For Quick Alerts
ALLOW NOTIFICATIONS  
For Daily Alerts

'ಸೂರ್ಯ ನಮಸ್ಕಾರ' ಮಾಡಿದರೆ 5 ಕೆ.ಜಿ ದೇಹದ ತೂಕ ಇಳಿಸಬಹುದು

|

ಶೀಘ್ರವಾಗಿ ತೂಕ ಇಳಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಸಾಗಿದ್ದರೆ ಇದಕ್ಕಾಗಿ ನೀವು ಈಗಾಗಲೇ ಕೆಲವಾರು ಆರೋಗ್ಯಕರ ಕ್ರಮಗಳನ್ನು ಕೈಗೊಂಡಿರಬಹುದು. ಸ್ಥೂಲಕಾಯ ಅಥವಾ ಸಾಮಾನ್ಯಕ್ಕೂ ಹೆಚ್ಚಿನ ತೂಕ ಇರುವುದು ಆರೋಗ್ಯಕ್ಕೆ ಮಾರಕ ಹಾಗೂ ಇದರಿಂದ ಕೇವಲ ಅನೈಚ್ಛಿಕ ಅಡ್ಡಪರಿಣಾಮಗಳನ್ನೇ ಎದುರಿಸಬೇಕಾಗುತ್ತದೆ ಹಾಗೂ ಕೆಲವು ಮಾರಕ ಕಾಯಿಲೆಗಳು ಆವರಿಸಲು ಇದೇ ಮೂಲವಾಗಬಹುದು.

ಸ್ಥೂಲಕಾಯ ವ್ಯಕ್ತಿಯ ಆತ್ಮವಿಶ್ವಾಸವನ್ನೇ ಕಸಿಯುವ ಜೊತೆಗೇ ಖಿನ್ನತೆಗೂ ದಾರಿಯಾಗಬಹುದು. ಸ್ಥೂಲಕಾಯದ ಅಡ್ಡಪರಿಣಾಮಗಳಲ್ಲಿ ಮೂಳೆಸಂಧುಗಳಲ್ಲಿ ನೋವು, ಹೊಟ್ಟೆ ನೋವು, ಜೀರ್ಣಕ್ರಿಯೆಯಲ್ಲಿ ಏರುಪೇರು, ಸುಸ್ತು, ರಸದೂತಗಳ ಏರುಪೇರು, ಅತೀವ ಹಸಿವು, ಆಹಾರ ಸೇವನೆಯಲ್ಲಿ ನಿಯಂತ್ರಣದ ಕೊರತೆ, ಗೊರಕೆ, ಬೆನ್ನು ನೋವು ಮೊದಲಾದವು ಎದುರಾಗಬಹುದು.

ಇದರೊಂದಿಗೆ ದೇಹದಲ್ಲಿ ಅತಿ ಹೆಚ್ಚಾಗಿ ಸಂಗ್ರಹಗೊಂಡಿರುವ ಕೊಬ್ಬು ಸಹಾ ಕೆಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಉದಾಹರಣೆಗೆ ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಯಕೃತ್ ಕಾರ್ಯಕ್ಷಮತೆಯಲ್ಲಿ ಏರುಪೇರು, ಪಿತ್ತಕೋಶದಲ್ಲಿ ಕಲ್ಲುಗಳು, ಮಧುಮೇಹ, ಕೆಲವು ಬಗೆಯ ಕ್ಯಾನ್ಸರ್ ಇತ್ಯಾದಿ. ಹೃದಯಾಘಾತಕ್ಕೆ ಸ್ಥೂಲದೇಹವೇ ಮೊದಲ ಕಾರಣವಾಗಿರುತ್ತದೆ.

