For Quick Alerts
ALLOW NOTIFICATIONS  
For Daily Alerts

ನಿಮ್ಮ ಒಳ್ಳೆದಕ್ಕೆ ಹೇಳ್ತಾಯಿರೋದು ಕೇಳಿ

By Mahesh
|
Viral diseases increse in Karnataka
ಬೇಸಿಗೆ ಎಂದರೆ ಹಬ್ಬ ಹರಿದಿನ, ಜಾತ್ರೆ ಎನ್ನುತ್ತಾ ಹಳ್ಳಿಗರು ಊರೂರು ಅಲೆದು, ಕಾಲು ಸವೆಸುತ್ತಿದ್ದರು. ಈಗ ಕಾಲ ಬದಲಾಗಿದ್ದರೂ, ಜಾತ್ರೆ ಸಮಯ ಎಂದರೆ ರೋಗ ರುಜಿನ ಹರಡುವಿಕೆಗೆ ಪರ್ವಕಾಲ ಎನ್ನುವುದು ಸುಳ್ಳಲ್ಲ. ಶುದ್ಧ ನೀರಿನ ಅಭಾವ, ಸ್ವಚ್ಛತೆ ಸಿಗದ ಮಹತ್ವದಿಂದಾಗಿ ವೈರಾಣುಗಳು ಹಾಗೂ ಹೀಗೂ ಮಾಡಿ ಊರ ಹಿಂಬಾಗಿಲಿಂದ ಪ್ರವೇಶ ಪಡದೇ ಬಿಡುತ್ತಿದ್ದವು. ಊರಿಗೆ ಒಂದು ಅಥವಾ ಸುತ್ತಮುತ್ತಲ ಹಳ್ಳಿಗಳಿಗೆಂದು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೆ ಹೆಚ್ಚು. ಆದರೆ, ಒಟ್ಟೊಟ್ಟಿಗೆ ರೋಗಿಗಳ ಸಂಖ್ಯೆ ಹೆಚ್ಚಾದಾಗ ಅಲ್ಲಿನ ವೈದ್ಯರಿಗೂ ದಿಕ್ಕು ತೋಚದಂತಾಗುತ್ತದೆ.

ಸಾಧಾರಣವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆ ಕಸಾಲೆಗಳು ಈಗ ಮುಂಗಾರಿನ ಜೊತೆಜೊತೆಗೆ ಪುರಪ್ರವೇಶ ಮಾಡತೊಡಗಿವೆ. ಮೊದಲೆಲ್ಲಾ ದೂರದ ಹಳ್ಳಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೆಮ್ಮಾರಿಗಳು ಈಗ ರಾಜಧಾನಿ ಸೇರಿದಂತೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆರೋಗ್ಯ ಕೇಂದ್ರಗಳಿಗೆ ತಲೆ ಬಿಸಿಯಾಗಿದೆ. ಇದು ಬರೀ ಸರ್ಕಾರಿ ಆಸ್ಪತ್ರೆಯ ಮಾತಲ್ಲ, ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಚಿಕುನ್ ಗುನ್ಯಾ, ಡೆಂಗ್ಯೂ, ವಿಷಮಶೀತಜ್ವರ, ಕಾಲರಾ ಮುಂತಾದ ಹೆಮ್ಮಾರಿಗಳ ಕಾಟ ಶುರುವಾಗಿದೆ.

ಮುಂಜಾಗರುಕತೆಯೇ ಮದ್ದು: ಅಯ್ಯೋ ಬಿಡಿ, ದಿನಕ್ಕೊಂದು ಹೊಸ ಕಾಯಿಲೆ(ಉದಾ: ಸಾರ್ಸ್ ,ಹಂದಿಜ್ವರ) ಗಾಳಿಸುದ್ದಿ ಹರಡುವುದು ಸಾಮಾನ್ಯ. ಎಷ್ಟು ಬೇಗ ಸುದ್ದಿ ಹಬ್ಬುವುದೋ ಅಷ್ಟೇ ಬೇಗ ಸುದ್ದಿ ಸಾಯುತ್ತದೆ. ಅದರ ಬಗ್ಗೆ ಚಿಂತೆ ಬೇಡ ಎಂದು ಉಪೇಕ್ಷಿಸುವ ಹಾಗಿಲ್ಲ. ಆರೋಗ್ಯದ ವಿಷಯದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಕಮ್ಮಿಯೇ.

ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಕನಿಷ್ಠವೆಂದರೂ ಪ್ರತಿದಿನ 40ಕ್ಕೂ ಹೆಚ್ಚು ವೈರಾಣು ಜ್ವರ ಪ್ರಕರಣಗಳು ದಾಖಲಾಗುತ್ತಿವೆ. ಕೆಸಿ ಜನರಲ್ ಆಸ್ಪತ್ರೆಯಲ್ಲೂ ದಿನಕ್ಕೆ ಸುಮಾರು 30 ಕ್ಕೂ ಅಧಿಕ ವಿಷಮಶೀತಜ್ವರ ಬಾಧೆಗೆ ಒಳಪಟ್ಟ ರೋಗಿಗಳು ದಾಖಲಾಗುತ್ತಿದ್ದಾರೆ. ಚಿಕೂನ್ ಗುನ್ಯಾ ಪ್ರಕರಣ ಕೂಡಾ ದಿನೆದಿನೇ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.

