For Quick Alerts
ALLOW NOTIFICATIONS  
For Daily Alerts

ಮನೇಲಿ ಟಾಯ್ಲೆಟ್ ಇಲ್ಲದಿದ್ದರೂ ಕೈಲಿ ಮೊಬೈಲ್!

By ಚಿತ್ರಾ ಬಡಿಗೇರ್
|

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಅಂತ ಆಗಿನ ಕಾಲದಲ್ಲಿತ್ತು. ಈಗ ಅದನ್ನು ಬದಲಾಯಿಸಿ ಮನೇಲಿ ಟಾಯ್ಲೆಟ್ ಇಲ್ಲದಿದ್ದರೂ ಕೈಲಿ ಮೊಬೈಲ್ ಅಂತ ಹೇಳಬಹುದು. ಶುದ್ಧತೆಗಿಂತ ಜನರು ಶೋಕಿಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮನುಷ್ಯರಿಗೆ ಊಟ ಎಷ್ಟು ಮೂಖ್ಯವೋ ಶುದ್ಧತೆಯು ಅಷ್ಟೆ ಅವಶ್ಯ. ಇಂದು ಹರಡುವ ಅನೇಕ ರೋಗಗಳಿಗೆ ಮೂಲ ಈ ಶೌಚಾಲಯಗಳಾಗಿವೆ ಎಂದರೆ ನೀವು ನಂಬಲೇಬೇಕು. ವಿಶ್ವ ಶೌಚಾಲಯ ದಿನವಾದ ಇಂದು (ನ.19) ನಮ್ಮ ಸಮಸ್ಯೆಗಳತ್ತ ಗಮನ ಹರಿಸುವುದು ತೀರ ಅಗತ್ಯವಾಗಿದೆ.

ನಮ್ಮ ಸರ್ಕಾರವು ಶೌಚಾಲಯಗಳಿಗೆಂದೆ ಅನೇಕ ಯೋಜನೆಗಳನ್ನು ರೂಪಿಸಿದೆ. ಟೊಟಲ್ ಸ್ಯಾನಿಟೆಶನ್ ಕ್ಯಾಂಪೇನ್ ಅಡಿಯಲ್ಲಿ ಶೌಚಾಲಯಕ್ಕೆಂದು ಸಬ್ಸಿಡಿಗಳನ್ನು ನೀಡಲಾಗಿದೆ. ಶೌಚಾಲಗಳನ್ನು ಕಟ್ಟಿ ಅದನ್ನು ಗ್ರಾಮ ಪಂಚಾಯತಿಗೆ ತೋರಿಸಿದರೆ ಅವರು ಸಬ್ಸಿಡಿಯನ್ನು ಮಂಜೂರು ಮಾಡುವುದರ ಜೊತೆಗೆ ಬಾಗಿಲು ಮತ್ತು ನಲ್ಲಿಗಳಿಗೆ ಸಹಾಯ ಮಾಡುತ್ತಾರೆ.

ಸರ್ಕಾರದವರು ನೀಡಿದ ಸೌಲಭ್ಯ ಕೆಲವು ಕಡೆ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಅನೂಕೂಲವಾಗಿದೆ. ಹಳ್ಳಿಗಳಲ್ಲಿ ಎಷ್ಟೊ ದೂರ ಚಂಬು ಹಿಡಿದು ಊರಾಚೆ ಹೋಗುವ ಗೋಳು, ಕಿರಿಕಿರಿ ಇದರಿಂದ ತಪ್ಪಿದೆ. ವೃದ್ದರಿಂದ ಹಿಡಿದು ಮನೆ ಮಂದಿಗೆಲ್ಲಾ ಸರ್ಕಾರದ ಯೋಜನೆ ತಲುಪಿದೆ. ಇಷ್ಟಾದರೆ ಸಾಕಾ?

