For Quick Alerts
ALLOW NOTIFICATIONS  
For Daily Alerts

ಬೆಂಗಳೂರಿಗೆ ಕಾಲಿಟ್ಟಿದೆ ಹೆಮ್ಮಾರಿ ಎಚ್1ಎನ್1

By Mrutyunjaya Kalmat
|
Swine Flu
ಬೆಂಗಳೂರು, ಆ. 24 : ಕಳೆದ ವರ್ಷ ದೇಶದ ಜನರ ಜೀವ ತಿಂದಿದ್ದ ಹೆಮ್ಮಾರಿ ಎಚ್1ಎನ್1 ಮತ್ತು ಡೆಂಗ್ಯೂ ಜ್ವರ ಏಕಕಾಲಕ್ಕೆ ಮತ್ತೆ ಬೆಂಗಳೂರಿಗೆ ಲಗ್ಗೆಯಿಟ್ಟಿವೆ. ನಗರದ ಪ್ರಮುಖ ಸರಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಎಚ್1ಎನ್1 ಪ್ರಕರಣಗಳು ದಾಖಲಾಗಿವೆ. ಆರಂಭದ ಹಂತದಲ್ಲಿರುವ ಈ ಮಾರಿಯನ್ನು ತಡೆಗಟ್ಟಲು ಸರಕಾರಿ ಆಸ್ಪತ್ರೆಗಳು ಸನ್ನದ್ಧವಾಗಿವೆ.

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕಳೆದ ವರ್ಷ 40ಕ್ಕೂ ಮಂದಿ ಎಚ್1ಎನ್1 ಸೋಂಕಿಗೆ ಬಲಿಯಾಗಿದ್ದರು. ಸಾರ್ವಜನಿಕರಲ್ಲಿ ವ್ಯಾಪಕ ಭಯ ಹುಟ್ಟಿಸಿದ್ದ ಎಚ್1ಎನ್1(Influenza A (H1N1) virus) ಮಾರಿಗೆ ಸೂಕ್ತ ಔಷಧಿ ಕೊರತೆಯಿಂದ ಸಾವು ನೋವುಗಳು ಸಂಭವಿಸಿದ್ದವು. ಆದರೆ, ಸರಕಾರ ಈ ವರ್ಷ ಕೂಡಾ ಈ ಸೋಂಕನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೇ ಈ ಸಾಂಕ್ರಾಮಿಕ ರೋಗ ಬರುವುದನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಡೆಂಗ್ಯೂ ಜ್ವರಕ್ಕೆ ಈಗಾಗಲೇ ಅನೇಕ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಸೋಂಕಿಗೆ ಬೆರಳಣಿಕೆ ಮಂದಿ ಸಾವನ್ನಪ್ಪಿರುವುದು ಕೂಡಾ ಇದೆ. ಇದನ್ನು ತಡೆಯಲು ಸರಕಾರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೂ ಎಚ್1ಎನ್1 ಮತ್ತು ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಮುಂಜಾಗ್ರತಾ ಕ್ರಮವಾಗಿ ರೋಗಿಗಳ ಮತ್ತು ಆವರ ಸಂಬಂಧಿಗಳು ಆಸ್ಪತ್ರೆಯಲ್ಲಿ ಮುಂಗಡವಾಗಿ ಬೆಡ್ ಬುಕ್ಕಿಂಗ್ ಮಾಡುತ್ತಿರುವ ಘಟನೆಗಳು ನಮ್ಮ ಕಣ್ಮುಂದಿವೆ ಎಂದು ಮಣಿಪಾಲ್ ಆಸ್ಪತ್ರೆಗಳ ನಿರ್ದೇಶಕ ಸುದರ್ಶನ್ ಬಲ್ಲಾಳ್ ಹೇಳುತ್ತಾರೆ.

ದಿನಕ್ಕೆ ಮೂರರಿಂದ ನಾಲ್ಕು ಎಚ್1ಎನ್1, ಡೆಂಗ್ಯೂ ಮತ್ತು ರಕ್ತದಲ್ಲಿ ಪ್ಲೇಟ್ ಲೆಟ್ ಕಣಗಳ ಕೊರತೆ ಹೊಂದಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮಕ್ಕಳಲ್ಲಿ ಕೂಡಾ ಡೆಂಗ್ಯೂ ಮತ್ತು ಎಚ್1ಎನ್1 ಕಂಡುಬರುತ್ತಿರುವುದು ಆತಂಕದ ಸಂಗತಿ ಎಂದು ಎಂಎಸ್ ರಾಮಯ್ಯ ಆಸ್ಪತ್ರೆಯ ನಿರ್ದೇಶಕ ನರೇಶ್ ಶೆಟ್ಟಿ ವಿವರಿಸುತ್ತಾರೆ.

ಈ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ

ಮಕ್ಕಳಲ್ಲಿ

* ಉಸಿರಾಟ ತೊಂದರೆ
* ನೆಗಡಿ
* ಚರ್ಮದ ಬಣ್ಣ ನೀಲಿಯಾಗುವುದು
* ಹೆಚ್ಚಾಗಿ ನೀರು ಕುಡಿಯದಿದ್ದರೆ
* ವಾಂತಿ ಬೇಧಿಯಾಗುವುದು

ದೊಡ್ಡವರಲ್ಲಿ

* ಉಸಿರಾಟದ ತೊಂದರೆ
* ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು
* ಸುಸ್ತಾಗುವುದು
* ವಾಂತಿ ಬೇಧಿ ಆಗುವುದು
* ಕಣ್ಣು ತಿರುಗಿದಂತಾಗುವುದು

ಎಚ್1ಎನ್1 ನಿಂದ ರಕ್ಷಿಸಿಕೊಳ್ಳುವ ಬಗೆ

* ಪದೇಪದೆ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳಬೇಡಿ
* ಎಚ್1ಎನ್1 ಸೋಂಕು ಬಾಧಿತರಿಂದ ದೂರವಿರಿ
* ಕೈಕುಲುಕುವುದು, ಮುತ್ತಿಡುವುದನ್ನು ಆದಷ್ಟು ಕಡಿಮೆ ಮಾಡಿ
* ಜನಜಂಗುಳಿ ಪ್ರದೇಶದಿಂದ ದೂರವಿದ್ದರೆ ಕ್ಷೇಮ
* ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಮೂಗು, ಬಾಯಿಗೆ ಕರವಸ್ತ್ರದಿಂದ ಮುಚ್ಚಿಕೊಂಡಿದ್ದರೆ ಒಳ್ಳೆಯದು.
* ಕರವಸ್ತ್ರ ಬಳಸುವುದು ಉತ್ತಮ
* ಕೈ, ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದನ್ನು ಮರೆಯಬೇಡಿ
* ಕೆಲಸ ಮಾಡುತ್ತಿರುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಿ
* ಸೋಂಕಿತರೊಂದಿಗೆ ಕಾಲ ಕಳೆದಿದ್ದರೆ ಕೂಡಲೇ ತಜ್ಞ ವೈದ್ಯರನ್ನು ಬೇಟಿ ಮಾಡಿ ಚಿಕಿತ್ಸೆ ಪಡೆಯುವುದು ಒಳಿತು.

Story first published: Tuesday, August 24, 2010, 15:16 [IST]
X
Desktop Bottom Promotion