For Quick Alerts
ALLOW NOTIFICATIONS  
For Daily Alerts

ಸತತ ಒಂದು ವರ್ಷದ ಯೋಗಾಭ್ಯಾಸ ಮಾಡಿ, ಆರೋಗ್ಯವಾಗಿರುವಿರಿ

By Arshad
|

ಯೋಗಾಭ್ಯಾಸ ಕೇವಲ ತೂಕ ಇಳಿಸುವ ಹಾಗೂ ಹೊಟ್ಟೆ ಕರಗಿಸುವ ಕ್ರಿಯೆ ಮಾತ್ರವಲ್ಲ. ಇದೊಂದು ಆರೋಗ್ಯಕರ ಜೀವನಕ್ಕೆ ಅವಶ್ಯಕ್ರಮವಾಗಿದ್ದು ಹಲವು ಆರೋಗ್ಯಕರ ಪ್ರಯೋಜನಗಳೂ ಇವೆ. ಭಾರತೀಯ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಯೋಗಾಭ್ಯಾಸ ಸಹಸ್ರಾರು ವರ್ಷಗಳಿಂದ ಅನುಸರಿಸಲಾಗುತ್ತದೆ. ಹಿಂದಿನ ದಿನಗಳಲ್ಲಿ ಋಷಿಮುನಿಗಳು ವರ್ಷಗಟ್ಟಲೇ ನಡೆಸುತ್ತಿದ್ದ 'ಧ್ಯಾನ' ಒಂದು ಬಗೆಯ ಮನಸ್ಸನ್ನು ಕೇಂದ್ರೀಕರಿಸುವ ಯೋಗಾಭ್ಯಾಸವಾಗಿದೆ.

ಯೋಗಾಭ್ಯಾಸದ ಪ್ರಯೋಜನವನ್ನು ಕಂಡುಕೊಂಡ ಪರಿಣಾಮವಾಗಿ ಯೋಗಾಭ್ಯಾಸವನ್ನು ಇಂದು ವಿಶ್ವದಾದ್ಯಂತ ಅನುಸರಿಸಲಾಗುತ್ತಿದೆ. ತಮ್ಮ ಉತ್ತಮ ಆರೋಗ್ಯದ ಗುಟ್ಟು ಯೋಗಾಭ್ಯಾಸ ಎಂದು ಹಲವಾರು ಖ್ಯಾತನಾಮರು ಹೇಳಿಕೊಂಡಿದ್ದಾರೆ. ಯೋಗಾಭ್ಯಾಸವನ್ನು ಸತತವಾಗಿ ಅಭ್ಯಸಿಸುವ ಮೂಲಕ ಸ್ನಾಯುಗಳ ಬೆಳವಣಿಗೆ, ದೇಹದಾರ್ಢ್ಯತೆ ಉತ್ತಮಗೊಳ್ಳುವುದು ಹಾಗೂ ಮನಸ್ಸನ್ನು ತಿಳಿಗೊಳಿಸಲು ಸಾಧ್ಯ. ಅಲ್ಲದೇ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಹಾಗೂ ಸ್ಮರಣಶಕ್ತಿಯನ್ನು ಚುರುಕುಗೊಳಿಸುತ್ತದೆ. ಯೋಗಾಭ್ಯಾಸವನ್ನು ನಿತ್ಯದ ಅಭ್ಯಾಸವಾಗಿಸುತ್ತಾ ಹೋದಂತೆ ಕೆಲವೇ ತಿಂಗಳುಗಳಲ್ಲಿ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾದ ಅಭಿವೃದ್ದಿಯನ್ನು ಪಡೆಯಲು ಸಾಧ್ಯವಾಗಿರುವುದನ್ನು ಕಾಣಬಹುದು.

Yoga

ಪ್ರಾರಂಭದಲ್ಲಿ ಯೋಗಾಭ್ಯಾಸ ಕೊಂಚ ಕಷ್ಟಕರವೆಂದು ಕಂಡುಬರಬಹುದು. ದೇಹದ ಸ್ನಾಯುಗಳು ನೋವಿನಿಂದ ಚೀರುತ್ತವೆ ಹಾಗೂ ಬೆಳಿಗ್ಗಿನ ಹೊತ್ತು ಎದ್ದೇಳಲು ಸೋಮಾರಿತನ ಆವರಿಸುತ್ತದೆ. ಆದರೆ ಕೊಂಚವೇ ತಾಳ್ಮೆ ವಹಿಸಿ ಈ ಅಭ್ಯಾಸವನ್ನು ಬಿಡದೇ ಮುಂದುವರೆಸಿದರೆ ಕೆಲವೇ ದಿನಗಳಲ್ಲಿ ದೇಹ ಈ ನೋವುಗಳನ್ನು ಮೀರಿ ಯೋಗಾಭ್ಯಾಸ ಇಷ್ಟವಾಗತೊಡಗುತ್ತದೆ. ಅಲ್ಲದೇ ಯೋಗಾಭ್ಯಾಸದಿಂದ ದೇಹಕ್ಕೆ ನವಚೇತನ ಲಭಿಸುವುದು ಮಾತ್ರವಲ್ಲ, ಹಲವಾರು ಸೋಂಕುಗಳು, ಕಾಯಿಲೆಗಳಿಂದ ರಕ್ಷಣೆಯೂ ಲಭಿಸುತ್ತದೆ. ಬನ್ನಿ, ಒಂದು ವೇಳೆ ಸತತವಾಗಿ ಒಂದು ವರ್ಷ ಯೋಗಾಭ್ಯಾಸವನ್ನು ಸೂಕ್ತ ಯೋಗ ಗುರುಗಳ ಮಾರ್ಗದರ್ಶನದಲ್ಲಿ ಅನುಸರಿಸಿದ್ದೇ ಆದರೆ ಯಾವ ಬಗೆಯ ಪ್ರಯೋಜನಗಳು ಲಭಿಸಲಿವೆ ಎಂಬುದನ್ನು ನೋಡೋಣ...

