For Quick Alerts
ALLOW NOTIFICATIONS  
For Daily Alerts

ಯಮಯಾತನೆ ನೀಡುವ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರವೇನು?

By Super Admin
|

ಕ್ರಿಕೆಟ್ ನೋಡಲೆಂದು ಕಳ್ಳನೆಪ ನೀಡುವ ಹೊಟ್ಟೆನೋವಿನ ಹೊರತಾಗಿ ಮೂರು ವಿಧದ ನೋವುಗಳಿವೆ. ಮೊದಲನೆಯದು ತಾತ್ಕಾಲಿಕವಾದುದು ಅಂದರೆ ಯಾವುದೋ ಅಗ್ಗದ ಅಥವಾ ಹಾಳಾದ, ಕ್ರಿಮಿಗಳಿಂದ ಕೂಡಿದ ಆಹಾರ ಹೊಟ್ಟೆ ಸೇರಿದರೆ ಹೊಟ್ಟೆ ನೋವಾಗುವುದು. ಇದು ವಾಂತಿಯ ಅಥವಾ ಅತಿಸಾರದ ಬಳಿಕ ಅಥವಾ ಸೂಕ್ತ ಔಷಧಿಗಳನ್ನು ಸೇವಿಸಿದ ಬಳಿಕ ಕೆಲ ಗಂಟೆಗಳಲ್ಲಿ ಕಡಿಮೆಯಾಗುತ್ತದೆ.

ಇದಕ್ಕೆ ಆಹಾರದ ಅಲರ್ಜಿ, ಹುಳಿತೇಗು, ವಾಯುಪ್ರಕೋಪ, ಅಜೀರ್ಣ, ಆಹಾರದೊಂದಿಗೆ ಲೋಹಪದಾರ್ಥಗಳು ಜಠರಕ್ಕೆ ಆಗಮಿಸುವುದು ಮೊದಲಾದ ಕಾರಣಗಳಿವೆ. ಎರಡನೆಯ ಬಗೆಯ ಹೊಟ್ಟೆನೋವಿಗೆ ಜಠರ ಮತ್ತು ಜೀರ್ಣಾಂಗಳೊಳಗೆ ಸೋಂಕು, ಹುಣ್ಣು, ಕರುಳುನಾಳ ರೋಗ (appendicitis), ಪಿತ್ತಕೋಶದಲ್ಲಿ ಕಲ್ಲು, ಮೂತ್ರಪಿಂಡಗಳಲ್ಲಿ ಕಲ್ಲು ಮೊದಲಾದ ಕಾರಣಗಳಿರಬಹುದು.

ಈ ನೋವು ದೀರ್ಘಕಾಲದ್ದಾಗಿದ್ದು ಸೂಕ್ತ ಔಷಧಿಗಳನ್ನು ವೈದ್ಯರ ಪರೀಕ್ಷೆ ಮತ್ತು ಸಲಹೆ ಮೇರೆಗೆ ನಿಗದಿತ ಅವಧಿಯವರೆಗೆ ಸೇವಿಸಬೇಕಾಗುತ್ತದೆ. ಆಹಾರದಲ್ಲಿಯೂ ಕೊಂಚ ಪಥ್ಯ ಅನುಸರಿಸಬೇಕಾಗುತ್ತದೆ. ಹೊಟ್ಟೆನೋವು ಯಾವ ಕಾರಣದಿಂದ ಬಂದಿದೆ ಎಂಬ ಮಾಹಿತಿಯನ್ನು ಪಡೆದರೆ ಸೂಕ್ತ ಚಿಕಿತ್ಸೆಗೆ ಅನುಕೂಲವಾಗುತ್ತದೆ. ಹೊಟ್ಟೆ ನೋವು, ಅಜೀರ್ಣಕ್ಕೆ ಇಲ್ಲಿದೆ ಮನೆಮದ್ದು

