For Quick Alerts
ALLOW NOTIFICATIONS  
For Daily Alerts

ರಕ್ತ ಸಂಚಾರದಲ್ಲಿ ಏರುಪೇರು-ಇವೇ 12 ಮುನ್ಸೂಚನೆಗಳು

By Arshad
|

ನಮ್ಮ ಜೀವಿತಾವಧಿಯ ಪ್ರತಿ ಕ್ಷಣವೂ ಹೃದಯ ಸುಮಾರು ಐದೂವರೆ ಲೀಟರ್‌ನಷ್ಟು ರಕ್ತವನ್ನು ದೇಹದ ಎಲ್ಲಾ ಕಡೆಗಳಿಗೆ ರವಾನಿಸುತ್ತಲೇ ಇರುತ್ತದೆ. ಪ್ರತಿ ಅಂಗದ ಕಾರ್ಯನಿರ್ವಹಣೆಗೆ, ಪೋಷಕಾಂಶ, ಶಕ್ತಿ, ಕಲ್ಮಶಗಳನ್ನು ಸಾಗಿಸಲೂ ರಕ್ತ ಸತತವಾಗಿ ಚಲಿಸುತ್ತಿರುವುದು ಅಗತ್ಯ. ಅಷ್ಟೇ ಏಕೆ, ವಿವಿಧ ಹಾರ್ಮೋನುಗಳು, ಸೇವಿಸುವ ಔಷಧಿಗಳು ಸಹಾ ರಕ್ತದ ಮೂಲಕವೇ ಸಾಗಿಸಲ್ಪಡುತ್ತವೆ. ದೇಹದ ತಾಪಮಾನ ಸುಸ್ಥಿತಿಯಲ್ಲಿಡಲೂ ರಕ್ತ ಪರಿಚಲನೆ ಅಗತ್ಯವಾಗಿದೆ.

ಆದರೆ ಕೆಲವು ಕಾರಣಗಳಿಂದ ರಕ್ತ ಪರಿಚಲನೆಯ ಕ್ಷಮತೆ ತಗ್ಗುತ್ತದೆ. ಆದರೆ ಇದು ಥಟ್ಟನೇ ಗೋಚರವಾಗದಿರುವುದೇ ಇದರ ತೊಂದರೆಗೆ ಒಳಗಾಗಿರುವುದನ್ನು ಕಂಡುಹಿಡಿಯಲು ತಡವಾಗುವುದಕ್ಕೆ ಕಾರಣ. ಆದರೆ ಈ ಸ್ಥಿತಿ ಅಪಾಯಕಾರಿಯಾಗಿದ್ದು ದೊಡ್ಡ ಅಪಾಯವೊಂದು ಥಟ್ಟನೇ ಎದುರಾಗಬಹುದು. ಒಂದು ವೇಳೆ ಈ ಸ್ಥಿತಿಯನ್ನು ಪ್ರಾರಂಭಿಕ ಹಂತದಲ್ಲಿ ಕಂಡುಕೊಂಡರೆ ಚಿಕಿತ್ಸೆಗೆ ಹೆಚ್ಚಿನ ನೆರವಾಗುವ ಜೊತೆಗೇ ಶೀಘ್ರ ಚೇತರಿಕೆಯೂ ಸಾಧ್ಯವಾಗುತ್ತದೆ. ರಕ್ತ ಸಂಚಾರ ವೃದ್ಧಿಸುವುದು ಹೇಗೆ?

