For Quick Alerts
ALLOW NOTIFICATIONS  
For Daily Alerts

ಶ್ವಾಸಕೋಶದ ಉರಿಯೂತ ಸಮಸ್ಯೆಗೆ (COPD)ಈ ಆಹಾರಗಳು ಒಳ್ಳೆಯದು

|

ಇತ್ತೀಚೆಗೆ ಮಾಲಿನ್ಯದ ಕಾರಣದಿಂದಾಗಿ ಶ್ವಾಸಕೋಶದ ಸಮಸ್ಯೆಗಳು ಹೆಚ್ಚಾಗಿ ಭಾದಿಸುತ್ತಿದೆ. ಅದಕ್ಕಿಂತ ಹೆಚ್ಚಾಗಿ ಧೂಮಪಾನವು ಹೆಚ್ಚಿನ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಧೂಮಪಾನ ಎಂದರೆ ಮೊದಲು ಪರಿಣಾಮ ಬೀರುವುದೇ ಶ್ವಾಸಕೋಶದ ಮೇಲೆ. ಧೂಮಪಾನ ಹೆಚ್ಚಾಗಿ ಬರುವ ಖಾಯಿಲೆಯೆಂದರೆ ದೀರ್ಘಕಾಲದ ಉರಿಯೂತದ ಶ್ವಾಸಕೋಶದ ಸಮಸ್ಯೆ. ಇದನ್ನು ಸಿಒಪಿಡಿ ಎಂತಲೂ ಕರೆಯುತ್ಥಾರೆ. ಇದು ಉಸಿರಾಟದ ತೊಂದರೆ, ಕೆಮ್ಮು, ಕಫ ಮತ್ತು ಉಬ್ಬಸವನ್ನು ಒಳಗೊಂಡಿರುತ್ತದೆ.

ದೀರ್ಘಕಾಲದ ಸಮಸ್ಯೆಯೆಂದರೆ ಅದು ವಾಸಿಯಾಗುವುದು ತುಂಬಾ ನಿಧಾನ, ಅಷ್ಟೇ ಎಚ್ಚರಿಕೆಯಿಂದ ನಿರ್ವಹಣೆಯನ್ನೂ ಮಾಡಬೇಕಾಗುತ್ತದೆ. ಅದರಲ್ಲೂ ಈ ಸಿಒಪಿಡಿ ಸಮಸ್ಯೆ ಇದ್ದರಂತೂ ಹೃದ್ರೋಗ, ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಇತರ ಸಮಸ್ಯೆಗಳ ಅಪಾಯ ಇದ್ದೇ ಇರುತ್ತದೆ. ಸಿಒಪಿಡಿ ಸಮಸ್ಯೆ ಇರುವ ಹೆಚ್ಚಿನ ಜನರು ಉತ್ತಮ ರೋಗಲಕ್ಷಣದ ನಿಯಂತ್ರಣ ಮತ್ತು ಉತ್ತಮ ಜೀವನದ ಗುಣಮಟ್ಟವನ್ನು ಸಾಧಿಸಬಹುದು, ಇದಕ್ಕೆ ಸಹಾಯ ಮಾಡುವುದೆಂದರೆ ನಿಮ್ಮ ಆಹಾರ ಕ್ರಮ.

ಹೌದು.. ಈ ಸಮಸ್ಯೆ ಇರುವವರಿಗೆ ಮೊದಲನೆಯದಾಗಿ ಬಿಡದೇ ಕಾಡುವ ಕೆಮ್ಮಿನಿಂದಾಗಿ ದೇಹದ ಶಕ್ತಿ ಇಂಗಿದಂತಾಗಬಹುದು. ಅಲ್ಲದೇ ಈ ಸಮಸ್ಯೆ ಇರುವವರು ದೇಹದ ತೂಕ ಕಳೆದುಕೊಳ್ಳುವುದು ಸಹಜ. ಆದರೆ ಆಹಾರವನ್ನು ಒಮ್ಮೆಗೇ ತೆಗೆದುಕೊಳ್ಳುವುದಂತೂ ಅಸಾಧ್ಯ. ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚಿಸಲು ಯಾವ ರೀತಿಯ ಆಹಾರ ಕ್ರಮವನ್ನು ತೆಗೆದುಕೊಳ್ಳಬೇಕು, ನಿಮ್ಮ ಆಹಾರಕ್ರಮದಲ್ಲಿ ಯಾವುದನ್ನು ಸೇರಿಸಿಕೊಳ್ಳಬೇಕು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಹೆಚ್ಚು ಆಹಾರ ಸೇವಿಸಿ