ಮೂರನೆಯ ಬಗೆಯ ಹೊಟ್ಟೆನೋವಿಗೆ ಬೇರೆ ಅಂಗಗಳಲ್ಲಿ ಆಗಿರುವ ತೊಂದರೆಯ ಪಾರ್ಶ್ವ ಪರಿಣಾಮವಾಗಿದೆ. ಜ್ವರ, ವಾಂತಿ, ಸುಸ್ತು, ಹೊಟ್ಟೆಯುಬ್ಬರ ಮೊದಲಾದವು ಶರೀರದೊಳಗಣ ಯಾವುದೋ ಒಂದು ಅಂಗ ರೋಗಪೀಡಿತವಾಗಿರುವುದರ ಸಂಕೇತಗಳಾಗಿವೆ. ಪರಿಣಾಮವಾಗಿ ಹೊಟ್ಟೆಯಲ್ಲಿ ನೋವು ಸಹಾ ಕಾಣಿಸಿಕೊಳ್ಳುತ್ತದೆ. ಈ ನೋವಿ ಸಹಾ ದೀರ್ಘಕಾಲ ಬಾಧಿಸುವಂತಹದ್ದಾಗಿದ್ದು ವೈದ್ಯಕೀಯ ಪರೀಕ್ಷೆ ಮತ್ತು ವೈದ್ಯರು ಸೂಚಿಸುವ ಔಷಧಿಗಳ ಮೂಲಕ ಮಾತ್ರ ಚಿಕಿತ್ಸೆ ಪಡೆಯಬೇಕು. ಜೀರ್ಣಕ್ರಿಯೆ ಸಮಸ್ಯೆಯನ್ನು ಮನೆಮದ್ದು ಮೂಲಕ ಬಗೆಹರಿಸಿಕೊಳ್ಳಿ!

ಒಂದು ವೇಳೆ ನಿಮ್ಮ ಹೊಟ್ಟೆನೋವು ಮೊದಲ ಬಗೆಯದ್ದಾಗಿದ್ದರೆ, ಇದಕ್ಕಾಗಿ ಹಲವು ಮನೆಮದ್ದುಗಳು ಲಭ್ಯವಿವೆ. ಆದರೆ ಹೊಟ್ಟೆನೋವು ಪ್ರಾರಂಭವಾಗುತ್ತಿದ್ದಂತೆಯೇ ಈ ಮದ್ದುಗಳನ್ನು ಅನುಸರಿಸುವುದು ಉತ್ತಮ. ಅದಕ್ಕೂ ಮುನ್ನ ಹೊಟ್ಟೆನೋವು ಬರಲು ಕಾರಣವೇನು ಎಂಬ ಪ್ರಶ್ನೆಗೆ ನೀವೇ ಉತ್ತರ ಕಂಡುಕೊಂಡು (ಉದಾಹರಣೆಗೆ ಚಪಲ ತಾಳಲಾಗದೇ ಅತಿ ಹೆಚ್ಚು ಹಸಿಮೆಣಸಿನ ಬೋಂಡಾ ತಿಂದಿದ್ದು) ಅದಕ್ಕೆ ತಕ್ಕನಾದ ಮದ್ದನ್ನು ಆಯ್ದುಕೊಳ್ಳುವುದು ಸೂಕ್ತ. ಇಂತಹ ಸುಲಭ ಆದರೆ ಉಪಯುಕ್ತವಾದ ಮನೆಮದ್ದುಗಳನ್ನು ಇಲ್ಲಿ ವಿವರಿಸಲಾಗಿದೆ.

ಹಸಿಶುಂಠಿ

ಹಸಿಶುಂಠಿ

ಹಸಿಶುಂಠಿಯಲ್ಲಿರುವ ಉರಿಯೂತ ನಿವಾರಕ (anti inflammatory) ಮತ್ತು ಉತ್ಕರ್ಷಣ ನಿರೋಧಕ (Antioxidant) ಗುಣಗಳು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಕಡಿಮೆಗೊಳಿಸುವಲ್ಲಿ ನೆರವಾಗುತ್ತವೆ. ಇದಕ್ಕಾಗಿ ಹಸಿಶುಂಠಿಯ ಒಂದಿಂಚಿನ ತುಂಡನ್ನು ಜಜ್ಜಿ ಹಾಲಿಲ್ಲದ ಟೀ ಜೊತೆ ಕುದಿಸಿ ಸೋಸಿ ಬಿಸಿಯಾಗಿರುವಂತೆಯೇ ಸೇವಿಸುವುದರಿಂದ ಹೊಟ್ಟೆನೋವು ಕೂಡಲೇ ಕಡಿಮೆಯಾಗುತ್ತದೆ. ಜೊತೆಗೆ ಹುಳಿತೇಗು, ವಾಕರಿಕೆ ಮತ್ತು ವಾಂತಿಯನ್ನೂ ನಿಲ್ಲಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ಕೊಂಚ ಜೇನನ್ನೂ ಸೇರಿಸಬಹುದು.

