For Quick Alerts
ALLOW NOTIFICATIONS  
For Daily Alerts

ನಿತ್ಯ ಕಂಪ್ಯೂಟರ್ ನೋಡುತ್ತೀರಾ? ಹಾಗಿದ್ದರೆ ಕಣ್ಣಿನ ಬಗ್ಗೆ ಈ ಕಾಳಜಿ ಅತ್ಯಗತ್ಯ

|

ಕಂಪ್ಯೂಟರುಗಳು ಇಂದಿನ ಜೀವನವನ್ನು ಎಷ್ಟು ಮಟ್ಟಿಗೆ ಬದಲಿಸಿಬಿಟ್ಟಿವೆ ಎಂದರೆ ಒಂದು ಕ್ಷಣವೂ ಇವುಗಳ ಮೇಲಿನ ಅವಲಂಬನೆಯನ್ನು ತ್ಯಜಿಸಿ ಇರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ. ಪರಿಣಾಮವಾಗಿ, ಅನಿವಾರ್ಯವೆಂಬಂತೆ ನಾವೆಲ್ಲಾ ಒಂದಲ್ಲಾ ಒಂದು ಬಗೆಯಲ್ಲಿ ಕಂಪ್ಯೂಟರ್ ವ್ಯವಸ್ಥೆಗೆ ದಾಸರಾಗಿಯೇ ಇದ್ದೇವೆ. ತಂತ್ರಜ್ಞಾನದ ಮೂಲಕ ಕೋಟ್ಯಂತರ ಜನರಿಗೆ ಉದ್ಯೋಗ ಲಭಿಸಿದ್ದು ಜೀವನಮಟ್ಟ ಹಿಂದಿನ ದಿನಗಳಿಗಿಂತ ಎಷ್ಟೂ ಪಟ್ಟು ಮೇಲೇರಿರುವುದು ಮಾತ್ರ ಅಲ್ಲಗಳೆಯರಾಗದ ಸತ್ಯ. ಹಾಗಾಗಿ, ಉದ್ಯೋಗ ನಿಮಿತ್ತವೂ ಕಂಪ್ಯೂಟರುಗಳನ್ನು ಬಳಸುವುದು ಹಾಗೂ ಹೆಚ್ಚಿನ ಅವಧಿಯಲ್ಲಿ ಕಂಪ್ಯೂಟರ್ ಪರದೆಯನ್ನು ವೀಕ್ಷಿಸುವುದು ಅನಿವಾರ್ಯವಾಗಿದೆ. ಕಂಪ್ಯೂಟರುಗಳನ್ನು ಬಳಸುವವರಿಗೆ ದಿನಕ್ಕೆ ಕನಿಷ್ಟವೆಂದರೂ ಸುಮಾರು ಎಂಟರಿಂದ ಒಂಭತ್ತು ಘಂಟೆಗಳ ಕಾಲ ಪರದೆಯನ್ನು ವೀಕ್ಷಿಸಬೇಕಾಗುತ್ತದೆ. ಉಳಿದ ಸಮಯದಲ್ಲಿಯೂ ತಮ್ಮ ಮೊಬೈಲುಗಳಲ್ಲಿ ಸಾಮಾಜಿಕ ಜಾಲತಾಣ, ಗೇಮ್ಸ್, ವೈಯಕ್ತಿಕ ಮಾಹಿತಿಯನ್ನು ಪಡೆಯಲೂ ಇನ್ನಷ್ಟು ಹೆಚ್ಚಿನ ಸಮಯ ಬಳಕೆಯಾಗುತ್ತದೆ.

computer vision syndrome

ಕಂಪ್ಯೂಟರ್ ಪರದೆ ಪುಸ್ತಕದಂತಲ್ಲ, ಏಕೆಂದರೆ ಇದು ಬೆಳಕನ್ನು ಸೂಸುವ ಉಪಕರಣವಾಗಿದೆ. ಪುಸ್ತಕ ಬೆಳಕನ್ನು ಪ್ರತಿಫಲಿಸುವ ಮೂಲಕ ಮಾಹಿತಿ ನೀಡುತ್ತದೆ. ಕಣ್ಣುಗಳಿಗೆ ಒತ್ತಡ ಮತ್ತು ಆಯಾಸವಾಗುವುದು ಇದೇ ಕಾರಣಕ್ಕೆ. ನಮ್ಮ ಕಣ್ಣುಗಳು ಬೆಳಕಿನ ಮೂಲವನ್ನಲ್ಲ, ಬದಲಿಗೆ ಪ್ರತಿಫಲಿತ ಬೆಳಕಿನ ಮೂಲಕವೇ ನೋಡುವಂತೆ ಪ್ರಕೃತಿ ನಿರ್ಮಿಸಿದೆ. ಆದರೆ ಇಂದಿನ ಹೆಚ್ಚಿನ ಬಹುತೇಕ ಉಪಕರಣಗಳು ಬೆಳಕಿನ ಮೂಲವೇ ಆಗಿರುವ ಕಾರಣ ಇದು ಕಣ್ಣುಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟುಮಾಡುತ್ತದೆ. ಈ ಪರಿಣಾಮದ ಪ್ರತಿಫಲವೇ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಅಥವಾ ಕಂಪ್ಯೂಟರ್ ದೃಷ್ಟಿ ದೋಶ. ಇಂದು ಈ ತೊಂದರೆ ವಿಶ್ವದಾದ್ಯಂತ ಸುಮಾರು ಆರು ಕೋಟಿ ಜನರಿಗೆ ಬಾಧಿಸುತ್ತಿದೆ.

