For Quick Alerts
ALLOW NOTIFICATIONS  
For Daily Alerts

ಹವ್ಯಾಸಗಳ ನಂಟು, ಒತ್ತಡ ಎಲ್ಲುಂಟು?

By Super
|

ಆಫೀಸ್ ನಲ್ಲಿ ಬಾಸ್ ಬೈಗುಳ, ಬಸ್ಸಿನಲ್ಲಿ ಕಾಲಿಡಲು ಆಗದಷ್ಟು ಜನಜಂಗುಳಿ ಮನೆಗೆ ಬಂದಾಗ ಬಾಕಿ ಇರುವ ಕೆಲಸದ ಪಟ್ಟಿ ನೀವು ಒತ್ತಡಕ್ಕೊಳಗಾಗದೇ ಇರಲು ಸಾಧ್ಯವೇ ಇಲ್ಲ. ಹೆಚ್ಚು ಹೆಚ್ಚು ಜವಾಬ್ದಾರಿ ನಿಮ್ಮನ್ನು ಹೆಚ್ಚಿನ ಒತ್ತಡಕ್ಕೆ ತಳ್ಳುತ್ತದೆ. ಹೀಗೆ ಪ್ರತಿದಿನದ ಚಿಂತೆಗಳು ನಿಮ್ಮ ಜೀವನವನ್ನೇ ದುರ್ಭರವನ್ನಾಗಿಸುತ್ತದೆ. ಹಾಗಂತ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂದಿನ ಕಾಂಪಿಟೇಟಿವ್ ಜಗತ್ತಿನಲ್ಲಿ ಸುಮ್ಮನೆ ಹಿಂದೆ ಕುಳಿತು ನೋಡಿದರೆ ನಿಮ್ಮನ್ನು ಮತ್ತಷ್ಟು ಹಿಂದೆ ತಳ್ಳುವ ಜನಗಳೇ ಜಾಸ್ತಿ. ಹಾಗಾದರೆ ಇದರಿಂದ ಹೊರ ಬರುವುದು ಹೇಗೆ. ಸ್ವಲ್ಪ ಹೊತ್ತು ನಿಮ್ಮ ಮನಸ್ಸನ್ನು ನಿಮ್ಮ ಗಮನವನ್ನು ಇವುಗಳಿಂದ ದೂರ ಇಡಿ ಮತ್ತೆ ಎರಡು ಪಟ್ಟು ಹೆಚ್ಚು ಆಸಕ್ತಿಯಿಂದ ಬಾಕಿ ಉಳಿದ ಕೆಲಸ ಮಾಡಲು ನಿಮಗೆ ಸಾಧ್ಯ ಆಗುತ್ತದೆ.

ಇಂದಿನ ಜಗತ್ತಿನಲ್ಲಿ ಒತ್ತಡವಿಲ್ಲದ ಜೀವನ ಒಂದು ಕನಸಷ್ಟೇ. ಆರಾಮವಾಗಿ ಹೆಚ್ಚಿನ ಒತ್ತಡವಿಲ್ಲದೆ ಇರಬೇಕು ಎಂದು ಅಂದುಕೊಂಡರೆ ಅದು ಸಾಧ್ಯವಾಗದ ಮಾತು. ನಿಮಗೆ ಹೆಚ್ಚಿನ ಒತ್ತಡ ತರುವ ವಿಷಯಗಳಿಂದ ವಿಮುಖರಾದಾಗ ನೀವು ಒತ್ತಡದಿಂದ ಸ್ವಲ್ಪ ಕಾಲ ದೂರವಾಗಿದ್ದು ಆರಾಮವಾಗಿರಬಲ್ಲಿರಿ. ನಿಮಗೆ ಖುಷಿ ಕೊಡುವ 'ನಾನಿದನ್ನು ಮಾಡಬೇಕು' ಎಂದು ಅನ್ನಿಸುವ ಕೆಲಸಗಳನ್ನು ಮಾಡಿದಾಗ ನಿಮ್ಮ ದೈನಂದಿನ ಕೆಲಸದ ಒತ್ತಡವನ್ನು ನಿಮಗೆ ಮರೆಯಲು ಸಾಧ್ಯ. ನಿಮ್ಮ ಆಸಕ್ತಿಯ ಕೆಲಸದ ಬಗೆಗಿನ ನಿಮ್ಮ ಪ್ರೀತಿ ಕೆಲ ಹೊತ್ತು ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ದು ನಿಮ್ಮನ್ನು ಪುನಃ ದೈನಂದಿನ ಜೀವನಕ್ಕೆ ಸಜ್ಜುಗೊಳಿಸುತ್ತದೆ. ಇಲ್ಲಿ 6 ಇಂತಹ ಸಾಮಾನ್ಯವಾದ ಹವ್ಯಾಸಗಳನ್ನು ಪಟ್ಟಿಮಾಡಲಾಗಿದೆ. ನೀವಿದರಲ್ಲಿ ಒಂದನ್ನೂ ಪಾಲಿಸದೇ ಒತ್ತಡದಿಂದ ಹೊರಬರಲು ಕಾತರರಾಗಿದ್ದರೆ ಇವುಗಳನ್ನು ಪ್ರಯತ್ನಿಸಿ. ಖಂಡಿತ ಉಪಯೋಗವಾಗುತ್ತದೆ.