ಉಗುರುಬೆಚ್ಚನೆಯ ಉಪ್ಪುನೀರು

ಉಗುರುಬೆಚ್ಚನೆಯ ಉಪ್ಪುನೀರು

ಒಂದು ವೇಳೆ ಹೊಟ್ಟೆಯುಬ್ಬರಿಸಿ ಹೊಟ್ಟೆನೋವಾಗುತ್ತಿದ್ದರೆ ಹೊಟ್ಟೆಯೊಳಗೆ ಆಮ್ಲೀಯ ವಾಯು ತುಂಬಿಕೊಂಡಿರಬಹುದು. ಇದಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ಬಿಸಿನೀರಿಗೆ ಒಂದು ಚಿಕ್ಕ ಚಮಚ(ತೀವ್ರವಾಗಿದ್ದರೆ ಎರಡು ಚಮಚ) ಅಡುಗೆ ಉಪ್ಪು ಹಾಕಿ ಕದಡಿ ಕುಡಿಯಿರಿ. ಒಂದು ವೇಳೆ ಹೊಟ್ಟೆನೋವು ಕಡಿಮೆಯಾಗದಿದ್ದರೆ ಇನ್ನಷ್ಟು ಉಪ್ಪುನೀರನ್ನು ಕುಡಿಯಬೇಡಿ, ಏಕೆಂದರೆ ಹೆಚ್ಚು ಉಪ್ಪನ್ನು ನಮ್ಮ ಶರೀರ ತಾಳಲು ಸಾಧ್ಯವಿಲ್ಲ. ಬೇರೆ ವಿಧಾನವನ್ನು ಅನುಸರಿಸಿ.

ಸೇಬಿನ ಶಿರ್ಕಾ (Apple Cider Vinegar)

ಸೇಬಿನ ಶಿರ್ಕಾ (Apple Cider Vinegar)

ಸೇಬಿನ ಶಿರ್ಕಾದಲ್ಲಿರುವ ಪೋಷಕಾಂಶಗಳು ಹೊಟ್ಟೆಯಲ್ಲಿ ಕರಗಿರುವ ವಿಟಮಿನ್ನುಗಳನ್ನು ಮತ್ತು ಖನಿಜಗಳನ್ನು ಕರುಳುಗಳು ಹೀರಲು ನೆರವಾಗುತ್ತವೆ. ಜೊತೆಗೆ ಇದರ ನಂಜುನಿರೋಧಕ (antiseptic) ಗುಣಗಳು ಹೊಟ್ಟೆನೋವಿಗೆ ಕಾರಣವಾದ ತೊಂದರೆಗಳನ್ನು ನಿವಾರಿಸಲು ನೆರವಾಗುತ್ತವೆ. ಇದಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಮೂರು ಚಿಕ್ಕ ಚಮಚ ಶಿರ್ಕಾ ಸೇರಿಸಿ ಕದಡಿ ಕುಡಿಯಿರಿ. ಇದನ್ನು ದಿನಕ್ಕೆ ಮೂರು ಬಾರಿ ಊಟಕ್ಕೂ ಮೊದಲು ಸೇವಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಈಗ ತಾನೇ ತಯಾರಿಸಿದ ಪುದಿನಾ ಎಲೆಗಳ ಜ್ಯೂಸ್