ಬೇಸಿಗೆ ಬಂದಾಗ ಕಾಲರಾ ಕಾಮನ್ ಕಾಯಿಲೆ ಎನ್ನುವಂತೆ ಅಕಾಲಿಕ ಮಳೆ ಸುರಿದರೆ ಬೆಂಗಳೂರಲ್ಲಿ ಡೆಂಗ್ಯೂ ಜ್ವರ ಭೀತಿ ಖಾಯಂ ಎನಿಸತೊಡಗಿದೆ. ಸೊಳ್ಳೆಗಳ ಸಂತಾನ ಅಭಿವೃದ್ಧಿಗೆ ಬಿಬಿಎಂಪಿ ಕೊಡುಗೆ ಅಪಾರ ಎಂದರೆ ತಪ್ಪಾಗಲಾರದು. ಬಿಬಿಎಂಪಿ ಅಧಿಕಾರಗಳೆ ಹೇಳುವಂತೆ, ಪ್ರತಿದಿನ 22 ಡೆಂಗ್ಯೂ ಹಾಗೂ 27 ಚಿಕೂನ್ ಗುನ್ಯಾ ಕೇಸ್ ಗಳು ಬರುತ್ತಿವೆ.100 ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ.

ಎಲ್ಲಿದೆ ಶುದ್ಧಜಲ? :ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಮಾರು 23 ಜಿಲ್ಲೆಗಳಿಗೆ ಎಚ್ಚರಿಕೆಯ ಸಂದೇಶವನ್ನು ಆರೋಗ್ಯ ಇಲಾಖೆ ರವಾನಿಸಿದೆ. ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಚಿಂತನೆ ನಡೆದಿದೆ. ಬಾಗಲಕೋಟೆ, ಬಿಜಾಪುರ, ಗುಲ್ಭರ್ಗಾ, ತುಮಕೂರು, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮಲೇರಿಯಾ ಭೀತಿ ಆವರಿಸಿದೆ. ಅದರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನಾ ಪ್ರದೇಶದಲ್ಲಿ ಸುಮಾರು 800 ಕ್ಕೂ ಅಧಿಕ ಮಲೇರಿಯಾ ರೋಗಿಗಳನ್ನು ಗುರುತಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಗದಗ, ಬೀದರ್, ಯಾದಗಿರಿ, ಹಾಸನ, ಬೆಳಗಾವಿ ಹಾಗೂ ಕೋಲಾರದಲ್ಲಿ ಚಿಕುನ್ ಗುನ್ಯಾ ಹರಡಿದೆ. ನಾನಾ ಬಗೆಯ ವೈರಾಣು ಜ್ವರಗಳು ಮೈಸೂರು, ಮಂಡ್ಯ ಹಾಗೂ ಬೆಳಗಾವಿ ಜಿಲ್ಲೆಯನ್ನು ಆವರಿಸಿದೆ. ಪುಣ್ಯಕ್ಕೆ ರಾಜ್ಯದೆಲ್ಲೆಡೆ ಎಚ್ 1 ಎನ್ 1 ಪ್ರಕರಣಗಳು ಕ್ರಮೇಣ ಕಮ್ಮಿಯಾಗುತ್ತಿದೆ. ಎಲ್ಲಕ್ಕೂ ಒಂದೇ ಪರಿಹಾರ ಶುದ್ಧ ಜಲ ಬಳಕೆ, ಕುದಿಸಿ ಆರಿಸಿದ ನೀರನ್ನು ಮಾತ್ರ ಬಳಸುವುದು.

ಮನೆಯ ಸುತ್ತಮುತ್ತ ನೀರು ನೆಲೆನಿಲ್ಲದಂತೆ ನೋಡಿಕೊಳ್ಳುವುದು. ಸೊಳ್ಳೆಗಳ ಸಂತಾನ ಅಭಿವೃದ್ಧಿ ತಡೆಗಟ್ಟಲು ಔಷಧಿ ಸಿಂಪಡಿಸುವುದು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದು. ಹೋಟೆಲ್ ನಲ್ಲೂ ಬಿಸಿನೀರು ಕೇಳಿ ಕುಡಿಯಿರಿ. ಶುದ್ಧತೆ ಹಾಗೂ ಗ್ರಾಹಕರ ಅಪೇಕ್ಷೆಗೆ ಅನುಸಾರವಾಗಿ ಸೇವೆ ಒದಗಿಸುವುದು ಅವರ ಧರ್ಮ ಹಾಗೂ ಕಾನೂನು ಸಮ್ಮತ ಕೂಡಾ.

Story first published: Monday, June 7, 2010, 13:58 [IST]
X
Desktop Bottom Promotion