For Quick Alerts
ALLOW NOTIFICATIONS  
For Daily Alerts

ನಿಮ್ಮ ಮೆದುಳಿನ ಚುರುಕುತನವನ್ನು ಹೆಚ್ಚಿಸುವ ಬಗೆ ಹೇಗೆ?

By Super
|

ನಮ್ಮ ಜೀವನಕ್ಕೆ ದೈಹಿಕ ಅಗತ್ಯಕ್ಕಿಂತಲೂ ಬುದ್ದಿಮತ್ತೆಯ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಅವಶ್ಯವಾಗಿದೆ. ನಾಗರಿಕತೆ ಬೆಳೆಯುತ್ತಿದ್ದಂತೆ ಮಾಂಸಖಂಡಗಳನ್ನು ಬಳಸುವ ಕೆಲಸಗಳು ಬಹಳಷ್ಟು ಕಡಿಮೆಯಾಗಿ ಮೆದುಳನ್ನು ಬಳಸುವ ಕೆಲಸಗಳೇ ಹೆಚ್ಚಾಗುತ್ತಿವೆ. ಇಂದಿನ ಪೈಪೋಟಿಯ ದಿನಗಳಲ್ಲಿ ಮೆದುಳು ಚುರುಕಾಗಿದ್ದಷ್ಟೂ ಜೀವನದಲ್ಲಿ ಮುಂದೆಬರಲು ಸಾಧ್ಯ. ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಜೀವನದ ಒಂದು ಗುರಿಯತ್ತ ಮುನ್ನಡೆಯುತ್ತಾ ಆ ಕ್ಷಣದಲ್ಲಿ ಲಭ್ಯವಾದ ಸಂತೋಷಗಳನ್ನು ಅನುಭವಿಸುತ್ತಾ ಜೀವನ ಸಾಗಿಸುವುದು ಆರೋಗ್ಯಕರ.

ಇದಕ್ಕಾಗಿ ಪ್ರತಿದಿನವೂ ನಮ್ಮ ಮೆದುಳನ್ನು ಸಾಣೆ ಹಿಡಿಯುತ್ತಾ ಇರಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಕುಟುಂಬ ವೈದ್ಯರನ್ನು ಗಮನಿಸಿ. ಅವರು ಪದವಿ ಪಡೆದು ಚಿಕಿತ್ಸೆ ನೀಡುತ್ತಿದ್ದು ಹಲವು ವರ್ಷಗಳಾದರೂ ವೈದ್ಯಕೀಯ ಮತ್ತು ಔಷಧಿಗಳ ಪ್ರಪಂಚದಲ್ಲಿ ಆಗುತ್ತಿರುವ ಅಭಿವೃದ್ಧಿಗಳನ್ನು ಪ್ರತಿದಿನ ಗಮನಿಸುತ್ತಾ ಇರುತ್ತಾರೆ. ಹೊಸ ಔಷಧಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಹಳೆಯದನ್ನು ತೊರೆದು ಹೊಸ ಔಷಧಿಯತ್ತ ತಮ್ಮ ಚಿತ್ತ ಹರಿಸುತ್ತಾರೆ. ಅಂತೆಯೇ ಈಗಾಗಲೇ ಪ್ರಚಲಿತದಲ್ಲಿರುವ ಔಷಧಿಗಳ ಒಳಿತು ಕೆಡುಕುಗಳ ಬಗ್ಗೆ ವೈದ್ಯಕೀಯ ಮಾಧ್ಯಮಗಳು ನೀಡುವ ಮಾಹಿತಿಗಳನ್ನು ಕಲೆಹಾಕಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾ ಇರುತ್ತಾರೆ. ಈ ಎಲ್ಲವೂ ಅವರ ಮೆದುಳನ್ನು ಚುರುಕಾಗಿ ಇರಿಸುವಂತಹ ಚಟುವಟಿಕೆಗಳಾಗಿವೆ. ನಿಮ್ಮ ಮೆದುಳಿನ ಆರೋಗ್ಯವನ್ನು ವೃದ್ಧಿಸುವ ಸೂಪರ್ ಆಹಾರಗಳು!