ರಕ್ತಪರಿಚಲನೆಯಲ್ಲಿ ಬಾಧತೆ ಯಾವ ವಯಸ್ಸಿನಲ್ಲಿ ಬೇಕಾದರೂ ಆವರಿಸಬಹುದು. ಒಂದು ವೇಳೆ ಉಢಾಫೆಯಿಂದ ಹಾಗೇ ಬಿಟ್ಟರೆ ಮುಂದೆ ಹತ್ತು ಹಲವು ತೊಂದರೆಗಳು ಎದುರಾಗಬಹುದು. ಇದು ಮೆದುಳು, ಹೃದಯ, ಯಕೃತ್, ಮೂತ್ರಪಿಂಡಗಳು ಮತ್ತು ವಿಶೇಷವಾಗಿ ಹೃದಯದಿಂದ ದೂರವಿರುವ ಅಂಗಗಳಾದ ಪಾದಗಳು ಮತ್ತು ಹಸ್ತಗಳನ್ನು ನಿಶ್ಚೇಷ್ಟಿತಗೊಳಿಸಬಹುದು. ಆದರೆ ಇದು ವೃದ್ಧರಲ್ಲಿ ಹೆಚ್ಚು ಕಂಡುಬರುತ್ತದೆ. ಇದಕ್ಕೆ ಪ್ರಮುಖ ಕಾರಣ ನರಗಳ ಒಳಭಾಗದಲ್ಲಿ ಅಂಟಿಕೊಂಡಿರುವ ಜಿಡ್ಡು ಅಥವಾ ಕೆಟ್ಟ ಕೊಲೆಸ್ಟ್ರಾಲ್. ರಕ್ತಹೀನತೆಯ ಸಮಸ್ಯೆಯೇ..?ಇಲ್ಲಿದೆ ನೋಡಿ ಪರಿಹಾರ

ಇದರಿಂದ ಹೃದಯ ಹೆಚ್ಚು ಒತ್ತಡದಿಂದ ರಕ್ತವನ್ನು ದೂಡಿಕೊಟ್ಟರೂ ನರಗಳಲ್ಲಿ ಹಲವೆಡೆ ನಳಿಕೆ ತುಂಬಾ ಚಿಕ್ಕದಾಗಿರುವ ಕಾರಣ ಕೊಂಚವೇ ರಕ್ತ ಹರಿದು ದೇಹದ ತುದಿಭಾಗಗಳಿಗೆ ಕಡಿಮೆ ಪ್ರಮಾಣದಲ್ಲಿ ಲಭಿಸುತ್ತದೆ. ಈ ಸ್ಥಿತಿಯನ್ನು ನಮ್ಮ ದೇಹ ಕೆಲವು ಸೂಚನೆಗಳ ಮೂಲಕ ಪ್ರಕಟಿಸುತ್ತದೆ. ಇದನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಬೇಕಷ್ಟೇ. ಇದನ್ನು ಹೇಗೆ ಗಮನಿಸುವುದು ಎಂಬ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ಅಂಗೈ ಮತ್ತು ಪಾದಗಳು ತಣ್ಣಗಾಗುವುದು

ಅಂಗೈ ಮತ್ತು ಪಾದಗಳು ತಣ್ಣಗಾಗುವುದು

ಹೃದಯದಿಂದ ಹೊರಡುವ ಅತಿ ಹೆಚ್ಚಿನ ಪ್ರಮಾಣದ ರಕ್ತ ಹೋಗುವುದು ಮೆದುಳಿಗೆ. ಅಂತೆಯೇ ಅತಿ ದೂರ ಕ್ರಮಿಸಬೇಕಾದ ಅಂಗಗಳೆಂದರೆ ಹಸ್ತಗಳು ಮತ್ತು ಪಾದಗಳು. ರಕ್ತಸಂಚಾರ ಕಡಿಮೆಯಾದರೆ ಈ ಎರಡು ಭಾಗಗಳಲ್ಲಿ ಕನಿಷ್ಠ ಪ್ರಮಾಣದ ರಕ್ತ ಲಭಿಸುತ್ತದೆ. ರಕ್ತದ ಲಭ್ಯತೆ ಮತ್ತು ದೇಹದ ತಾಪಮಾನಕ್ಕೆ ನೇರವಾದ ಸಂಬಂಧವಿದೆ. ಇದು ಆ ಭಾಗದಲ್ಲಿ ತಾಪಮಾನ ಕಡಿಮೆಯಾಗಲು ಕಾರಣವಾಗುತ್ತದೆ. ಅಂತೆಯೇ ರಕ್ತಸಂಚಾರ ಕಡಿಮೆ ಇರುವ ತೊಂದರೆ ಇದ್ದವರ ಅಂಗೈ ಮತ್ತು ಪಾದಗಳು ಮಂಜಿನಂತೆ ತಣ್ಣಗಿರುತ್ತದೆ. ಇದು ಜ್ವರ, ನಡುಕ, ಮೊದಲಾದ ತೊಂದರೆಗೆ ಕಾರಣವಾಗಬಹುದು. ಕ್ರಮೇಣ ದೇಹದ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಇಳಿಯಬಹುದು.

ಅಂಗೈ ಮತ್ತು ಪಾದಗಳು ಊದಿಕೊಳ್ಳುವುದು

ಅಂಗೈ ಮತ್ತು ಪಾದಗಳು ಊದಿಕೊಳ್ಳುವುದು

ರಕ್ತಸಂಚಾರ ಕಡಿಮೆಯಾದರೆ ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ಅಂಗೈ ಮತ್ತು ಪಾದಗಳು ಊದಿಕೊಳ್ಳುತ್ತವೆ. ಇದಕ್ಕೆ ರಕ್ತಸಂಚಾರ ಕಡಿಮೆಯಾದ ಭಾಗದಲ್ಲಿ ದ್ರವ ತುಂಬಿಕೊಳ್ಳುವುದೇ ಕಾರಣ. ಈ ಸ್ಥಿತಿಗೆ odema ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಪ್ರಯಾಣ ಮಾಡಿ ಬಂದವರಲ್ಲಿ ಈ ಸ್ಥಿತಿ ಥಟ್ಟನೇ ಗೋಚರಿಸುತ್ತದೆ.

ಸುಲಭವಾಗಿ ಸುಸ್ತಾಗುವುದು

ಸುಲಭವಾಗಿ ಸುಸ್ತಾಗುವುದು

ನಮ್ಮ ಎಲ್ಲಾ ಚಟುವಟಿಕೆಗಳಿಗೆ ಆಮ್ಲಜನಕದ ಅವಶ್ಯಕತೆ ಇದೆ. ಆಮ್ಲಜನಕದ ಕೊರತೆ ಇದ್ದರೆ ಸ್ನಾಯುಗಳು ಬೇಗನೇ ದಣಿಯುತ್ತವೆ ಹಾಗೂ ಇನ್ನು ಸಾಧ್ಯವಿಲ್ಲ ಎಂಬುದನ್ನು ನೋವಿನ ಮೂಲಕ ತಿಳಿಸುತ್ತವೆ. ರಕ್ತಸಂಚಾರ ಕಡಿಮೆಯಾದರೆ ಸ್ನಾಯುಗಳಿಗೆ ತಲುಪುವ ಆಮ್ಲಜನಕದ ಪ್ರಮಾಣವೂ ತಗ್ಗುವುದರಿಂದ ಹಾಗೂ ಅಲ್ಲಿಂದ ಇಂಗಾಲದ ಡೈ ಆಕ್ಸೈಡ್ ಹೊರಹೋಗದೇ ಹೊರೆಯಾಗಿ ನಿಲ್ಲುವ ಮೂಲಕ ಸ್ನಾಯುಗಳು ವಿಪರೀತವಾಗಿ ದಣಿಯುತ್ತವೆ. ಪರಿಣಾಮವಾಗಿ ಉಸಿರು ಸಿಗದೇ ಇರುವುದು, ಮೈ ಕೈ ನೋವು, ನಿತ್ಯದ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗದೇ ಇರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