ಹೆಚ್ಚು ಆಹಾರ ಸೇವಿಸಿ

ಹೆಚ್ಚು ಆಹಾರ ಸೇವಿಸಿ ಎಂದ ಮಾತ್ರಕ್ಕೆ ಒಂದೇ ಬಾರಿ ಹೊಟ್ಟೆ ತುಂಬಾ ಊಟ ಮಾಡಬೇಕು ಎಂದಲ್ಲ. ಸಿಒಪಿಡಿ ಸಮಸ್ಯೆ ಇರುವವರಿಗೆ ಹೊಟ್ಟೆ ತುಂಬಾ ಉಣ್ಣಲು ಸಾಧ್ಯವಾಗದು. ಹೆಚ್ಚು ತಿಂದರೆ ಉಸಿರು ಕಟ್ಟಿದ ಅನುಭವವಾಗಬಹುದು. ಹೀಗಿದ್ದಾಗ ನಿಮ್ಮ ಮೂರು ಹೊತ್ತಿನ ಊಟವವನ್ನು ನಾಲ್ಕು ಅಥವಾ ಆರು ಭಾಗಗಳಾಗಿ ವಿಂಗಡಿಸಿ.

ಸ್ವಲ್ಪ ಸ್ವಲ್ಪ ಆಹಾರವನ್ನು ಆರು ಸಣ್ಣ ಊಟಗಳಾಗಿ ಪರಿವರ್ತಿಸಿ, ಇದು ಹೊಟ್ಟೆ ತುಂಬಾ ತಿನ್ನದಂತೆ ತಡೆಯುತ್ತದೆ. ಊಟ ಮಾಡುವಾಗಲೂ ಸುಸ್ತಾಗದು. ಅಲ್ಲದೇ ನೀವು ಸೇವಿಸುವ ಆಹಾರದಿಂದ ಎಲ್ಲಾ ಅಂಶಗಳನ್ನೂ ಪಡೆಯಲು ಸಾಧ್ಯವಾಗುತ್ತದೆ.

ಬೆಳಗಿನ ಉಪಾಹಾರಕ್ಕೆ ಆದ್ಯತೆ ನೀಡಿ

ಬೆಳಗಿನ ಉಪಾಹಾರಕ್ಕೆ ಆದ್ಯತೆ ನೀಡಿ

ಬ್ರೇಕ್‌ ಫಾಸ್ಟ್‌ ಎಂದರೆ ಉಪಾವಾಸವನ್ನು ಮುರಿಯುವುದು ಎಂದರ್ಥ. ಹಾಗಾಗಿ ಬೆಳಗ್ಗಿನ ಉಪಾಹಾರವು ನಿಮಗೆ ಶಕ್ತಿಯನ್ನು ಮರುತುಂಬಿಸುವ ಆಹಾರವಾಗಿರುತ್ತದೆ. ಉಸಿರಾಟದ ಸಮಸ್ಯೆ ಇದ್ದಾಗ ಚೆನ್ನಾಗಿ ತಿನ್ನಲೂ ಅಸಾಧ್ಯವಾಗುತ್ತದೆ. ಹಾಗಾಗಿ ದಿನದ ಆರಂಭದಲ್ಲಿ ಸ್ವಲ್ಪ ಹೆಚ್ಚಾಗಿ ತಿನ್ನಿ. ಪ್ರತಿದಿನ ನಿಮ್ಮ ದೇಹಕ್ಕೆ 25ರಿಂದ 30 ಗ್ರಾಂ ನಾರಿನಂಶ ಬೇಕಾಗುವುದರಿಂದ, ಒಂದು ಬೌಲ್‌ ಸೀರಿಯಲ್‌ ಮತ್ತು ಗೋಧಿಯಿಂದ ಮಾಡಿದ ಟೋಸ್ಟ್‌ನಿಂದ ನಿಮ್ಮ ದಿನವನ್ನು ಪ್ರಾರಂಭಿಸಿ.