Want A Sharper Brain? Try These Easy Tips

ಹಾಗಾದರೆ ಜನಸಾಮಾನ್ಯರಾದ ನಾವೇನು ಮಾಡಬೇಕು? ನಮಗಾರು ಇಂತಹ ವರದಿಗಳನ್ನು ನೀಡುತ್ತಾರೆ? ಮುಖ್ಯವಾಗಿ ಇದರಿಂದ ನಮಗೇನಾಗಬೇಕಾಗಿದೆ ಎಂಬ ಉಢಾಫೆಯಿಂದ ನಾವು ಮೆದುಳನ್ನು ಸಾಣೆ ಹಿಡಿಯದೇ ಇರುವ ಪರಿಣಾಮವಾಗಿ ಮರೆವು, ಖಿನ್ನತೆ, ಯಾರೂ ನನಗೆ ಫೋನ್ ಮಾಡುವುದಿಲ್ಲ ಎಂಬ ಉದಾಸೀನತೆ ಮೊದಲಾದವು ಆವರಿಸಿರುತ್ತವೆ. ಮುಖ್ಯವಾಗಿ ಈ ಎಲ್ಲಾ ತೊಂದರೆಗಳಿಗೆ ನಾವೇ ಕಾರಣರೇ ಹೊರತು ಇನ್ನಾರನ್ನೂ ಯಾವುದನ್ನೂ ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ. ಮೆದುಳನ್ನು ಚುರುಕಾಗಿಸಲು ಸಾಧಾರಣವಾಗಿ ಎಲ್ಲರೂ ಅನುಸರಿಸಬಹುದಾದ ಕೆಲವು ಪ್ರಬಲ ಸಲಹೆಗಳನ್ನು ಇಲ್ಲಿ ವಿವರಿಸಲಾಗಿದೆ.ಎಚ್ಚರ: ಗರ್ಭಾವಸ್ಥೆಯಲ್ಲಿರುವಾಗ ಇಂತಹ ಅಭ್ಯಾಸದಿಂದ ದೂರವಿರಿ!

ಹೊಸ ಹೊಸ ಜನರನ್ನು ಭೇಟಿಯಾಗಿ
ನೀವು ಯಾವುದೇ ಹೊಸ ವ್ಯಕ್ತಿಯನ್ನು ಭೇಟಿಯಾದ ಕ್ಷಣದಿಂದ ನಿಮ್ಮ ಇಂದ್ರಿಯಗಳ ಮೂಲಕ ಅವರ ಬಗೆಗಿನ ವಿವರಗಳನ್ನು ನಿಮ್ಮ ಮೆದುಳು ದಾಖಲಿಸಲು ತೊಡಗುತ್ತದೆ. ವಿಶೇಷವಾಗಿ ಆ ವ್ಯಕ್ತಿ ನಿಮ್ಮ ಕಾರ್ಯಕ್ಷೇತ್ರಕ್ಕೆ ಅಥವಾ ನಿಮ್ಮ ಇಷ್ಟದ ವಿಷಯ ಅಥವಾ ಹವ್ಯಾಸಕ್ಕೆ ಸಂಬಂಧಪಟ್ಟಿರುವವರಾದರೆ ಈ ಪ್ರಕ್ರಿಯೆ ತಾರಕಕ್ಕೇರುತ್ತದೆ. ಇದೇ ಕಾರಣದಿಂದಾಗಿ ನಿಮಗೊಂದು ಹವ್ಯಾಸ ಇರುವುದು ಮುಖ್ಯ. ಈ ಮಾಹಿತಿ ಕಲೆಹಾಕುವ ಕ್ರಿಯೆಯಲ್ಲಿ ಮೆದುಳು ಅತ್ಯಂತ ಚುರುಕಾಗಿ ಕೆಲಸ ಮಾಡುತ್ತದೆ. ಇದೇ ವ್ಯಕ್ತಿ ಮತ್ತೊಮ್ಮೆ ಭೇಟಿಯಾದಾಗ ಹಿಂದೆ ಕಲೆಹಾಕಿದ ವಿವರಗಳು ಮತ್ತೆ ಹೊರತರುವ ಮೂಲಕ ಮೆದುಳಿಗೆ ಹೆಚ್ಚಿನ ಕೆಲಸ ಕೊಟ್ಟಂತಾಗಿ ಚುರುಕಾಗುತ್ತದೆ.