ನಿರುದ್ರೇಕ ಸಮಸ್ಯೆ

ನಿರುದ್ರೇಕ ಸಮಸ್ಯೆ

ಉದ್ರೇಕಕ್ಕೆ ರಕ್ತವೇ ಜೀವಾಳವಾಗಿದೆ. ಏಕೆಂದರೆ ಪುರುಷಾಂಗ ಇತರ ಹೊತ್ತಿನಲ್ಲಿ ಚಿಕ್ಕ ಗಾತ್ರದಲ್ಲಿದ್ದು ರಕ್ತ ತುಂಬಿಕೊಂಡರೇ ಅಗತ್ಯ ಗಾತ್ರಕ್ಕೆ ಉದ್ರೇಕಗೊಳ್ಳಲು ಸಾಧ್ಯ. ರಕ್ತಸಂಚಾರ ಕಡಿಮೆಯಾದರೆ ಅಂಗಗಳಿಗೆ ಲಭಿಸುವ ರಕ್ತವೂ ಕಡಿಮೆಯಾಗುವ ಕಾರಣ ಪೂರ್ಣ ಪ್ರಮಾಣದ ಉದ್ರೇಕ ಸಾಧ್ಯವಾಗದೇ ಮುಂದಿನ ಯಾವುದೇ ಕಾರ್ಯಗಳು ಸುಲಲಿತವಾಗಿ ನಡೆಯಲಾರವು.

ಅಜೀರ್ಣದ ಸಮಸ್ಯೆ

ಅಜೀರ್ಣದ ಸಮಸ್ಯೆ

ಜೀರ್ಣಕ್ರಿಯೆಗೂ ಹೆಚ್ಚಿನ ಪ್ರಮಾಣದ ರಕ್ತದ ಅವಶ್ಯಕತೆಯಿದೆ. ಅದರಲ್ಲೂ ವಿಶೇಷವಾಗಿ ಕರುಳುಗಳಲ್ಲಿ ಜೀರ್ಣವಾದ ಆಹಾರದಿಂದ ಹೀರಲ್ಪಡುವ ಪೋಷಕಾಂಶಗಳನ್ನು ಕೊಂಡೊಯ್ಯಲೂ ರಕ್ತದ ಅವಶ್ಯಕತೆ ಇದೆ. ರಕ್ತಸಂಚಾರ ಕಡಿಮೆಯಾದರೆ ಈ ಎಲ್ಲಾ ಕಾರ್ಯಗಳು ಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗದೇ ಜೀರ್ಣಕ್ರಿಯೆ ನಿಧಾನವಾಗುವುದು, ಆಹಾರದ ಕೆಲವು ಭಾಗ ಜೀರ್ಣವಾಗದೇ ಹಾಗೇ ಹೊರಹೋಗುವುದು, ಎಷ್ಟು ಪೌಷ್ಠಿಕ ಆಹಾರ ಸೇವಿಸಿದರೂ ಸುಸ್ತು ಆವರಿಸಿರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಅಲ್ಲದೇ ಮಲಬದ್ಧತೆ ಮತ್ತು ತಡವಾಗಿ ವಿಸರ್ಜನೆಯಾಗುವ ಸಂಭವವೂ ಎದುರಾಗುತ್ತದೆ.

ಮೆದುಳಿನ ಕ್ಷಮತೆ ಕುಗ್ಗುತ್ತದೆ

ಮೆದುಳಿನ ಕ್ಷಮತೆ ಕುಗ್ಗುತ್ತದೆ

ಮೆದುಳಿಗೆ ಸತತವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ರಕ್ತಸಂಚಾರದ ಅವಶ್ಯಕತೆಯಿದೆ. ರಕ್ತಸಂಚಾರ ಕಡಿಮೆಯಾದರೆ ಮೆದುಳು ಅಪಾರವಾಗಿ ಪ್ರಭಾವಕ್ಕೆ ಒಳಗಾಗುತ್ತದೆ. ಇದರ ಪರಿಣಾಮವಾಗಿ ತಲೆಸುತ್ತುವುದು,ಯಾವುದೇ ಕೆಲಸಕ್ಕೆ ಗಮನ ನೀಡಲು ಸಾಧ್ಯವಾಗದಿರುವುದು, ಸ್ಮರಣಶಕ್ತಿಯಲ್ಲಿ ಕೊರತೆ ಮೊದಲಾದ ತೊಂದರೆಗಳು ಎದುರಾಗುತ್ತವೆ.

ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು

ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು

ನಮ್ಮ ದೇಹಕ್ಕೆ ಸತತವಾಗಿ ಬ್ಯಾಕ್ಟೀರಿಯಾ, ರೋಗಾಣುಗಳು ಮತ್ತು ವೈರಸ್ಸುಗಳು ಧಾಳಿ ಎಸಗುತ್ತಲೇ ಇರುತ್ತವೆ. ಆದರೆ ನಮ್ಮ ರೋಗ ನಿರೋಧಕ ವ್ಯವಸ್ಥೆ ಇವನ್ನು ಸಮರ್ಥವಾಗಿ ಎದುರಿಸುತ್ತಾ ಇರುತ್ತದೆ. ಇದೇ ನಮ್ಮ ಆರೋಗ್ಯಕ್ಕೆ ಕಾರಣವಾಗಿದೆ. ರಕ್ತಸಂಚಾರ ಕಡಿಮೆಯಾದರೆ ರೋಗ ನಿರೋಧಕ ಶಕ್ತಿಯೂ ಸೊರಗುತ್ತದೆ. ಪರಿಣಾಮವಾಗಿ ಬ್ಯಾಕ್ಟೀರಿಯಾಗಳ ಮತ್ತು ರೋಗ ಹರಡುವ ಇತರ ರೋಗಾಣುಗಳ ಧಾಳಿಯನ್ನು ಎದುರಿಸಲಾಗದೇ ಸೋಂಕು ತಗಲುತ್ತದೆ. ಜ್ವರ ಶೀತ ನೆಗಡಿಗಳು ಸುಲಭವಾಗಿ ಬಾಧಿಸುತ್ತವೆ. ಚಿಕ್ಕ ಪುಟ್ಟ ಗಾಯಗಳೂ ಒಣಗಲು ಅತಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ.

ಹಸಿವು ಕಡಿಮೆಯಾಗುತ್ತದೆ

ಹಸಿವು ಕಡಿಮೆಯಾಗುತ್ತದೆ

ಯಕೃತ್‌ಗೆ ತಲುಪುವ ರಕ್ತಸಂಚಾರ ಕಡಿಮೆಯಾದರೆ ಹಸಿವನ್ನು ಸೂಚಿಸುವ ಸೂಚನೆಗಳನ್ನು ಕೊಡಲು ಅಸಮರ್ಥವಾಗುತ್ತದೆ. ಮೆದುಳಿಗೆ ಈ ಸೂಚನೆ ತಲುಪದಿರುವ ಕಾರಣ ಊಟ ಮಾಡಲು ಪ್ರೇರಣೆ ನೀಡದೇ ಕಡಿಮೆ ಆಹಾರ ಸೇವಿಸುವ ಪ್ರಮೇಯ ಎದುರಾಗುತ್ತದೆ. ಇದು ದೇಹದ ತೂಕವನ್ನು ಶೀಘ್ರವಾಗಿ ಕಳೆದುಕೊಳ್ಳುವಂತೆ ಮಾಡುತ್ತದೆ.