Spotlight on sanitation in Karnataka for World Toilet Day

ಆದರೂ ಇನ್ನು ಕೆಲವೆಡೆ ಈ ಶೌಚಾಲಯಗಳು ಜನರಿಗೆ ತಲುಪವಲ್ಲಿ ಫಲಕಂಡಿಲ್ಲ. ಅದಕ್ಕೆ ಮುಖ್ಯ ಕಾರಣ ನೀರು. ಹಳ್ಳಿಯಲ್ಲಿ ಕುಡಿಯುವ ನೀರಿಗೆ ಬರ ಇರುವಾಗ ಇನ್ನೂ ಶೌಚಾಲಯಕ್ಕೆ ನೀರೆಲ್ಲಿಂದ ಒದಗಿಸುವುದು? ಜನರ ನಿರ್ಲಕ್ಷ್ಯತನ ಕೂಡ ಶೌಚಾಲಯದ ಬೆಳವಣಿಗೆಗೆ ಮಾರಕವಾಗಿದೆ. ಆದ ಕಾರಣ ಸರ್ಕಾರದವರು ನೀರಿನ ಸುವ್ಯವಸ್ತೆ ಮಾಡಿದರೆ ಗ್ರಾಮದ ಬಹು ಪಾಲು ಸಮಸ್ಯೆ ಮಾಯವಾದಂತೆ. ಅವರಲ್ಲಿ ಶೌಚಾಲಯ ಉಪಯೋಗದ ಮಹತ್ವದ ಕುರಿತಾದ ಅರಿವು ಹುಟ್ಟಿಸುದು ಅವಶ್ಯ. ಅದು ಬೀದಿ ನಾಟಕದ ಮೂಲಕವಾಗಲಿ, ಇಲ್ಲ ಮನೆಮನೆಗೆ ವಿಷಯಸೂಚಿಯಾಗಿ, ಇಲ್ಲವೆ ಪಂಚಾಯತಿ ಕಟ್ಟೆ, ಮಹಿಳಾ ಸಂಘಟನೆಗಳ ಮುಲಕ ಪ್ರಚಾರ ಮಾಡಬಹುದು.

ಹೆಮ್ಮೆಯ ಸಂಕೇತ : ಕೆಲವರಿಗೆ ಶೌಚಾಲಯ ಉಪಯೋಗಿಸದೆ ಇರುವುದು ಹೆಮ್ಮೆಯ ಪ್ರತೀಕವಾಗಿದೆ. ನಾವು ನಮ್ಮ ಬೆಳಗಿನ ಕೆಲಸಗಳನ್ನು ನಿಸರ್ಗದಲ್ಲಿ, ಹೊಲದಲ್ಲಿ ಮಾಡಿ ಬರುತ್ತೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅದರೆ ಆ ಚಂಬು ನೀರು ಹೇಗೆ ಶುಚಿಗೊಳಿಸುತ್ತದೆಯೊ ಗೊತ್ತಿಲ್ಲ. ಇನ್ನು ಅಲ್ಲಿ ಕೆರೆಯ ನೀರನ್ನೆ ಉಪಯೊಗಿಸಿ ಅಲ್ಲಿನ ಕ್ರಿಮಿಕೀಟಗಳು ಸಾಂಕ್ರಾಮಿಕ ರೋಗಗಳನ್ನು ಮೆತ್ತಿಕೊಂಡು ಬರುತ್ತಾರೆ. ತೊಳೆದುಕೊಳ್ಳಲು ಕೆರೆಯನ್ನು ಬಳಸುವುದಿರಲಿ, ಇವರು ಕೆರೆಯನ್ನೇ ಹೊಲಸು ಮಾಡಿ ಬರುತ್ತಾರೆ. ಇನ್ನೂ ಕೆಲವರು ಶೌಚಾಲಯದಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಮಡಿವಂತಿಕೆ ಅಲ್ಲ ಎಂದು ತಿಳಿಯುತ್ತಾರೆ. ಶೇಮ್ ಶೇಮ್.

ಶೌಚಾಲಯಗಳು ನಮ್ಮ ಸ್ವಾಸ್ಥ್ಯವನ್ನು ಮಾತ್ರ ಅಲ್ಲ, ನಮ್ಮ ಮಾನವನ್ನು ಸಹ ಕಾಪಾಡುತ್ತದೆ. ಅದು ಹೇಗೆ ಎಂದರೆ ಹೆಣ್ಣು ನೊಡಲು ಹೋದಾಗ ಮನೆ, ಹೊಲ, ಗದ್ದೆ, ಆಸ್ತಿಪಾಸ್ತಿಯೊಂದಿಗೆ ನಿಮ್ಮಲ್ಲಿ ಶೌಚಾಲಯ ವ್ಯವಸ್ಥೆ ಇದೆಯೇ ಎಂಬ ಪ್ರಶ್ನೆಯನ್ನೂ ಕೇಳಬೇಕು. ಛೆ, ಅಂಥ ಪ್ರಶ್ನೆ ಯಾರಾದರೂ ಕೇಳುತ್ತಾರಾ ಎಂಬ ಪ್ರಶ್ನೆ ಹಾಕಿಕೊಂಡರೆ, ಮುಂದೆ ಅನುಭವಿಸುವ ತೊಂದರೆಗಳಿಗೆ ನೀವೇ ಜವಾಬ್ದಾರರು. ಕೇಂದ್ರ ಸಚಿವ ಜೈರಾಮ್ ರಮೇಶ್ ಕೂಡ ಇದನ್ನೇ ಹೇಳಿದ್ದಾರೆ. ಯಾರ ಮನೆಯಲ್ಲಿ ಶೌಚಾಲಯ ಇಲ್ಲವೋ ಅಂಥವರ ಮನೆಗೆ ಮಗಳನ್ನು ಕೊಡಬೇಡಿ ಅಂದಿದ್ದಾರೆ.