ಕೊಂಚ ಹೊತ್ತಿನ ಧ್ಯಾನ ಮಾಡಿ
ಹಿಂದೆ ಋಷಿಮುನಿಗಳು ಕೇವಲ ಗಾಳಿಯ ಸೇವನೆ ಮಾಡಿ ಧ್ಯಾನದಲ್ಲಿ ವರ್ಷಗಟ್ಟಲೇ ಮುಳುಗಿದ್ದು ಅಪಾರ ಪಾಂಡಿತ್ಯವನ್ನು ಪಡೆಯುತ್ತಿದ್ದರಂತೆ. ದೇಹದ ಎಲ್ಲಾ ಶಕ್ತಿಯನ್ನು ಮೆದುಳಿನೆಡೆಗೆ ಕೇಂದ್ರೀಕರಿಸಿ ದೈಹಿಕ ಅವಶ್ಯಕತೆಗಳನ್ನು ಕನಿಷ್ಟಕ್ಕಿಳಿಸಿದ್ದುದರಿಂದ ಇದು ಸಾಧ್ಯವಾಗುತ್ತದೆ. ಆದರೆ ನಮಗೆ ತಪಸ್ಸು ಮಾಡುವಷ್ಟು ಧ್ಯಾನದ ಅಗತ್ಯವಿಲ್ಲ. ದಿನದಲ್ಲಿ ಕೆಲವು ನಿಮಿಷಗಳಾದರೂ ಧ್ಯಾನ ಮಾಡುವುದರಿಂದ ದೇಹ ನಿರಾಳವಾಗಿದ್ದು ಎಲ್ಲಾ ರೀತಿಯ ಒತ್ತಡ ಮತ್ತು ದುಗುಡದಿಂದ ಹೊರಬರಲು ಸಾಧ್ಯವಾಗುತ್ತದೆ.

ಧ್ಯಾನದ ಬಳಿಕ ನಿಮ್ಮ ಮೆದುಳು ಹೊಸ ವಿಷಯವನ್ನು ಕಲಿಯಲು ಹೆಚ್ಚು ಸಮರ್ಥವಾಗಿರುತ್ತದೆ. ಸಾಮಾನ್ಯವಾಗಿ ಧ್ಯಾನ ಎಂದರೆ ಹೆಚ್ಚಿನವರು ಕೇವಲ ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ಎಂದು ತಿಳಿದಿದ್ದಾರೆ. ಧ್ಯಾನ ಎಂದರೆ ನಮ್ಮ ಮೆದುಳಿನ ಯೋಚನೆಗಳನ್ನು ಯಾವುದಾದರೂ ಏಕವಿಷಯದೆಡೆ ಕೇಂದ್ರೀಕರಿಸುವುದು ಮತ್ತು ಅಷ್ಟೂ ಹೊತ್ತಿನಲ್ಲಿ ಯಾವುದೇ ಇತರ ಯೋಚನೆಗಳು ಬಾರದಂತೆ ತಡೆಯುವುದು. ಓಂಕಾರದತ್ತ ಗಮನ ಕೇಂದ್ರೀಕರಿಸುವುದು ಋಷಿಮುನಿಗಳು ಪಾಲಿಸಿಬಂದಿರುವ ಪದ್ದತಿ. ಪಿರಮಿಡ್ಡುಗಳ ಒಳಗೆ ಈ ರೀತಿಯ ಧ್ಯಾನ ನಡೆಸುವುದು ಅತ್ಯುತ್ತಮ ಎಂದು ಸಂಶೋಧನೆಗಳು ಧೃಢಗೊಳಿಸಿವೆ.