ಹಾಲಿನೊಂದಿಗೆ ಓಟ್ಸ್‌

ಹಾಲಿನೊಂದಿಗೆ ಓಟ್ಸ್‌

ಹಾಲಿನೊಂದಿಗೆ ಓಟ್ಸ್‌ ಮಾಡಿ ಸೇವಿಸುವುದು ಸುಲಭ ಮತ್ತು ಸರಳ ಆಹಾರವಾದರೂ ಇದರಲ್ಲಿ ಫೈಬರ್‌, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ವಿಟಮಿನ್‌ ಎ ಸಮೃದ್ಧವಾಗಿರುತ್ತದೆ. ನೀರಿನ ಬದಲು ಹಾಲಿನೊಂದಿಗೆ ಓಟ್‌ ಮೀಲ್‌ ತಯಾರಿಸಿ ಸೇವಿಸುವುದು ಇನ್ನಷ್ಟು ಪೌಷ್ಟಿಕ. ಇದರಲ್ಲಿರುವ ನಾರಿನಂಶವು ಕಡಿಮೆ ಕ್ಯಾಲೋರಿಯ ಸೇವನೆಯನ್ನು ಮಿತಿಗೊಳಿಸುತ್ತದೆ. ಕೆಲವರಿಗೆ ಸಕ್ಕರೆ ಬೆರೆಸಿ ತಿನ್ನುವ ಅಭ್ಯಾಸವಿರುತ್ತದೆ, ಇದರ ಬದಲಿಗೆ ಬೆರ್ರಿಗಳನ್ನು ಬೆರೆಸಿ ತಿನದನಿ

ಹೆಚ್ಚು ಪೌಷ್ಟಿಕ ಆಹಾರಗಳನ್ನು ಸೇವಿಸಿ

ಆಯಾಸವು ನಿಮ್ಮ ಆಹಾರ ಸೇವನೆಯ ಮೇಲೆ ಕಡಿವಾಣ ಹಾಕುತ್ತಿದ್ದಲ್ಲಿ ಮೊದಲಿಗೆ ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ಸೇವಿಸಿ. ಹಾಗಂತ ಆಲೂಗಡ್ಡೆ, ಕ್ಯಾರೆಟ್‌, ಸಿಹಿತಿಂಡಿ ಮುಂತಾದ ಆಹಾರವಲ್ಲ.ಚಿಕನ್, ಬೇಯಿಸಿದ ಮೀನು ಅಥವಾ ಟೋಫು ಅಂದರೆ ಪನೀರ್‌ ಸೇವಿಸಿ, ಇದರ ಸೇವನೆಯ ಮೂಲಕ ದೇಹಕ್ಕೆ ಬೇಕಾಗುವ ಅಗತ್ಯ ಪ್ರೋಟಿನ್‌ ಪಡೆಯುತ್ತೀರಿ.