1. ಕೈತೋಟ(ಗಾರ್ಡನಿಂಗ್)

1. ಕೈತೋಟ(ಗಾರ್ಡನಿಂಗ್)

ಪ್ರಕೃತಿಯ ಹತ್ತಿರವಿರುವಷ್ಟು ಹೊತ್ತು ನೀವು ಖುಷಿಯಾಗಿರುತ್ತೀರಿ. ನಿಸರ್ಗದ ಶಾಂತತೆ ನಿಮ್ಮ ಕೆಲಸದ ಒತ್ತಡವನ್ನು, ಬಾಕಿ ಇರುವ ಕೆಲಸದ ಪಟ್ಟಿಯನ್ನು ನಿಮ್ಮಿಂದ ಸ್ವಲ್ಪ ಕಾಲ ದೂರದಲ್ಲಿಟ್ಟು ಮನಸ್ಸನ್ನು ಹಗುರಾಗಿಸುತ್ತದೆ. ಅರಳಿರುವ ಹೂವು, ಗಿಡಕ್ಕೆ ನೀರು ಹಾಕಿದಾಗ ನಿಮಗೆ ಸಿಗುವ ಅನುಭವ ಒಂದು ರೀತಿಯ ವಿಶಿಷ್ಟ ಅನುಭೂತಿ ನೀಡುತ್ತದೆ. ನೀವೆ ನೆಟ್ಟು ಬೆಳೆಸಿದ ಗಿಡದಲ್ಲಾದ ಮೊದಲ ಹಣ್ಣು ಅದರ ರುಚಿ ಸವಿದವನೇ ಬಲ್ಲ. ಇದರ ಜೊತೆಗೆ ಹಸಿರು ಯಾವಾಗಲೂ ನಿಮ್ಮನ್ನು ಹಸನಾಗಿಡುವ ಬಣ್ಣ. ಹಸಿರಿನೊಂದಿಗೆ ಇದ್ದ ಸಮಯವೆಲ್ಲಾ ನಿಮ್ಮನ್ನು ಶಾಂತವಾಗಿಡುತ್ತದೆ.

2. ಓದು

2. ಓದು

ಓದುವುದು ಒಂದು ಅತ್ಯುತ್ತಮ ಹವ್ಯಾಸ. ನಿಮಗೆ ಆಸಕ್ತಿ ಇರುವ ಪುಸ್ತಕಗಳ ಸಂಗ್ರಹ ನಿಮ್ಮನ್ನು ಎಂದಿಗೂ ಬೇಜಾರಲ್ಲಿಡದು. ಓದಿದಂತೆ ಆ ಕತೆಯೊಳಗೆ ಅಥವಾ ಕಾದಂಬರಿಯೊಳಗೆ ಅಥವಾ ಯಾವುದೋ ಒಂದು ಪ್ರಮುಖ ವಿಷಯದಲ್ಲಿ ನಿಮ್ಮನ್ನು ನೀವೇ ಮರೆತು ಓದಿದಾಗ ಸಿಗುವ ಖುಷಿ ಬಣ್ಣಿಸಲಸಾಧ್ಯ. ಓದು ಜ್ಞಾನವನ್ನು ಹೆಚ್ಚಿಸುವ ಜೊತೆಗೆ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.