ಹೊಸ ವಿಷಯವೊಂದನ್ನು ಕಲಿಯುವ ಮೂಲಕ ಮೆದುಳಿಗೆ ಸವಾಲು ನೀಡಿ
ಹೊಸ ಕೌಶಲ್ಯತೆಯೊಂದನ್ನು ಕಲಿಯಲು ವಯಸ್ಸಿನ ಮಿತಿಯಿಲ್ಲ. ಹೊಸ ಭಾಷೆಯೊಂದನ್ನು ಕಲಿಯುವುದು, ಸಂಗೀತ, ಚಿತ್ರ ಮೊದಲಾದ ಕಲಾಪ್ರಾಕಾರಗಳು, ಪುಸ್ತಕವೊಂದನ್ನು ಬರೆಯುವುದು, ಹೆಚ್ಚಿನ ದೈಹಿಕ ಅವಶ್ಯಕತೆ ಬೇಡುವ ಬೆಟ್ಟ ಹತ್ತುವುದು, ಈಜು ಮೊದಲಾದ ವಿದ್ಯೆಗಳನ್ನು ಕಲಿಯುವುದು ಮೊದಲಾದವು ಮೆದುಳಿಗೆ ಸವಾಲು ನೀಡುತ್ತವೆ. ಇಂದು ಅಂತರ್ಜಾಲ ಜಾಲಾಡಿದರೆ ಇಂತಹ ಸಾವಿರಾರು ವಿಷಯಗಳು ಕಲಿಯಲು ಸಿಗುತ್ತವೆ. ಇದರಲ್ಲಿ ನಿಮಗೆ ಅತ್ಯಂತ ಸೂಕ್ತ ಎನಿಸಿದ ವಿಷಯದಲ್ಲಿ ಪರಿಣಿತರಾಗಲು ಯತ್ನಿಸುವ ಮೂಲಕ ಮೆದುಳನ್ನು ಚುರುಕಾಗಿ ಇರಿಸಬಹುದು.

ನಿಮ್ಮ ಪ್ರೀತಿಪಾತ್ರರೊಂದಿಗೆ ಹೆಚ್ಚಿನ ಕಾಲ ಕಳೆಯಿರಿ
ಪ್ರೀತಿ ಇಲ್ಲದ ಮೇಲೆ ಜೀವನದಲ್ಲಿ ಸಾರವೆಂತು? ನೀವು ಅಗಾಧವಾಗಿ ಪ್ರೀತಿಸುವವರಿಗೆ ನೀವು ಕೊಡಬಹುದಾದ ಅತ್ಯಂತ ಶ್ರೇಷ್ಟ ಉಡುಗೊರೆ ಎಂದರೆ ನಿಮ್ಮ ಸಮಯ. ಮಕ್ಕಳಿಗೆ ಅವರ ತಂದೆತಾಯಿಯರೇ ಪ್ರಥಮವಾದ ಆದರ್ಶವಾಗುತ್ತಾರೆ. ಹೆಂಡತಿ ಮಕ್ಕಳೊಂದಿಗೆ, ತಂದೆ ತಾಯಿಯರೊಂದಿಗೆ, ಸ್ನೇಹಿತರೊಂದಿಗೆ, ನೆರೆ ಹೊರೆಯವರೊಂದಿಗೆ, ನಿಮ್ಮ ಸಹಾಯ ಅಪೇಕ್ಷಿಸಿ ಬಂದವರೊಂದಿಗೆ ಸಾಧ್ಯವಾದಷ್ಟು ಕ್ಷಣಗಳನ್ನು ಕಳೆಯುವುದರಿಂದ ಮೆದುಳು ಸಾರ್ಥಕ ಭಾವನೆಯನ್ನು ಪಡೆಯುತ್ತದೆ. ಅಲ್ಲದೇ ಭಾವನಾತ್ಮಕ ಜೀವನಕ್ಕೆ ಇದು ಅತ್ಯಂತ ಅಗತ್ಯ ಕೂಡಾ. ನೀವು ನೀಡಬಹುದಾದ ನೆರವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನೀಡುವ ಮೂಲಕ ನೆರವು ಪಡೆದವರಿಂದ ಪಡೆಯುವ ಆಶೀರ್ವಾದ ನಿಮ್ಮ ಮೆದುಳನ್ನು ಅತ್ಯುತ್ತಮ ಮಟ್ಟದಲ್ಲಿರಿಸುತ್ತದೆ. ಉದಾಹರಣೆಗೆ ರಕ್ತದ ಬೇಡಿಕೆ ಇರುವ ರೋಗಿಯೊಬ್ಬರಿಗೆ ರಕ್ತ ನೀಡಿ ಅವರ ಜೀವ ಕಾಪಾಡಿದ ಬಳಿಕ ರೋಗಿ ಮತ್ತು ಅವರ ಮನೆಯವರು ನೀಡುವ ಆಶೀರ್ವಾದ ಮತ್ತು ತಮ್ಮಿಂದಾಗಿ ಒಬ್ಬರಿಗೆ ಒಳ್ಳೆಯದಾಯಿತಲ್ಲಾ ಎಂಬ ಸಾರ್ಥಕತೆಯ ಮನೋಭಾವ ಮೆದುಳು ಹೆಚ್ಚು ಸಕ್ಷಮವಾಗಿರಲು ಸಹಾಯ ಮಾಡುತ್ತದೆ.