ಆಹಾರದಲ್ಲಿ ಚೀಸ್‌ ಸೇರಿಸಿ

ಆಹಾರದಲ್ಲಿ ಚೀಸ್‌ ಸೇರಿಸಿ

ಹಾಲಿನ ಉತ್ಪನ್ನವಾದ ಚೀಸ್‌ ಕ್ಯಾಲ್ಸಿಯಂ ಭರಿತ ಆಹಾರವಸ್ತು.ಅಕ್ಕಿ ಅಥವಾ ತರಕಾರಿಗಳಂತಹ ಭಕ್ಷ್ಯಗಳಿಗೆ ಚೀಸ್ ಸೇರಿಸುವುದರಿಂದ ಯಾವುದೇ ಊಟದ ಪೌಷ್ಟಿಕಾಂಶದ ಮೌಲ್ಯ ಮತ್ತು ಕ್ಯಾಲೊರಿ ಮೌಲ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ಮೂಳೆಗಳನ್ನು ರಕ್ಷಿಸಲು ಹೆಚ್ಚುವರಿ ಕ್ಯಾಲ್ಸಿಯಂ ಅನ್ನು ನೀವು ಪಡೆಯುತ್ತೀರಿ. ಚೀಸ್‌ನಲ್ಲಿ ನೀವು ಕಡಿಮೆ ಕ್ಯಾಲೋರಿ ಬಯಸಿದರೆ "ಕೆನೆರಹಿತ" ಅಥವಾ "ಕಡಿಮೆ-ಕೊಬ್ಬು" ಎಂದು ಲೇಬಲ್ ಇರುವ ಚೀಸ್‌ ಉಪಯೋಗಿಸಿ. ಇದು ಆರೋಗ್ಯಕ್ಕೂ ಉತ್ತಮ ಹಾಗೂ ಆಹಾರದ ರುಚಿಯನ್ನೂ ಹೆಚ್ಚಿಸುವುದು.

ದೇಹಕ್ಕೆ ದ್ರವಾಹಾರ ಅತ್ಯಗತ್ಯ

ದೇಹಕ್ಕೆ ದ್ರವಾಹಾರ ಅತ್ಯಗತ್ಯ

ಕೆಫೀನ್ ರಹಿತ ದ್ರವಗಳನ್ನು ಕುಡಿಯುವುದರಿಂದ ನಿಮ್ಮ ಶ್ವಾಸನಾಳದಲ್ಲಿನ ಲೋಳೆಯು ತೆಳುವಾಗಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಶ್ವಾಸಕೋಶದಲ್ಲಿ ಕಫ ತೆರವುಗೊಳಿಸಲು ಸುಲಭವಾಗುತ್ತದೆ. ಊಟದ ಸಮಯದಲ್ಲಿ, ಊಟದ ಮಧ್ಯೆ ನೀರು ಕುಡಿಯಬೇಡಿ, ಮೊದಲು ತಿನ್ನಿರಿ ಮತ್ತು ನಂತರ ನೀರು ಅಥವಾ ಯಾವುದೇ ಆರೋಗ್ಯಕರ ಪಾನೀಯ ಸೇವಿಸಿ.

ಹಾಲು ಕುಡಿಯುವುದು ತಪ್ಪಿಸಬೇಡಿ

ಹಾಲು ಕುಡಿಯುವುದು ತಪ್ಪಿಸಬೇಡಿ

ಶ್ವಾಸಕೋಶ, ಕಫದ ಸಮಸ್ಯೆ ಇರುವವರಲ್ಲಿ ಮೊದಲು ಗುರುತಿಸಬಹುದಾದ ಲಕ್ಷಣವೇ ತೂಕದಲ್ಲಿ ಇಳಿಕೆ. ನೀವು ತೂಕವನ್ನು ಪಡೆಯಬೇಕಾದರೆ, ನಿಮ್ಮ ದೇಹಕ್ಕೆ ಕ್ಯಾಲ್ಸಿಯಂ ಮುಖ್ಯ. ಹಾಲು ಈ ಸಮಸ್ಯೆಯನ್ನು ತೆರವುಗೊಳಿಸುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ಮೂಳೆಗಳನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. ದಿನದಲ್ಲಿ ಎರಡು ಬಾರಿಯಾದರೂ ನೀರಿನ ಬದಲು ಹಾಲನ್ನು ಕುಡಿಯಲು ಪ್ರಯತ್ನಿಸಿ.