3. ವ್ಯಾಯಾಮ

3. ವ್ಯಾಯಾಮ

ಯೋಗದ ಕೆಲವು ಭಂಗಿಗಳನ್ನು ಅಭ್ಯಾಸಮಾಡಿಕೊಳ್ಳುವುದೂ ಒತ್ತಡದಿಂದ ಹೊರಬರುವ ಒಂದು ವಿಧಾನ. ಇದು ನಿಮಗೆ ಒತ್ತಡದಿಂದ ಮುಕ್ತಿ ನೀಡುತ್ತದೆ. ಇದು ಈಗ ಅಷ್ಟೇ ಅಲ್ಲದೇ ಹಿಂದಿನ ಕಾಲದಿಂದಲೂ ಸಾಮಾನ್ಯವಾಗಿ ಬಳಸುವ ಮಾರ್ಗವಾಗಿದೆ. ಹೆಚ್ಚು ತ್ರಾಸದಾಯಕವಲ್ಲದ ನಿಮಗೆ ಸರಿಯಾಗಿ ಹೊಂದುವ ಕೆಲವು ಆಸನಗಳನ್ನು ಅಭ್ಯಾಸ ನಡೆಸಿ ಪ್ರತಿದಿನ ಸ್ವಲ್ಪ ಹೊತ್ತು ಕಳೆದರೆ ಸಾಕು.

4. ಅಡುಗೆ

4. ಅಡುಗೆ

ನಿಮಗೆ ಅಡುಗೆ ಮಾಡಲು ಬರುತ್ತದೆ ಎಂದಾದರೆ ಇದೂ ಕೂಡ ಒತ್ತಡ ನಿವಾರಕವಾಗಿ ಕೆಲಸ ಮಾಡುತ್ತದೆ. ಅಡುಗೆ ಮಾಡುತ್ತಿದ್ದಷ್ಟು ಹೊತ್ತು ನಿಮ್ಮ ಗಮನ ಬೇರೆಡೆಗೆ ಇರುತ್ತದೆ ಆ ಸಮಯದಲ್ಲಿ ದಿನವಿಡಿ ದುಡಿದ ದಣಿವು ಜೊತೆಗೆ ನಿಮ್ಮನ್ನು ಒತ್ತಡದಲ್ಲಿಡುವ ವಿಚಾರಗಳು ನಿಮ್ಮ ಮನಸ್ಸಿನಿಂದ ದೂರವಿರುತ್ತವೆ. ಇದರ ಜೊತೆಗೆ ನೀವೇ ಏನಾದರೂ ಹೊಸರುಚಿ ಮಾಡಲು ಪ್ರಯತ್ನಿಸಿ. ಅದರ ರುಚಿ ಸವಿದಾಗ ಆಗುವ ಖುಷಿ ಮತ್ತಷ್ಟು ಹೊಸ ಅಡುಗೆ ಪ್ರಯತ್ನಿಸುವಂತೆ ನಿಮ್ಮನ್ನು ಆಕರ್ಷಿಸುತ್ತದೆ.

5. ಸಂಗೀತ ಕೇಳುವುದು

5. ಸಂಗೀತ ಕೇಳುವುದು

ನೀವು ಅತೀ ಹೆಚ್ಚಿನ ಒತ್ತಡದಲ್ಲಿದ್ದಾಗ ನೀವು ಮಾಡಬೇಕಾದ ಮೊದಲ ಕೆಲಸ ಸಂಗೀತ ಕೇಳುವುದು. ನಿಮಗೆ ಇಷ್ಟವಾಗುವ ಸಂಗೀತವನ್ನು ಕೆಲ ಹೊತ್ತು ಕೇಳಿದಾಗ ನಿಮ್ಮನ್ನೇ ನೀವು ಮರೆತಿರುತ್ತೀರಿ ಇನ್ನು ಒತ್ತಡ ಯಾವ ಲೆಕ್ಕ! ಇದು ಕೂಡಲೇ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಹಾಗಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳದೆ ನಿಮ್ಮನ್ನು ಮತ್ತೊಮ್ಮೆ ಕೆಲಸಕ್ಕೆ ಮರಳುವಂತೆ ಮಾಡುತ್ತದೆ.