ಸೋಮಾರಿಯಾಗದಿರಿ
ಖಾಲಿ ಮನವು ಸೈತಾನನ ಸ್ವರ್ಗ ಎಂದು ಆಂಗ್ಲ ಸುಭಾಷಿತವೊಂದು ತಿಳಿಸುತ್ತದೆ. ನಮ್ಮ ಮೆದುಳು ಹೇಗೆ ಇಡಿಯ ದಿನ ಯಾವುದಾದರೂ ಕೆಲಸದಲ್ಲಿ ಮಗ್ನವಾಗಿರಬೇಕೋ ಅಂತೆಯೇ ನಮ್ಮ ದೇಹದ ಪ್ರತಿ ಸ್ನಾಯುವೂ ಚಟುವಟಿಕೆಯಿಂದಿದ್ದರೆ ಮಾತ್ರ ದೇಹ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಿರುತ್ತದೆ. ಆದುದರಿಂದ ದಿನದಲ್ಲಿ ಸಾಧ್ಯವಾದಷ್ಟು ಹೊತ್ತು ಸಾಧ್ಯವಾದ ದೈಹಿಕ ಚಟುವಟಿಕೆಗಳನ್ನು ಮಾಡುತ್ತಿರುವುದರಿಂದ ಮೆದುಳು ಕಾರ್ಯನಿರತವಾಗಿದ್ದು ಚುರುಕಾಗಿರುತ್ತದೆ. ನಿಮ್ಮ ಹವ್ಯಾಸಗಳಲ್ಲಿ ಕೆಲವಾದರೂ ದೈಹಿಕ ಚಟುವಟಿಕೆಗಳನ್ನು ಬೇಡುವಂತಿರಲಿ. ಉದಾಹರಣೆಗೆ ತೋಟಗಾರಿಕೆ, ಸೈಕಲ್ ಸವಾರಿ, ಈಜು ಮೊದಲಾದವು. ಪ್ರತಿದಿನ ನಿಯಮಿತವಾಗಿ ವ್ಯಾಯಾಮಗಳನ್ನೂ ಮಾಡುವ ಮೂಲಕ ಮೆದುಳು ಚುರುಕಾಗಿರುತ್ತದೆ.

