For Quick Alerts
ALLOW NOTIFICATIONS  
For Daily Alerts

ಕೆಮ್ಮು ನಿವಾರಣೆಗೆ ಜೇನುತುಪ್ಪ ಮದ್ದು

By Prasad
|
Honey is the best medicine for cough
ಮಗು ವಿಪರೀತ ಕಮ್ತಿದೆ, ರಾತ್ರಿಯಿಡೀ ನಿದ್ದೆಯಿಲ್ಲ. ಪ್ರಿಸ್ಕ್ರಿಪ್ಶನ್ ನಲ್ಲಿ ವೈದ್ಯರು ಬರೆದುಕೊಟ್ಟ ಯಾವುದೋ ಸಿರಪ್ ಅನ್ನು ಒಲ್ಲೆ ಅನ್ನುತ್ತಿರುವ ಮಗುವಿನ ಮೂಗು ಗಟ್ಟಿಹಿಡಿದು ಹಾಕುತ್ತೀರಾ. ವಾರವಾದರೂ ಕೆಮ್ಮು ಕಡಿಮೆಯಾಗಲ್ಲ, ನೀವು ಒಂದಾದಮೇಲೊಂದು ವೈದ್ಯರು ಬರೆದುಕೊಟ್ಟ ಕಾಫ್ ಸಿರಪ್ಪನ್ನು ಗಂಟಲಿಗೆ ಸುರಿಯುವುದನ್ನು ಬಿಡುವುದಿಲ್ಲ.

ಮಾನವ ದೇಹವನ್ನೇ ಅವರು ತಮ್ಮ ಔಷಧಿಗಳಿಗೆ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿರುವ ವೈದ್ಯರು ಹೇಳುವುದು ತಪ್ಪೆಂದು ಹೇಳುತ್ತಿಲ್ಲ. ಅನೇಕ ಬಾರಿ ಕಮ್ಮಿನ ಅಗಾಧತೆ, ಕೆಮ್ಮುತ್ತಿರುವ ರೀತಿ, ಬಂದಿರುವ ಕಾರಣಗಳನ್ನು ನೋಡಿ ಲೆಕ್ಕಹಾಕಿ ಕೊಡುವ ಔಷಧಿಯಿಂದ ಕಡಿಮೆಯಾಗಲೂಬಹುದು. ಎಲ್ಲಕ್ಕಿಂತ ಹೆಚ್ಚಾಗಿ ವೈದ್ಯರ ಮೇಲೆ ನಂಬಿಕೆಯಿಟ್ಟೇ ಅವರಲ್ಲಿಗೆ ಹೋಗಬೇಕು.

ಇಲ್ಲಿ ವಿಷಯವೇನೆಂದರೆ, ಆಯಾ ಖಾಯಿಲೆಗಳಿಗೆ ಬೇಕಾಗಿರುವ ಔಷಧಿಗಳು ನಮ್ಮ ಬಳಿಯೇ ಇರುವಾಗ, ಅಂದರೆ ಮನೆಯಲ್ಲಿಯೇ ದೊರೆಯುತ್ತಿರುವಾಗ ತಕ್ಕ ರೀತಿಯಲ್ಲಿ ಬಳಸಿಕೊಳ್ಳುವುದು ಜಾಣತನ. ಔಷಧಿಯಿಲ್ಲದೆ ಬದುಕುವುದನ್ನು ಕಲಿಯುವುದನ್ನು ನಾವು ರೂಢಿಸಿಕೊಳ್ಳಬೇಕು. ನಾವು ರೂಢಿಸಿಕೊಂಡ ಹಾಗೆ ನಮ್ಮ ದೇಹವೂ ಪ್ರತಿಸ್ಪಂದಿಸುತ್ತದೆ.

ಪುಟ್ಟ ಮಕ್ಕಳಿಗೆ ಔಷಧಿ ಕುಡಿಸುವಾಗ ಕೈಕಾಲು ಮೂಗು ಗಟ್ಟಿಯಾಗಿ ಹಿಡಿದು ಹಿಂಸಿಸುವ ಬದಲು, ಕೆಮ್ಮು ಬಂದಾಗ ಬೆಚ್ಚಗಿನ ನೀರಲ್ಲಿ ಜೇನುತುಪ್ಪವನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಕೆಲಕಾಲ ನಿರಂತರವಾಗಿ ನೀಡಿದರೆ ಮಗುವೂ ಖುಷಿಯಿಂದ ತೆಗೆದುಕೊಳ್ಳುತ್ತದೆ, ಕೆಮ್ಮು ಕೂಡ ಮಂಗಮಾಯವಾಗಿರುತ್ತದೆ. ಮಕ್ಕಳು ಮಾತ್ರವಲ್ಲ ಯಾವುದೇ ವಯಸ್ಸಿನವರು ಕೆಮ್ಮಿಗೆ ಜೇನುತುಪ್ಪವನ್ನು ಬಳಸಬಹುದು. ನೈಸರ್ಗಿಕವಾಗಿ ದೊರೆಯುವ ಜೇನುತುಪ್ಪಕ್ಕೆ ಆಬಗೆಯ ತಾಕತ್ತಿದೆ. ಕೆಮ್ಮು ನಮ್ಮನ್ನು ಜಬಡಿ ಹಾಕುವ ಮೊದಲೇ, ಪ್ರಾರಂಭಿಕ ಹಂತದಲ್ಲಿರುವಾಗ ಜೇನುತುಪ್ಪ ಸೇವಿಸಿದರೆ ಕೆಮ್ಮು ಬೇಗನೆ ಕಡಿಮೆಯಾಗುತ್ತದೆ.