6. ಬರೆಯುವಿಕೆ

6. ಬರೆಯುವಿಕೆ

ಇನ್ನೊಂದು ಪ್ರಮುಖವಾದ ಹಾಗೆಯೇ ಪ್ರಭಾವಶಾಲಿಯಾದ ಒತ್ತಡ ನಿವಾರಕ ಹವ್ಯಾಸ ಎಂದರೆ ಬರೆಯುವುದು. ಕಥೆ ಇರಲಿ, ಕವನ ಇರಲಿ, ಅಥವಾ ನಿಮ್ಮ ದಿನನಿತ್ಯದ ಡೈರಿಯಾಗಲಿ ಬರೆಯುವ ಅಭ್ಯಾಸ ಇದ್ದರೆ ಒತ್ತಡದಿಂದ ಶೀಘ್ರ ಉಪಶಮನ ಸಾದ್ಯ. ನಿಮ್ಮ ಮನಸ್ಸಿಗೆ ಬರುವ ಯಾವುದೇ ಯೋಚನೆಯಾದರೂ ಅದನ್ನು ಬರಹ ರೂಪಕ್ಕೆ ಇಳಿಸಿದಾಗ ಆಗುವ ಖುಷಿ, ಸಿಗುವ ಸಮಾಧಾನ ನಿಮ್ಮನ್ನು ಬೇರೆಲ್ಲಾ ಚಿಂತೆಯಿಂದ ಮುಕ್ತಿ ನೀಡುತ್ತದೆ. ಇದರ ಜೊತೆಗೆ ಇದು ಒಂದು ಆಕರ್ಷಕ ಹವ್ಯಾಸವೂ ಹೌದು ಜನ ನಿಮ್ಮನ್ನು ಇದರಿಂದಾಗಿಯೇ ಗುರುತಿಸಲೂ ಬಹುದು!.

ಇವುಗಳಲ್ಲಿ ನಿಮಗೆ ಆಸಕ್ತಿ ಇರುವ ನೀವು ಮಾಡಬಹುದಾದ ಯಾವುದೇ ಒಂದನ್ನು ಆರಿಸಿ. ಬೇರೆಯವರಿಗೆ ಇಷ್ಟ ಆಗಿದ್ದು ನಿಮಗೆ ಆಗದೇ ಇರಬಹುದು. ಬೇರೆಯವರು ಮಾಡಿದ್ದು ನಿಮಗೆ ಆಗದೇ ಇರಬಹುದು. ಹಾಗಾಗಿ ಕಷ್ಟವಾದ್ದನ್ನು ಆರಿಸಿ ಹೆಚ್ಚು ಒತ್ತಡಕ್ಕೊಳಗಾಗಬೇಡಿ. ನೀವು ಆರಾಮವಾಗಿ ಮಾಡುವ, ನಿಮಗೆ ಖುಷಿ ನೀಡುವ ಒಂದನ್ನು ಆರಿಸಿ. ಖಂಡಿತ ನಿಮ್ಮ ಒತ್ತಡ ದೂರವಾಗಿ ಮುಖದ ಮೇಲೆ ನೆಮ್ಮದಿಯ ಕಳೆ ಬರುತ್ತದೆ.

English summary

6 Great Hobbies That Relieve Stress | Tips For Health | ಹವ್ಯಾಸಗಳ ನಂಟು ಒತ್ತಡ ಎಲ್ಲುಂಟು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Stress is an inevitable element that has become part and parcel of the busy lifestyles that we lead today. In order to de-stress yourself, you need to do things that will take your mind away to something else. Listed here are 6 hobbies you may consider pursuing to unwind yourself from daily stress. 
X
Desktop Bottom Promotion