ಬಣ್ಣಗೆಡುವ ಚರ್ಮ

ಬಣ್ಣಗೆಡುವ ಚರ್ಮ

ನಮ್ಮ ಚರ್ಮದ ಒಳಪದರಕ್ಕೆ ರಕ್ತಸಂಚಾರ ಸತತವಾಗಿ ಆಗುತ್ತಿದ್ದರೆ ಮಾತ್ರ ಚರ್ಮ ಸುಂದರವಾಗಿ ಮತ್ತು ಕಾಂತಿಯುಕ್ತವಾಗಿರುತ್ತದೆ. ಒಂದು ವೇಳೆ ರಕ್ತಸಂಚಾರ ಕಡಿಮೆಯಾದರೆ ಒಳಪದರಕ್ಕೆ ಅಗತ್ಯವಾದ ಪೋಷಣೆ ದೊರಕದೇ ಹೊರಪದರವನ್ನು ಒಣಗಿಸುತ್ತದೆ ಹಾಗೂ ಎರಡೂ ಪದರಗಳ ನಡುವೆ ಸೋಂಕು ಉಂಟಾಗಲು ಕಾರಣವಾಗುತ್ತದೆ. ಇದು ಚರ್ಮದ ಬಣ್ಣ ಬದಲಾಗಲು ಕಾರಣವಾಗುತ್ತದೆ. ಚರ್ಮ ಕೊಂಚ ನೇರಳೆ ಅಥವಾ ನೀಲಿಬಣ್ಣಕ್ಕೆ ತಿರುಗುತ್ತದೆ. ಅದರಲ್ಲೂ ಕೈಬೆರಳುಗಳು ಮತ್ತು ಕಾಲು ಬೆರಳುಗಳು ಬಣ್ಣ ಕಳೆದುಕೊಂಡು ಒಳಗಿನಿಂದ ಕಪ್ಪಗಾದಂತೆ ಕಾಣುತ್ತದೆ. cyanosis ಎಂದು ಕರೆಯಲ್ಪಡುವ ಈ ಸ್ಥಿತಿ ಗಂಭೀರವಾಗಿದ್ದು ಸೂಕ್ತ ಚಿಕಿತ್ಸೆಯ ಅಗತ್ಯವಿದೆ.

ದುರ್ಬಲ ಉಗುರು ಮತ್ತು ಉದುರುವ ಕೂದಲು

ದುರ್ಬಲ ಉಗುರು ಮತ್ತು ಉದುರುವ ಕೂದಲು

ರಕ್ತಸಂಚಾರ ಕಡಿಮೆಯಾದರೆ ಉಗುರುಗಳ ಬುಡಕ್ಕೆ ಸಿಗುವ ರಕ್ತವೂ ಕಡಿಮೆಯಾಗಿ ಅಗತ್ಯಪ್ರಮಾಣದಲ್ಲಿ ಪೋಷಕಾಂಶಗಳು ಸಿಗದೇ ಉಗುರು ದುರ್ಬಲವಾಗುತ್ತದೆ. ಇದು ಸುಲಭವಾಗಿ ಸೀಳುಬಿಟ್ಟು ರಕ್ತ ಬರುವ ಮೂಲಕ ಅತೀವ ನೋವು ಕೊಡುತ್ತದೆ. ಇದೇ ರೀತಿ ಕೂದಲ ಬುಡಕ್ಕೂ ಪೋಷಕಾಂಶಗಳ ಕೊರತೆಯಾಗಿ ಕೂದಲ ಬುಡ ಸಡಿಲಗೊಳ್ಳುತ್ತದೆ. ಪರಿಣಾಮವಾಗಿ ಕೂದಲು ಸುಲಭವಾಗಿ ಉದುರುತ್ತದೆ. ಇಲ್ಲದಿದ್ದರೆ ಅತೀವವಾಗಿ ಒಣಗಿ ಕಳಾಹೀನವಾಗಿರುತ್ತದೆ.