ನಾರಿನಂಶ ಅಧಿಕವಿರುವ ಆಹಾರ ಸೇವಿಸಿ

ನಾರಿನಂಶ ಅಧಿಕವಿರುವ ಆಹಾರ ಸೇವಿಸಿ

ನೀವು ಉಪಾಹಾರದಿಂದಲೇ ದಿನಕ್ಕೆ ಅಗತ್ಯವಿರುವ 25 ರಿಂದ 30 ಗ್ರಾಂ ಫೈಬರ್ ಅನ್ನು ಪಡೆಯಲು ಅಸಂಭವವಾಗಿರುವ ಕಾರಣ, ನಿಮ್ಮ ಇತರ ಊಟಗಳಲ್ಲಿ ಹೆಚ್ಚಿನ ಫೈಬರ್ ಆಹಾರಗಳನ್ನು ಸೇರಿಸಿ. ಬಿಸಿ ಬಿಸಿಯಾದ ಸ್ಲಿಟ್‌ ಬಟಾಣಿ ಅಥವಾ ದಾಲ್‌ಗಳ ಸೂಪ್‌ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ . ಫೈಬರ್‌ನ ಇತರ ಉತ್ತಮ ಮೂಲಗಳಲ್ಲಿ ಒಣ ಬೀನ್ಸ್, ಹೊಟ್ಟು ಇರುವ ಧಾನ್ಯ, ಕಂದು ಅಕ್ಕಿ, ಧಾನ್ಯಗಳು ಮತ್ತು ಬ್ರೆಡ್‌ಗಳು ಮತ್ತು ತಾಜಾ ಹಣ್ಣುಗಳು ಮತ್ತು ತರಕಾರಿಗಳು ಸೇರಿವೆ.

ವಾಯುವನ್ನುಂಟು ಮಾಡುವ ಆಹಾರ ಬೇಡ

ವಾಯುವನ್ನುಂಟು ಮಾಡುವ ಆಹಾರ ಬೇಡ

ಹುರುಳಿ, ಬಟಾಣಿಯಂತಹ ಆಹಾರಗಳು ಪ್ರೋಟೀನ್ ಮತ್ತು ಫೈಬರ್ ಅನ್ನು ಒದಗಿಸುತ್ತವೆಯಾದರೂ ಎಚ್ಚರಿಕೆಯಿಂದ ಬಳಸಿ. ಯಾಕೆಂದರೆ ಹೊಟ್ಟೆಯಲ್ಲಿ ವಾಯುವನ್ನುಂಟು ಮಾಡುವ ಆಹಾರಗಳು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು, ಇದು ಸರಾಗ ಉಸಿರಾಟಕ್ಕೂ ಅಡ್ಡಿಯಾಗಬಹುದು. ಕಾರ್ಬೊನೇಟೆಡ್ ಪಾನೀಯಗಳು, ಜಿಡ್ಡು ಇರುವ ಕರಿದ ಆಹಾರಗಳು, ಹೆಚ್ಚು ಮಸಾಲೆಯುಕ್ತ ಆಹಾರಗಳು, ಬೀನ್ಸ್ ಮತ್ತು ಎಲೆಕೋಸು ಮತ್ತು ಬ್ರೊಕೊಲಿಯಂತಹ ತರಕಾರಿಗಳು ಗ್ಯಾಸ್ಟ್ರಿಕ್‌ ಹೆಚ್ಚಿಸುವ ಆಹಾರಗಳು. ಆದರೆ ಕೆಲವೊಂದು ಆಹಾರಗಳ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದರಿಂದ, ನಿಮಗೆ ಯಾವ ಆಹಾರ ಸರಿಹೊಂದುತ್ತದೆ ಎನ್ನುವುದನ್ನು ಗಮನಿಸಿ, ಅದರ ಸೇವನೆ ಮುಂದುವರೆಸಿ