ಕಂಪ್ಯೂಟರ್ ಪರದೆಯನ್ನು ವೀಕ್ಷಿಸದೇ ಉದ್ಯೋಗ ನಿರ್ವಹಣೆ ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಕಣ್ಣುಗಳ ಆರೋಗ್ಯವನ್ನು ಉಳಿಸಿಕೊಳ್ಳಬೇಕಾದರೆ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯವಾಗಿದೆ ಹಾಗೂ ಮುಂದೆ ಎದುರಾಗಬಹುದಾದ ಕ್ಲಿಷ್ಟತೆಗಳಿಂದ ರಕ್ಷಣೆ ಪಡೆಯಬಹುದು. ಇಂದಿನ ಲೇಖನದಲ್ಲಿ ಈ ಬಗ್ಗೆ ಹಲವಾರು ಅಮೂಲ್ಯ ಮಾಹಿತಿಗಳನ್ನು ಒದಗಿಸಲಾಗಿದ್ದು ಇವುಗಳನ್ನು ಅನುಸರಿಸುವ ಮೂಲಕ ಕಣ್ಣುಗಳಿಗೆ ಎದುರಾಗಬಹುದಾದ ಅಪಾಯಗಳನ್ನು ತಡೆಯಬಹುದು ಹಾಗೂ ನಿಸರ್ಗದ ಈ ಅಮೂಲ್ಯ ಕೊಡುಗೆಯನ್ನು ಅರೋಗ್ಯಕರವಾಗಿರಿಸಿ ದೃಷ್ಟಿಯನ್ನು ಉಳಿಸಿಕೊಳ್ಳಬಹುದು.

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದರೇನು?

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದರೇನು?

ಹೆಸರೇ ಸೂಚಿಸುವಂತೆ ಬೆಳಕು ಸೂಸುವ ಯಾವುದೇ ಪರದೆಯನ್ನು ಸತತವಾಗಿ ವೀಕ್ಷಿಸುವ ಮೂಲಕ ಎದುರಾಗಬಹುದಾದ ಒಟ್ಟಾರೆ ತೊಂದರೆಗಳನ್ನು ಕ್ರೋಢೀಕರಿಸಿ ಈ ಹೆಸರಿನಿಂದ ಕರೆಯಬಹುದು. ಸಾಮಾನ್ಯವಾಗಿ ನೇತ್ರವೈದ್ಯರು ಈ ಸ್ಥಿತಿಯನ್ನು digital eye strain (ಡಿಜಿಟಲ್ ಕಣ್ಣಿನ ಆಯಾಸ) ಎಂದು ಗುರುತಿಸುತ್ತಾರೆ. ಕಂಪ್ಯೂಟರ್ ಪರದೆಯನ್ನು ಸತತವಾಗಿ ವೀಕ್ಷಿಸುವ ವ್ಯಕ್ತಿಗಳಲ್ಲಿ 50%-90% ರಷ್ಟು ಜನರಿಗೆ ಈ ತೊಂದರೆ ಇದ್ದೇ ಇರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ತೊಂದರೆ ಕೇವಲ ವಯಸ್ಕರಲ್ಲಿ ಮಾತ್ರವಲ್ಲ, ಕಂಪ್ಯೂಟರ್ ಪರದೆ ಹಾಗೂ ಹೆಚ್ಚು ಹೊತ್ತು ಟೀವಿ ನೋಡುವ ಮಕ್ಕಳಿಗೂ ಆವರಿಸಬಹುದು. ಅದರಲ್ಲೂ ವಿಶೇಷವಾಗಿ ಬೆಳಕಿನ ಪ್ರಮಾಣ ಹೆಚ್ಚಿದ್ದರೆ ಮತ್ತು ಟೀವಿ ಕಂಪ್ಯೂಟರ್ ಪರದೆಗಳನ್ನು ನೋಡುವ ಅಂತರ ಸೂಕ್ತ ಪ್ರಮಾಣಕ್ಕೂ ಕಡಿಮೆ ಇದ್ದರೆ ಈ ಸ್ಥಿತಿ ಆವರಿಸುವ ಸಾಧ್ಯತೆ ಇನ್ನಷ್ಟು ಹೆಚ್ಚುತ್ತದೆ.

ಕಂಪ್ಯೂಟರ್ ಪರದೆ ದೃಷ್ಟಿಯನ್ನು ಹೇಗೆ ಬಾಧಿಸುತ್ತದೆ?