surya-namaskara

ಏಕೆಂದರೆ ನಮ್ಮ ಹೃದಯ ಒಂದು ಹಂತದಷ್ಟು ಮಾತ್ರವೇ ತೂಕದ ದೇಹಕ್ಕೆ ರಕ್ತವನ್ನು ಸಮರ್ಥವಾಗಿ ಒದಗಿಸಬಲ್ಲುದು, ತೂಕ ಹೆಚ್ಚಿದಷ್ಟೂ ಹೃದಯದ ಮೇಲಿನ ಭಾರವೂ ಹೆಚ್ಚುತ್ತಾ ಆಘಾತಕ್ಕೆ ಒಳಗಾಗುವ ಸಂಭವವೂ ಹೆಚ್ಚುತ್ತದೆ. ಆದ್ದರಿಂದ ಇಷ್ಟವಿಲ್ಲದಿದ್ದರೂ ಸರಿ, ತೂಕವನ್ನು ಎತ್ತರಕ್ಕೆ ತಕ್ಕಷ್ಟು ಪ್ರಮಾಣಕ್ಕೆ (ಅಂದರೆ ಬಿಎಂಐ-BMI (Body Mass Index), ಕೋಷ್ಟಕದ ಮಟ್ಟಕ್ಕೆ ಅನುಸಾರವಾಗಿ) ಇಳಿಸಿಕೊಳ್ಳಲೇಬೇಕಾಗುತ್ತದೆ. ಅಷ್ಟಕ್ಕೂ ತೂಕ ಇಳಿಸುವುದೇನೂ ಅಸಾಧ್ಯವಾದ ಕಾರ್ಯವಲ್ಲ. ಮುಖ್ಯವಾಗಿ ಬೇಕಾಗಿರುವುದು ತೂಕ ಇಳಿಸಿಕೊಳ್ಳಲೇಬೇಕೆಂಬ ಮನೋಬಲ ಹಾಗೂ ಇದುವರೆಗೆ ನಾಲಿಗೆಗೆ ಹತ್ತಿಹೋಗಿರುವ ಕೆಲವು ಆಹಾರಗಳನ್ನು ತ್ಯಜಿಸುವ ದೃಢಚಿತ್ತ.

ತೂಕ ಇಳಿಸಲು ಏನು ನೆರವಾಗುತ್ತದೆ?

ನೀವು ಈಗಾಗಲೇ ತಿಳಿದಿರುವಂತೆ ಸಮತೋಲನ ಆಹಾರ, ಅನಗತ್ಯ ಸಕ್ಕರೆ ಮತ್ತು ಕೊಬ್ಬನ್ನು ಆಹಾರದಿಂದ ಕೈಬಿಡುವುದು ಹಾಗೂ ನಿತ್ಯದ ಸೇವನೆಯಲ್ಲಿರುವ ಕ್ಯಾಲೋರಿಗಳ ಲೆಕ್ಕಚಾರ ಪರಿಗಣಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಒತ್ತಡದಿಂದ ಹೊರಬರುವುದು, ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಹಾಗೂ ತೂಕವನ್ನು ಏರಿಸಲು ಕಾರಣವಾಗುವ ರಸದೂತಗಳಿಗೆ ಸೂಕ್ತ ಕ್ರಮ ಕೈಗೊಳ್ಳುವುದು ಮೊದಲಾದವು ತೂಕವನ್ನು ಇಳಿಸಲು ಹಾಗೂ ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತವೆ.