ನಿಮ್ಮ ಆಹಾರದ ಪಟ್ಟಿಯಲ್ಲಿ ಮೊಟ್ಟೆ ಇರಲಿ

ನಿಮ್ಮ ಆಹಾರದ ಪಟ್ಟಿಯಲ್ಲಿ ಮೊಟ್ಟೆ ಇರಲಿ

ನಿಮ್ಮ ಕ್ಯಾಲೋರಿ ಸೇವನೆಯನ್ನು ಹೆಚ್ಚಿಸಲು ನೀವು ಮಾರ್ಗಗಳನ್ನು ಹುಡುಕುತ್ತಿದ್ದರೆ, ನಿಮ್ಮ ಡಯಟ್‌ಗೆ ಹೆಚ್ಚುವರಿ ಮೊಟ್ಟೆಯನ್ನು ಸೇರಿಸಲು ಪ್ರಯತ್ನಿಸಿ. ಖಾಲಿ ಮೊಟ್ಟೆಯನ್ನು ತಿನ್ನಬೇಕೆಂದಿಲ್ಲ. ಇತರ ಆಹಾರದ ಜೊತೆಗೆ ಮೊಟ್ಟೆಯನ್ನು ಬಳಸಿ ಸೇವಿಸಿ. ಆದರೆ ಕಚ್ಚಾ ಮೊಟ್ಟೆಯನ್ನು, ಅರ್ಧಂಬರ್ಧ ಬೇಯಿಸಿದ ಮೊಟ್ಟೆಯನ್ನು ಸೇವಿಸಲು ಹೋಗಬೇಡಿ.

ಆರೋಗ್ಯಕರ ಸ್ನ್ಯಾಕ್ಸ್

ಆರೋಗ್ಯಕರ ಸ್ನ್ಯಾಕ್ಸ್

ನೀವು ತೂಕವನ್ನು ಪಡೆಯಬೇಕಾದರೆ, ಹೆಚ್ಚಿನ ಕ್ಯಾಲೋರಿ ಹೊಂದಿರುವ ಆರೋಗ್ಯಕರ ತಿಂಡಿಗಳನ್ನು ತಿನ್ನಬಹುದು. ಹಸಿವಾದಾಗ ಸಣ್ಣಹಿಡಿಯಷ್ಟು ಬೀಜಗಳನ್ನು ಸೇವಿಸಿ ಅನಾರೋಗ್ಯಕರ ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ತಪ್ಪಿಸಿ. ಚೀಸ್ ನೊಂದಿಗೆ ಕ್ರ್ಯಾಕರ್ಸ್ ಅಥವಾ ಹಣ್ಣುಗಳು ಮತ್ತು ತರಕಾರಿಗಳು ಅದ್ದು ಇತರ ಪೌಷ್ಟಿಕ ತಿಂಡಿಗಳನ್ನು ಸ್ನ್ಯಾಕ್ಸ್ ಟೈಮ್‌ನಲ್ಲಿ ತಿನ್ನಿ.

ಕೆಫೀನ್ ಬೇಡವೇ ಬೇಡ

ಕೆಫೀನ್ ಬೇಡವೇ ಬೇಡ

ಉಸಿರಾಟದ ಸಮಸ್ಯೆ, ಕಫ ಇರುವವರಿಗೆ ಕೆಫೀನಿಯುಕ್ತ ಯಾವುದೇ ಪಾನೀಯ ಬೇಡವೇ ಬೇಡ. ಅದರಲ್ಲೂ ಸಿಒಪಿಡಿ ಇರುವವರಿಗಂತೂ ಕೆಫೀನ್‌ಯುಕ್ತ ಪಾನೀಯ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ, ಇದು ಕೆಲವೊಂದು ಔಷಧಿಗಳೊಂದಿಗೆ ಆಗಿಬರದು. ಅಲ್ಲದೇ ಆತಂಕ, ಚಡಪಡಿಕೆಗೆ ಕಾರಣವಾಗಬಹುದು. ಅಲ್ಲದೇ ರೋಗವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಆದ್ದರಿಂದ ಕಾಫೀ, ಟೀ, ಕೆಫೀನ್‌ ಹೊಂದಿರುವ ಸೋಡಾಗಳಿಗೆ ಬೈಬೈ ಹೇಳಿ.