ಕಂಪ್ಯೂಟರ್ ಪರದೆ ದೃಷ್ಟಿಯನ್ನು ಹೇಗೆ ಬಾಧಿಸುತ್ತದೆ?

carpal tunnel syndrome ಎಂಬ ಕಾಯಿಲೆ ಇರುವ ವ್ಯಕ್ತಿಗಳ ಹಸ್ತಗಳಲ್ಲಿ ಚಿಕ್ಕದಾಗಿ ಸೂಜಿ ಚುಚ್ಚಿದಂತೆ, ಸ್ತಭ್ಧವಾದಂತೆ ಹಾಗೂ ಒಳಗೆ ವಿದ್ಯುತ್ ಶಾಕ್ ಹೊಡೆದಂತೆ ಭಾಸವಾಗುತ್ತದೆ. ಇದಕ್ಕೆ ಕಾರಣ ಹಸ್ತದ ಅಂಗಗಳಿಗೆ ಸೂಚನೆ ನೀಡಬೇಕಾದ ನರಗಳಿಗೆ ಆಗಿರುವ ಘಾಸಿ. ಇದೇ ರೀತಿಯಲ್ಲಿ, ಒಂದೇ ಬಗೆಯ ಕೆಲಸವನ್ನು ಮಿತಿಮೀರಿ ನಿರ್ವಹಿಸುವ ಮೂಲಕ ಎದುರಾಗುವ motion (repetitive) injuries ಎಂಬ ತೊಂದರೆಗಳಿಗೂ ಇದೇ ಕಾರಣವಾಗಿದೆ. ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಸಹಾ ಹೆಚ್ಚೂ ಕಡಿಮೆ ಇದೇ ಕಾರಣವನ್ನು ಹೊಂದಿದೆ.

ಅಂದರೆ ಕಣ್ಣುಗಳಿಂದ ಪಡೆಯುವ ಮಾಹಿತಿ ಸತತವಾಗಿದ್ದು ತೀರಾ ಹೆಚ್ಚಿನ ಸಮಯದಲ್ಲಿ ಬಳಸಲ್ಪಡುವ ಕಾರಣ ಈ ನರಗಳಿಗೆ ವಿಶ್ರಾಂತಿ ಸಿಗದೇ ಬಳಲುತ್ತವೆ. ಕಂಪ್ಯೂಟರ್ ಪರದೆಯನ್ನು ಸತತವಾಗಿ ವೀಕ್ಷಿಸುವಾಗ ಕಣ್ಣುಗಳು ಈ ಭಾಗವನ್ನೇ ಹೆಚ್ಚು ದೃಷ್ಟಿಸಬೇಕಾಗುತ್ತದೆ ಹಾಗೂ ಹೆಚ್ಚಿನ ಸಮಯ ಈ ಭಾಗದಲ್ಲಿಯೇ ದೃಷ್ಟಿಯನ್ನು ಕೇಂದ್ರೀಕರಿಸಬೇಕಾಗುತ್ತದೆ. ಅಲ್ಲದೇ ನಡುನಡುವೆ ಬರೆಯಲು ಅಥವ ಇತರ ಕಾರ್ಯಗಳಿಗೆ ದೃಷ್ಟಿಯನ್ನು ಬದಲಿಸಿ ಮರುಕ್ಷಣವೇ ಮತ್ತೊಮ್ಮೆ ಪರದೆಯತ್ತ ನೋಡಬೇಕಾಗುತ್ತದೆ. ಅಲ್ಲದೇ ಪರದೆಯ ಮೇಲೆ ಸತತವಾಗಿ ಬದಲಾಗುತ್ತಿರುವ ದೃಶ್ಯಗಳಿಗನುಸಾರವಾಗಿ ಕಣ್ಣಿನ ದೃಷ್ಟಿಯೂ ಬದಲಿಸಬೇಕಾಗುತ್ತದೆ. ಸಾಮಾನ್ಯ ಎಂದೆನಿಸುವ ಈ ಕ್ರಿಯೆ ವಾಸ್ತವವಾಗಿ ಅತಿ ಕ್ಲಿಷ್ಟವಾಗಿದ್ದು ಇದಕ್ಕಾಗಿ ಕಣ್ಣಿನ ಸೂಕ್ಷ್ಮ ಸ್ನಾಯುಗಳು ಅತಿಯಾಗಿ ಕೆಲಸ ಮಾಡಬೇಕಾಗುತ್ತದೆ. ನಮ್ಮ ದೇಹದ ಯಾವುದೇ ಸ್ನಾಯುಗಳು ತಮ್ಮ ಸಾಮರ್ಥ್ಯಕ್ಕಿಂತಲೂ ಹೆಚ್ಚು ಕಾರ್ಯನಿರ್ವಹಿಸಿದಾಗ ನೋವು ಎದುರಾಗುವುದು ಸಾಮಾನ್ಯ. ಕಣ್ಣುಗಳ ಸ್ನಾಯುಗಳಿಗೂ ಇದು ಅನ್ವಯಿಸುತ್ತದೆ.

