ಈರುಳ್ಳಿಯಲ್ಲಿಯೂ ಉತ್ತಮ ಬ್ಯಾಕ್ಟೀರಿಯಾ ನಿರೋಧಕ ಗುಣವಿದ್ದು ವಿಶೇಷವಾಗಿ ಮೂಗಿನ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ.

ಇದರ ಬಳಕೆ ಹೇಗೆ?
ಒಂದು ಚಿಕ್ಕ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಇದರ ವಾಸನೆಯನ್ನು ತಕ್ಷಣ ಮೂಗಿನಿಂದ ಎಳೆದುಕೊಳ್ಳಬೇಕು. ಕಣ್ಣುಗಳಲ್ಲಿ ನೀರು ಬರುವ ಕಾರಣ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು. ಕೊಂಚ ಹೊತ್ತು ಮೂಗಿನಿಂದ ಈ ವಾಸನೆಯನ್ನು ಎಳೆದುಕೊಂಡ ಬಳಿಕ ಹೊರಗಿನ ತಾಜಾ ಹವೆಯನ್ನು ಸೇವಿಸಬೇಕು.

ಮೇಲಿನ ವಿಧಾನಗಳ ಹೊರತಾಗಿ ಉಸಿರಾಟವನ್ನು ಸರಾಗಗೊಳಿಸುವ ಪ್ರಾಣಾಯಾಮ, ಕಪಾಲಭಾಟಿ, ಚಕ್ರಾಸನ, ಭುಜಂಗಾಸನ, ಸರ್ವಾಂಗಾಸನ, ಮತ್ಸ್ಯಾಸನ ಮತ್ತು ಧ್ಯಾನವನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ರೋಗಗಳನ್ನು ಎದುರಿಸಲು ಹೆಚ್ಚು ಸನ್ನದ್ಧಗೊಳ್ಳುತ್ತದೆ.

English summary

Ayurvedic Remedies To Cure Sinus

If you are suffering from nose congestion or experiencing a headache with facial pain, then the chances are you might be suffering from Sinusitis. A sore throat, runny nose, congestion in the nose, headache and difficulty in breathing could be some of the reasons behind it.
X
Desktop Bottom Promotion