ಏಕಾಗ್ರತೆ ಹಾಗೂ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ
ಪುರಾತನ ಋಷಿಗಳು ಯೋಗವನ್ನು ಅನುಸರಿಸಿ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು ಎಂಬುದನ್ನು ಪುರಾಣಗಳಲ್ಲಿ ಓದಿಯೇ ಇದ್ದೀರಿ. ಏಕಾಗ್ರತೆಯನ್ನು ಹೆಚ್ಚಿಸಲು ಋಷಿಗಳು ಮಾತ್ರವೇ ಆಗಬೇಕಾಗಿಲ್ಲ, ಯೋಗಾಭ್ಯಾಸವನ್ನು ಸರಿಯಾಗಿ ಅನುಸರಿಸುವ ಯಾವುದೇ ವ್ಯಕ್ತಿಯೂ ಆಗಬಹುದು. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿಯೂ ಏಕಾಗ್ರತೆ ಹೆಚ್ಚಲು ಯೋಗಾಭ್ಯಾಸ ನೆರವಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ಬೆನ್ನು ನೋವನ್ನು ಕಡಿಮೆಗೊಳಿಸುತ್ತದೆ
ದೇಹವನ್ನು ಸೆಳೆತಕ್ಕೊಳಗಾಗಿಸದೇ ನಿತ್ಯದ ಚಟುವಟಿಕೆಗಳಿಗೆ ಮಾತ್ರವೇ ಸೀಮಿತವಾಗಿರಿಸುವ ಮೂಲಕ ದೇಹದ ಸ್ನಾಯುಗಳು ಪೆಡಸಾಗುತ್ತವೆ ಹಾಗೂ ಮೂಳೆಗಳನ್ನು ಪೂರ್ಣವಾಗಿ ಮಡಚಲು ಕಷ್ಟಪಡಬೇಕಾಗುತ್ತದೆ. ನಿತ್ಯವೂ ಯೋಗಾಭ್ಯಾಸವನ್ನು ಸರಿಯಾದ ಕ್ರಮದಲ್ಲಿ ಅನುಸರಿಸುವ ಮೂಲಕ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ವಿಶೇಷವಾಗಿ ಬೆನ್ನಿನ ಸ್ನಾಯುಗಳು ಸಡಿಲಗೊಳ್ಳುವ ಮೂಲಕ ಬೆನ್ನುನೋವು ಇಲ್ಲವಾಗುತ್ತದೆ. ಜೊತೆಗೇ ಪೆಡಸಾಗಿದ್ದ ಕುತ್ತಿಗೆ ಹಾಗೂ ಬಾಹುಗಳ ಸ್ನಾಯುಗಳೂ ಸಡಿಲಗೊಂಡು ನೋವಿನಿಂದ ಉಪಶಮನ ನೀಡುತ್ತದೆ.

ಊಟದ ಬಗ್ಗೆ ಕಾಳಜಿ ಹೆಚ್ಚುತ್ತದೆ
ಯೋಗಾಭ್ಯಾಸ ನಿತ್ಯದ ಅಭ್ಯಾಸವಾಗುತ್ತಾ ಹೋದಂತೆ ದೇಹ ತನ್ನಿಂತಾನೇ ಆರೋಗ್ಯಕರ ಆಹಾರಗಳತ್ತ ಒಲವು ತೋರುತ್ತದೆ. ನಮ್ಮ ಮನ ಕೇವಲ ಆರೋಗ್ಯಕರ ಆಹಾರಗಳನ್ನು ಸೇವಿಸಲು ಹಾಗೂ ಅನಾರೋಗ್ಯಕರ ಆಹಾರಗಳು ಎಷ್ಟೇ ಆಕರ್ಷಕವಾಗಿದ್ದರೂ ತಿನ್ನದೇ ಇರುವಂತಹ ದೃಢಮನಸ್ಸು ಪಡೆಯಲು ಸಾಧ್ಯವಾಗುತ್ತದೆ.