ತಾಜಾ ಹಣ್ಣು ತರಕಾರಿಗಳನ್ನು ಸೇವಿಸಿ

ತಾಜಾ ಹಣ್ಣು ತರಕಾರಿಗಳನ್ನು ಸೇವಿಸಿ

ತಾಜಾ ತರಕಾರಿ ಹಣ್ಣುಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಆದ್ದರಿಂದ ಇದರ ಸೇವನೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಮಾಂಸಾಹಾರ, ಆಲೂಗಡ್ಡೆ ಸೇವನೆಯ ಬದಲಿಗೆ ತರಕಾರಿ ಹಣ್ಣುಗಳಿಂದ ಕೂಡಿರುವ ಸಮತೋಲಿನ ಆಹಾರವನ್ನು ಸೇವಿಸುವುದು ಆಯಾಸಗೊಮಡಿರುವ ದೇಹಕ್ಕೆ ಚೈತನ್ಯ ನೀಡುತ್ತದೆ.

ಹಣ್ಣುಗಳ ಜ್ಯೂಸ್‌

ಹಣ್ಣುಗಳ ಜ್ಯೂಸ್‌

ತಾಜಾ ಹಣ್ಣುಗಳ ಶೇಕ್‌, ಸ್ಮೂದಿ ಯಾರಿಗೆ ಇಷ್ಟವಾಗಲ್ಲ ಹೇಳಿ. ಅದರಲ್ಲೂ ಮೂಳೆಗಳಿಗೆ ಬೇಕಾಗುವ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ಪೂರೈಸುವ ಮಿಲ್ಕ್‌ಶೇಕ್‌ ಮತ್ತು ಸ್ಮೂದಿಗಳು ಸಿಒಪಿಡಿ ಸಮಸ್ಯೆ ಇರುವವರಿಗೆ ಉತ್ತಮವಾಗಿದೆ. ಮೊದಲೇ ಹೇಳಿದಂತೆ ನಿಮ್ಮ ದೈನಂದಿನ ಆರು ಊಟದ ಭಾಗದಲ್ಲಿ ಮಿಲ್ಕ್‌ ಶೇಕ್‌ ಅಥವಾ ಸ್ಮೂದಿಯನ್ನು ಸರಳ ಆಹಾರದ ಭಾಗವಾಗಿ ಅಳವಡಿಸಿಕೊಳ್ಳಬಹುದು.

ಹಣ್ಣಿನ ಸ್ಮೂದಿ ಮಾಡಲು ಹಾಲು ಅಥವಾ ಮೊಸರು ಬಳಸಿ. ತೂಕನಿಯಂತ್ರಣವನ್ನು ಬಯಸಿದಲ್ಲಿ ಕಡಿಮೆ-ಕೊಬ್ಬಿನ ಉತ್ಪನ್ನಗಳನ್ನು ಆಯ್ಕೆ ಮಾಡಿ. ಪೌಷ್ಟಿಕಾಂಶಗಳು ಮತ್ತು ನಾರಿನಂಶಕ್ಕಾಗಿ ತಾಜಾ ಹಣ್ಣುಗಳನ್ನು ಬಳಸಿ. ಆದರೆ ಪೂರ್ವಸಿದ್ಧವಾದ ಪಾನೀಯ, ಶೇಕ್‌ಗಳು, ಫ್ರಿಡ್ಜ್‌ನಿಂದ ನೇರವಾಗಿ ತೆಗೆದು ಕುಡಿಯುವಂತಹ ಜ್ಯೂಸ್‌ಗಳು ಬೇಡವೇ ಬೇಡ. ಇದು ಕೆಮ್ಮನ್ನು ಇನ್ನಷ್ಟು ಹೆಚ್ಚಿಸಬಹುದು.

ಪಿಷ್ಟಯುಕ್ತ ತರಕಾರಿಗಳು

ಬೀಟ್‌ರೂಟ್‌, ಜೋಳ, ಕ್ಯಾರೆಟ್‌ಮತ್ತು ಕುಂಬಳಕಾಯಿಯಂತಹ ಪಿಷ್ಟ ತರಕಾರಿಗಳು ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲಗಳಾಗಿವೆ. ಮತ್ತು ಅವರು ಇತರ ತರಕಾರಿಗಳಿಗಿಂತ ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಬೇಯಿಸಿದ ಸ್ಕ್ವ್ಯಾಷ್ ಅತ್ಯುತ್ತಮ ಆಹಾರ. ಈ ರೀತಿಯ ತರಕಾರಿಗಳನ್ನು ಸೂಪ್‌ ಮಾಡಿಯೂ ಸೇವಿಸಬಹುದು.