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎದುರಾಗಲು ಕಾರಣಗಳೇನು?

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎದುರಾಗಲು ಕಾರಣಗಳೇನು?

ಅತಿ ಸಾಮಾನ್ಯವಾದ ಕಾರಣಗಳೆಂದರೆ

* ಆಂಟಿ ಗ್ಲೇರ್ ಅಥವಾ ಪ್ರತಿಫಲನವಿಲ್ಲದ ಕನ್ನಡಕಗಳನ್ನು ಸತತವಾಗಿ ಧರಿಸದೇ ಇರುವುದು

* ವಯಸ್ಸಾಗುತ್ತಿದ್ದಂತೆ ನೈಸರ್ಗಿಕವಾಗಿ ಬಾಧಿಸುವ ಕಣ್ಣುಗಳ ಶಿಥಿಲತೆ

* ಸರಿಪಡಿಸಿಲ್ಲದ ಕಣ್ಣುಗಳ ದೋಷಗಳು (Uncorrected ocular (vision) etiologies)

* ಅಸಮರ್ಪಕ ಬೆಳಕಿನ ವ್ಯವಸ್ಥೆ ಮತ್ತು ಪ್ರಖರತೆ

* ನಿಮ್ಮ ಕಂಪ್ಯೂಟರ್ ಉಪಕರಣಗಳ ಪರದೆಗಳಿಂದ ಹೊರಸೂಸುವ ಬೆಳಕಿನ ಪ್ರಖರತೆ

* ಅಸಮರ್ಪಕ ಕುಳಿತುಕೊಳ್ಳುವ ಭಂಗಿ ಮತ್ತು ದೂರ

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಲಕ್ಷಣಗಳು

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಲಕ್ಷಣಗಳು

* ಮಂಜುಮಂಜಾದ ದೃಷ್ಟಿ ಅಥವಾ ಎರಡೆರಡಾಗಿ ಕಾಣಿಸುವುದು

* ಕಣ್ಣುಗಳಿಗೆ ಎದುರಾಗುವ ಆಯಾಸ

* ಕಣ್ಣುಗಳ ಮುಂದೆ ತೇಲುತ್ತಿರುವ ಚಿಕ್ಕ ಚಿಕ್ಕ ವೃತ್ತಕಾರಗಳು ಕಾಣಿಸಿಕೊಳ್ಳುವುದು (Floaters)

* ಕಣ್ಣುಗಳಲ್ಲಿ ಉರಿ ಕಾಣಿಸಿಕೊಳ್ಳುವುದು

* ಒಣಗುವ ಕಣ್ಣುಗಳು

* ತಲೆನೋವು

* ಬೆನ್ನು ಅಥವಾ ಕುತ್ತಿಗೆಯಲ್ಲಿ ನೋವು

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಪತ್ತೆಹಚ್ಚುವಿಕೆ

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಪತ್ತೆಹಚ್ಚುವಿಕೆ

ನೇತ್ರವೈದ್ಯರು ರೋಗಿಯ ಕಣ್ಣುಗಳನ್ನು ಕೆಲವಾರು ಪರೀಕ್ಷೆಗೆ ಒಳಪಡಿಸುತ್ತಾರೆ ಹಾಗೂ ಸಾಮಾನ್ಯ ಸ್ಥಿತಿಗಳನ್ನು ಮೊದಲಾಗಿ ದಾಖಲಿಸಿಕೊಳ್ಳುತ್ತಾರೆ. ಈ ತೊಂದರೆ ಇದೆ ಎಂದು ಪ್ರಾಥಮಿಕ ಪರೀಕ್ಷೆಯಲ್ಲಿ ಗಮನಕ್ಕೆ ಬಂದರೆ, ಇದರ ವಿಸ್ತೃತ ಮಾಹಿತಿಯನ್ನು ಪಡೆಯಲು ರೋಗಿ ಕಂಪ್ಯೂಟರ್ ಪರದೆಯಿಂದ ಎಷ್ಟು ದೂರದಲ್ಲಿ ಕುಳಿತು ಪರದೆ ವೀಕ್ಷಿಸುತ್ತಾರೆ, ಪರದೆಯ ಪ್ರಖರತೆ ಎಷ್ಟಿದೆ ಮೊದಲಾದ ಸೂಕ್ಷ್ಮ ಮಾಹಿತಿಯನ್ನು ಪಡೆಯಬಹುದು.

ರೋಗಿ ಎಷ್ಟು ಹೊತ್ತಿನ ಕಾಲ ಪರದೆಯನ್ನು ವೀಕ್ಷಿಸುತ್ತಾರೆ ಹಾಗೂ ಇತರ ಲಕ್ಷಣಗಳೇನಾದರೂ ಕಂಡುಬರುತ್ತದೆಯೇ ಎಂಬ ಮಾಹಿತಿಗಳನ್ನು ನೇತ್ರತಜ್ಞರು ಪಡೆಯಬಹುದು.