ಮಾನಸಿಕ ಒತ್ತಡದಿಂದ ಹೊರಬರಲು ನೆರವಾಗುತ್ತದೆ
ಯೋಗಾಭ್ಯಾಸದಿಂದ ಮನಸ್ಸು ನಿರಾಳವಾಗಿರಲು ಹಾಗೂ ಮಾನಸಿಕ ಒತ್ತಡದಿಂದ ಹೊರಬರಲು ನೆರವಾಗುತ್ತದೆ. ಕೆಲಸ ಅಥವಾ ಇನ್ನಾವುದೋ ಕಾರಣದಿಂದ ಮನಸ್ಸಿನ ಒತ್ತಡ ಎದುರಾಗಿದ್ದರೆ ಇದು ಒತ್ತಡಕ್ಕೆ ಸಂಬಂಧಿಸಿದ ರಸದೂತಗಳನ್ನು ಹೆಚ್ಚಾಗಿ ಸ್ರವಿಸುವಂತೆ ಮಾಡಿ ತಲೆನೋವಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಯೋಗಾಭ್ಯಾಸ ಮಾನಸಿಕ ಒತ್ತಡದಿಂದ ಹೊರಬರಲು ನೆರವಾಗುವ ಮೂಲಕ ತಲೆನೋವು ಉಂಟಾಗದಂತೆ ನೋಡಿಕೊಳ್ಳುತ್ತದೆ.

ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ
ವಿಶೇಷವಾಗಿ ಉಸಿರಾಟವನ್ನು ಕ್ರಮಬದ್ಧಗೊಳಿಸುವ ಯೋಗಾಸನಗಳಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ದೇಹದಲ್ಲಿ ಸರಾಗವಾದ ಹಾಗೂ ಸುಲಲಿತವಾದ ರಕ್ತಪರಿಚಲನೆ ಇದ್ದರೆ ಉಸಿರಾಟದ ತೊಂದರೆಗಳು ಪರಿಹಾರಗೊಳ್ಳುತ್ತವೆ ಹಾಗೂ ರಕ್ತದ ಒತ್ತಡ ಸಾಮಾನ್ಯ ಮಟ್ಟದಲ್ಲಿರಲು ನೆರವಾಗುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಲು ನಿತ್ಯವೂ ಅನುಸರಿಸಬೇಕಾದ ಯೋಗಾಸನಗಳು ಯಾವುವು? ಧ್ಯಾನ ಹಾಗೂ ಕೆಳಗೆ ವಿವರಿಸಿದ ಕೆಲವು ಆಸನಗಳನ್ನು ನಿತ್ಯವೂ ಅನುಸರಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು:

ಸೂರ್ಯ ನಮಸ್ಕಾರ
ಸೂರ್ಯಾಭಿಮುಖವಾಗಿ ಸೂರ್ಯನನ್ನು ನಮಸ್ಕರಿಸುವ ಭಂಗಿಯ ಈ ಆಸನ ಮೊದಲು ಕೈಗಳನ್ನು ಜೋಡಿಸಿ ದೇಹಕ್ಕೆ ಪೂರ್ಣವಾದ ಸೆಳೆತ ನೀಡುತ್ತಾ ದೇಹದ ಮೇಲ್ಭಾಗವನ್ನು ಸಾಧ್ಯವಾದಷ್ಟು ಮೇಲೆಕ್ಕೆ ಕೊಂಡೊಯ್ಯಬೇಕು. ಇದರಿಂದ ದೇಹ ಹಾಗೂ ಮನಸ್ಸು ಎರಡೂ ನಿರಾಳಗೊಳ್ಳಲು ಸಾಧ್ಯವಾಗುತ್ತದೆ.

ಆರೋಗ್ಯ ವೃದ್ಧಿಸುವ ಬೆಳಗಿನ ಜಾವದ ಸೂರ್ಯ ನಮಸ್ಕಾರ

ಪ್ರಾಣಾಯಾಮ
ಇದರಲ್ಲಿ ಹಲವಾರು ವಿಧಗಳಿವೆ. ಕಪಾಲಭಾಟಿ ಪ್ರಾಣಾಯಾಮ, ಶೀತಲಿ ಪ್ರಾಣಾಯಾಮ. ಬ್ರಾಹ್ಮರಿ ಪ್ರಾಣಾಯಾಮ ಇತ್ಯಾದಿ. ಪ್ರಾಣಾಯಾಮ ಮೂಲತಃ ಉಸಿರಾಟಕ್ಕೆ ಸಂಬಂದಿಸಿದ ವ್ಯಾಯಾಮವಾಗಿದ್ದು ನಿತ್ಯವೂ ಅನುಸರಿಸುವ ಮೂಲಕ ಉಸಿರಾಟ ಉತ್ತಮಗೊಳ್ಳುತ್ತದೆ.


ಆರೋಗ್ಯಕ್ಕೆ ನವ ಚೈತನ್ಯ ತುಂಬುವ ಪ್ರಾಣಾಯಾಮ

English summary

What Happens When You Practice Yoga Continuously For A Year?

Yoga is not just confined to weight loss and losing tummy fat. It is also known to have holistic benefits.Yoga has been in practice since time immemorial. Sages in the ancient days used to go for 'dhyana' which is basically a meditation that they performed to improve their concentration and keep them focussed.Today yoga is being practiced across the globe and several celebrities attribute their secret of well being to yoga.
X
Desktop Bottom Promotion