ಪ್ರೋಟೀನ್ ಹೆಚ್ಚಿರಲಿ

ಪ್ರೋಟೀನ್ ಹೆಚ್ಚಿರಲಿ

ಪ್ರತಿಯೊಬ್ಬರ ಆಹಾರದಲ್ಲಿ ಪ್ರೋಟೀನ್ ಅತ್ಯಗತ್ಯ ಅಂಶವಾಗಿದೆ, ಅದರಲ್ಲೂ ಸಿಒಪಿಡಿ ಇದ್ದರಂತೂ ಪ್ರೋಟಿನ್‌ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕೇಬೇಕಾಗುತ್ತದೆ. ಹಿಸುಕಿದ ಆಲೂಗಡ್ಡೆ, ಬೇಕ್‌ ಮಾಡಿದ ತರಕಾರಿ, ಸೂಪ್‌ಗಳು, ಏಕದಳ ಧಾನ್ಯಗಳ ಆಹಾರದ ಜೊತೆಗೆ ಕೊಬ್ಬು ರಹಿತ ಡ್ರೈ ಹಾಲು, ಪ್ರೋಟೀನ್ ಪೌಡರ್ ಅಥವಾ ಸೋಯಾ ಪ್ರೋಟೀನ್ ಪೌಡರ್ ನಿಮ್ಮ ಡಯಟ್‌ನಲ್ಲಿರಲಿ.

ಪ್ರತಿ ಊಟದಲ್ಲಿ ಪ್ರೋಟೀನ್ ಇರಲಿ

ಪೀನಟ್‌ ಬಟರ್‌ ನಿಮ್ಮ ದೇಹಕ್ಕೆ ಬೇಕಾಗುವ ಕ್ಯಾಲೋರಿಗಳು ಮತ್ತು ಪ್ರೋಟೀನ್ ಎರಡರ ಸೇವನೆಯನ್ನು ಹೆಚ್ಚಿಸಬಹುದು, ತಯಾರಿಕೆಯಲ್ಲಿ ಸ್ವಲ್ಪ ಸಮಯ ಅಥವಾ ಶಕ್ತಿಯು ವ್ಯರ್ಥವಾದರೂ, ಸಿಒಪಿಡಿ ಇರುವವರಿಗೆ ಪ್ರತಿ ಊಟದಲ್ಲಿ ಪ್ರೋಟೀನ್ ಮುಖ್ಯವಾಗಿದೆ. ಪ್ರೋಟಿನ್‌ನ ಉತ್ತಮ ಮೂಲಗಳಲ್ಲಿ ಮೊಟ್ಟೆ, ಮಾಂಸ, ಮೀನು, ಕೋಳಿ, ಕಾಳುಗಳು ಮತ್ತು ಬೀಜಗಳು ಸೇರಿವೆ. ಇವೆಲ್ಲವನ್ನೂ ಆಹಾರದಲ್ಲಿ ಕಡ್ಡಾಯವಾಗಿ ಬಳಸಿ. ಮಿತವಾದ ಆಹಾರ ಸೇವನೆಯ ಜೊತೆಗೆ ಪ್ರಾಣಾಯಾಮವೂ ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವಲ್ಲಿ ಮಾತ್ರವಲ್ಲ, ದೈಹಿಕ ಆರೋಗ್ಯಕ್ಕೂ ಸಹಕಾರಿ.

English summary

Energy-Boosting Foods for Chronic obstructive pulmonary disease (COPD) in Kannada

These are the energy boosting foods for Chronic obstructive pulmonary disease in kannada,
X
Desktop Bottom Promotion