ಒಂದು ವೇಳೆ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಇರುವುದು ಖಚಿತವೆನಿಸಿದರೆ ವೈದ್ಯರು ನಿಮ್ಮ ನಿತ್ಯದ ಜೀವನಕ್ರಮವನ್ನು ಕೊಂಚವಾಗಿ ಬದಲಿಸಿಕೊಳ್ಳಲು ಸಲಹೆ ಮಾಡಬಹುದು.

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಚಿಕಿತ್ಸೆ

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಚಿಕಿತ್ಸೆ

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಇರುವಿಕೆ ಖಚಿತವಾದ ಬಳಿಕ ನೀವು ನಿಮ್ಮ ನೇತ್ರತಜ್ಞರಲ್ಲಿ ನಿಯಮಿತವಾಗಿ ಭೇಟಿ ನೀಡಿ ತಜ್ಞರ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಈ ಮೂಲಕ ಈಗಿರುವ ದೃಷ್ಟಿಯನ್ನು ಇನ್ನಷ್ಟು ಕುಂದದಂತೆ ಕಾಪಾಡಲು ಸಾಧ್ಯವಾಗುತ್ತದೆ.

ಈಗಿನ ಸ್ಥಿತಿಗೆ ಅನುಗುಣವಾಗುವ ಕನ್ನಡಕ ಅಥವಾ ಕ್ಯಾಂಟ್ಯಾಕ್ಟ್ ಲೆನ್ಸ್ ಅನ್ನು ಧರಿಸಲು ನೇತ್ರತಜ್ಞರು ಸಲಹೆ ಮಾಡುತ್ತಾರೆ. ಕೆಲವರಿಗೆ ಕಂಪ್ಯೂಟರ್ ಪರದೆಯನ್ನು ವೀಕ್ಷಿಸುವ ಸಲುವಾಗಿ ವಿಶೇಷ ಕನ್ನಡಕವನ್ನು ಧರಿಸಲು ವೈದ್ಯರು ಶಿಫಾರಸ್ಸು ಮಾಡಬಹುದು. ಅಥವಾ ಈಗಿರುವ ಕನ್ನಡಕದ ಗಾಜನ್ನೇ ಬದಲಿಸಿ ವಿಶೇಷ ಸೌಲಭ್ಯವಿರುವ, ಉದಾಹರಣೆಗೆ ಆಂಟಿ ಗ್ಲೇರ್ ಅಂದರೆ ಹೆಚ್ಚಿನ ಕಿರಣಗಳನ್ನು ಪ್ರತಿಫಲಿಸುವ ಗುಣವಿರುವ, ಟಿಂಟೆಡ್ ಅಥವಾ ಗಾಜಿನ ಬಣ್ಣವನ್ನು ಕೊಂಚವೇ ಬದಲಿಸಿರುವ ಮಸೂರಗಳನ್ನು ಅಳವಡಿಸಲೂ ಸಲಹೆ ಮಾಡಬಹುದು.

ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು

ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು

ಆದರೆ ಈ ತೊಂದರೆಯ ಚಿಕಿತ್ಸೆಯಾಗಿ ಕೇವಲ ಕನ್ನಡಕವನ್ನು ಬದಲಿಸುವುದು ಮಾತ್ರವೇ ಸಾಕಾಗುವುದಿಲ್ಲ. ಬದಲಿಗೆ ಇನ್ನೂ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:

* ನಿಮ್ಮ ಕಂಪ್ಯೂಟರ್ ಪರದೆಯ ಮುಂದೆ ಇರುವ, ಮತ್ತು ನೇರವಾಗಿ ಬೆಳಕನ್ನು ಕಣ್ಣಿಗೆ ಪ್ರತಿಫಲಿಸುವಂತೆ ಇರುವ ದೀಪಗಳನ್ನು ಸ್ಥಳಾಂತರಿಸುವುದು ಅಥವಾ ಇವುಗಳ ಬೆಳಕು ನೇರವಾಗಿ ನಿಮ್ಮ ಕಣ್ಣಿಗೆ ಪ್ರತಿಫಲಿಸದಂತೆ ಕಂಪ್ಯೂಟರ್ ಇರಿಸಿರುವ ಸ್ಥಾನವನ್ನು ಕೊಂಚ ಮಾರ್ಪಾಡು ಮಾಡಿಕೊಳ್ಳುವುದು.

* ಕಿಟಕಿ ಹಿಂದೆ ಬರುವಂತೆ ಕುಳಿತಿದ್ದರೆ ಈಗ ಇದಕ್ಕೆ ವಿರುದ್ಧವಾಗಿ ಕುಳಿತು ಕಿಟಕಿಯಿಂದ ಬರುವ ಬೆಳಕು ಕಣ್ಣಿನ ಅಥವಾ ಪರದೆಯ ಮೇಲೆ ನೇರವಾಗಿ ಬೀಳದಂತೆ ಬದಲಿಸುವುದು.

* ಛಾವಣಿಯಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳ ಪ್ರಖರತೆಯನ್ನು ಸಂದರ್ಭಕ್ಕೆ ಅನುಗುಣವಾಗಿ ಹೆಚ್ಚಿಸುವ ಅಥವಾ ಕಡಿಮೆ ಮಾಡಬಲ್ಲ ಡಿಮ್ಮರ್ ಸ್ವಿಚ್ಚುಗಳನ್ನು ಅಳವಡಿಸುವುದು.

* ನಿಮ್ಮ ಕಂಪ್ಯೂಟರ್ ಪರದೆ ನಿಮ್ಮ ಕಣ್ಣುಗಳ ಮಟ್ಟಕ್ಕೆ ಕೊಂಚವೇ ಕಡಿಮೆ ಇರುವಂತೆ ನೋಡಿಕೊಳ್ಳುವುದು. ಅಂದರೆ ಪರದೆಯ ಮೇಲಿನ ಅಂಚು ನಿಮ್ಮ ಕಣ್ಣುಗಳ ಮಟ್ಟದಲ್ಲಿದ್ದರೆ ಉತ್ತಮ. ಪರದೆ ಕಣ್ಣಿನಿಂದ ಸುಮಾರು 20-28 ಇಂಚುಗಳಷ್ಟು ದೂರವಿರಬೇಕು.

* 20-20-20 ಕ್ರಮ ಅನುಸರಿಸುವುದು. ಇದು ಕ್ರಿಕೆಟ್ ಪದವಲ್ಲ, ಬದಲಿಗೆ ನೀವು ಪ್ರತಿ ಇಪ್ಪತ್ತು ನಿಮಿಷಕ್ಕೊಮ್ಮೆ, ಕನಿಷ್ಟ ಇಪ್ಪತ್ತು ಅಡಿ ದೂರದ ವಸ್ತುವೊಂದನ್ನು ಕನಿಷ್ಟ ಇಪ್ಪತ್ತು ಸೆಕೆಂಡ್ ಕಾಲ ದಿಟ್ಟಿಸಬೇಕು.

* ಕಂಪ್ಯೂಟರ್ ಪರದೆಯ ಮೇಲೆ ಮೂಡುವ ಅಕ್ಷರಗಳ ಗಾತ್ರ ನಿಮ್ಮ ಕಣ್ಣುಗಳಿಗೆ ಆಯಾಸ ಮಾಡದಂತೆ ಓದುವಷ್ಟು ದೊಡ್ಡದಾಗಿರುವಂತೆ ಹಿಗ್ಗಿಸಿಕೊಳ್ಳುವುದು.

ಈ ಎಲ್ಲಾ ಕ್ರಮಗಳಿಂದ ಒಂದೇ ದಿನದಲ್ಲಿ ಯಾವುದೇ ಬದಲಾವಣೆ ಕಾಣದೇ ಹೋಗಬಹುದು, ಆದರೆ ಕ್ರಮೇಣ ಈ ಅಭ್ಯಾಸಗಳು ರೂಢಿಗತವಾಗಿ ಕಣ್ಣುಗಳು ಇದಕ್ಕೆ ಹೊಂದಿಕೊಳ್ಳುತ್ತವೆ ಹಾಗೂ ಹೆಚ್ಚಿನ ತೊಂದರೆಯಾಗುವುದರಿಂದ ತಪ್ಪಿಸಿಕೊಂಡಂತಾಗುತ್ತದೆ.

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಬಾರದಂತೆ ತಡೆಯುವ ಕ್ರಮಗಳು

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಬಾರದಂತೆ ತಡೆಯುವ ಕ್ರಮಗಳು

ಕಂಪ್ಯೂಟರ್ ಪರದೆ ವೀಕ್ಷಣೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದೇ ಇದಕ್ಕೆ ನಿಜವಾದ ಕ್ರಮವಾದರೂ ಇದು ಸಾಧ್ಯವಾಗದ್ದು. ಹಾಗಾಗಿ, ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಬಾರದಂತೆ ತಡೆಗಟ್ಟಲು ಸೂಕ್ತ ಕ್ರಮಗಳನ್ನು ಪಾಲಿಸಬೇಕು ಹಾಗೂ ಈ ಮೂಲಕ ಕಣ್ಣುಗಳಿಗೂ ಹಿತವಾಗುತ್ತದೆ ಹಾಗೂ ಆರೋಗ್ಯವನ್ನೂ ಕಾಪಾಡಬಹುದು.

* ಸತತ ಕೆಲಸ ಮಾಡುವ ಸಮಯದಲ್ಲಿ ಪ್ರತಿ ಎರಡು ಘಂಟೆಗಳಿಗೊಮ್ಮೆ ಸುಮಾರು ಹದಿನೈದು ನಿಮಿಷಗಳವರೆಗೆ ಕಂಪ್ಯೂಟರ್ ಪರದೆಯಿಂದ ಕಣ್ಣನ್ನು ಬೇರೆಡೆಗೆ ಸೆಳೆಯಬೇಕು.