ಜೇನುತುಪ್ಪ ವಿಪರೀತ ಹೀಟು, ಜಾಸ್ತಿ ತೆಗೆದುಕೊಂಡರೆ ದೇಹದ ಕಾವು ಏರುತ್ತದೆ ಎಂದು ಕೆಲವರು ಜೇನುತುಪ್ಪವನ್ನು ದೂರವೇ ಇಟ್ಟಿರುತ್ತಾರೆ. ಒಂದು ಮಿತವಾದ ಅಳತೆಯಲ್ಲಿ ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಸೇವಿಸುವುದರಿಂದ ದೇಹಕ್ಕೆ ಉಷ್ಣವಾಗುವುದಿಲ್ಲ. ಬದಲಿಗೆ ಆರೋಗ್ಯ ಸುಧಾರಿಸುತ್ತಾ ಸಾಗುತ್ತದೆ. ಜೇನುತುಪ್ಪದಲ್ಲಿ ರಕ್ತಶುದ್ಧಿ ಮಾಡುವ ಗುಣವೂ ಇದೆ. ನಿಯಮಿತವಾಗಿ ಜೇನುತುಪ್ಪುನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.

ಮನೆಹಿತ್ತಲಲ್ಲಿ ಬಿಟ್ಟ ಕೃಷ್ಣತುಳಸಿ ಎಲೆಗಳನ್ನು ಜಜ್ಜಿ ರಸಹಿಂಡಿ ಅದಕ್ಕೆ ತೊಟ್ಟು ಜೇನುತುಪ್ಪು ಬೆರೆಸಿ ಸೇವಿಸಿದರೂ ಕೆಮ್ಮು ದೂರವಾಗುತ್ತದೆ. ಈ ಕಾಫ್ ಸಿರಪ್ಪಿನಿಂದ ಕಡಿಮೆಯಾಗುತ್ತಿಲ್ಲ ಎಂದು ಅದು, ಅದರಿಂದ ಕಡಿಮೆಯಾಗುತ್ತಿಲ್ಲ ಎಂದು ಮತ್ತೊಂದು ಕಾಫ್ ಸಿರಪ್ ಸೇವಿಸುವ ಬದಲು ಮನೆಯೌಷಧಿಗೆ ಮೊರೆ ಹೋದರೆ ಹಣವೂ ಉಳಿತಾಯವಾಗುತ್ತದೆ ಮತ್ತು ಮನಸಿಗೂ ನೆಮ್ಮದಿ ಇರುತ್ತದೆ. ಪ್ರಯತ್ನಿಸಿ ನೋಡಿ. ಆದರೆ, ಈ ವಿಧದಲ್ಲಿಯೂ ನಂಬಿಕೆಯಿರಲಿ.

ಎಲ್ಲಕ್ಕಿಂತ ಹೆಚ್ಚಾಗಿ ಕೆಮ್ಮು ಬಂದಾಗ, ತಣ್ಣೀರು ಸೇವಿಸುವುದು, ತಂಪು ಪಾನೀಯ ಸೇವಿಸುವುದು, ಕರಿದ ಪದಾರ್ಥಗಳನ್ನು ಎಗ್ಗಿಲ್ಲದೆ ತಿನ್ನುವುದು, ದೂಳಿಗೆ ಒಡ್ಡಿಕೊಳ್ಳುವುದು, ತಿಳಿವಳಿಕೆ ಬಂದವರಾಗಿದ್ದರೆ ಧೂಮಪಾನ ಮಾಡುವುದು ಕಡಿಮೆ ಮಾಡಬೇಕು ಮತ್ತು ಪ್ರತಿನಿತ್ಯ ವ್ಯಾಯಾಮ ಮಾಡುವುದನ್ನು ಮರೆಯಬಾರದು.

ಸುಮ್ಕೆ ತಮಾಷಿಗೆ

ಒಬ್ಬ ಸಿಕ್ಕಾಪಟ್ಟೆ ಕೆಮ್ಮುವ ರೋಗಿ ಡಾಕ್ಟರ್ ಬಳಿ ಬರುತ್ತಾನೆ. ಡಾಕ್ಟರು ನೀಡಿದ ನಾನಾ ಬಗೆಯ ಕೆಮ್ಮಿನ ಔಷಧಿ ಸೇವಿಸಿದರೂ ಕಡಿಮೆಯಾಗುವುದಿಲ್ಲ. ಕೆಲ ತಿಂಗಳ ನಂತರ ಮತ್ತೆ ವೈದ್ಯರ ಬಳಿ ಬರುತ್ತಾನೆ. ವೈದ್ಯರಿಗೆ ಆಶ್ಚರ್ಯವೆಂಬಂತೆ ಕೆಮ್ಮು ಕಡಿಮೆಯಾಗಿರುತ್ತದೆ.

ವೈದ್ಯ : ಏನಯ್ಯಾ, ನೋಡು ನಾನು ಕೊಟ್ಟ ಔಷಧಿಯ ಕಮಾಲ್. ಕಡಿಮೆಯಾಯ್ತಲ್ಲ ಕೆಮ್ಮು.
ರೋಗಿ : ಕೆಮ್ಮು ಕಡಿಮೆಯಾಗಿದ್ದು ನಿಮ್ಮ ಔಷಧಿಯಿಂದಲ್ಲ ವೈದ್ಯರೆ, ಕೆಮ್ಮಿ ಕೆಮ್ಮಿ ವಿಪರೀತ ಸುಸ್ತಾಗಿ ಕೆಮ್ಮಲು ಸಾಧ್ಯವೇ ಆಗಲಿಲ್ಲ. ಹಾಗಾಗಿ ಕೆಮ್ಮು ಕಡಿಮೆಯಾಯಿತು!

Story first published: Friday, June 17, 2011, 14:02 [IST]
X
Desktop Bottom Promotion