ಇನ್ನೂ ನಗರಗಳತ್ತ ಕಣ್ಣು ಹರಿಸಿದರೆ ಶ್ರೀಮಂತರಿಗೆ ರೂಮಿಗೊಂದು ಶೌಚಾಲಯವಾದರೆ ಸ್ಲಮ್‌ಗಳಲ್ಲಿ ವಾಸಿಸುವ ಜನರು ಟಾಯ್ಲೆಟ್ ಮುಖ ನೊಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನಗರ ನೈರ್ಮಲ್ಯಕ್ಕೆ ಕೇವಲ ಮುಖ್ಯ ಪ್ರದೇಶಗಳಲ್ಲಿ ಪ್ರಾಮುಖ್ಯತೆ ಕೊಟ್ಟರೆ ಸಾಲದು. ಸಾರ್ವಜನಿಕವಾಗಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೆಕು. ಇನ್ನು ಶೌಚಾಲಯಕ್ಕೆ ಅಂಟಿಕೊಂಡಿರಿರುವ ಹೂಳೆತ್ತುವ ಪದ್ದತಿ ಸಂಪೂರ್ಣವಾಗಿ ನಿಲ್ಲಬೇಕು. ಸರಿಯಾದ ಸ್ಯಾನಿಟರಿ ಮಾರ್ಗಗಳನ್ನು ಅಳವಡಿಸಬೇಕು. ಸುಧಾರಣೆಯ ಹಾದಿ ಇನ್ನೂ ತುಂಬಾ ದೂರವಿದೆ.

ಗೋಡೆ ಸಾಹಿತ್ಯ : ಸಾರ್ವಜನಿಕ ಆಸ್ತಿಗಳಾದ ಅಸ್ಪತ್ರೆ, ಬಸ್ ತಂಗುದಾಣ, ಮಾರುಕಟ್ಟೆಗಳಲ್ಲಿ ನೇಪಥ್ಯದಲ್ಲಿ ಟಾಯ್ಲೆಟ್‌ಗಳು ಇದ್ದರೂ ಅಲ್ಲಿ ಹೋದರೆ, ಅಲ್ಲಿರುವ ದುರವಸ್ಥೆಯಿಂದ ಇನ್ನು ಹೆಚ್ಚು ರೋಗಗಳನ್ನು ಅಂಟಿಸಿಕೊಂಡು ಬರುವುದು ಗ್ಯಾರಂಟಿ. ಹೀಗಾಗಿ ನಮ್ಮ ಸಿಟಿಗಳಲ್ಲಿ ಈ ಗಂಡಸರು ಗೋಡೆಗಳ ಮೇಲೆ ರಂಗೋಲಿ ಸುರಿಸುವುದನ್ನು ನೋಡಬಹುದು. ಇನ್ನು ಸುಲಭ ಶೌಚಾಲಯದಲ್ಲಿ 2 ರು. ಕೊಡುವುದಕ್ಕೂ ಕಂಜೂಸುತನ ತೋರಿಸುವವರು 5 ರು. ಸಿಗರೇಟಿಗೆ ಸುರಿಯಲು ಹಿಂದೆಮುಂದೆ ನೋಡುವುದಿಲ್ಲ. ಸಾರ್ವಜನಿಕ ಶೌಚಾಲಯಗಳು ಇಗ ಪ್ರೇಮ ಸಂದೇಶ ರವಾನೆಯ ತಾಣಗಳಾಗಿವೆ. ಶೌಚಾಲಯಕ್ಕಿಂತಲೂ ಹೆಚ್ಚು ಅಸಹ್ಯ ಹುಟ್ಟಿಸುವ ಮಟ್ಟಿಗೆ ಈ ಸಾಹಿತ್ಯ ಕಂಗೊಳಿಸುತ್ತಿರುತ್ತದೆ.