ಈಗ ತಾನೇ ತಯಾರಿಸಿದ ಪುದಿನಾ ಎಲೆಗಳ ಜ್ಯೂಸ್

ಹೊಟ್ಟೆನೋವು, ವಾಕರಿಕೆ ಮತ್ತು ವಾಂತಿಗೆ ಪುದಿನಾ ಎಲೆಗಳ ರಸ ಉತ್ತಮ ಪರಿಹಾರವಾಗಿದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಆರು ದೊಡ್ಡ ಪುದಿನಾ ಎಲೆಗಳ ಪ್ರಮಾಣದಲ್ಲಿ ಜ್ಯೂಸರ್ ನಲ್ಲಿ ಅಗತ್ಯವಿದ್ದಷ್ಟು ರಸವನ್ನು ಸಿದ್ಧಪಡಿಸಿ. ಈ ನೀರನ್ನು ಒಂದರಿಂದ ಮೂರು ಲೋಟಗಳವರೆಗೂ ಕುಡಿಯಬಹುದು. ಇನ್ನೂ ಉತ್ತಮ ಪರಿಣಾಮಕ್ಕಾಗಿ ಒಂದು ಬಾರಿಗೆ ಆರು ಎಲೆಗಳನ್ನು ಹಸಿಯಾಗಿ ಜಗಿದು ನೀರಿನೊಂದಿಗೆ ನುಂಗಬಹುದು. ಈ ರಸವನ್ನು ಊಟದ ಬಳಿಕ ಸೇವಿಸಬೇಕು.

ಲಿಂಬೆರಸ ಸೇರಿಸಿದ ನೀರು

ಲಿಂಬೆರಸ ಸೇರಿಸಿದ ನೀರು

ಹೊಟ್ಟೆನೋವು, ವಾಕರಿಕೆ ಮತ್ತು ವಾಂತಿಯನ್ನು ಕಡಿಮೆಗೊಳಿಸಲು ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಅರ್ಧ ಲಿಂಬೆಹಣ್ಣಿನ (ಚಿಕ್ಕದಾದರೆ ಒಂದು ಇಡಿಯ ಲಿಂಬೆಯ) ರಸವನ್ನು ಸೇರಿಸಿ ದಿನಕ್ಕೆ ಮೂರು ಬಾರಿ ಊಟದ ಬಳಿಕ ಕುಡಿಯಿರಿ.

ಏಲಕ್ಕಿಯ ಬೀಜ ಮತ್ತು ಜೀರಿಗೆ ಕುದಿಸಿದ ನೀರು

ಏಲಕ್ಕಿಯ ಬೀಜ ಮತ್ತು ಜೀರಿಗೆ ಕುದಿಸಿದ ನೀರು

ಒಂದು ವೇಳೆ ಅಜೀರ್ಣದ ಕಾರಣ ಹೊಟ್ಟೆನೋವಾಗಿದ್ದರೆ (ಅಜೀರ್ಣದ ಸುಲಭ ಸಂಕೇತವೆಂದರೆ ಊಟದ ಬಳಿಕ ಹೊಟ್ಟೆಯಲ್ಲಿ ಆಹಾರ ಗುಡುಗುಡು ಓಡಿದಂತಾಗುವುದು) ಇದಕ್ಕೆ ಏಲಕ್ಕಿಯ ಬೀಜ ಉತ್ತಮ ಪರಿಹಾರವಾಗಿದೆ. ಜೊತೆಗೆ ವಾಕರಿಕೆ, ವಾಂತಿಯನ್ನೂ ಕಡಿಮೆಮಾಡುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಸುಮಾರು ಐದರಿಂದ ಆರು ಏಲಕ್ಕಿಗಳ ಸಿಪ್ಪೆ ಸುಲಿದು ಕೇವಲ ಬೀಜಗಳನ್ನು ಮತ್ತು ಒಂದು ಚಿಕ್ಕ ಚಮಚ ಜೀರಿಗೆಯನ್ನು ಹಾಕಿ ಕುದಿಸಿ. ಸುಮಾರು ಮೂರು ನಿಮಿಷ ಕುದಿದ ಬಳಿಕ ಒಲೆಯಿಂದಿಳಿಸಿ ತಣಿಯಲು ಬಿಡಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಊಟದ ಬಳಿಕ ಕುಡಿಯಬಹುದು.

English summary

Home Remedies For Stomach Pain

Pain in the stomach may be caused by different reasons such as indigestion, acidity, constipation, food allergy, gases in stomach, food poising, diarrhea, ulcers in stomach or intestines, appendicitis, stones in gall bladder, kidney stones etc. Have a look at some natural ways to treat stomach pain.
X
Desktop Bottom Promotion