ತೂಕ ಇಳಿಸಲು ಯಾವುದೇ ವ್ಯಾಯಾಮ ಖಂಡಿತವಾಗಿಯೂ ನೆರವಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ನಿತ್ಯದ ನಡಿಗೆಯೂ ವ್ಯಾಯಾಮವೇ! ಆದರೆ ಕೆಲವು ವ್ಯಾಯಾಮಗಳು ಇತರ ವ್ಯಾಯಾಮಗಳಿಗಿಂತ ಹೆಚ್ಚು ಪರಿಣಾಮಕಾರಿ ಯಾಗಿವೆ. ಇತ್ತೀಚೆಗೆ ಹೆಚ್ಚಿನ ಜನರು ಯೋಗಾಭ್ಯಾಸದತ್ತ ತಮ್ಮ ಚಿತ್ತ ಹರಿಸಿದ್ದು ತೂಕ ಇಳಿಸುವ ನಿಟ್ಟಿನಲ್ಲಿ ಯಶಸ್ಸನ್ನು ಪಡೆಯುತ್ತಿದ್ದಾರೆ. ಅಲ್ಲದೇ ಕೆಲವಾರು ವ್ಯಾಧಿಗಳಿಗೂ ಯೋಗಚಿಕಿತ್ಸೆ ಜನಪ್ರಿಯಗೊಳ್ಳುತ್ತಿದೆ. ಬನ್ನಿ, ಯೋಗಾಭ್ಯಾಸ ತೂಕ ಇಳಿಸುವಲ್ಲಿ ಯಾವ ರೀತಿಯ ನೆರವು ನೀಡುತ್ತದೆ ಎಂಬುದನ್ನು ನೋಡೋಣ:

ಯೋಗಾಭ್ಯಾಸ ಮತ್ತು ತೂಕ ಇಳಿಕೆ

ಯೋಗಾಭ್ಯಾಸದ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿ ಅರಿವು ಇದೆ. ಇದು ನಮ್ಮ ಭಾರತದ ಅತಿ ಪುರಾತನ ವಿಧಾನವಾಗಿದ್ದು ವ್ಯಕ್ತಿಯನ್ನು ಶಾರೀರಿಕವಾಗಿ, ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸಬಲಗೊಳಿಸುತ್ತದೆ.

ಇಂದು ವಿಶ್ವವ್ಯಾಪಿಯಾಗಿರುವ ಯೋಗಾಭ್ಯಾಸಕ್ಕೆ ಭಾರತವೇ ಮೂಲವಾಗಿದೆ. ಇದರ ಪ್ರಯೋಜನಗಳನ್ನು ಕಂಡು ಕೊಂಡ ವಿಶ್ವದ ಹಲವಾರು ದೇಶಗಳು ಯೋಗಾಭ್ಯಾಸವನ್ನು ಅನುಸರಿಸುತ್ತಿವೆ. ಯೋಗಾಭ್ಯಾಸದಿಂದ ಹಲವಾರು ವ್ಯಾಧಿಗಳು ಶಮನಗೊಳ್ಳುತ್ತವೆ ಹಾಗೂ ಮತ್ತೆ ಬರದಂತೆ ತಡೆಯಬಹುದು. ಸ್ಥೂಲಕಾಯದಿಂದ ಕ್ಯಾನ್ಸರ್ ಹಾಗೂ ಇವುಗಳ ನಡುವೆ ಬರುವ ಇನ್ನೆಲ್ಲಾ ಕಾಯಿಲೆಗಳನ್ನು ಯೋಗಾಭ್ಯಾಸದಿಂದ ಗುಣಪಡಿಸಲು ಸಾಧ್ಯವಿದೆ. ಅಲ್ಲದೇ ಯೋಗಾಭ್ಯಾಸದಿಂದ ಮಾನಸಿಕ ರೋಗಗಳನ್ನೂ ಗುಣಪಡಿಸಲು ಸಾಧ್ಯವಿದೆ. ತನ್ಮೂಲಕ ಮಾನಸಿಕ ಒತ್ತಡ, ಮರೆಗುಳಿತನ ಮೊದಲಾದವುಗಳನ್ನು ಸಹಾ ಗುಣಪಡಿಸಬಹುದು.