ಇವುಗಳಿಗೆಲ್ಲ ಇತಿಶ್ರಿ ಹಾಡಬೇಕೆಂದರೆ ಮೊದಲೆ ಯೊಜನೆಗಳನ್ನು ಹಾಕಬೇಕು. ನಗರ ಜನಸಂದಣಿಯ ಪೂರ್ವಗ್ರಹಿಕೆ ಮಾಡಿ ಅದಕ್ಕೆ ತಕ್ಕಂತಹ ಸಿದ್ದತೆ ಮಾಡಬೇಕು. ನೈರ್ಮಲ್ಯಕ್ಕೆಂದೆ ಜಾಗಗಳನ್ನು ಮೀಸಲಾಗಿಡಬೇಕು. ಪ್ರತಿ ಮಾಸಕ್ಕು ಉಚಿತ ಅರೊಗ್ಯ ತಪಾಸಣೆ ಏರ್ಪಡಿಸಬೇಕು. ನಮ್ಮ ಸರ್ಕಾರವು ಗಡ್ಡಕ್ಕೆ ಬೆಂಕಿ ಹತ್ತಿದ ಮೆಲೆ ಬಾವಿ ತೋಡುತ್ತದೆ. ರೋಗಗಳು ಹರಡಿದ ಮೇಲೆ ಎಚ್ಚೆತ್ತು ಕೊಳ್ಳುವುದಕ್ಕಿಂತ ಮುಂಜಾಗ್ರತೆ ಕ್ರಮವನ್ನು ತೆಗೆದು ಕೊಳ್ಳುವುದು ಒಳ್ಳೆಯದು.

ಶೌಚಾಲಯದ ಸಂರಕ್ಷನೆ, ನಿರ್ವಹಣೆಗೆ ಮತ್ತು ಬೆಳವಣಿಗೆಗೆ ಸರ್ಕಾರದ ಪಾಲು ಎಷ್ಟಿದೆಯೋ, ಈ ರಾಜ್ಯದ ನಾಗರಿಕರಾದ ನಮ್ಮ ಹೊಣೆಯೂ ಅಷ್ಟೇ ಇದೆ. ಅತ್ಯುತ್ತಮ ಶೌಚಾಲಯ ನಮ್ಮ ಹಕ್ಕು ಎಂದು ಹೋರಾಟ ಮಾಡಬೇಕು. ಸರಕಾರ ನೀಡದಿದ್ದರೆ ಅದನ್ನು ನಾವು ಕೇಳಿ ಪಡೆಯಬೇಕು. ಅಯ್ಯೋ, ಹ್ಯಾಗಿದ್ರೂ ಬಯಲಿದೆ ಅಂದ ಅಡ್ಜಸ್ಟ್ ಮಾಡಿಕೊಂಡರೆ ನಷ್ಟ ನಮಗೇ. ಮನೆಗೆ ಪಡಸಾಲೆ, ಅಡುಗೆಮನೆ, ಮಲಗುವ ಕೋಣೆಗಳು ಎಷ್ಟು ಮುಖ್ಯವೊ, ಹಾಗೆ ಶೌಚಾಲಯ ಕೂಡ ಅತಿ ಅವಶ್ಯ. ಹೆಸರಿನಲ್ಲಿಯೆ ಶುತಿತ್ವ ಅಡಗಿಕೊಂಡಿರುವ ಶೌಚ+ಅಲಯದ ಮಹತ್ವ ನಾವು ಅರಿಯಬೇಕು. ಶೌಚಾಲಯ ನಿರ್ಮಿಸಿ, ಶೌಚಾಲಯ ಉಪಯೊಗಿಸಿ, ರೋಗ ತೊಲಗಿಸಿ, ಆರೋಗ್ಯ ಆಮಂತ್ರಿಸಿ.

English summary

Spotlight on sanitation in Karnataka for World Toilet Day | ಮನೇಲಿ ಟಾಯ್ಲೆಟ್ ಇಲ್ಲದಿದ್ದರೂ ಕೈಲಿ ಮೊಬೈಲ್!

Though every family, every house, every hut has mobile phone in Karnataka, toilet facility is still a dream in many places. On World toilet day, it is the right of every citizen to ask for this facility from the govt. Let's use toilet, keep them clean, make our environment disease free.
X
Desktop Bottom Promotion