* ಒಂದು ವೇಳೆ ಕಣ್ಣುಗಳು ಒಣಗಿದಂತೆ ಅನ್ನಿಸಿದರೆ ಸುಲಭವಾಗಿ ಸಿಗುವ ಕೃತಕ ಕಣ್ಣೀರು (ರೀಫ್ರೆಶ್ ಟಿಯರ್ಸ್) ಮೊದಲಾದ ಔಷಧಿಗಳನ್ನು ಬಳಸಿ.

* ಸಾಧ್ಯವಾದರೆ ಕೋಣೆಯಲ್ಲಿ ಕೃತಕ ಆರ್ದ್ರತೆ ಒದಗಿಸುವ ಹ್ಯೂಮಿಡಿಫೈಯರ್ ಉಪಕರಣ ಅಳವಡಿಸಿ. ಕಿಟಕಿಗಳ ಪರದೆಯನ್ನು ಅಡ್ಡಲಾಗಿಸಿ, ಇದರಿಂದ ಕಣ್ಣುಗಳು ಒಣಗುವುದನ್ನು ತಡೆಯಬಹುದು.

* ಸುತ್ತಲ ಬೆಳಕಿನ ಮೂಲದಿಂದ ಒಳಬರುವ ಬೆಳಕು ನಿಮ್ಮ ಕಂಪ್ಯೂಟರ್ ಪರದೆಯ ಪ್ರಕಾಶಕ್ಕಿಂತ ಹೆಚ್ಚಾಗದಿರಲಿ, ಹೆಚ್ಚಾದರೆ ಕಂಪ್ಯೂಟರ್ ಪರದೆಯೂ ಮಂಕಾಗಿ ಕಂಡುಬರುವ ಮೂಲಕ ಕಣ್ಣುಗಳಿಗೆ ಇನ್ನಷ್ಟು ಹೆಚ್ಚು ಆಯಾಸವಾಗಬಹುದು.

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಬಾರದಂತೆ ತಡೆಯುವ ಕ್ರಮಗಳು

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಬಾರದಂತೆ ತಡೆಯುವ ಕ್ರಮಗಳು

* ಕಾಂಟಾಕ್ಸ್ ಲೆನ್ಸ್ ಬಳಸುವವರು ಕಂಪ್ಯೂಟರ್ ಪರದೆಯನ್ನು ಹೆಚ್ಚು ಕಾಲ ವೀಕ್ಷಿಸಿ ಕೆಲಸ ಮಾಡುವುದಿದ್ದರೆ ಈ ಅವಧಿಯಲ್ಲಿ ನಿತ್ಯದ ಕನ್ನಡಕವನ್ನೇ ಬಳಸುವುದು ಒಳ್ಳೆಯದು.

* ನಿಯಮಿತವಾಗಿ ನೇತ್ರತಜ್ಞರಲ್ಲಿ ಕಣ್ಣುಗಳನ್ನು ತಪಾಸಿಸಿಕೊಳ್ಳಬೇಕು.

* ವಿಟಮಿನ್ನು, ಖನಿಜಗಳೂ ಹಾಗೂ ಇತರ ಪೌಷ್ಟಿಕಾಂಶಗಳಿರುವ ಸಮತೋಲನದ ಆಹಾರಾಭ್ಯಾಸವನ್ನು ಅಳವಡಿಸಿಕೊಳ್ಳಿ.

* ನಿಯಮಿತವಾಗಿ ಕಣ್ಣುಗಳ ವ್ಯಾಯಾಮವನ್ನು ಮಾಡುತ್ತಿರಬೇಕು. ಉದಾಹರಣೆಗೆ ಕಣ್ಣುಗಳನ್ನು ನಿಧಾನವಾಗಿ ಮುಚ್ಚುವುದು ತೆರೆಯುವುದು, ವೃತ್ತಾಕಾರದಲ್ಲಿ ಪ್ರದಕ್ಷಿಣ ಮತ್ತು ಅಪ್ರದಕ್ಷಿಣವಾಗಿ ಕಣ್ಣುಗುಡ್ಡೆಗಳನ್ನು ತಿರುಗಿಸುವುದು, ಆಗಾಗ ದೂರದ ವಸ್ತುವನ್ನು ಕೇಂದ್ರೀಕರಿಸುವುದು ಇತ್ಯಾದಿ.