ಉಬ್ಬಿದ, ಗಂಟುಕಟ್ಟಿದ ನರಗಳು

ಉಬ್ಬಿದ, ಗಂಟುಕಟ್ಟಿದ ನರಗಳು

ರಕ್ತಸಂಚಾರ ಕಡಿಮೆಯಾದರೆ ನರಗಳೂ ಸುಲಭವಾಗಿ ಮಡಚಲು ಸಾಧ್ಯವಾಗಿ ಚರ್ಮದಡಿಗೇ ಗೋಜಲು ಗೋಜಲಾಗಿ ಗುಂಪಾಗುತ್ತವೆ. ದೇಹದ ಚಟುವಟಿಕೆಯ ಕಾರಣ ಈ ಭಾಗದ ಅಡಿಯಲ್ಲಿರುವ ಸ್ನಾಯುಗಳು ಇದನ್ನು ಹೊರದಬ್ಬುವುದರಿಂದ ಸರಿಸುಮಾರು ಚರ್ಮದ ಮಟ್ಟಕ್ಕೆ ಬಂದು ನಿಲ್ಲುತ್ತವೆ. ಇವು ಚರ್ಮದ ಮೂಲಕ ನೇರಳೆ ಅಥವಾ ಗಾಢ ನೀಲಿ ಬಣ್ಣದಲ್ಲಿದ್ದು ಸ್ಪಷ್ಟವಾಗಿ ಗೋಚರವಾಗುತ್ತವೆ. ವಿಶೇಷವಾಗಿ ಪಾದ ಮತ್ತು ಮೊಣಕಾಲ ನಡುವಣ ಭಾಗದಲ್ಲಿ, ಮೀನಖಂಡದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ದಿನವಿಡೀ ಕುಳಿತೇ ಇರುವವರಲ್ಲಿ ಈ ತೊಂದರೆ ಹೆಚ್ಚಾಗಿ ಕಂಡುಬರುತ್ತದೆ. ಇದು ಒತ್ತಿದರೆ ನೋವಿನಿಂದ ಕೂಡಿದ್ದು ಕೊಂಚ ತುರಿಕೆಯನ್ನೂ ಹೊಂದಿರುತ್ತದೆ.

ಕಾಲುಗಳ ಹುಣ್ಣುಗಳು

ಕಾಲುಗಳ ಹುಣ್ಣುಗಳು

ಪಾದಗಳ ಅಡಿಗೆ ಚಿಕ್ಕ ಉರಿಗುಳ್ಳೆಯಾಗಿ ಮಾಗದೇ ಅಕ್ಕಪಕ್ಕಕ್ಕೆ ವ್ಯಾಪಿಸುತ್ತಾ ನಡಿಗೆಯನ್ನೂ ಪ್ರಯಾಸಕರವಾಗಿಸುವುದಕ್ಕೆ ರಕ್ತಸಂಚಾರದ ಕೊರತೆಯೇ ಕಾರಣ. ಪಾದಗಳ ಅಡಿಗೆ ಒಣಗಿದ್ದು ಕೆಂಪಾಗಿರುವ ವೃತ್ತಾಕಾರದ ಗುಳ್ಳೆಗಳನ್ನೂ ಕಾಣಬಹುದು. ಪಾದಗಳ ಮೇಲ್ಭಾಗ ಮತ್ತು ಮೊಣಕಾಲಿನ ಮುಂಭಾಗದಲ್ಲಿ ಚರ್ಮ ಸಿಪ್ಪೆ ಏಳುವುದು, ತುರಿಕೆ, ತುರಿಸಿದರೆ ಚರ್ಮ ಕಿತ್ತು ಬಂದು ರಕ್ತ ಬರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಮೇಲಿನ ಯಾವುದೇ ಸೂಚನೆಗಳು ಕಂಡುಬಂದರೂ, ಇದನ್ನು ಅಲಕ್ಷಿಸದೇ ನಿಮ್ಮ ಕುಟುಂಬವೈದ್ಯರಲ್ಲಿ ತೋರಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. ಇದು ಎಷ್ಟೇ ಚಿಕ್ಕ ಪ್ರಮಾಣದಲ್ಲಿರಲಿ, ತಕ್ಷಣ ವೈದ್ಯರ ಬಳಿ ಧಾವಿಸಿ. ನೆನಪಿಡಿ, ಸೂಕ್ತ ಸಮಯಕ್ಕೆ ಕಂಡುಕೊಂಡ ತೊಂದರೆಯನ್ನು ಸುಲಭವಾಗಿ ಗುಣಪಡಿಸಬಹುದು.

English summary

12 Early Signs Of Poor Blood Circulation

Do you know that your body works continuously to circulate more than five liters of blood through your body? Blood circulation helps the body organs to function, transport nutrients and hormones and regulate body temperature etc. Poor circulation may not show up easily and because of its silent nature, it may pose many health risks without you being aware of. It is important to diagnose it early and this article will help you out in finding out the early signs of poor blood circulation.
X
Desktop Bottom Promotion