ಯೋಗಾಭ್ಯಾಸದಿಂದ ದೇಹ ರೋಗವನ್ನು ಗುಣಪಡಿಸುವ ಪರಿಯನ್ನು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತುಪಡಿಸಲಾಗಿದ್ದು ಈ ಪುರಾವೆಗಳು ಹೆಚ್ಚು ಹೆಚ್ಚು ಜನರನ್ನು ಯೋಗಾಭ್ಯಾಸದ ತರಬೇತಿ ಪಡೆಯಲು ಪ್ರೇರೇಪಿಸುತ್ತಿದೆ. ಇಂದು ಜಗತ್ತಿನಲ್ಲಿ ತೂಕ ಇಳಿಸುವ ಮತ್ತು ಸ್ಥೂಲದೇಹವನ್ನು ಕಡಿಮೆಗೊಳಿಸುವ ವಿಧಾನಗಳಲ್ಲಿ ಯೋಗಾಭ್ಯಾಸ ಪ್ರಥಮ ಸ್ಥಾನ ಪಡೆಡುಕೊಂಡಿದೆ. ಸ್ಥೂಲದೇಹವನ್ನು ದಂಡಿಸಲು ಕೆಲವಾರು ಆಸನಗಳಿವೆ ಹಾಗೂ ಇದರಲ್ಲಿ ಪ್ರಮುಖವಾಗಿರುವುದು ಸೂರ್ಯ ನಮಸ್ಕಾರ. ತೂಕ ಇಳಿಕೆಗೆ ಇದು ಅತ್ಯಂತ ಸೂಕ್ತ ಆಸನವಾಗಿದೆ, ಏಕೆಂದರೆ ಈ ಆಸನವನ್ನು ಅನುಸರಿಸಲು ದೇಹ ಸಾಕಷ್ಟು ಕ್ಯಾಲೋರಿಗಳನ್ನು ಅನಿವಾರ್ಯವಾಗಿ ದಹಿಸಲೇಬೇಕಾಗುತ್ತದೆ ಹಾಗೂ ಇದೇ ಹೊತ್ತಿನಲ್ಲಿ ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಸೂರ್ಯ ನಮಸ್ಕಾರದಿಂದ ಇನ್ನೂ ಹಲವಾರು ಪ್ರಯೋಜನಗಳಿವೆ. ಉದಾಹರಣೆಗೆ ಜೀರ್ಣಕ್ರಿಯೆ ಉತ್ತಮಗೊಳ್ಳುವುದು, ರೋಗ ನಿರೋಧಕ ಶಕ್ತಿ ಹೆಚ್ಚುವುದು, ಮಾನಸಿಕ ಒತ್ತಡಕ್ಕೆ ಚಿಕಿತ್ಸೆ ಹಾಗೂ ಖಿನ್ನತೆಯನ್ನು ನಿವಾರಿಸುವುದು ಇತ್ಯಾದಿ.

ಸೂರ್ಯ ನಮಸ್ಕಾರದಲ್ಲಿ ಯಾವ ಭಂಗಿಗಳನ್ನು ಅನುಸರಿಸಬೇಕು?

'ಸೂರ್ಯ ನಮಸ್ಕಾರ' ಎಂಬ ಆಸನವನ್ನು ಕಡ್ಡಾಯವಾಗಿ ಈ ಕೆಳಗಿನ ಕ್ರಮದಲ್ಲಿಯೇ ಅನುಸರಿಸಬೇಕು. ಇವೆಂದರೆ: 'ಪ್ರಣಮಾಸನ', 'ಹಸ್ತ ಉತ್ಥನಾಸನ', 'ಹಸ್ತಪಾದಾಸನ', 'ಅಶ್ವ ಸಂಚಲನಾಸನ', 'ದಂಡಾಸನ', 'ಅಷ್ಟಾಂಗ ನಮಸ್ಕಾರ', 'ಭುಜಂಗಾಸನ', 'ಆಧೋಮುಖ ಶ್ವಾನಾಸನ', 'ಅಶ್ವ ಸಂಚಲನಾಸನ, ಹಸ್ತಪಾದಾಸನ', 'ಹಸ್ತ ಉತ್ಥನಾಸನ' ಹಾಗೂ 'ತಾಡಾಸನ'.