ಕಂಪ್ಯೂಟರ್ ಬಳಸುವಾಗ ಅನುಸರಿಸಬೇಕಾದ ಸೂಕ್ತ ಕ್ರಮಗಳು

ಕಂಪ್ಯೂಟರ್ ಬಳಸುವಾಗ ಅನುಸರಿಸಬೇಕಾದ ಸೂಕ್ತ ಕ್ರಮಗಳು

* ಆದಷ್ಟೂ ಕೀಬೋರ್ಡ್ ದೇಹಕ್ಕೆ ಹತ್ತಿರವಿರಲಿ ಮತ್ತು ಪರದೆ ದೂರವಿರಲಿ. ಲ್ಯಾಪ್ ಟಾಪ್ ಬಳಸುವಾಗ ಇದು ಸಾಧ್ಯವಿಲ್ಲದ ಕಾರಣ ಪ್ರತ್ಯೇಕವಾದ ಕೀಬೋರ್ಡ್ ಬಳಸುವುದೇ ಜಾಣತನದ ಕ್ರಮವಾಗಿದೆ.

* ಕೀಬೋರ್ಡ್ ಸ್ಥಾನ ಹೇಗಿರಬೇಕು ಎಂದರೆ ಟೈಪ್ ಮಾಡಲು ಬೆರಳುಗಳನ್ನು ಚಾಚಿದಾಗ ಮೊಣಕೈಗಳು ಸೊಂಟದ ಅಕ್ಕಪಕ್ಕ ಇರುವಂತೆ ಹಾಗೂ ಕೀಬೋರ್ಡ್ ನ ಎತ್ತರ ಹೊಟ್ಟೆಯ ಮುಂದೆ ಬರುವಂತಿರಬೇಕು. ಒಟ್ಟಾರೆಯಾಗಿ, ಟೈಪ್ ಮಾಡುವಾಗ ಭುಜಗಳ ಮೇಲೆ ಭಾರ ಬೀಳದಂತಿರಬೇಕು.

* ಬೆರಳು ಮತ್ತು ಹಸ್ತ ಭೂಮಿಗೆ ಸಮಾನಾಂತರದಲ್ಲಿದ್ದು ಮಣಿಕಟ್ಟು ಸಹಾ ನೇರವಾಗಿರಬೇಕು.

* ಸಾಧ್ಯವೆನಿಸಿದರೆ ಮಣಿಕಟ್ಟಿನ ಕೆಳಗಿರಿಸುವ ಚಿಕ್ಕ ದಿಂಬುಗಳನ್ನು (Wrist rests) ಬಳಸಬಹುದು.

ಕಂಪ್ಯೂಟರ್ ಬಳಸುವಾಗ ಅನುಸರಿಸಬೇಕಾದ ಸೂಕ್ತ ಕ್ರಮಗಳು

ಕಂಪ್ಯೂಟರ್ ಬಳಸುವಾಗ ಅನುಸರಿಸಬೇಕಾದ ಸೂಕ್ತ ಕ್ರಮಗಳು

* ಕಂಪ್ಯೂಟರ್ ಮುಂದೆ ಕುಳಿತುಕೊಳ್ಳಲು ಕೈಗಳನ್ನು ಹೊಂದಿರುವ ಕುರ್ಚಿಯೇ ಉತ್ತಮ

* ಕಂಪ್ಯೂಟರ್ ಪರದೆಯ ಮೇಲ್ಭಾಗ ಕಣ್ಣಿನ ಮಟ್ಟಿನಲ್ಲಿದ್ದು ಕೇಂದ್ರ ಭಾಗ ಕಣ್ಣುಗಳಿಗಿಂತಲೂ 10-15ಡಿಗ್ರಿಗಳಷ್ಟು ಕೆಳಗೇ ಇರಬೇಕು.

* ಪ್ರತಿ ಒಂದೆರಡು ಘಂಟೆಗಳಿಗೊಮ್ಮೆ ವಿಶ್ರಾಂತಿ ಪಡೆಯಿರಿ, ಈ ಸಮಯದಲ್ಲಿ ಬೇರೆ ಯಾವುದೇ ಪರದೆಯನ್ನು ವೀಕ್ಷಿಸದಿರಿ.

ಸಾಮಾನ್ಯವಾಗಿ ಹೇಳಲಾಗುವ ಹಿತವಚನಗಳನ್ನು ಅಸಡ್ಡೆ ಮಾಡುವವರೇ ಹೆಚ್ಚು. ಆದರೆ, ಈ ನಿರ್ಲಕ್ಷ್ಯತನ ಮುಂದಿನ ದಿನಗಳಲ್ಲಿ ಭಾರೀ ನಷ್ಟವನ್ನುಂಟುಮಾಡಬಹುದು. ಹಾಗಾಗಿ, ಇಂದಿನಿಂದಲೇ ಈ ಕೆಲವು ಸುಲಭ ಮತ್ತು ಸರಳ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಹೆಚ್ಚಿನ ಸಾಧನೆಯನ್ನು ಸಾಧಿಸಲು ಮತ್ತು ಜೀವನದ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ.

English summary

Computer Vision Syndrome Causes, Symptoms And How To Protect Eye

Computer vision syndrome is a result of all such digital exposure that we put our eyes through. Globally, computer vision syndrome affects about 60 million people (1). If we continue straining our eyes without taking the basic precautions, it may inevitably lead to further eye complications.
X
Desktop Bottom Promotion