ಮೆದುಳಿಗೆ ಅಗತ್ಯವಾದ ಆಹಾರಗಳನ್ನು ಸೇವಿಸಿ
ಮೆದುಳಿಗೆ ಅತ್ಯಂತ ಹೆಚ್ಚು ರಕ್ತದ ಅಗತ್ಯವಿದೆ. ಇದೇ ಕಾರಣಕ್ಕಾಗಿ ಹೃದಯದಿಂದ ಹೆಚ್ಚು ಪ್ರಮಾಣದಲ್ಲಿ ಮೆದುಳಿಗೆ ರಕ್ತ ಸರಬರಾಜು ಆಗುವ ನರ ಅತ್ಯಂತ ದೊಡ್ಡದಾಗಿರುತ್ತದೆ. ಅಲ್ಲದೇ ಮೆದುಳನ್ನು ಚುರುಕಾಗಿಸಲು ಹೆಚ್ಚಿನ ಪೌಷ್ಟಿಕ ಆಹಾರದ ಅಗತ್ಯವೂ ಇದೆ. ಒಣಫಲಗಳು, ಒಣ ಕುಂಬಳ ಬೀಜ, ಖರ್ಜೂರ, ಬ್ಲೂಬೆರಿ, ಸಾಲ್ಮನ್ ಮೀನು, ಬೆಣ್ಣೆ ಹಣ್ಣು, ಇಡಿಯ ಕಾಳುಗಳು, ದಾಳಿಂಬೆ, ಕಪ್ಪು ಚಾಕಲೇಟು (ಕಡಿಮೆ ಪ್ರಮಾಣದಲ್ಲಿ) ಮತ್ತು ಟೀ ಸಹಾ ಮೆದುಳನ್ನು ಚುರುಕಾಗಿಸುವ ಆಹಾರಗಳಾಗಿವೆ. ಉತ್ತಮ ಆಹಾರದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಬಹುದು.

ಪ್ರತಿದಿನಕ್ಕೆ ಅಗತ್ಯವಿದ್ದಷ್ಟು ಕಾಲ ನಿರಾಳವಾಗಿ ನಿದ್ರಿಸಿ
ನಿದ್ದೆಯ ಅವಶ್ಯಕತೆ ದೇಹಕ್ಕೂ ಮೆದುಳಿಗೂ ಅಗತ್ಯವಾಗಿದೆ. ವಯಸ್ಕರಲ್ಲಿ ದೈಹಿಕ ಚಟುವಟಿಕೆಗಳನ್ನು ಆಧರಿಸಿ ಆರರಿಂದ ಎಂಟು ಗಂಟೆಗಳ ಕಾಲ ನಿದ್ರಿಸುವುದು ಅಗತ್ಯವಾಗಿದೆ. ಆದರೆ ಈ ನಿದ್ರೆ ತಡೆಯಿಲ್ಲದೇ ಹಾಗೂ ಅವಿರತವಾಗಿರಬೇಕು. ತಡೆತಡೆದು ಮಾಡಿದ ನಿದ್ದೆ ಮೆದುಳಿನ ಕಾರ್ಯಕ್ಷಮತೆಯನ್ನು ಕ್ಷೀಣಿಸುತ್ತದೆ. ಒಂದು ಸಂಶೋಧನೆಯ ಪ್ರಕಾರ ಪ್ರತಿ ಎರಡು ಗಂಟೆಗಳ ಬಳಿಕ ಹತ್ತು ನಿಮಿಷಗಳ ಕಿರುನಿದ್ದೆ ಪಡೆದು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಚುರುಕಾಗಿರಬಹುದು. ಆದರೆ ಇದನ್ನು ಒಂದೆರಡು ದಿನ ಅನುಸರಿಸಬಹುದಷ್ಟೇ ವಿನಃ ಪ್ರತಿದಿನ ಸಾಧಿಸಲು ಸಾಧ್ಯವಿಲ್ಲ. ನಿಸರ್ಗ ನಿಮಯಕ್ಕನುಸಾರವಾಗಿ ರಾತ್ರಿ ಮಲಗಿ ಸಂಪೂರ್ಣ ವಿಶ್ರಾಂತಿ ಪಡೆಯುವುದು ಮೆದುಳು ಚುರುಕಾಗಿರಲು ಮತ್ತು ದೇಹ ಆರೋಗ್ಯಕರವಾಗಿರಲು ಅವಶ್ಯವಾಗಿದೆ.

English summary

Want A Sharper Brain? Try These Easy Tips

Your mind is your only tool to figure out what this world is about and how to survive well in it. So, you must keep it healthy. If your mind is sharp, you can achieve more. Are there any tips for sharper brain? Yes, there are a few and we shall discuss about them in this article.
X
Desktop Bottom Promotion