ಈ ಹನ್ನೆರಡೂ ಆಸನಗಳನ್ನು ಇವುಗಳಿಗೆ ನೀಡಲಾದ ಕ್ರಮದಲ್ಲಿಯೇ ಒಂದಾದ ಬಳಿಕ ಒಂದರಂತೆ ಅನುಸರಿಸಬೇಕು. ಇಷ್ಟೂ ಆಸನಗಳನ್ನು ಕ್ರಮಬದ್ದವಾಗಿ ಅನುಸರಿಸಿದಾಗ ಒಂದು ಸೂರ್ಯ ನಮಸ್ಕಾರ ಹಾಕಿದಂತಾಗುತ್ತದೆ. 'ಸೂರ್ಯ ನಮಸ್ಕಾರ' ಅನುಸರಿಸುವ ಮೂಲಕ ದೇಹದ ಪ್ರತಿಯೊಂದು ಸ್ನಾಯುವಿಗೂ ಕೆಲಸ ನೀಡಿದಂತಾಗುತ್ತದೆ ಹಾಗೂ ಇದೇ ದೇಹದಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಗಳು ದಹಿಸಲ್ಪಡಲು ಮತ್ತು ತೂಕ ಇಳಿಸಲು ನೆರವಾಗುತ್ತದೆ. ಹಾಗಾದರೆ ಸುಮಾರು ಐದು ಕೇಜಿ ತೂಕ ಇಳಿಸುವ ಪ್ರಯತ್ನದಲ್ಲಿ ದಿನಕ್ಕೆಷ್ಟು ಬಾರಿ ಸೂರ್ಯ ನಮಸ್ಕಾರವನ್ನು ಅನುಸರಿಸಬೇಕಾಗುತ್ತದೆ? ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ:

ತೂಕ ಇಳಿಸಲು ದಿನಕ್ಕೆಷ್ಟು ಬಾರಿ ಸೂರ್ಯ ನಮಸ್ಕಾರವನ್ನು ಅನುಸರಿಸಬೇಕಾಗುತ್ತದೆ?

ನಾವು ಈಗಾಗಲೇ ತಿಳಿದುಕೊಂಡಿರುವಂತೆ, ಯಾವುದೇ ವ್ಯಾಯಾಮದಿಂದ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾದರೂ ಪ್ರತಿ ವ್ಯಯಾಮಕ್ಕೂ ಬೇರೆ ಬೇರೆ ಸಮಯ ತಗಲುತ್ತದೆ. ವ್ಯಾಯಾಮಯದ ತೀವ್ರತೆಯನ್ನು ಅವಲಂಬಿಸಿ ದೇಹ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಬೇಕಾಗುತ್ತದೆ ಹಾಗೂ ಹೆಚ್ಚುವರಿ ಕ್ಯಾಲೋರಿಗಳನ್ನು ದಹಿಸಬೇಕಾಗುತ್ತದೆ. ಆದ್ದರಿಂದ ಸೂರ್ಯನಮಸ್ಕಾರಕ್ಕೂ ದೇಹ ಹೊಂದಿಕೊಳ್ಳಲು ಕೊಂಚ ಸಮಯ ಬೇಕಾಗುತ್ತದೆ ಮತ್ತು ಇದರ ಫಲಿತಾಂಶ ಕಾಣಲು ಒಂದಕ್ಕಿಂತ ಹೆಚ್ಚು ಬಾರಿ ಈ ನಮಸ್ಕಾರವನ್ನು ಅನುಸರಿಸಬೇಕಾಗುತ್ತದೆ. ಹೆಚ್ಚು ಬಾರಿ ಅನುಸರಿಸಿದಷ್ಟೂ ಹೆಚ್ಚು ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಅಧ್ಯಯನಗಳಲ್ಲಿ ಕಂಡುಕೊಂಡಂತೆ ಒಂದು ಸೂರ್ಯ ನಮಸ್ಕಾರವನ್ನು ಪರಿಪೂರ್ಣವಾಗಿ ನಿರ್ವಹಿಸಲು ಸುಮಾರು ಮೂರು ನಿಮಿಷ ಬೇಕಾಗುತ್ತದೆ ಹಾಗೂ ಹದಿಮೂರು ಕ್ಯಾಲೋರಿಗಳು ಬಳಕೆಯಾಗುತ್ತವೆ. ಆ ಪ್ರಕಾರ ಪ್ರಾರಂಭದಲ್ಲಿ ಐದಾರು ಬಾರಿಯಿಂದ ತೊಡಗೆ ಕ್ರಮೇಣ ಹೆಚ್ಚಿಸುತ್ತಾ ಸಾಗಬೇಕು. ಹೀಗೇ ಮುಂದುವರೆಯುತ್ತಾ ಸುಮಾರು ನಲವತ್ತು ನಿಮಿಷಗಳಲ್ಲಿ ಇಪ್ಪತ್ತೈದರಿಂದ ಮೂವತ್ತು ನಮಸ್ಕಾರಗಳನ್ನು ಅನುಸರಿಸುವಷ್ಟು ಕ್ಷಮತೆ ಪಡೆದ ಬಳಿಕ ತಿಂಗಳಿಗೆ ಐದು ಕೇಜಿಗಳಷ್ಟು ತೂಕವನ್ನು ಕಳೆದುಕೊಳ್ಳಬಹುದು.

ಆದರೆ ಆರೋಗ್ಯದ ಮಿತಿಯನ್ನೂ ಪರಿಗಣಿಸುವುದು ಅಗತ್ಯವಾಗಿದ್ದು ತೀರಾ ಹೆಚ್ಚಿನ ವ್ಯಾಯಾಮ ಆರೋಗ್ಯವನ್ನು ಕೆಡಿಸಬಹುದು. ಆದ್ದರಿಂದ ನಿತ್ಯವೂ ಸುಮಾರು ನಲವತ್ತು ನಿಮಿಷಗಳವರೆಗೆ ಇಪ್ಪತ್ತೈದರಿಂದ ಮೂವತ್ತು ನಮಸ್ಕಾರಗಳನ್ನು ಅನುಸರಿಸಿದರೆ ಬೇಕಾದಾದಷ್ಟಾಯಿತು! ಈ ಮೂಲಕ ತಿಂಗಳಿಗೆ ಐದು ಕೇಜಿಗಳನ್ನು ಕಳೆದುಕೊಳ್ಳಲು ಸಾಧ್ಯ ಇದರ ಜೊತೆಗೇ, ಆರೋಗ್ಯಕರ ಜೀವನ ಶೈಲಿ, ಕಟ್ಟುನಿಟ್ಟಾದ ಆರೋಗ್ಯಕರ ಆಹಾರ ಸೇವನೆ ಸಹಾ ಅಗತ್ಯ. ಇವುಗಳೊಂದಿಗೆ ನಿರ್ವಹಿಸುವ ಸೂರ್ಯ ನಮಸ್ಕಾರ ಮಾತ್ರ ಪರಿಪೂರ್ಣವಾಗಿ ಪ್ರಯೋಜನಕಾರಿಯಾಗಿದೆ.

ಅಂತಿಮವಾಗಿ, ದಿನಕ್ಕೆ ನಲವತ್ತು ನಿಮಿಷಗಳ ಅವಧಿಯಲ್ಲಿ ಇಪ್ಪತ್ತೈದರಿಂದ ಮೂವತ್ತು ನಮಸ್ಕಾರಗಳನ್ನು ಅನುಸರಿಸಿದರೆ ತಿಂಗಳಿಗೆ ಸುಮಾರು ಐದು ಕೇಜಿಗಳಷ್ಟು ತೂಕವನ್ನು ಕಳೆದುಕೊಳ್ಳಬಹುದು. ಜೊತೆಗೇ, ಕಟ್ಟು ನಿಟ್ಟಾದ ಆಹಾರಕ್ರಮ ಮತ್ತು ಆರೋಗ್ಯಕರ ಜೀವನಶೈಲಿಯೂ ಅಗತ್ಯ!

English summary

Surya Namaskara For Weight Loss

Here is how many times one must perform ‘surya namaskara’ to lose 5 kilos in a month!
X
Desktop Bottom Promotion